ನೌಕರರ ವೇತನದ ಜೊತೆಗೆ ಕೋವಿಡ್ ಪರಿಹಾರ ನೀಡಿ | ತಾಲೂಕು ಅಕ್ಷರ ದಾಸೋಹ ನೌಕರರ ಪ್ರತಿಭಟನೆಯಲ್ಲಿ‌ ಸಿಐಟಿಯು ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಕ್ಷರ ದಾಸೋಹವನ್ನು ಖಾಸಗೀಕರಣಗೊಳಿಸಬಾರದು. ಅವರನ್ನು ಒಂದೇ ಕಡೆ ಕೇಂದ್ರಿಕೃತಗೊಳಿ ದುಡಿಸಬಾರದು, ಸಿಬಂದಿಗಳಿಗೆ ಕಳೆದ ಏಪ್ರಿಲ್‌ನಿಂದ  ಕೋವಿಡ್ ಅವಧಿಯ  ರೂ.10,000 ಪರಿಹಾರ ಹಾಗೂ ವೇತನ ನೀಡುವಂತೆ ಸಿಐಟಿಯುನ ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದರು.

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು)ತಾಲೂಕು ಸಮಿತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆ.7ರಂದು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅಕ್ಷರ ದಾಸೋಹ ನೌಕರರಿಗೆ ತಿಂಗಳಿಗೆ ರೂ.21,000 ವೇತನ ಹಾಗೂ ನಿವೃತ್ರಿಯಾದ ಬಳಿಕ ಮಾಸಿಕ ರೂ. 10,000 ಪಿಂಚನಿ ನಿಗದಿಗೊಳಿಸಬೇಕು ಎಂಬ ಹಲವು ಪ್ರಮುಖ ಬೇಡಿಕೆಗಳನ್ನು‌ ಮುಂದಿಟ್ಟುಕೊಂಡು ಸಿಐಟಿಯು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರ್ಲಕ್ಷ್ಯ ಮಾಡುತ್ತ ಬಂದಿದೆ. ಕೋವಿಡ್-19 ನಿಂದ ದೇಶದಲ್ಲಿ ಕೋಟ್ಯಾಂತರ ಜನರು ಆರ್ಥಿಕ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನೆರವು ನೀಡಿ ಅವರನ್ನು ರಕ್ಷಿಸಬೇಕಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇಂದು ದೊಡ್ಡ ದೊಡ್ಡ ಕಾರ್ಪೋರೇಟ್ ಸಂಸ್ಥೆಗಳಿಗೆ, ಬಂಡವಾಳ ಶಾಹಿಗಳಿಗೆ, ಕಂಪನಿಗಳಿಗೆ ಸಹಾಯವಾಗುವ ಕಾನೂನುಗಳನ್ನು ಮಾಡುತ್ತಿದೆ. ಕಾರ್ಮಿಕ ವಿರೋಧಿ ನೀತಿಯನ್ನು ಕೇಂದ್ರ ಸರಕಾರ ಜಾರಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ, ರಾಜ್ಯದಲ್ಲಿ1,40,000 ಅಕ್ಷರ ದಾಸೋಹ ಸಿಬಂದಿಗಳಿದ್ದು ಕಳೆದ ಕೋವಿಡ್ -೧೯ ಲಾಕ್ ಡೌನ್‌ ಪ್ರಾರಂಭವಾದ ಬಳಿಕ ಅವರಿಗೆ ಯಾವುದೇ ಪರಿಹಾರ ದೊರೆತಿಲ್ಲ. 2ಲಕ್ಷ‌ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದ್ದರೂ ಅವರಿಗೆ ಈ ತನಕ ನಯಾ ಪೈಸೆ ಪರಿಹಾರ ದೊರೆತ್ತಿಲ್ಲ. ಕೆಲಸವೂ ಇಲ್ಲ. ಪರಿಹಾರವೂ ಇಲ್ಲದೆ ಅವರು ಜೀವನ‌ ನಿರ್ವಹಣೆಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಏಪ್ರೀಲ್‌ ನಂತರ ವೇತನ ಹಾಗೂ ತಿಂಗಳಿಗೆ ರೂ. 6000 ದಂತೆ ಕೋವಿಡ್ ಪರಿಹಾರವನ್ನು ಏಕಗಂಟಿನಲ್ಲಿ ನೀಡಬೇಕು ಎಂದು ಆಗ್ರಹಿಸಿದರು. ಸರಕಾರ ಸರ್ವಾಧಿಕಾರದಿಂದ ಏಕಪಕ್ಷೀಯವಾಗಿ ಆಡಳಿತ ನಡೆಸುತ್ತಾ ಕಾರ್ಮಿಕರ ಕಾಯಿದೆ, ಭೂ ಮಸೂದೆ‌ ಕಾಯಿದೆಗಳನ್ನು ತಿದ್ದುಪಡಿ ಮಾಡುತ್ತಿದೆ. ಇದರ ವಿರುದ್ದ ಕಾರ್ಮಿಕರು ಹೋರಾಟ ನಡೆಸುವುದಲ್ಲದೆ ಅಕ್ಷರ ದಾಸೋಹ ಸಿಬಂದಿಗಳ‌ ಹೋರಾಟಕ್ಕೆ ಸರಕಾರ ಮನಿಯದಿದ್ದರೆ ಮುಂದಿನ‌ ದಿನಗಳಲ್ಲಿ ನಿರಂತರವಾದ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.

ಅಕ್ಷರ ದಾಸೋಹ ಸಂಘದ ಅಧ್ಯಕ್ಷೆ ಶ್ರೀಮತಿ, ಪ್ರಧಾನ ಕಾರ್ಯದರ್ಶಿ ಹೇಮಲತಾ, ಸದಸ್ಯರಾದ ರತಿ ಕೆ.ರೈ, ಶಕುಂತಲಾ, ವೇದಾವತಿ, ರೇಷ್ಮಾ, ಗೀತಾ ಹಾಗೂ ಲಕ್ಷ್ಮೀ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.