ಉಪ್ಪಿನಂಗಡಿ ಕೊರೊನಾ ಜಾಗೃತಿ ಸಮಿತಿ ಸಭೆ: ವರ್ತಕರು, ಉದ್ಯಮಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳೊಂದಿಗೆ ಶಾಸಕರ ಸಂವಾದ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೊರೊನಾ ವೈರಸ್ ಸಮುದಾಯಕ್ಕೆ ಹರಡುವ ಸಾಧ್ಯತೆಗಳು ವ್ಯಕ್ತವಾಗುತ್ತಿದ್ದು, ಈ ನಿಟ್ಟಿನಲ್ಲಿ ಉಪ್ಪಿನಂಗಡಿ ಮತ್ತು ಕಡಬ ಸಮುದಾಯ ಆಸ್ಪತ್ರೆ ಅತೀ ಶೀಘ್ರದಲ್ಲಿ ಕೋವಿಡ್-೧೯ ಕೇಂದ್ರವಾಗಿ ಕಾರ್‍ಯಾಚರಿಸಲಿದೆ ಎಂದು ಶಾಸಕ ಸಂಜೀವ ಮಟಂದೂರು ಹೇಳಿದರು.
ಅವರು ಆ. ೭ರಂದು ಉಪ್ಪಿನಂಗಡಿಯಲ್ಲಿ ವರ್ತಕರು, ಉದ್ಯಮಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳ ಸಭೆಯಲ್ಲಿ ಸಂವಾದ ನಡೆಸಿ ಮಾತನಾಡಿದರು. ಉಪ್ಪಿನಂಗಡಿ ಜನದಟ್ಟನೆ ಇರುವ ಪ್ರದೇಶವಾಗಿದ್ದು, ಕೊರೊನಾ ವೈರಸ್ ವ್ಯಾಪಕವಾಗಿ ಹರಡದಂತೆ ಮಾಡುವ ಜವಾಬ್ದಾರಿ ಪ್ರತಿಯೋರ್ವರಿಗೂ ಇದ್ದು, ಇದು ಸಮುದಾಯಕ್ಕೆ ಹರಡದಂತೆ ತಡೆಯುವ ಸಲುವಾಗಿ ಪ್ರತಿಯೋರ್ವರು ರ್‍ಯಾಪಿಡ್ ಟೆಸ್ಟ್ ಮಾಡಿಕೊಳ್ಳಬೇಕಾಗಿದೆ ಎಂದರು.

ರ್‍ಯಾಪಿಡ್ ಟೆಸ್ಟ್ ಮಾಡುವುದರಿಂದಾಗಿ ವೈರಸ್ ಹರಡುವುದನ್ನು ತಡೆಗಟ್ಟಲು ಸಾಧ್ಯವಿದ್ದು, ಬಹಳಷ್ಟು ಮಂದಿ ಅದರ ಪರೀಕ್ಷೆಗೆ ಹಿಂದೇಟು ಹಾಕುತ್ತಿದ್ದಾರೆ, ಇದು ಸಲ್ಲದು ಎಂದ ಅವರು ನಾವುಗಳು ಪರೀಕ್ಷೆ ಮಾಡುವ ಮೂಲಕ ನನ್ನಿಂದಾಗಿ ಇನ್ನೊಬ್ಬರಿಗೆ ಹರಡುವುದನ್ನು ತಪ್ಪಿಸಬಹುದಾಗಿದೆ. ಆ ಮೂಲಕ ಸಮುದಾಯಕ್ಕೆ ಹರಡದಂತೆ, ಪೇಟೆ, ಅಂಗಡಿಗಳು ಶೀಲ್‌ಡೌನ್ ಆಗದಂತೆ ನೋಡಿಕೊಳ್ಳಬೇಕಾಗಿದೆ, ಇದಕ್ಕಾಗಿ ಎಲ್ಲಾ ವರ್ತಕರು ಸಹಕಾರ ನೀಡಬೇಕು ಎಂದರು.

ಉಪ್ಪಿನಂಗಡಿ, ಕಡಬದಲ್ಲಿ ತಲಾ ೧೫ ಬೆಡ್ ವ್ಯವಸ್ಥೆ:
ಪುತ್ತೂರು ಸಾರ್ವಜನಿಕ ಆಸ್ಪತ್ರೆಯನ್ನು ಈಗಾಗಲೇ ಕೋವಿಡ್-೧೯ ಸೆಂಟರ್ ಆಗಿ ಮಾಡಲಾಗಿದೆ. ಕೊರೊನಾ ಪಾಸಿಟಿವ್ ದಿನೇ ದಿನೇ ಅಧಿಕವಾಗುತ್ತಿದ್ದು, ಅದರ ಸಲುವಾಗಿ ಉಪ್ಪಿನಂಗಡಿ ಭಾಗದ ಮಂದಿಗೆ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯಲ್ಲಿ ೧೫ ಬೆಡ್ ವ್ಯವಸ್ಥೆಯೊಂದಿಗೆ ಮತ್ತು ಕಡಬ ಭಾಗದ ಮಂದಿಗೆ ಕಡಬ ಸಮುದಾಯ ಆಸ್ಪತ್ರೆಯಲ್ಲಿ ೧೫ ಬೆಡ್ ವ್ಯವಸ್ಥೆಯೊಂದಿಗೆ ಕಾರ್‍ಯಾರಂಭ ಆಗಲಿದೆ ಎಂದರು.

ಪುತ್ತೂರು ತಹಸೀಲ್ದಾರ್ ರಮೇಶ್ ಬಾಬು ಮಾತನಾಡಿ ಸರ್ಕಾರದ ಸೂಚನೆಯಂತೆ ಪುತ್ತೂರು ತಾಲ್ಲೂಕಿನಲ್ಲಿರುವ ೨ ಲಕ್ಷದ ೫ ಸಾವಿರ ಮಂದಿಯನ್ನು ರ್‍ಯಾಪಿಡ್ ಟೆಸ್ಟ್‌ಗೆ ಒಳಪಡಿಸಬೇಕಾಗಿದೆ, ಪ್ರತಿ ದಿನ ೫೦೦ ಮಂದಿಗೆ ಪರೀಕ್ಷೆಯ ಗುರಿ ಇದ್ದು, ಯಾರೂ ಆತಂಕ ಪಡದೆ ರ್‍ಯಾಪಿಡ್ ಟೆಸ್ಟ್ ಮಾಡುವ ಮೂಲಕ ಸಮುದಾಯಕ್ಕೆ ಹರಡದಂತೆ ಮಾಡಲು ಸಹಕಾರಿ ಆಗಬೇಕು ಎಂದರು.


ಪುತ್ತೂರು ತಾಲ್ಲೂಕು ಪಂಚಾಯಿತಿ ಕಾರ್‍ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಮುಶಾಕಿರ್ ಹುಸೇನ್  ಕೊರೊನಾ ಜಾಗೃತಿ ಬಗ್ಗೆ ಮಾಹಿತಿ ನೀಡಿದರು. ವರ್ತಕ ಸಂಘದ ಅಧ್ಯಕ್ಷ ಅಗ್ನಾಡಿ ಹಾರೂನ್ ರಶೀದ್, ಮಾಜಿ ಅಧ್ಯಕ್ಷ ಯು.ಜಿ. ರಾಧಾ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಚಂದಪ್ಪ ಮೂಲ್ಯ, ವರ್ತಕರಾದ ಸುಂದರ ಗೌಡ, ಕೈಲಾರ್ ರಾಜ್‌ಗೋಪಾಲ ಭಟ್ ಚರ್ಚೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶಯನಾ ಜಯಾನಂದ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮುಕುಂದ ಗೌಡ, ಸುಜಾತ ಕೃಷ್ಣ ಆಚಾರ್ಯ, ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯ ವೈದ್ಯೆ ಝರಿನಾ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ವರ್ತಕ ಸಂಘದ ಮಾಜಿ ಅಧ್ಯಕ್ಷ ಜಗದೀಶ ಶೆಟ್ಟಿ, ಝಕರಿಯಾ ಕೊಡಿಪ್ಪಾಡಿ, ಉದ್ಯಮಿಗಳಾದ ಏಕ ವಿದ್ಯಾಧರ, ಸುಧಾಕರ ಶೆಟ್ಟಿ, ಸಂದೀಪ್ ಶೆಟ್ಟಿ, ವಿಕ್ರಂ, ಸದಾನಂದ ನೆಕ್ಕಿಲಾಡಿ, ಪುರುಷೋತ್ತಮ ಮುಂಗ್ಲಿಮನೆ, ಜಯಂತ ಪೊರೋಳಿ, ಡಾ| ಸಂತೋಷ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಮಾಜಿ ಸದಸ್ಯರಾದ ಚಂದ್ರಶೇಖರ ಮಡಿವಾಳ, ಗೋಪಾಲ ಹೆಗ್ಡೆ, ರಮೇಶ್ ಬಂಡಾರಿ, ಪಿಡಿಓ. ವಿಲ್‌ಫ್ರೆಡ್ ರಾಡ್ರಿಗಸ್ ಉಪಸ್ಥಿತರಿದ್ದರು.

ಕೊರೊನಾ ಜಾಗೃತಿ ಸಮಿತಿಯ ಸುರೇಶ್ ಅತ್ರಮಜಲು ಸ್ವಾಗತಿಸಿ, ಆನಂದ ಕುಂಟಿನಿ, ವಂದಿಸಿದರು. ಸುನಿಲ್ ಕುಮಾರ್ ದಡ್ಡು ಕಾರ್‍ಯಕ್ರಮ ನಿರೂಪಿಸಿದರು.

ವೈದ್ಯರೊಂದಿಗೆ ಸಭೆ:
ವರ್ತಕರೊಂದಿಗಿನ ಸಭೆಗೆ ಮುನ್ನ ಶಾಸಕರು ಉಪ್ಪಿನಂಗಡಿಯ ವೈದ್ಯರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಡಾ| ಕೆ.ಜಿ. ಭಟ್, ಡಾ| ರಾಜಾರಾಮ್, ಡಾ| ಯತೀಶ್ ರೈ, ಡಾ| ಸುಪ್ರೀತ್ ಲೋಬೋ, ಡಾ| ಗೋವಿಂದ ಪ್ರಸಾದ್ ಕಜೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.