Breaking News

ಬಾಲವನವನ್ನು ಜನವನ ಮಾಡಬೇಕು, ಕಟ್ಟಡಗಳು ಜನಭವನ ಆಗಬೇಕು

Puttur_Advt_NewsUnder_1
Puttur_Advt_NewsUnder_1
  • ಡಾ. ಶಿವರಾಮ ಕಾರಂತ ಬಾಲವನದಲ್ಲಿ ವಾರದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕರು
  • ಸಾಂಸ್ಕೃತಿಕ ಸಂಬಂಧಗಳ ಕೊಂಡಿ ಅಗತ್ಯ – ಜೀವನ್‌ರಾಂ ಸುಳ್ಯ
  • ಬಾಲವನ ಒಂದು ಶಕ್ತಿ – ಡಾ. ಯತೀಶ್ ಉಳ್ಳಾಲ್
  • ವಾರದಲ್ಲಿ ಮೂರು, ತಿಂಗಳಲ್ಲೊಂದು ಉನ್ನತ ಕಾರ್ಯಕ್ರಮ – ಡಾ. ಸುಂದರ ಕೇನಾಜೆ

ಪುತ್ತೂರು: ಮಕ್ಕಳೊಂದಿಗೆ ಮಕ್ಕಳ ಹಾಗೆ, ವಿವಿಧ ಕ್ಷೇತ್ರಗಳಲ್ಲಿ ವಿಭಿನ್ನ ವ್ಯಕ್ತಿತ್ವದ ವೈಶಿಷ್ಟ್ಯ ಪೂರ್ಣ ವ್ಯಕ್ತಿಯಾಗಿರುವ ಡಾ.ಶಿವರಾಮ ಕಾರಂತರ ಬಾಲವನ ಜನವನ ಮಾಡಬೇಕು. ಇಲ್ಲಿನ ಕಟ್ಟಡಗಳು ಜನಭವನ ಆಗಬೇಕು ಇದು ನಮ್ಮ ಉದ್ದೇಶ ಎಂದು ಶಾಸಕ ಸಂಜೀವ ಮಠಂದೂರು ಹೇಳುವುದರೊಂದಿಗೆ ಬಾಲವನಕ್ಕೆ ಆಧುನಿಕ ಸ್ಪರ್ಶ ನೀಡುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರದ ಕಾರ್ಯಕ್ರಮಕ್ಕೆ ಆ.೭ರಂದು ಅವರು ಚಾಲನೆ ನೀಡಿ ಮಾತನಾಡಿದರು. ಕಾರಂತರು ಸಾಂಸ್ಕೃತಿಕ ಲೋಕಕ್ಕೆ ಕೊಟ್ಟ ಕೊಡುಗೆ ಮಹತ್ತರವಾದದ್ದು, ಇಂತಹ ವ್ಯಕ್ತಿತ್ವವುಳ್ಳ ಕಾರಂತರನ್ನು ಮತ್ತೊಮ್ಮೆ ಯುವ ಪೀಳಿಗೆಗೆ ಪರಿಚಯ ಮಾಡಬೇಕು. ಆ ಯುವ ಪೀಳಿಗೆ ಶಿವರಾಮ ಕಾರಂತರ ಆದರ್ಶ ಮೈಗೂಡಿಸಿಕೊಂಡು ಆದ್ಯಾತ್ಮಿಕ ದೇಶದ ಪರಂಪರೆಯ ಭಾಗವಾಗಿರುವ ಸಾಂಸ್ಕೃತಿಕ ವಿಚಾರಗಳನ್ನು ಜಗತ್ತಿಗೆ ಪರಿಚಯಿಸಬೇಕೆಂಬುದು ನಮ್ಮ ಉದ್ದೇಶ. ಮುಂದಿನ ದಿನ ರಾಷ್ಟ್ರಮಟ್ಟದಲ್ಲಿ ಸಾಂಸ್ಕೃತಿಕ ಕೇಂದ್ರವನ್ನಾಗಿ ಬಾಲವನ್ನು ಮಾರ್ಪಾಡು ಮಾಡುವ ಮೂಲಕ ಎಲ್ಲಾ ಕಲಾವಿದರಿಗೆ ಇಲ್ಲಿ ಅವಕಾಶ ಮಾಡುವ ಮೂಲಕ ಅವರ ಪ್ರೋತ್ಸಾಹ ಕೊಡಬೇಕೆಂದು ಇವತ್ತಿನ ಕೊರೋನಾ ಸಂದರ್ಭದಲ್ಲಿ ಮನೆಯಲ್ಲೇ ಇದ್ದು ಸಾಂಸ್ಕೃತಿಕ ಚಟುವಟಿಕೆ ಕೇಳುವ ನೋಡುವ ಅವಕಾಶವನ್ನು ಹಮ್ಮಿಕೊಳ್ಳಲಾಗಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಮನೆಯಲ್ಲಿಯೇ ಕುಳಿತುಕೊಂಡು ಬಾಲವನದ ಕಾರ್ಯಕ್ರಮವನ್ನು ವೀಕ್ಷಿಸುವ ವ್ಯವಸ್ಥೆ ಮಾಡುವ ಮೂಲಕ ವಾರದ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ. ಕನ್ನಡ ಭಾಷೆಯ ಉಳಿವಿಗಾಗಿ ನಾಡುನುಡಿಯ ವಿಚಾರವಾಗಿ ನಾವು ಇತರರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ರೋಲ್‌ಮೊಡೆಲ್ ಆಗಬೇಕೆಂದು ನಮ್ಮ ಉಸ್ತುವಾರಿ ಸಚಿವರ ಚಿಂತನೆಯಂತೆ ಅದನ್ನು ಈಡೇರಿಸುವ ದಿಸೆಯಲ್ಲಿ ಹಾಕಿಕೊಂಡ ಆನ್ ಲೈನ್ ಕಾರ್ಯಕ್ರಮ ನಿರಂತರ ನಡೆಯಬೇಕೆಂದು ಹೇಳಿದರು.

ಸಾಂಸ್ಕೃತಿಕ ಸಂಬಂಧಗಳ ಕೊಂಡಿ ಅಗತ್ಯ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ರಂಗ ಸಮಾಜದ ಸದಸ್ಯ ರಂಗಕರ್ಮಿ ಜೀವನ್‌ರಾಂ ಸುಳ್ಯ ಅವರು ಮಾತನಾಡಿ ಡಾ.ಶಿವರಾಮ ಕಾರಂತರು ಕಲಾವಿದರ ಬಗ್ಗೆ ಅತ್ಯಂತ ಗೌರವ ಪ್ರೀತಿ ತೋರಿಸಿದವರು. ಸಾಂಸ್ಕೃತಿಕವಾಗಿ ಶ್ರೀಮಂತ ದೇಶವಾದ ನಮ್ಮ ಭಾರತ ಇವತ್ತು ಕೊರೋನಾದಿಂದಾಗಿ ಬಡವಾಗಿದೆ. ನನ್ನಂತವನಿಗೆ ಕಲೆಯನ್ನು ನಂಬಿ ಕೊಂಡು ಬಂದವರಿಗೆ ಬಡತನ, ಭಯ ಬೀತವಾಗಿದೆ. ಸಾಂಸ್ಕೃತಿಕತೆ ಇಲ್ಲದ ಬದುಕು ಊಹಿಸಲೂ ಅಸಾಧ್ಯವಾಗಿದ್ದು, ಸಾಂಸ್ಕೃತಿಕತೆಯು ನಮ್ಮ ಉಸಿರಿನೊಂದಿಗೆ ಬೆರೆತು ಹೋಗಿದೆ. ಕಲಾವಿದರು ಸಮಾಜದ ಸೊತ್ತು. ಆದರೆ ಕೋವಿಡ್‌ನಿಂದ ಕಲಾವಿದರ ಜೊತೆಗೆ ಸಾಂಸ್ಕೃತಿಕ ಸಂಬಂಧ ದೂರ ಹೋಗುತ್ತಿದ್ದರೂ ಆ ಸಂಬಂಧಗಳ ಕೊಂಡಿಯನ್ನು ಗಟ್ಟಿಗೊಳಿಸುವ ಕೆಲಸ ಬಾಲವನದಲ್ಲಿ ನಡೆಯುತ್ತಿರುವುದು ಕಾರಂತರ ಕನಸು ಕಾರಂತಮಯವಾಗಲಿದೆ ಎಂದು ಹೇಳಿದರು.

ಬಾಲವನ ಒಂದು ಶಕ್ತಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಯತೀಶ್ ಉಳ್ಳಾಲ್ ಅವರು ಮಾತನಾಡಿ ಬಾಲವನ ಒಂದು ಶಕ್ತಿ ಇಲ್ಲಿ ಏನೋ ಒಂದು ಹುಮ್ಮಸ್ಸು ಇದೆ. ಪರಿಸರದ ಮರಗಿಡಗಳು ಉತ್ತಮ ವಾತಾವರಣ ಬೀರುತ್ತಿದ್ದು ನಾನು ಬಂದಾಗಿನಿಂದಲೇ ಇಲ್ಲಿ ಕಾರ್ಯಕ್ರಮ ನಡೆಸುತ್ತಿದ್ದೆವು. ಮಾರ್ಚ್ ಅಂತ್ಯದಲ್ಲಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿತ್ತು. ಆದರೆ ಕೋವಿಡ್ ಲಾಕ್‌ಡೌನ್‌ನಿಂದ ಅದನ್ನು ಮುಂದೂಡಲಾಗಿತ್ತು. ಅದರೆ ಮತ್ತೆ ಕೋವಿಡ್‌ನ ನಡುವೆ ಇಲ್ಲಿನ ಸಾಂಸ್ಕೃತಿಕತೆಯನ್ನು ತುಂಬಿಸುವ ಕೆಲಸ ಆಗಬೇಕಾಗಿತ್ತು. ಸಚಿವರು ಮತ್ತು ಶಾಸಕರು ಈ ಕುರಿತು ೨ ತಿಂಗಳ ಹಿಂದೆಯೇ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸಿದ್ಧತೆ ನಡೆಸಿದ್ದಾರೆ. ಅವರ ಹುಮ್ಮಸ್ಸಿಗೆ ನಾವು ಸದಾ ಬೆಂಬಲವಾಗಿ ನಿಂತ್ತಿದ್ದೇವೆ. ಒಂದು ಕಡೆ ಕೊರೋನಾ, ಪ್ರಾಕೃತಿಕ ವಿಕೋಪದಲ್ಲಿ ಅಧಿಕಾರಿಗಳಿಗೆ ಬಿಡುವುದಿಲ್ಲದ ಕೆಲಸವಿದ್ದರೂ ಇಲ್ಲಿನ ಕಾರ್ಯಕ್ರಮಗಳಿಗೆ, ಅಭಿವೃದ್ಧಿ ಕೆಲಸಗಳಿಗೆ ಸದಾ ಬೆಂಬಲವಾಗಿ ನಿಂತಿದ್ದೇವೆ ಎಂದು ಹೇಳಿದರು.

ವಾರದಲ್ಲಿ ಮೂರು, ತಿಂಗಳಲ್ಲೊಂದು ಉನ್ನತ ಕಾರ್ಯಕ್ರಮ:
ಬಾಲವನದ ವಿಶೇಷ ಕರ್ತವ್ಯ ಅಧಿಕಾರಿ ಡಾ. ಸುಂದರ ಕೇನಾಜೆ ಅವರು ಸ್ವಾಗತಿಸಿ, ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಬಾಲವನದ ಚಟುವಟಿಕೆಗಳಿಗೆ ತೊಂದರೆ ಆಗಬಾರದು ಎಂದು ನಿರಂತರ ಕಾರ್ಯಕ್ರಮ ನಡೆಯಬೇಕೆಂಬ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ವಾರದಲ್ಲಿ ಒಂದು ಅಂದರೆ ತಿಂಗಳಲ್ಲಿ ಮೂರು ಕಾರ್ಯಕ್ರಮಗಳು. ಮತ್ತು ತಿಂಗಳಲ್ಲಿ ಒಂದು ಉನ್ನತ ಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.

ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲವನ ಮೇಲ್ವಿಚಾರಕ ಅಶೋಕ್ ಮಣಿಯಾಣಿ ವಂದಿಸಿದರು. ಕಾರ್ಯಕ್ರಮ ಸಂಯೋಜಕ ಕೃಷ್ಣಪ್ಪ ಬಂಬಿಲ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಚಲನ ಚಿತ್ರನಟ, ನೀನಾಸಂ ಪದವೀಧರ ಮೋಹನ್ ಶೇಣಿ, ರಂಗನಿರ್ದೇಶಕ ಲೋಕೇಶ್ ಊರುಬೈಲು, ಯುವ ಕಲಾವಿದರಾದ ಮಯೂರ್ ಅಂಬೆಗಲ್ಲು, ಮಯೂರ್ ನಾಯ್ಕ ಅವರಿಂದ ರಂಗಗೀತೆ. ಪರಿಸರ ಗೀತೆ, ಜಾನಪದ ಗೀತೆಗಳ ಆನ್‌ಲೈನ್ ಗಾಯನ ಪ್ರಸಾರವಾಯಿತು. ರಂಗಕರ್ಮಿಗಳಾದ ಶೈಲೇಶ್ ಅಂಬೆಕಲಗಲ್ಲು, ವಿವೇಕಾನಂದ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ, ಹರೀಶ್ ಉಬರಡ್ಕ ಸೇರಿದಂತೆ ಕೆಲವು ಮಂದಿ ಉಪಸ್ಥಿತರಿದ್ದರು. ಬಾಲವನದ ವಾರದ ಕಾರ್ಯಕ್ರಮವನ್ನು ಸುದ್ದಿ ಯು ಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು.

3ಡಿ ಥಿಯೇಟರ್ ಶೀಘ್ರ
ಆಧುನಿಕತೆಯ ಶೈಲಿಯಲ್ಲಿ ಯುವ ಪೀಳಿಗೆ ಕಾರಂತರ ವಿಚಾರವನ್ನು ಮೊದಲು ಅನುಭವಿಸಬೇಕು. ಬಳಿಕ ಕಾರಂತರ ಅನುಭವ ಪಡೆಯಬೇಕೆಂಬ ನೆಲೆಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ ಕಾರಂತರ ಬಾಲವನದಲ್ಲಿ 3ಡಿ ಥಿಯೇಟರ್ ಅತಿ ಶೀಘ್ರದಲ್ಲಿ ಆಗಲಿದೆ – ಸಂಜೀವ ಮಠಂದೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.