ಕೋಡಿಂಬಾಡಿ ಗುಡ್ಡೆಮನೆಯಲ್ಲಿ ಗ್ರಾ.ಪಂ. ಮಾಜಿ ಸದಸ್ಯೆಯ ಮನೆಯಲ್ಲಿ ಕಳ್ಳತನ

Puttur_Advt_NewsUnder_1
Puttur_Advt_NewsUnder_1
  • ದೂರು ನೀಡಿದ ವಾರದ ಬಳಿಕ ತನಿಖೆ ಪ್ರಾರಂಭಿಸಿದ ಪೊಲೀಸರು

ಪುತ್ತೂರು: ಕೋಡಿಂಬಾಡಿ ಗ್ರಾಮದ ಗುಡ್ಡೆಮನೆ ಎಂಬಲ್ಲಿ ವಾಸವಾಗಿರುವ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಕುಸುಮ ಪೂಜಾರಿ ಎಂಬವರ ಮನೆಯಲ್ಲಿ ಕಳವು ನಡೆದಿರುವ ಘಟನೆ ಜುಲೈ 31ರಂದು ನಡೆದಿದೆ. ದೂರು ನೀಡಿದ ವಾರದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.

 ಸಾಂದರ್ಬಿಕ ಚಿತ್ರ

ಗುಡ್ಡೆಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿರುವ ಕುಸುಮ ಪೂಜಾರಿಯವರು ಜುಲೈ 31ರಂದು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ರಾತ್ರಿ ವೇಳೆ ಮನೆಗೆ ನುಗ್ಗಿದ್ದ ಕಳ್ಳರು ಸೋಲಾರ್ ಲೈಟ್, ದಿನಸಿ ಸಾಮಾಗ್ರಿ, ರೇಷನ್ ಕಾರ್ಡ್ ಸಹಿತ ದಾಖಲೆಗಳನ್ನು ದೋಚಿದ್ದರು. ಕಪಾಟು ಮುರಿಯಲು ಯತ್ನಿಸಿದ್ದರಾದರೂ ಸಾಧ್ಯವಾಗಿರಲಿಲ್ಲ. ಮರು ದಿನ ಕುಸುಮರವರು ಮನೆಗೆ ಬಂದು ನೋಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿತ್ತು. ಕೂಡಲೇ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು ಎಫ್.ಐ.ಆರ್. ದಾಖಲು ಮಾಡಿರಲಿಲ್ಲ. ತನಿಖೆಗಾಗಿ ಬರುವುದಾಗಿ ಹೇಳಿದ್ದರು. ಆದರೆ, ವಾರ ಕಳೆದರೂ ಪೊಲೀಸರು ತನಿಖೆ ಆರಂಭಿಸಿರಲಿಲ್ಲ. ಈ ಬಗ್ಗೆ ಸ್ಥಳೀಯ ಪ್ರಮುಖರು ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ನಿಟ್ಟಿನಲ್ಲಿ ಕುಸುಮರವರ ಅಳಿಯ ಸುದ್ದಿ ಬಿಡುಗಡೆ ವರದಿಗಾರರಿಗೆ ಮಾಹಿತಿ ನೀಡಿದ್ದರು. ಒಂಟಿ ಮಹಿಳೆ ವಾಸವಾಗಿರುವ ಮನೆಯಲ್ಲಿ ಇಂತಹ ಘಟನೆ ನಡೆದರೂ ಯಾವುದೇ ಸ್ಪಂದನ ದೊರಕುತ್ತಿಲ್ಲ ಎಂದು ತಿಳಿಸಿದ್ದರು. ಸುದ್ದಿ ವರದಿಗಾರರು ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಗಮನ ಸೆಳೆದಿದ್ದರು. ತಕ್ಷಣ ಸ್ಪಂದಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳವು ನಡೆದ ಮನೆಗೆ ಭೇಟಿ ನೀಡಿ ತನಿಖೆ ಆರಂಭಿಸಿದ್ದು ಕಳ್ಳರ ಜಾಡು ಹಿಡಿಯಲು ಯೋಜನೆ ರೂಪಿಸಿದ್ದಾರೆ. ಪೊಲೀಸ್ ಇಲಾಖೆಯ ಹಲವು ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗಲಿರುವುದರಿಂದ ಮತ್ತು ಹಲವು ಸಿಬ್ಬಂದಿಗಳು ಕ್ವಾರಂಟೈನ್ ನಲ್ಲಿರುವುದರಿಂದ ತನಿಖೆ ವಿಳಂಬವಾಗಿದೆ ಹೊರತು ಯಾವುದೇ ನಿರ್ಲಕ್ಷ್ಯ ವಹಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.