ಅಂಗಡಿ ಕಟ್ಟಡಗಳ ತೆರವು ನೋಟೀಸ್: ವರ್ತಕರಿಂದ ತುರ್ತು ಸಭೆ, ನ್ಯಾಯಯುತ ಹೋರಾಟಕ್ಕೆ ನಿರ್ಧಾರ

Puttur_Advt_NewsUnder_1
Puttur_Advt_NewsUnder_1
  • ಬಡ ವ್ಯಾಪಾರಿಗಳನ್ನು ಬದುಕಲು ಬಿಡುವ ಜವಬ್ದಾರಿ ಶಾಸಕರ ಮೇಲಿದೆ : ಐ.ಸಿ ಕೈಲಾಸ್ ಕೆದಂಬಾಡಿ

ಪುತ್ತೂರು: ಲೋಕೋಪಯೋಗಿ ಇಲಾಖೆಯ ರಸ್ತೆಯ ಬದಿಯಲ್ಲಿ ರಸ್ತೆ ಮಾರ್ಜಿನ್ ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿರುವುದನ್ನು ತೆರವುಗೊಳಿಸುವ ಬಗ್ಗೆ ಲೋಕೋಪಯೋಗಿ ಇಲಾಖೆಯ ಆದೇಶದಂತೆ ಕೆದಂಬಾಡಿ ಗ್ರಾಮ ಪಂಚಾಯತ್ ರಸ್ತೆ ಬದಿಯ ಅಂಗಡಿ ಮಾಲಕರಿಗೆ ಮುನ್ನೆಚ್ಚರಿಕೆ ನೋಟೀಸ್ ನೀಡಿದ ಹಿನ್ನೆಲೆಯಲ್ಲಿ ಕೆದಂಬಾಡಿ, ಕೆಯ್ಯೂರು, ಒಳಮೊಗ್ರು ಮತ್ತು ಅರಿಯಡ್ಕ ಗ್ರಾಮ ವ್ಯಾಪ್ತಿಯ ಬೀದಿ ಬದಿಯ ವರ್ತಕರು ಎರಡನೇ ತುರ್ತು ಸಭೆಯನ್ನು ನಡೆಸಿದರು. ಸಭೆಯು ಜೆಡಿಎಸ್ ತಾಲೂಕು ಮಾಜಿ ಅಧ್ಯಕ್ಷ ಐ.ಸಿ ಕೈಲಾಸ್ ಕೆದಂಬಾಡಿಯವರು ಅಧ್ಯಕ್ಷತೆಯಲ್ಲಿ ಆ.9ರಂದು ಸಾರೆಪುಣಿಯಲ್ಲಿ ನಡೆಯಿತು.

ವರ್ತಕರ ಅಳಲನ್ನು ಆಲಿಸಿದ ಐ.ಸಿ ಕೈಲಾಸ್‌ರವರು ಮಾತನಾಡಿ, ಯಾವುದೇ ಉದ್ದೇಶವಿಲ್ಲದೆ ಬೀದಿ ಬದಿಯ ವ್ಯಾಪಾರಿಗಳನ್ನು ತೆರವು ಮಾಡುವುದು ಎಷ್ಟು ಸರಿ. ಕಳೆದ ೫೦ ವರ್ಷಗಳಿಂದಲೂ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವ ವ್ಯಾಪಾರಸ್ಥರು ಇದ್ದಾರೆ. ಪಂಚಾಯತ್‌ನವರು ಅಂಗಡಿಗೆ ಡೋರ್ ನಂಬರ್. ಪರವಾನಗೆ ನೀಡಿದ್ದಾರೆ. ವರ್ಷವೂ ತೆರಿಗೆ ಸಂಗ್ರಹಿಸುತ್ತಿದ್ದಾರೆ. ಹೀಗಿರುವಾಗ ಏಕಾಏಕಿ ವರ್ತಕರ ಮೇಲೆ ದಬ್ಬಾಳಿಕೆ ನಡೆಸಲು ತೀರ್ಮಾನ ಮಾಡಿರುವುದು ಸರಿಯಲ್ಲ. ಶಾಸಕರಾದ ಸಂಜೀವ ಮಠಂದೂರುರವರು ಬಡ ಜನರ ಕಷ್ಟ ತಿಳಿದುಕೊಂಡವರು ಆದ್ದರಿಂದ ಬಡ ವ್ಯಾಪಾರಗಳನ್ನು ಬದುಕಲು ಬಿಡುವ ಜವಜ್ದಾರಿ ಶಾಸಕರ ಮೇಲಿದೆ. ಶಾಸಕರು ಈ ಎಲ್ಲಾ ಸಮಸ್ಯೆಗಳಿಗೆ ಪೂರ್ಣ ವಿರಾಮ ಹಾಕಬೇಕಾಗಿದೆ ಎಂದರು.

ಕಟ್ಟಡಗಳ ತೆರವಿಗೆ ಸ್ಪಷ್ಟ ಉದ್ದೇಶ ಕೊಡಿ
ಈಗಾಗಲೇ ಪಂಚಾಯತ್ ನೀಡಿರುವ ನೋಟೀಸ್‌ನಲ್ಲಿ ಅಂಗಡಿಕಟ್ಟಡಗಳ ತೆರವು ಬಗ್ಗೆ ಸ್ಪಷ್ಟ ಉದ್ದೇಶ ಕೊಟ್ಟಿಲ್ಲ. ನೋಟೀಸ್‌ನಲ್ಲಿ ತಿಳಿಸಿದಂತೆ ವಾಹನ ಸಂಚಾರಕ್ಕೆ, ಜನ ಸಂಚಾರಕ್ಕೆ ಪ್ರಸ್ತುತ ಇರುವ ಕಟ್ಟಡಗಳಿಂದ ಯಾವುದೇ ತೊಂದರೆಯಾಗುತ್ತಿಲ್ಲ. ಹಾಗಿದ್ದರೂ ಕಟ್ಟಡಗಳ ತೆರವಿಗೆ ಅಧಿಕಾರಿಗಳು ಮುಂದೆ ನಿಂತಿರುವುದು ಯಾಕೆ ಎಂಬುದು ಗೊತ್ತಾಗುತ್ತಿಲ್ಲ, ಕಟ್ಟಡಗಳ ತೆರವು ಬಗ್ಗೆ ಸ್ಪಷ್ಟ ಉದ್ದೇಶ ಕೊಡಿ ಎಂದು ಐ.ಸಿ ಕೈಲಾಸ್ ಹೇಳಿದರು.

ಶಾಸಕರ ಕಛೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು?
ಒಂದು ಕಡೆಯಲ್ಲಿ ಕೊರೋನದಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ. ಸಾಲ ಮಾಡಿ ವ್ಯಾಪಾರ ಮಾಡುತ್ತಿದ್ದು ಸಾಲ ಕಟ್ಟಲು ಕೂಡ ಕಷ್ಟಪಡುತ್ತಿದ್ದಾರೆ. ಕೊರೋನದಂತಹ ಸಮಯದಲ್ಲಿ ಜೀವನ ನಿರ್ವಹಣೆಯ ಗಾಡಿಯ ಚಕ್ರ ಮುರಿದರೆ ಬಡ ವ್ಯಾಪಾರಸ್ಥರ ಗತಿ ಏನಾಗಬಹುದು ಎಂದು ಪ್ರಶ್ನಿಸಿದ ಐ.ಸಿ.ಕೈಲಾಸ್‌ರವರು ಇದಕ್ಕೆ ಶಾಸಕರು ಉತ್ತರಿಸಬೇಕಾಗಿದೆ. ಅಂಗಡಿಕಟ್ಟಡಗಳ ತೆರವು ಕಾರ್ಯಚರಣೆಯನ್ನು ಈ ಕೂಡಲೇ ಕೈ ಬಿಡಬೇಕು ಈ ಬಗ್ಗೆ ಅಧಿಕಾರಿಗಳಿಗೆ ತಿಳಿ ಹೇಳಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಶಾಸಕರ ಕಛೇರಿ ಮುಂದೆ ವ್ಯಾಪಾರಸ್ಥರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದರೂ ಅಚ್ಚರಿಪಡಬೇಕಾಗಿಲ್ಲ ಎಂದರು.

ಬದುಕಲು ಬಿಡಿ ಎಂಬ ರೀತಿಯಲ್ಲಿ ಹೋರಾಟ: ಜಾಬೀರ್ ಅರಿಯಡ್ಕ
ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾಗಿರುವ ಜಾಬೀರ್ ಅರಿಯಡ್ಕರವರು ಮಾತನಾಡಿ, ಬೀದಿ ಬದಿಯ ವ್ಯಾಪಾರಸ್ಥರನ್ನು ತೆರವುಗೊಳಿಸುವಂತಹ ಪ್ರಕ್ರಿಯೆಗಳು ನಡೆಯುತ್ತಿದೆ. ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಖಂಡಿಸುತ್ತದೆ. ಈ ಬಗ್ಗೆ ಹೋರಾಟ ಮಾಡುವ ರೂಪುರೇಷೆಗಳು ತಯಾರಾಗುತ್ತಿದೆ. ಬೀದಿ ಬದಿಯ ವ್ಯಾಪಾರಸ್ಥರ ಪರವಾಗಿ ಹೋರಾಟಕ್ಕೆ ನಾವು ತಯಾರಾಗಿದ್ದೇವೆ. ಒಂದು ವೇಳೆ ಉಪ್ಪಿನಂಗಡಿಯಿಂದ ನೇರವಾಗಿ ಕೆದಂಬಾಡಿಗೆ ಬಂದರೆ ಅದನ್ನು ತಡೆದೇ ತಡೆಯುತ್ತೇವೆ ಎಂಬ ಎಚ್ಚರಿಕೆಯನ್ನು ಕೊಡುತ್ತಿದ್ದೇವೆ. ಬಡ ವ್ಯಾಪಾರಸ್ಥರನ್ನು ಬದುಕಲು ಬಿಡಿ ಎಂದು ಧ್ಯೇಯವಾಕ್ಯದೊಂದಿಗೆ ನಮ್ಮ ಮುಂದಿನ ಹೋರಾಟ ನಡೆಯಲಿದೆ ಎಂದು ಹೇಳಿದರು.

ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರನ್ನು ಏಕಾಏಕಿ ಎತ್ತಂಗಡಿ ಮಾಡುವಂತಹ ಮತ್ತು ಅವರು ವ್ಯಾಪಾರ ಮಾಡದಂತೆ ತಡೆಯುವ ವ್ಯವಸ್ಥೆಗೆ ಅಧಿಕಾರಿಗಳು ಮುಂದಾಗಿರುವುದು ಖಂಡನೀಯ. ಜೀವನೋಪಾಯಕ್ಕಾಗಿ ವ್ಯಾಪಾರ ಮಾಡುತ್ತಿರುವ ಬಡ ವರ್ತಕರನ್ನು ಏಕಾಏಕಿಯಾಗಿ ಎಬ್ಬಿಸುತ್ತಿರುವುದು ಸರಿಯಾದ ನೀತಿ ಅಲ್ಲ ಎಂಬುದು ನನ್ನ ಭಾವನೆಯಾಗಿದೆ ಎಂದರು. ಈ ಬಗ್ಗೆ ನಾವು ಹೋರಾಟ ಮಾಡಲು ತಯಾರಾಗಿದ್ದೇವೆ. ಸರಕಾರದ ಕಾನೂನಿನಂತೆ ರಸ್ತೆ ಅಗಲೀಕರಣದಂತಹ ಕೆಲಸಗಳಿದ್ದರೆ ಅದಕ್ಕೆ ಅಂಗಡಿ ಕಟ್ಟಡಗಳನ್ನು ತೆರವು ಮಾಡುವ ಮೂಲಕ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ.ಆದರೆ ಯಾವುದೇ ಉದ್ದೇಶವಿಲ್ಲದೆ ವರ್ತಕರ ಮೇಲೆ ದಬ್ಬಾಳಿಕೆ ನಡೆಸುವುದು ನ್ಯಾಯಯುತವಾದ ಕೆಲಸವಲ್ಲ, ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕಾಗಿದೆ ಎಂದರು.


ಕಳೆದ ಹಲವು ವರ್ಷಗಳಿಂದ ವ್ಯಾಪಾರ ನಡೆಸಿಕೊಂಡು ಬರುತ್ತಿರುವ ವರ್ತಕರಾದ ಚಂದ್ರಶೇಖರ್ ಪೂಜಾರಿ, ಉಮೇಶ್ ರೈ ಮಿತ್ತೋಡಿ, ಶಿವಣ್ಣ ಗೌಡ ಕೌಡಿಚ್ಚಾರು, ಸಂಜೀವ ಭಂಡಾರಿ, ನವೀನ್ ರೈ ಮತ್ತಿತರರು ತಮ್ಮ ನೋವುಗಳನ್ನು ಹೇಳಿಕೊಂಡರು. ಕಳೆದ ಹಲವು ವರ್ಷಗಳಿಂದ ಬೀದಿ ಬದಿಯಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡೇ ಜೀವನ ನಿರ್ವಹಣೆ ಮಾಡಿಕೊಂಡು ಬಂದಿದ್ದೇವೆ. ಈಗ ನಮ್ಮ ಅಂಗಡಿಕಟ್ಟಡಗಳನ್ನು ನೆಲಸಮ ಮಾಡಿದರೆ ನಮಗೆ ಜೀವನ ನಡೆಸಲು ಕಷ್ಟವಿದೆ. ಸಾಲ ಮಾಡಿ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಬ್ಯಾಂಕ್‌ಗೆ ಸಾಲ ಕಟ್ಟಲು ಕೂಡ ಕಷ್ಟವಾಗುತ್ತಿದೆ. ನಮಗೆ ಸೂಕ್ತ ನ್ಯಾಯ ಕೊಡಿ ಎಂದು ವರ್ತಕರು ಕೇಳಿಕೊಂಡರು.

ಸಭೆಯಲ್ಲಿ ಮಹಾಬಲ ರೈ, ಎಂ.ಜಗದೀಶ್, ಆದಂ ಕುಂಞ, ಭಾಸ್ಕರ ಪೂಜಾರಿ, ಇಬ್ರಾಹಿಂ ಗಟ್ಟಮನೆ, ಮಹಮ್ಮದ್ ತಿಂಗಳಾಡಿ ಅಶ್ವಥ್ ತಿಂಗಳಾಡಿ, ಜಗದೀಶ್ ಆಚಾರ್ಯ ತಿಂಗಳಾಡಿ, ಜನಾರ್ದನ ಗೌಡ ತಿಂಗಳಾಡಿ, ಆನಂದ ರೈ ಮಠ, ನಾರಾಯಣ ಪೂಜಾರಿ ತಿಂಗಳಾಡಿ, ಸೋಮಶೇಖರ್ ಬಿ, ರಜಾಕ್ ಸಾರೆಪುಣಿ, ಸಾಬು ಕುಂಬ್ರ, ಕೃಷ್ಣಪ್ಪ ಪೂಜಾರಿ,ಚಂದ್ರಪಾಟಾಳಿ ತಿಂಗಳಾಡಿ, ಉಮೇಶ್ ಗೌಡ, ರವಿ ರೈ, ನವೀನ್ ರೈ, ಸುಂದರ ಮೂಲ್ಯ, ಹರ್ಷಿತ್, ಶಿವಣ್ಣ ಗೌಡ, ಶ್ರೀಧರ ಪೂಜಾರಿ, ಸದಾಶಿವ, ಇಸುಬು, ಆನಂದ, ಹರೀಶ್ ಕೆಯ್ಯೂರು, ಇಸ್ಮಾಯಿಲ್, ಅಬ್ದುಲ್ ಸಲಾಮ್ ಶೇಖಮಲೆ, ಜಯರಾಮ ಪಿ, ಲೋಕನಾಥ ರೈ, ಮಹಮ್ಮದ್ ಕುಂಞ ಸೇರಿದಂತೆ ಕೆಯ್ಯೂರು, ಕೆದಂಬಾಡಿ, ಒಳಮೊಗ್ರು ಮತ್ತು ಅರಿಯಡ್ಕ ಗ್ರಾಪಂ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು. ಎಂ.ತಾರಾನಾಥ ಶೆಟ್ಟಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ತಾಪಂ ಇಒ ಹೇಳಿಕೆಗೆ ಖಂಡನೆ ನಾವು ನಮ್ಮ ಕಷ್ಟಗಳನ್ನು ಹೇಳಿಕೊಂಡು ಮನವಿ ಕೊಡಲು ಹೋದರೆ ತಾಪಂ ಇಒರವರು ಉಡಾಫೆಯ ಉತ್ತರ ನೀಡುತ್ತಾರೆ. ಅಂಗಡಿ ಇಲ್ಲದಿದ್ದರೇನು ತೋಟದಲ್ಲಿ ಕೆಲಸ ಮಾಡಿ, ಇಂಗು ಗುಂಡಿ ಮಾಡಿ ಎಂಬ ರೀತಿಯಲ್ಲಿ ಹೇಳಿದ್ದಾರೆ ಎಂದು ಜಗದೀಶ್‌ರವರು ಆರೋಪಿಸಿದರು. ಇಒರವರ ಈ ಮಾತುಗಳ ವಿರುದ್ಧ ಸಭೆಯಲ್ಲಿ ಖಂಡನಾ ನಿರ್ಣಯ ಮಾಡಲಾಯಿತು. ಓರ್ವ ಅಧಿಕಾರಿಯಾಗಿದ್ದುಕೊಂಡು ಬಡ ವರ್ತಕರು ಮನವಿ ಕೊಡಲು ಹೋದಾಗ ಈ ರೀತಿಯ ಮಾತುಗಳನ್ನು ಹೇಳುವುದು ಸರಿಯಲ್ಲ ಎಂದು ಐ.ಸಿ ಕೈಲಾಸ್ ಗೌಡ, ದುರ್ಗಾಪ್ರಸಾದ್ ರೈ ಕುಂಬ್ರ ಮತ್ತಿತರರು ಹೇಳಿದರು.ಇಒರವರು ಸರಕಾರಿ ಕೆಲಸ ಬಿಟ್ಟು ತೋಟದಲ್ಲಿ ಕೆಲಸ ಮಾಡಲಿ ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರೇ ಒತ್ತಡಕ್ಕೆ ಮಣಿಯಬೇಡಿ
ಶಾಸಕ ಸಂಜೀವ ಮಠಂದೂರುರವರು ಬಡವರ, ಕಷ್ಟದಲ್ಲಿರುವವರ ಬಗ್ಗೆ ಬಹಳಷ್ಟು ಕಾಳಜಿಯುಳ್ಳ ವ್ಯಕ್ತಿ. ಅವರಿಗೆ ಬಡವರ ಕಷ್ಟದ ಅರಿವು ಇದೆ. ಆದರೆ ಅವರು ಯಾರದ್ದೋ ಒತ್ತಡಕ್ಕೆ ಮಣಿದು ಈ ರೀತಿಯ ಕೆಲಸಕ್ಕೆ ಕೈ ಹಾಕಿದ್ದಾರೆ ಎಂಬುದು ನನ್ನ ಭಾವನೆ ಎಂದು ಐ.ಸಿ ಕೈಲಾಸ್ ಹೇಳಿದರು. ಶಾಸಕರು ಒತ್ತಡಕ್ಕೆ ಮಣಿಯದೆ ಬಡ ವರ್ತಕರ ಮೇಲೆ ಕರುಣೆ ತೋರಬೇಕು ಎಂದು ಕೇಳಿಕೊಂಡರು.

ಯೂನಿಯನ್ ರಚನೆಯ ಮೂಲಕ ಹೋರಾಟ-ನಿರ್ಣಯ ಬೀದಿ ಬದಿ ವ್ಯಾಪಾರಸ್ಥರನ್ನು ಎತ್ತಂಗಡಿ ಮಾಡುವ ತೀರ್ಮಾನವನ್ನು ಕೈಗೊಂಡ ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಯಾವುದೇ ರಾಜಕೀಯ, ಜಾತಿ,ಮತ,ಧರ್ಮದ ಬೇಧ ಭಾವವಿಲ್ಲದೆ ಎಲ್ಲರು ಒಗ್ಗಟ್ಟಿನಿಂದ ನ್ಯಾಯಯುತವಾದ ಹೋರಾಟಕ್ಕೆ ತೀರ್ಮಾನಿಸಲಾಯಿತು. ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ಈ ಬಗ್ಗೆ ಸಮಿತಿಗಳನ್ನು ರಚಿಸುವುದು ಮತ್ತು ಅನ್ಯಾಯಕ್ಕೆ ಒಳಗಾದ ವರ್ತಕರನ್ನು ಸೇರಿಸಿಕೊಂಡು ಯೂನಿಯನ್ ರಚನೆ ಮಾಡುವುದು ಆ ಮೂಲಕ ಹೋರಾಟವನ್ನು ಮಾಡುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.