ಮಾಯಿದೆ ದೇವುಸ್ ಚರ್ಚ್‌ನ ನೂತನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರಿಗೆ ಚರ್ಚ್ ಪಾಲನಾ ಮಂಡಳಿಯಿಂದ ಸ್ವಾಗತ

Puttur_Advt_NewsUnder_1
Puttur_Advt_NewsUnder_1
  • ವಿಶ್ವಾಸದ, ಪ್ರೀತಿಯ ಸಮುದಾಯ ಕಟ್ಟುವಲ್ಲಿ ಕೈಜೋಡಿಸಿ- ವಂ|ಲಾರೆನ್ಸ್

ಪುತ್ತೂರು: ಜೀವನದಲ್ಲಿ ಉತ್ತುಂಗದಲ್ಲಿದ್ದಾಗ ಮನುಷ್ಯನಲ್ಲಿ ಸ್ವಾರ್ಥ, ಅಹಂಕಾರ ಬೇರೂರಬಾರದು. ಧರ್ಮಗುರುವಾಗಲಿ, ಯಾರೇ ಆಗಲಿ ಕಟ್ಟಡ ಕಟ್ಟುವುದು ಸೇವೆಯ ಪ್ರತೀಕವಲ್ಲ ಬದಲಾಗಿ ಸೇವೆಯ ಮನೋಭಾವ, ನಿಸ್ವಾರ್ಥತೆ, ಪರಸ್ಪರ ಗೌರವವನ್ನು ಅರಿತು ಬಾಳಿದಾಗ ವಿಶ್ವಾಸದ ಮತ್ತು ಪ್ರೀತಿಯ ಸಮುದಾಯ ಕಟ್ಟಲು ಸಾಧ್ಯವಾಗುವುದು ಎಂದು ಮಾಯಿದೆ ದೇವುಸ್ ಚರ್ಚ್‌ನ ನೂತನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಹೇಳಿದರು.

ಪುತ್ತೂರು ನಗರದ ಹೃದಯಭಾಗದಲ್ಲಿರುವ ೧೯೦ ವರ್ಷ ಇತಿಹಾಸವುಳ್ಳ ಮಾಯಿದೆ ದೇವುಸ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಂಗಳೂರಿನ ರೊಜಾರಿಯೋ ಚರ್ಚ್‌ಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ, ಅವರ ಸ್ಥಾನಕ್ಕೆ ಅಮ್ಮೆಂಬಳ್ ಚರ್ಚ್‌ನಿಂದ ೨೭ನೇ ಪ್ರಧಾನ ಧರ್ಮಗುರುಗಳಾಗಿ ಆಗಮಿಸಿ, ಅಧಿಕಾರ ಸ್ವೀಕರಿಸಿದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರಿಗೆ ಆ.೮ ರಂದು ಚರ್ಚ್‌ನ ಸಭಾಂಗಣದಲ್ಲಿ ನಡೆದ ಚರ್ಚ್‌ನ ಆರ್ಥಿಕ ಸಮಿತಿ ಹಾಗೂ ಪಾಲನಾ ಮಂಡಳಿ ವತಿಯಿಂದ ಸ್ವಾಗತ ಹಾಗೂ ಪರಿಚಯ ಕಾರ್ಯಕ್ರಮದಲ್ಲಿ ಅವರು ಸ್ವಾಗತ ಸ್ವೀಕರಿಸಿ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಧನಾತ್ಮಕ ಆಲೋಚನೆಗಳು, ಜವಾಬ್ದಾರಿಗಳಿವೆ. ಅವನ್ನು ನಿರ್ಲಕ್ಷಿಸದೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಆಲೋಚನೆಗಳು ಮತ್ತು ಜವಾಬ್ದಾರಿಗಳಿಗೆ ಬೆಲೆ ನೀಡುವಂತಾದಾಗ ಯಾವುದೇ ಧರ್ಮಕೇಂದ್ರಗಳು ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಿಕ ವಿಚಾರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಚರ್ಚ್ ಅಭಿವೃದ್ಧಿಗೆ ಸೇವೆ ಮಾಡಲು ಆಯಾ ವಾಳೆಗಳಿಂದ ಪ್ರತಿನಿಧಿಗಳಾಗಿ ಆರಿಸಿ ಬಂದಿರುವ ಎಲ್ಲರೂ ಮುಖಂಡರೇ ಎಂದ ಅವರು ಮಂಗಳೂರು ಡಯೋಸಿಸ್‌ನ ಪೈಕಿ ಪುತ್ತೂರು ಚರ್ಚ್‌ನಲ್ಲಿ ಸಾಕಷ್ಟು ವಿದ್ಯಾಕೇಂದ್ರಗಳಿದ್ದು ಎಲ್ಲವನ್ನೂ ನಾನು ಟೆನ್ಸನ್ ಮಾಡದೆ `ಟೇಕ್ ಇಟ್ ಸೀರಿಯಸ್ಲಿ ಬಟ್ ಲೈಟ್ಲಿ’ ಎಂಬಂತೆ ಸರ್ವರ ಸಹಕಾರದಿಂದ ಅಭಿವೃದ್ಧಿ ಕೆಲಸ ಮಾಡಲು ಇಚ್ಛಿಸಿರುವೆನು. ಮಕ್ಕಳನ್ನು, ಯುವಸಮುದಾಯವನ್ನು ಧಾರ್ಮಿಕ ಕೇಂದ್ರಗಳತ್ತ ಒಲವು ಬರುವಂತೆ ಮಾಡುವುದು ಮತ್ತು ಆರ್ಥಿಕ ಹಿನ್ನೆಡೆಯಲ್ಲಿರುವವರನ್ನು ಶಿಕ್ಷಣದ ಮೂಲಕ ಸದೃಢರನ್ನಾಗಿಸುವ ಮೂಲಕ ಚರ್ಚ್‌ಗಳು ದೇವರ ರಾಜ್ಯದ ಶ್ರದ್ಧಾ ಕೇಂದ್ರಗಳಾಗಬೇಕು ಎಂದು ಅವರು ಹೇಳಿದರು.

ನೂತನ ಸದಸ್ಯರಿಗೆ ಸ್ವಾಗತ:
ಚರ್ಚ್ ಪಾಲನಾ ಮಂಡಳಿಗೆ ನೂತನ ಸದಸ್ಯರಾಗಿರುವ ದರ್ಬೆ ಬೆಥನಿ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಆಗ್ನೇಸ್ ಫ್ರ್ಯಾಂಕ್, ಬ್ರಿಜಿಟಾಯ್ನ್ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಜಾನೆಟ್ ಪಿಂಟೋ, ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಮಹಿಳಾ ವಸತಿ ಗೃಹದ ವಾರ್ಡನ್ ಸಿಸ್ಟರ್ ಜಾನೆಟ್ ಕುಟಿನ್ಹಾ, ಸಂತ ಫಿಲೋಮಿನಾ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ವಂ|ಅಶೋಕ್ ರಾಯನ್ ಕ್ರಾಸ್ತಾ, ಪಾಲನಾ ಮಂಡಳಿಗೆ ನೇಮಕ ಸದಸ್ಯರಾಗಿ ಆಯ್ಕೆಯಾದ ಪ್ರೊ|ಝೇವಿಯರ್ ಡಿ’ಸೋಜರವರನ್ನು ಪಾಲನಾ ಮಂಡಳಿಯ ಸದಸ್ಯರಾದ ಗ್ರೇಸಿ ಟೀಚರ್, ಎವ್ಲಿನ್, ನಿಶಾ ಮಸ್ಕರೇನ್ಹಸ್, ಪಾವ್ಲ್ ಡಿ’ಸೋಜ, ಎಲ್ಯಾಸ್ ಪಿಂಟೋರವರು ಹೂ ನೀಡಿ ಸ್ವಾಗತಿಸಿದರು.

ಮೌನ ಪ್ರಾರ್ಥನೆ:
ಮಾಯಿದೆ ದೇವುಸ್ ಚರ್ಚ್‌ನ ಪಾಲನಾ ಮಂಡಳಿಯ ಮಾಜಿ ಉಪಾಧ್ಯಕ್ಷರಾಗಿದ್ದ ಸೋಜಾ ಮೆಟಲ್ಸ್ ಸಂಸ್ಥೆಯ ಮಾಲಕ ಜೋನ್ ಕುಟಿನ್ಹಾರವರ ಪತ್ನಿ ನಿವೃತ್ತ ಶಿಕ್ಷಕಿ ಜೆಸಿಂತಾ ಮಾಡ್ತಾರವರು ಆ.೮ ರಂದು ನಿಧನರಾದ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ಭಗವಂತನು ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.
ಬೆಥನಿ ಕಾನ್ವೆಂಟಿನ ಧರ್ಮಭಗಿನಿಯರು ಪ್ರಾರ್ಥಿಸಿದರು. ಚರ್ಚ್‌ನ ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋರವರು ನೂತನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರ ಪರಿಚಯ ಮಾಡಿದರು. ಚರ್ಚ್ ಆರ್ಥಿಕ ಸಮಿತಿಯ ಸದಸ್ಯ ವಿ.ಜೆ ಫೆರ್ನಾಂಡೀಸ್‌ರವರ ನೇತೃತ್ವದಲ್ಲಿ ಗಾಯನ ಮಂಡಳಿ ನೂತನ ಪ್ರಧಾನ ಧರ್ಮಗುರುಗಳಿಗೆ ಸ್ವಾಗತದ ಅಭಿನಂದನಾ ಗೀತೆ ಹಾಡಿ ಸ್ವಾಗತಿಸಿದರು. ಪಾಲನಾ ಮಂಡಳಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಸ್ವಾಗತಿಸಿ, ಕಾರ್ಯದರ್ಶಿ ಫೆಬಿಯನ್ ಗೋವಿಯಸ್ ವಂದಿಸಿದರು. ಶಿಂಗಾಣಿ ವಾಳೆಯ ಸದಸ್ಯ ವಿಜಯ್ ಡಿ’ಸೋಜ ಮುರ ಕಾರ್ಯಕ್ರಮ ನಿರೂಪಿಸಿದರು.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ, ಫಿಲೋಮಿನಾ ಪದವಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವಂ|ಆಂಟನಿ ಪ್ರಕಾಶ್ ಮೊಂತೇರೋ, ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ವಂ|ಸುನಿಲ್ ಜಾರ್ಜ್ ಡಿ’ಸೋಜ, ಚರ್ಚ್‌ನ ಆರ್ಥಿಕ ಸಮಿತಿಯ ಸದಸ್ಯರಾದ ವಿನ್ಸೆಂಟ್ ತಾವ್ರೋ, ವಿ.ಜೆ ಫೆರ್ನಾಂಡೀಸ್, ಓಸ್ವಾಲ್ಡ್ ಲೋಬೋ, ಪ್ರೊ|ಝೇವಿಯರ್ ಡಿ’ಸೋಜ, ಜೆರೋಮಿಯಸ್ ಪಾಸ್, ವಿವಿಧ ಕಾನ್ವೆಂಟಿನ ಧರ್ಮಭಗಿನಿಯರು, ೧೯ ವಾಳೆಗಳ ಗುರಿಕಾರರು, ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಉಪಸ್ಥಿತರಿದ್ದರು.

ಡಯೋಸಿಸ್‌ನಲ್ಲಿಯೇ ಮಾದರಿ ಚರ್ಚ್ ಆಗಿ ಮೂಡಿ ಬರಲಿ…
ಮಂಗಳೂರು ಡಯೋಸಿಸ್‌ನ ಅಲ್ಲಿಪಾದೆ, ಮಡಂತ್ಯಾರು, ಅಮ್ಮೆಂಬಳ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಉತ್ತಮವಾದ ಸೇವೆಗೈಯುವ ಮೂಲಕ ವಂ|ಲಾರೆನ್ಸ್‌ರವರು ಛಾಪು ಮೂಡಿಸಿರುತ್ತಾರೆ ಎಂಬುದಕ್ಕೆ ಮಡಂತ್ಯಾರು ಚರ್ಚ್‌ನಲ್ಲಿ ಆಗಿರುವಂತಹ ಸುಸಜ್ಜಿತ ಒಳಾಂಗಣ ಕ್ರೀಡಾಂಗಣವೇ ಸಾಕ್ಷಿಯಾಗಿದೆ. ದೇವಮಾತೆಗೆ ಸಮರ್ಪಿಸಿದ ಮಾಯಿದೆ ದೇವುಸ್ ಚರ್ಚ್‌ನಲ್ಲಿಯೂ ಉತ್ತಮವಾದ ಸೇವೆಗೈಯುವ ಮೂಲಕ ಛಾಪನ್ನು ಮೂಡಿಸಬೇಕಿದೆ. ಯಾವುದೇ ವಾದ-ವಿವಾದಗಳ ಆಸ್ಪದಕ್ಕೆ ದಾರಿ ಮಾಡಿಕೊಡದೆ ಪ್ರತಿಯೋರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸಂವಿಧಾನದ ಪರಿಧಿಯೊಳಗೆ ಸೇವಾ ಕೈಂಕರ್ಯಗಳನ್ನು ಮಾಡುವ ಮೂಲಕ ಮಂಗಳೂರು ಡಯೋಸಿಸ್‌ನಲ್ಲಿಯೇ ಮಾಯಿದೆ ದೇವುಸ್ ಚರ್ಚ್ ಮಾದರಿ ಚರ್ಚ್ ಆಗಿ ಮೂಡಿ ಬರಲಿ.
-ಮೌರಿಸ್ ಮಸ್ಕರೇನ್ಹಸ್, ಉಪಾಧ್ಯಕ್ಷರು, ಪಾಲನಾ ಮಂಡಳಿ, ಮಾಯಿದೆ ದೇವುಸ್ ಚರ್ಚ್

ಚರ್ಚ್ ವ್ಯಾಪ್ತಿಯಲ್ಲಿ ಸುಮಾರು ೬೫೦ ಕುಟುಂಬಗಳಿದ್ದು, ಅವನ್ನು ೧೯ ವಾಳೆಗಳಾಗಿ ವಿಂಗಡಿಸಲಾಗಿದೆ. ೧೯ ವಾಳೆಗಳಿಗೆ ಓರ್ವ ಗುರಿಕಾರ, ಈರ್ವರು ಪ್ರತಿನಿಧಿಗಳು(ಕುಟುಂಬಗಳ ಆಧಾರದಂತೆ), ಪ್ರಧಾನ ಧರ್ಮಗುರು, ಸಹಾಯಕ ಧರ್ಮಗುರು ಹಾಗೂ ಧರ್ಮಗುರುಗಳು, ಆರ್ಥಿಕ ಸಮಿತಿ, ಕಾನ್ವೆಂಟಿನ ಸುಪೀರಿಯರ್ ಧರ್ಮಭಗಿನಿಯರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಹೀಗೆ ಚರ್ಚ್ ಪಾಲನಾ ಮಂಡಳಿಯಲ್ಲಿ ಒಟ್ಟು ೮೧ ಸದಸ್ಯರು ಪ್ರತಿನಿಧಿಸುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.