ಪ್ರೀತಿಸಿ ಮದುವೆಯಾದಾತನ ಅಪಹರಣ ಪ್ರಕರಣ ದಾಖಲು – ಪ್ರಮುಖ ಆರೋಪಿಯ ಬಂಧನ

Puttur_Advt_NewsUnder_1
Puttur_Advt_NewsUnder_1
  • ವಿಟ್ಲ ಠಾಣಾ ಎಸ್. ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡದ ಕಾರ್ಯಾಚರಣೆ

ವಿಟ್ಲ: ಯುವತಿಯೋರ್ವರನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕಾಗಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರನ್ನು ಅಪಹರಿಸಲೆತ್ನಿಸಿದ ಘಟನೆಗೆ ಸಂಬಂದಿಸಿದಂತೆ ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಪ್ರಕರಣದ ಪ್ರಮುಖ ಸೂತ್ರಧಾರನಾಗಿರುವ ವ್ಯಕ್ತಿಯೋರ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕಡಂಬು ನಿವಾಸಿ ಅಬ್ಬಾಸ್‌ರವರ ಪುತ್ರ, ಪ್ರಸ್ತುತ: ವಿಟ್ಲ – ಪುತ್ತೂರು ರಸ್ತೆಯ ಮೇಗಿನಪೇಟೆಯಲ್ಲಿರುವ ರಿಹಾ ಅಪಾರ್ಟ್ ಮೆಂಟ್ ನಲ್ಲಿ ವಾಸವಿರುವ ಸಾದಿಕ್ ಯಾನೆ ಬ್ಲೇಡ್ ಸಾಧಿಕ್(೩೦ ವ.) ಬಂಧಿತ ಆರೋಪಿ. ಪುಣಚ ಗ್ರಾಮದ ಲೊಕ್ಕಣಿ ನಿವಾಸಿ ಮಹಮ್ಮದ್‌ರವರ ಪುತ್ರ ಅಬ್ದುಲ್ ಬಶೀರ್ ದೂರುದಾರರಾಗಿದ್ದು, ಜು.೨೯ ರಂದು ನನ್ನನ್ನು ಅಪಹರಿಸಲಾಗಿದೆ ಎಂದು ಅವರು ವಿಟ್ಲ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆ ಹೀಗೆ ನಡೆದಿತ್ತು: ಜು. ೨೯ರಂದು ಮಧ್ಯಾಹ್ನ ಸುಮಾರು ೨.೩೦ ಗಂಟೆಯ ವೇಳೆಗೆ ಬಕ್ರೀದ್ ಹಬ್ಬದ ಪ್ರಯುಕ್ತ ಬಟ್ಟೆ ತೆಗೆದುಕೊಳ್ಳುವ ಉದ್ದೇಶದಿಂದ ನಾನು ವಿಟ್ಲದಲ್ಲಿರುವ ಎಂಪಯಾರ್ ಮಾಲ್ ಗೆ ಬಂದಿದ್ದೆ. ಆ ವೇಳೆ ನನ್ನ ಪರಿಚಯದ ಸಿದ್ದಿಕ್ ಎಂಬಾತ ಮಾತನಾಡುವ ಉದ್ದೇಶದಿಂದ ನನ್ನ ಜೊತೆ ಬಾ ಎಂದು ಕಾರಿನ ಬಳಿ ಕರೆದುಕೊಂಡು ಹೋಗಿ ಸ್ಕಾರ್ಪಿಯೋ ಕಾರಿನಲ್ಲಿ ಕುಳಿತುಕೊಳ್ಳಲು ಹೇಳಿದಾಗ ಅದೇ ಕಾರಿನಲ್ಲಿ ಸಾದಿಕ್ ಯಾನೆ ಬ್ಲೇಡ್ ಸಾದಿಕ್ ಕಾರಿನೊಳಗೆ ಇದ್ದ. ಆತನನ್ನು ಗಮನಿಸಿದ ನಾನು ಕಾರು ಹತ್ತಲು ಹಿಂಜರಿದಾಗ ಇಬ್ಬರು ಸೇರಿಕೊಂಡು ನನ್ನನ್ನು ಕಾರಿನೊಳಗೆ ಬಲವಂತವಾಗಿ ದೂಡಿ ಕೂರಿಸಿಕೊಂಡು ಪುತ್ತೂರು ಕಡೆಗೆ ಹೋದರು.

ಅ ವೇಳೆ ನಾನು ಬೊಬ್ಬೆ ಹೊಡೆದಾಗ ನನ್ನನ್ನು ಬೆದರಿಸಿದ ಅವರು ಕೊಂದು ಬಿಡುವುದಾಗಿ ಹೇಳಿ, ಬ್ಲೇಡ್ ಸಾಧಿಕ್ ಕೆನ್ನೆಗೆ ಹೊಡೆದಿದ್ದ. ನಂತರ ಕಂಬಳಬೆಟ್ಟು ತಲುಪುತ್ತಿದ್ದಂತೆ ಅವರು ಕಾರನ್ನು ನಿಲ್ಲಿಸಿದ್ದು, ಈ ವೇಳೆ ಕಾರಿನಿಂದ ಜಿಗಿದು ತಪ್ಪಿಸಿಕೊಂಡು ಪರಾರಿಯಾಗಿ ಮನೆಗೆ ಬಂದಿದ್ದೇನೆ. ಆ ಬಳಿಕ ಅವರಿಬ್ಬರು ನನ್ನ ಮೊಬೈಲ್ ಗೆ ಕರೆ ಮಾಡಿ ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ಪ್ರೀತಿಸಿ ಮದುವೆಯಾದ ಹಿನ್ನೆಲೆ: ಪುಣಚ ಗ್ರಾಮದ ಲೊಕ್ಕಣಿ ನಿವಾಸಿ ಮಹಮ್ಮದ್ ರವರ ಪುತ್ರ ಅಬ್ದುಲ್ ಬಶೀರ್‌ರವರು ಅಬೂಬಕ್ಕರ್ ಎಂಬವರ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಸಾದಿಕ್ ಮತ್ತು ಸಿದ್ದಿಕ್ ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಕೊಲ್ಲುವ ಉದ್ದೇಶದಿಂದ ಕಿಡ್ನಾಪ್ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮುಂಜಾನೆ ವೇಳೆ ನಡೆಯಿತು ಬಂಧನ ಕಾರ್ಯ: ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬ್ಲೇಡ್ ಸಾದಿಕ್‌ನ ಚಲನವಲನಗಳ ಬಗ್ಗೆ ನಿಗಾ ಇರಿಸಿ ಆ.೧೦ರಂದು ಮುಂಜಾನೆ ವೇಳೆ ಕಾರ್ಯಾಚರಣೆ ನಡೆಸಿ ಸಾದಿಕ್ ನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನೋರ್ವ ಆರೋಪಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾದಿಕ್ ಹಲವು ಪ್ರಕರಣಗಳ ಆರೋಪಿ: ಸಾದಿಕ್ ಯಾನೇ ಬ್ಲೇಡ್ ಸಾದಿಕ್ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಆತನ ಮೇಲೆ ಜಿಲ್ಲೆಯ ಹಲವು ಠಾಣೆಗಳಲ್ಲಾಗಿ ಒಟ್ಟು ೧೪ ಪ್ರಕರಣಗಳು ದಾಖಲಾಗಿವೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ೧೦ಪ್ರಕರಣ, ಪುತ್ತೂರು ನಗರ ಠಾಣೆಯಲ್ಲಿ ೨ಪ್ರಕರಣ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ೧, ಉಪ್ಪಿನಂಗಡಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಬ್ಲೇಡ್ ಸಾದಿಕ್ ಅಲಿಯಾಸ್ ಸಾದಿಕ್ ಕಲ್ಲಂದಡ್ಕದಲ್ಲಿ ನಡೆದ ಶೂಟೌಟ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿ ಕಳೆದ ತಿಂಗಳಷ್ಟೆ ಈತ ಹೊರಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.