Breaking News

ವಾಸ್ತವೀಕತೆಗೆ ಅನುಗುಣವಾಗಿ ವರದಿ ನೀಡಿ | ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕರ ಸೂಚನೆ

Puttur_Advt_NewsUnder_1
Puttur_Advt_NewsUnder_1
  • ಕೆಡಿಪಿ ಉದ್ದೇಶವನ್ನು ಅರ್ಥ ಮಾಡಿಕೊಳ್ಳಿ
  • ತುರ್ತು ಚಿಕಿತ್ಸಾ ರೋಗಿಗೆ ಪುತ್ತೂರಿನಲ್ಲೇ ಕೋವಿಡ್ ಪರೀಕ್ಷೆ
  • ಓಬಿರಾಯನ ಕಾಲದ ವರದಿ ಬೇಡ
  • ಪ್ರತಿದಿನ ೪೦೦ ರ್‍ಯಾಪಿಡ್ ಪರೀಕ್ಷೆ ಗುರಿ
  • ಶಾಲಾ ದುರಸ್ಥಿ ಪೂರ್ಣವಾಗಬೇಕು

ಪುತ್ತೂರು: ನನ್ನ ಮಿತಿಗಿಂತ ಹೆಚ್ಚು ಕೆಲಸ ನಾನೇನು ಮಾಡಿದ್ದೇನೆ ಅದನ್ನು ಯೋಚನೆ ಮಾಡುವ ಕೆಲಸ ಆಗಬೇಕು. ಹಳೆಯ ಮಾದರಿಯ ವರದಿಗಳನ್ನು ಬಿಟ್ಟು ವಾಸ್ತವೀಕತೆಗೆ ಅನುಗುಣವಾಗಿ ವರದಿ ನೀಡುವಂತೆ ಶಾಸಕ ಸಂಜೀವ ಮಠಂದೂರು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಾ.ಪಂ ಸಭಾಂಗಣದಲ್ಲಿ ಆ.೧೧ರಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯಲ್ಲಿ ಪಠ್ಯಪುಸ್ತಕದಲ್ಲಿ ಇದ್ದಂತೆ ಅಧಿಕಾರಿಗಳು ಕೂಡಾ ಅಡಿಕ್ಟ್ ಆಗಿದ್ದಾರೆ. ಅದಕ್ಕೆ ವ್ಯತಿರಿಕ್ತವಾಗಿ ನಾನೇನು ಮಾಡಬೇಕು. ಸಮಯ ಸಂದರ್ಭಕ್ಕೆ ಸರಿಯಾಗಿ ಕೆಲವೊಂದು ವ್ಯತ್ಯಾಸಗಳಾದಾಗ ಅದಕ್ಕೆ ಸರಿಯಾಗಿ ನಾವು ಕೆಲಸ ಕಾರ್ಯಗಳನ್ನು ಜೋಡಣೆ ಮಾಡಬೇಕು. ಇಲಾಖೆಯಲ್ಲಿ ಬಂದಿರುವ ಬಹಳಷ್ಟು ಪಾಲನಾ, ವಾರ್ಷಿಕ ಗುರಿಗಳ ವರದಿಯನ್ನು ನೋಡಿದ ಹಾಗೆ ೨೫ ವರ್ಷಗಳ ಹಿಂದೆ ಹೇಗೆ ವರದಿಗಳಿರುತ್ತಿದ್ದವೋ ಅದಕ್ಕೆ ಸೀಮಿತವಾಗಿದ್ದೀರಿ. ಹೊಸ ಯೋಜನೆ, ಯೋಚನೆ, ಕಾರ್ಯಕ್ರಮ ವಾರ್ಷಿಕ ಗುರಿಯಲ್ಲಿ ಬರುತ್ತಿಲ್ಲ. ಅದನ್ನು ಸೇರಿಸಿಕೊಂಡು ನಾವೇನು ಮಾಡಬೇಕೆಂದಾಗ ಜನರಿಗೆ ಒಂದಷ್ಟು ಮಾಹಿತಿ ಸಿಗುತ್ತದೆ ಎಂದು ಹೇಳಿದರು.

ಕೆಡಿಪಿ ಉದ್ದೇಶವನ್ನು ಅರ್ಥ ಮಾಡಿಕೊಳ್ಳಿ:
ಅಭಿವೃದ್ಧಿಗೆ ವೇಗ ಕೊಡಬೇಕು. ಸರಕಾರದ ಹಣವನ್ನು ಆದಷ್ಟು ಬೇಗ ಜನರಿಗೆ ಮುಟ್ಟಿಸುವಲ್ಲಿ ನಾವು ಅದಕ್ಕೆ ಕಾರಣಕರ್ತರಾಗಬೆಕು. ನಾವು ಕಾಲ ಮಿತಿ, ಗುಣಮಟ್ಟದಲ್ಲಿ ಕೆಲಸ ಮಾಡಬೇಕು ಎಂದಾದರೆ ಇಲಾಖೆಗಳು ಹೊಂದಾಣಿಕೆಯಲ್ಲಿ ಇರಬೇಕು. ಈ ಹೊಂದಾಣಿಗೆಯ ಉದ್ದೇಶವೇ ಕೆಡಿಪಿ ಎಂದ ಶಾಸಕ ಸಂಜೀವ ಮಠಂದೂರು ಯಾವುದೇ ಇಲಾಖೆ ಇರಲಿ ಆರ್ಥಿಕ ವರ್ಷದಲ್ಲೇ ಫಲಾನುಭವಿಗಳಿಗೆ ಸೌಲಭ್ಯ ಸಿಗುತ್ತಿಲ್ಲ. ಎರಡು ಮೂರು ವರ್ಷಗಳ ನಂತರ ಸೌಲಭ್ಯ ಸಿಗುವ ಪರಿಸ್ಥಿತಿ ಇಂದಿನದಾಗಿದೆ. ಇದಕ್ಕೆ ಕಾರಣ ಹೊಂದಾಣಿಕೆ. ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಸಹಕಾರ ಬೇಕೆಂದರೆ ಅದನ್ನು ಕೆಡಿಪಿಯಲ್ಲಿ ತಿಳಿಸಬೇಕು. ಸಮಸ್ಯೆಗೆ ಪರಿಹಾರ ಇಲಾಖೆಗಳಲ್ಲೇ ಇದೆ. ಪರಸ್ಪರ ಅಭಿಪ್ರಾಯ ಬಂದ ತಕ್ಷಣ ನಾವು ಅದಕ್ಕೆ ಸ್ಪಂಧನೆ ಕೊಡುವ ಕಾರ್ಯ ಮಾಡಿದಾಗ ನಮ್ಮಲ್ಲಿ ಒಂದಷ್ಟು ಕಾರ್ಯಗಳಿಗೆ ವೇಗ ಸಿಗುತ್ತದೆ. ಅದರ ಜೊತೆಯಲ್ಲಿ ಪಾರದರ್ಶಕವಾಗಿ ಕೆಲಸ ಮಾಡಲು ಆಗುತ್ತದೆ ಎಂದು ಹೇಳಿದರು.

ತುರ್ತು ಸಂದರ್ಭಕ್ಕೆ ತಕ್ಷಣ ಕೋವಿಡ್ ಪರೀಕ್ಷೆ ಮಾಡಿಸಿ:
ಖಾಯಿಲೆಯ ಚಿಕಿತ್ಸೆಗಾಗಿ ಮಂಗಳೂರಿಗೆ ಹೋದಾಗ ಅಲ್ಲಿ ಕೋವಿಡ್ ಪರೀಕ್ಷೆಗೆ ಕಾಯುವ ಬದಲು ಪುತ್ತೂರಿನಿಂದ ಹೋಗುವಾಗಲೇ ಸರಕಾರಿ ಆಸ್ಪತ್ರೆಯಲ್ಲಿ ತುರ್ತು ಕೋವಿಡ್ ಪರೀಕ್ಷೆ ಮಾಡಿಸಿಕೊಡುವ ವ್ಯವಸ್ಥೆ ಮಾಡಿ. ತುರ್ತಾಗಿ ಬರುವ ಕೇಸ್‌ಗೆ ಮೊದಲ ಆದ್ಯತೆ ಕೊಟ್ಟು ಅವರಿಗೆ ಸಹಕರಿಸಿ. ಯಾಕೆಂದರೆ ಪತ್ರಕರ್ತರೊಬ್ಬರಿಗೆ ಹೃದಯಕ್ಕೆ ಸಂಬಂಧಿಸಿ ಚಿಕಿತ್ಸೆಗಾಗಿ ಮಂಗಳೂರಿಗ ಹೋದಾಗ ಅಲ್ಲಿ ಅವರಿಗೆ ಒಂದು ಗಂಟೆ ತಡವಾಗಿದೆ. ಹೋದ ತಕ್ಷಣ ಅವರಿಗೆ ಚಿಕಿತ್ಸೆ ಸೌಲಭ್ಯ ಸಿಗುತ್ತಿದ್ದರೆ ಅವರು ಬದುಕುಳಿಯುತ್ತಿದ್ದರೋ ಏನೋ ಎಂದು ಅವರ ಪತ್ನಿಯೇ ನಮ್ಮಲ್ಲಿ ಅವಳತ್ತು ಕೊಂಡಿದ್ದಾರೆ. ಹಾಗಾಗಿ ತುರ್ತು ಸಂದರ್ಭದಲ್ಲಿ ಮಂಗಳೂರಿಗೆ ಹೋಗುವ ರೋಗಿಗಳಿಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ತುರ್ತಾಗಿ ಕೋವಿಡ್ ಪರೀಕ್ಷೆ ಮಾಡಿಸಿ ಕಳುಹಿಸಿ. ಆ ಸಂದರ್ಭ ಮಂಗಳೂರಿಗೆ ಹೋದ ತಕ್ಷಣ ಅವರಿಗೆ ಚಿಕಿತ್ಸೆ ಸೌಲಭ್ಯ ಸಿಗುವ ಮೂಲಕ ಜೀವ ಉಳಿಸುವ ಕಾರ್ಯ ಆಗುತ್ತದೆ ಎಂದರು.

ಓಬಿರಾಯನ ಕಾಲದ ವರದಿ ಬೇಡ:
ತಾಲೂಕು ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ರೈ ಅವರು ವರದಿ ಮಂಡಿಸುವ ವೇಳೆಯಲ್ಲಿ ಶಾಸಕರು ಮಾತನಾಡಿ ವರದಿಯಲ್ಲಿ ಕುಷ್ಠ ರೋಗದ ಉಲ್ಲೇಖವಿದೆ ಆದರೆ ಈಗಿನ ಸಮಸ್ಯೆಯಾಗಿರುವ ಕೊರೊನಾದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇಲಾಖೆಯ ಫಾರ್ಮೆಟ್ ಭರ್ತಿ ಮಾಡಿ ಇಲ್ಲಿ ಮಂಡಿಸುವ ಅಗತ್ಯವಿಲ್ಲ. ಕಾಟಾಚಾರದ ಇಂತಹ ವರದಿ ಬೇಕಾಗಿಲ್ಲ. ಮುಂದಿನ ಸಭೆಯಲ್ಲಿ ಪ್ರಸ್ತುತ ಸಮಸ್ಯೆಗಳ ಬಗ್ಗೆ ತಿಳಿಯಲು ಸಹಕಾರಿಯಾಗುವಂತೆ ವರದಿ ನೀಡಿ ಎಂದು ಸೂಚಿಸಿದರು. ಆರೋಗ್ಯಾಧಿಕಾರಿಗಳು ಇದು ರಾಷ್ಟ್ರೀಯ ಕಾರ್ಯಕ್ರಮದ ವರದಿ ಎಂದಾಗ ಆಕ್ಷೇಪಿಸಿದ ಶಾಸಕರು ರಾಷ್ಟ್ರೀಯ ಕಾರ್ಯಕ್ರಮಗಳು ಇರಬಹುದು. ಆದರೆ ಪ್ರಗತಿ ಪರಿಶೀಲನೆ ಯಾವುದನ್ನು ಮಾಡುವುದು. ಇವತ್ತು ರಾಜ್ಯ ಸರಕಾರ ಕುಷ್ಟ ರೋಗದ ಬಗ್ಗೆಯೋ ಅಥವಾ ಕೊರೋನಾದ ಬಗ್ಗೆ ಪ್ರಗತಿ ಪರಿಶೀಲನೆ ಮಾಡುತ್ತದೆಯೋ ಎಂಬುದನ್ನು ನೋಡಬೇಕು. ಎರಡು ವರ್ಷದಿಂದ ಪಾರ್ಮೆಟ್‌ನಲ್ಲಿ ಕೊಡುತ್ತಿರುವ ಒಂದೇ ಒಂದು ಕುಷ್ಠ ರೋಗ ಇಲ್ಲ. ದೇಶದಲ್ಲಿ ಕುಷ್ಠರೋಗ ನಿವಾರಣೆ ಆಗಿದೆ. ಪ್ಲೇಗ್ ನಂತರಹ ಕಾಯಿಲೆ ಇಲ್ಲ. ಆದರೆ ನಿಮ್ಮ ಪಾರ್ಮೆಟ್‌ನಲ್ಲಿ ಈಗಲೂ ಇದೆ. ಈಗಿನ ಜ್ವಲಂತ ಕಾಯಿಲೆ ಕೊರೋನಾ ಅದು ನಿಮಲ್ಲಿ ಇಲ್ಲ.ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಏನು ಜ್ವಲಂತ ಸಮಸ್ಯೆ ಇದೆ. ಕಾಯಿಲೆ ಇದೆ ಅದರ ಕುರಿತು ಕೆಡಿಪಿಯಲ್ಲಿ ಬೆಳಕು ಚೆಲ್ಲುವ ಕೆಲಸ ಮಾಡಬೇಕು ಎಂದರು.

ಪ್ರತಿದಿನ ೪೦೦ ರ್‍ಯಾಪಿಡ್ ಪರೀಕ್ಷೆ ಗುರಿ:
ಕೊರೊನಾ ಜೊತೆಗೆ ಡೆಂಘೀ ಮತ್ತು ಮಲೇರಿಯಾ ರೋಗದ ಬಗ್ಗೆ ಶಾಸಕರು ಕೇಳಿದ ಪ್ರಶ್ನೆಗೆ ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಅವರು ಈ ಬಾರಿ ಡೆಂಘೀ ಮತ್ತು ಮಲೇರಿಯಾ ಪ್ರಕರಣಗಳು ಕಡಿಮೆಯಾಗಿದ್ದು, ಒಟ್ಟು ೨ ಡೆಂಘೀ ಮತ್ತು ೪ ಮಲೇರಿಯಾ ಪ್ರಕರಣ ದಾಖಲಾಗಿದೆ. ಪ್ರತಿದಿನ ೪೦೦ ಕೊರೊನಾ ರ್‍ಯಾಪಿಡ್ ಆಂಟಿಜನ್ ಪರೀಕ್ಷೆ ನಡೆಸಲು ಸೂಚಿಸಲಾಗಿದ್ದು, ೧೨೦ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ೧೦೦ ಬೆಡ್‌ಗಳಿದ್ದು. ಈ ಪೈಕಿ ೨೨ ಬೆಡ್‌ಗಳನ್ನು ಕೋವಿಡ್‌ಗೆ ಮೀಸಲಿಡಲಾಗಿದೆ ಎಂದು ವೈದ್ಯಾಧಿಕಾರಿ ಡಾ. ಜಯದೀಪ್ ಅವರು ತಿಳಿಸಿದರು. ಕೊರೊನಾದಿಂದ ಹೋಂ ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಯಾವುದೇ ಸಮಸ್ಯೆಯಾಗಂತೆ ಆರೋಗ್ಯ ಅಧಿಕಾರಿಗಳು ಹಾಗೂ ಟಾಸ್ಕ್‌ಫೋರ್ಸ್ ತಂಡವು ನೋಡಿಕೊಳ್ಳಬೇಕು. ಅವರಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಿರಬೇಕು. ಜನರಿಂದ ಯಾವುದೇ ದೂರು ಬಾರದಂತೆ ಎಚ್ಚರ ವಹಿಸಬೇಕು ಎಂದು ಶಾಸಕರು ತಿಳಿಸಿದರು.

ಶಾಲೆ ಆರಂಭಗೊಳ್ಳುವ ಮುಂದೆ ದುರಸ್ಥಿ ಪೂರ್ಣವಾಗಬೇಕು:
ಪ್ರಾಕೃತಿಕ ವಿಕೋಪದಡಿಯಲ್ಲಿ ಶಾಲಾ ದುರಸ್ತಿಗೆ ಬಂದಿರುವ ಅನುದಾನಗಳು ಇನ್ನೂ ಖರ್ಚಾಗದೆ ಪಂಚಾಯತ್ ಖಾತೆಯಲ್ಲಿ ಉಳಿದುಕೊಂಡಿದ್ದು, ಶಾಲೆ ಆರಂಭಗೊಳ್ಳುವ ಮೊದಲೇ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಈ ಬಗ್ಗೆ ಕ್ರಮ ಕೈಗೊಂಡು ಕ್ಷೇತ್ರಶಿಕ್ಷಣಾಧಿಕಾರಿ, ಇಂಜಿನಿಯರ್ ಮತ್ತು ಪಂಚಾಯತ್ ಆಡಳಿತಾಧಿಕಾರಿಗಳು ಒಮ್ಮತದ ವರದಿ ಸಲ್ಲಿಸಬೇಕು ಎಂದು ಶಾಸಕರು ಸೂಚಿಸಿದರು.

ಅಕ್ರಮ ಕಟ್ಟಡ ತೆರವು ಝೀರೋ ಅನುಷ್ಠಾನ:
ಅಕ್ರಮ ಕಟ್ಟಡ ತೆರವಿಗೆ ನೋಟೀಸು ಹೋಗಿದೆ. ಎಲ್ಲಿಯೂ ಅನುಷ್ಠಾನ ಆಗಿಲ್ಲ. ನಾವು ಮುಂದಿನ ಪೀಳಿಗೆ ನೆಮ್ಮದಿಯ ಜೀವನ ಮಾಡಬೇಕು. ಸುಗಮ ರಸ್ತೆಗಳ ಇರಬೇಕೆಂದು ರಸ್ತೆ ಮಾರ್ಜಿನಲ್ಲಿ ಅನಧಿಕೃತ ಕಟ್ಟಡ ತೆರವು ಮಾಡಬೇಕಾಗಿದೆ. ಇವತ್ತು ಆಡಳಿತಾಧಿಕಾರಿಗಳಿಗೆ ಪೂರ್ಣ ಅಧಿಕಾರ ಇದೆ. ಜನಪ್ರತಿನಿಧಿಗಳು ಇದ್ದರೆ ಮುಳಾಜಿ ತೋರಿಸುತ್ತಾರೆ. ಆದರೆ ನಿಮಗೆ ಯಾವುದೇ ಮುಳಾಜಿ ಇಲ್ಲ. ಆದರೆ ಕಟ್ಟಡ ಕಟ್ಟುವ ವ್ಯಕ್ತಿ ೧೫ ಮೀಟರ್ ಎಂದು ತೋರಿಸುತ್ತಾನೆ. ಆಧರೆ ಕಟ್ಟುವಾಗ ೯ ಮೀಟರ್ ಇರುತ್ತದೆ. ಅಧಿಕಾರಿಗಳು ಇದನ್ನು ಕಣ್ಣು ಮುಚ್ಚಿ ಕೂತ ಕಾರಣ ಇವತ್ತು ಸಮಸ್ಯೆ ಆಗಿದೆ. ಇದಕ್ಕೆ ಗ್ರಾ.ಪಂ ಮತ್ತು ರಸ್ತೆ ಸಂಬಂಧಿತ ಇಲಾಖೆಗಳು ಹೊಣೆ. ಈ ನಿಟ್ಟಿನಲ್ಲಿ ಕಠಿಣ ಕಾನೂನು ಕ್ರಮ ಕೈಗೊಂಡು ಸುಗಮ ವಾಹನ ಸಂಚಾರ ಹಾಗೂ ಇನ್ನಿತರ ವ್ಯವಸ್ಥೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕರು ಅಧಿಕಾರಿಗಳಿ ಸೂಚಿಸಿದರು.

ಯುವಕರಿಗೆ ಕೃಷಿಯ ಜೊತೆಗೆ ಮೌಲ್ಯಾಧರಿತ ಉತ್ಪನ್ನ ಮಾರ್ಗದರ್ಶನ:
ಕೋವಿಡ್‌ನಿಂದಾಗಿ ಒಂದು ಯುವಕರು ಕೃಷಿಯ ಕಡೆ ಒಳವು ತೋರಿದ್ದಾರೆ. ಅವರಿಗೆ ಪ್ರಧಾನಿಯ ಚಿಂತನೆಯಂತೆ ಆತ್ಮನಿರ್ಭರ ಭಾರತದ ಕೃಷಿಯಲ್ಲಿನ ಹೊಸ ಯೋಜನೆ ಮಾಡಿ ತೋರಿಸಿ. ಕೃಷಿ ಚಟುವಟಿಕೆಯ ಜೊತೆ ಮೌಲ್ಯಾಧಾರಿತ ಉತ್ಪನ್ನ ಮಾಡುವ ಕುರಿತು ಯೋಜನೆ ರೂಪಿಸಿ. ಕೇವಲ ಸರಕಾರ ಕೊಟ್ಟ ಕೊಟ್ಟುಪಿಕ್ಕಾಸ್ ಹಂಚುವುದು ನಿಮ್ಮ ಕೆಲಸವಲ್ಲ. ಕೃಷಿಗೆ ಸಂಬಂಧಿಸಿದ ಉದ್ದಿಮೆಗೆ ಆದ್ಯತೆ ಕೊಡುವ ಮಾರ್ಗ ತೋರಿಸಿ ಎಂದು ಕೃಷಿ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು. ಭತ್ತ ಬೆಳೆ ಈ ಭಾರಿ ಹೆಚ್ಚಳವಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಡಿವೈಎಸ್ಪಿ ದಿನಕರ್ ಶೆಟ್ಟಿ, ತಹಸೀಲ್ದಾರ್ ರಮೇಶ್ ಬಾಬು ಟಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಉಪಸ್ಥಿತಿರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.