ಬಿಳಿನೆಲೆಯಲ್ಲಿ ಅಕ್ರಮ ಶೆಡ್ ನಿರ್ಮಾಣ ವಿಚಾರ ತೆರವಿಗಾಗ್ರಹಿಸಿ ಮುಂದುವರಿದ ಪ್ರತಿಭಟನೆ- ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳು, ಅಹೋರಾತ್ರಿ ಸತ್ಯಾಗ್ರಹ ಸಾಧ್ಯತೆ!

Puttur_Advt_NewsUnder_1
Puttur_Advt_NewsUnder_1

ಕಡಬ: ಬಿಳಿನೆಲೆಯಲ್ಲಿ ನಿರ್ಮಾಣವಾದ ಅಕ್ರಮ ಶೆಡ್ ನ್ನು ತೆರವುಗೊಳಿಸಲು ಆಗ್ರಹಿಸಿ ಆ.12ರಂದು ಬೆಳಿಗ್ಗೆ 10 ಗಂಟೆಯಿಂದ ಪಂಚಾಯತ್ ಎದುರು ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದರೂ ಇದುವರೆಗೆ ಯಾವುದೇ ಅಧಿಕಾರಿಗಳು ಭೇಟಿ ನೀಡಲಿಲ್ಲ, ಈ ಹಿನ್ನಲೆಯಲ್ಲಿ ಪ್ರತಿಭಟನೆ ಅಹೋರಾತ್ರಿ ನಡೆಯುವ ಸಾಧ್ಯತೆ ಇದೆ.

ಬಿಳಿನೆಲೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಅಕ್ರಮ ಶೆಡ್‌ವೊಂದು ನಿರ್ಮಾಣವಾಗಿದ್ದು ಅದುವರೆಗೆ ಶಾಂತವಾಗಿದ್ದ ಬಿಳಿನೆಲೆಯಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿದೆ. ಜುಲೈ ೨೬ರಂದು ಕೊರೋನಾ ಲಾಕ್ ಡೌನ್‌ನ ವೇಳೆಯೇ ಈ ಶೆಡ್ ವಿಚಾರದಲ್ಲಿ ಜನ ಬೀದಿಗೆ ಬಂದು ಕಿತ್ತಾಟ ನಡೆಸಿದ್ದಾರೆ. ಈ ಕಿತ್ತಾಟ ಹಲ್ಲೆ, ಆಸ್ಪತ್ರೆಗೆ ದಾಖಲು ಬಳಿಕ ಲಾಕ್ ಡೌನ್ ಉಲ್ಲಂಘನೆಯ ಪ್ರಕರಣಗಳು ಎರಡು ತಂಡಗಳ ವಿರುದ್ದ ದಾಖಲಾಗಿತ್ತು.

ಅಕ್ರಮ ಶೆಡ್ ತೆರವುಗೊಳಿಸಲು ಮುಂದಾದ ಪಂಚಾಯತ್, ಬಳಿಕ ವಾಪಾಸು
ಅಕ್ರಮ ಶೆಡ್ ನಿರ್ಮಾಣವಾಗಿ ಎರಡು- ಮೂರು ದಿನಗಳು ಕಳೆದ ಮೇಲೆ ತೆರವಿಗೆ ನೋಟಿಸು ನೀಡಿ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಪೊಲೀಸರ ಸಹಕಾರದೊಂದಿಗೆ ತೆರವಿಗೆ ಮುಂದಾಗಿತ್ತು, ಈ ವೇಳೆಗಾಗಲೇ ಅಕ್ರಮ ಶೆಡ್ ತೆರವುಗೊಳಿಸಬಾರದು ಎಂಬುದಾಗಿ ಇನ್ನೊಂದು ತಂಡ ಒತ್ತಡ ಹೇರಿದಾಗ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಶೆಡ್ ತೆರವುಗೊಳಿಸದೆ ವಾಪಾಸ್ಸಗಿದ್ದಾರೆ. ಬಳಿಕ ಸ್ವಲ್ಪ ದಿನ ಮೌನವಾಗಿದ್ದ ಬಿಳಿನೆಲೆಯಲ್ಲಿ ಆ.೭ರಂದು ಅಕ್ರಮ ಶೆಡ್ ತೆರವುಗೊಳಿಸಲು ಆಗ್ರಹಿಸಿ ಕಾಂಗ್ರೆಸ್ ಸಹಕಾರದೊಂದಿಗೆ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪುತ್ತೂರು ತಾ.ಪಂ. ಕಾರ್‍ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿಯವರು ೩ ದಿನ ಕಾಲಾವಕಾಶ ನೀಡಿ ಎಂದು ವಿನಂತಿಸಿದರು. ಈ ವಿನಂತಿಗೆ ಒಪ್ಪದ ಪ್ರತಿಭಟನಾಕಾರರು ನಮಗೆ ಲಿಖಿತ ವಾಗಿ ಕೊಡಿ, ಇಲ್ಲದಿದ್ದರೆ ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು, ಬಳಿಕ ಅಕ್ರಮ ಶೆಡ್ ಎರಡು ದಿನದೊಳಗೆ ತೆರವುಗೊಳಿಸುವುದಾಗಿ ಇ.ಒ.ರವರು ಲಿಖಿತವಾಗಿ ನೀಡಿದ್ದರು.

ಇದೇ ವೇಳೆ ಇನ್ನೊಂದು ಕಡೆಯಿಂದ ಆಗಮಿಸಿದ ಬಿಜೆಪಿ ನೇತೃತ್ವದ ತಂಡ ನೀವು ಅವರಿಗೆ ಲಿಖಿತವಾಗಿ ನೀಡಿದ್ದಿರಿ, ನಮಗೂ ತೆರವುಗೊಳಿಸುವುದಿಲ್ಲ ಎಂದು ಲಿಖಿತವಾಗಿ ನೀಡಿ ಎಂದು ಅಗ್ರಹಿಸಿದರು. ಇದಕ್ಕೆ ಒಪ್ಪದ ಇ.ಒರವರು ಮುಂದೆ ಸೂಕ್ತ ಕ್ರಮ ಕೈಗೊಳ್ಳುವ ಎಂದು ಹೇಳಿ ಹೋಗಿದ್ದರು.

ಇ.ಒ ಲಿಖಿತವಾಗಿ ತಿಳಿಸಿ, ೪ ದಿನ ಕಳೆದರೂ ಅಕ್ರಮ ಶೆಡ್ ತೆರವುಗೊಳಿಸುವ ಯಾವುದೇ ಪ್ರಕ್ರಿಯೇಗಳು ನಡೆಯದಿದ್ದಾಗ ಆ.೧೨ರಂದು ಅಕ್ರಮ ಶೆಡ್ ತೆರವುಗೋಳಿಸಬೇಕೆಂದು ಅನ್ನಪೂರ್ಣ ಹಾಗೂ ಅವರ ಪತಿ ಗಿರಿಯಪ್ಪ ಮಕ್ಕಳಾದ ಚೇತನ್, ಚೇತಕ್ ಬಿಳಿನೆಲೆ ಗ್ರಾಮ ಪಂಚಾಯತ್ ಕಛೇರಿಯ ಜಗಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ, ಇದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಸಾಥ್ ನೀಡುತ್ತಿದ್ದಾರೆ.

ಅಕ್ರಮ ಶೆಡ್ ನಿರ್ಮಾಣವಾಗುವ ವೇಳೆ ಪಕ್ಷ ರಾಜಕೀಯ ಯಾವುದೂ ಇರದಿದ್ದರೂ, ಘಟನೆ ಠಾಣೆಯ ಮೆಟ್ಟಲು ಏರುತ್ತಿದ್ದಂತೆ ಪ್ರಕರಣಕ್ಕೆ ರಾಜಕೀಯ ವಾಸನೆ ಬಡಿದಿದೆ. ಬಳಿಕದ ಪ್ರತಿ ಘಟನೆಯ ಹಿಂದಿನಲ್ಲಿ ಇತ್ತಂಡಗಳಲ್ಲಿಯೂ ರಾಜಕೀಯ ಕೆಲಸ ಮಾಡಿದೆ, ಪ್ರತಿಭಟನೆಗೆ ಆಗಮಿಸಿದ ಇ.ಒ ರವರು ಲಿಖಿತ ಭರವಸೆ ನೀಡುವ ಮೂಲಕ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ, ತಾನು ನೀಡಿದ ಲಿಖಿತ ಆದೇಶವನ್ನು ಅವರಿಗೆ ಪಾಲನೆ ಮಾಡಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ, ಆದರೆ ಈ ರೀತಿಯಾಗಲು ಕಾರಣ ಏನು, ಕಾಂಗ್ರೆಸ್ ಬಿಜೆಪಿಯ ಪ್ರತಿಷ್ಟೆಯಲ್ಲಿ ಕಾನೂನು ದಿಕ್ಕಿನಲ್ಲಿ ನಡೆಯಬೇಕಾದ ಅಧಿಕಾರಿಗಳನ್ನು ಕಟ್ಟಿ ಹಾಕಿದವರು ಯಾರು ಎಂಬ ಪ್ರಶ್ನೆ ಉದ್ಬವವಾಗಿದೆ.

ಆ.೧೨ ಬೆಳಿಗ್ಗೆ ೧೦ ಗಂಟೆಯಿಂದ ಉಪವಾಸ ಸತ್ಯಾಗ್ರಹ ಬಿಳಿನೆಲೆ ಪಂಚಾಯತ್ ಜಗಲಿಯಲ್ಲಿ ನಡೆಯುತ್ತಿದ್ದರೂ ಯಾವುದೇ ಅಧಿಕಾರಿಗಳು ಭೇಟಿ ನೀಡಲಿಲ್ಲ, ಪ್ರತಿಭಟನಾ ನಿರತರಲ್ಲಿ ಮಾತು ಆಡಲಿಲ್ಲ ಎಂಬ ಆರೋಪವೂ ಕಾಂಗ್ರೆಸ್ ಮುಖಂಡರ ಕಡೆಯಿಂದ ಕೇಳಿ ಬರುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.