ಇದೆಂಥಾ ರಸ್ತೆ ಕಣ್ರೀ… ಮನವಿ ಕೊಟ್ಟರೂ ಕ್ಯಾರೇ ಅನ್ನುತ್ತಿಲ್ಲ ಜನಪ್ರತಿನಿಧಿಗಳು| ಉದಯಗಿರಿ-ಬೇರಿಕೆ ರಸ್ತೆಯಲ್ಲಿ ಕೆಸರಿನ ನಡಿಗೆ- ವಾಹನ ಸಂಚಾರಕ್ಕೆ ಸಮಸ್ಯೆ

Puttur_Advt_NewsUnder_1
Puttur_Advt_NewsUnder_1

@ ಸಿಶೇ ಕಜೆಮಾರ್


ಪುತ್ತೂರು: ಇಲ್ಲಿಯ ಜನರ ಮನವಿಗೆ ಬೆಲೆಯೇ ಇಲ್ಲ. ರಸ್ತೆ ದುರಸ್ತಿ ಮಾಡಿಕೊಡಿ ಎಂದು ಕಳೆದ 10 ವರ್ಷಗಳಿಂದ ಈ ಭಾಗದ ಜನರು ಮನವಿ ಕೊಡುತ್ತಲೇ ಬಂದಿದ್ದಾರೆ. ಆದರೆ ಇದುವರೆಗೆ ಯಾವೊಬ್ಬ ಜನಪ್ರತಿನಿಧಿಯೂ ಇಲ್ಲಿಯ ಜನರ ಮನವಿಗೆ ಸ್ಪಂದನೆ ನೀಡಲೇ ಇಲ್ಲ. ಇದು ಆರ್ಯಾಪು ಗ್ರಾಮದ ನಗರಸಭಾ ವ್ಯಾಪ್ತಿಯ ಉದಯಗಿರಿ-ಬೇರಿಕೆ ರಸ್ತೆ ಅವಲಂಭಿತರ ನೋವಿನ ಕಥೆಯಾಗಿದೆ. ಹೌದು…ನಗರಸಭಾ ವಾರ್ಡ್ ಸಂಖ್ಯೆ ೩೦ ರ ವ್ಯಾಪ್ತಿಯಲ್ಲಿ ಸಂಪ್ಯ ಅನ್ನಪೂರ್ಣೇಶ್ವರಿ ದೇವಸ್ಥಾನದ ಹತ್ತಿರದಿಂದ ಬೇರಿಕೆಗೆ ಹಾದು ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದು ರಸ್ತೆಯೋ , ಕೆಸರು ತುಂಬಿದ ತೋಡೋ ಎಂಬಂತೆ ಭಾಸವಾಗುತ್ತಿದೆ. ರಸ್ತೆಯ ಅಲ್ಲಲ್ಲಿ ಒಸರು ಉಂಟಾಗಿದ್ದು ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಮೂರು ಕಿ.ಮೀ ದೂರದ ರಸ್ತೆಯಲ್ಲಿ ಮುಕ್ಕಾಲು ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದೆ. ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡ ನಿರ್ಮಾಣಗೊಂಡಿದ್ದು ಮೊಣಕಾಲು ಹೂತುಹೋಗುವಷ್ಟು ಕೆಸರು ತುಂಬಿಕೊಂಡಿದೆ. ವಾಹನ ಸಂಚಾರ ಬಿಡಿ ಜನರು ನಡೆದುಕೊಂಡು ಹೋಗಲೇ ಹರಸಾಹಸ ಪಡಬೇಕಾಗಿದೆ.

ಸುಮಾರು 50 ಮನೆಗಳನ್ನು ಸಂಪರ್ಕಿಸುವ ರಸ್ತೆ
ನಗರಸಭಾ ವ್ಯಾಪ್ತಿಗೆ ಒಳಪಟ್ಟ ಉದಯಗಿರಿ-ಬೇರಿಕೆ ರಸ್ತೆಯು ಮೂರು ಕಿ.ಮಿ ದೂರದ ರಸ್ತೆಯಾಗಿದೆ. ಸುಮಾರು ೫೦ ಕ್ಕೂ ಅಧಿಕ ಮನೆಗಳ ಜನರಿಗೆ ಈ ರಸ್ತೆಯ ಅಗತ್ಯತೆ ಇದೆ. ಇವರಿಗೆ ಪರ‍್ಯಾಯ ರಸ್ತೆ ಕೂಡ ಇಲ್ಲ.ಶಾಲಾ ಕಾಲೇಜು ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರು ಇದೇ ರಸ್ತೆಯನ್ನು ಅವಲಂಭಿಸಬೇಕಾಗಿದೆ. ಈ ಮೊದಲು ಚಿಕ್ಕದಾದ ರಸ್ತೆ ಇದಾಗಿತ್ತು. ಸ್ಥಳೀಯರು ಸೇರಿಕೊಂಡು ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ಅಗಲೀಕರಣ ಮಾಡಿದ್ದರು.

ಕೆಸರೋ ಕೆಸರು
ರಸ್ತೆಯ ಅಲ್ಲಲ್ಲಿ ನೀರು ಒಸರುತ್ತಿದ್ದು ರಸ್ತೆ ಮೇಲೆಯೇ ಹರಿದು ಹೋಗುತ್ತಿದೆ. ಚರಂಡಿ ವ್ಯವಸ್ಥೆ ಕೂಡ ಇಲ್ಲದೇ ಇರುವುದರಿಂದ ಗುಡ್ಡದಿಂದ ಹರಿದು ಬರುವ ಮಳೆ ನೀರು ನೇರವಾಗಿ ರಸ್ತೆಯ ಮಧ್ಯೆದಿಂದಲೇ ಹರಿಯುತ್ತಿದೆ. ಇದರಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು ಅಲ್ಲಲ್ಲಿ ಹೊಂಡಗಳು ನಿರ್ಮಾಣಗೊಂಡಿದೆ. ರಸ್ತೆ ತುಂಬಾ ಕೆಸರು ತುಂಬಿಕೊಂಡಿದ್ದು ನಡೆದಾಡಲು ಕಷ್ಟವಾಗುತ್ತಿದೆ. ಮೊಣಕಾಲು ಹೂತು ಹೋಗುವಷ್ಟು ಕೆಸರು ಇರುವುದರಿಂದ ಚಿಕ್ಕಮಕ್ಕಳು, ವೃದ್ಧರಿಗೆ ತೊಂದರೆಯುಂಟಾಗಿದೆ.

ವಾಹನ ಸವಾರರ ಪಾಡು ಕೇಳುವವರ‍್ಯಾರು?
ಸುಮಾರು ೫೦ ಮನೆಗಳಿರುವುದರಿಂದ ಹೆಚ್ಚಿನವರಲ್ಲಿ ದ್ವಿಚಕ್ರ ವಾಹನ ಇದ್ದೇ ಇದೆ. ದ್ವಿಚಕ್ರ ವಾಹನದಲ್ಲಿ ಸರ್ಕಸ್ ಮಾಡಿಕೊಂಡೇ ತೆರಳಬೇಕಾಗಿದೆ. ಅಪ್ಪಿ ತಪ್ಪಿ ವಾಹನ ಕೆಸರಲ್ಲಿ ಹೂತು ಹೋದರೆ ಮೇಲೆತ್ತಲು ಬಹಳ ಕಷ್ಟವಿದೆ. ರಿಕ್ಷಾ ಚಾಲಕರು ಈ ಭಾಗಕ್ಕೆ ಬರಲು ಹೆದರುತ್ತಿದ್ದಾರೆ. ಇಲ್ಲಿನ ಜನರಿಗೆ ಏನಾದರೂ ಅನಾರೋಗ್ಯ ಕಂಡು ಬಂದರೆ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಸ್ಥಳೀಯರೇ ಸೇರಿಕೊಂಡು ರಸ್ತೆ ಅಗಲೀಕರಣ ಮಾಡಿದ್ದರು
ಈ ರಸ್ತೆಯು ಮಧ್ಯ ಭಾಗದಲ್ಲಿ ತೀರಾ ಇಕ್ಕಟ್ಟಾಗಿತ್ತು. ಘನ ವಾಹನಕ್ಕೆ ಸಂಚಾರಕ್ಕೆ ತೊಂದರೆಯಾಗಿತ್ತು. ಇದನ್ನು ಮನಗಂಡ ಇಲ್ಲಿನ ಸ್ಥಳೀಯ ಹಲವು ಮಂದಿ ತಮ್ಮ ವರ್ಗ ಜಾಗದಿಂದ ಉದಾರವಾಗಿ ಜಾಗ ಬಿಟ್ಟುಕೊಟ್ಟಿದ್ದರು. ಇದಲ್ಲದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಸ್ತೆ ಅಗಲೀಕರಣ ಕೂಡ ಮಾಡಿಸಿದ್ದರು. ಆದರೂ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಕಿಂಚಿತ್ತು ಅನುದಾನ ಕೂಡ ಕೊಟ್ಟಿಲ್ಲ ಎನ್ನುತ್ತಾರೆ ಸ್ಥಳೀಯರು. ಉದಯಗಿರಿ-ಬೇರಿಕೆ ರಸ್ತೆಯ ಕಡೆಗಣನೆಗೆ ಕಾರಣವಾದರೂ ಏನು ಎಂಬುದೇ ಇಲ್ಲಿನ ಜನರ ಪ್ರಶ್ನೆಯಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರಿಸಬೇಕಾಗಿದೆ.

ಈ ಸಂದರ್ಭದಲ್ಲಿ ದಯಾನಂದ ಗೌಡ ಕುಂಟ್ಯಾನ, ಲಿಂಗಪ್ಪ ಶೆಟ್ಟಿ ಕರಿ ಮೊಗರು, ಉಮೇಶ್ ಕುಕ್ಕಾಡಿ, ದಯಾನಂದ ಶೆಟ್ಟಿ ಕರಿ ಮೊಗರು, ಧನ್ಯಶ್ರೀ ಶೆಟ್ಟಿ ಕರಿ ಮೊಗರು, ವೆಂಕಟೇಶ್ ಶೆಟ್ಟಿ ಕರಿ ಮೊಗರು, ಶಶಿಧರ ಶೆಟ್ಟಿ ಕರಿ ಮೊಗರು, ಕರುಣಾಕರ ಶೆಟ್ಟಿ ಕರಿ ಮೊಗರು, ಪದ್ಮಾವತಿ ಕರಿ ಮೊಗರು, ಶೋಭಾ ಕರಿ ಮೊಗರು, ರಾಜೇಶ್ವರಿ ಕರಿ ಮೊಗರು, ಲೀಲಾವತಿ ಕರಿ ಮೊಗರು, ಹೇಮಲತಾ, ರಾಮ್ ಪ್ರಸಾದ್, ಕೆ ಆದಿತ್ಯ, ತುಷಾರ್, ಅಚ್ಚುತ ಶೆಟ್ಟಿ,ಕೆರಿಮೊಗರು, ಚೇತನ್ ಚರಣ್ ಕರಿಮೊಗರು, ಗಿರಿಜಾ ಉದಯಗಿರಿ ಮತ್ತಿತರರು ಉಪಸ್ಥಿತರಿದ್ದರು.

ಮನವಿಗೆ ಬೆಲೆಯೇ ಇಲ್ಲ…!
ಹೌದು…ರಸ್ತೆ ದುರಸ್ತಿ ಮಾಡಿಕೊಡಿ, ಕೆಸರು ತುಂಬಿದ ಭಾಗಕ್ಕೆ ಕಾಂಕ್ರೀಟ್ ಹಾಕಿ ಕೊಡಿ ಎಂದು ಕಳೆದ ೨೦೧೪ ರಿಂದ ಶಾಸಕರಿಂದ ಹಿಡಿದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಈ ಭಾಗದ ಜನರು ಮನವಿ ಕೊಡುತ್ತಲೇ ಬಂದಿದ್ದಾರೆ. ಫೋಟೋ ಸಮೇತ ಮನವಿ ನೀಡಿದ ಎಲ್ಲಾ ಪ್ರತಿಯೂ ಇಲ್ಲಿಯ ಜನರಲ್ಲಿದೆ. ಆದರೆ ಇದುವರೇಗೆ ಯಾರು ಕೂಡ ಇವರ ಮನವಿಗೆ ಸ್ಪಂದನೆ ನೀಡಿಲ್ಲ. ಕೊನೆ ಪಕ್ಷ ರಸ್ತೆ ಪರಿಶೀಲನೆ ಮಾಡುವ ಗೋಜಿಗೂ ಬಂದಿಲ್ಲ ಎನ್ನುವುದು ಇಲ್ಲಿನ ಜನರ ಆರೋಪವಾಗಿದೆ. ನಾವು ಕೊಟ್ಟ ಮನವಿಗೆ ಸ್ಪಂದನೆ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಂಕ್ರಿಟೀಕರಣವೊಂದೇ ಸೂಕ್ತ
ರಸ್ತೆಯ ಮಧ್ಯ ಭಾಗ ಸುಮಾರು ಅರ್ಧ ಕಿಮೀ ಸಂಪೂರ್ಣ ಹಾಳಾಗಿರುವುದರಿಂದ ಕಾಂಕ್ರಿಟೀಕರಣ ಮಾಡುವುದು ಒಂದೇ ಪರಿಹಾರವಾಗಿದೆ. ಸದ್ಯಕ್ಕೆ ಚರಂಡಿ ವ್ಯವಸ್ಥೆ ಮಾಡಿ ಜಲ್ಲಿ ಹುಡಿ ಅಥವಾ ಮರಳು ಹಾಕಿ ಜನ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ. ಮಾಡುತ್ತಾರೋ ಕಾದು ನೋಡಬೇಕಾಗಿದೆ.

ಕೊರೋನ ಕಾರಣದಿಂದ ಕ್ಷೇತ್ರ ವ್ಯಾಪ್ತಿಯ ಅನೇಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ವಿವಿಧ ಕಾಮಗಾರಿಗಳು ಬಾಕಿಯಾಗಿದ್ದು ಹಂತ ಹಂತವಾಗಿ ಪೆಂಡಿಂಗ್ ಇರುವ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಆರ್ಯಾಪು ಗ್ರಾಮದ ಉದಯಗಿರಿ ಬೇರಿಕೆ ರಸ್ತೆ ಅಭಿವೃದ್ಧಿ ಬಗ್ಗೆ ಈಗಾಗಲೇ ಬರೆದುಕೊಂಡಿದ್ದೇನೆ. ಮುಂದಿನ ಹಂತದ ಅಭಿವೃದ್ಧಿ ಪಟ್ಟಿಯಲ್ಲಿ ಸೇರಿಸಲಾಗುವುದು. ಖಂಡಿತವಾಗಿಯೂ ರಸ್ತೆ ಕಾಂಕ್ರಿಟೀಕರಣ ಮಾಡಿಸಿಕೊಡಲಾಗುವುದು.ಸಂಜೀವ ಮಠಂದೂರು, ಶಾಸಕರು ಪುತ್ತೂರು

ನಗರಸಭೆಯಿಂದ ಯಾವುದೇ ಅನುದಾನ ಇಲ್ಲ. ಶಾಸಕರ ಅನುದಾನದಲ್ಲಿ ರಸ್ತೆ ದುರಸ್ತಿ ಮಾಡಬೇಕಾಗಿದೆ. ರಸ್ತೆ ಹಾಳಾಗಿರುವ ಬಗ್ಗೆ ನಾನು ಪರಿಶೀಲನೆ ನಡೆಸಿದ್ದೇನೆ. ಈ ಬಗ್ಗೆ ಪ್ರಯತ್ನ ಮಾಡಲಾಗುವುದು. – ಶೀನಪ್ಪ ನಾಯ್ಕ್ , ನಗರಸಭಾ ಸದಸ್ಯರು
ನಾವು 2014 ರಿಂದ ಮನವಿ ನೀಡುತ್ತಲೇ ಬಂದಿದ್ದೇವೆ. ಶಾಸಕರಿಂದ ಹಿಡಿದು ಎಲ್ಲರಿಗೂ ಕೊಟ್ಟಿದ್ದೇವೆ. ಆದರೆ ಯಾರೂ ಕೂಡ ಸ್ಪಂದನೆ ಮಾಡಲಿಲ್ಲ. ಸುಮಾರು ೫೦ ಕ್ಕಿಂತಲೂ ಜಾಸ್ತಿ ಮನೆ ಇದೆ. ವಾಹನ ಸಂಚಾರ ದೂರದ ಮಾತು ಆಗಿದೆ. ಊರವರ ಸಹಕಾರದಿಂದ ಈ ರಸ್ತೆಯನ್ನು ಅಗಲೀಕರಣ ಮಾಡಲಾಗಿದೆ. ಶೀಘ್ರದಲ್ಲೇ ರಸ್ತೆ ದುರಸ್ತಿ ಮಾಡಿ ಕಾಂಕ್ರಿಟೀಕರಣ ಮಾಡಿಕೊಡಬೇಕು ಎನ್ನುವುದು ನಮ್ಮ ಮನವಿಯಾಗಿದೆ. -ದಯಾನಂದ ಶೆಟ್ಟಿ ಕರಿಮೊಗರು, ಸ್ಥಳೀಯರು
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.