ತಾಲೂಕಿನಲ್ಲಿ ಮೊಬೈಲ್ ಆಪ್‌ನಿಂದ ಬೆಳೆ ಸಮೀಕ್ಷೆಗೆ ಚಾಲನೆ – ಡಾ. ಯತೀಶ್ ಉಳ್ಳಾಲ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೃಷಿ ಇಲಾಖೆಯ ಬೆಳೆ ಸಮೀಕ್ಷೆ ಯೋಜನೆಯಂತೆ ರೈತರೇ ಸ್ವತಃ ತಮ್ಮ ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಆಪ್ ಬಳಸಿಕೊಂಡು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ವಿವರಗಳನ್ನು ಸ್ವತಃ ದಾಖಲಿಸುವ ಬೆಳೆ ಸಮೀಕ್ಷೆ ಯೋಜನೆಗೆ ಆ.೧೪ರಂದು ಪುತ್ತೂರು ತಾಲೂಕು ಆಡಳಿತ ಮೇಲ್ವಿಚಾರಣೆಯಲ್ಲಿ ಚಾಲನೆ ನೀಡಲಾಗಿದೆ. ಆರಂಭದಲ್ಲಿ ಬೆಳಿಗ್ಗೆ ಶಾಸಕ ಸಂಜೀವ ಮಠಂದೂರು ತೋಟದಲ್ಲಿ ಬೆಳೆ ಸಮೀಕ್ಷೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಎಂದು ಸಹಾಯಕ ಕಮಿಷನರ್ ಡಾ. ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.

ಪುತ್ತೂರು ತಮ್ಮ ಕಚೇರಿಯಲ್ಲಿ ಬೆಳೆ ಸಮೀಕ್ಷೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪುತ್ತೂರು ತಾಲೂಕಿನ ೩೩ ಗ್ರಾಮಗಳಲ್ಲಿ ಒಟ್ಟು ೯೬,೩೨೬ ಕೃಷಿ ಭೂಮಿಗಳಿವೆ. ಕಡಬದಲ್ಲಿ ೭೯, ೨೬೯ ಕೃಷಿ ಭೂಮಿಗಳಿವೆ. ಆಪ್ ವಿಧಾನದ ಮೂಲಕ ರೈತರೇ ಬೆಳೆ ಸಮೀಕ್ಷೆ ನಡೆಸಿದ್ದಲ್ಲಿ ಬೆಳೆಯ ಕುರಿತು ಸ್ಪಷ್ಟ ವಿವರ, ಯಾವ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಬಹುದು, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ವಿವಿಧ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ, ಬೆಳೆ ನಷ್ಟ ಪರಿಹಾರ ನೀಡಲು ಅನುಕೂಲಗಳು ಇವೆ. ಅ. ೨೪ರವರೆಗೆ ಈ ಸಮೀಕ್ಷೆ ನಡೆಯುತ್ತದೆ.
ಕೃಷಿಕನ ಬಳಿ ಆಂಡ್ರಾಯಿಡ್ ಮೊಬೈಲ್ ಸೆಟ್ ಇಲ್ಲದ ಪಕ್ಷದಲ್ಲಿ ಬೇರೆಯವರ ಮೊಬೈಲ್ ಸೆಟ್‌ನಿಂದ ಈ ಸಮೀಕ್ಷೆಯನ್ನು ಮಾಡಲು ಅವಕಾಶವಿದೆ. ಸಂಬಂಧ ಪಟ್ಟ ಕೃಷಿ ಭೂಮಿಯ ೩೦ಮೀ. ವ್ಯಾಪ್ತಿಯೊಳಗೆ ನಿಂತು ಬೆಳೆ ಮತ್ತು ಫೊಟೋಗಳ ದಾಖಲೀಕರಣ ನಡೆಸಲು ಸಾಧ್ಯವಿದೆ. ಕೃಷಿ ಭೂಮಿಯಿಂದ ೩೦ಮೀ. ಹೊರಗಡೆ ಸಮೀಕ್ಷಾ ಕಾರ್ಯ ನಡೆಸಲು ಸಾಧ್ಯವಿಲ್ಲ. ಎಲ್ಲಾ ರೈತರು ಬೆಳೆ ಸಮೀಕ್ಷೆ ಆಪ್‌ನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಬೆಳೆ ಸಮೀಕ್ಷೆ ಮಾಡಬಹುದಾಗಿದೆ. ತಮ್ಮ ಜಮೀನಿನ ಸರ್ವೆ ನಂಬರ್ ದಾಖಲಿಸಿ ಬೆಳೆಗಳ ಮಾಹಿತಿಗಳನ್ನು ಅಪ್‌ಲೋಡ್ ಮಾಡಿಕೊಳ್ಳಬೇಕಾಗಿದೆ ಇದು ಕೃಷಿಕರಲ್ಲಿ ಧನಾತ್ಮಕ ಚಿಂತನೆ ಮೂಡಿಸಿದೆ ಎಂದು ತಿಳಿಸಿದರು.

ಬೆಳೆ ಸಮೀಕ್ಷೆ ಆಪ್‌ನ್ನು ಗೂಗಲ್ ಫ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ
ರೈತರೆ ಸ್ವತಃ ಆಪ್ ಮೂಲಕ ಆ.೨೪ರ ತನಕ ಬೆಳೆ ಸಮೀಕ್ಷೆ ಕೈಗೊಳ್ಳಬಹುದು. ರೈತರು ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಒಟಿಪಿ ಮುಖಾಂತರ ಬೆಳೆ ಸಮೀಕ್ಷೆ ಆಪ್‌ನಲ್ಲಿ ನೋಂದಾಯಿಸಿಕೊಂಡು ತದನಂತರ ತಮ್ಮ ಜೀಮೀನಿನ ಸರ್ವೇ ನಂಬರ್ ದಾಖಲಿಸಿ, ಹಿಸ್ಸಾವಾರು ಬೆಳೆದಿರುವ ವಿವಿಧ ಬೆಳೆಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಿಕೊಳ್ಳಬೇಕು. ಬೆಳೆ ಸಮೀಕ್ಷೆಯಲ್ಲಿ ಸಂಗ್ರಹಿಸಲಾದ ದತ್ತಾಂಶ ಮಾಹಿತಿಯನ್ನು ಆರ್‌ಟಿಸಿಯಲ್ಲಿ ಬೆಳೆ ವಿವರ ದಾಖಲಾತಿಗಾಗಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಅರ್ಹ ಫಲಾನುಭವಿಗಳ ಪಟ್ಟಿ ಸಿದ್ದಪಡಿಸುವಲ್ಲಿ, ಬೆಳೆ ವಿಮಾ ಯೋಜನೆಗೆ, ರಾಜ್ಯದ ಬೆಳೆಗಳ ಒಟ್ಟಾರೆ ಉತ್ಪಾದಕತೆಯನ್ನು ಅಂದಾಜಿಸಲು, ಕನಿಷ್ಠ ಬೆಂಬಲ ಬೆಲೆ ನಿಗಧಿ ಹಾಗೂ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕಾಗಿ ಸಹಕಾರಿಯಾಗಲಿದೆ ಎಂದು ಕೃಷಿ ಇಲಾಖೆಯ ಉಪನಿರ್ದೇಶಕ ಶಿವಶಂಕರ ದಾನೆಗೊಂಡರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕ ಶಿವಶಂಕರ ದಾನೆಗೊಂಡರ್, ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಮತ್ತು ಪುತ್ತೂರು ಕೃಷಿ ನಿದೇರ್ಶಕ ನಂದನ್ ಶೆಣೈ ಉಪಸ್ಥಿತರಿದ್ದರು.

ಎಲ್ಲೋ ಕೂತು ಮೊಬೈಲ್ ಬೆಳೆ ಸಮೀಕ್ಷೆ ಮಾಡಲಾಗುವುದಿಲ್ಲ. ಕೃಷಿ ಭೂಮಿಯ ೩೦ ಮೀಟರ್ ಒಳಗೆ ಇರಬೇಕಾಗುತ್ತದೆ. ಯಾಕೆಂದರೆ ಜಿಪಿಎಸ್ ಆಧಾರಿತವಾಗಿ ಈ ಸಮೀಕ್ಷೆ ನಡೆಯಲಿದೆ. ಜಿಪಿಎಸ್ ಮತ್ತು ಲೊಕೇಷನ್ ಪಿಕ್ಸ್ ಆಗಿದ್ದರಿಂದ ಯಾವುದೋ ಪೊಟೋವನ್ನು ಅಪ್‌ಲೋಡ್ ಮಾಡಲಾಗುವುದಿಲ್ಲ. ಕೃಷಿ ಭೂಮಿಯಲ್ಲಿ ಇದ್ದು ಮೂರು ನಾಲ್ಕು ಪೋಟೋ ಅಪ್‌ಲೋಡ್ ಮಾಡಬೇಕಾಗುತ್ತದೆ. ಪುತ್ತೂರಿಗೆ ಪಿ.ಆರ್.ಒಗಳನ್ನು ಕೃಷಿ ಇಲಾಖೆಯ ಮೂಲಕ ನೇಮಕ ಮಾಡಲಾಗಿದೆ. ಅವರಿಗೆ ಮಾಸ್ಟರ್ ಟ್ರೈನರ್ ಮೂಲಕ ತರಬೇತಿ ನೀಡಲಾಗುತ್ತದೆ.- ಡಾ. ಯತೀಶ್ ಉಳ್ಳಾಲ್, ಸಹಾಯಕ ಕಮಿಷನರ್ ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.