ಸಾರ್ವಜನಿಕ ಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪನೆಗಿಲ್ಲ ಅವಕಾಶ – ಗಣೇಶೋತ್ಸವ ಆಚರಣೆ-ಸರಕಾರದ ಮಾರ್ಗಸೂಚಿ ಪ್ರಕಟ

ಪುತ್ತೂರು:ವರ್ಷಂಪ್ರತಿ ಅದ್ದೂರಿಯಾಗಿ ನಡೆಯುತ್ತಿದ್ದ ಗಣೇಶೋತ್ಸವ ಕಾರ್ಯಕ್ರಮಗಳನ್ನು ಈ ವರ್ಷ ಕೋವಿಡ್-19 ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ಸೂಚನೆ ನೀಡಿರುವ ಸರಕಾರ ಈ ಸಂಬಂಧ ಮಾರ್ಗಸೂಚಿ ಪ್ರಕಟಗೊಳಿಸಿದೆ.
ಶ್ರೀ ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿ ಪೂರ್ವಕವಾಗಿ ದೇವಸ್ಥಾನದೊಳಗೆ ಅಥವಾ ತಮ್ಮ ಮನೆಗಳಲ್ಲಿಯೇ ಆಚರಿಸಬೇಕು. ಸಾರ್ವಜನಿಕ ಸ್ಥಳ(ಉದಾ:ರಸ್ತೆ, ಗಲ್ಲಿ, ಓಣಿ, ಮೈದಾನ ಇತ್ಯಾದಿ)ಗಳಲ್ಲಿ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪಿಸಬಾರದು. ಯಾವುದೇ ಕಾರಣಕ್ಕೂ ಸಾರ್ವಜನಿಕ ನದಿ, ಕೆರೆ, ಕೊಳ,ಬಾವಿ ಮತ್ತು ಕಲ್ಯಾಣಿಗಳಲ್ಲಿ ಶ್ರೀ ಗಣೇಶ ಮೂರ್ತಿ ವಿಸರ್ಜನೆ ಮಾಡಬಾರದು. ಶ್ರೀ ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಕಾರಣಕ್ಕಾಗಲಿ ಅಥವಾ ಯಾವುದೇ ಸಂದರ್ಭಗಳಲ್ಲಿ ಯಾವುದೇ ರೀತಿಯ ಮೆರವಣಿಗೆ ಹೊರಡಿಸತಕ್ಕದ್ದಲ್ಲ ಯಾ ಮಾಡತಕ್ಕದ್ದಲ್ಲ.ಇದನ್ನು ಸಂಪೂರ್ಣ ನಿಬಂಧಿಸಲಾಗಿದೆ.
ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಅವರ ಮನೆ ಆವರಣದಲ್ಲಿಯೇ ವಿಸರ್ಜನೆ ಮಾಡಬೇಕು.
ಶ್ರೀ ಗಣೇಶ ಹಬ್ಬ ಆಚರಿಸುವ ದೇವಸ್ಥಾನಗಳಲ್ಲಿ ದಿನನಿತ್ಯ ಸ್ಯಾನಿಟೈಸೇಷನ್ ಮಾಡಬೇಕು ಮತ್ತು ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತಾದಿಗಳಿಗೆ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದರ ಜೊತೆಗೆ ದರ್ಶನಕ್ಕಾಗಿ ಬರುವ ಭಕ್ತರಿಗೆ ಕನಿಷ್ಠ ೬ ಅಡಿ ಸಾಮಾಜಿಕ ಅಂತರವನ್ನು ಗುರುತಿಸಬೇಕು ಮತ್ತು ಅದನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು.ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಮತ್ತು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಕೋವಿಡ್-೧೯ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಮತ್ತು ರಾಜ್ಯ ಸರಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸಬೇಕು.ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳಿಂದ ಹೊರಡಿಸಲಾದ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶ್ರೀ ಗಣೇಶೋತ್ಸವ ಆಚರಣೆ ಕಾಲಕ್ಕೆ ಸಂದರ್ಭಕ್ಕನುಗುಣವಾಗಿ ಸರಕಾರ, ಜಿಲ್ಲಾಡಳಿತ, ಪೊಲೀಸ್, ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆ, ಪ್ರಾಧಿಕಾರಗಳಿಂದ ಹೊರಡಿಸಲಾಗುವ ಎಲ್ಲಾ ಆದೇಶ, ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಬ್ಬ ಹರಿದಿನಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯಗಳುಂಟಾಗಲು ಪೂರಕವಾಗಿರುವುದರಿಂದ ಶ್ರೀ ಗಣೇಶೋತ್ಸವ ಹಬ್ಬವನ್ನು ಅದೇ ರೀತಿಯಿಂದಲೇ ಆಚರಿಸುವ ಮೂಲಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ತರದಂತೆ ಕಾಪಾಡಬೇಕು. ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರಕಾರದ ಆದೇಶ/ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ,೨೦೦೫ ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ ೧೮೮ರ ಅಡಿಯಲ್ಲಿ ಶಿಸ್ತಿನ/ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷರೂ ಆಗಿರುವ ಟಿ.ಎಂ.ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.