ಕೋವಿಡ್ -19 ಹಿನ್ನೆಲೆ ಸಂಭ್ರಮ ಕಳೆದು ಕೊಂಡ ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವ

  • ದೇಶದ ಸೇವೆಯ ಪುನರ್‌ಮನನವಾಗಬೇಕು – ಡಾ. ಯತೀಶ್ ಉಳ್ಳಾಲ್

ಪುತ್ತೂರು: ಸ್ವಾತಂತ್ರ್ಯ ದಿನಾಚರಣೆ ನೂರಾರು ವರ್ಷಗಳ ಹೋರಾಟದ ಫಲ. ಇವತ್ತು ಕೋವಿಡ್ ಎಂಬ ಸಂಕೊಲೆಯ ಬಂಧನದಿಂದ ಮುಕ್ತರಾಗಲು ದೇಶಕಾಗಿ ಯಾವ ರೀತಿ ಮತ್ತೊಮ್ಮೆ ನಮ್ಮ ಸೇವೆ ನೀಡಬಹುದು ಎಂದು ಪುನರ್‌ಮನನ ಮಾಡಬೇಕು ಎಂದು ಪುತ್ತೂರು ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಅವರು ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಕಿಲ್ಲೆ ಮೈದಾನದಲ್ಲಿರುವ ಮಂಗಲ್ ಪಾಂಡೆ ಚೌಕದಲ್ಲಿ ನಡೆದ ೭೪ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣಗೈದು ಸಂದೇಶ ನೀಡಿದರು. ಇವತ್ತು ಅನೇಕ ಸಮಸ್ಯೆಗಳನ್ನು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಆದರೆ ಅದನ್ನು ಕ್ಷಣಮಾತ್ರದಲ್ಲಿ ಬಗೆ ಹರಿಸುವ ಕೆಲಸವನ್ನೂ ಮಾಡುವ ಮೂಲಕ ನಾವು ದೇಶಾಭಿಮಾನ ತೋರಿಸಿದ್ದೇವೆ. ಕೋವಿಡ್ -೧೯ ಪರಿಸ್ಥಿತಿ ಬಂದಾಗ ಸರಳವಾಗಿ ಪ್ರಥಮ ಬಾರಿಗೆ ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದೇವೆ ಎಂದಾದರೆ ಈ ಸೋಂಕಿಗೆ ಎಷ್ಟೊಂದು ಮುಂಜಾಗ್ರತೆ ವಹಿಸಬೇಕೆಂಬುದು ಎಲ್ಲರಿಗೂ ಅರ್ಥವಾಗಿದೆ. ಹಾಗಾಗಿ ಮಾಸ್ಕ್, ಸಾಮಾಜಿಕ ಅಂತರ, ನಮ್ಮ ಸ್ವಯಂ ಸ್ವಚ್ಚತೆಯನ್ನು ಎಲ್ಲರೂ ಕಾಪಾಡಿಕೊಳ್ಳಿ ಎಂದು ಹೇಳಿದ ಅವರು ಸ್ವಾತಂತ್ರ್ಯ ಎಂಬುವುದು ಪ್ರತಿಯೊಬ್ಬರ ಜೀವನದಲ್ಲಿ ಬಹುಮುಖ್ಯವಾದ ಅಂಶ. ಇದನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ, ನಮ್ಮ ಸಮಾಜದ ರಕ್ಷಣೆಗೆ ಬದ್ಧರಾಗಿರೋಣ. ಶೌರ್ಯ ಮತ್ತು ತ್ಯಾಗದಿಂದ ದೇಶಕ್ಕೆ ಸ್ವಾತಂತ್ರ್ಯವನ್ನು ನೀಡಿದ ಎಲ್ಲಾ ಮಹಾನ್ ಸ್ವಾತಂತ್ರ್ಯ ಹೋರಾಟಗಾರನ್ನು ಗೌರವಿಸೋಣ. ಕೊರೋನಾದಿಂದ ಆದಷ್ಟು ಬೇಗ ಸ್ವಾತಂತ್ರ್ಯ ಸಿಗುವಂತಾಗಲಿ ಎಂದರು.

 

ಶಾಸಕ ಸಂಜೀವ ಮಠಂದೂರು, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಬೋರ್ಕರ್, ತಹಶೀಲ್ದಾರ್ ರಮೇಶ್ ಬಾಬು ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪೌರಾಯುಕ್ತೆ ರೂಪಾ ಶೆಟ್ಟಿ, ಡಿವೈಎಸ್ಪಿ ದಿನಕರ್ ಶೆಟ್ಟಿ, ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಸಂಚಾರ ಪೊಲೀಸ್ ಠಾಣೆಯ ಎಸ್.ಐ ಚೆಲುವಯ್ಯ, ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಮಾಜಿ ಸೈನಿಕರುಗಳು, ತಾ.ಪಂ ಸದಸ್ಯರುಗಳು, ನಗರಸಭಾ ಸದಸ್ಯರುಗಳು, ರಾಜಕೀಯ ಪಕ್ಷದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪುತ್ತೂರು ನಗರ ಮತ್ತು ಸಂಚಾರ ಪೊಲೀಸರು, ಅಗ್ನಿಶಾಮಕದಳ, ಗೃಹರಕ್ಷಕ ದಳದಿಂದ ಧ್ವಜವಂದನೆ ನಡೆಯಿತು. ನಗರಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಟ್ರೂಪ್ ಜವಾಬ್ದಾರಿ ವಹಿಸಿದ್ದರು. ನಗರ ಠಾಣೆಯ ಎಸ್.ಐ ಜಂಬೂರಾಜ್ ಮಹಾಜನ್ ನೇತೃತ್ವದಲ್ಲಿ ಗೌರವ ವಂದನೆ ನಡೆಯಿತು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ಪುಷ್ಪಾರ್ಚನೆ: ಧ್ವಜಾರೋಹಣಕ್ಕೂ ಮುನ್ನ ಸಹಾಯಕ ಕಮೀಷನರ್ ಅವರು ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ತೆರಳಿ ಅಲ್ಲಿ ಹುತಾತ್ಮ ಯೋಧರ ಸ್ಮರಣಾರ್ಥ ಪುಷ್ಪಾರ್ಚನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಿಗೂ ಗೌರವ ಸೂಚಿಸಿದರು. ಬಳಿಕ ಮಂಗಲ್ ಪಾಂಡೆ ಚೌಕಕ್ಕೆ ತೆರಳಿ ಧ್ವಜಾರೋಹಣ ನೆರವೇರಿಸಿದರು.

ಸಂಭ್ರಮ ಕಳೆದು ಕೊಂಡ ಸ್ವಾತಂತ್ರ್ಯೋತ್ಸವ
ಕಳೆದ ವರ್ಷ ಕಿಲ್ಲೆ ಮೈದಾನದ ಮಂಗಲ್‌ಪಾಂಡೆ ಚೌಕದ ಮುಂದಿನ ಮೈದಾನ ತುಂಬೆಲ್ಲಾ ವಿದ್ಯಾರ್ಥಿಗಳು ಸಾರ್ವಜನಿಕರು ಸೇರಿ ಸಂಭ್ರಮದ ವಾತಾವರಣ ಮೂಡಿತ್ತು. ಜಡಿ ಮಳೆಯ ನಡುವೆ ವಿದ್ಯಾರ್ಥಿಗಳು ಒದ್ದೆಯಾಗಿ ಮೆರವಣಿಗೆ ನಡೆಸಿದ್ದರು. ಅಂಬಿಕಾದ ವಿದ್ಯಾರ್ಥಿಗಳಿಂದ ದರ್ಬೆಯಿಂದ ಭಾರತ ಮಾತೆಯ ಸ್ತಬ್ದ ಚಿತ್ರದೊಂದಿಗೆ ಮೆರವಣಿಗೆ ನಡೆದಿತ್ತು. ಈ ಭಾರಿ ಕೋವಿಡ್ ನಿಂದಾಗಿ ಮೆರವಣಿಗೆಯೂ ಇಲ್ಲ ಸಂಭ್ರಮವೂ ಇಲ್ಲ. ಪ್ರತಿವರ್ಷ ವೀರ ಯೋಧರನ್ನು, ಮಾಜಿ ಸೈನಿಕರನ್ನು, ಸಾಧಕರನ್ನು ಗುರುತಿಸಿ ಗೌರವಿಸ ಕಾರ್ಯಕ್ರಮ ಸ್ವಾಂತ್ರ್ಯೋತ್ಸವದ ಸಭಾ ಕಾರ್ಯಕ್ರಮಲ್ಲಿ ನಡೆಯುತ್ತಿದ್ದು, ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ರೀತಿಯಲ್ಲೇ ಕೋವಿಡ್ ವಿರುದ್ಧ ಹೋರಾಟ ಮಾಡಿ ರೋಗಿಗಳ ಆರೋಗ್ಯವನ್ನು ಕಾಪಾಡುತ್ತಿರುವ ಆಶಾ ಕಾರ್ಯಕರ್ತೆಯರು, ವೈದ್ಯರು, ದಾದಿಯರು, ಇಲಾಖೆ ಸಿಬ್ಬಂದಿಗಳನ್ನು ಗೌರವಿಸುವ ಮತ್ತು ವಿಶೇಷವಾಗಿ ಕೋವಿಡ್ ಸೋಂಕು ತಗಲಿ ಪೂರ್ಣ ಗುಣಮುಖರಾಗಿರುವ ೭೨ ವರ್ಷದ ವೃದ್ಧೆಯನ್ನು ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.