ನೀತಿ ಸಂಹಿತೆ ಉಲ್ಲಂಘಿಸಿ ಪ್ರತಿಭಟನೆ, ಪೊಲೀಸರಿಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣದ ಆರೋಪಿ ಸೆರೆ:  ಮಧ್ಯಂತರ ಜಾಮೀನು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: 2018ರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಲ್ಲದೆ ಪ್ರತಿಭಟನೆ ನಿಲ್ಲಿಸಲು ಹೋದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ್ದ ಪ್ರಕರಣದ ಬಳಿಕ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಆರೋಪಿಯೋರ್ವರನ್ನು ಸ್ವದೇಶಕ್ಕೆ ಆಗಮನ ವೇಳೆ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.ಆರೋಪಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಕೆದಿಲ ಬೀಟಿಗೆ ಉಮ್ಮರ್ ಎಂಬವರ ಮಗ ಅಬ್ದುಲ್ ನಾಸಿರುದ್ದೀನ್ ಇದೀಗ ಬಂಧಿತ ಆರೋಪಿ.ಜಮ್ಮುಕಾಶ್ಮಿರದಲ್ಲಿ ನಡೆದಿದ್ದ ಬಾಲಕಿ ಆಸಿಫಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣವನ್ನು ಖಂಡಿಸಿ ೨೦೧೮ರ ಏಪ್ರಿಲ್ ೨೦ರಂದು ರಾತ್ರಿ ಮುರ ಜಂಕ್ಷನ್‌ನಲ್ಲಿ ಮುಸ್ಲಿಂ ಸಂಘಟನೆಯೊಂದು ಪ್ರತಿಭಟನೆಗೆ ಸಿದ್ಧತೆ ನಡೆಸಿತ್ತು.ಆದರೆ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಯಾವುದೇ ಅನುಮತಿ ಪಡೆದುಕೊಳ್ಳದೆ ನೀತಿ ಸಂಹಿತೆ ಉಲ್ಲಂಘಿಸಿ ಪ್ರತಿಭಟನೆ ನಡೆಸುತ್ತಿರುವ ಮಾಹಿತಿ ಅರಿತ ಪೊಲೀಸರು ಪ್ರತಿಭಟನೆ ನಿಲ್ಲಿಸುವಂತೆ ಸೂಚಿಸಿದಾಗ ಪೊಲೀಸರು ಮತ್ತು ಸಂಘಟನೆ ಕಾರ‍್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಲಘು ಲಾಠಿ ಪ್ರಹಾರ ನಡೆದಿತ್ತು.ಈ ಸಂದರ್ಭ ಕೆಲವರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರು.ಪರಿಸ್ಥಿತಿ ಕೈಮೀರಿದಾಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಪ್ರತಿಭಟನಾಕಾರರನ್ನು ಚದುರಿಸಿದ್ದರು.ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಪೊಲೀಸರಿಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪೊಲೀಸರು ಕೆಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ಬಂಧಿಸಿದ್ದರು.

ಅಬ್ದುಲ್ ನಾಸಿರುದ್ದೀನ್ ವಿರುದ್ಧ ಲುಕೌಟ್ ನೊಟೀಸ್:
ಪ್ರಕರಣದ ಬಳಿಕ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ೧೮ನೇ ಆರೋಪಿ ಅಬ್ದುಲ್ ನಾಸಿರುದ್ದೀನ್ ವಿರುದ್ಧ ಲುಕೌಟ್ ನೊಟೀಸ್ ಜಾರಿ ಮಾಡಲಾಗಿತ್ತು.ಆ.೧೪ರಂದು ವಂದೇ ಭಾರತ್ ಮಿಷನ್ ವಿಮಾನದಲ್ಲಿ ಆರೋಪಿಯು ಬರುತ್ತಿದ್ದ ಮಾಹಿತಿ ಅರಿತ ಪುತ್ತೂರು ನಗರ ಪೊಲೀಸರು ಆತನನ್ನು ಅಲ್ಲಿ ಬಂಧಿಸಿದ್ದರು.ಆರೋಪಿಯನ್ನು ಕೋವಿಡ್-೧೯ ಪರೀಕ್ಷೆಗೊಳಪಡಿಸಿ ನೆಗೆಟಿವ್ ವರದಿ ಬಂದ ಬಳಿಕ ಪೊಲೀಸರು ಆರೋಪಿಯನ್ನು ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿದ್ದರು.ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ನ್ಯಾಯವಾದಿ ಇಬ್ರಾಹಿಂ ಬಾತಿಷಾ ಯು.ಕೆ.ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.