ಡಾ.ಸುಶಾಂತ್ ವಿ.ರೈಯರವರ ಸ್ವ-ರಚಿತ ಕವನಗಳು

Puttur_Advt_NewsUnder_1
Puttur_Advt_NewsUnder_1

ದೇವರು ಕುಳಿತಿಹನು
ಗರ್ಭಗುಡಿಯೊಳಗೆ
ತಾಯಿ ಹೊತ್ತಿಹಳು ತನ್ನ ಕುಡಿಯನ್ನು
ಅವಳ ಗರ್ಭದೊಳಗೆ

ಹರಿಹರ ಬ್ರಹ್ಮಾದಿಗಳು ಮಗುವಾದರು
ತಾಯ ಮಡಿಲೊಳಗೆ
ಅದಕ್ಕೆ ತಿಳಿದವರು ನುಡಿದರು
ತಾಯಿಗಿಂತ ದೇವರಿಲ್ಲ
ಇರುವರು ಮುಕ್ಕೋಟಿ ದೇವತೆಗಳು ಅವಳೊಳಗೆ

ನವಮಾಸ ಹೊರುವಳು
ತನ್ನೆಲ್ಲಾ ನೋವುಗಳ ಸಹಿಸಿ
ಜನುಮ ಕೊಡುವಳು ಕುಡಿಗೆ
ತನ್ನ ಕರುಳ ಕತ್ತರಿಸಿ

ತಾನು ಕೆಸರಲ್ಲಿ ಹೂತಿರುವ ಬೇರಗಿ
ಕಂದನನ್ನು ಕಮಲದ ಹೂವಂತೆ ತೇಲಿಸುವವಳು
ತ್ಯಾಗ, ಪ್ರೇಮ, ವಾತ್ಸಲ್ಯಕ್ಕೆ
ಇನ್ನೊಂದು ಹೆಸರು ಅವಳು
ಎಡವಿದಾಗ ತಬ್ಬಿ, ಮುತ್ತಿಕ್ಕಿ
ಹೆಜ್ಜೆ ಇಡಲು ಕಲಿಸಿದವಳು

ಎಷ್ಟೇ ಜನುಮ ಹುಟ್ಟಿ ಬಂದರೂ
ಸಾಧ್ಯವಿಲ್ಲ ತೀರಿಸಲು ಅವಳ ಋಣ
ಅಂತಹ ದೇವತೆಗೆ ಮಂಡಿಯೂರಿ ಕೈಮುಗಿದು
ಪಾದಕ್ಕೆ ತಲೆಬಾಗೋಣ


ರಾಧಾ ಶ್ಯಾಮ

ಕೊಳಲನೂದಿ ಜಗವನ್ನು ಕುಣಿಸಿದ ಶ್ಯಾಮ
ರಾಧೆಯ ಹೃದಯ ವೀಣೆಯಲ್ಲಿ ಮೀಡಿದ ಸರಿಗಮ
ಅದಕ್ಕವನ ಇನ್ನೊಂದು ನಾಮ ಪ್ರೇಮ

ಅವಳ ಹಣೆಬರಹದಲ್ಲಿ ಬರೆದಿರಲಿಲ್ಲ
ಅವನ ಸತಿಯಾಗುವ ಭಾಗ್ಯವನ್ನ
ಕೇಳಿದಳು ಅವಳೊಮ್ಮೆ ಗೋಪಾಲನ
ನಾನೇನು ಪಾಪ ಮಾಡಿದೆನು ಕೃಷ್ಣ
ನಿನಗೊಪ್ಪಿಸಿದ್ದೆ ನನ್ನ ಪ್ರಾಣ
ಆಗಬಾರದಿತ್ತೆ ಕೊಳಲು ನಾ ನಿನ್ನ

ಅದಕ್ಕುತ್ತರಿಸಿದ ನಗುತ ಗೋವರ್ಧನ
ಲಗ್ನವಾಗಲು ಬೇಕು ಎರಡು ದೇಹಗಳು
ನೀ ನನ್ನ ಕೊಳಲೊಳಗೆ ತುಂಬಿ ಸ್ವರ ಹೊಮ್ಮಿಸುವ ಉಸಿರು
ನಾವಿಬ್ಬರೂ ಒಂದೇ ಅಲ್ಲವೇ ಎಂದುಸಾವು

ಬದುಕಲ್ಲಿಹುದು ಸುಖದುಃಖವೆಂಬ
ರೈಲು ಕಂಬಿಗಳು
ಅದರ ಮಧ್ಯೆ ಸಾಗುವುದು
ನಮ್ಮ ಬಾಳ ರೇಖೆಗಳು
ಕಣ್ಣಾಯಿಸಿದಷ್ಟು ದೂರ
ಬಿಂದು ಸೇರದ ಏರಿಳಿತಗಳು

ಕೆಲವೊಮ್ಮೆ ನಲಿವು, ಮತ್ತೊಮ್ಮೆ ನೋವು
ಕೇವಲ ನಾಲ್ಕು ದಿನದ ತಿರುಗಾಟವು

ಆಜಟಕಾಬಂಡಿಯಲ್ಲಿ ಹತ್ತಿ ಇಳಿದವರೆಷ್ಟೋ
ತಂದೆ-ತಾಯಿ ಗಂಡ-ಹೆಂಡತಿ ಮಕ್ಕಳು ಬಂಧುಗಳೆಂಬ
ನೂರಾರು ನಂಟು ಒಂದೇ ಕ್ಷಣಗಳಲ್ಲಿ ಬಿಚ್ಚಿಬಿಡುತ್ತದೆ
ಆ ಸಾವೆಂಬ ಒಂದು ಗಂಟು


ಪ್ರೇಮ

ಪ್ರೇಮವೆಂಬುದು ಕೇವಲ ಎರಡು
ಹೃದಯಗಳಲ್ಲಿ ಚಿಗುರಿದ ಪ್ರೀತಿಯಲ್ಲ
ಮಗು ಜನನವಾದಾಗ ತಾಯ್ತನದ
ಭಾವ ಹೆಣ್ಣಲ್ಲಿ ಮೂಡುವುದು ಪ್ರೇಮ

ಆಕಾಶದಲ್ಲಿ ಪಟಪಟನೆ ರೆಕ್ಕೆ
ಬಡಿಯುತ್ತಾ ಹಾರುವ ಹಕ್ಕಿಗಳನ್ನು
ಕಂಡು ಮನವು ಕುಣಿದಾಡುವುದು ಪ್ರೇಮ
ಅರಳುವ ಹೂಗಳು ಹೊರಸೂಸುವ
ಪರಿಮಳಕ್ಕೆ ನಾಸಿಕವು ಖುಷಿಪಡುವುದು ಪ್ರೇಮ

ಮೊದಲ ಮಳೆಹನಿಗಳು ಭೂ
ಹೃದಯವನ್ನು ಸ್ಪರ್ಶಿಸಿದಾಗ
ಹೊರಹೊಮ್ಮುವ ಕಂಪು ಅದು ಪ್ರೇಮ
ಭಾಸ್ಕರ ಉದಯಿಸುವ ಕಾಲದಲ್ಲಿ
ಹಕ್ಕಿಗಳ ಕಲರವಕ್ಕೆ ಮಾತು ಮೌನವಾಗುವುದು ಪ್ರೇಮ

ಬೀಜ ಚಿಗುರೊಡೆದಾಗ ಮಣ್ಣ
ಜೊತೆ ಆಗುವ ಘರ್ಷಣೆಯದು ಪ್ರೇಮ
ಎಲ್ಲೋ ಹುಟ್ಟಿ ಹರಿದಾಡಿ ಕೊನೆಗೆ ಸಾಗರಕ್ಕೆ
ಮುತ್ತಿಡುವ ನದಿಗಳಲ್ಲಿಹುದು ಪ್ರೇಮ

ಪ್ರೇಮಕ್ಕೆ ನೂರಾರು ಅರ್ಥಗಳು
ಪ್ರತಿಯೊಂದು ಒಡಲಲ್ಲಿ ಅಡಗಿದೆ ಪ್ರೇಮ
ಅನುಭವಿಸುವುದಕ್ಕೆ ಕಲ್ಮಶವಿಲ್ಲದ ಮನವಿರಬೇಕು
ಹೃದಯದ ಕಣ್ಣುಗಳು ತೆರೆದಿರಬೇಕು


ಡಾ.ಸುಶಾಂತ್ ವಿ.ರೈ
ಎಕ್ಸ್‌ಪರ್ಟ್ ಪಿಯು ಕಾಲೇಜು
ವಳಚ್ಚಿಲ್, ಮಂಗಳೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.