ಮುಕ್ತಿ ಕಾಣುವ ಹಂತಕ್ಕೆ ತಲುಪಿದ ೩೪ ನೆಕ್ಕಿಲಾಡಿಯ ತ್ಯಾಜ್ಯ ಸಮಸ್ಯೆ| `ಸುದ್ದಿ ನ್ಯೂಸ್’ ಗ್ರೌಂಡ್ ರಿಪೋರ್ಟ್‌ನ ಫಲಶ್ರುತಿ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿದ್ದ ತ್ಯಾಜ್ಯ ಸಮಸ್ಯೆ ಕೊನೆಗೂ ಮುಕ್ತಿ ಕಾಣುವ ಹಂತಕ್ಕೆ ತಲುಪಿದೆ. `ಸುದ್ದಿ ನ್ಯೂಸ್‌ನ ತಂಡ’ ಇಡೀ ಗ್ರಾಮ ವ್ಯಾಪ್ತಿಯಲ್ಲಿ ಸಂಚರಿಸಿ ಇಲ್ಲಿನ ಸಮಸ್ಯೆಗಳ ಬಗ್ಗೆ ಗ್ರೌಂಡ್ ರಿಪೋರ್ಟ್ ಮಾಡಿ ಬಿತ್ತರಿಸಿದ ಬೆನ್ನಲ್ಲೇ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹಾಗೂ ೩೪ ನೆಕ್ಕಿಲಾಡಿಯ ಆಡಳಿತಾಧಿಕಾರಿ ನವೀನ್ ಭಂಡಾರಿಯವರು ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪೂರಕವಾಗಿ ಸ್ಪಂದಿಸಿದ್ದು, ಗ್ರಾ.ಪಂ. ವ್ಯಾಪ್ತಿಯಲ್ಲಿ ಅಲ್ಲಲ್ಲಿ ರಾಶಿ ಬಿದ್ದು ಪರಿಸರ ದುರ್ನಾತಕ್ಕೆ ಕಾರಣವಾಗಿದ್ದ ತ್ಯಾಜ್ಯಗಳನ್ನು ಶಾಂತಿನಗರದಲ್ಲಿರುವ ಗ್ರಾ.ಪಂ.ನ ಘನತ್ಯಾಜ್ಯ ಘಟಕಕ್ಕೆ ಶಿಫ್ಟ್ ಮಾಡಿಸಿದ್ದಾರೆ.

೩೪ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಹಿಂದೆ ತ್ಯಾಜ್ಯ ಸಂಗ್ರಹ ಸಮರ್ಪಕವಾಗಿರಲಿಲ್ಲ. ಗ್ರಾ.ಪಂ.ನಿಂದ ಕೆಲವು ಮೀಟರ್‌ಗಳ ಅಂತರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸಂತೆ ಮಾರುಕಟ್ಟೆಯ ಒಂದು ಬದಿಯಲ್ಲಿ ದೊಡ್ಡದೊಂದು ಹೊಂಡ ತೋಡಿ ಅಲ್ಲಿ ಶೇಖರಣೆಯಾಗುವ ತ್ಯಾಜ್ಯವನ್ನು ಘನತ್ಯಾಜ್ಯ ಘಟಕದಲ್ಲಿರುವ ಗುಂಡಿಗೆ ಸುರಿಯುವ ಯೋಜನೆ ರೂಪಿಸಿ, ಸಂತೆ ಮಾರುಕಟ್ಟೆಯಲ್ಲಿ ಗುಂಡಿಯನ್ನು ತೋಡಿತ್ತು. ಆದರೆ ಅದರಲ್ಲಿ ತ್ಯಾಜ್ಯಗಳು ತುಂಬಿ ಪರಿಸರವೆಲ್ಲಾ ದುರ್ನಾತ ಬೀರಿ, ಸಾಂಕ್ರಾಮಿಕ ರೋಗಗಳ ಭೀತಿ ಸೃಷ್ಟಿಯಾದರೂ ಅದನ್ನು ಅಲ್ಲಿಂದ ಶಿಫ್ಟ್ ಮಾಡುವ ಕಾರ್ಯ ಆಗಿರಲಿಲ್ಲ. ಇನ್ನೊಂದೆಡೆ ಗ್ರಾ.ಪಂ. ವ್ಯಾಪ್ತಿಯ ಪುತ್ತೂರು- ಉಪ್ಪಿನಂಗಡಿ ರಸ್ತೆ ಬದಿ, ರಾಷ್ಟ್ರೀಯ ಹೆದ್ದಾರಿ ಬದಿ ಅಲ್ಲಲ್ಲಿ ತ್ಯಾಜ್ಯಗಳ ರಾಶಿಯೇ ಕಂಡು ಬರುತ್ತಿತ್ತು. ಶಾಂತಿನಗರದಲ್ಲಿರುವ ಘನತ್ಯಾಜ್ಯ ಘಟಕದಲ್ಲೂ ಕಸವನ್ನು ಗುಂಡಿಯೊಳಗೆ ಸುರಿಯದೇ ಗುಡ್ಡದ್ದಲ್ಲೆಲ್ಲಾ ಸುರಿದುಕೊಂಡಿತ್ತು. ಈ ಬಗ್ಗೆ `ಸುದ್ದಿ ನ್ಯೂಸ್’ ತಂಡ ಗ್ರಾ.ಪಂ. ವ್ಯಾಪ್ತಿ ಸಂಚರಿಸಿ ಸಮಗ್ರ ವರದಿ ಬಿತ್ತರಿಸಿತು. ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿಲ್ಲದ ಕಾರಣ ಗ್ರಾಮಸ್ಥರಿಗಾಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಿತ್ತು.

ವರದಿ ಬಿತ್ತರಗೊಂಡ ಬೆನ್ನಲ್ಲೇ ಈ ಬಗ್ಗೆ ವಿಶೇಷ ಕಾಳಜಿ ವಹಿಸಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹಾಗೂ ೩೪ ನೆಕ್ಕಿಲಾಡಿಯ ಆಡಳಿತಾಧಿಕಾರಿ ನವೀನ್ ಭಂಡಾರಿಯವರು, ಈ ಸಮಸ್ಯೆ ನಿವಾರಣೆಗೆ ಮುಂದಾದರು. ಮೊದಲ ಹಂತವಾಗಿ ಇದೀಗ ಕಳೆದ ಮೂರು ದಿನಗಳಿಂದ ಜೆಸಿಬಿ ಹಾಗೂ ಟಿಪ್ಪರ್‌ಗಳನ್ನು ಬಳಸಿಕೊಂಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಅಲ್ಲಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ಸಂಗ್ರಹಿಸಿ ಘನತ್ಯಾಜ್ಯ ಘಟಕಕ್ಕೆ ಸುರಿದಿದ್ದು, ಸಂತೆ ಮಾರುಕಟ್ಟೆಯ ಬಳಿ ಇದ್ದ ತ್ಯಾಜ್ಯ ಹಾಕುವ ಗುಂಡಿಯನ್ನು ಮುಚ್ಚಿಸಿದ್ದಾರೆ. ಅಲ್ಲದೇ, ಘನ ತ್ಯಾಜ್ಯ ಘಟಕದಲ್ಲೂ ಎಲ್ಲೆಂದರಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ಸೂಕ್ತ ವಿಲೇವಾರಿ ಮಾಡಿಸಿದ್ದಾರೆ.

ಈ ಬಗ್ಗೆ `ಸುದ್ದಿ’ಯೊಂದಿಗೆ ಮಾತನಾಡಿದ ಅವರು, ೩೪ ನೆಕ್ಕಿಲಾಡಿಯಲ್ಲಿ ತ್ಯಾಜ್ಯದ ಅಸಮರ್ಪಕ ನಿರ್ವಹಣೆಯಿಂದ ಜನರಿಗಾಗುವ ಸಮಸ್ಯೆಗಳ ಬಗ್ಗೆ `ಸುದ್ದಿ ನ್ಯೂಸ್’ ವರದಿ ಮಾಡಿತ್ತು. ಇದರ ನಿವಾರಣೆಗೆ ನಾನು ತಕ್ಷಣ ಕಾರ್ಯಪ್ರವೃತನಾಗಿದ್ದು, ಗ್ರಾ.ಪಂ. ವ್ಯಾಪ್ತಿಯಲ್ಲಿ ಅಲ್ಲಲ್ಲಿ ಇದ್ದ ತ್ಯಾಜ್ಯವನ್ನೆಲ್ಲಾ ವಿಲೇವಾರಿ ಮಾಡಲಾಗಿದೆ. ಈಗಾಗಲೇ ಗ್ರಾ.ಪಂ.ನ ಘನ ತ್ಯಾಜ್ಯ ಘಟಕದಲ್ಲಿ ತ್ಯಾಜ್ಯ ವಿಂಗಡನೆಗೆ ಕಟ್ಟಡ ನಿರ್ಮಾಣವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ತ್ಯಾಜ್ಯ ಸಂಗ್ರಹಣೆಗೆ ವಾಹನದ ವ್ಯವಸ್ಥೆಯೂ ಆಗಲಿದೆ. ಬಳಿಕ ಸಮರ್ಪಕವಾಗಿ ನೆಕ್ಕಿಲಾಡಿ ಗ್ರಾ.ಪಂ.ನ ತ್ಯಾಜ್ಯ ಸಂಗ್ರಹಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಗುವುದು. ಅಲ್ಲದೇ, ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆಯದಂತೆ ಅಲ್ಲಲ್ಲಿ ನಾಮಫಲಕ ಅಳವಡಿಸಲಾಗುವುದು ಹಾಗೂ ಸೂಕ್ತ ತಂತ್ರಜ್ಞಾನದ ಮೂಲಕ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವವರನ್ನು ಪತ್ತೆ ಹಚ್ಚಿ ಹಚ್ಚಿ ಅವರಿಗೆ ಕಾನೂನಿನಡಿಯಲ್ಲಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರ ನೇತೃತ್ವದಲ್ಲಿ ೩೪ ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಜಯಪ್ರಕಾಶ್, ಕಾರ್ಯದರ್ಶಿ ಕುಮಾರಯ್ಯ, ಉಪ್ಪಿನಂಗಡಿ ಗ್ರಾ.ಪಂ. ಸಿಬ್ಬಂದಿ ಇಸಾಕ್, ಇಕ್ಬಾಲ್ ಅವರು ಕೆಲಸದ ಉಸ್ತುವಾರಿ ನೋಡಿಕೊಂಡರು.

ಹಲವು ವರ್ಷಗಳಿಂದ ನಾಗರಿಕರಿಗೆ ಸಮಸ್ಯೆಯಾಗಿದ್ದ ಇಲ್ಲಿನ ತ್ಯಾಜ್ಯ ಸಮಸ್ಯೆಯು ನಿವಾರಣೆಯಾಗುವ ಹಂತ ತಲುಪಿದ್ದು, ಸಂತಸದಾಯಕ. ಇಲ್ಲಿನ ತ್ಯಾಜ್ಯ ಸಮಸ್ಯೆಯ ಬಗ್ಗೆ ಸಮಗ್ರ ವರದಿ ಮಾಡಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಮಾಡಿದ `ಸುದ್ದಿ ನ್ಯೂಸ್’ ತಂಡಕ್ಕೆ ಮೊದಲನೆಯದಾಗಿ ಅಭಿನಂದನೆ ಹೇಳಬೇಕು. ಈ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿ, ಅದು ಪರಿಹಾರ ಕಾಣುವಂತೆ ಮಾಡಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರ ಕಾರ್ಯವೂ ಶ್ಲಾಘನೆಗೆ ಪಾತ್ರವಾಗುವಂತದ್ದು. ತ್ಯಾಜ್ಯ ಸಮಸ್ಯೆಯ ಬಗ್ಗೆ ನಾವು ಕೂಡಾ ಹಲವು ಬಾರಿ ಧ್ವನಿಯೆತ್ತಿದ್ದೇವೆ. ಸಮರ್ಪಕ ತ್ಯಾಜ್ಯ ವಿಲೇವಾರಿ ಎನ್ನುವುದು ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ನಿರಂತರವಾಗಿ ನಡೆಯಬೇಕು. ಇನ್ನಾದರೂ ನೆಕ್ಕಿಲಾಡಿ ಗ್ರಾಮಸ್ಥರಿಗೆ ತ್ಯಾಜ್ಯ ಸಮಸ್ಯೆಯಿಂದ ಶಾಶ್ವತ ಮುಕ್ತಿ ಸಿಗಬೇಕು.
– ರೂಪೇಶ್ ರೈ ಅಲಿಮಾರ್
ದ.ಕ. ಜಿಲ್ಲಾ ಸಂಚಾಲಕರು, ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ)

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.