ಬಾಲ ಗಣಪ

Puttur_Advt_NewsUnder_1
Puttur_Advt_NewsUnder_1


ಮಕ್ಕಳ ಬಾಲ್ಯವೆಂದರೇನೇ ಹಾಗೇ…ಬಾಲ್ಯದಾಟ ಅತೀ ಮಧುರ ರಂಜನೀಯ. ವಿನಾಯಕ ಗಜಮುಖ ಗಣಪತಿಯ ಬಾಲ್ಯದ ಕುರಿತು ಅನೇಕ ಕಥೆಗಳಿವೆ.
“ವಿಘ್ನ ನಿವಾರಕ ವಿನಾಯಕನಿಗೆ ಲೋಕದಲ್ಲಿ ಮೊದಲ ಪೂಜೆಯು ಸಲ್ಲಲಿ..”ಎಂದು ಶಿವ ಮಹಾದೇವನು ಮಗನ ಮೇಲಿನ ಮಮತೆಯಿಂದ ಒಂದು ವರ ನೀಡಿದನಂತೆ.ಬಾಲಗಣಪನಿಗೆ ಜಂಭ ಬಂದೇ ಬಿಟ್ಟಿತು.”ಇನ್ನು ಮುಂದೆ ನನಗೇ ಅಗ್ರ ಪೂಜೆ ಸಲ್ಲಲಿದೆ…”ಎಂದು ತಾಯಿ ಪಾರ್ವತಿ ಸಹೋದರ ಸುಬ್ರಹ್ಮಣ್ಯನಲ್ಲಿ ಆಗಾಗ ಹೇಳ ತೊಡಗಿದ.

“ನಾನೇ”ಎಂಬ ಅಹಂನಿಂದ ಬಾಲ ಗಣಪ ಲೋಕ ಸಂಚಾರ ಕೈಗೊಂಡನಂತೆ.ಹೀಗೇ ಬರುತ್ತಿರುವಾಗ ಒಂದುಕಡೆ ಜಾತ್ರೆ ನಡೆಯುತ್ತಿತ್ತು..ಸಂತೆ ಕಾಣತೊಡಗಿತು.ಅಲ್ಲಿದ್ದ ಗಂಧದ ಶಿಲ್ಪಾಕೃತಿಗಳನ್ನು ನೋಡಿದ ಗಣಪನಿಗೆ ಆಶ್ಚರ್ಯವಾಯಿತು.ಶಿವ-ಪಾರ್ವತಿಯರ ಶಿಲ್ಪದ ಮಧ್ಯೆ ಅವನದೇ ಶಿಲ್ಪವೂ ಇತ್ತಂತೆ.
ಆ ಕಡೆ ಈ ಕಡೆ ನೋಡಿದ ಗಣಪ ಶಿವನ ಶಿಲ್ಪವನ್ನು ಕೈಗೆತ್ತಿಕೊಂಡು “ಇದರ ಮೌಲ್ಯವೇನು…?”ಎಂದು ಅಂಗಡಿಯವನಲ್ಲಿ ಕೇಳಿದನಂತೆ.ಆಗ ಅಂಗಡಿಯವನು “ಐದು ವರಹಗಳು….”ಎಂದನಂತೆ.ನಂತರ ಪಾರ್ವತಿಯ ಶಿಲ್ಪವನ್ನು ಎತ್ತಿಕೊಂಡು ಇದರ ಮೌಲ್ಯವೇನು…”ಎಂದು ಕೇಳಿದಾಗ… “ಇದರ ಮೌಲ್ಯ ಒಂದು ವರಹ ಹೆಚ್ಚು..ಅಂದರೆ ಆರು ವರಹಗಳು…”ಎಂದನಂತೆ ಅಂಗಡಿಯವನು.

ಹೀಗೆ ವಿಚಾರಿಸುತ್ತಾ ಹೋದ ಗಣಪ “ನನ್ನ ಶಿಲ್ಪಕ್ಕೂ ಒಂದು ವರಹ ಹೆಚ್ಚಿರಬಹುದು…ಅಂದರೆ ಏಳು ವರಹಗಳು…ಒಟ್ಟು 5+6+7 ….18 ವರಹಗಳಿಗೆ ಈ ಮೂರೂ ಶಿಲ್ಪಗಳನ್ನು ಪಡೆದು ಕೊಳ್ಳಬಹುದಲ್ಲ…”ಎಂದು ಮನದಲ್ಲೇ ಲೆಕ್ಕ ಹಾಕಿದ ಗಣಪ ಜಂಭದಿಂದ “ಈ ಮೂರೂ ಶಿಲ್ಪಗಳಿಗಾಗುವಷ್ಟು ಮೌಲ್ಯ ಕೊಡುತ್ತೇನೆ….ಕೊಡ್ತಿರಾ…?” ಎಂದುಕೇಳಿದಾಗ ಅಂಗಡಿಯಾತ …”ನೋಡು ಮಗೂ…ಶಿವ-ಪಾರ್ವತಿಯರ ಶಿಲ್ಪ ಕೊಂಡು ಕೊಂಡರೆ ನಿನಗೆ ಮಧ್ಯೆಯಿರುವ ಶಿಲ್ಪವನ್ನು ಉಚಿತವಾಗಿ ನೀಡುವೆ….”ಎಂದು ನಗುತ್ತಾ ಹೇಳಿದ. ಅಂಗಡಿಯಾತನ ಮಾತು ಕೇಳಿದ ಗಣಪನ ಜಂಭ ಕರಗಿ ನೀರಾಯಿತು. ಗಣಪ ಏನೋ ಆಲೋಚನೆ ಮಾಡುತ್ತಾ ನಿಂತು ಬಿಟ್ಟ. “ತಂದೆ-ತಾಯಿಗಿಂತ ಮಿಗಿಲು ಯಾವುದೂ ಇಲ್ಲ.ಬೆಲೆ ಕಟ್ಟಲಾಗದ ಅಮೂಲ್ಯ ರತ್ನರವರು…ನಾನು ತಪ್ಪು ಮಾಡಿರುವೆ.ಅಹಂ ಸರಿಯಲ್ಲ…!!!”ಎಂಬ ಸಂದೇಶ ಸಾರಿದ ಮಹಾಗಣಪತಿ ಎಲ್ಲರಿಗೂ ಇಷ್ಟವಾದ ದೇವ.

@ ನಾರಾಯಣ ರೈ ಕುಕ್ಕುವಳ್ಳಿ
ಚಿತ್ರ: ಸೂರ್ಯ ಆಚಾರ್ ವಿಟ್ಲ, ಖ್ಯಾತ ಚುಕ್ಕಿಚಿತ್ರ ಕಲಾವಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.