ನೆಲ್ಯಾಡಿ: ರಸ್ತೆ ಅಗೆದುಹಾಕಿರುವುದರಿಂದ ಸಂಚಾರಕ್ಕೆ ತೊಂದರೆ| ಗ್ರಾಮಸ್ಥರ ಪ್ರತಿಭಟನೆ -ಕಾಂಕ್ರಿಟೀಕರಣಕ್ಕೆ ಆಗ್ರಹ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ನೆಲ್ಯಾಡಿ-ಮಾದೇರಿ ರಸ್ತೆಯಲ್ಲಿ ನೆಲ್ಯಾಡಿ ಜನತಾ ಕಾಲೋನಿ ಪಕ್ಕದಲ್ಲಿ ಮುಂದೆ ಕಾಂಕ್ರಿಟೀಕರಣಕ್ಕೆಂದು ಮೂರು ವಾರದ ಹಿಂದೆ ರಸ್ತೆ ಅಗೆದು ಹಾಕಿದ್ದು ಇದರ ಕಾಂಕ್ರಿಟೀಕರಣ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಆ.23ರಂದು ನೆಲ್ಯಾಡಿಯಲ್ಲಿ ನಡೆದಿದೆ.
ತೀರಾ ಹದಗೆಟ್ಟಿದ್ದ ನೆಲ್ಯಾಡಿ-ಮಾದೇರಿ ರಸ್ತೆಯಲ್ಲಿ ನೆಲ್ಯಾಡಿ ಸೈಂಟ್ ಜಾರ್ಜ್ ವಿದ್ಯಾಸಂಸ್ಥೆಯ ಪಕ್ಕದಿಂದ ಮುಂದೆ 20 ಲಕ್ಷ ರೂ., ಅನುದಾನದಲ್ಲಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಇತ್ತೀಚೆಗೆ ಸುಳ್ಯ ಶಾಸಕ ಎಸ್.ಅಂಗಾರರವರು ಗುದ್ದಲಿಪೂಜೆ ನೆರವೇರಿಸಿದ್ದರು. ಮೂರು ವಾರದ ಹಿಂದೆ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯೂ ಆರಂಭಗೊಂಡಿದ್ದು ಇದಕ್ಕಾಗಿ ರಸ್ತೆ ಅಗೆಯಲಾಗಿತ್ತು. ಬಳಿಕ ನೆಲ್ಯಾಡಿ ಸೈಂಟ್ ಜಾರ್ಜ್ ವಿದ್ಯಾಸಂಸ್ಥೆಯ ಪಕ್ಕದಿಂದ ಕಾಮಗಾರಿ ಆರಂಭಿಸಿದ್ದರೂ ಇಲ್ಲಿಂದ 236 ಮೀ. ಉದ್ದಕ್ಕೆ ರಸ್ತೆ ಕಾಂಕ್ರಿಟೀಕರಣಗೊಳಿಸಿ ಬಳಿಕ ಅಗೆದುಹಾಕಿದ್ದರೂ ಏರುತಗ್ಗು ಇದ್ದ ಅಂದಾಜು 173 ಮೀ., ಜಾಗವನ್ನು ಬಿಟ್ಟು ಅದರಿಂದ ಮುಂದೆ 136 ಮೀ.ನಷ್ಟು ಉದ್ದಕ್ಕೆ ರಸ್ತೆ ಕಾಂಕ್ರಿಟೀಕರಣಗೊಳಿಸಲಾಗಿದೆ.

ಗ್ರಾಮಸ್ಥರ ಆಕ್ಷೇಪ:
ಕಾಂಕ್ರಿಟೀಕರಣಕ್ಕೆಂದು ಏರುತಗ್ಗು ಇದ್ದ ಜಾಗವನ್ನು ಅಗೆದು ಹಾಕಿರುವುದರಿಂದ ಸದ್ರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. ಇಲ್ಲಿ ಈ ಹಿಂದೆ ಇದ್ದ ಡಾಮರು ಅಗೆದುಹಾಕಿರುವುದರಿಂದ ಈಗ ವಾಹನ ಓಡಾಟ ನಡೆಸಿದಲ್ಲಿ ರಸ್ತೆ ಸಂಪೂರ್ಣ ಕೆಟ್ಟುಹೋಗಿ ಸಂಚಾರಕ್ಕೆ ಅಡಚಣೆಯಾಗಲಿದೆ. ಆದ್ದರಿಂದ ಕಾಂಕ್ರಿಟೀಕರಣ ಕಾಮಗಾರಿಗೆಂದು ಅಗೆದುಹಾಕಿರುವ 173ಮೀ.ನಷ್ಟು ಉದ್ದಕ್ಕೆ ಕೂಡಲೇ ಕಾಂಕ್ರಿಟೀಕರಣ ಕಾಮಗಾರಿ ಆರಂಭಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಬಿಟ್ಟಿರುವ ಜಾಗದ ಕಾಂಕ್ರಿಟೀಕರಣ ಕಾಮಗಾರಿ ಆಗದೇ ಈಗಾಗಲೇ ಕಾಂಕ್ರಿಟೀಕರಣಗೊಂಡಿರುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದೂ ಗ್ರಾಮಸ್ಥರು ಈ ವೇಳೆ ಒತ್ತಾಯಿಸಿದರು.

ಕೂಡಲೇ ಕಾಮಗಾರಿ ನಡೆಸಬೇಕು:
ಈ ವೇಳೆ ಮಾತನಾಡಿದ ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷರಾಗಿರುವ ಜಯಾನಂದ ಬಂಟ್ರಿಯಾಲ್‌ರವರು, ತೀರಾ ಹದಗೆಟ್ಟಿದ್ದ ನೆಲ್ಯಾಡಿ-ಮಾದೇರಿ ರಸ್ತೆ ಕಾಂಕ್ರಿಟೀಕರಣಕ್ಕೆ 20 ಲಕ್ಷ ರೂ., ಅನುದಾನ ಮಂಜೂರುಗೊಳಿಸಿರುವುದಕ್ಕೆ ಶಾಸಕರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ಸದ್ರಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಆರಂಭದಲ್ಲಿ ನೆಲ್ಯಾಡಿ ಸೈಂಟ್ ಜಾರ್ಜ್ ವಿದ್ಯಾಸಂಸ್ಥೆ ಪಕ್ಕದಿಂದ ಕಾಂಕ್ರಿಟೀಕರಣಕ್ಕೆ ಸುಮಾರು 350 ಮೀ.ನಷ್ಟು ಉದಕ್ಕೆ ರಸ್ತೆ ಅಗೆದು ಹಾಕಲಾಗಿದ್ದರೂ ಬಳಿಕ ಜನತಾ ಕಾಲೋನಿ ಸಮೀಪ ಅಗೆದು ಹಾಕಿದ್ದ ಅಂದಾಜು 170ಮೀ. ನಷ್ಟು ರಸ್ತೆಯನ್ನು ಬಿಟ್ಟು ಮತ್ತೆ ಮುಂದಕ್ಕೆ 136 ಮೀ.ನಷ್ಟು ಉದ್ದಕ್ಕೆ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಮಾಡಲಾಗಿದೆ. ಮಧ್ಯದಲ್ಲಿ ಬಿಟ್ಟು ಕಾಮಗಾರಿ ಮುಂದುರಿಸುವುದನ್ನು ಇಂಜಿನಿಯರ್‌ರವರಲ್ಲಿ ಪ್ರಶ್ನಿಸಿದ್ದೇವು. ಇಲ್ಲಿ ರಸ್ತೆ ಏರಿಸಿ ಕಾಮಗಾರಿ ನಡೆಸಬೇಕಾಗಿರುವುದರಿಂದ ಬೇರೆ ಅನುದಾನ ಬಳಸಿ ಕಾಮಗಾರಿ ನಡೆಸುವುದಾಗಿ ಇಂಜಿನಿಯರ್ ಭರವಸೆ ನೀಡಿದ್ದರು. ಆ ಬಳಿಕ ನಾವು ಶಾಸಕರ ಮನೆಗೆ ಹೋಗಿ ಇಲ್ಲಿನ ಸಮಸ್ಯೆ ಬಗ್ಗೆ ಅವರ ಗಮನಕ್ಕೂ ತಂದಿದ್ದೇವೆ. ಆ ಕೂಡಲೇ ಅವರು ಇಂಜಿನಿಯರ್‌ರವರಿಗೆ ಫೋನ್ ಮಾಡಿ ಕಾಮಗಾರಿ ಬಾಕಿ ಆಗಬಾರದು. ಅನುದಾನ ಹೊಂದಿಸಿ ಮಂಜೂರುಗೊಳಿಸುತ್ತೇನೆ. ಈಗಾಗಲೇ ನಡೆಯುತ್ತಿರುವ ರಸ್ತೆ ಕಾಮಗಾರಿಯ ಜೊತೆಗೇ ಕಾಮಗಾರಿ ಮುಂದುವರಿಸುವಂತೆಯೂ ಸೂಚಿಸಿದ್ದರು. ಆದರೆ ಇಂಜಿನಿಯರ್‌ರವರು ಇಲ್ಲಿಯ ತನಕವೂ ಅಂದಾಜುಪಟ್ಟಿ ಸಲ್ಲಿಸಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಈ ಮಧ್ಯೆ ಕಾಂಕ್ರಿಟೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಬಂದ್ ಮಾಡಿರುವ ಸದ್ರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅನುವು ಮಾಡಿಕೊಡಲು ಸಿದ್ಧತೆ ಮಾಡಲಾಗಿದೆ. ಈಗಾಗಲೇ ಅಗೆದುಹಾಕಿರುವ ಜಾಗವೇ ಈ ಹಿಂದೆ ತೀರಾ ಹದಗೆಟ್ಟಿತ್ತು. ಈಗ ಅಗೆದು ಹಾಕಿರುವುದರಿಂದ ನಡೆದುಕೊಂಡು ಹೋಗಲು ಸಾಧ್ಯವಾಗದ ರೀತಿಯಲ್ಲಿ ಇದೆ. ಇಂತಹ ಪರಿಸ್ಥಿತಿಯಲ್ಲಿ ವಾಹನ ಸಂಚಾರವೂ ಆರಂಭಗೊಂಡಲ್ಲಿ ಮತ್ತಷ್ಟೂ ಸಮಸ್ಯೆಯಾಗಲಿದೆ. ಆದ್ದರಿಂದ ಇಲ್ಲಿ ಕೂಡಲೇ ಕಾಮಗಾರಿ ಆರಂಭಿಸಬೇಕು. ಕಾಮಗಾರಿ ಮಾಡದೇ ವಾಹನ ಸಂಚಾರಕ್ಕೆ ಅವಕಾಶವೂ ನೀಡುವುದಿಲ್ಲ ಎಂದು ಹೇಳಿದರು.

ಶಾಸಕರ ಗಮನಕ್ಕೆ:
ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರು ಮಾತನಾಡಿ, ಜಿ.ಪಂ.ಅನುಮೋದನೆ ತೆಗೆದುಕೊಂಡು ಮಳೆಹಾನಿ ಯೋಜನೆಯಡಿ ಸದ್ರಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ನಡೆದಿದೆ. ಕಾಮಗಾರಿ ಆರಂಭಗೊಂಡ ಬಳಿಕ ಕೆಲವೊಂದು ಬದಲಾವಣೆ ಮಾಡಿರುವುದರಿಂದ ಈಗ ಮಧ್ಯದಲ್ಲಿ ಕಾಮಗಾರಿ ಬಾಕಿ ಆಗಿದೆ. ಬಾಕಿ ಆಗಿರುವ ಜಾಗದಲ್ಲಿಯೇ ರಸ್ತೆ ತೀರಾ ಹದಗೆಟ್ಟಿತ್ತು. ಈಗ ಇಲ್ಲಿ ಇದ್ದ ಡಾಮರು ಸಹ ಅಗೆದು ಹಾಕಿರುವುದರಿಂದ ಮತ್ತಷ್ಟೂ ಸಮಸ್ಯೆ ಉದ್ಬವವಾಗಲಿದೆ. ಇಲ್ಲಿನ ತಗ್ಗುಪ್ರದೇಶ ಏರಿಕೆ ಮಾಡಿ ಕಾಮಗಾರಿ ನಡೆಸುವುದೂ ಹೆಚ್ಚು ಅನುಕೂಲವೇ. ಏರಿಕೆ ಮಾಡಿದಲ್ಲಿ ಎರಡೂ ಬದಿಯ ಜಾಗದವರಿಗೂ ಸಮಸ್ಯೆಯಾಗಲಿದೆ. ಇದು ಜಿ.ಪಂ.ರಸ್ತೆ ಆಗಿರುವುದರಿಂದ ಕಾಮಗಾರಿಗೆ ಬಾಕಿ ಆಗಿರುವ ಜಾಗವನ್ನು ಸ್ವಲ್ಪ ಮಟ್ಟಿನಲ್ಲಿ ಏರಿಸಿ ಕಾಂಕ್ರಿಟೀಕರಣ ಕಾಮಗಾರಿ ಮಾಡುವುದು ಒಳ್ಳೆಯದು. ಈ ಬಗ್ಗೆ ಶಾಸಕರ ಗಮನಕ್ಕೆ ತಂದು ಆದಷ್ಟೂ ಬೇಗ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸುವುದಾಗಿಯೂ ಹೇಳಿದರು.
ಉದ್ಯಮಿ ಕೆ.ಪಿ.ತೋಮಸ್, ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯ ಅಬ್ರಹಾಂ ಕೆ.ಪಿ., ಗ್ರಾಮಸ್ಥರಾದ ಬಾಲಕೃಷ್ಣ ಶೆಟ್ಟಿ ಪರಾರಿ, ವೆಂಕಟ್ರಮಣ ಆರ್., ಜಯರಾಮ ಶೆಟ್ಟಿ ಗೌರಿಜಾಲು, ರತ್ನಾಕರ ಬಂಟ್ರಿಯಾಲ್ ಕೆಳಗಿನಪರಾರಿ, ವಿಠಲ ಶೆಟ್ಟಿ ನಡುಪರಾರಿ, ಆನಂದ ಗೌಡ ಆಮುಂಜ, ಸದಾನಂದ ಶೆಟ್ಟಿ ನಡುಪರಾರಿ, ಅಂಬ್ರೋಸ್ ಡಿ,ಸೋಜ ಕೊಲ್ಯೊಟ್ಟು, ಕೊರಗಪ್ಪ ನಾಯ್ಕ್ ಕೊಲ್ಯೊಟ್ಟು, ಸಿ| ಸರಿತಾ ಪ್ರಶಾಂತಿನಿಲಯ, ಸಿ| ತೆರೆಜಾ ಪ್ರಶಾಂತಿ ನಿಲಯ, ಯಶೋಧರ ಶೆಟ್ಟಿ ಆಮುಂಜ, ವಸಂತ ಗೌಡ ಪುಚ್ಚೇರಿ, ಶಿವರಾಮ ಗೌಡ ಪುಚ್ಚೇರಿ, ಪೊನ್ನುಸ್ ಕೊಲ್ಯೊಟ್ಟು, ಮೇರಿ ಡಿ.ಸೋಜ ಕೊಲ್ಯೊಟ್ಟು, ಸುಲೋಚನಾ ಭಟ್, ಕೆ.ಜೆ.ಜೋಸ್ ಮಾತಾ, ಪ್ರಹ್ಲಾದ್ ಶೆಟ್ಟಿ ಕೊಲ್ಯೊಟ್ಟು, ಗಣೇಶ್ ಶೆಟ್ಟಿ ಪರಾರಿ, ಹರೀಶ್ ಪರಾರಿ, ಸದಾಶಿವ ಶೆಟ್ಟಿ ಪರಾರಿ, ಮೋಹನದಾಸ್ ಬಂಟ್ರಿಯಾಲ್ ಕೆಳಗಿನಪರಾರಿ, ನವೀನ್ ಬಂಟ್ರಿಯಾಲ್ ಕೆಳಗಿನ ಪರಾರಿ, ಬಾಬು ಕುಂಬಾರ ಕರಂದಾಳ, ಭಾಸ್ಕರ ಶೆಟ್ಟಿ ಕುಂತ್ರುಜಾಲು, ಜಿ.ವರ್ಗೀಸ್ ಮಾದೇರಿ, ರಾಮಚಂದ್ರ ಆಚಾರ್ಯ, ಗೋಪಾಲ ಭಂಡಾರಿ ಕೊಲ್ಯೊಟ್ಟು, ಸದಾಶಿವ ಶೆಟ್ಟಿ ನಡುಪರಾರಿ, ಫ್ರಾನ್ಸಿಸ್ ಡಿ.ಸೋಜ ಕೊಲ್ಯೊಟ್ಟು, ಮಹಾಬಲ ಭಂಡಾರಿ ಕೊಲ್ಯೊಟ್ಟು, ಕುಂಞಿ ಮುಗೇರ, ಚೋಮ ಮುಗೇರ, ಸಂತೋಷ್ ಕೊಲ್ಯೊಟ್ಟು, ಚಾರ್ಲಿ ಡಿ.ಸೋಜ ಕೊಲ್ಯೊಟ್ಟು, ಹಿಲ್ಡಾ ಡಿ.ಸೋಜ, ವಿಮಲ ಕೊಲ್ಯೊಟ್ಟು, ಹೇಮಲತಾ ಕೊಲ್ಯೊಟ್ಟು, ರೂಪಾ ಅಚಾರ್ಯ ಕೊಲ್ಯೊಟ್ಟು ಮತ್ತಿತರರು ಉಪಸ್ಥಿತರಿದ್ದರು.

25 ಲಕ್ಷ ರೂ.,ಅನುದಾನ-ಶಾಸಕರ ಭರವಸೆ:
ರಸ್ತೆ ಕಾಮಗಾರಿ ಕುರಿತಂತೆ ನಡೆಯುತ್ತಿದ್ದ ಪ್ರತಿಭಟನೆ ಬಗ್ಗೆ ದೂರವಾಣಿ ಮೂಲಕ ಸುಳ್ಯ ಶಾಸಕ ಎಸ್.ಅಂಗಾರರವರ ಗಮನಕ್ಕೆ ತರಲಾಯಿತು. ರಸ್ತೆ ಅಗೆದು ಹಾಕಿರುವ ಜಾಗದಲ್ಲಿ ಕಾಂಕ್ರಿಟೀಕರಣ ಕಾಮಗಾರಿಗೆ 25 ಲಕ್ಷ ರೂ.,ಅನುದಾನ ಮಂಜೂರುಗೊಂಡಿದೆ. ಕಾಮಗಾರಿ ಕೂಡಲೇ ಆರಂಭಿಸಲಾಗುವುದು ಎಂದು ಶಾಸಕ ಎಸ್.ಅಂಗಾರರವರು ಭರವಸೆ ನೀಡಿದರು. ಅಲ್ಲದೇ ಕಾಮಗಾರಿ ಹಿನ್ನೆಲೆಯಲ್ಲಿ ಈಗಾಗಲೇ ಬಂದ್ ಮಾಡಿರುವ ರಸ್ತೆಯಲ್ಲಿ ಏಕಾಏಕಿ ವಾಹನ ಸಂಚಾರಕ್ಕೂ ಅವಕಾಶ ನೀಡುವುದಿಲ್ಲ ಎಂದು ಶಾಸಕರು ಭರವಸೆ ನೀಡಿದರು. ಶಾಸಕರ ಭರವಸೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಿಂತೆಗೆದುಕೊಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.