Breaking News

ನೆಟ್ಟಣ: ಕೋಳಿ ಫಾರಂಗೆ ಬೀಗ ಜಡಿದ ಆರೋಪ – ಪಿಡಿಒ, ಇಒ ವಿರುದ್ದ ತಾ.ಪಂ ಎದುರು ಧರಣಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆಹಾರ ಇಲಾಖೆ ಮತ್ತು ಪಂಚಾಯತ್‌ನಿಂದ ಅನುಮತಿ ಪಡೆದು ನಾವು ಆರಂಭಿಸಿದ ಕೋಳಿ ಮತ್ತು ಹಂದಿ ಮಾಂಸ ಮಾರಾಟ ಅಂಗಡಿಗೆ ಪಂಚಾಯತ್ ವತಿಯಿಂದ ಬೀಗ ಜಡಿದಿದ್ದಾರೆ ಎಂದು ಆರೋಪಿಸಿ ಕಡಬ ತಾಲೂಕಿನ ಬಿಳಿನಲೆ ಗ್ರಾ.ಪಂ ವ್ಯಾಪ್ತಿಯ ನೆಟ್ಟಣದ ಹರಿಣಿ ಎಂಬವರು ತಮ್ಮ ಮನೆ ಮಂದಿಯೊಂದಿಗೆ ಕಾರ್ಮಿಕ ಮುಖಂಡ ನ್ಯಾಯವಾಗಿ ಬಿ.ಎಮ್.ಭಟ್ ಅವರ ನೇತೃತ್ವದಲ್ಲಿ ಆ.೨೪ರಂದು ತಾ.ಪಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಅಮರಣಾಂತ ಉಪವಾಸ ಎಚ್ಚರಿಕೆ:
ಕಾರ್ಮಿಕ ಮುಖಂಡ ನ್ಯಾಯವಾದಿ ಬಿ.ಎಂ.ಭಟ್ ಮಾತನಾಡಿ ಪಂಚಾಯತ್‌ನ ಪರವಾನಿಗೆ ಹಾಗೂ ಆಹಾರ ಇಲಾಖೆಯ ಅನುಮತಿ ಪಡೆದುಕೊಂಡು ಹರಿಣಿ ಎಂಬವರು ಕೋಳಿ ಮತ್ತು ಮಾಂಸದ ಅಂಗಡಿಯನ್ನು ಇಲ್ಲಿನ ಬಾಡಿಗೆ ಕಟ್ಟಡದಲ್ಲಿ ಆರಂಭಿಸಿದ್ದರು. ಪರವಾನಿಗೆ ನಿಡಲು ಪಿಡಿಒ ಅವರು ರೂ. ೩ ಸಾವಿರ ರೂಪಾಯಿ ಲಂಚವನ್ನು ಪಡೆದುಕೊಂಡಿದ್ದಾರೆ. ಆ ಬಳಿಕ ಯಾವುದೇ ನೋಟಿಸು ನೀಡದೆ ಅಂಗಡಿಗೆ ಬೀಗ ಹಾಕಿದ್ದಾರೆ. ಬಳಿಕ ಈ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದಾಗ ಅವರು ಅಂಗಡಿ ಬಾಗಿಲು ತೆಗೆಸಿಕೊಡುವುದಾಗಿ ಭರವಸೆ ನೀಡಿದ್ದರು. ಆ ಬಳಿಕ ಕಾರ್ಯನಿರ್ವಹಣಾಧಿಕಾರಿಗಳು ರೂ. ೧೫ ಸಾವಿರ ಲಂಚದ ಬೇಡಿಕೆ ಇಟ್ಟಿದ್ದಾರೆ. ಮೇಲಾಧಿಕಾರಿಗಳಿಗೆ ನೀಡಲು ಕನಿಷ್ಟ ೧೦ ಸಾವಿರವಾದರೂ ನೀಡುವಂತೆ ತಿಳಿಸಿದ್ದಾರೆ. ಇದೀಗ ಮತ್ತೆ ಒಂದು ವಾರಗಳ ಗಡುವು ನೀಡಿದ್ದಾರೆ. ವಾರದ ಒಳಗಾಗಿ ನಮಗೆ ನ್ಯಾಯ ಸಿಗದೆ ಹೋದಲ್ಲಿ ಮುಂದೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಅಥವಾ ಮನೆಯ ಮುಂಬಾಗದಲ್ಲಿ ಅನ್ಯಾಯಕ್ಕೆ ಒಳಗಾದ ಕುಟುಂಬದೊಡನೆ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಬಡ ಕುಟುಂಬವನ್ನು ಬೀದಿಗೆ ತಳ್ಳುವ ಕೆಲಸ:
ಸಿಐಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಲ್. ಮಂಜುನಾಥ್ ಮಾತನಾಡಿ ಹರಿಣಿ ಅವರ ಅಂಗಡಿಗೆ ಬೀಗ ಹಾಕಿ ೬೫ ದಿನಗಳ ಕಳೆದರೂ ಈ ತನಕ ತೆರವುಗೊಳಿಸಿರುವುದಿಲ್ಲ. ಅಲ್ಲದೆ ಅಂಗಡಿ ಒಳಗಿರುವ ಸೊತ್ತುಗಳನ್ನು ಹಿಂದಿರುಗಿರಿಸಿರುವುದಿಲ್ಲ. ಅಧಿಕಾರಿಗಳು ದುರುದ್ದೇಶಪೂರ್ವಕವಾಗಿ ಈ ಬಡ ಕುಟುಂಬವನ್ನು ಬೀದಿಗೆ ತಳ್ಳುವ ಕೆಲಸ ಮಾಡಿದ್ದಾರೆ. ಇಂದು ಸಾಂಕೇತಿಕ ಧರಣಿ ನಡೆಸಲಾಗುತ್ತಿದ್ದು, ಇದಕ್ಕೆ ಸ್ಪಂಧನೆ ಸಿಗದಿದ್ದಲ್ಲಿ ಉಸ್ತುವಾರಿ ಸಚಿವರ ಮುಂದೆ ಸಿಐಟಿಯು ವತಿಯಿಂದ ಉಗ್ರ ಪ್ರತಿಭಟನೆ, ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಅಂಗಡಿ ಮಾಲಿಕರಾದ ಹರಿಣಿ, ಅವರ ಪತಿ ನಿತಿನ್ ಶೆಟ್ಟಿ, ಅತ್ತೆ ವಿಮಲ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ರೂ. ೧೮ ಸಾವಿರದ ಊರ ಕೋಳಿಗಳು ಸತ್ತೇ ಹೋಯಿತು:
ಕಟ್ಟಡದ ಮಾಲಕರು ಸೂಚಿಸಿದ್ದಂತೆ ಬಿಳಿನೆಲೆಯಲ್ಲಿ ಅವರ ಕಟ್ಟಡದಲ್ಲಿ ಆಹಾರ ಇಲಾಖೆಯ ಅನುಮತಿ ಪಡೆದು ಕೋಳಿ ಮತ್ತು ಹಂದಿ ಮಾಂಸದ ಅಂಗಡಿ ಆರಂಭಿಸಿದ್ದೇವು. ಅಂಗಡಿಯಲ್ಲಿ ಗಣಹೋಮ ಆಗುತ್ತಿದ್ದ ಸಂದರ್ಭ ಪಂಚಾಯತ್‌ನಿಂದ ಬಂದ ಮೂವರು ವ್ಯಕ್ತಿಗಳು ಅಂಗಡಿಗೆ ಲೈಸನ್ಸ್ ಮಾಡಿಲ್ಲ ಎಂದು ತಿಳಿಸಿದ್ದರು. ಅದಕ್ಕೆ ನಾವು ಲೈಸನ್ಸ್ ಮಾಡಿಸುತ್ತೇವೆ ಎಂದು ಹೇಳೀದ್ದೇವು. ಹಾಗೆ ನಾವು ವಿಚಾರಿಸಿದಾಗ ಪಂಚಾಯತ್ ಲೈಸನ್ಸ್ ಕೊಡಲು ಆಗುವುದಿಲ್ಲ ಎಂದು ತಿಳಿಸಿದ್ದರಲ್ಲದೆ ನಮ್ಮ ಅಂಗಡಿಗೆ ಬೀಗ ಜಡಿದರು. ಆದರೆ ಅಂಗಡಿಯ ಒಳಗೆ ಸುಮಾರು ೧೮ಸಾವಿರ ಮೌಲ್ಯದ ಊರ ಕೋಳಿಗಳು. ಮಾಂಸಗಳನ್ನು ತೆರವು ಮಾಡಲು ಅವಕಾಶ ಕೇಳಿದ್ದರೂ ಅವರು ನೀಡದೆ ಬೀಗ ಹಾಕಿದ್ದು, ಬಳಿಕ ಆಹಾರ ಇಲ್ಲದೆ ಎಲ್ಲಾ ಕೋಳಿಗಳು ಸತ್ತೇ ಹೋಗಿದೆ. ನಮಗೆ ನ್ಯಾಯ ಸಿಗುವ ತನಕ ನಾವು ಹೋರಾಟ ಮಾಡುತ್ತೇವೆ.
ವಿಮಲ, ಅಂಗಡಿ ಮಾಲಕಿಯ ಅತ್ತೆ

ಕಾನೂನು ಚೌಕಟ್ಟಿನಲ್ಲಿ ಕ್ರಮ:
ಯಾವುದೋ ಸ್ಥಳವನ್ನು ತೋರಿಸಿ ಸರಕಾರಿ ಸ್ಥಳದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಿದ್ದಕ್ಕೆ ಗ್ರಾ.ಪಂ ಬೀಗ ಜಡಿದಿದ್ದಾರೆ. ಏನಿದ್ದರೂ ಕಾನೂನು ಚೌಕಟ್ಟಿನಲ್ಲೇ ಕ್ರಮ ಕೈಗೊಳ್ಳಲಾಗಿದೆ – ನವೀನ್ ಭಂಡಾರಿ, ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.