ಕೊಳ್ತಿಗೆ ಗ್ರಾಮ ಪಂಚಾಯತ್ ನಲ್ಲಿ ನರೇಗ ಉದ್ಯೋಗ ಮಾಹಿತಿ ನೊಂದಣಿ ಶಿಬಿರ

Puttur_Advt_NewsUnder_1
Puttur_Advt_NewsUnder_1
  • ನರೇಗಾ ಯೋಜನೆಯನ್ನು ಬಳಸಿಕೊಳ್ಳುವುದು ಗ್ರಾಮಸ್ಥರ ಹಕ್ಕು: ರಾಧಾಕೃಷ್ಣ ಬೋರ್ಕರ್

ಪುತ್ತೂರು: ಕೇಂದ್ರ ಸರಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಗ್ರಾಮೀಣರು ತಮ್ಮ ಜಮೀನಿನಲ್ಲಿ ಕೆಲಸ ಮಾಡಿ ಸರಕಾರದ ಅನುದಾನವನ್ನು ಪಡೆದುಕೊಳ್ಳುವುದು ಪ್ರತಿ ಗ್ರಾಮದ ಪ್ರತಿ ಗ್ರಾಮಸ್ಥರ ಹಕ್ಕಾಗಿದೆ. ಆದರೆ ಕೆಲವೊಂದು ಜನರಿಗೆ ಇದರ ಮಾಹಿತಿ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ಈ ಯೋಜನೆಯು ಸಮರ್ಪಕವಾಗಿ ಬಳಸಿಕೊಳ್ಳಲು ಆಗುತ್ತಿಲ್ಲ ಅದಕ್ಕೆ ಇಂತಹ ಶಿಬಿರಗಳನ್ನು ಗ್ರಾಮಗಳಲ್ಲಿ ಆಯೋಜಿಸುವ ಮೂಲಕ ಜನರಿಗೆ ಸಮಗ್ರ ಮಾಹಿತಿಯ ಜೊತೆಗೆ ಗೊಂದಲಗಳನ್ನು ನಿವಾರಿಸುವ ಕೆಲಸವಾಗಿದೆ ಎಂದು ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು.

ಕೊಳ್ತಿಗೆ ಗ್ರಾಮ ಪಂಚಾಯತ್ ನಲ್ಲಿ ಮನರೇಗಾ ಉದ್ಯೋಗ ನೋಂದಣಿ ಶಿಬಿರ ಉದ್ಘಾಟನೆ

ಅವರು ಆ. ೨೪ ರಂದು ಕೊಳ್ತಿಗೆ ಗ್ರಾ.ಪಂ.ನಲ್ಲಿ ದ.ಕ.ಜಿ.ಪಂ. ಮಂಗಳೂರು, ತಾ.ಪಂ. ಪುತ್ತೂರು ಹಾಗೂ ಕೊಳ್ತಿಗೆ ಗ್ರಾ.ಪಂ. ಸಹಯೋಗದಲ್ಲಿ ನಡೆದ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯ ಮನರೇಗಾ ಉದ್ಯೋಗ ನೋಂದಣಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಜಿಲ್ಲೆಯಲ್ಲಿ ತಾಲೂಕಿನ ಹಿರೇಬಂಡಾಡಿ ಗ್ರಾ.ಪಂ. ಪ್ರಥಮ ಸ್ಥಾನದಲ್ಲಿದ್ದು ಒಂದು ವರ್ಷದಲ್ಲಿ ಸುಮಾರು ಎರಡು ಕೋಟಿ ಹಣ ಉಪಯೋಗಿಸಿ ಗ್ರಾಮದ ಅಭಿವೃದ್ಧಿಯನ್ನು ಮಾಡಿದ್ದಾರೆ ಇದನ್ನೇ ಮಾದರಿಯಾಗಿರಿಸಿ ಎಲ್ಲಾ ಗ್ರಾಮಗಳು ಸಾಧ್ಯವಾದಷ್ಟು ಈ ಯೋಜನೆಯ ಸದ್ವಿನಿಯೋಗ ಪಡಿಸಿಕೊಳ್ಳಬೇಕೆಂದು ಬೋರ್ಕರ್ ಕರೆ ನೀಡಿದರು.

ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ನರೇಗಾ ಯೋಜನೆಯನ್ನು ಎಲ್ಲರೂ ಬಳಸಿಕೊಳ್ಳಬೇಕು. ಏಕೆಂದರೆ ಗ್ರಾಮದಲ್ಲಿ ಹೆಚ್ಚಿನವರೂ ಕೃಷಿ ಭೂಮಿ ಇರುವುದರಿಂದ ಅವರನ್ನು ಈ ಯೋಜನೆಯ ಫಲವನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸಬೇಕು ಎಂದರು.
ತಾಪಂ ಸದಸ್ಯ ರಾಮ ಪಾಂಬಾರು ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ನರೇಗಾ ಯೋಜನೆ ಬಹಳ ಅಗತ್ಯ, ಈ ಯೋಜನೆಯ ಫಲವನ್ನು ಪಡೆದುಕೊಂಡು ಊರು ಅಭಿವೃದ್ಧಿಯತ್ತ ಮುಖಮಾಡಲಿ ಎಂದು ಹೇಳಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿ, ನರೇಗಾ ಗ್ರಾಮಸ್ಥರೇ ಪಡೆದುಕೊಳ್ಳಲಿರುವ ಯೋಜನೆ. ಹಾಗಾಗಿ ಎಲ್ಲರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಅಂತೆಯೇ ವರ್ಷಗಳ ಹಿಂದೆ ಅತೀ ಹೆಚ್ಚು ಯೋಜನೆಯ ಅನುದಾನವನ್ನು ಪಡೆದಿತ್ತು. ಅದನ್ನು ಪುನಃ ಉತ್ತೇಜಿಸಲು ಇಂದು ಈ ಶಿಬಿರವನ್ನು ಆಯೋಜಿಸಲಾಗಿದೆ ಈ ಶಿಬಿರವನ್ನು ಇತರ ಗ್ರಾ.ಪಂ.ನಲ್ಲೂ ಆಯೋಜಿಸಲಾಗುವುದು ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಕೊಳ್ತಿಗೆ ಗ್ರಾ.ಪಂ. ಆಡಳಿತಾಧಿಕಾರಿ ಹಾಗೂ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್, ಮಾಹಿತಿಯ ಕೊರತೆಯಿಂದ ಈ ಯೋಜನೆಯನ್ನು ಯಶಸ್ವಿಗೊಳಿಸಲು ಸಾಧ್ಯವಾಗಿಲ್ಲ. ಆದರೆ ಇಂತಹ ಶಿಬಿರಗಳನ್ನು ಆಯೋಜಿಸುವ ಮೂಲಕ ಜನರಿಗೆ ಮಾಹಿತಿಯನ್ನು ನೀಡಿ ಪ್ರೇರೇಪಿಸುವ ಕೆಲಸವಾಗಬೇಕೆಂದು ತಿಳಿಸಿದರು.

ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಶೈಲಜಾ ಪ್ರಕಾಶ್ ಮಾತನಾಡಿ, ಜಲಸಂರಕ್ಷಣಾ ಅಭಿಯಾನದ ಅಡಿಯಲ್ಲಿ ಈ ಬಾರಿ ಇಂಗು ಗುಂಡಿ ನಿರ್ಮಾಣ ಎಲ್ಲೆಡೆ ನಡೆದಿದೆ. ಅಂತೆಯೇ ತಾಲೂಕಿನಲ್ಲಿ ಸುಮಾರು ಐವತ್ತು ಸಾವಿರ ಇಂಗು ಗುಂಡಿ ನಿರ್ಮಿಸುವ ಗುರಿ ಇದೆ. ಈಗಾಗಲೇ ನವತ್ತೈದು ಸಾವಿರವನ್ನು ಪೂರೈಸಿದ್ದೇವೆ ಇನ್ನೂ ಐದು ಸಾವಿರ ಇಂಗು ಗುಂಡಿ ಬಾಕಿ ಇದ್ದು ಈ ತಿಂಗಳಾಂತ್ಯಕ್ಕೆ ಅದನ್ನು ಪೂರ್ಣಗೊಳಿಸಲಾಗುವುದು ಎಂದರು. ಹಾಗೂ ನರೇಗಾ ಯೋಜನೆಯಡಿ ಮಾಡಬಹುದಾದ ಕೆಲಸ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಉದ್ಯೋಗ ಚೀಟಿಗೆ ಅರ್ಜಿ ನೀಡಿದವರಿಗೆ ಸಾಂಕೇತಿಕವಾಗಿ ಉದ್ಯೋಗ ಖಾತರಿ ಯೋಜನೆಯ ಉದ್ಯೋಗ ಚೀಟಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು ಇನ್ನೂರು ಮಂದಿ ಭಾಗವಹಿಸಿದ್ದು, ಹೊಸ ಉದ್ಯೋಗ ಚೀಟಿಗೆ ಸುಮಾರು ೫೦ ಅರ್ಜಿ ಹಾಗೂ ಸುಮಾರು ೪೦ ಕಾಮಗಾರಿಗಾಗಿ ಅರ್ಜಿಗಳನ್ನು ಈ ಶಿಬಿರದಲ್ಲಿ ಪಡೆದುಕೊಳ್ಳಲಾಯಿತು.

ಕೊಳ್ತಿಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುನಿಲ್ ಸ್ವಾಗತಿಸಿದರು. ಗ್ರಾ.ಪಂ. ಕಾರ್ಯದರ್ಶಿ ಲಕ್ಷ್ಮೀ ವಂದಿಸಿದರು. ಕಡಬ ತಾಲೂಕು ಐಇಸಿ ಸಂಯೋಜಕ ಭರತ್‌ರಾಜ್ ಕೆ. ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭ ಪುತ್ತೂರು ತಾಲೂಕು ಐಇಸಿ ಸಂಯೋಜಕಿ ನಿಶ್ಮಿತಾ, ತಾಂತ್ರಿಕ ಸಹಾಯಕ ಮನೋಜ್, ಪ್ರಶಾಂತಿ,ಮೋಹಿತ್, ಶ್ವೇತಾ, ಎಂಐಸಿ ಸಂಯೋಜಕ ನಿಶೀತ್, ಗ್ರಾ.ಪಂ. ಸಿಬ್ಬಂದಿಗಳಾದ ಶಶಿಕಲಾ, ನಾಗೇಶ್, ಜಯಾ, ಸುಚಿತ್ರಾ, ಬೇಬಿ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.