Breaking News

ಪುತ್ತೂರು ನಗರಸಭೆ ಆಡಳಿತ ಕಚೇರಿಗೆ ಹೊಸ ಸಂಕೀರ್ಣ ನಿರ್ಮಾಣ ಸಿದ್ಧತೆ| ಇತಿಹಾಸದ ಪುಟ ಸೇರಿದ ಹಳೆ ಪುರಸಭೆ ಕಚೇರಿ ಕಟ್ಟಡ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುಮಾರು 65 ಸಾವಿರ ಜನಸಂಖ್ಯೆಯುಳ್ಳ, ೩೧ ವಾರ್ಡ್‌ಗಳಲ್ಲಿ ಹರಡಿಕೊಂಡಿರುವ ಪುತ್ತೂರು ನಗರಸಭೆಯ ಆಡಳಿತ ನಿರ್ವಹಣೆಯನ್ನು ಇನ್ನಷ್ಟು ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಬೃಹತ್ ಆಡಳಿತ ಕಚೇರಿ ಸಂಕೀರ್ಣವನ್ನು ಹೊಸದಾಗಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಆಗಸ್ಟ್ ೨೬ರಂದು ಶಿಲಾನ್ಯಾಸ ನೆರವೇರಲಿದೆ. ಸುಮಾರು ೪೫ ವರ್ಷಗಳ ಕಾಲಾ ನಾನಾ ರೂಪದಲ್ಲಿ ಪುತ್ತೂರು ಆಡಳಿತವನ್ನು ನಿರ್ವಹಿಸಿದ್ದ ಹಳೆಯ ಕಟ್ಟಡದ ಸ್ಥಳದಲ್ಲೇ ಹೊಸ ಸಂಕೀರ್ಣ ನಿರ್ಮಾಣವಾಗಲಿದ್ದು, ಇದಕ್ಕಾಗಿ ಹಳೆಯ ಕಟ್ಟಡವನ್ನು ಕೆಡವಲಾಗಿದೆ. ಮಿನಿ ವಿಧಾನಸೌಧದ ಪಕ್ಕದಲ್ಲೇ ಇರುವ ಹಳೆಯ ಪುರಸಭೆ ಕಚೇರಿ ಕಟ್ಟಡದ ಸ್ಥಳದಲ್ಲಿ ಸುಮಾರು ೮ರಿಂದ ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಆಡಳಿತ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ಶಿಲಾನ್ಯಾಸ ಸಮಾರಂಭ ಆ. ೨೬ರಂದು ಬೆಳಗ್ಗೆ ೧೦ ಗಂಟೆಗೆ ನಡೆಯಲಿದೆ. ರಾಜ್ಯ ಪೌರಾಡಳಿತ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಪುತ್ತೂರು ಶಾಸಕರು ಸೇರಿದಂತೆ ಗಣ್ಯಾತಿ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಪ್ರಸ್ತುತ ಪುತ್ತೂರು ನಗರಸಭೆ ಕಚೇರಿಯು ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಸಂಕೀರ್ಣವು ಹಳೆಯ ಸಂತೆಕಟ್ಟೆಯಾಗಿದ್ದು, ಶತಮಾನಗಳ ಕಾಲ ಈ ಜಾಗದಲ್ಲಿ ಸಂತೆ ನಡೆಯುತ್ತಿತ್ತು. ೨೦೦೨ರ ಅವಧಿಯಲ್ಲಿ ಪುತ್ತೂರಿಗೆ ಎಡಿಬಿ ಯೋಜನೆಯ ಹಣ ಮಂಜೂರಾದಾಗ ಇದೇ ಸಂತೆ ಕಟ್ಟೆಯ ಸ್ಥಳದಲ್ಲಿ ಅಂದಿನ ಪುರಸಭೆಯ ಹೊಸ ಆಡಳಿತ ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ವಾರದ ಸಂತೆಯನ್ನು ತಾತ್ಕಾಲಿಕವಾಗಿ ಕಿಲ್ಲೆ ಮೈದಾನಕ್ಕೆ ಸ್ಥಳಾಂತರರಿಸಲಾಗಿತ್ತು. ಹೊಸ ಕಟ್ಟಡ ನಿರ್ಮಾಣಗೊಂಡ ಬಳಿಕ ಅದೇ ಕಟ್ಟಡದ ತಳಭಾಗದಲ್ಲಿ ಸಂತೆ ಕಟ್ಟೆ ನಿರ್ಮಿಸಲಾಗಿತ್ತು. ಆದರೆ ಅದು ಕಿರಿದಾಯಿತು ಎಂಬ ಕಾರಣಕ್ಕೆ ಸಂತೆ ವ್ಯಾಪಾರಸ್ಥರು ಅಲ್ಲಿಗೆ ತೆರಳಲು ನಿರಾಕರಿಸಿದ ಕಾರಣ ಸಂತೆ ಕಿಲ್ಲೇ ಮೈದಾನದಲ್ಲೇ ಮುಂದುವರಿಯಿತು.

ಹೊಸ ಸಂಕೀರ್ಣ ನಿರ್ಮಾಣಗೊಂಡ ಬಳಿಕ ೨೦೦೮ರಲ್ಲಿ ಪುರಸಭೆಯ ಆಡಳಿತ ಕಚೇರಿಯನ್ನು ಹಳೆ ಕಚೇರಿಯಿಂದ ಇಲ್ಲಿಗೆ ಸ್ಥಳಾಂತರಿಸಲಾಯಿತು. ೧೨ ವರ್ಷಗಳ ಕಾಲ ಇಲ್ಲಿಯೇ ಆಡಳಿತ ಕಚೇರಿ ಕಾರ್ಯನಿರ್ವಹಿಸಿದೆ. ಈ ಮಧ್ಯೆ, ೨೦೧೫ರಲ್ಲಿ ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೇರಿದ ನಂತರವೂ ನಗರಸಭೆ ಆಡಳಿತ ಕಚೇರಿಯಾಗಿ ಇದು ಪರಿವರ್ತನೆಯಾಯಿತು.

೧೮ ವರ್ಷದ ೨ ಕಟ್ಟಡದಲ್ಲಿ ಒಂದು ಕಟ್ಟಡ ಉಳಿಕೆ:
ಹೊಸ ಸಂಕೀರ್ಣ ನಿರ್ಮಾಣಕ್ಕಾಗಿ ಹಳೆ ಪುರಸಭೆ ಕಚೇರಿ ಕಟ್ಟಡವನ್ನು ಈಗಾಗಲೇ ಕೆಡವಲಾಗಿದೆ. ಹಳೆಯ ಕಟ್ಟಡಕ್ಕೆ ಹೊಂದಿಕೊಂಡು ೨೦೦೨ರ ಜೂ.೨೯ರಂದು ಹತ್ತನೇ ಹಣಕಾಸು ಯೋಜನೆಯಡಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣ ಮತ್ತು ಸಭಾಭವನದದಲ್ಲಿ ಕೆಳಗಿನ ಅಂತಸ್ತು ವಾಣಿಜ್ಯ ಸಂಕೀರ್ಣ ಮತ್ತು ಮೇಲಿನ ಅಂತಸ್ತು ಸಭಾವನದ ಬದಲು ಅಲ್ಲಿ ಪುತ್ತೂರು ಸಹಾಯಕ ಕಮೀಷನರ್ ಕಚೇರಿ ಬಳಿಕ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಕಚೇರಿಗೆ ಕಟ್ಟಡ ವಹಿಸಿಕೊಡಲಾಗಿತ್ತು. ಅದನ್ನು ಸದ್ಯಕ್ಕೆ ಉಳಿಸಿಕೊಳ್ಳಲಾಗುವುದು. ಆದರೆ ಅದರ ಪಕ್ಕದಲ್ಲಿರುವ ಒಂದೇ ಇಸವಿಯಲ್ಲಿ ನಿರ್ಮಾಣಗೊಂಡ ಸಮುದಾಯ ಭವನವನನ್ನು ಕೆಡವಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.ಮತ್ತೆ ಹಳೆ ಸ್ಥಳದತ್ತ ಮುಖ..

ಇದೀಗ ಮತ್ತೆ ಪುರಸಭೆ ಕಚೇರಿ ಇದ್ದ ಹಳೆ ಸ್ಥಳದಲ್ಲೇ ಹೊಸ ಸಂಕೀರ್ಣ ನಿರ್ಮಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸುಮಾರು ರೂ. ೮ರಿಂದ ೧೦ ಕೋಟಿ ಅಂದಾಜು ವೆಚ್ಚ ನಿರೀಕ್ಷಿಸಲಾಗಿದೆ. ಈ ಪೈಕಿ ರೂ. ೧ ಕೋಟಿ ನಗರೋತ್ಥಾನ ಯೋಜನೆಯಲ್ಲಿ ಮೀಸಲಿರಿಸಲಾಗಿದೆ. ರೂ. ೧ ಕೋಟಿ ನಗರಸಭೆಯ ಬಜೆಟ್‌ನಲ್ಲಿ ಇರಿಸಲಾಗಿದೆ. ರೂ. ೨ ಕೋಟಿ ಶಾಸಕರು ವಿಶೇಷ ಅನುದಾನ ರೂಪದಲ್ಲಿ ತರಿಸಿದ್ದಾರೆ. ಉಳಿದ ಹಣದ ಹೊಂದಾಣಿಕೆ ಶಾಸಕರ ಮೂಲಕ ನಡೆಯಲಿದೆ ಎಂದು ಪೌರಾಯುಕ್ತೆ ರೂಪಾ ಶೆಟ್ಟಿ ತಿಳಿಸಿದ್ದಾರೆ.

ರೂ. ೮ ರಿಂದ ೧೦ ಕೋಟಿ ಅಗತ್ಯ
ಸುಮಾರು ರೂ. ೮ರಿಂದ ೧೦ ಕೋಟಿ ಬೇಕಾಗಬಹುದಾಗಿದೆ. ಈಗ ನಮ್ಮಲ್ಲಿ ರೂ. ೪ ಕೋಟಿ ಮಾತ್ರವೇ ಇದೆ. ಉಳಿದ ಮೊತ್ತವನ್ನು ಹೇಗೆ ಭರಿಸಬಹುದು ಎಂಬ ಬಗ್ಗೆ ಯೋಜನೆ ರೂಪಿಸುತ್ತಿದ್ದೇನೆ. ಅದು ಅಂತಿಮಗೊಂಡ ತಕ್ಷಣ ಮಾಹಿತಿ ನೀಡಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಪುರಾತನ ಕಟ್ಟಡ ಮಾಯ..
ಈಗಿನ ಮಿನಿ ವಿಧಾನಸೌಧದ ಪಕ್ಕದಲ್ಲಿದ್ದ ಹಳೆ ಪುರಸಭೆ ಕಚೇರಿ ಕಟ್ಟಡ ಸ್ವಾತಂತ್ರ್ಯ ಪೂರ್ವದಲ್ಲೇ ನಿರ್ಮಾಣವಾಗಿದ್ದೆಂದು ನಂಬಲಾಗಿದೆ. ಈ ಪ್ರದೇಶದಲ್ಲಿರುವ ಹಳೆಯ ಕಟ್ಟಡಗಳೆಲ್ಲ ಬ್ರಿಟಿಷ್ ಅವಧಿಯಲ್ಲಿ ನಿರ್ಮಾಣಗೊಂಡಿತ್ತು. ಮಿನಿ ವಿಧಾನಸೌಧದ ಜಾಗದಲ್ಲಿದ್ದ ಹಳೆಯ ಕಟ್ಟಡ, ಈಗಿನ ಕೋರ್ಟ್ ಕಟ್ಟಡಗಳು ಕೂಡ ಆ ಕಾಲದವು. ಅಂದಿನ ಸಬ್‌ಜೈಲ್ ಕಟ್ಟಡ ಸ್ವಾತಂತ್ರ್ಯಾನಂತರ ತಾಲೂಕು ಕಚೇರಿಯಾಗಿ ಪರಿವರ್ತನೆಯಾಗಿ, ಈಗ ಸರಕಾರಿ ಮಹಿಳಾ ಕಾಲೇಜಾಗಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲೇ ಪಕ್ಕದಲ್ಲಿದ್ದ ಸಬ್ ರಿಜಿಸ್ಟ್ರಾರ್ ಕಚೇರಿಯ ಹಳೆ ಕಟ್ಟಡವೂ ಅದೇ ಕಾಲದ್ದು. ಹಳೆ ಪುರಸಭೆ ಕಚೇರಿಯೂ ಭವ್ಯ ಇತಿಹಾಸ ಹೊಂದಿದೆ. ಇಲ್ಲಿ ೧೯೬೪ರಲ್ಲಿ ಪಂಚಾಯತ್ ಬೋರ್ಡ್ ಕಾರ್ಯಾರಂಭ ಮಾಡಿತ್ತು. ೧೯೭೪ರಿಂದ ೨೦೦೮ರವರೆಗೆ ಪಟ್ಟಣ ಪಂಚಾಯತ್, ಪುರಸಭೆ ಕಾರ್ಯ ನಿರ್ವಹಿಸಿತ್ತು, ೨೦೦೮ರಲ್ಲಿ ಪುರಸಭೆ ಕಚೇರಿಯು ಹೊಸ ಸಂಕೀರ್ಣಕ್ಕೆ ಸ್ಥಳಾಂತಗೊಂಡ ಬಳಿಕ ಕಟ್ಟಡ ಖಾಲಿಯಾಗಿತ್ತು. ಕಳೆದ ವರ್ಷ ಸರಕಾರಿ ಮಹಿಳಾ ಕಾಲೇಜಿನ ಕೆಲ ತರಗತಿಗಳು ಇದರಲ್ಲಿ ನಡೆದಿದ್ದವು. ಇದೀಗ ಹೊಸ ಸಂಕೀರ್ಣಕ್ಕಾಗಿ ಹಳೆ ಕಟ್ಟಡ ಕೆಡವಲಾಗಿದೆ. ಈ ಜಾಗದಲ್ಲಿ ಆ.೨೬ರಂದು ಶಿಲಾನ್ಯಾಸ ನಡೆಯಲಿದೆ. ಬಹುತೇಕ ಮುಂದಿನ ಎರಡು, ಮೂರು ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಲೋಕೋಪಯೋಗಿ ಇಲಾಖೆ ಕಟ್ಟಡ ನಿರ್ಮಿಸಿ ಹಸ್ತಾಂತರ ಮಾಡಲಿದೆ. ನಂತರ ಈಗಿನ ಕಟ್ಟಡದಿಂದ ಹೊಸ ಕಟ್ಟಡಕ್ಕೆ ನಗರಸಭೆ ಸ್ಥಳಾಂತಗೊಳ್ಳಲಿದೆ. ಆ ಬಳಿಕ ಈಗಿನ ಸಂಕೀರ್ಣವನ್ನು ಯಾವ ರೀತಿ ಬಳಸಲಾಗುತ್ತದೆ ಎಂಬುದರ ಬಗ್ಗೆ ನಿರ್ಧಾರವಾಗಿಲ್ಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.