ಕೃಷಿ ಉತ್ಪನ್ನಗಳ ಸಾಗಾಟಕ್ಕೆ ರಿಯಾಯಿತಿ ದರದಲ್ಲಿ ಮುಂದೆ ಬಂದ ಕೊಂಕಣ್ ರೈಲ್ವೇ | ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ಅಡಿಕೆ ವರ್ತಕರ, ಗಾರ್ಬಲ್‌ದಾರರ ಸಭೆ

Puttur_Advt_NewsUnder_1
Puttur_Advt_NewsUnder_1
  • ಸೆ.25ರ ಬಳಿಕ ಕಿಸಾನ್ ರೈಲು ಯೋಜನೆಯಿಂದ ಪ್ರಾಯೋಗಿಕ ಸಾಗಾಟ
  • ಕೃಷಿ ಕ್ಷೇತ್ರದ ಪ್ರಗತಿಗೆ ನ್ಯಾಯಯುತ ದರ ಒದಗಿಸಲು ಸಹಕಾರಿ – ಸಂಜೀವ ಮಠಂದೂರು
  • ಕೇವಲ 48 ಗಂಟೆಗಳಲ್ಲಿ ರಿಯಾಯಿತಿ ದರದಲ್ಲಿ ತಲುಪಿಸುವ ವ್ಯವಸ್ಥೆ – ಕೆ.ಸುಧಾಮೂರ್ತಿ
  • ಕಡಿಮೆ ವೆಚ್ಚದಲ್ಲಿ ಮಾರುಕಟ್ಟೆಗೆ ತಲುಪಿಸುವ ವ್ಯವಸ್ಥೆ – ದಿನೇಶ್ ಮೆದು

ಪುತ್ತೂರು: ದೇಶದಲ್ಲಿ ಕಿಸಾನ್ ರೈಲು ಯೋಜನೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಕೊಂಕಣ್ ರೈಲ್ವೇ ಹೊಸ ಪಾರ್ಸೆಲ್ ಯೋಜನೆಯೊಂದಿಗೆ ಅಡಿಕೆಯನ್ನು ರೀಯಾಯಿತಿ ದರದಲ್ಲಿ ಸಾಗಾಟ ಮಾಡುವ ಕುರಿತು ಪುತ್ತೂರು ಎಪಿಎಂಸಿಗೆ ನೀಡಿದ ಪ್ರಸ್ತಾವನೆಯಂತೆ ಪುತ್ತೂರು ಎಪಿಂಸಿಯಲ್ಲಿ ಆ.೨೯ರಂದು ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ನಡೆದ ವರ್ತಕರ, ಗಾರ್ಬಲ್‌ದಾರರ, ಕ್ಯಾಂಪ್ಕೋ ಸಂಸ್ಥೆ, ಟ್ರಾನ್ಸ್‌ಪೋರ್ಟ್‌ದಾರರ ಸಭೆಯಲ್ಲಿ ರೈಲ್ವೇ ಅಧಿಕಾರಿಗಳು ಸೆ.೨೫ರ ಬಳಿಕ ಮೊದಲ ಹಂತದ ಅಡಿಕೆ ಸಾಗಾಟ ಆರಂಭಗೊಳಿಸುವ ಕುರಿತು ಭರವಸೆ ನೀಡಿದ್ದಾರೆ.

ಕೃಷಿ ಕ್ಷೇತ್ರದ ಪ್ರಗತಿಗೆ ನ್ಯಾಯಯುತ ದರ ಒದಗಿಸಲು ಸಹಕಾರಿ:
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ದೇಶದ ಪ್ರಧಾನಿಯವರ ಮತ್ತು ರೈಲ್ವೇ ಸಚಿವರ ಚಿಂತನೆಯಂತೆ ಕಿಸಾನ್ ರೈಲು ಯೋಜನೆ ಆರಂಭಗೊಂಡಿದ್ದರಿಂದ ಕೃಷಿ ಕ್ಷೇತ್ರದ ಪ್ರಗತಿ ಮತ್ತು ಬೆಳೆಗೆ ನ್ಯಾಯಯುತ ದರ ಒದಗಿಸುವ ಮತ್ತು ರೈತರ ಆದಾಯ ದ್ವಿಗುಣಗೊಳಿಸಲು ಇಂತಹ ಕಿಸಾನ್ ರೈಲುಗಳು ಸಹಕಾರಿಯಾಗಲಿವೆ.

ಸೂಕ್ತ ಸಾಗಾಣಿಕೆ ಸೌಲಭ್ಯವಿದ್ದರೆ ದರಕುಸಿತ ತಡೆಯಲು ಸಾಧ್ಯ. ಇದಕ್ಕೆ ರೈಲು ಮಾರ್ಗದ ಅಗತ್ಯವಿದೆ. ಪ್ರಧಾನಮಂತ್ರಿಗಳಿಗೆ ದೇಶದ ಕೃಷಿಕರ ಪರವಾಗಿ ಅಭಿನಂದನೆ ಸಲ್ಲಿಸಿದ ಅವರು ರೈತರ ಆದಾಯ ದ್ವಿಗುಣಗೊಳಿಸಲು ರೈಲ್ವೆ ಇಲಾಖೆಯ ಪಾತ್ರ ಕೂಡ ಮಹತ್ವದ್ದಾಗಿರಲಿದೆ. ರೈತರ ಅತ್ಯಂತ ಅವಶ್ಯಕತೆಗೆ ಭಾರತ ಸರಕಾರ ಮೂರ್ತ ರೂಪ ನೀಡಿದೆ. ಕೃಷಿ ಉತ್ಪನ್ನಗಳನ್ನು ಸುಗಮವಾಗಿ ಸಾಗಾಣಿಕೆ ಮಾಡಲು ಅನುಕೂಲವಾಗುವಂತೆ ಕಿಸಾನ್ ರೈಲು ಆರಂಭಿಸಲಾಗಿದೆ. ರೈತರ ಅನುಕೂಲಕ್ಕಾಗಿ ವಿಶೇಷ ಕಿಸಾನ್ ರೈಲು ಆರಂಭಿಸುವ ಮೂಲಕ ರೈಲ್ವೆ ಇಲಾಖೆ ರೈತರ ಅಭಿವೃದ್ಧಿಗೆ ಕೈಜೋಡಿಸಿದ್ದು ಇವತ್ತು ಕೊಂಕಣ್ ರೈಲ್ವೆಯವರು ಸ್ಪಾರ್ಧಾತ್ಮಕ ದರದಲ್ಲಿ ಗುಜಾರಾತ್, ಅಹಮದಾಬಾದ್ ಸೇರಿದಂತೆ ಇತರ ಕಡೆಗಳಿಗೆ ಅಡಿಕೆ ಸಾಗಾಟಕ್ಕೆ ಮುಂದೆ ಬಂದಿದ್ದಾರೆ. ಇದರಿಂದಾಗಿ ರೈತರ ಮತ್ತು ವರ್ತಕರ ಮನೆ ಬಾಗಿಲಿನಿಂದ ಗ್ರಾಹಕರ ಮನೆ ಬಾಗಿಲಿಗೆ ಅಡಿಕೆಯನ್ನು ತಲುಪಿಸುವ ಕೆಲಸ ಕೊಂಕಣ್ ರೈಲ್ವೇಯಿಂದ ಆಗಲಿದೆ. ಇದರಿಂದ ಸಾಗಾಟದ ಅಧಿಕ ವೆಚ್ಚ ಮತ್ತು ಸಮಯವೂ ಉಳಿಯುತ್ತದೆ. ಇದಕ್ಕೆ ಪುತ್ತೂರಿನ ಅಡಿಕೆ ವರ್ತಕರ ಸಹಕಾರ ಬೇಕು. ಆರಂಭದಲ್ಲಿ ಪ್ರಾಯೋಗಿಕವಾಗಿ ಅಡಿಕೆ ಸಾಗಾಟ ಮಾಡುವ ಕೆಲಸ ಅತಿ ಶೀಘ್ರದಲ್ಲಿ ನಡೆಯಲಿದೆ ಎಂದರು.

ಕೇವಲ ೪೮ ಗಂಟೆಗಳಲ್ಲಿ ರಿಯಾಯಿತಿ ದರದಲ್ಲಿ ತಲುಪಿಸುವ ವ್ಯವಸ್ಥೆ:
ಕೊಂಕಣ್ ರೈಲ್ವೇ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಸುದಾಕೃಷ್ಣಮೂರ್ತಿ ರೈಲ್ವೇ ಸಾಗಾಟದ ಕುರಿತು ಮಾಹಿತಿ ನೀಡಿದರು. ಕೇಂದ್ರ ಸರಕಾರದ ಇಲಾಖೆಯ ವತಿಯಿಂದ ಹೊಸ ಪಾರ್ಸೆಲ್ ಸರ್ವೀಸ್ ಆರಂಭಿಸಲಾಗಿದ್ದು, ಕೊಂಕಣ್ ರೈಲ್ವೇ ಕಿಸಾನ್ ಯೋಜನೆಯ ಮೂಲಕ ಅಡಿಕೆ ಸೇರಿದಂತೆ ಎಲ್ಲಾ ಕೃಷಿ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮುಂಬಾಯಿ, ಗುಜರಾತ್ ಇನ್ನಿತರ ರಾಜ್ಯಗಳಿಗೆ ಸಾಗಾಟ ಮಾಡಲಾಗುವುದು. ರೈತರ ಮನೆ ಬಾಗಿಲಿನಿಂದ ಗ್ರಾಹಕರ ಮನೆ ಬಾಗಿಲಿಗೆ ಕಡಿಮೆ ಸಾಗಾಟ ಖರ್ಚು ವೆಚ್ಚಗಳಲ್ಲಿ ಇಲಾಖೆ ಸರಬರಾಜು ಮಾಡಲಿದೆ. ವಸ್ತುಗಳ ಸಾಗಾಟದ ವೇಳೆಯಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ಇಲಾಖೆ ವಹಿಸಿಕೊಳ್ಳಲಿದ್ದು, ಅತೀ ವೇಗವಾಗಿ ಹಾಗೂ ಜಾಗರೂಕತೆಯಿಂದ ಕೇವಲ ೪೮ ಗಂಟೆಗಳಲ್ಲಿ ಪಾರ್ಸೆಲ್‌ಗಳನ್ನು ತಲುಪಿಸುವ ಕೆಲಸ ಇಲಾಖೆ ಮಾಡಲಿದ್ದು ಈ ವ್ಯವಸ್ಥೆ ಬೇರೆ ಎಲ್ಲಿಯೂ ಇಲ್ಲ. ಹಾಗಾಗಿ ನಿಮ್ಮೆಲ್ಲರ ಸಹಕಾರ ಬೇಕೆಂದರು.

ಸಮಯದ ಉಳಿಕೆ, ಹೆಚ್ಚು ಸುರಕ್ಷಿತ ವ್ಯವಸ್ಥೆ ನಮ್ಮದು:
ಕೊಂಕಣ್ ರೈಲ್ವೇಯ ರೀಜಿನಲ್ ಟ್ರಾಫಿಕ್ ಮೆನೇಜರ್ ವಿನಯ ಕುಮಾರ್ ಅವರು ಮಾತನಾಡಿ ನಮ್ಮ ಗೂಡ್ಸ್ ವ್ಯವಸ್ಥೆಯಲ್ಲಿ ಒಂದು ವ್ಯಾಗನ್‌ನಲ್ಲಿ ಸುಮಾರು ೬೩ ಟನ್ ಅಡಿಕೆ ಹಿಡಿಯುತ್ತದೆ. ನಾವು ವಹಿಸಿಕೊಂಡ ಸಾಗಾಟದ ವಸ್ತುಗಳ ಜವಾಬ್ದಾರಿಯೂ ನಮ್ಮದೇ ಆಗಲಿದೆ. ಒಂದು ಬಾರಿ ನಮಗೆ ಅಡಿಕೆ ಸಾಗಾಟಕ್ಕೆ ಅವಕಾಶ ಮಾಡಿಕೊಟ್ಟು ನೋಡಿ. ನಮ್ಮ ಸೇವೆ ನಿಮಗೆ ಇಷ್ಟವಾದರೆ ಮುಂದುವರಿಸಿ ಎಂದ ಅವರು ಸಮಯ ಉಳಿಕೆ, ಹೆಚ್ಚು ಸುರಕ್ಷಿತ ವ್ಯವಸ್ಥೆ ನಮ್ಮದು. ಇಲ್ಲಿಂದ ಅಡಿಕೆಗಳನ್ನು ಲಾರಿಯಿಂದ ಲೋಡ್ ಮಾಡಿ ಮಂಗಳೂರು ಕೂತೂರಿನಲ್ಲಿರುವ ನಮ್ಮ ಗೂಡ್ಸ್ ಕೇಂದ್ರಕ್ಕೆ ಸಾಗಾಟದ ವ್ಯವಸ್ಥೆ ಮತ್ತು ಗುಜರಾತ್ ಅಥವಾ ಉತ್ತರ ಪ್ರದೇಶದ ಭಾಗದಲ್ಲಿ ರೈಲ್ವೇ ಕೇಂದ್ರದ ೫೦ ಕಿ.ಮೀ ಸುತ್ತ ಮುತ್ತ ಮುಟ್ಟಿಸುವ ಜವಾಬ್ದಾರಿಯೂ ನಮ್ಮದೆ ಆಗಿರುತ್ತದೆ ಎಂದರು.

ಕಡಿಮೆ ವೆಚ್ಚದಲ್ಲಿ ಮಾರುಕಟ್ಟೆಗೆ ತಲುಪಿಸುವ ವ್ಯವಸ್ಥೆ:
ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ಮಾತನಾಡಿ ಶಾಸಕರು ಮತ್ತು ಸಂಸದರು ಮುತುವರ್ಜಿ ವಹಿಸಿದ್ದರಿಂದ ಇವತ್ತು ರೈಲ್ವೇ ಇಲಾಖೆಯವರು ಮುಂದೆ ಬಂದು ಪುತ್ತೂರನ್ನು ಕೇಂದ್ರವಾಗಿರಿಸಿಕೊಂಡು ಸುಳ್ಯ, ಕಡಬ, ಬೆಳ್ತಂಗಡಿಯ ಅಡಿಕೆಗಳನ್ನು ಅತೀ ಕಡಿಮೆ ದರದಲ್ಲಿ ಹೊರ ರಾಜ್ಯಕ್ಕೆ ಸಾಗಾಟ ಮಾಡಲು ಮುಂದೆ ಬಂದಿದ್ದಾರೆ. ಇದರಿಂದ ರೈತರಿಗೆ, ವರ್ತಕರಿಗೆ ಮತ್ತು ಲೋಕಲ್ ಟ್ರನ್ಸ್‌ಪೋರ್ಟ್‌ನವರಿಗೂ ಹಾಗೂ ರೈಲ್ವೇ ಇಲಾಖೆಯವರು ಲಾಭದಾಯಕ ಆಗಲಿದೆ. ಜೊತೆಗೆ ಎಪಿಎಂಸಿಯಲ್ಲಿ ಸದ್ಯದ ಮಟ್ಟಿಗೆ ಗೋದಾಮಿನಿ ವ್ಯವಸ್ಥೆಯನ್ನು ಮಾಡಿಕೊಡುವ ಮೂಲಕ ಪುತ್ತೂರು ಎಪಿಎಂಸಿ ಈ ವ್ಯವಸ್ಥೆಗೆ ಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು. ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲು, ಗೌರವಾಧ್ಯಕ್ಷ ಶಶಾಂಕ ಕೊಟೇಚಾ, ಕಾರ್ಯದರ್ಶಿ ಕೆ.ಎ ಸಿದ್ದೀಕ್, ಅಡಿಕೆ ವರ್ತಕರಾದ ಭವಿನ್ ಶೇಟ್, ಜಗದಾಂಬ ಕಾರ್ಗೋ ಟ್ರಾನ್ಸ್‌ಪೋರ್ಟ್‌ನ ಜನಾರ್ದನ ಬೆಟ್ಟ, ಸಿನಾನ್ ಟ್ರಾನ್ಸ್‌ಪೋರ್ಟ್‌ನ ಸಿನಾನ್, ಅಝರ್ ಟ್ರಾನ್ಸ್‌ಪೋರ್ಟ್‌ನ ಖಲಂದರ್‌ರವರು ಅಡಿಕೆ ಸಾಗಾಟದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಎಪಿಎಂಸಿ ಉಪಾಧ್ಯಕ್ಷ ಎನ್.ಎಸ್ ಮಂಜುನಾಥ್, ಎಪಿಎಂಸಿ ನಿರ್ದೆಶಕರಾದ ಅಬ್ದುಲ್ ಶಕೂರ್ ಹಾಜಿ, ತ್ರಿವೇಣಿ ಪೆರ್‍ವೋಡಿ, ಬೂಡಿಯಾರ್ ರಾಧಾಕೃಷ್ಣ ರೈ, ಬಾಲಕೃಷ್ಣ ಬಾಣಜಾಲು, ಮೆದಪ್ಪ ಗೌಡ, ತೀರ್ಥಾನಂದ ದುಗ್ಗಳ, ಕೃಷ್ಣ ಕುಮಾರ್ ರೈ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಕೊರಗಪ್ಪ, ನಾಮನಿರ್ದೇಶಿತ ಸದಸ್ಯರಾದ ಮೋಹನಾಂಗಿ, ಬಾಲಕೃಷ್ಣ ಜೋಯಿಷ, ಬಾಬು ಬೊಮ್ಮನಗುಂಡಿ, ರೈಲ್ವೇ ಹೋರಾಟ ಸಮಿತಿಯ ಸುದರ್ಶನ್ ಪುತ್ತೂರು, ಉಪಸ್ಥಿತರಿದ್ದರು. ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಕಾರ್ಯಕ್ರಮ ನಿರ್ವಹಿಸಿದರು.

ಬೌಗೋಳಿಕವಾಗಿ ಕೃಷಿಯೇ ಮುಖ್ಯವಾಗಿರುವ ಜಿಲ್ಲೆಯಲ್ಲಿ ಉದ್ಯಮವೂ ಸಾಕಷ್ಟಿದೆ. ಇಲ್ಲಿಂದ ಇತರ ರಾಜ್ಯಗಳಿಗೆ ಕೃಷಿ ಉತ್ಪನ್ನ ಹಾಗೂ ಇತರ ಕಚ್ಚಾ ವಸ್ತುಗಳ ಸಾಗಾಣಿಕೆಯ ಅಗತ್ಯತೆಯನ್ನು ಮನಗಂಡಿರುವ ಕೊಂಕಣ್ ರೈಲ್ವೇ ಇಲಾಖೆಯು ಪುತ್ತೂರಿನ ಶಕ್ತಿ ಮತ್ತು ಚೈತನ್ಯವನ್ನು ಮನಗಂಡು ಇದೀಗ ಗೂಡ್ಸ್ ಸಾಗಾಟಕ್ಕಾಗಿ ಪುತ್ತೂರನ್ನು ಗುರುತಿಸಿಕೊಂಡಿದೆ. ಜಿಲ್ಲೆಯ ಚಾಲಿ ಅಡಕೆಗೆ ಗುಜರಾತ್, ರಾಜಾಸ್ಥಾನದಂತಹ ರಾಜ್ಯದಲ್ಲಿ ಬಹು ಬೇಡಿಕೆದ್ದು, ರೈಲ್ವೇ ಸಾಗಾಟದಿಂದ ರೈತರಿಗೆ ಮತ್ತು ವರ್ತಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅದಕ್ಕೆ ಪರಿಹಾರ ಕಂಡು ಕೊಳ್ಳುವ. ಗೂಡ್ಸ್‌ಗೆ ಸಾಗಾಟ ಮಾಡುವ ನಡುವೆ ಸಾಗಾಟ, ಕಮೀಷನ್ ಎಜೆಂಟ್ ಸಮಸ್ಯೆ ಇರಬಹುದು. ಅದಕ್ಕೂ ಪರಿಹಾರ ಕಂಡು ಕೊಳ್ಳಲಾಗುವುದು. ಅಡಿಕೆ ಮಾತ್ರವಲ್ಲದೆ ಕೋಕೊ, ಗೇರು ಬೀಜ, ರಬ್ಬರ್, ಒಳ್ಳೆಮಣಸನ್ನು ಕಿಸಾನ್ ರೈಲಿನಿಂದ ಉತ್ಪಾದಕರ ಮನೆ ಬಾಗಿಲಿನಿಂದ ಗ್ರಾಹಕರ ಮನೆ ಬಾಗಿಲಿಗೆ ಕೊಂಡೊಯ್ಯುವ ಕೆಲಸ ಯಶಸ್ವಿಯಾಗಲಿದೆ – ಸಂಜೀವ ಮಠಂದೂರು, ಶಾಸಕರು ಪುತ್ತೂರು

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.