Breaking News

ವ್ಯಾಟ್ಸಪ್ ಮೂಲಕ ಕುಟುಂಬ ಸಂಬಂಧ ಪೋಣಿಸುವ ಹವ್ಯಾಸಿ ಪತ್ರಕರ್ತ 100 ವರ್ಷಗಳ ಹಿಂದಿನ ಕಥೆ ಬರೆಯುತ್ತಾರೆ…!

Puttur_Advt_NewsUnder_1
Puttur_Advt_NewsUnder_1

ಕುಂಸಿ 🖋️

ಇಂದಿನ ಕಾಲದಲ್ಲಿ ಸಂಬಂಧಿಕರಿಂದ ದೂರ ಇರುವುದು ಅಥವಾ ಸಂಬಂಧಿಕರನ್ನು ದೂರ ಮಾಡುವವರೇ ಅಧಿಕ. ಕ್ಷುಲ್ಲಕ ವಿಚಾರಕ್ಕಾಗಿ ಕುಟುಂಬ ಸಂಬಂಧವನ್ನೇ ಕಡಿದು ಹಾಕುವ ಅನೇಕರೂ ನಮ್ಮೊಳಗಿದ್ದಾರೆ. ಸತ್ತರೂ ಹುಟ್ಟಿದರೂ ಸಂಬಂಧಿಕರ ಮನೆಗೆ ಬಾರದ ಅದೆಷ್ಟೋ ಮಂದಿ ನಮ್ಮೊಳಗೆ ಸೇರಿಕೊಂಡಿದ್ದಾರೆ. ಯಾರು ಯಾರ ಸಂಬಂಧಿ , ಯಾರು ನಮ್ಮ ರಕ್ತ ಸಂಬಂಧಿ ಎಂದು ಗೊತ್ತಿಲ್ಲದ ಆಧುನಿಕ ಕುಟುಂಬಗಳೂ ಇದೆ. ಇದಕ್ಕೆಲ್ಲಾ ವಿಭಿನ್ನ ಕಾರಣಗಳೂ ಇರಬಹುದು. ಕುಟುಂಬ ಕಲಹ ಒಂದು ಕಾರಣವಾದರೆ ಸಂಬಂಧಗಳ ಪರಿಚಯವೇ ಇಲ್ಲದೇ ಇರುವುದು ಇನ್ನೊಂದು ಕಾರಣವಾಗಿರಬಹುದು. ಇದೆಲ್ಲದರ ನಡುವೆ ಒಳಮೊಗ್ರು ಗ್ರಾಮದ ಶೇಕಮಲೆ ನಿವಾಸಿ ಹವ್ಯಾಸಿ ಪತ್ರಕರ್ತರಾದ ಎಸ್ ಪಿ ಬಶೀರ್ ಶೇಕಮಲೆ ಯವರು ಸಾಮಾಜಿಕ ಜಾಲತಾಣವಾದ ವ್ಯಾಟ್ಸಪ್ ಮೂಲಕ ಕುಟುಂಬವನ್ನು ಒಂದು ಗೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಸದ್ದಿಲ್ಲದೆ ಕುಟುಂಬಗಳನ್ನು ಪರಸ್ಪರ ಪೋಣಿಸುವ ಮಹಾತ್ಕಾರ್ಯವನ್ನು ಮಾಡುತ್ತಿದ್ದಾರೆ.

100 ವರ್ಷಗಳ ಐತಿಹ್ಯ ಸಂಗ್ರಹ
ಸಾಧಾರಣವಾಗಿ ಬಹುತೇಕ ಮಂದಿಗೆ ತಮ್ಮ ಕುಟುಂಬದ ನಾಲ್ಕು ಅಥವಾ ಐದು ತಲೆಮಾರುಗಳ ಸಂಬಂಧದ ಕೊಂಡಿ ನಮಗೆ ಗೊತ್ತಿರುತ್ತದೆ. ಆ ನಂತರದ ತಲೆಮಾರಿನ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ. ಅದರ ಆಚೆಗೆ ಯಾರೂ ಚಿಂತಿಸಲು ಹೋಗುವುದಿಲ್ಲ ಯಾಕೆಂದರೆ ಅದು ಅಗತ್ಯವಿಲ್ಲ ಎಂಬ ಮನೋಭಾವ ನಮ್ಮಲ್ಲಿ ಬೇರೂರಿದೆ. ಕುಟುಂಬ ಸಂಬಂಧವನ್ನು ಅರಿತು ಏನು ಮಾಡಲು ಸಾಧ್ಯ ಎಂಬ ಕಲ್ಪನೆಯೂ ಬಹುತೇಕರಲ್ಲಿದೆ. ಆದರೆ ಎಸ್ ಪಿ ಬಶೀರ್ ಅವರು ಸುಮಾರು ೮ ರಿಂದ ೧೦ ತಲೆಮರಿನ ತನಕ ಕುಟುಂಬ ಸಂಬಂಧದ ಮಾಹಿತಿಯನ್ನು ಸಂಗ್ರಹ ಮಾಡುತ್ತಾರೆ. ಅವರು ಯಾರು? ಎಲ್ಲಿಂದ ಬಂದವರು? ಅವರ ಮಕ್ಕಳು, ಮರಿ ಮಕ್ಕಳು, ಹೆಣ್ಣು ಮಕ್ಕಳು ಹೀಗೇ ಕುಟುಂಬವನ್ನು ಬೆಸೆಯುತ್ತಾ ಬೆಸೆಯುತ್ತಾ ಕುಟುಂಬದ ಕೊನೇಯ ಕೊಂಡಿಯ ತನಕ ತನ್ನ ಜಾಡನ್ನು ಹುಡುಕುತ್ತಾರೆ. ಕುಟುಂಬದಲ್ಲಿ ಒಂದು ಮಗುವಿನ ಜನನವಾದರೆ ಅದು ಆ ತಲೆಮರಿನ ಎಷ್ಟನೇ ವ್ಯಕ್ತಿ ಅಥವಾ ಮಗು ಎಂಬುದನ್ನು ಕೂಡಾ ಪಕ್ಕಾ ಲೆಕ್ಕಾ ಹಾಕುತ್ತಾರೆ. ಕರುಳ ಬಳ್ಳಿಯ ಸಂಬಂಧವನ್ನು ಪೋಣಿಸಿ ಅದಕ್ಕೆ ಅಕ್ಷರ ರೂಪವನ್ನು ಕೊಟ್ಟು ವ್ಯಾಟ್ಸಪ್‌ಗಳಲ್ಲಿರುವ ತಮ್ಮ ಕುಟುಂಬದ ಗ್ರೂಪುಗಳಿಗೆ ಶೇರ್ ಮಾಡುತ್ತಾರೆ. ಆ ಮೂಲಕ ಸಂಬಂಧವನ್ನು ಗಟ್ಟಿಗೊಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಅಜ್ಜಿಯ ಮಾಹಿತಿ ಭಂಡಾರ
ಎಸ್ ಪಿ ಬಶೀರ್ ಅವರಿಗೆ ಕುಟುಂಬದ ತಲೆಮಾರಿನ ಮಾಹಿತಿ ಎಲ್ಲಿಂದ ಸಂಗ್ರಹ ಮಾಡುತ್ತಿದ್ದಾರೆ ಎಂದು ಹುಬ್ಬೇರಿಸಬೇಡಿ. ಇವರು ಕುಟುಂಬದಲ್ಲಿರುವ ಹಿರಿಯರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹ ಮಾಡುತ್ತಾರೆ. ತನ್ನ ಮನೆಯಲ್ಲಿಯೇ ಇರುವ ೧೦೫ ವರ್ಷ ಪ್ರಾಯದ ಐಶುಮ್ಮ ರಲ್ಲೂ ಮಾಹಿತಿ ಸಂಗ್ರಹ ಮಾಡುತ್ತಾರೆ. ಒಂದು ಕುಟುಂಬದ ಪೂರ್ಣ ಮಾಹಿತಿ ಲಭ್ಯವಾಗದೇ ಇದ್ದಲ್ಲಿ ಕುಟುಂಬಸ್ಥರ ಮನೆಗೆ ತೆರಳಿ ಅಲ್ಲಿನ ಹಿರಿಯರಿಂದ ಮಾಹಿತಿ ಸಂಗ್ರಹ ಮಾಡುತ್ತಾರೆ. ಒಂದು ಕುಟುಂಬದ ಮಾಹಿತಿ ಸಂಗ್ರಹ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ ಅದರೂ ಬಶೀರ್ ಇದೆಲ್ಲವನ್ನೂ ತಮ್ಮ ಕುಟುಂಬದ ಒಗ್ಗೂಡುವಿಕೆಗಾಗಿ ಬಹಳ ಕಷ್ಟದಿಂದ ಮಾಡುತ್ತಿರುವುದು ಕುಟುಂಬದ ಎಲ್ಲಾ ಸದಸ್ಯರಿಗೂ ಇವರ ಮೇಲೆ ಗೌರವ ತರುವಂತೆ ಮಾಡಿದೆ.

ಏನು ಪ್ರಯೋಜನವಿದೆ?
ಕುಟುಂಬದ ಹಿರಿಯ ತಲೆಮಾರಿನಿಂದ ಹಿಡಿದು ಇವತ್ತು ಹುಟ್ಟಿದ ಮಗುವಿನ ತನಕ ಕುಟುಂಬದ ಮಾಹಿತಿ ಸಂಗ್ರಹ ಮಾಡಿ ಏನು ಪ್ರಯೋಜನ ಎಂದು ಕೇಳುವವರೂ ಇದ್ದಾರೆ. ಇದರಿಂದ ತುಂಬಾ ಪ್ರಯೋಜನಗಳಿವೆ. ನಮ್ಮಲ್ಲಿ ಬಹುತೇಕರಿಗೆ ನಮ್ಮ ಅಪ್ಪ, ಅಮ್ಮ, ಅಜ್ಜಿ ಹೀಗೇ ಈಗ ಜೀವಂತ ಇರುವ ಅಥವಾ ೧೦ ರಿಂದ ೨೦ ವರ್ಷಗಳ ಹಿಂದೆ ನಮ್ಮನ್ನು ಅಗಲಿದವರ ಮಾಹಿತಿ ಬಿದ್ರೆ ಬೇರೆ ಯಾವುದೇ ಮಾಹಿತಿ ನಮ್ಮಲ್ಲಿಲ್ಲ. ಕುಟುಂಬದ ಹಿರಿಯರು ಮರಣಹೊಂದಿದ ಬಳಿಕ ಆ ಕುಟುಂಬದ ಮುಂದಿನ ತಲೆಮರಿನ ಬಗ್ಗೆ ತಿಳಿ ಹೇಳುವವರು ಅಥವಾ ಮಾಹಿತಿ ನೀಡುವವರು ನಮ್ಮೊಳಗೆ ಇಲ್ಲದ ಕಾರಣ ಮತ್ತು ಒಂದು ಮರಣದ ಕಾರಣದಿಂದ ಕುಟುಂಬ ಸಂಬಂಧವೇ ಕಡಿದು ಹೋಗುವುದು ನಗ್ನ ಸತ್ಯವೂ ಅಗಿದೆ. ಇಂಥಹ ಕುಟುಂಬಗಳನ್ನು ಪತ್ತೆ ಮಾಡಿ ಅವರನ್ನು ಒಂದುಗೂಡಿಸುವುದು ಒಂದು ಪುಣ್ಯಧಾಯಕ ಕಾರ್ಯದ ಜೊತೆಗೆ ಸಂಬಂಧವನ್ನು ಪೋಣಿಸಿದ ಗೌರವವೂ ನಮಗಿರುತ್ತದೆ.

ಪ್ರವಾದಿ ವಚನ ಪಾಲನೆ
ನಿಮಗೆ ಹೆಚ್ಚು ವರ್ಷ ಬಾಳಿ ಬದುಕಬೇಕೇ? ನಿಮ್ಮ ಕುಟುಂಬದಲ್ಲಿ ನೆಮ್ಮದಿ ಶಾಂತಿ ದೊರೆಯಬೇಕೇ ಹಾಗಿದ್ದಲ್ಲಿ ನೀವು ಕುಟುಂಬ ಸಂಬಂಧವನ್ನು ಗಟ್ಟಿಗೊಳಿಸಿ ಎಂದು ಪ್ರವಾದಿ (ಸಅ)ರವರ ವಚನದಲ್ಲಿ ಅತೀವ ನಂಬಿಕೆ ಇಟ್ಟಿರುವ ಎಸ್.ಪಿ ಬಶೀರ್ ಪ್ರವಾದಿಯವರ ಪ್ರೀತಿ ಸಂಪಾದಿಸುವ ಉದ್ದೇಶದಿಂದ ಈ ಘನ ಕಾರ್ಯಕ್ಕೆ ಇಳಿದಿದ್ದಾರಂತೆ. ಇವರ ಉದ್ದೇಶ ಏನಿದ್ದರೂ ಕುಟುಂಬವನ್ನು ಪೋಣಿಸುವುದು ಮತ್ತು ಅವರ ನಡುವಿನ ಸಂಬಂದವನ್ನು ಗಟ್ಟಿಗೊಳಿಸುವುದು. ಸತತ ಎರಡು ವರ್ಷಗಳಿಂದ ಹತ್ತಾರು ಕುಟುಂಬಗಳ ಮಾಹಿತಿ ಸಂಗ್ರಹ ಮಾಡಿದ್ದಾರೆ. ಸಂಗ್ರಹ ಮಾಡಿದ ಮಾಹಿತಿ ಸರಿಯೋ ತಪ್ಪೋ ಎಂದು ಕೂಲಂಕುಶವಾಗಿ ಪರಿಸೀಲಿಸಿ ಬಳಿಕ ಅದನ್ನು ಪುಸ್ತಕದಲ್ಲೂ ದಾಖಲೆ ಮಾಡುತ್ತಾರೆ.

ಆಂಟಿ, ಅಂಕಲ್, ಕಸಿನ್ ಎಂಬ ಶಬ್ದಗಳ ನಡುವೆ ಆಧುನಿಕ ಯುವ ಸಮೂಹಕ್ಕೆ ತಮ್ಮ ಸಂಬಂಧಗಳ ಅರಿವೇ ಇಲ್ಲದೆ ಕೇವಲ ಮಮ್ಮಿ, ಡ್ಯಾಡಿಗೆ ಸಂಬಂಧ ಕುಂಠಿತಗೊಳ್ಳುವ ಈ ಕಾಲದಲ್ಲಿ ೧೦೦ ವರ್ಷಗಳ ಹಿಂದಿನ ತನ್ನ ಕುಟುಂಬದ ಮಾಹಿತಿ ಸಂಗ್ರಹಿಸುವುದು ಸುಲಭದ ಕೆಲಸವಲ್ಲ. ಇದು ಅಲ್ಲಾಹನ ಬಳಿ ಅತ್ಯಂತ ಪುಣ್ಯಧಾಯಕ ಕೆಲಸವಾಗಿದೆ. ಪ್ರತೀಯೊಂದು ಕುಟುಂಬದಲ್ಲಿಯೂ ಈ ಮಾಹಿತಿ ಸಂಗ್ರಹ ಕೆಲಸ ನಡೆಯಬೇಕಿದೆ. ಈ ರೀತಿಯ ಮಾಹಿತಿ ಸಂಗ್ರಹದಿಂದ ಕುಟುಂಬದೊಳಗೆ ಝಕಾತ್ ವಿತರಣೆ ಮಾಡಲು ಸಾಧ್ಯವಾಗುತ್ತದೆ ಮತ್ತು ಕುಟುಂಬದಲ್ಲಿರುವ ಬಡವರನ್ನೂ ಗುರುತಿಸಲು ಸಾಧ್ಯವಾಗುತ್ತದೆ – ಅಬೂಬಕ್ಕರ್ ಸಿದ್ದಿಕ್ ಜಲಾಲಿ, ಇಸ್ಲಾಂ ವಿದ್ವಾಂಸ ಮುದರ್ರಿಸ್, ಕಲ್ಲೆಗ ಜುಮಾ ಮಸೀದಿ

ಕುಟುಂಬ ಸಂಬಂಧವನ್ನು ಆಧುನಿಕ ಯುವ ಜನತೆ ಅರಿತುಕೊಳ್ಳಲಿ ಎಂಬ ಏಕೈಕ ಉದ್ದೇಶದಿಂದ ಈ ಕಾರ್ಯವನ್ನು ಮಾಡುತ್ತಿದ್ದೇನೆ. ನಾನು ಮಾಡುವ ಕೆಲಸದಿಂದ ಒಬ್ಬ ವ್ಯಕ್ತಿಗೆ ತನ್ನ ಕುಟುಂಬದ ಐತಿಹ್ಯ ತಿಳಿದರೂ ಸಾಕು ನನಗೆ ಅದು ಸಂತೋಷ. ನಮ್ಮ ಅಜ್ಜ ಪೋಕರಜ್ಜಾ ಕುಟುಂಬ ಸೇರಿದಂತೆ ಅಜ್ಜಿ ಐಶುಮ್ಮ ರವರ ಕುಟುಂಬದ ಪೂರ್ಣ ಮಾಹಿತಿ ಸಂಗ್ರಹ ಮಾಡುತ್ತಿದ್ದೇನೆ.ಈ ಕಾರ್ಯ ನನಗೆ ಅತೀ ಹೆಚ್ಚು ತೃಪ್ತಿ ತಂದಿದೆ – ಎಸ್ ಪಿ ಬಶೀರ್ ಶೇಕಮಲೆ, ಹವ್ಯಾಸಿ ಪತ್ರಕರ್ತ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.