ಕೌಕ್ರಾಡಿ, ಮಣ್ಣಗುಂಡಿ ಪರಿಸರದಲ್ಲಿ ಮತ್ತೆ ಕಾಡಾನೆ ಪುಂಡಾಟ | ಅಪಾರ ಬೆಳೆ ಹಾನಿ, ಕಂಗೆಟ್ಟು ಹೋದ ಕೃಷಿಕರು..!!

Puttur_Advt_NewsUnder_1
Puttur_Advt_NewsUnder_1

ವಿಶೇಷ ವರದಿ/ಚಿತ್ರಗಳು: ಸಿದ್ದಿಕ್ ನೀರಾಜೆ

  • ಭತ್ತದ ಗದ್ದೆ, ಅಡಿಕೆ, ಬಾಳೆ ತೋಟ ಸಂಪೂರ್ಣ ನಾಶ
  • 8 ದಿನಗಳಿಂದ ಕಾಡಂಚಿನಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು
  • ಗ್ರಾಮಸ್ಥರಲ್ಲಿ ಭೀತಿ, ಮನೆಯಿಂದ ಹೊರ ಹೋಗುವುದಕ್ಕೂ ಆತಂಕ
  • ಆಗಾಗ್ಗೆ ಹೆದ್ದಾರಿಗೂ ಲಗ್ಗೆ, ವಾಹನ ಚಾಲಕರಲ್ಲೂ ಭೀತಿ
  • ದೂರು ನೀಡಿದರೂ ಸ್ಪಂಧಿಸದ ಅರಣ್ಯ ಇಲಾಖೆ-ಗ್ರಾಮಸ್ಥರ ದೂರು

ಉಪ್ಪಿನಂಗಡಿ: ಕೌಕ್ರಾಡಿ ಗ್ರಾಮದ ಪೆರಿಯಶಾಂತಿ, ಮಣ್ಣಗುಂಡಿ ಪ್ರದೇಶದಲ್ಲಿ ಕಳೆದ ೮ ದಿನಗಳಿಂದ ಕಾಡಾನೆಯ ಹಿಂಡೊಂದು ಬೀಡು ಬಿಟ್ಟಿದ್ದು, ಹಲವರ ತೋಟದೊಳಗೆ ನುಗ್ಗಿ ಪುಂಡಾಟ ನಡೆಸಿ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿಗೊಳಿಸಿದೆ.

ಪೆರಿಯಶಾಂತಿ ರಕ್ಷಿತಾರಣ್ಯದಿಂದ ಹೊರ ಬರುವ ಈ ೪ ಆನೆಗಳ ಹಿಂಡು ಕೌಕ್ರಾಡಿ ಗ್ರಾಮದ ಭೂತಲಡ್ಕ, ಹೊನ್ನಜಾಲು, ಆನಡ್ಕ, ಮಣ್ಣಗುಂಡಿ ಮೊದಲಾದ ಕಡೆಗಳಲ್ಲಿ ರಾತ್ರಿ ಪೂರ್ತಿ ಪುಂಟಾಟ ನಡೆಸಿ ಅಡಿಕೆ, ಬಾಳೆ ತೋಟಗಳನ್ನು ಸಂಪೂರ್ಣವಾಗಿ ನಾಶಗೊಳಿಸುತ್ತದೆ. ಭತ್ತದ ಗದ್ದೆಯಲ್ಲಿ ಓಡಾಟ ನಡೆಸಿರುವ ಆನೆಯಿಂದಾಗಿ ಭತ್ತದ ಪೈರುಗಳು  ಆನೆ ಕಾಲಿಗೆ ಸಿಲುಕಿ ನಾಶವಾಗಿರುವುದು ಕಂಡು ಬಂದಿದೆ.

ಗ್ರಾಮಸ್ಥರಾದ ಹೊನ್ನಪ್ಪ, ಪ್ರಸನ್ನ, ಲಕ್ಷ್ಮಣ ಗೌಡ, ಹರಿಯಪ್ಪ, ನಾರಾಯಣ ಗೌಡ, ಸೇಸಪ್ಪ, ಥಾಮಸ್, ಹಮೀದ್ ಎಂಬವರಿಗೆ ಸೇರಿದ ಅಡಿಕೆ, ಬಾಳೆ ತೋಟ, ಗದ್ದೆ  ಸಂಪೂರ್ಣವಾಗಿ ನಾಶವಾಗಿರುವುದು ಕಂಡು ಬಂದಿದ್ದು, ಕಳೆದ ೧ ತಿಂಗಳಿನಿಂದ ಈ ಪ್ರದೇಶದಲ್ಲಿ ಆನೆಯ ಉಪಟಳ ಜಾಸ್ತಿಯಾಗಿದೆ, ಹಲವು ಬಾರಿ ನಾಶ ಪಡಿಸದ ಜಾಗದಲ್ಲಿ ಮತ್ತೆ ಗಿಡ ನೆಟ್ಟಿದ್ದೆವು. ಆದರೆ ಇದೀಗ ೪ ಆನೆಗಳ ಉಪಟಳದಿಂದಾಗಿ ನಾವುಗಳು ಕಂಗೆಟ್ಟು ಹೋಗಿದ್ದೇವೆ ಎಂದು ಕೃಷಿಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಬೆಳೆ ಸಂಪೂರ್ಣ ನಾಶ-ಧನಂಜಯ
ಕೋವಿಡ್-೧೯ ಸಂಕಷ್ಟದಲ್ಲಿ ಸಿಲುಕಿ ಬದುಕೇ ಕಷ್ಟವಾಗಿದೆ, ಆದರೂ ಕೆಲಸಗಾರರೂ ಸಿಗದೆ ಕಷ್ಟಪಟ್ಟು ಕೃಷಿ ಮಾಡಿದ್ದೆವು, ಆದರೆ ಕಳೆದ ೮ ದಿನಗಳಿಂದ ನಿರಂತರವಾಗಿ ಬರುವ ಆನೆ ಹಿಂಡು ನಮ್ಮೆಲ್ಲಾ ಕೃಷಿಯನ್ನು ಹಾನಿಗೊಳಿಸಿದೆ, ನಮ್ಮ ಜೀವನಕ್ಕೂ ಕಷ್ಟವಾಗಿದೆ, ಜೊತೆಗೆ ರಾತ್ರಿ ಪೂರ್ತಿ ತೋಟದ ಒಳಗಡೆ ಅಡ್ಡಾಗುತ್ತಾ ಇರುತ್ತದೆ, ಬೆಳಗಾಗುವಷ್ಟರಲ್ಲಿ ಒಂದಿಷ್ಟು ತಿಂದು, ಮತ್ತೆಲ್ಲವನ್ನೂ ಕೆಡವಿ ಹಾಕಿ ಹೋಗುತ್ತದೆ ಎಂದು ಸಂಕಷ್ಟಕ್ಕೆ ಒಳಗಾಗಿರುವ ಧನಂಜಯ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ಹಲವು ಬಾರಿ ದೂರು ನೀಡಿದ್ದೇವೆ, ಯಾರೂ ಬಂದಿಲ್ಲ-ರಂಜಿತ್.
ಕಳೆದ ೧ ತಿಂಗಳಿಂದ ೧ ಆನೆ ಆಗಾಗ್ಗೆ ಬಂದು ಪುಂಡಾಟ ನಡೆಸಿ ಹೋಗುತ್ತಿತ್ತು. ಇದೀಗ ಕಳೆದ ೮ ದಿನಗಳಿಂದ ೪ ಆನೆಗಳು ಹಿಂಡಾಗಿ ಬಂದು ತೋಟದೊಳಗೆ ನುಗ್ಗುತ್ತದೆ, ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದೇವೆ, ಆದರೆ ಅವರು ಬಂದು ಆನೆಯನ್ನು ಕಾಡಿಗೆ ಅಟ್ಟುವ ಅಥವಾ ಯಾವುದೇ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ರಂಜಿತ್ ಪ್ರತಿಕ್ರಿಯಿಸಿದ್ದಾರೆ.

ಮನೆಯಿಂದ ಹೊರ ಹೋಗುವುದಕ್ಕೂ ಆತಂಕ-ನೌಶಾದ್
ರಾತ್ರಿ ೧೧ ಯಾ ೧೨ ಗಂಟೆಯ ಹೊತ್ತಿಗೆ ಕಾಡಿನಿಂದ ಹೊರ ಬಂದು ತೋಟದೊಳಗೆ ನುಗ್ಗುತ್ತದೆ. ರಾತ್ರಿ ಪೂರ್ತಿ ತೊಟದೊಳಗೆ ಇದ್ದು, ಬೆಳಿಗ್ಗೆ ಬೆಳಕು ಹರಿಯುತ್ತಿದ್ದಂತೆ ಗ್ರಾಮದೊಳಗಿನ ರಸ್ತೆಯಲ್ಲೋ, ಮನೆಯ ಅಂಗಳದ ಹತ್ತಿರ ಬಂದು ನಿಂತು ಬಿಡುತ್ತದೆ, ಮನೆ ಮಂದಿ ಹೊರ ಹೋಗದಂತಹ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ, ತೀರಾ ಆತಂಕ ಭೀತಿಯಿಂದ ದಿನ ಕಳೆಯುವಂತಾಗಿದೆ, ಹಲವು ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದ್ದೇವೆ, ಆಗೊಮ್ಮೆ ಈಗೊಮ್ಮೆ ಬಂದು ೧ ಗರ್ನಲ್ ಕೊಟ್ಟು, ಆನೆ ಬಂದಾಗ ಹೊಡೆಯಿರಿ ಎಂದು ಹೇಳಿ ಹೋಗುತ್ತಾರೆ ಹೊರತು ಅದನ್ನು ಕಾಡಿಗೆ ಓಡಿಸುವ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ ಎಂದು ನೌಶಾದ್ ದೂರಿದ್ದಾರೆ.

ಆಗಾಗ್ಗೆ ಹೆದ್ದಾರಿಗೂ ಲಗ್ಗೆ, ವಾಹನ ಚಾಲಕರಲ್ಲೂ ಭೀತಿ:
ಬಹುತೇಕ ಸಂದರ್ಭದಲ್ಲಿ ಸಂಜೆಯ ಹೊತ್ತಿಗೆ ಆನೆಯ ಹಿಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಅತ್ತಿತ್ತ ಓಡಾಡುತ್ತಿರುತ್ತದೆ, ಹೆದ್ದಾರಿಯಲ್ಲಿ ಹೋಗುವ ವಾಹನಗಳವರು ಆನೆಯನ್ನು ದೂರದಿಂದಲೇ ನೋಡಿ ಮರೆಯಾಗಿ ನಿಂತು ಆನೆ ಕಾಡಿನೊಳಗೆ ಹೋದ ಬಳಿಕ ವಾಹನ ಚಾಲಕರು ಯಾನ ಮುಂದುವರಿಸುವಂತಾಗಿದೆ. ಹೆದ್ದಾರಿಯಲ್ಲಿ ಹೋಗುವ ವಾಹನ ಚಾಲಕರು ಭೀತಿಯಿಂದಲೇ ವಾಹನ ಚಲಾಯಿಸುವಂತಾಗಿದೆ ಎಂದು ಹೇಳಲಾಗಿದೆ.

ಆನೆ ನಿರೋಧಕ ಕಂದಕವನ್ನು ಕೆಡವಿದ ಆನೆಗಳು:
ಅರಣ್ಯ ಇಲಾಖೆಯ ದಾಖಲೆಯಲ್ಲಿ ಈ ಪರಿಸರದಲ್ಲಿ ಆನೆ ಪಥವಿದ್ದು, ಆನೆಗಳು ತಮ್ಮ ನಿರ್ದಿಷ್ಠ ಪಥದಲ್ಲಿ ಸಂಚರಿಸುವ ಪರಿಪಾಠವನ್ನು ಹೊಂದಿರುತ್ತದೆ. ಅದರ ಸಲುವಾಗಿ ಅರಣ್ಯ ಇಲಾಖೆ ಅಲ್ಲಲ್ಲಿ ಕಾಡಿನ ಅಂಚಿನಲ್ಲಿ ಆನೆ ಕಾಡಿನಿಂದ ಹೊರ ಬರದಂತೆ ಆನೆ ನಿರೋಧಕ ಕಂದಕ ನಿರ್ಮಿಸಿರುತ್ತಾರೆ. ಆದರೆ ಈ ಆನೆಗಳ ಹಿಂಡು ಕಂದಕವನ್ನೇ ಕೆಡವಿ ದಾರಿ ಮಾಡಿಕೊಂಡು ಹೆದ್ದಾರಿಯನ್ನು ದಾಟಿ ತೋಟದೊಳಗೆ ನುಸುಳುತ್ತಿರುವುದನ್ನು ಅಭ್ಯಾಸ ಮಾಡಿಕೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಒಟ್ಟಿನಲ್ಲಿ ಗ್ರಾಮಸ್ಥರ ಮತ್ತು
ಸಾರ್ವಜನಿಕರ ಹಿತದೃಷ್ಠಿಯಿಂದ ಮತ್ತು ಅಪಾರ ಕೃಷಿ ಹಾನಿ ಆಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರ ಒಕ್ಕೊರಳ ಆಗ್ರಹವಾಗಿದೆ.

ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ-ಡಿ.ಎಫ್.ಓ.:
ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಆನೆಯಿಂದಾಗುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ, ಸಿಬ್ಬಂದಿಗಳು ತೆರಳಿ ವರದಿ ನೀಡಿದ್ದಾರೆ. ಇದೀಗ ತುರ್ತಾಗಿ ಆನೆ ಕಂದಕ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಅದಾಗ್ಯೂ ಆನೆ ಕಾಡಿನಿಂದ ಹೊರ ಬರದಂತೆ ಶಾಶ್ವತ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಉಸ್ತವಾರಿ ಸಚಿವರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿ ಅದಕ್ಕೊಂದು ಮಾಸ್ಟರ್ ಪ್ಲಾನ್ ಯೋಜನೆ ಸಿದ್ಧ ಪಡಿಸಿ ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿದೆ, ಮುಂದಿನ ದಿನಗಳಲ್ಲಿ ಅದು ಕಾರ್‍ಯರೂಪಕ್ಕೆ ಬರಲಿದೆ ಎಂದು ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಲನ್ ತಿಳಿಸಿದ್ದಾರೆ.

ರೈತರ ಮೂಲಕವೂ ಪರಿಹಾರಕ್ಕೆ ಕ್ರಮ:
ರೈತರ ತೋಟಗಳಿಗೆ ಆನೆ ನುಗ್ಗುವ ಜಾಗದಲ್ಲಿ ಸೋಲಾರ್ ಬೇಲಿ ಹಾಕುವುದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಲಿದೆ ಮತ್ತು ಅದಕ್ಕೆ ತಗಲುವ ವೆಚ್ಚಕ್ಕೆ ಪೂರಕವಾಗಿ ಇಲಾಖೆ ವತಿಯಿಂದಲೂ ಸಹಾಯಧನ ಕೊಡುವ ವ್ಯವಸ್ಥೆ ಇದ್ದು, ಅದನ್ನು ರೈತರು ಉಪಯೋಗಪಡಿಸಿಕೊಳ್ಳಬಹುದು ಹಾಗೂ ಕೃಷಿ ಹಾನಿಯಾದವರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿಯೂ ಕ್ರಮಕೈಗೊಳ್ಳಲಾಗಿದೆ ಎಂದು ಕರಿಕಾಲನ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.