ರೆಂಜ: ನ್ಯಾಯಾಲಯದ ಆದೇಶದಂತೆ ಬಿಡುಗಡೆಗೊಂಡ ಹಸು, ಕರು ಸಾಗಿಸುತ್ತಿದ್ದ ವಾಹನಕ್ಕೆ ತಡೆ

Puttur_Advt_NewsUnder_1
Puttur_Advt_NewsUnder_1
  • ಸ್ಥಳದಲ್ಲಿ ಜಮಾಯಿಸಿದ ಎರಡೂ ಸಮುದಾಯದ ಜನರು
  • ಸಂಪ್ಯ ಎಸ್.ಐ ನೇತೃತ್ವದ ಸಕಾಲಿಕ ಕಾರ್ಯಾಚರಣೆಯಿಂದ ತಪ್ಪಿದ ಘರ್ಷಣೆ

ಪುತ್ತೂರು: ಪೊಲೀಸ್ ಕಾರ್ಯಾಚರಣೆಯೊಂದರಲ್ಲಿ ಪತ್ತೆ ಮಾಡಲಾಗಿದ್ದ ಅಕ್ರಮ ಗೋಸಾಗಾಟದಲ್ಲಿ ವಶಪಡಿಸಿಕೊಳ್ಳಲಾದ ಹಸು ಮತ್ತು ಕರುವನ್ನು ನ್ಯಾಯಾಲಯದ ಆದೇಶ ಪಡೆದು ಸಾಗಿಸುತ್ತಿದ್ದ ವೇಳೆ ಹಿಂದು ಸಂಘಟನೆಯ ಕಾರ್ಯಕರ್ತರು ತಡೆದ ಮತ್ತು ಈ ವೇಳೆ ಹಿಂದು, ಮುಸ್ಲಿಂ ಸಮುದಾಯದ ಜನರು ಜಮಾಯಿಸಿ ಉದ್ವಿಗ್ನ ಸ್ಥಿತಿಗೆ ತಲುಪಿದ ಹಾಗೂ ಸಂಪ್ಯ ಠಾಣಾ ಎಸ್‌ಐ ಹಾಗೂ ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಸಂಭಾವ್ಯ ಅನಾಹುತವೊಂದು ತಪ್ಪಿದ ಘಟನೆ ಸೆ.1ರಂದು ರಾತ್ರಿ ಬೆಟ್ಟಂಪಾಡಿ ಗ್ರಾಮದ ರೆಂಜದಲ್ಲಿ ನಡೆದಿದೆ.

ಎರಡು ವಾರಗಳ ಹಿಂದೆ ಇರ್ದೆ ಸಮೀಪ ಪೊಲೀಸರು ನಡೆಸಿದ್ದ ಕಾರ್ಯಾಚರಣೆಯಲ್ಲಿ ಮಾರುತಿ ಒಮ್ನಿಯೊಂದರಲ್ಲಿ ಅಕ್ರಮವಾಗಿ, ಹಿಂಸಾತ್ಮಕವಾಗಿ ಹಸು ಮತ್ತು ಕರುವೊಂದನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಮಾಡಿ ಗುಮ್ಮಟಗದ್ದೆ ನಿವಾಸಿ ಬಾಲಕೃಷ್ಣ ಗೌಡ ಮತ್ತು ಆರ್ಲಪದವು ಮೂಸ ಎಂಬವರನ್ನು ಬಂಧಿಸಿ ಒಮ್ನಿ, ಹಸು, ಕರುವನ್ನು ವಶಕ್ಕೆಪಡೆದುಕೊಂಡಿದ್ದರು. ಆರೋಪಿಗಳು ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡ ನಂತರದ ಬೆಳವಣಿಗೆಯಲ್ಲಿ ಆರೋಪಿ ಮೂಸಾ ಅವರು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ ಹಸು ಮತ್ತು ಕರುವನ್ನು ತನಗೆ ಹಿಂತಿರುಗಿಸುವಂತೆ ಕೋರಿ ನ್ಯಾಯವಾದಿ ರಮ್ಲತ್ ಎಂ.ಅವರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಧೀಶರು ಹಸು,ಕರುವನ್ನು ಅರ್ಜಿದಾರನಿಗೆ ಹಿಂತಿರುಗಿಸಲು ಆದೇಶಿಸಿದ್ದರು.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಹಸು ಮತ್ತು ಕರುವನ್ನು ವಾಹನವೊಂದರಲ್ಲಿ ಸಾಗಿಸುತ್ತಿರುವ ವೇಳೆ ಬೆಟ್ಟಂಪಾಡಿ ಗ್ರಾಮದ ರೆಂಜದಲ್ಲಿ ವಾಹನವನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದಿದ್ದಾರೆ. ನ್ಯಾಯಾಲಯದ ಆದೇಶದಂತೆ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿ ನ್ಯಾಯಾಲಯದ ಆದೇಶದ ಪ್ರತಿಯನ್ನು ಅವರಿಗೆ ತೋರಿಸಿದರೂ ಪ್ರಾರಂಭದಲ್ಲಿ ಕಾರ್ಯಕರ್ತರು ವಾಹನವನ್ನು ತೆರಳಲು ಬಿಡಲಿಲ್ಲ. ಘಟನೆಯ ಕುರಿತು ಮಾಹಿತಿ ಹರಡುತ್ತಿದ್ದಂತೆಯೇ ಹಿಂದೂ, ಮುಸ್ಲಿಂ ಸಮುದಾಯದ ಜನರು ಸ್ಥಳದಲ್ಲಿ ಜಮಾಯಿಸಲು ಪ್ರಾರಂಭಿಸಿದ್ದರು.

ಈ ಸಂದರ್ಭದಲ್ಲಿ ಎರಡೂ ಸಮುದಾಯದವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಉದ್ವಿಗ್ನ ವಾತಾವರಣ ಸೃಷ್ಠಿಯಾಗಿತ್ತು. ನಂತರ ವಾಹನವನ್ನು ತೆರಳಲು ಕಾರ್ಯಕರ್ತರು ಅವಕಾಶ ನೀಡಿದರೂ ತೆರಳದೇ, ನಾವು ನ್ಯಾಯಾಲಯದ ಆದೇಶದಂತೆ ಹಸು ಮತ್ತು ಕರುವನ್ನು ಸಾಗಾಟ ಮಾಡುತ್ತಿದ್ದರೂ ನಮ್ಮನ್ನು ತಡೆದಿದ್ದು ಸಂಪ್ಯ ಠಾಣಾ ಎಸ್.ಐಯವರು ಬಂದ ಬಳಿಕವಷ್ಟೇ ನಾವು ತೆರಳುವುದಾಗಿ ಸಾಗಾಟಗಾರರು ಪಟ್ಟು ಹಿಡಿದರು. ಭಾರಿ ಸಂಖ್ಯೆಯಲ್ಲಿ ಎರಡೂ ಸಮುದಾಯದ ಜನರು ಜಮಾಯಿಸಿ ಮತ್ತಷ್ಟು ಉದ್ವಿಘ್ನ ಸ್ಥಿತಿಯ ಹಂತಕ್ಕೆ ಪರಿಸ್ಥಿತಿ ತಲುಪಿತ್ತು. ಘಟನೆಯ ಮಾಹಿತಿ ಪಡೆದ ಸಂಪ್ಯ ಠಾಣಾ ಎಸ್‌ಐ ಉದಯರವಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಜಮಾಯಿಸಿದ್ದ ಎರಡೂ ಸಮುದಾಯಗಳ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿ ಉದ್ವಿಗ್ನಗೊಂಡಿದ್ದ ಪರಿಸರವನ್ನು ಹತೋಟಿಗೆ ತಂದಿರುವುದಾಗಿ ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.