Breaking News

ಬಾಲ್ಯ ವಿವಾಹ ಪ್ರಕರಣಗಳು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ | ಪಾಲಕರು, ಕಲ್ಯಾಣ ಮಂಟಪ ಮುಖ್ಯಸ್ಥರು, ಪ್ರಿಂಟಿಂಗ್ ಪ್ರೆಸ್, ಧಾರ್ಮಿಕ ವಿಧಿ ನೆರವೇರಿಸಿದವರ ವಿರುದ್ಧವೂ ಕೇಸು

Puttur_Advt_NewsUnder_1
Puttur_Advt_NewsUnder_1
  • ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖಾ  ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್ಚರಿಕೆ
  • ವಿಧವೆಯರು ಪಿಂಚಣಿ ವಂಚಿತರಾಗಬಾರದು
  • ಶಾಲಾ,ಕಾಲೇಜು ಆರಂಭದ ಮೊದಲು ಸೌಕರ್ಯ ಪರಿಶೀಲಿಸಿ
  • ಲೇಡಿಗೋಷನ್ ಸಖಿ ಸೆಂಟರ್ ಪರಿಣಾಮಕಾರಿ ಕಾರ್ಯನಿರ್ವಹಿಸಬೇಕು
  • ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ 34 ವಿದ್ಯಾರ್ಥಿನಿಯರಿಗೆ 5 ಸಾವಿರ ರೂ.
  • ಗರಿಷ್ಠ ಹೆಣ್ಣು ಮಕ್ಕಳು ಜನಿಸಿದ ಗ್ರಾ.ಪಂ.ಗಳಿಗೆ ಪ್ರೋತ್ಸಾಹಧನ

ಮಂಗಳೂರು: ನಿಗದಿತ ಪ್ರಾಯ ತಲುಪುವ ಮೊದಲು ಮಕ್ಕಳಿಗೆ ವಿವಾಹ ನಡೆಸಿದರೆ ಅದರಲ್ಲಿ ತೊಡಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಎಚ್ಚರಿಕೆ ನೀಡಿದ್ದಾರೆ.

ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ವಿವಿಧ ಸಮಿತಿಗಳ ಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದರೆ ಮಕ್ಕಳ ಪಾಲಕರು, ಮದುವೆ ಹಾಲ್ ಅಥವಾ ಕಲ್ಯಾಣ ಮಂಟಪಗಳ ಮುಖ್ಯಸ್ಥರು, ಆಹ್ವಾನ ಪತ್ರಿಕೆ ಮುದ್ರಿಸಿದ ಪ್ರಿಂಟಿಂಗ್ ಪ್ರೆಸ್, ಧಾರ್ಮಿಕ ವಿಧಿವಿಧಾನ ನೆರವೇರಿಸಿದವರ ವಿರುದ್ಧವೂ ಕೇಸು ದಾಖಲಿಸಲಾಗುವುದು.ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಅಧಿಕಾರಿಗಳು ಅವಕಾಶ ನೀಡಬಾರದು. ಇಂತಹ ಮಾಹಿತಿ ಬಂದ ತಕ್ಷಣ ಅದನ್ನು ತಡೆಗಟ್ಟಬೇಕು ಎಂದು ಅವರು ತಿಳಿಸಿದರು.

ಬಂಟ್ವಾಳ, ಬೆಳ್ತಂಗಡಿ ತಾಲೂಕಿನಲ್ಲಿ ಬಾಲ್ಯ ವಿವಾಹ ಪ್ರಕರಣಗಳ ಮಾಹಿತಿ ಗಮನಕ್ಕೆ ಬಂದಿದೆ.ಸಂಬಂಧಪಟ್ಟ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರಿಂದ ಆಯಾ ವ್ಯಾಪ್ತಿಯಲ್ಲಿ ಮಾಹಿತಿ ಪಡೆದುಕೊಳ್ಳಬೇಕು.

ತಪ್ಪಿತಸ್ಥರ ವಿರುದ್ಧ ಕೇಸು ದಾಖಲಿಸಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿ, ಹೆಣ್ಣು ಮಕ್ಕಳು ಋತುಸ್ರಾವದ ಸಮಯದಲ್ಲಿ ಶುಚಿತ್ವ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಶುಚಿತ್ವವಿಲ್ಲದ ಅಭ್ಯಾಸಗಳಿಂದ ಉಂಟಾಗುವ ಸೋಂಕುಗಳಿಂದ ಶಾಲೆಗೆ ಗೈರಾಗುವುದನ್ನು ತಪ್ಪಿಸಲು ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮೂಡಿಸಬೇಕು ಎಂದರು.

ವಿಧವೆಯರು ಪಿಂಚಣಿ ವಂಚಿತರಾಗಬಾರದು: ಜಿಲ್ಲೆಯಲ್ಲಿ ವಿಧವೆಯರು ಪಿಂಚಣಿ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಜಿಲ್ಲೆಯ ಪ್ರತೀ ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ಪಡೆದು ಕೂಡಲೇ ವರದಿ ನೀಡಬೇಕು.ಸರಕಾರದಿಂದ ಪೂರೈಕೆ ಮಾಡಲಾದ ಸ್ಯಾನಿಟರಿ ಪ್ಯಾಡ್‌ಗಳನ್ನು ಎಲ್ಲಾ ಶಾಲಾ ಹೆಣ್ಣು ಮಕ್ಕಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವಿತರಿಸಿ ಅದರ ಮಾಹಿತಿಯನ್ನು ನೀಡಬೇಕು. ಜೊತೆಗೆ ಬಳಕೆಯಾದ ನಂತರ ಬಿಸಾಡಲು ಇರುವ ತ್ಯಾಜ್ಯ ಸಂಗ್ರಹಣಾ ತೊಟ್ಟಿ ಮತ್ತು ಸುಡುವಿಕೆ ಯಂತ್ರ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.

ಶಾಲಾ, ಕಾಲೇಜು ಪ್ರಾರಂಭದ ಮೊದಲು ಸೌಕರ್ಯಗಳ ಪರಿಶೀಲಿಸಿ: ಈ ವರ್ಷ ಶಾಲಾ ಕಾಲೇಜು ಪ್ರಾರಂಭವಾಗುವ ಮೊದಲು ಶಿಶು ಅಭಿವೃದ್ಧಿ ಅಧಿಕಾರಿಗಳು ಗ್ರಾಮೀಣ ಗುಡ್ಡಗಾಡು ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರ, ಶಾಲಾ ಕಾಲೇಜು, ವಸತಿ ನಿಲಯಗಳಲ್ಲಿ ಸರಿಯಾದ ಕಾಂಪೌಡ್, ಶೌಚಾಲಯ, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಇನ್ನಿತರ ಸೌಕರ್ಯಗಳು ಇದೆಯೇ ಎಂದು ಪರಿಶೀಲಿಸಿ ಮಾಹಿತಿ ನೀಡಬೇಕು ಎಂದು ಡಿಸಿ ಸೂಚನೆ ನೀಡಿದರು.

ಸಖಿ ಸೆಂಟರ್ ಪರಿಣಾಮಕಾರಿ ಕಾರ್ಯನಿರ್ವಹಿಸಬೇಕು: ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಸೌಲಭ್ಯ, ಪೊಲೀಸ್ ನೆರವು, ಆಪ್ತ ಸಮಾಲೋಚನೆ, ಕಾನೂನು ನೆರವು ಹಾಗೂ ತಾತ್ಕಾಲಿಕ ಆಶ್ರಯ ನೀಡಲು ೨೪*೭ ಕಾರ್ಯನಿರ್ವಹಿಸುವ ಸಲುವಾಗಿ ಜಿಲ್ಲಾ ಲೇಡಿಗೋಶನ್ ಆಸ್ಪತ್ರೆಯಲ್ಲಿ ತೆರೆಯಲಾದ `ಸಖಿ ಸೆಂಟರ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಡಾ.ರಾಜೇಂದ್ರ ಸೂಚಿಸಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ೫ ಸಾವಿರರೂ. ಪ್ರೋತ್ಸಾಹಧನ: ೨೦೧೯-೨೦ನೇ ಸಾಲಿನಲ್ಲಿ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ೩೪ ವಿದ್ಯಾರ್ಥಿನಿಯರಿಗೆ ತಲಾ ೫,೦೦೦ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ೨೦೧೯-೨೦ನೇ ಸಾಲಿನಲ್ಲಿ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿನಿಯರು ಪಿಯುಸಿ ವಿದ್ಯಾಭ್ಯಾಸ ಮುಂದುವರಿಸಿರುವ ೩೪ ಪ್ರೌಢಶಾಲೆಗಳಿಗೆ ೫,೦೦೦ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಗರಿಷ್ಠ ಹೆಣ್ಣು ಮಕ್ಕಳು ಜನಿಸಿದ ಜಿಲ್ಲೆಯ ೫ ಗ್ರಾಪಂಗಳಿಗೆ ತಲಾ ೫,೦೦೦ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಮಹಿಳಾ ಶಕ್ತಿ ಕೇಂದ್ರದ ಮೂಲಕ ಗೊಂಚಲು ಕಾರ್ಯಕ್ರಮ ಹಾಗೂ ಇನ್ನಿತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಬೇರೆ ಬೇರೆ ರಾಜ್ಯದ ಮಕ್ಕಳು ಬಾಲಕಾರ್ಮಿಕರಾಗಿ ವಿವಿಧ ಕೆಲಸಗಳಲ್ಲಿ ದುಡಿಯುತ್ತಿದ್ದಾರೆ. ಇದನ್ನು ತಡೆಯಬೇಕು. ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ದತ್ತು ಮಕ್ಕಳನ್ನು ಪಡೆದುಕೊಳ್ಳುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.