ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ ವಿಶಾಲ ಜಾಗ

Puttur_Advt_NewsUnder_1
Puttur_Advt_NewsUnder_1
  • ಪರಿಸರ ವೀಕ್ಷಣೆಗೆ ಬರುವವರಿಂದ ಗುಡ್ಡಗಳ ನೈಜತೆಗೆ ಹಾನಿ-ಆರೋಪ

ಕಡಬ: ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕೊಲದಲ್ಲಿ ಕಾಣಸಿಗುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ(ಕೆ.ಸಿ.ಫಾರಂ)ಕ್ಕೆ ಸೇರಿದ ವಿಶಾಲವಾದ ಜಾಗ ಈ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಈ ಸುಂದರ ತಾಣ ಈ ರಸ್ತೆಯಲ್ಲಿ ಸಂಚರಿಸುವ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತೆ ಇದೆ. ಸುಮಾರು ೭೧೦ ಎಕ್ರೆಯಷ್ಟು ವ್ಯಾಪ್ತಿಯಲ್ಲಿರುವ ಈ ವಿಶಾಲ ಜಾಗದಲ್ಲಿರುವ ಸಾಲು ಸಾಲು ಗುಡ್ಡಗಳಿಗೆ ಪ್ರಕೃತಿಯ ಹಚ್ಚ ಹಸಿರಿನ ಹೊದಿಕೆಯಂತೂ ನೋಡುಗರ ಕಣ್ಮನ ಸೆಳೆಯುತ್ತಿದೆ. ಮುಂಗಾರು ಮಳೆಯ ಇಳೆಗೆ ಬಿದ್ದು ತಂಪೆರಗಿದಾಗ ಬೆಳೆಯುವ ಹಸಿರು ಹುಲ್ಲಿನಿಂದ ಸುಂದರವಾಗಿ ಕಂಗೋಳಿಸುವ ಇಲ್ಲಿನ ಜಾಗ ಹಾಗೂ ಮನೋಹರ ಪರಿಸರವನ್ನು ದುರ್ಬಳಕೆ ಮಾಡಿಕೊಂಡು ಹಾಳುಗೆಡವುತ್ತಿದ್ದಾರೆ ಎನ್ನುವ ಆರೋಪ ವ್ಯಕ್ತವಾಗುತ್ತಿದೆ.

ಇಲ್ಲಿನ ಗುಡ್ಡದಲ್ಲಿ ಅಲ್ಲಲ್ಲಿ ಸಿಗುವ ಖಾಲಿಯಾದ ಬೀಯರ್ ಬಾಟಲ್‌ಗಳು, ಒಡೆದ ಗ್ಲಾಸಿನ ಚೂರುಗಳು, ಇನ್ನಿತರ ಅನೈತಿಕ ಚಟುವಟಿಕೆಗೆ ಬಳಕೆಯಾಗುವ ವಸ್ತುಗಳು ಪ್ರವಾಸಿಗರು ಈ ಹಚ್ಚ ಹಸಿರಿನ ಹುಲ್ಲು ಗಾವಲು ಪ್ರದೇಶವನ್ನು ಹಾಳುಗೆಡುವುತ್ತಿರುವುದಕ್ಕೆ ಸಿಗುವ ಸಾಕ್ಷಿಗಳಾಗಿವೆ. ಗುಡ್ಡದ ಅಂದವನ್ನು ಸವಿಯಲು ಬರುವ ಮಂದಿ ಈಗ ಈ ಜಾಗವನ್ನು ರೇವು ಪಾರ್ಟಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗುಡ್ಡದ ನೈಜತೆಯನ್ನು ಹಾಳುಗೆಡುವುತ್ತಿರುವುದು ಈ ಭಾಗದ ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೂ ಕಾರಣವಾಗಿದೆ.

ಇಲ್ಲಿನ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ರಾಜ್ಯದಲ್ಲೇ ಹೆಸರು ಪಡೆದಿತ್ತು. ಅಂದಾಜು ೯೫೦ ಎಕ್ರೆಯಷ್ಟು ವಿಶಾಲವಾದ ಜಾಗವಿದೆ. ಇದರಲ್ಲಿ ಅಂದಾಜು ೨೫೭ ಎಕ್ರೆ ಜಾಗ ಪಶುವೈದ್ಯಕೀಯ ಕಾಲೇಜಿಗೆ ಮಂಜೂರಾಗಿದ್ದು ಇಲ್ಲಿ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಕೆ.ಸಿ.ಫಾರಂ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಇಲ್ಲಿನ ಪರಿಸ್ಥಿತಿ ಈಗ ಆಯೋಮಯವಾಗಿದೆ. ದನ, ಕರು, ಎಮ್ಮೆ, ಕೋಣ, ಹಂದಿ, ಕೋಳಿ ಮುಂತಾದುವುಗಳನ್ನು ಇಲ್ಲಿ ಸಾಕಾಣಿಕೆ ಮಾಡಲಾಗುತ್ತಿದೆ. ಕಛೇರಿ ಸುತ್ತಮುತ್ತ ಕಟ್ಟಡಗಳು ಇವೆ. ಬಳಿಕ ಎಲ್ಲವೂ ಗುಡ್ಡ ಪ್ರದೇಶಗಳು, ಜಾನುವಾರುಗಳ ಮೇವಿಗಾಗಿ ಇರುವಂತದ್ದು. ಮಳೆಗಾಲ ಆರಂಭದಿಂದ ವರ್ಷಾಂತ್ಯದವರೆಗೆ ಈ ಗುಡ್ಡಗಳು ಹಚ್ಚ ಹಸಿರಿನಿಂದ ಕೂಡಿರುತ್ತದೆ. ಸುಂದರ ಪರಿಸರವನ್ನು ಸವಿಯಲು ದೂರದೂರಿನಿಂದ ಜನರು ಅದರಲ್ಲೂ ಯುವ ಜನತೆ ಹೆಚ್ಚಾಗಿ ಆಗಮಿಸುತ್ತಾರೆ. ಪ್ರತಿದಿನ ಸಾಯಂಕಾಲ ಮತ್ತು ರಜಾ ದಿನಗಳಲ್ಲಿ ಜನ ಸಂದನಿಯೇ ಇರುತ್ತದೆ.

ಬೇಲಿಯೇ ಮಾಯ: ಈ ಹಿಂದೆ ಫಾರಂನ ಸುತ್ತ ಮಣ್ಣು ಅಗೆದು ಬೇಲಿ ಹಾಕಲಾಗಿತ್ತು. ಇದೀಗ ಗಂಡಿಬಾಗಿಲು, ಆನೆಗುಂಡಿ ಮೊದಲಾದ ಕಡೆಗಳಲ್ಲಿ ಈ ಬೇಲಿಯನ್ನೇ ಕಿತ್ತು ಎಲ್ಲಿಂದಲೋ ಬರುವ ಜನರು ಒಳ ಪ್ರವೇಶಿಸುತ್ತಾರೆ. ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಕುಲನಗರ ಎಂಬಲ್ಲಿ ಈ ಇಲಾಖಾ ಜಾಗಕ್ಕೆ ಪ್ರವೇಶ ದ್ವಾರವೊಂದಿದ್ದು ಈ ಹಿಂದೆ ಇಲ್ಲಿ ಕಾವಲುಗಾರ ಇರುತ್ತಿದ್ದರು. ಅಲ್ಲದೆ ಒಳ ಹಾಗೂ ಹೊರ ಹೋಗಲು ಸಮಯ ನಿಗದಿಪಡಿಸಲಾಗಿತ್ತು. ಇದೀಗ ಯಾವುದೂ ಇಲ್ಲಿಲ್ಲ. ಈ ಹಿಂದೆ ಇದ್ದ ಗೇಟಿನ ಪಕ್ಕದಲ್ಲೇ ಇನ್ನೊಂದು ಸುಂದರವಾದ ಗೇಟು ನಿರ್ಮಾಣವಾಗಿದೆ. ಈ ಗೇಟು ಸದಾ ತೆರದಿರುತ್ತೆ. ಇಲ್ಲಿ ಯಾರೂ ಕೇಳುವವರಿಲ್ಲದಂತಾಗಿದೆ. ರಜಾ ದಿನ ಬಂದರೆ ಸಾಕು, ಇಲ್ಲಿಗೆ ದೂರದೂರಿನ ಯುವ ಜನತೆ ಮೋಜುಮಸ್ತಿಗೆ ಗುಡ್ಡಗಳಿಗೆ ಆಗಮಿಸುತ್ತಾರೆ. ತಾವು ಬಂದ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ, ತಿಂಡಿ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ, ಕುಡಿದು ಮದ್ಯ ಬಾಟಲಿಗಳನ್ನು ಹುಡಿ ಮಾಡಿ ಮೋಜು ಮಸ್ತಿಯಲ್ಲಿ ತೊಡಗಿರುತ್ತಾರೆ, ಫಾರಂನ ಬಳಕೆಯಲ್ಲಿರುವ ನೀರಿನ ಟ್ಯಾಂಕಿಗಳಿಗೆ ಕಸಕಡ್ಡಿಗಳನ್ನು ಹಾಕುತ್ತಾರೆ. ಪ್ರಶ್ನಿಸಲು ಹೋದ ಸಿಬ್ಬಂದಿಯನ್ನು ದಬಾಯಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಈ ಭಾಗದಲ್ಲಿ ನಡೆದಾಡುವ ಮಹಿಳೆಯರು, ಮಕ್ಕಳಿಗೆ ಅಸಹ್ಯವೆನಿಸಿದೆ ಎಂಬ ದೂರುಗಳು ಬರುತ್ತಿವೆ.

ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕೊಲ, ವಳಕಡಮ ಸರ್ಕಾರಿ ಶಾಲೆಗಳನ್ನು , ಪ್ರಮುಖ ಪೇಟೆಗಳನ್ನು ಸಂಪರ್ಕಿಸಲು ನೂರಾರು ಮಂದಿ ಇಲಾಖಾ ಜಾಗದ ಮೂಲಕ ಹಾದು ಹೋಗಿರುವ ದಾರಿಗಳನ್ನು, ರಸ್ತೆಯನ್ನು ಆಶ್ರಯಿಸಿದ್ದಾರೆ. ರಜಾ ದಿನಗಳಲ್ಲಿ ಇಲ್ಲಿಗೆ ಪ್ರವಾಸಿಗರ ಸೋಗಿನಲ್ಲಿ ಗುಡ್ಡಗಳಿಗೆ ಬರುವ ಪಡ್ಡೆಗಳ ಅಸಹ್ಯ ವರ್ತನೆಗಳು ಈ ಸಭ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.

ಯುವಜನತೆಯ ಮಜಾ ಉಡಾಯಿಸುವ ತಾಣವಾಗಿ ಮಾರ್ಪಟ್ಟಿರುವ ಫಾರಂ ಗುಡ್ಡದ ಮೂಲ ಆಸ್ತಿತ್ವ್ವವನ್ನು ಉಳಿಸಿಕೊಳ್ಳಬೇಕು. ಇಲ್ಲೊಂದು ಪೊಲೀಸ್ ಹೊರ ಠಾಣೆಯನ್ನು ನಿರ್ಮಿಸಿ ಭದ್ರತೆ ಒದಗಿಸಬೇಕು . ಇದಕ್ಕಾಗಿ ಸಂಬಂದಪಟ್ಟವರು ಗಮನಹರಿಸಬೇಕು ಹೇಮಾ ಎಂ ಶೆಟ್ಟಿ, ಮಾಜಿ ಅಧ್ಯಕ್ಷೆ , ಗ್ರಾ.ಪಂ, ಕೊಯಿಲ

ಮದುವೆ ಫೋಟೋಶೂಟ್, ಮೋಜು ಮಸ್ತಿಗೆ ಬರುವವರು ಇಲ್ಲಿನ ವಿಶಾಲ ಜಾಗದ ವಿಡಿಯೋ ಶೂಟಿಂಗ್ ಮಾಡಿ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿರುವುದರಿಂದ ಇನ್ನಷ್ಟೂ ಜನರು ಇಲ್ಲಿಗೆ ಬರುವಂತೆ ಮಾಡುತ್ತಿದ್ದಾರೆ. ಪ್ಲಾಸಿಕ್ ಕವರ್ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಎಸೆಯುತ್ತಿದ್ದಾರೆ. ಇದನ್ನು ಇಲ್ಲಿನ ಜಾನುವಾರು ತಿಂದು ರೋಗ ಬರುವಂತೆ ಮಾಡುತ್ತಿದ್ದಾರೆ. ವೀಕೆಂಡ್‌ಗಳಲ್ಲಿ ಇಲ್ಲಿಗೆ ಯುವ ಜನತೆ ಮೋಜು ಮಸ್ತಿಗಾಗಿ ಬರುತ್ತಿದ್ದಾರೆ. ಸರಕಾರದ ಸೊತ್ತು ಹಾನಿಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು -ಪ್ರದೀಪ್ ಕೊಯಿಲ, ಸಾಮಾಜಿಕ ಕಾರ್ಯಕರ್ತ

ಹೊರಠಾಣೆಗೆ ಮನವಿ:
ಪರಿಸರವನ್ನು ವೀಕ್ಷಿಸಲು ಬರುವ ನೆಪದಲ್ಲಿ ಜನರು ಗುಡ್ಡಗಳ ನೈಜತೆಯನ್ನು ಹಾಳುಗಡವುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಗುಡ್ಡಕ್ಕೆ ಬರುವ ಮಂದಿಯನ್ನು ತೆರಳಲು ಸೂಚಿಸಿದರೆ ನಮ್ಮ ಮೇಲೆಯೇ ಎರಗಿ ಬೀಳುತ್ತಾರೆ. ಭದ್ರತೆ ಒದಗಿಸುವ ಸಲುವಾಗಿ ಕೊಲದಲ್ಲಿ ಪೊಲೀಸ್ ಹೊರಠಾಣೆ ನಿರ್ಮಿಸಿ ಎಂದು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ. ಅಲ್ಲದೆ ಇಲಾಖಾ ಜಾಗದ ಸುತ್ತ ಬೇಲಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಡಾ. ಹೆನ್ರಿ ರೊನಾಲ್ಡ್, ಉಪನಿರ್ದೆಶಕರು, ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಕೊಯಿಲ

About The Author

Related posts

1 Comment

  1. Sudarshan

    ಬೆಸಗೆಯಲ್ಲಿ ಇಲ್ಲಿ ಹುಲ್ಲಿನ ಭಣಕ್ಕೆ ಬೆಂಕಿ ಹಾಕಿ ಲಕ್ಷಾಂತರ ಹಣ ಗೋಲ್ ಮಾಡುತ್ತಾರೆ. ಇದನ್ನು ಕೇಳುವವರು ಯಾರೂ ಇಲ್ಲ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.