Breaking News

ಮೈಗ್ರೇನ್ ತಲೆನೋವನ್ನೂ ವಾಸಿಮಾಡುತ್ತದೆ ಈ ಗಿಡ..! ಮನೆಯಂಗಳದಲ್ಲಿದ್ದರೂ ನಮಗೆ ಬೇಡವಾಗಿದೆ ಈ ಸಂಜೀವಿನಿ…..

Puttur_Advt_NewsUnder_1
Puttur_Advt_NewsUnder_1

✍️ಕುಂಸಿ

ನೀರ್ ಕಡ್ಡಿ… ಈ ಗಿಡದ ಪರಿಚಯ ಇಲ್ಲದವರು ಬಹಳ ಅಪರೂಪ ಎಂದರೂ ತಪ್ಪಾಗಲಾರದು ಆಧುನಿಕ ಯುವ ಪೀಳಿಗೆಗೆ ಇದರ ಪರಿಚಯ ಅಷ್ಟೇನು ಇಲ್ಲದೇ ಇರಬಹುದು ಆದರೆ ಮಧ್ಯ ವಯಸ್ಕರಿಗೆ ಇದರ ಬಗ್ಗೆ ಗೊತ್ತೇ ಇದೆ ಯಾಕೆಂದರೆ ಈ ಗಿಡವನ್ನು ಶಾಲೆಗೆ ಹೋಗುವಾಗ ಶಾಲೆಯ ಚೀಲದಲ್ಲಿ ಹಾಕಿಕೊಳ್ಳದೆ ಹೋದವರೇ ಇಲ್ಲ ಎಂದರೂ ತಪ್ಪಾಗಲಾರದು.

ಹಿಂದೆ ಶಾಲೆಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿ ತನಕ ಸ್ಲೇಟಲ್ಲೇ ಬರೆಯಬೇಕಿತ್ತು. ಕಡ್ಡಿಯನ್ನು ಬಳಸಿ ಸ್ಲೇಟಲ್ಲಿ ಬರೆಯಬೇಕಿತ್ತು. ಎಲ್ಲಾ ವಿಷಯಗಳಿಗೂ ಸ್ಲೇಟನ್ನೇ ಬಳಸುತ್ತಿದ್ದರು. ಸ್ಲೇಟ್ ಉಜ್ಜಲು ಬಟ್ಟೆಯ ಜೊತೆ ನೀರ್ ಕಡ್ಡಿಯನ್ನು ಬಳಸುತ್ತಿದ್ದರು. ನೀರು ಕಡ್ಡಿಯಲ್ಲಿ ಸ್ಲೇಟ್ ಉಜ್ಜಿದರೆ ಸ್ಲೇಟ್ ಚಂದವಾಗುತ್ತದೆ ಮತ್ತು ಸ್ಲೇಟ್ ಹೆಚ್ಚು ಬಾಳಿಕೆ ಬರುತ್ತದೆ ಎಂದು ನೀರ್ ಕಡ್ಡಿ ಅಂದಿನ ಕಾಲದಲ್ಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗಿಡವಾಗಿತ್ತು… ಈ ಗಿಡವನ್ನು ಸ್ಲೇಟ್ ಉಜ್ಜಲು ಬಳಸಿದರೇ ವಿನ ಅದರ ಔಷಧೀಯ ಗುಣವನ್ನು ತಿಳಿಯುವ ಕೆಲಸವನ್ನು ಯಾರೂ ಮಾಡಿಲ್ಲ ಎಂದರೂ ಅತಿಶಕಯೋಕ್ತಿಯೆನಿಸದು..

ಮೈಗ್ರೇನ್ ತಲೆನೋವನ್ನು ಶಮನಗೊಳಿಸುತ್ತದೆ
ನೀರ್ ಕಡ್ಡಿ ಮಳೆಗಾಲದಲ್ಲಿ ಮಾತ್ರ ಹೆಚ್ಚಾಗಿ ಕಂಡು ಬರುತ್ತದೆ. ಉಳಿದ ದಿನಗಳಲ್ಲಿ ನೀರಿನ ತೇವಾಂಶ ಹೆಚ್ಚು ಇದ್ದ ಕಡೆಗಳಲ್ಲಿ ಬೇಸಿಗೆಯಲ್ಲೂ ಇರುತ್ತದೆ. ಈ ಗಿಡದ ಕಾಂಡ ನೀರು ತುಂಬಿಕೊಂಡಿರುತ್ತದೆ. ಪಾರದರ್ಶಕವಾದ ಕಾಂಡವನ್ನು ಹೊಂದಿರುವ ಈ ಗಿಡ ವೀಳ್ಯದೆಲೆ, ಕರಿಮೆಣಸು ಜಾತಿಗೆ ಸೇರಿದ ಗಿಡ ಆಂಗ್ಲ ಭಾಷೆಯಲ್ಲಿ ಇದಕ್ಕೆ ಪೆಪರೋಮಿಯ ಸ್ಪೆಲ್ಲಸಿಡ್ ಎಂದು ಕರೆಯುತ್ತಾರೆ. ಈ ಗಿಡದ ಎಲೆ ಪರಿಮಳದಿಂದ ಕೂಡಿರುತ್ತದೆ. ಇದರ ಎಲೆಯನ್ನು ಮೈಗ್ರೇನ್ ತಲೆನೋವು ಇದ್ದವರು ತಿಂದರೆ ತಲೆನೋವು ಕಡಿಮೆಯಾಗುತ್ತದೆ ಎಂಬುದು ಆಯುರ್ವೇದ ವೈದ್ಯರು ಹೇಳುತ್ತಾರೆ.

ಸಾರು ಮಾಡುತ್ತಾರೆ
ಗಿಡವನ್ನು ಸಾರು ಮಾಡುತ್ತಾರೆ. ಮೊಸರು ಬಳಸಿ ತಂಬೂಲಿ ಮಾಡುವವರೂ ಇದ್ದಾರೆ. ಇದರಲ್ಲಿ ದೇಹಕ್ಕೆ ಶಕ್ತಿಕೊಡುವ ಔಷಧೀಯ ಗುಣಗಳು ಇರುವುದರಿಂದ ಇದನ್ನು ಬಲ್ಲವರು ಇದನ್ನು ಸಾರು ಮಾಡಿ ಬಳಸುತ್ತಾರೆ.

ಲ್ಯಾಬ್‌ನಲ್ಲಿ ಬಳಕೆ
ಪ್ರಾಥಮಿಕ ಶಾಲೆಯಲ್ಲಿ ಗಿಡಗಳ ಬಗ್ಗೆ ಮಕ್ಕಳಿಗೆ ಪಾಠ ಮಾಡುವ ವೇಳೆ ಗಿಡಗಳು ನೀರನ್ನು ಹೀರಿಕೊಳ್ಳುವ ವಿಧಾನವನ್ನು ತಿಳಿಸಲು ನೀರ್‌ಕಡ್ಡಿ ಗಿಡವನ್ನು ಬಳಕೆ ಮಾಡುತ್ತಾರೆ. ನೀರಿಗೆ ಶಾಹಿ ಅಥವಾ ಬೇರೆ ಬಣ್ಣವನ್ನು ಮಿಕ್ಸ್ ಮಾಡಿ ಗಿಡವನ್ನು ನೀರಿಗೆ ಇಟ್ಟಲ್ಲಿ ಅದು ಹೀರಿಕೊಳ್ಳುವುದು ಗಿಡದಲ್ಲಿ ಸ್ಪಷ್ಟವಾಗಿ ಗೋಚರಿಸುವ ಕಾರಣ ಇದನ್ನು ಪ್ರಾಥಮಿಕ ಶಾಲೆಯ ಲ್ಯಾಬ್‌ಗಳಲ್ಲಿ ಬಳಸುತ್ತಾರೆ. ಒಟ್ಟಿನಲ್ಲಿ ನೀರ್ ಕಡ್ಡಿ ಮಳೆಗಾಲದಲ್ಲಿ ಹುಟ್ಟಿ ಮಳೆ ಮುಗಿದಾಗ ಸತ್ತು ಹೋಗುವುದರ ನಡುವೆ ಮಾನವನಿಗೆ ಪ್ರಕೃತಿಯಲ್ಲೇ ಅನೇಕ ಕೊಡುಗೆಗಳನ್ನು ನೀಡುತ್ತಲೇ ಇರುತ್ತದೆ ಆದರೆ ಆಧುನಿಕ ಯುಗದ ನಮಗೆ ಈ ಗಿಡ ಬೇಕಾಗಿಲ್ಲ ಅಥವಾ ಅದರ ಅವಶ್ಯಕತೆಯೂ ಇಲ್ಲ ಎಂಬದಂತೆ ನಮ್ಮ ವರ್ತನೆ ಇದೆ. ಯಾರು ಏನೇ ಹೇಳಿದರೂ ಪ್ರಕೃತಿಯಲ್ಲಿರುವ ಪ್ರತೀಯೊಂದು ಗಿಡವೂ ಮಾನವನಿಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕಾರಿ ಎಂಬುದರಲ್ಲಿ ಅನುಮಾನವೇ ಇಲ್ಲ.

ನೀರ್‌ಕಡ್ಡಿ ಗಿಡ ಮಳೆಗಾಲದಲ್ಲಿ ಹುಟ್ಟಿ ಮಳೆಗಾಲ ಮುಗಿಯುವುದರೊಳಗೆ ಸತ್ತು ಹೋಗುತ್ತದೆ. ಇದು ಒಂದು ರೀತಿಯಲ್ಲಿ ಸಂಜೀವಿನಿ ಗಿಡ ಎಂದರೂ ತಪ್ಪಾಗದು. ಇದರ ಎಲೆಯನ್ನು ಔಷಧವಾಗಿ ಬಳಸಿದರೆ ಕಾಂಡವನ್ನು ಸಾರು ಮಾಡಲು ಬಳಕೆ ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಸ್ಲೇಟ್ ಉಜ್ಜಲು ಮಕ್ಕಳು ಬಳಕೆ ಮಾಡುತ್ತಿರುವುದು ಇದರಲ್ಲಿರುವ ದಾರಾಳ ನೀರಿನ ಅಂಶದ ಕಾರಣಕ್ಕೆ. ನೀರ್ ಕಡ್ಡಿ ಬಹುಪಯೋಗಿ ಗಿಡವಾಗಿದೆ – ಗಣರಾಜ್ ಭಟ್, ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರು ವಿವೇಕಾನಂದ ಕಾಲೇಜು, ಪುತ್ತೂರು

ನೀರ್‌ಕಡ್ಡಿ ಗಿಡದಲ್ಲಿ ಔಷಧೀಯ ಗುಣವಿದೆ. ಎಲೆಯಲ್ಲಿ ವಿಶೇಷ ಔಷಧೀಯ ಗುಣವಿರುವ ಕಾರಣ ತಲೆನೋವು ಇದ್ದರೆ ತಿನ್ನಬಹುದು ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ. ಗಿಡವನ್ನು ಕತ್ತರಿಸಿ ಸಾರು ಮಾಡಬಹದು ಇದು ಆರೋಗ್ಯಕ್ಕೆ ಉತ್ತಮವೂ ಆಗಿದೆ – ಡಾ. ಬಾಲಕೃಷ್ಣ ಗೌಡ ಡೆಚ್ಚಾರ್, ಆಯುರ್ವೆಧ ವೈದ್ಯರು, ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.