ತನ್ನ ಅಂಗಡಿಗೆ ತಾನೇ ಬೆಂಕಿ ಹಚ್ಚಿದ ಅಂಗಡಿ ಮಾಲಕ…! ಈಶ್ವರಮಂಗಲದಲ್ಲಿ ನಡೆಯಿತೊಂದು ವಿಚಿತ್ರ ಘಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತಾನು ವ್ಯಾಪಾರ ಮಾಡುತ್ತಿದ್ದ ಅಂಗಡಿಗೆ ಅದರ ಮಾಲಕನೇ ಬೆಂಕಿ ಹಚ್ಚಿ ಅಂಗಡಿಯೊಳಗಿನ ಸಾಮಾಗ್ರಿಗಳನ್ನು ಸುಟ್ಟು ಭಸ್ಮ ಮಾಡಿದ ವಿಚಿತ್ರ ಘಟನೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪಂಚೋಡಿ ಮಾವಿನಕಟ್ಟೆ ಎಂಬಲ್ಲಿ ಸೆ.7ರಂದು ಮಧ್ಯಾಹ್ನ ನಡೆದಿದೆ. ಘಟನೆ ಸ್ಥಳೀಯರಲ್ಲಿ ಅಚ್ಚರಿಯನ್ನು ಮೂಡಿಸಿದೆ.

ಮಾವಿನಕಟ್ಟೆ ನಿವಾಸಿ ಮಹಮ್ಮದ್ ತನ್ನ ಅಂಗಡಿಗೆ ಬೆಂಕಿ ಹಚ್ಚಿದವರು. ಕಳೆದ ನಾಲ್ಕು ವರ್ಷಗಳಿಂದ ಇದೇ ಗೂಡಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಇವರು ಲಾಕ್‌ಡೌನ್ ಬಳಿಕ ಕಳೆದ ಎರಡು ತಿಂಗಳಿನಿಂದ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಅಂಗಡಿಯಲ್ಲಿ ಸ್ಟೇಶನರಿ ಸಾಮಾಗ್ರಿ ಮತ್ತು ಚಹಾ ಹೊಂದಿರುವ ಸಣ್ಣ ಕ್ಯಾಂಟೀನ್ ಕೂಡಾ ಅದರೊಳಗಿತ್ತು. ಸೆ.7ರಂದು ಬೆಳಿಗ್ಗೆ ಎಂದಿನಂತೆ ಮಹಮ್ಮದ್‌ರವರು ಅಂಗಡಿ ಬಾಗಿಲು ತೆರೆದಿದ್ದರು. ಮಧ್ಯಾಹ್ನ ಆಗುತ್ತಲೇ ಅಂಗಡಿಯೊಳಗಿನಿಂದ ಹೊರಗೆ ಬಂದು ತನ್ನ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಅಂಗಡಿಯೊಳಗೆ ಬೆಂಕಿ ಹಾಕುತ್ತಿರುವ ದೃಶ್ಯವನ್ನು ಸ್ಥಳೀರು ನೋಡಿದ್ದಾರೆ. ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸಲು ಅಂಗಡಿಯತ್ತ ಧಾವಿಸಿದ್ದು ಆ ವೇಳೆ ಬೆಂಕಿ ನಂದಿಸದಂತೆ ಮಾಲಕ ಮಹಮ್ಮದ್‌ರವರು ತಡೆದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನನ್ನ ಅಂಗಡಿ ನಾನು ಏನು ಬೇಕಾದ್ರೂ ಮಾಡುತ್ತೇನೆ…!
ಬೆಂಕಿ ನಂದಿಸಲು ಅಂಗಡಿ ಕಡೆ ಬಂದ ಸ್ಥಳೀಯರನ್ನು ತಡೆದು ನಿಲ್ಲಿಸಿದ ಮಹಮ್ಮದ್ ನನ್ನ ಅಂಗಡಿ ನಾನು ಏನು ಬೇಕಾದ್ರೂ ಮಾಡುತ್ತೇನೆ, ಬೆಂಕಿ ಹಚ್ಚಿದ್ದೇನೆ, ಸುಟ್ಟು ಭಸ್ಮವಾಗಲಿ ನಿಮಗೇನು..? ಎಂದು ಹೇಳಿ ತಡೆದು ಅಂಗಡಿ ಹೊತ್ತಿ ಉರಿಯುತ್ತಿದ್ದಂತೆ ನೇರವಾಗಿ ಮನೆ ಕಡೆ ತೆರಳಿದ್ದಾರೆ. ಆದರೆ ಸ್ಥಳೀಯರು ಮಹಮ್ಮದ್ ಮನೆಗೆ ತೆರಳಿದ ಬಳಿಕ ಅಂಗಡಿಯೊಳಗಿನ ಬೆಂಕಿಯನ್ನು ನಂದಿಸಿರುವುದಾಗಿ ತಿಳಿದು ಬಂದಿದೆ. ಈ ವೇಳೆಗೆ ಸ್ಥಳೀಯರು ಪೊಲೀಸರಿಗೂ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸ್ ಠಾಣಾ ಎಎಸ್ಸೈ ತಿಮ್ಮಯ್ಯ ಗೌಡ, ಈಶ್ವರಮಂಗಲ ಹೊರಠಾಣಾ ಪೊಲೀಸ್ ಸಿಬ್ಬಂದಿಗಳಾದ ಬಸವರಾಜ್, ಪ್ರಶಾಂತ್ ಮತ್ತಿತರರು ಆಗಮಿಸಿ ಬೆಂಕಿ ನಂದಿಸಲು ಸಹಕಾರ ನೀಡಿದರು.

ಅವಘಡದಿಂದ ಅಂಗಡಿಯೊಳಗಿದ್ದ ಸುಮಾರು ರೂ. ೧೫ ಸಾವಿರಕ್ಕೂ ಮಿಕ್ಕಿ ಸ್ಟೇಶನರಿ ಸಾಮಾಗ್ರಿಗಳು ಸುಟ್ಟು ಭಸ್ಮವಾಗಿದೆ. ಅಂಗಡಿಯೊಳಗೆ ಚಹಾ ಮಾಡಲು ಇಟ್ಟಿದ್ದ ಸ್ಟೌವ್‌ನ ಸಣ್ಣ ಗಾತ್ರದ ಸಿಲಿಂಡರ್ ಬೆಂಕಿಗೆ ಆಹುತಿಯಾಗಿ ಸ್ಪೋಟಗೊಂಡಿದ್ದರೂ ಯಾವುದೇ ಹೆಚ್ಚಿನ ಅನಾಹುತ ಉಂಟಾಗಿಲ್ಲ. ಅಂಗಡಿಯ ಮಾಡು ಹೊರತುಪಡಿಸಿ ಉಳಿದೆಲ್ಲವೂ ಬೆಂಕಿಗೆ ಆಹುತಿಯಾಗಿದೆ.

ಸಾಬೂನಿಗೆ ಬಂದ ಹುಡುಗನನ್ನು ವಾಪಸ್ ಕಳಿಸಿದ್ದರು…!
ಮಹಮ್ಮದ್‌ರವರು ತನ್ನ ಅಂಗಡಿಗೆ ಬೆಂಕಿ ಕೊಡುವ ಐದು ನಿಮಿಷ ಮೊದಲು ಬಾಲಕನೊಬ್ಬ ಸಾಬೂನಿಗೆಂದು ಅಂಗಡಿಗೆ ಬಂದಿದ್ದ. ಅಂಗಡಿಯಲ್ಲಿ ಸಾಬೂನು ಇದ್ದರೂ ಬಾಲಕನಲ್ಲಿ `ನಿನಗೆ ಈಗ ಸಾಬೂನು ಬೇಡ, ಮತ್ತೆ ನೋಡುವ’ ಎಂದು ಹೇಳಿ ಬಾಲಕನನ್ನು ವಾಪಸ್ ಕಳಿಸಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ. ಬಾಲಕ ಅಂಗಡಿಯಿಂದ ಮೀಟರ್ ದೂರ ತೆರಳಿದಾಗ ಅಂಗಡಿಯೊಳಗಿನಿಂದ ಬಂದ ಮಹಮ್ಮದ್‌ರವರು ತನ್ನ ಅಂಗಡಿಗೆ ಬೆಂಕಿ ಹಚ್ಚಿದ್ದರು. ಈ ದೃಶ್ಯವನ್ನು ಸ್ಥಳೀಯರು ಕಣ್ಣಾರೆ ಕಂಡಿದ್ದಾರೆ.

ಯಾಕೆ ಹೀಗೆ ಮಾಡಿದ್ರು….
ತನ್ನ ಬದುಕಿನ ಆಧಾರ ಸ್ಥಂಭವಾಗಿದ್ದ ಗೂಡಂಗಡಿಗೆ ಮಹಮ್ಮದ್‌ರವರು ಯಾಕೆ ಬೆಂಕಿ ಹಚ್ಚಿದರು ಎಂಬುವುದು ಯಾರಿಗೂ ಗೊತ್ತಿಲ್ಲ. ಎಲ್ಲರೊಡನೆ ಉತ್ತಮ ಒಡನಾಟದಲ್ಲಿರುವ ಇವರು ಈ ಹಿಂದೆ ಒಣ ಮೀನು ಲೈನ್ ಸೇಲ್ ವಾಪಾರ ಮಾಡುತ್ತಿದ್ದರು. ಬಳಿಕ ಲೈನ್ ಸೇಲ್ ವ್ಯವಹಾರ ಬಿಟ್ಟು ಮನೆ ಸಮೀಪವೇ ಗೂಡಂಗಡಿ ವ್ಯಾಪಾರ ಮಾಡುತ್ತಿದ್ದರು. ಇವರಿಗೆ ಉತ್ತಮ ವ್ಯಾಪಾರವೂ ಆಗುತಿತ್ತು. ಮುಂಗೋಪಿಯಾಗಿದ್ದ ಮಹಮ್ಮದ್‌ರವರು ಏಕಾಏಕಿ ತನ್ನ ಅಂಗಡಿಗೆ ಬೆಂಕಿ ಹಚ್ಚಿದ್ದು ಸ್ಥಳಿಯರಲ್ಲಿ ಅಚ್ಚರಿಯನ್ನು ಹುಟ್ಟಿಸಿದೆ. ಘಟನೆಗೆ ಕಾರಣ ಏನೆಂದು ತಿಳಿಯಲು ಪೊಲೀಸರು ಮಹಮ್ಮದ್‌ರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಈಶ್ವರಮಂಗಲ ಹಿಂಜಾವೇ ನಿಕಟಪೂರ್ವ ಅಧ್ಯಕ್ಷ ರಾಜೇಶ್ ನಾಯರ್ ಬಂಟಕಲ್ಲುರವರು ಸೇರಿದಂತೆ ಸ್ಥಳೀಯರು ಬೆಂಕಿಯನ್ನು ಶಮನಗೊಳಿಸುವಲ್ಲಿ ಕಾರ್ಯಪ್ರವೃತರಾದರು.

 

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.