ಕರಾವಳಿ ಕ್ರೈಸ್ತರ ಕುಟುಂಬದ ಹಬ್ಬ-ಮೊಂತಿ ಫೆಸ್ತ್ | ಕೌಟುಂಬಿಕ ಸಾಮರಸ್ಯವನ್ನು ಸಾರುವುದೇ ಈ ಹಬ್ಬದ ವೈಶಿಷ್ಟ್ಯ-ವಂ|ಸುನಿಲ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರಭು ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯು ನಮ್ಮೆಲ್ಲರ ತಾಯಿಯಾಗಿದ್ದಾರೆ. ಮೇರಿ ಮಾತೆಯಲ್ಲಿರುವ ಧನಾತ್ಮಕ ಚಿಂತನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಮೇರಿ ಮಾತೆಯನ್ನು ಕುಟುಂಬದ ಮಾತೆ ಎಂದು ಪೂಜಿಸಲಾಗುತ್ತಿದ್ದು ಈ ಹಬ್ಬ ಕುಟುಂಬದ ಸಾಮರಸ್ಯವನ್ನು ಹೇಳುತ್ತದೆ ಎಂದು ಧರ್ಮಗುರು ವಂ|ಸುನಿಲ್ ಜಾರ್ಜ್ ಡಿ’ಸೋಜರವರು ಹೇಳಿದರು.

ಅವರು ಕರಾವಳಿ ಕ್ರೈಸ್ತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಸೆ.8ರಂದು ಆಚರಿಸಲ್ಪಡುವ ಪ್ರಭು ಏಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ದಿನವನ್ನು ಸಾರುವ `ಮೊಂತಿ ಫೆಸ್ತ್(ತೆನೆ ಹಬ್ಬ)-ಕುಟುಂಬದ ಹಬ್ಬ’ ಆಚರಣೆಯ ಸಂದರ್ಭ ಮಾಯಿದೆ ದೇವುಸ್ ಚರ್ಚ್‌ನಲ್ಲಿ ಬೈಬಲ್ ವಾಚಿಸಿ ಹಬ್ಬದ ಸಂದೇಶ ನೀಡಿದರು. ಮಾನವನಾಗಿ ಹುಟ್ಟಿದ ಮೇಲೆ ಹೆತ್ತವರಿಗೆ ಪ್ರೀತ್ಯಾದರ ಹಾಗೂ ಗೌರವ ನೀಡಿದಾಗ ಸಮಾಜದಲ್ಲೂ ಗೌರವ ಸಿಗುತ್ತದೆ. ಆ ನಿಟ್ಟಿನಲ್ಲಿ ಪ್ರಭು ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯು ಮಾನವನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ.

ಹೆತ್ತವರನ್ನು ಗೌರವ ಭಾವನೆಯಿಂದ ಕಾಣುವುದು ಮೇರಿ ಮಾತೆಗೆ ಸಲ್ಲುವ ಗೌರವವಾಗಿದೆ. ಹೇಗೆ ಹೂವು ತನ್ನ ಸ್ವಾದವನ್ನು ಪರಿಸರಕ್ಕೆ ಬೀರುತ್ತದೆಯೋ ಹಾಗೆಯೇ ನಾವು ನಮ್ಮಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಿ ಆ ಮೂಲಕ ಇತರರನ್ನು ಸ್ಪಂದಿಸುವ, ಗೌರವಿಸುವ ಮುಖೇನ ನಮ್ಮಲ್ಲಿನ ಸ್ವಾದವನ್ನು ಬೀರುವಂತಾಗಬೇಕು ಎಂದ ಅವರು ಮಾನವನಾಗಿ ಹುಟ್ಟಿದ ಮೇಲೆ ಕಷ್ಟ-ಕಾರ್ಪಣ್ಯಗಳು ಇದ್ದೇ ಇರುತ್ತದೆ. ಆದರೆ ಅವನ್ನು ಧನಾತ್ಮಕ ಚಿಂತನೆಯೊಂದಿಗೆ ಹೆಜ್ಜೆಯಿಟ್ಟಾಗ ದೇವರು ಆಶೀರ್ವದಿಸುತ್ತಾರೆ ಎಂಬುದು ಮಾತ್ರ ಸತ್ಯ. ಮೇರಿ ಮಾತೆಯ ಜನ್ಮದಿನದ ಪ್ರಯುಕ್ತ ಮಕ್ಕಳು ಮೇರಿ ಮಾತೆಗೆ ಇಷ್ಟವಾದ ಹೂವುಗಳನ್ನು ಅರ್ಪಿಸಿ ಗೌರವ ಕೊಡುತ್ತಾರೆ. ಅದರಂತೆ ಮಕ್ಕಳು ಈ ದಿನ ತಮ್ಮ ತಾಯಂದಿರಿಗೆ ಪ್ರೀತಿಯಿಂದ `ಮಮ್ಮಿ ಐ ಲವ್ ಯೂ’ ಎಂದಾಗ ಮೇರಿ ಮಾತೆಗೆ ಸಲ್ಲಿಸಿದ ಗೌರವವಾಗುತ್ತದೆ ಎಂದು ಅವರು ಹೇಳಿದರು.

 

ಧರ್ಮಗುರು ವಂ|ವಿಜಯ್ ಲೋಬೋರವರು ಹಬ್ಬದ ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋ, ಫಿಲೋಮಿನಾ ಕಾಲೇಜು ಕ್ಯಾಂಪಸ್ಸಿನ ಧರ್ಮಗುರುಗಳಾದ ವಂ|ಆಂಟನಿ ಪ್ರಕಾಶ್ ಮೊಂತೇರೋ, ವಂ|ಅಶೋಕ್ ರಾಯನ್ ಕ್ರಾಸ್ತಾರವರು ಭಕ್ತಾಧಿಗಳೊಂದಿಗೆ ದಿವ್ಯಬಲಿಪೂಜೆಯಲ್ಲಿ ಪಾಲ್ಗೊಂಡರು.

ಅದರಂತೆ ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ವಂ|ವಲೇರಿಯನ್ ಫ್ರ್ಯಾಂಕ್, ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ವಂ|ಪ್ರಕಾಶ್ ಫೆರ್ನಾಂಡೀಸ್, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದಲ್ಲಿ ವಂ|ಅಬೆಲ್ ಲೋಬೋರವರ ನೇತೃತ್ವದಲ್ಲಿ ಹಬ್ಬದ ಬಲಿಪೂಜೆಗಳು ನೆರವೇರಿದವು.

ಭತ್ತದ ತೆನೆಗಳ ಪವಿತ್ರೀಕರಣ, ಕಬ್ಬು ವಿತರಣೆ:
ರೈತರು ಬೆಳೆಸಿದ ಭತ್ತದ ತೆನೆ(ಹೊಸ ಅಕ್ಕಿ ಊಟ)ಗಳನ್ನು ಆಯಾ ಚರ್ಚ್‌ನಲ್ಲಿ ಪ್ರಮುಖರು ಸಂಗ್ರಹಿಸಿ, ಈ ಹಬ್ಬದ ದಿನದಂದು ಅವನ್ನು ಧರ್ಮಗುರುಗಳು ಪವಿತ್ರೀಕರಿಸಿ ಭಕ್ತರಿಗೆ ಹಂಚುವುದು ಸಂಪ್ರದಾಯವಾಗಿದ್ದು, ಈ ನಿಟ್ಟಿನಲ್ಲಿ ಪವಿತ್ರೀಕರಿಸಿದ ಭತ್ತದ ತೆನೆಗಳನ್ನು ಆಯಾ ಚರ್ಚ್‌ಗಳಲ್ಲಿ ಭಕ್ತರಿಗೆ ದಿವ್ಯಬಲಿಪೂಜೆಯ ಬಳಿಕ ಹಂಚಲಾಯಿತು ಹಾಗೂ ಜೀವನದುದ್ದಕ್ಕೂ ಬಾಳಿನಲ್ಲಿ ಸಿಹಿಯು ಮನೆ ಮಾಡಲಿ ಎಂದು ಸಿಹಿಯ ಪ್ರತೀಕವಾದಂತಿರುವ ಕಬ್ಬನ್ನು ಹಬ್ಬದ ಸಂದರ್ಭದಲ್ಲಿ ಆಯಾ ಚರ್ಚ್‌ನಲ್ಲಿ ವಿತರಿಸುವುದು ಸಂಪ್ರದಾಯವಾಗಿದ್ದು, ಅದರಂತೆ ತಾಲೂಕಿನ ಆಯಾ ಚರ್ಚ್‌ಗಳಲ್ಲಿ ಭಕ್ತರಿಗೆ ಸಿಹಿತಿಂಡಿ ಹಾಗೂ ಕಬ್ಬನ್ನು ವಿತರಿಸಲಾಯಿತು.

ಸರಳ ರೀತಿಯಲ್ಲಿ ಆಚರಣೆ…
ಮಹಾಮಾರಿ ಕೊರೋನಾದಿಂದ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಗಳಿಗೆ ಕಡಿವಾಣ ಬಿದ್ದಿದೆ. ಈ ಕೋವಿಡ್ ಎಫೆಕ್ಟ್‌ನಿಂದಾಗಿ ಧಾರ್ಮಿಕ ಆಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲು ಸಾಧ್ಯವಾಗದೆ ಸರಕಾರದ ನಿಯಾಮಾವಳಿಗಳ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಈ ಬಾರಿಯ ಮೊಂತಿ ಫೆಸ್ತ್‌ನ್ನು ಕರಾವಳಿ ಭಾಗದಲ್ಲಿ ಆಚರಿಸಲಾಗುತ್ತಿದೆ. ಪ್ರತೀ ವರ್ಷ ಒಂಭತ್ತು ದಿನ ಹಾಗೂ ಹಬ್ಬದ ದಿನದಂದು ಪುಟ್ಟ ಮಕ್ಕಳು ಹೂವುಗಳ ಬುಟ್ಟಿಯೊಂದಿಗೆ ಮೇರಿ ಮಾತೆಗೆ ಹೂವುಗಳನ್ನು ಅರ್ಪಿಸಲಾಗುತ್ತಿತ್ತು. ಈ ಬಾರಿ ಹೂವುಗಳ ಬುಟ್ಟಿಯ ಹೊರತುಪಡಿಸಿ ಕೇವಲ ಒಂದೇ ಹೂವಿನೊಂದಿಗೆ ಪುಟ್ಟ ಮಕ್ಕಳು, ಹಿರಿಯರು ಮೇರಿ ಮಾತೆಗೆ ಅರ್ಪಿಸಿದರು. ಅಲ್ಲದೆ ಪ್ರತೀ ದಿವ್ಯ ಬಲಿಪೂಜೆಯಲ್ಲಿ ಭತ್ತದ ತೆನೆಗಳ ಪವಿತ್ರೀಕರಣ, ಸಿಹಿಯ ಪ್ರತೀಕವಾದ ಕಬ್ಬಿನ ವಿತರಣೆ ಕಾರ್ಯವು ಆಯಾ ಚರ್ಚ್‌ಗಳಲ್ಲಿ ಸಾಮಾಜಿಕ ಅಂತರದೊಂದಗೆ ಭಕ್ತಿಪೂರ್ವಕವಾಗಿ ನಡೆಸಲಾಯಿತು.

ಮಾಯಿದೆ ದೇವುಸ್ ಚರ್ಚ್‌ನ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ ಸದಸ್ಯರು ಮೊಂತಿ ಹಬ್ಬದ ಪ್ರಯುಕ್ತ ಚರ್ಚ್ ವ್ಯಾಪ್ತಿಯಲ್ಲಿನ ಸುಮಾರು ನೂರು ಬಡ ಕುಟುಂಬಗಳನ್ನು ಗುರುತಿಸಿ, ಹಬ್ಬಕ್ಕೆ ಬೇಕಾದ ಸಿರಿಧಾನ್ಯಗಳು ಮತ್ತು ವಿವಿಧ ತರಕಾರಿ ವಸ್ತುಗಳನ್ನು ವಿತರಿಸಿ ಹಬ್ಬಕ್ಕೆ ವಿಶೇಷ ಮೆರುಗನ್ನು ತಂದಿತ್ತಿದ್ದಾರೆ. ಕಳೆದ ವರ್ಷವೂ ಇದೇ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಸಂಘದವರು ಬಡ ಕುಟುಂಬಗಳಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು ವಿತರಿಸಿ ಮನೆಮಾತಾಗಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.