Breaking News

ಹಸಿ ತ್ಯಾಜ್ಯದಿಂದ ಗ್ಯಾಸ್, ವಿದ್ಯುತ್ ಉತ್ಪಾದನೆ ಕುರಿತು ಅಧ್ಯಯನ ನಡೆಸಿ ಮುಂದಿನ ನಿರ್ಧಾರ

Puttur_Advt_NewsUnder_1
Puttur_Advt_NewsUnder_1
  • ಸ್ವಚ್ಛ ಪುತ್ತೂರು ಅನುಷ್ಠಾನದ ಕುರಿತು ರೋಟರಿ ಕ್ಲಬ್ ಪದಾಧಿಕಾರಿಗಳ ಸಭೆಯಲ್ಲಿ ಶಾಸಕ ಮಠಂದೂರು

ಪುತ್ತೂರು: ಹಸಿ ತ್ಯಾಜ್ಯದಿಂದ ಗ್ಯಾಸ್ ಪ್ಲಾಂಟ್, ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ತ್ಯಾಜ್ಯದಿಂದ ಸಂಪನ್ಮೂಲ ಸಂಗ್ರಹದ ಕುರಿತು ತಜ್ಞರ ತಂಡ ಮೂಲಕ ಅಧ್ಯಯನ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಕೋರ್ಟ್ ರಸ್ತೆಯ ಇಂಡಿಯನ್ ಆರ್ಕೆಡ್‌ನಲ್ಲಿರುವ ಮುಳಿಯ ಜೇಸಿಐ ತರಬೇತಿ ಹಾಲ್‌ನಲ್ಲಿ ಸೆ.11ರಂದು ನಡೆದ ಸ್ವಚ್ಛ ಪುತ್ತೂರು ಅನುಷ್ಢಾನದ ಕುರಿತು ರೋಟರಿ ಕ್ಲಬ್ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

60 ಸಾವಿರ ಜನ ಸಂಖ್ಯೆಯಲ್ಲಿ ನಗರ ಸಭೆಯಲ್ಲಿ ನಿತ್ಯ ೧೫ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಹಸಿ ಕಸದಿಂದ ಗ್ಯಾಸ್ ಉತ್ಪಾದನೆ, ವಿದ್ಯುತ್ ಉತ್ಪಾದನೆ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಇವುಗಳನ್ನು ಪಿಪಿಟಿ ಮಾದರಿಯಲ್ಲಿ ಸಂಘ ಸಂಸ್ಥೆಗಳ ಅಥವಾ ನಗರ ಸಭೆಯೇ ನಿರ್ವಹಣೆ ಮಾಡಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ತಂಡವನ್ನು ರಚಿಸಿ, ನಗರದ ಗಾರ್ಬೇಜ್ ಮ್ಯಾನೇಜ್ ಮೆಂಟ್ ಮೂಲಕ ಸಂಪನ್ಮೂಲ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು. ಪ್ರತಿ ವಾರ್ಡ್‌ಗಳಲ್ಲಿ ತ್ಯಾಜ್ಯ ಸಂಗ್ರಹಣೆಯ ಕುರಿತು ಮುಂದಿನ ದಿನಗಳಲ್ಲಿ ವಾರ್ಡ್ ಸಭೆ ನಡೆಸಿ ಅಲ್ಲಿನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುವುದು. ಜೊತೆಗೆ ಜನ ಪ್ರತಿನಿಧಿಗಳು, ಅಧಿಕಾರಿಗಳು ವಿವಿಧ ನಗರ ಸಭೆಗಳಿಗೆ ಭೇಟಿ ನೀಡಿ ಸ್ವಚ್ಚತೆಯ ಕುರಿತು ಅಲ್ಲಿರು ಕ್ರಮಗಳ ಕುರಿತು ಅಧ್ಯಯನ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

ಸ್ವಚ್ಛತೆ ಬಗ್ಗೆ ನಗರ ಸಭೆ ಹಾಗೂ ವಿವಿಧ ಸಂಘ ಸಂಸ್ಥೆಗ ಕಾರ್ಯಕ್ರಮಗಳಿಂದಾಗಿ ಜನರಲ್ಲಿ ಅರಿವು ಮೂಡಿದ್ದು ಸ್ವಚ್ಛತೆಯಲ್ಲಿ ೪೭ನೇ ಸ್ಥಾನದಿಂದ ೬ ಸ್ಥಾನಕ್ಕೆ ಬಂದಿದೆ. ಸುಂದರ, ಸ್ವಚ್ಛ ಪುತ್ತೂರು ಆಗುವ ಮೂಲಕ ನಗರಸಭೆ ನಂಬರ್ ವನ್ ಆಗಬೇಕು. ಇದಕ್ಕಾಗಿ ರೋಟರಿ ಕ್ಲಬ್, ಜೇಸಿಐ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ನಗರ ಸಭೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆಗೆ ಸಾರ್ವಜನಿಕರು ಕೈ ಜೋಡಿಸುವಂತೆ ಶಾಸಕರು ಮನವಿ ಮಾಡಿದರು.

ಉದ್ಯೋಗಿಗಳಿಂದಲೇ ಸಮಸ್ಯೆ…!
ನಗರದ ಹಲವು ಭಾಗಗಳಲ್ಲಿ ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ಚೀಲಗಳ ರಾಶಿ ಬೀಳುತ್ತಿದೆ. ಇದು ಏನೂ ತಿಳಿಯದವರು ಹಾಕುವುದಲ್ಲ. ಬಹುತೇಕ ಸರಕಾರಿ ಉದ್ಯೋಗಿಗಳೇ ತ್ಯಾಜ್ಯ ತುಂಬಿದ ಚೀಲಗಳನ್ನು ರಸ್ತೆ ಬದಿ ಎಸೆದುಹೋಗುತ್ತಾರೆ. ಮನೆಯಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ತಮ್ಮ ವಾಹನಗಳಲ್ಲಿ ತಂದು ಅವುಗಳನ್ನು ರಸ್ತೆ ಬದಿ ಎಸೆದುಹೋಗುವುದರಿಂದ ನಗರದ ಸೌಂಧರ್ಯ ಹಾಗೂ ಸ್ವಚ್ಚತೆಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಪೇಪರ್ ಬಾಕ್ಸ್‌ನಂತೆ, ವೇಸ್ಟ್ ಬಾಕ್ಸ್ ಅಳವಡಿಸಿ…!
ದಿನ ನಿತ್ಯದ ಪತ್ರಿಕೆ, ಪೋಸ್ಟ್‌ಗಳ ಸಂಗ್ರಹಕ್ಕಾಗಿ ಮನೆಯ ಗೇಟ್‌ಗಳಲ್ಲಿ ಬಾಕ್ಸ್‌ಗಳನ್ನು ಅಳವಡಿಸಿರುವಂತೆ ನಗರದ ಪ್ರತಿ ಮನೆಗಳಲ್ಲಿಯೂ ಮನೆ ಮುಂಭಾಗದದಲ್ಲಿ ತ್ಯಾಜ್ಯಕ್ಕಾಗಿ ಒಂದು ಡಬ್ಬವನ್ನು ಅಳವಡಿಸಬೇಕು. ಅದರಲ್ಲಿ ಹಸಿ ಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ಹಾಕಬೇಕು. ನಾಯಿ ಹಾಗೂ ಕಾಗೆಗಳು ಅದನ್ನು ಚೆಲ್ಲದಂತೆ ಭದ್ರವಾಗಿಡಬೇಕು. ಪೇಪರ್ ಬಾಕ್ಸ್‌ನಿಂದ ನಾವು ಪೇಪರ್ ಸಂಗ್ರಹಿಸುವಂತೆ ಪೌರಕಾರ್ಮಿಕರು ಡಬ್ಬದಲ್ಲಿರುವ ತ್ಯಾಜ್ಯವನ್ನು ಪ್ರತಿ ಮನೆಗಳಿಂದಲೂ ಸಂಗ್ರಹಿಸಿಕೊಂಡು ಹೋಗಲು ಅನುಕೂಲವಾಗಲಿದೆ ಎಂದು ಶಾಸಕರು ಸಲಹೆ ನೀಡಿದರು.

ವೇಸ್ಟ್ ಕಲೆಕ್ಷನ್ ಸೆಂಟರ್ ಮಾಡಿ:
ನಗರದಲ್ಲಿರುವ ಮನೆ ಹಾಗೂ ಹೊಟೇಲ್ ಮೊದಲಾದವುಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಜನ ಚೀಲಗಳಲ್ಲಿ ತುಂಬಿಸಿ ಎಸೆದು ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ತ್ಯಾಜ್ಯ ಸಂಗ್ರಹಿಸಲು ನಗರ ಪ್ರಮುಖ ಕಡೆಗಳಲ್ಲಿ ತ್ಯಾಜ್ಯ ಸಂಗ್ರಹ ಸೆಂಟರ್‌ನ್ನು ಪ್ರಾರಂಭಿಸಬೇಕು. ಆಗ ಆ ಭಾಗದಲ್ಲಿರುವ ಪ್ರತಿ ಮನೆ, ಹೊಟೇಲ್, ಅಂಗಡಿಗಳ ತ್ಯಾಜ್ಯವನ್ನು ಅಲ್ಲಿ ಸಂಗ್ರಹಿಸಿ ಅಲ್ಲಿಂದ ನಗರ ಸಭೆಯ ವಾಹನದಲ್ಲಿ ವಿಲೇವಾರಿ ಮಾಡಬಹುದು ಎಂದು ರೋಟರಿ ಕ್ಲಬ್‌ನ ಸೂರ್ಯನಾಥ ಆಳ್ವ ಸಲಹೆ ನೀಡಿದರು

೨ ಟನ್ ಮಾಂಸ ತ್ಯಾಜ್ಯ:
ನಗರದಲ್ಲಿ ಸುಮಾರು ೪೦ ಕೋಳಿ ಹಾಗೂ ಮಾಂಸದ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು ಅವುಗಳಲ್ಲಿ ಪ್ರತಿ ದಿನ ಸುಮಾರು ೨ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ನಗರ ಸಭೆಯ ಇಂಜಿನಿಯರ್ ಗುರುಪ್ರಸಾದ್ ಮಾಹಿತಿ ನೀಡಿದರು.

ಪೌರ ಕಾರ್ಮಿಕರ ಸಭೆ:
ನಗರ ಸ್ವಚ್ಚತೆಯ ಕುರಿತು ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ತಜ್ಞರು ಹಾಗೂ ವಾರ್ಡ್‌ಗಳಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು. ಇದರ ಜೊತೆಯಲ್ಲಿ ಮನೆ ಮನೆ, ಅಂಗಡಿ, ಹೊಟೇಲ್‌ಗಳಿಂದ ತ್ಯಾಜ್ಯ ಸಂಗ್ರಹಿಸುವವರು ಪೌರಕಾರ್ಮಿಕರಾಗಿದ್ದು ಅವರ ಸಭೆ ನಡೆಸಿ ಅವರ ಅಭಿಪ್ರಾಯವನ್ನು ಸಂಗ್ರಹಿಸಿಕೊಳ್ಳಲಾಗುವುದು ಎಂದು ಶಾಸಕರು ಹೇಳಿದರು.

ನಗರ ಸಭಾ ಸದಸ್ಯ ಜಗನ್ನಿವಾಸ ರಾವ್, ಪೌರಾಯುಕ್ತೆ ರೂಪಾ ಶೆಟ್ಟಿ, ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಕೃಷ್ಣ ನಾರಾಯಣ ಮುಳಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಸಹಾಯಕ ಗವರ್ನರ್ ಸಚ್ಚಿದಾನಂದ, ರೋಟರಿ ಕ್ಲಬ್ ಪುತ್ತೂರು ಪೂರ್ವದ ಕಾರ್ಯದರ್ಶಿ ರವಿ ಕುಮಾರ್ ರೈ, ಕ್ಲಬ್‌ನ ಪದಾಧಿಕಾರಿಗಳಾದ ಡಾ.ಶ್ಯಾಮ್ ಪ್ರಸಾದ್, ಸೂರ್ಯನಾಥ ಆಳ್ವ, ಶಶಿಧರ ಕಿನ್ನಮಜಲು, ತಾ.ಪಂ ಸದಸ್ಯ ಮುಕುಂದ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಆರ್.ಸಿ ನಾರಾಯಣ ಸಭೆಯಲ್ಲಿ ಉಪಸ್ಥಿತರಿದ್ದ ಸಲಹೆ ಸೂಚನೆಗಳನ್ನು ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.