Breaking News

ಪುತ್ತೂರು ರೋಟರಿ ಕ್ಲಬ್‌ನಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
  • ಶಿಕ್ಷಕರು ದೇಶದ ನಿರ್ಮಾತೃರು-ಪ್ರಕಾಶ್ ಕಾರಂತ್

ಪುತ್ತೂರು: ಅಜ್ಞಾನದ ಕತ್ತಲಿನಿಂದ ಸುಜ್ಞಾನದ ಬೆಳಕಿನತ್ತ ಮಗುವನ್ನು ಬೆಳೆಸುವಲ್ಲಿ ಹಾಗೂ ಮಗುವನ್ನು ಸಮಾಜದ ಉತ್ತಮ ಪ್ರಜೆ, ನಾಗರಿಕ, ಕರ್ಮಿಯನ್ನಾಗಿ ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ. ಮೌಲ್ಯಯುತ ಶಿಕ್ಷಣವನ್ನು ನೀಡುವ ಮೂಲಕ ಶಿಕ್ಷಕರು ದೇಶದ ನಿರ್ಮಾತೃರೂ ಆಗಿದ್ದಾರೆ ಎಂದು ರೋಟರಿ ಜಿಲ್ಲೆ ೩೧೮೧ ಇದರ ೨೦೨೨-೨೩ರ ನಿಯೋಜಿತ ಜಿಲ್ಲಾ ಗವರ್ನರ್ ಆಗಿರುವ ಪ್ರಕಾಶ್ ಕಾರಂತ್‌ರವರು ಹೇಳಿದರು.

ಅವರು ಸೆ.೧೧ ರಂದು ಬೈಪಾಸ್-ಪರ್ಲಡ್ಕದಲ್ಲಿನ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಭವನದಲ್ಲಿ ರೋಟರಿ ಕ್ಲಬ್ ಪುತ್ತೂರು ವತಿಯಿಂದ ಜರಗಿದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಪ್ರಸ್ತುತ ವರ್ಷ ನಿವೃತ್ತರಾದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಶಿಕ್ಷಕರನ್ನು ಗುರುತಿಸಿ, ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣದ ಹಾಗೂ ಮಗುವಿನ ವಿಕಾಸ ಆಗುವುದು ಶಿಕ್ಷಕರಿಂದ. ಶಿಕ್ಷಕರನ್ನು ದಾರ್ಶನಿಕರಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಲಾಗಿದೆ. ೨೦೨೫ರ ಒಳಗೆ ದೇಶವನ್ನು ಸಂಪೂರ್ಣ ಸಾಕ್ಷರತೆಯನ್ನಾಗಿ ಮಾಡುವ ಸಂಕಲ್ಪವನ್ನು ರೋಟರಿ ಸಂಸ್ಥೆಯು ಹೊಂದಿದೆ. ಮೂರನೇ ಒಂದಂಶ ಪುಸ್ತಕದಲ್ಲಿನ ಜ್ಞಾನಾತ್ಮಕತೆಯನ್ನು ಮತ್ತು ಮೂರನೇ ಎರಡಂಶವನ್ನು ಸಂಸ್ಕಾರ ನೀಡುವ, ನಯ, ವಿನಯತೆ, ಸಮಯಪಾಲನೆ, ಶಿಸ್ತು, ಧನಾತ್ಮಕತೆ ಮೊದಲಾದ ಮೌಲ್ಯಗಳನ್ನು ಶಿಕ್ಷಕರು ಕಲಿಸಿಕೊಡುತ್ತಾರೆ ಎಂದ ಅವರು ಶಿಕ್ಷಣದಲ್ಲಿನ ಹಲವಾರು ಹೊಸತನಗಳಿಗೆ ಶಿಕ್ಷಕರು ಒಗ್ಗಿಕೊಳ್ಳಬೇಕಾಗಿದೆ. ಪ್ರಸ್ತುತ ದಿನಗಳಲ್ಲಿ ಮೌಲ್ಯಗಳ ಕೊರತೆಯಿಂದ ಜಾತಿ-ಧರ್ಮ, ನೆಲ-ಜಲ, ಭಾಷೆ-ವರ್ಣ, ಮೇಲು-ಕೀಳು ಎಂಬಂತೆ ಜನರ ಹಾದಿಯನ್ನು ತಪ್ಪಿಸುವ ಕಾರ್ಯ ಆಗುತ್ತಿರುವುದು ವಿಷಾದನೀಯ. ಯಾವ ದೇಶಗಳಲ್ಲಿ ಮೌಲ್ಯಗಳ ಕೊರತೆಯಿದೆಯೋ, ಆ ದೇಶಗಳು ಅಧಃಪತನದತ್ತ ಸಾಗುತ್ತವೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜರವರು ಸ್ವಾಗತಿಸಿ, ಮಾತನಾಡಿ, ಜಗತ್ತಿನ ಯಾವುದೇ ಮೂಲೆಯಲ್ಲಿರುವ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರನ್ನು ಶಿಕ್ಷಕರ ದಿನಾಚರಣೆ ದಿನದಂದು ಸ್ಮರಿಸುವುದು ಎಲ್ಲಕ್ಕಿಂತ ಮಿಗಿಲಾದ ಪ್ರಶಸ್ತಿ ಆಗಿದೆ. ಕಲಿಯುವ ಸಂದರ್ಭದಲ್ಲಿ ಯಾವ ಶಿಕ್ಷಕರು ಮಕ್ಕಳಲ್ಲಿ ಧನಾತ್ಮಕತೆಯ ಧೋರಣೆಯನ್ನು ತೋರಿಸುತ್ತಾರೋ, ಆ ಶಿಕ್ಷಕರು ಮಕ್ಕಳ ಮನಸ್ಸಿನೊಳಗೆ ಸ್ಥಾನವನ್ನು ಸಂಪಾದಿಸುತ್ತಾರೆ. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರಾಗುವ ಕನಸನ್ನು ಹೊಂದದಿರುವುದು ನಾವಿಂದು ಚಿಂತನೆಯನ್ನು ಮಾಡಬೇಕಿದೆ ಎಂದ ಅವರು ಪ್ರತೀ ರೋಟರಿ ಸದಸ್ಯರ ದೇಣಿಗೆಯಿಂದ ರೋಟರಿ ಸಂಸ್ಥೆ ನಡೀತಿದೆ. ಪುತ್ತೂರು ರೋಟರಿ ಕ್ಲಬ್ ಜನತೆಗೆ ಬ್ಲಡ್ ಬ್ಯಾಂಕ್‌ನ್ನು ಕಲ್ಪಿಸಿಕೊಟ್ಟಿದ್ದು, ಪ್ರಸಕ್ತ ಮಹಾವೀರ ಆಸ್ಪತ್ರೆಯಲ್ಲಿ ಜನರಿಗೆ ಕಡಿಮೆ ಖರ್ಚಿನಲ್ಲಿ ನೆರವಾಗಲೆಂದು ಸುಸಜ್ಜಿತವಾದ ಡಯಾಲಿಸಿಸ್ ಘಟಕವನ್ನು ಶೀಘ್ರವೇ ಸ್ಥಾಪಿಸಲಿದ್ದೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕ್ಲಬ್‌ನಲ್ಲಿನ ಶಿಕ್ಷಕ ವೃತ್ತಿಯನ್ನು ನಿರ್ವಹಿಸುವ ರೊಟೇರಿಯನ್ಸ್‌ಗಳು, ರೊಟೇರಿಯನ್ಸ್‌ಗಳ ಪತ್ನಿಯರನ್ನು ಗುರುತಿಸಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಭುಜಂಗ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸನ್ಮಾನಿತ ನಿವೃತ್ತ ಶಿಕ್ಷಕರ ಹೆಸರು ಹಾಗೂ ಪರಿಚಯವನ್ನು ಕಾರ್ಯಕ್ರಮ ಸಂಯೋಜಕ ಚಿದಾನಂದ ಬೈಲಾಡಿಯವರು ನೆರವೇರಿಸಿದರು. ಪವಿತ್ರ ರೂಪೇಶ್ ಪ್ರಾರ್ಥಿಸಿದರು. ಮುಖ್ಯ ಅತಿಥಿ ಪ್ರಕಾಶ್ ಕಾರಂತ್‌ರವರ ಪರಿಚಯವನ್ನು ಕಿಶನ್ ಬಿ.ವಿ ನೀಡಿದರು. ಕಾರ್ಯದರ್ಶಿ ಪ್ರೊ|ದತ್ತಾತ್ರೇಯ ರಾವ್ ವರದಿ ಮಂಡಿಸಿದರು. ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು.

೨೭ ಮಂದಿ ಶಿಕ್ಷಕರಿಗೆ ಗೌರವ…
ಪ್ರಸಕ್ತ ಸಾಲಿನಲ್ಲಿ ನಿವೃತ್ತಿ ಹೊಂದಿದ ತಾಲೂಕಿನಲ್ಲಿನ ೨೭ ಮಂದಿ ಮಂದಿ ಶಿಕ್ಷಕರಾದ ರೋಹಿಣಿ ಬಾಯಿ ಕೆ, ಶ್ರೇಯಾನ್ಸ್ ಎ.ಎಚ್, ರೋಸ್ಲಿ ಡಾಯಸ್, ನಳಿನಿ ಕೆ.ಪಿ, ವಾರಿಜಾಕ್ಷಿ ಎಚ್, ವಿಜಯಲಕ್ಷ್ಮೀ, ಲಲಿತಾ ಪರಮೇಶ್ವರ, ಬಿ.ಧನಲಕ್ಷ್ಮಿ, ಶಶಿಪ್ರಭ ಎಚ್, ವೀಣಾ ಕಾಮತ್ ಎಂ, ವಿಶ್ವೇಶ್ವರ ಪಿ, ಶಶಿಕಲ, ಶಶಿಕಲಾ ಕೆ, ರಂಜಿನಿ ಎಸ್.ರಾವ್, ಅನ್ನಪೂರ್ಣ, ಸೀತಾಲಕ್ಷ್ಮಿ ಶಂಕರ ಭಟ್, ಉಮಾವತಿ ಎ, ವಿಜಯ್ ನಾಯ್ಕ್, ಮೋಹನಾಂಗಿ ಡಿ, ಕೆ.ಶಂಕರಿ, ಗೋಪಾಲಕೃಷ್ಣ ಭಟ್ ಎನ್, ರಂಜಿನಿ ಯಂ, ಕೆ.ಯಮುನಾ, ಸಿಸಿಲಿಯಾ ವೇಗಸ್, ಸುಬ್ರಹ್ಮಣ್ಯ ಉಪಾಧ್ಯಾಯ, ಭಾಸ್ಕರ ಶೆಟ್ಟಿರವರೊಂದಿಗೆ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ಕ್ಲಬ್‌ನ ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗುರುಗಳನ್ನು ಸದಾ ನಮಿಸಿ ಕೆಲಸಕ್ಕೆ ತೊಡಗುವಂತಾಗಬೇಕು. ವ್ಯಕ್ತಿ ಹೌದು, ತತ್ವದ ಪ್ರತಿನಿಧಿಯೂ ಹೌದು. ವ್ಯಕ್ತಿಯು ಗುರುವಿನ ಸ್ಥಾನದಲ್ಲಿ ಕಾರ್ಯ ಮಾಡುವುದು ಭಾಗ್ಯವೇ ಆಗಿದೆ. ಸಮಾಜಕ್ಕೆ ತನ್ನನ್ನು ತಾನು ತೊಡಗಿಸಿಕೊಂಡು ಮತ್ತು ಇತರರ ಕಷ್ಟ-ಕಾರ್ಪಣ್ಯಗಳಲ್ಲಿ ಸ್ಪಂದಿಸುವ ಸಂಕಲ್ಪ ಮಾಡಿಕೊಂಡಾಗ ಜೀವನದಲ್ಲಿ ಯಶಸ್ಸು ಖಂಡಿತಾ ಸಾಧ್ಯ. ಶಿಕ್ಷಕರೆನಿಸಿಕೊಂಡವರು ನಿರಂತರ ಕರ್ತವ್ಯ ಪ್ರಜ್ಞೆ ಹಾಗೂ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಸುಬ್ರಹ್ಮಣ್ಯ ಉಪಾಧ್ಯಾಯ, ನಿವೃತ್ತ ಶಿಕ್ಷಕರು, ಕಾಂಚನ ಪ್ರೌಢಶಾಲೆ

ಬದುಕು ಎನ್ನುವುದು ಒಳಿತು ಹಾಗೂ ಕೆಡುಕು ಇವೆರಡನ್ನು ಒಳಗೊಂಡಿದ್ದು, ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡುವುದು ಅದು ನಮ್ಮ ಅಂಗೈಯಲ್ಲಿದೆ. ಮಕ್ಕಳ ಭವಿಷ್ಯ ರೂಪಿಸುವ ಸಂಪೂರ್ಣ ಜವಾಬ್ದಾರಿಯೊಂದಿಗೆ ಮಕ್ಕಳು ಸಮಾಜದಲ್ಲಿ ಸಾಧನೆ ಮಾಡುವ ಗುರುತರ ಹೊಣೆಗಾರಿಕೆಯೂ ಶಿಕ್ಷಕರದ್ದಾಗಿದೆ. ಏನೂ ತಿಳಿಯದ ಮಕ್ಕಳ ತಪ್ಪುಗಳನ್ನು ತಿದ್ದಿ ತೀಡಿ ಶಿಕ್ಷಿತರನ್ನಾಗಿಸಿ ಸಮಾಜದಲ್ಲಿ ತಲೆ ಎತ್ತಿ ನಿಲ್ಲಿಸುವವರು ಶಿಕ್ಷಕರು. ಅಂತಹ ಶಿಕ್ಷಕರಿಗೆ ಮಕ್ಕಳು `ನಮಸ್ತೆ ಸರ್’, `ನಮಸ್ತೆ ಟೀಚರ್’ ಎಂದಾಗ ಮನಸ್ಸಿಗೆ ತೃಪ್ತಿ ಎನಿಸುವುದು ಸಿಸಿಲಿಯಾ ವೇಗಸ್, ನಿವೃತ್ತ ಶಿಕ್ಷಕರು, ಮಾಯಿದೆ ದೇವುಸ್ ಶಾಲೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.