ನೀವಾಗಿ ತೊಂದರೆ ತಂದು ಕೊಂಡರೆ ನಾವು ಬಿಡುವುದಿಲ್ಲ – ತುರ್ತು ಸಂದರ್ಭಕ್ಕೆ ನಾವೇನು ಮಾಡುವುದಿಲ್ಲ : ಎಸ್ಐ ತಿಮ್ಮಪ್ಪ ನಾಯ್ಕ್

Puttur_Advt_NewsUnder_1
Puttur_Advt_NewsUnder_1
  • ಸಂಚಾರ ಪೊಲೀಸ್ ಠಾಣೆಯಲ್ಲಿ ಆಟೋ ರಿಕ್ಷಾ ಚಾಲಕರ ಸಭೆ
  • ಮೋಟಾರು ಕಾಯ್ದೆ ಉಲ್ಲಂಘನೆ ಮಾಡಿದರೆ ಕ್ರಮ – ಎಸ್.ಐ ರಾಮ ನಾಯ್ಕ್

ಪುತ್ತೂರು: ಆಟೋ ರಿಕ್ಷಾ ಚಾಲಕರು ಕಾನೂನು ನಿಯಮ ಏನಿದೆಯೋ ಅದನ್ನು ಪಾಲಿಸಬೇಕು. ಇಂತಹ ಸಂದರ್ಭದಲ್ಲಿ ನೀವಾಗಿಯೇ ತೊಂದರೆ ತಂದು ಕೊಂಡರೆ ನಾವು ಬಿಡುವುದಿಲ್ಲ. ತುರ್ತು ಸಂದರ್ಭಕ್ಕೆ ನಾವೇನು ಮಾಡುವುದಿಲ್ಲ ಎಂದು ಪುತ್ತೂರು ನಗರ ಪೊಲೀಸ್ ಠಾಣೆಯ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರು ಸೂಚನೆ ನೀಡಿದರು.

ಆಟೋ ರಿಕ್ಷಾ ಚಾಲಕರ ಬಾಡಿಗೆ, ಪಾರ್ಕ್ ಸೇರಿದಂತೆ ವಿಟ್ಲದಿಂದ ಪುತ್ತೂರಿಗೆ ಬಂದು ಬಾಡಿಗೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಸೆ.೧೨ರಂದು ನಡೆದ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ವಿವಿಧ ಸಂಘಟನೆಯ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ತುರ್ತು ಮತ್ತು ರಿಕ್ಷಾಗಳಿಗೆ ಗ್ಯಾಸ್ ತುಂಬಿಸಲು ಪುತ್ತೂರು ಪಂಪ್‌ಗೆ ಬರುವಲ್ಲಿ ಅವಕಾಶ ನೀಡುವಂತೆ ವಿಟ್ಲ ಆಟೋ ರಿಕ್ಷಾ ಚಾಲಕರು ಮನವಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ಅವರು ಮಾತನಾಡಿ ವಿಟ್ಲ ಗಡಿ ಭಾಗದಿಂದ ತುರ್ತು ಅಗತ್ಯ ಸೇವೆ ಮತ್ತು ಆಸ್ಪತ್ರೆಗೆ ಹಾಗೂ ಪಂಪ್‌ಗೆ ಅವಕಾಶ ನೀಡಲಾಗುತ್ತದೆ. ಆದರೆ ಒಮ್ಮೆ ಬಂದವರು ಮತ್ತೊಮ್ಮೆ ಪದೇ ಪದೇ ಬರುವುದು ಅಥವಾ ಪಂಪ್‌ಗೆ ಬಂದವರು ಪುತ್ತೂರಿನಲ್ಲೇ ಬಾಡಿಗೆ ಮಾಡಿಕೊಂಡಿರುವುದು ಇವೆಲ್ಲ ಕಂಡು ಬಂದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಗ್ಯಾಸ್ ಪಂಪ್‌ಗೆ ಬಂದವರು ಪೇಟೆಗೆ ಬರುವ ಅವಶ್ಯಕತೆಯಾದರೂ ಏನು ಎಂದು ಪ್ರಶ್ನಿಸಿದ ಅವರು ನಿವಾಗಿ ತೊಂದರೆ ತಂದು ಕೊಂಡರೆ ನಾವು ಬಿಡುವುದಿಲ್ಲ. ತುರ್ತು ಸಂದರ್ಭದಲ್ಲಿಲ ನಾವು ಕೂಡಾ ಏನು ಮಾಡುವುದಿಲ್ಲ ಎಂದರು.

ಮೋಟಾರು ಕಾಯ್ದೆ ಉಲ್ಲಂಘನೆ ಮಾಡಿದರೆ ಕ್ರಮ:
ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ್ ಅವರು ಮಾತನಾಡಿ ಆಟೋ ರಿಕ್ಷಾ ಚಾಲಕರು ಹೊಂದಾಣಿಕೆಯಿಂದ ಹೋಗಬೇಕು. ನಿಮ್ಮ ಸಂಘಟನೆಯ ಸದಸ್ಯರಿಗೆ ಕಾನೂನು ಪಾಲಿಸುವಂತೆ ನೀವೇ ಸೂಚನೆ ನೀಡಬೇಕು. ಕೊನೆಗೆ ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಂಡಾಗ ಸಂಘಟನೆಯಿಂದ ಅವರ ಪರವಾಗಿ ಠಾಣೆಗೆ ಬರುವುದು ಸರಿಯಲ್ಲ. ಸಂಘಟನೆ ಕಾನೂನು ಪಾಲಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದ ಅವರು ಪುತ್ತೂರು ಪೇಟೆಯಲ್ಲಿ ಬೊಳುವಾರಿನಿಂದ ದರ್ಬೆಯ ತನಕ ರಸ್ತೆ ಬದಿಯಲ್ಲಿ ಎಲ್ಲಿಯೂ ಯಾವ ವಾಹನಗಳೂ ಕೂಡಾ ಪಾರ್ಕ್ ಮಾಡುವ ಹಾಗಿಲ್ಲ. ಎಲ್ಲಿ ಪಾರ್ಕಿಂಗ್ ಸ್ಥಳಗಳಿವೆಯೋ ಅಲ್ಲೇ ಪಾರ್ಕ್ ಮಾಡಬೇಕು. ಸಮವಸ್ತ್ರ ಧರಿಸಿ, ದಾಖಲೆಪತ್ರಗಳನ್ನು ಇಟ್ಟುಕೊಳ್ಳಿ. ಬಾಡಿಗೆಯ ವಿಚಾರದಲ್ಲೂ ಯಾವುದೇ ದೂರುಗಳು ಬರಬಾರದು. ಮಿತಿ ಮೀರಿದ ವೇಗ, ಮದ್ಯಪಾನದಿಂದ ವಾಹನ ಚಲಾಯಿಸುವುದರ ಕುರಿತು ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ಒಟ್ಟಿನಲ್ಲಿ ಮೋಟಾರು ಕಾಯ್ದೆ ಏನಿದೆಯೋ ಅದನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು. ಉಲ್ಲಂಘನೆ ಮಾಡಿದಲ್ಲಿ ದಂಡದ ಬದಲು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗುವುದು. ಮುಂದೆ ನಿಮ್ಮ ವಾಹನವನ್ನು ನ್ಯಾಯಾಲಯದ ಮೂಲಕವೇ ಬಿಡುಗಡೆಗೊಳಿಸಬೇಕಾದಿತ್ತು ಎಂದು ಎಚ್ಚರಿಸಿದರು.

ಶಾಲಾ ಮಕ್ಕಳ ಸಾಗಾಟಕ್ಕೆ ಸುಪ್ರಿಂ ಕೋರ್ಟ್ ನಿಯಮ:
ಕೋವಿಡ್-೧೯ನಿಂದಾಗಿ ಸದ್ಯದ ಪರಿಸ್ಥಿತಿಯಲ್ಲಿ ಶಾಲೆ ತೆರೆಯದಿದ್ದರೂ ಮುಂದಿನ ತಿಂಗಳೊಳಗೆ ಶಾಲೆ ಆರಂಭ ಆಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಶಾಲಾ ಮಕ್ಕಳನ್ನು ಶಾಲೆಗೆ ಕರೆದೊಯ್ಯುವಲ್ಲಿ ಕಾನೂನು ರೀಯಾಯತಿ ನೀಡಬೇಕು. ಪ್ರತಿ ಭಾರಿ ರಿಕ್ಷಾಗಳಿಗೆ ದಂಡ ಹಾಕುತ್ತೀರಿ ಹೊರತು ಇತರ ಖಾಸಗಿ ವಾಹನದಲ್ಲಿ ಮತ್ತು ಶಾಲಾ ವಾಹನದಲ್ಲೂ ಹೆಚ್ಚು ಮಕ್ಕಳನ್ನು ಕರೆದೊಯ್ಯುತ್ತಾರೆ ಅವರ ಮೇಲೆ ನೀವು ಕ್ರಮ ಕೈಗೊಳ್ಳುವುದಿಲ್ಲ ಎಂದು ಪ್ರಸ್ತಾಪಿಸಿದರು. ಉತ್ತರಿಸಿದ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ಅವರು ಸುಪ್ರಿಂ ಕೋರ್ಟ್ ಸೂಚನೆ ನೀಡಿದಂತೆ ಆಟೋ ರಿಕ್ಷಾದಲ್ಲಿ ೬ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷ ಶಾಲಾ ಮಧ್ಯದಲ್ಲಿ ಸೂಚನೆ ನೀಡಲಾಗಿದೆ ಎಂದು ಸುಮ್ಮನಿದ್ದೆವು. ಈ ಭಾರಿ ಕಟ್ಟು ನಿಟ್ಟಾಗಿ ಕಾನೂನು ಪಾಲಿಸಬೇಕು. ಕಳೆದ ವರ್ಷವೂ ಸ್ಕೂಲ್ ಬಸ್‌ಗಳಿಗೆ ದಂಡ ಹಾಕಿದ್ದೇವೆ. ಖಾಸಗಿ ವಾಹನದಲ್ಲಾದರೂ ಉಲ್ಲಂಘನೆಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಆಟೋ ರಿಕ್ಷಾ ಚಾಲಕರ ಬೇಡಿಕೆಗಳು:
ವಿಟ್ಲ ಗಡಿ ಭಾಗದಿಂದ ತುರ್ತು ಸಂಬಂಧಿಸಿ ಅವಕಾಶ ನೀಡಬೇಕು. ಪದೇ ಪದೇ ಬಂದರೆ ಕ್ರಮ ಕೈಗೊಳ್ಳಿ. ವಿಟ್ಲದ ಆಟೋ ರಿಕ್ಷಾ ಪುತ್ತೂರಿನಲ್ಲಿ ಬಾಡಿಗೆ ಮಾಡುತ್ತಿದ್ದರೆ ಠಾಣೆಗೆ ರಿಕ್ಷಾದ ನಂಬರ್ ಕೊಡುವುದು. ಆಟೋ ರಿಕ್ಷಾಗಳು ಮಾತ್ರ ಬಸ್ ನಿಲ್ದಾಣಕ್ಕೆ ಸುತ್ತಿ ಬಳಸಿ ಬರುವ ನಿಯಮವನ್ನು ಸಡಿಲಗೊಳಿಸಿ, ಬಸ್‌ನಿಲ್ದಾಣದ ಬಳಿ ಆಟೋ ರಿಕ್ಷಾಗಳಿಗೆ ಹೆಚ್ಚಿನ ಪಾರ್ಕ್ ಅವಕಾಶ ಸೇರಿದಂತೆ ಹಲವು ಬೇಡಿಕೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಬಿಎಮ್‌ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ದೇವಪ್ಪ ಗೌಡ, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಕೆ.ಜಯರಾಮ ಕುಲಾಲ್, ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಹರಿಪ್ರಸಾದ್ ಯಾದವ್, ಸ್ನೇಹ ಸಂಗಮದ ಸಿಲ್ವಸ್ಟಾರ್ ಡಿಸೋಜ, ಇಸ್ಮಾಯಿಲ್, ರೋಹಿತ್ ಕುಮಾರ್, ಎಸ್‌ಡಿಟಿಯು ಸಂಘದ ನಾಜೂಕು ಕೂರ್ನಡ್ಕ, ಬಿಎಮ್‌ಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶೋಕ್ ಅಡ್ಯನಡ್ಕ, ವಿಟ್ಲದ ಹರೀಶ್ ಚರ್ಚೆಯಲ್ಲಿ ಪಾಲ್ಗೊಂಡರು. ರಿಕ್ಷಾ ಚಾಲಕರಾದ ಗಿರೀಶ್ ನಾಯ್ಕ ಸೊರಕೆ, ರವಿ, ವೆಂಕಪ್ಪ, ವಸಂತ, ರವೀಶ್ ಕೆ, ಕೆ.ಎಸ್ ಅಬ್ದುಲ್ ಹಮೀದ್, ಉಮ್ಮರ್ ಫಾರೂಕ್, ಹೈದರಾಲಿ ಕೂರ್ನಡ್ಕ, ಶಶಿಕಾಂತ್, ಶ್ರೀಧರ್, ಸಂತೋಷ್, ರಂಜನ್ ಬನ್ನೂರು, ಕೃಷ್ಣ, ರಾಜೇಶ್, ಹಾಸೀನ್, ಮಹಮ್ಮದ್ ಕುಂಞಿ, ಬಿ.ಕೆ.ಸುಂದರ ನಾಯ್ಕ, ಸಂಕಪ್ಪ ನಾಯ್ಕ ಮುಂಡೂರು, ದಿನೇಶ್ ಜೋಗಿ, ಸಂತೋಷ್ ಪೂಜಾರಿ, ಬಿ.ಸಂತೋಷ್ ಸೇರಿದಂತೆ ಹಲವಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಸುರೇಶ್ ಶರ್ಮ ಮತ್ತು ಎ.ಎಸ್.ಐ ಗಿರಿಯಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೆಡ್‌ಕಾನ್‌ಸ್ಟೇಲ್ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

ಕೋವಿಡ್‌ಗೆ ಏರಿದ ಬಾಡಿಗೆ ಇಳಿದಿಲ್ಲ:
ಕೋವಿಡ್ ಸಂದರ್ಭದಲ್ಲಿ ಆಟೋ ರಿಕ್ಷಾದಲ್ಲಿ ೨ ಮಂದಿ ಪ್ರಯಾಣಿಕರಿಗೆ ಮಾತ್ರ ಅವಕಾಶವಿತ್ತು. ಆ ಸಂದರ್ಭ ರಿಕ್ಷಾ ಚಾಲಕರಿಗೆ ಬಾಡಿಗೆಯಲ್ಲಿ ಆಗುವ ನಷ್ಟ ತಪ್ಪಿಸಲು ಬಾಡಿಗೆ ಏರಿಸಲಾಗಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಕೋವಿಡ್ ನಿಯಮ ಸಡಿಲಗೊಂಡಿದ್ದರಿಂದ ಆಟೋ ರಿಕ್ಷಾದಲ್ಲಿ ೪ ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಾರೆ. ಆದರೆ ಕೆಲವು ಸರ್ವಿಸ್ ರಿಕ್ಷಾದವರು ಕೋವಿಡ್ ಸಂದರ್ಭದಲ್ಲಿ ಏರಿಸಿದ ದುಪ್ಪಟ್ಟು ಬಾಡಿಗೆಯನ್ನು ಈಗಲೂ ವಸೂಲು ಮಾಡುತ್ತಿದ್ದಾರೆ ಎಂದು ರಿಕ್ಷಾ ಚಾಲಕರು ಪೊಲೀಸರ ಗಮನಕ್ಕೆ ತಂದರು. ಈ ಕುರಿತು ದುಪ್ಪಟ್ಟು ಬಾಡಿಗೆ ಪಡೆಯುವ ರಿಕ್ಷಾಗಳ ನಂಬರ್ ಕೊಡಿ ಎಂದು ಇನ್‌ಸ್ಪೆಕ್ಟರ್ ತಿಳಿಸಿದರು. ಜೊತೆಗೆ ಮಹಿಳಾ ಆಟೋ ಚಾಲಕರಿಬ್ಬರು ಪುತ್ತೂರಿನಲ್ಲಿ ರಿಕ್ಷಾದಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ಕರೆದೊಯ್ದು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಚಾಲಕರು ಪೊಲೀಸರ ಗಮನಕ್ಕೆ ತಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.