ಎಷ್ಟೇ ಎಚ್ಚರಿಕೆ ಕೊಟ್ರು ಮತ್ತೆ ಮತ್ತೆ ಮೋಸ ಹೋಗ್ತಾರೆ..! ಅಂಗಡಿಗೆ ಬರುವ ಅಪರಿಚಿತರ ಬಗ್ಗೆ ನಿಗಾಇರಲಿ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪಕ್ಕದ ಅಂಗಡಿಯಲ್ಲಿ ಕಳವಾದರೆ ಇನ್ನೊಂದು ಅಂಗಡಿಯವ ಮಾತನಾಡುತ್ತಾನೆ ಆರೆಗ್ ಆತ್ ಗೊತ್ತಾಪುಜ, ಇತ್ತೆತ ಕಾಲೊ ಸರಿ ಇಜ್ಜಿ .. ಒಂತೆ ಜಾಗೃತೆ ಮಲ್ಪೆರ ಆಪುಜಎಂದು ಆದರೆ ಅದೇ ವಾರದಲ್ಲಿ ಬುದ್ದಿವಾದ ಹೇಳಿದವನ ಅಂಗಡಿಯಲ್ಲೂ ಕಳವಾಗುತ್ತದೆ. ಇಂತಹ ಘಟನೆಗಳು ನಡೆಯುತ್ತಿರುವುದು ಇಂದು ನೆನ್ನೆಯ ವಿಷಯವಲ್ಲ ಹಲವು ವರ್ಷಗಳಿಂದ ಈ ರೀತಿಯ ಘಟನೆಗಳು ಮರುಕಳಿಸುತ್ತಲೇ ಇದೆ, ನಾವು ಮೋಸ ಹೋಗುತ್ತಲೇ ಇರುತ್ತೇವೆ ಇದಕ್ಕೆ ಕಾರಣ ಏನೆಂದು ಹುಡುಕಲು ಹೋದರೆ ನಮ್ಮ ಹೆಡ್ಡತನ ಅಥವಾ ನಮ್ಮ ಅಜಾಗರೂಕತೆ ಮತ್ತು ಅತಿಯಾದ ವಿಶ್ವಾಸವೇ ಇದಕ್ಕೆಲ್ಲಾ ಕಾರಣ ಎಂದರೂ ತಪ್ಪಾಗಲಾರದು. ಲಾಕ್ ಡೌನ್ ಬಳಿಕ ಕಳವು ಪ್ರಕರಣ ಹೆಚ್ಚುತ್ತಲೇ ಇದೆ. ಉದ್ಯೋಗವಿಲ್ಲದ ಕೆಲವು ಮಂದಿ ಕಳ್ಳತನ ಮತ್ತು ಮೋಸ ಮಾಡುವುದರಲ್ಲೇ ಆದಾಯವನ್ನು ಕಂಡುಕೊಳ್ಳುತ್ತಿದ್ದಾರೆ. ಇದಕ್ಕೆ ಬಲಿಯಾಗುತ್ತಿರುವುದು ಗ್ರಾಮೀಣ ಮುಗ್ದ ಜನರು. ಎಷ್ಟೇ ಎಚ್ಚರಿಕೆಯಿಂದ ನಾವು ಇದ್ದರೂ ಮತ್ತೆ ಮತ್ತೆ ಮೋಸ ಹೋಗುತ್ತಲೇ ಇದ್ದೇವೆ. ಕೆಲವರು ಮೋಸ ಹೋಗಿರುವ ವಿಚಾರವನ್ನು ನಾಚಿಕೆಯಿಂದ ಯಾರಿಗೂ ಹೇಳದೆ ಮುಚ್ಚಿಡುತ್ತಾರೆ ಮತ್ತೆ ಕೆಲವರು ಪೊಲೀಸರಿಗೆ ತಾವು ಮೋಸ ಹೋದ ಸಂಗತಿಯನ್ನು ತಿಳಿಸುತ್ತಾರೆ, ದೂರು ದಾಖಲಿಸುತ್ತಾರೆ.

ಸಿ ಸಿ ಕೆಮರಾ ಹಾಕಿದರೂ ಪ್ರಯೋಜನವಾಗುತ್ತಿಲ್ಲ
ಈಗೀಗ ಬಹುತೇಕ ಅಂಗಡಿ ಮಳಿಗೆಗಳಲ್ಲಿ ಸಿ ಸಿ ಕೆಮರಾ ಅಳವಡಿಸಲಾಗಿದೆ. ಸಿ ಸಿ ಕೆಮರಾ ಅಳವಡಿಸಿರುವುದು ಉತ್ತಮ ವಿಚಾರವೇ ಅಗಿದೆ ಆದರೆ ಸಿ ಸಿ ಹಾಕಿದ ಬಳಿಕ ಕಳವು ನಡೆಯುತ್ತಿದೆ , ಮೊದಲು ರಾತ್ರಿ ವೇಳೆ ಕಳವು ನಡೆದರೆ ಈಗ ಹಗಲು ವೇಳೆಯೇ ಕಳವು ನಡೆಯುತ್ತಿದೆ. ಕಳವು ನಡೆದದ್ದು ಸಿ ಸಿ ಕೆಮರಾದಲ್ಲಿ ದಾಖಲೂ ಆಗುತ್ತದೆ ಆದರೆ ಏನು ಪ್ರಯೋಜನ? ಹಣ ಕಳೆದುಕೊಂಡ ಬಳಿಕ ಕಳ್ಳನ ಪತ್ತೆಯಾಗಬೇಕದರೆ ಅಷ್ಟು ಸುಲಭದ ಕೆಲಸವಲ್ಲ. ಪೊಲೀಸರು ಕಣ್ಣಿಗೆ ಎಣ್ಣೆ ಹಚ್ಚಿ ಕಾದರೂ ಇಂಥಹ ಖತರ್ನಾಕ್ ಕಳ್ಳರು ಪೊಲೀಸರ ಕಣ್ಣಿಗೂ ಬೀಳದೆ ತಪ್ಪಿಸಿಕೊಳ್ಳುತ್ತಿರುವುದು ಪೊಲೀಸ್ ಇಲಾಖೆಗೂ ಕಗ್ಗಂಟಾಗಿ ಪರಿಣಮಿಸಿದೆ.

ಕಳೆದ ಬಾರಿ ಬಂದವನೇ ಈ ಬಾರಿಯೂ ಬಂದ
ಕಳೆದ ಲಾಕ್‌ಡೌನ್ ಮೊದಲು ಕುಂಬ್ರ ಪರಿಸರದಲ್ಲಿ ಹಾಡಹಗಲೇ ಅಂಗಡಿಯ ಡ್ರಾಯರ್‌ನಲ್ಲಿದ್ದ ಹಣವನ್ನು ದೋಚಿದ್ದರು. ಬೈಕಿನಲ್ಲಿ ಬಂದ ಖದೀಮರು ಖರೀದಿಯ ನೆಪದಲ್ಲಿ ಅಂಗಡಿಗೆ ಬಂದು ಮಾಲಕನ ಕಣ್ಣು ತಪ್ಪಿಸಿ ಕಳವು ಮಾಡಿದ್ದಾರೆ. ಇದೇ ಖದೀಮರು ಲಾಕ್ ಡೌನ್ ಬಳಿಕ ತಮ್ಮ ಚಾಣಕ್ಯವನ್ನು ಮತ್ತೆ ಪ್ರದರ್ಶಿಸಿದ್ದಾರೆ. ಸೆ. ೧೪ ರಂದು ಸಾರೆಪುಣಿ, ತಿಂಗಳಾಡಿಯಲ್ಲಿ ಕಳವು ನಡೆದಿದೆ. ಸಾರೆಪುಣಿಯಲ್ಲಿ ಗೂಡಂಗಡಿಗೆ ಗಿರಾಕಿ ಸೋಗಿನಲ್ಲಿ ಬಂದ ಬೈಕ್ ಸವಾರ ಜ್ಯೂಸ್ ಕೇಳಿದ್ದಾನೆ, ಮಾಲಕ ಜ್ಯೂಸ್ ತಂದು ಕೊಡುವ ಅದೇ ಗಳಿಗೆಯಲ್ಲಿ ಡ್ರಾಯರ್‌ನಲ್ಲಿದ್ದ ೩೦೦೦ ಚಿಲ್ಲರೆ ಹಣ ದೋಚಿದ್ದಾನೆ, ಅಲ್ಲಿಂದ ಸೀದಾ ತೆರಳಿದ ಆತ ತಿಂಗಳಾಡಿಯ ಅಡಿಕೆ ವ್ಯಾಪಾರಿ ಶಿಹಾಬ್ ಎಂಬವರ ಅಂಗಡಿಯ ಡ್ರಾಯರ್‌ನಿಂದ ಒಂದು ಲಕ್ಷ ನಗದನ್ನು ದೋಚಿದ್ದಾನೆ. ಅಂಗಡಿ ಮಾಲಕ ಗೋದಾಮಿಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಇನ್ನೆಲ್ಲಿ ಕಳವು ಮಾಡಿದ್ದಾನೆ ಎಂಬುದು ಗೊತ್ತಾಗಿಲ್ಲ.

ತಂಡವೇ ಇದೆಯಂತೆ?
ಬೈಕಿನಲ್ಲಿ ಬಂದ ಕದ್ದ ಹಣವನ್ನು ಆತ ತನ್ನ ಬಳಿ ಇರಿಸಿಕೊಳ್ಳದೆ ಆತನದ್ದೇ ತಂಡ ಕಾರಿನಲ್ಲಿ ಆತನನ್ನು ಹಿಂಬಾಲಿಸಿಕೊಂಡಿರುತ್ತದೆ. ಕದ್ದ ಹಣವನ್ನು ಕಾರಿನಲ್ಲಿರುವ ತನ್ನ ತಂಡಕ್ಕೆ ನೀಡುತ್ತಾನೆ. ಒಂದು ವೇಳೆ ಬೆನ್ನಟ್ಟಿ ಹಿಡಿದರೂ ಆತನ ಬಳಿ ಹಣ ಇಲ್ಲದ ಹಾಗೆ ನೋಡಿಕೊಳ್ಳುವ ವ್ಯವಸ್ಥೆಯೂ ಖತರ್ನಾಕ್ ಕಳ್ಳರು ಮಾಡಿಕೊಂಡಿರುತ್ತರೆ ಎನ್ನಲಾಗಿದ್ದು ತಿಂಗಳಾಡಿಯಲ್ಲಿ ಅಂಗಡಿಗೆ ಬಂದ ಬೈಕ್ ಸವಾರನ ಬೆನ್ನಲ್ಲೇ ಕಾರು ಕೂಡಾ ಇದ್ದುದನ್ನು ಸ್ಥಳೀಯರು ಗಮನಿಸಿದ್ದು ಸಂಶಯಕ್ಕೆ ಪುಷ್ಠಿ ನೀಡುತ್ತಿದೆ.

ಅಪರಿಚಿತರು ಬಂದರೆ ಎಚ್ಚರ
ನಿಮ್ಮ ಅಂಗಡಿ, ಮನೆ, ಅಥವಾ ಮಳಿಗೆಗೆ ಅಪರಿಚಿತರು ಬಂದರೆ ಎಚ್ಚರಿಕೆಯಿಂದ ಇರಿ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡುತ್ತಲೇ ಇದೆ, ಸಂಶಯಿತ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡಿ ಎಂದೂ ಮನವಿ ಮಾಡುತ್ತಿದೆ ಈ ಕೆಲಸವನ್ನು ಯಾರೂ ಮಾಡದೇ ಇರುವುದೇ ಕಳವು ಮಾಡುವವರಿಗೆ ಧೈರ್ಯ ತುಂಬಲು ಕಾರಣವಾಗಿದೆ. ಅಪರಿಚಿತರು ಗ್ರಾಹಕರ ಸೋಗಿನಲ್ಲಿ ಬಂದರೂ ಅವರ ಮೇಲೆ ನಿಮ್ಮ ಒಂದು ಕಣ್ಣು ಇಟ್ಟಿರಿ ಯಾಕೆಂದರೆ ಯಾವ ಗಳಿಗೆಯಲ್ಲಿ ಏನು ಬೇಕಾದರೂ ನಡೆಯಬಹುದು ಅದಕ್ಕೆ.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಉದ್ಯೋಗವಿಲ್ಲದ ಮಂದಿ ಕಳವು ಸೇರಿದಂತೆ ಮೋಸದ ಜಾಲವನ್ನೇ ಆದಾಯದ ಮೂಲವನ್ನಾಗಿಸುತ್ತಿದ್ದಾರೆ ಇದು ದೊಡ್ಡ ದುರಂತವಾಗಲಿದೆ. ಕಳ್ಳರು ಎಲ್ಲಾ ಕ್ಷೇತ್ರದಲ್ಲೂ ಇದ್ದಾರೆ, ಒಬ್ಬರಿಗೊಬ್ಬರು ನಂಬಿಕೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಐ ಟಿ ಬಿ ಟಿ ಕಂಪೆನಿಯಲ್ಲಿ ಕೆಲಸಕ್ಕಿದ್ದವರು ಕೃಷಿಯಲ್ಲಿ ತೊಡಗಿಸಿಕೊಂಡರೆ ಉಳಿದ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರು ಕಳವು , ಮೋಸ ಮಾಡುವುದರಲ್ಲೇ ದಿನ ಕಳೆಯುತ್ತಿದ್ದಾರೆ. ಸಿ ಸಿ ಕೆಮರಾಗಳು ಬಹುತೇಕ ಕಡೆ ಕೆಲಸ ಮಾಡುತ್ತಿಲ್ಲ. ಒಂದೆರಡು ಆರೋಪಿಗಳನ್ನು ಸಿ ಸಿ ಕೆಮರಾ ಆದರಿಸಿ ಬಂಧಿಸಿ ಶಿಕ್ಷೆಗೊಳಪಡಿಸಬೇಕು ಆಗಿದ್ದಲ್ಲಿ ಭಯ ಹುಟ್ಟುತ್ತದೆ. ಉದ್ಯೋಗವಿಲ್ಲದ ಯುವ ಸಮೂಹಕ್ಕೆ ದೇವರು, ಸತ್ಯ, ನ್ಯಾಯ , ಧರ್ಮ ಯಾವುದೂ ಬೇಕಾಗಿಲ್ಲ ಎಂಬ ದುಸ್ಥಿತಿ ನಿರ್ಮಾಣವಾಗಿರುವುದು ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗುವ ಸಂಭವ ಇದ್ದು ನಾವು ಬಹಳ ಎಚ್ಚರಿಕೆಯಿಂದ ಇರಬೇಕು . ಈಗ ಡ್ರಾಯರ್‌ಗೆ ಕೈ ಹಾಕಿದವರು ನಾಳೆ ನಮ್ಮ ಕಿಸೆಗೂ ಕೈಹಾಕಿ ಹಣ ಎಗರಿಸುವ ಕಾಲವೂ ದೂರವಿಲ್ಲ ಎಂದರೂ ಅತಿಶಯೋಕ್ತಿಯಾಗದು.
ಕುಂಬ್ರ ದುರ್ಗಾಪ್ರಸಾದ್ ರೈ, ನ್ಯಾಯವಾದಿಗಳು, ಪುತ್ತೂರು

ಅಪರಿಚಿತರು ಬಂದರೆ ಅಥವಾ ಯಾವುದೇ ವ್ಯಕ್ತಿಗಳ ಬಗ್ಗೆ ಸಂಶಯ ಇದ್ದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ವ್ಯಾಪಾರ, ಗ್ರಾಹಕರ ಸೋಗಿನಲ್ಲಿ ಬಂದು ಕಳವು ನಡೆಸುತ್ತಾರೆ. ಅಪರಿಚಿತರು ಕಂಡು ಬಂದಲ್ಲಿ ಅವರ ಮೇಲೆ ನಿಗಾ ಇರಿಸಿಕೊಂಡು ಅವರು ಬಂದಿರುವ ವಾಹನದ ಬಗ್ಗೆಯೂ ತಿಳಿದುಕೊಳ್ಳಿ. ಸಿ ಸಿ ಕೆಮರಾ ಅಳವಡಿಸುವಾಗ ಉತ್ತಮ ಕ್ವಾಲಿಟಿ ವಿಡಿಯೋ ದಾಖಲಿಸುವ ಕೆಮರಾವನ್ನೇ ಅಳವಡಿಸಿದರೆ ಅದರಲ್ಲಿ ವ್ಯಕ್ತಿಯ ಮುಖಪರಿಚಯವನ್ನು ದೃಡೀಕರಿಸಲು ಸಾಧ್ಯವಾಗಬಹುದು.
– ಕರುಣಾಕರ್, ಬೀಟ್‌ಪೊಲೀಸ್ ಒಳಮೊಗ್ರು ಗ್ರಾಮ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.