ಕಡಬ ತಾಲೂಕು ಕಛೇರಿ ಸಿಬ್ಬಂದಿಯ ಎಡವಟ್ಟು..! ಚಾರ್ವಾಕ ಲಕ್ಷ್ಮಣ ಗೌಡರ ಅಂಗವಿಕಲ ವೇತನ ಇನ್ಯಾರದ್ದೋ ಖಾತೆಗೆ ಜಮೆ !

Puttur_Advt_NewsUnder_1
Puttur_Advt_NewsUnder_1

ಕಡಬ: ಅಂಗವಿಕಲ ವೇತನಕ್ಕೆ ಅರ್ಜಿ ಸಲ್ಲಿಸಿ ಮಂಜೂರಾತಿಯಾಗಿದ್ದರೂ ವೇತನ ಪಡೆಯಲು ಅರ್ಜಿದಾರರು ನೀಡಿದ ಬ್ಯಾಂಕ್ ಖಾತೆ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿರುವ ಕಡಬ ತಾಲೂಕು ಕಛೇರಿ ಸಿಬ್ಬಂದಿಯೊಬ್ಬರ ಎಡವಟ್ಟಿನಿಂದಾಗಿ ಅರ್ಹ ಅಂಗವಿಕಲ ವೇತನ ಫಲಾನುಭವಿಯೋರ್ವರ ಮಾಸಿಕ ವೇತನ ಹಣ ಕಳೆದ ೧೦ ತಿಂಗಳಿಂದ ಇನ್ಯಾರದೋ ಖಾತೆಗೆ ಜಮೆಯಾಗುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.ಈ ವಿಚಾರವನ್ನು ತಾಲೂಕು ಕಛೇರಿ ಸಿಬ್ಬಂದಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.ಘಟನೆ ಕುರಿತು ಕೂಡಲೇ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಪುತ್ತೂರಿನ ಸಹಾಯಕ ಆಯುಕ್ತರು ಪ್ರತಿಕ್ರಿಯಿಸಿದ್ದಾರೆ.

ಚಾರ್ವಾಕ ಗ್ರಾಮದ ಬೊಮ್ಮಳಿಕೆ ಲಕ್ಷ್ಮಣ ಗೌಡ ಎಂಬವರ ಅಂಗವಿಕಲ ವೇತನ ಕಳೆದ ಹತ್ತು ತಿಂಗಳಿಂದ ಇನ್ನೊಬ್ಬರ ಖಾತೆಗೆ ಜಮೆಯಾಗುತ್ತಿರುವುದು ಬೆಳಕಿಗೆ ಬಂದಿದೆ.ಅರ್ಜಿಯ ಜೊತೆ ನೀಡಲಾದ ಅವರ ಬ್ಯಾಂಕ್ ಖಾತೆಯ ವಿವರವನ್ನು (ಖಾತೆ ಸಂಖ್ಯೆ ೧೩೦೯೦೧೦೧೧೦೦೧೦೮೭) ಕಂಪ್ಯೂಟರ್‌ಗೆ ದಾಖಲಿಸುವ ಸಂದರ್ಭ ಕೊನೆಯ ಸಂಖ್ಯೆ ೭ರ ಬದಲಾಗಿ ೧ ಎಂದು ನಮೂದಿಸಿ ಸಿಬ್ಬಂದಿ ಪ್ರಮಾದ ಎಸಗಿದ್ದರಿಂದಾಗಿ ಅರ್ಹ ಫಲಾನುಭವಿಗೆ ಜಮೆಯಾಗಬೇಕಾದ ಮಾಸಿಕ ವೇತನ ರೂ.೬೦೦ ಹಣ ಇನ್ನೊಬ್ಬರಿಗೆ ಜಮೆಯಾಗುತ್ತಿದ್ದುದು ಪತ್ತೆಯಾಗಿದೆ.ಲಕ್ಷ್ಮಣ ಗೌಡರು ಅರ್ಜಿ ಹಾಕಿದ ಬಳಿಕ ಜುಲೈ ೧, ೨೦೧೯ರಂದು ವೇತನಕ್ಕೆ ಅರ್ಹರೆಂದು ಮಂಜೂರಾತಿ ಪತ್ರ ದೊರಕಿತ್ತು. ಆದರೂ ತನ್ನ ಖಾತೆಗೆ ಹಣ ಜಮೆಯಾಗಲಿಲ್ಲವೇಕೆ ಎಂದು ಹತ್ತಾರು ಬಾರಿ ಗ್ರಾಮಕರಣಿಕರ ಕಛೇರಿ ಹಾಗೂ ಬ್ಯಾಂಕ್‌ಗೆ ಅಲೆದಾಟ ನಡೆಸಿದಾಗಲೂ ಅವರಿಗೆ ಸಮರ್ಪಕ ಉತ್ತರ ದೊರೆಯದೆ ಇದ್ದಾಗ ಕಡಬ ತಾಲೂಕು ಕಛೇರಿಯಲ್ಲಿ ಪರಿಶೀಲಿಸಿದಾಗ ಕಂಪ್ಯೂಟರಿನಲ್ಲಿ ದಾಖಲಿಸಿರುವ ಅವರ ಬ್ಯಾಂಕ್ ಖಾತೆ ನಂಬ್ರ ತನ್ನದಾಗಿರದ ಕಾರಣ ತನಗೆ ಬರಬೇಕಾಗಿದ್ದ ಮಾಸಿಕ ವೇತನ ಇನ್ಯಾರದೋ ಖಾತೆಗೆ ಜಮೆಯಾಗುತ್ತಿರುವುದು ಅವರಿಗೆ ಖಾತ್ರಿಯಾಗಿದೆ.

ಅನಾರೋಗ್ಯದಿಂದ ಬಳಲುತ್ತಿರುವ ಲಕ್ಷ್ಮಣ ಗೌಡ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬ: ಮನೆಯಲ್ಲಿ ಅಷ್ಟೇನೂ ಆದಾಯವಿಲ್ಲದ ಲಕ್ಷ್ಮಣ ಗೌಡರಿಗೆ ದೃಷ್ಟಿ ದೋಷದ ಹಿನ್ನೆಲೆ ಅಂಗವಿಕಲ ವೇತನಕ್ಕೆ ಅರ್ಜಿ ಹಾಕಿದ್ದರು. ಎರಡು ವರ್ಷಗಳ ಹಿಂದೆ ಬೆನ್ನುಮೂಳೆಯ ಶಸ್ತ್ರ ಚಿಕಿತ್ಸೆ ನಡೆದು ಲಕ್ಷಾಂತರ ರೂಪಾಯಿ ಸಾಲದಲ್ಲಿದ್ದು ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದರೂ ದುಡಿಯುವ ಚೈತನ್ಯವನ್ನು ಕಳೆದುಕೊಂಡಿದ್ದಾರೆ.ಈಗಲೂ ಚಿಕಿತ್ಸೆ ಮುಂದುವರಿಸುತ್ತಿದ್ದು ತಿಂಗಳಿಗೆ ೨,೫೦೦ ರೂ. ವೆಚ್ಚ ತಗಲುತ್ತದೆ.ಪತ್ನಿ ರಾತ್ರಿ ಹಗಲೆನ್ನದೆ ದುಡಿಯುತ್ತಾ ಬೀಡಿ ಕಟ್ಟುತ್ತಾ ಜೀವನ ಸಾಗಿಸುತ್ತಿದ್ದಾರೆ.ಲಕ್ಷ್ಮಣ ಗೌಡರ ಇಬ್ಬರು ಗಂಡು ಮಕ್ಕಳ ಪೈಕಿ ಹಿರಿಯ ಮಗ ದೀಕ್ಷಿತ್ ಸುಳ್ಯದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದು ರಜಾ ದಿನಗಳಲ್ಲಿ ಅಡಕೆ ಸುಲಿಯುವ ಕೂಲಿ ಕೆಲಸ ಮಾಡಿಕೊಂಡು ತನ್ನ ವಿದ್ಯಾಭ್ಯಾಸದ ಖರ್ಚಿಗೆ ಸ್ವಲ್ಪ ಮಟ್ಟಿನ ಆದಾಯವನ್ನು ಭರಿಸಿಕೊಳ್ಳುತ್ತಿದ್ದಾರೆ.ಎರಡನೆ ಮಗ ಗೌತಮ್ ಕಾಣಿಯೂರು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ೧೦ನೇ ತರಗತಿ ಅಭ್ಯಸುತ್ತಿದ್ದ ಸಂದರ್ಭ ೨೦೧೯ರ ಸೆ.೫ರಂದು ಶಾಲಾ ಆಟದ ಮೈದಾನದ ಪಕ್ಕದ ಜಾಗದಲ್ಲಿರುವ ಇಂಗು ಗುಂಡಿಗೆ ಬಿದ್ದು ಮೃತಪಟ್ಟಿದ್ದರು.ಆರ್ಥಿಕ ಸಂಕಷ್ಟ, ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮಣ ಗೌಡರಿಗೆ ಮಗ ಗೌತಮ್ ಸಾವು ಇನ್ನಷ್ಟು ಆಘಾತ ಉಂಟು ಮಾಡಿತ್ತು.ಈ ಮಧ್ಯೆ ಅಂಗವಿಕಲ ವೇತನ ಮಂಜೂರಾದರೂ ತನಗೆ ಸಿಗದೇ ಇರುವುದು ಅವರನ್ನು ಇನ್ನಷ್ಟು ಸಂಕಷ್ಟಕ್ಕೆ ಎಡೆಮಾಡಿದೆ.

ತಾಲೂಕು ಕಛೇರಿಯಿಂದ ಸ್ಪಂದನೆ ಇಲ್ಲ ಲಕ್ಷ್ಮಣ ಗೌಡ ಆರೋಪ
ಸಮಸ್ಯೆಯಾಗಿರುವ ಬಗ್ಗೆ ಕಡಬ ತಹಶೀಲ್ದಾರ್ ಅವರ ಗಮನಕ್ಕೆ ತರಲಾಗಿದ್ದು, ತನ್ನ ಹಣ ಜಮೆಯಾದ ಖಾತದಾರರಲ್ಲಿ ವಿಷದಾಗ ತಿಳಿಸಿ ಹಣ ಪಡೆದುಕೊಳ್ಳಿ ಎಂದು ಅವರು ಉತ್ತರಿಸಿದ್ದಾರೆ. ಖಾತೆದಾರರಲ್ಲಿ ಮಾತನಾಡುವುದು, ಅವರ ವಿವರ ಬ್ಯಾಂಕಿನಿಂದ ಸಂಗ್ರಹಿಸುವುದು ನನ್ನಿಂದ ಸಾಧ್ಯವಿಲ್ಲ ಎಂದರೂ ಯಾವುದೇ ಸ್ಪಂದನೆಯಿಲ್ಲ. ನಾನು ಅನಾರೋಗ್ಯದಿಂದ ಬಳಲುತ್ತಿzನೆ.ಈ ಹಣ ದೊರೆತರೆ ಔಷಧದ ಖರ್ಚಿಗಾದರೂ ಸಹಾಯವಾದೀತು.ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಳ್ಳಿ ಎಂದು ಲಕ್ಷ್ಮಣ ಗೌಡರು ವಿನಂತಿಸಿದ್ದಾರೆ.

ವಿಚಾರಣೆ ನಡೆಸಿ ಸೂಕ್ತ ಕ್ರಮ ಎಸಿ ಡಾ| ಯತೀಶ್ ಉಳ್ಳಾಲ್
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ| ಯತೀಶ್ ಉಳ್ಳಾಲ್ ಅವರು, ಘಟನೆ ಈಗಾಗಲೇ ನನ್ನ ಗಮನಕ್ಕೆ ಬಂದಿದೆ, ಕೂಡಲೇ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.