34 ನೆಕ್ಕಿಲಾಡಿ: ಸ್ವಾಮೀತ್ವ ಯೋಜನೆಯ ಬಗ್ಗೆ ಮಾಹಿತಿ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಗ್ರಾಮೀಣ ಭಾಗದಲ್ಲಿ ತಲೆತಲಾಂತರಗಳಿಂದ ವಾಸಿಸುತ್ತಿದ್ದರೂ ತಮ್ಮ ಜಾಗದ ದಾಖಲೆ ಹೊಂದದ ಗ್ರಾಮಸ್ಥರಿಗೆ ತಮ್ಮ ಆಸ್ತಿಗಳ ಬಗ್ಗೆ ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳುವ ಅವಕಾಶವನ್ನು `ಸ್ವಾಮೀತ್ವ’ ಯೋಜನೆಯು ಕಲ್ಪಿಸುತ್ತಿದ್ದು, ಮೊದಲ ಹಂತವಾಗಿ ೩೪ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿಯೂ ಇದು ಕಾರ್ಯರೂಪಕ್ಕೆ ಬರಲಿದೆ. ಆದ್ದರಿಂದ ಸರ್ವೇಗೆ ಬರುವ ಅಧಿಕಾರಿಗಳಿಗೆ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಬೇಕು ಎಂದು ಪುತ್ತೂರು ಭೂ ಮಾಪನಾ ಇಲಾಖೆಯ ಸಹಾಯಕ ನಿರ್ದೇಶಕ ಪುಷ್ಪರಾಜ್ ತಿಳಿಸಿದರು.

`ಸ್ವಾಮೀತ್ವ’ ಯೋಜನೆಯ ಬಗ್ಗೆ ಮಾಹಿತಿ ನೀಡಲು ೩೪ ನೆಕ್ಕಿಲಾಡಿ ಗ್ರಾ.ಪಂ. ಸಭಾಂಗಣದಲ್ಲಿ ಸೆ.೧೬ರಂದು ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಅವರು ಮಾಹಿತಿ ನೀಡುತ್ತಿದ್ದರು.

ಈ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶಗಳ ಆಸ್ತಿಗಳನ್ನು ಡ್ರೋಣ್ ತಂತ್ರಜ್ಞಾನದ ಮೂಲಕ ಸಮೀಕ್ಷೆಯನ್ನು ನಡೆಸಿ ದಾಖಲೆ ಸಿದ್ಧಪಡಿಸಿಕೊಡಲಾಗುವುದು. ಈ ಸರ್ವೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆ, ಭೂಮಾಪನ ಇಲಾಖೆ ಹಾಗೂ ಸರ್ವೆ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ನಡೆಯಲಿದೆ. ಸರ್ವೆಗೆ ಬರುವ ಇಲಾಖಾ ಸಿಬ್ಬಂದಿಗೆ ಗ್ರಾಮಸ್ಥರು ಅವರು ಕೇಳುವ ದಾಖಲೆಗಳನ್ನು ತೋರಿಸಿ, ಸಹಕಾರ ನೀಡಬೇಕು ಎಂದರು.

೩೪ ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಮಾತನಾಡಿ, ೩೪ ನೆಕ್ಕಿಲಾಡಿಯಲ್ಲಿ ಸುಮಾರು ೩೭೩ ಮನೆಗಳನ್ನು ಸರ್ವೆಗೆ ಗುರುತಿಸಲಾಗಿದ್ದು, ಗ್ರಾಮದ ನೆರೆ ಸಂತ್ರಸ್ತ ಕಾಲನಿ, ಬೊಳಂತಿಲ, ಭೀತಲಪ್ಪು, ನೆಕ್ಕಿಲಾಡಿ ಪೇಟೆ, ಶಾಂತಿನಗರ ಜನತಾ ಹಾಗೂ ಪರಿಶಿಷ್ಟ ಪಂಗಡದ ಕಾಲನಿ, ಸುಭಾಶ್‌ನಗರ, ಆದರ್ಶನಗರ ಹಾಗೂ ಕರ್ವೇಲಿನಲ್ಲಿ `ಸ್ವಾಮೀತ್ವ’ದಡಿ ಸರ್ವೇ ಕಾರ್ಯ ನಡೆಯಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ೩೪ ನೆಕ್ಕಿಲಾಡಿ ಗ್ರಾ.ಪಂ.ನ ಆಡಳಿತಾಧಿಕಾರಿ ನವೀನ್ ಭಂಡಾರಿ ಮಾತನಾಡಿ,

ತಲೆ ತಲಾಂತರದಿಂದ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದರೂ ಜಾಗದ ಬಗ್ಗೆ ಸೂಕ್ತ ದಾಖಲೆಗಳು ಇಲ್ಲದೆ ಹಲವರಿಗೆ ಸಮಸ್ಯೆಯಾಗಿದೆ. ಇದಕ್ಕಾಗಿ ಕೇಂದ್ರ ಸರಕಾರವು `ಸ್ವಾಮೀತ್ವ’ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜ್ಯದ ೧೧ ಜಿಲ್ಲೆಗಳಲ್ಲಿ ಇದನ್ನು ಅನುಷ್ಠಾನಿಸಲಾಗಿದೆ. ಪ್ರಥಮ ಹಂತವಾಗಿ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಎಂಟು ಗ್ರಾ.ಪಂ.ನಲ್ಲಿ ಇದನ್ನು ಅನುಷ್ಠಾನ ಮಾಡಲಾಗಿದೆ. ಆದ್ದರಿಂದ ಇಲ್ಲಿನ ಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯೆ ಸುಜಾತಕೃಷ್ಣ ಆಚಾರ್ಯ, ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕಿ ಶೈಲಜಾ ಭಟ್, ಭೂ ಮಾಪನ ಇಲಾಖೆಯ ಮುಖ್ಯಸ್ಥ ಪ್ರಕಾಶ್, ೩೪ ನೆಕ್ಕಿಲಾಡಿ ಗ್ರಾಮ ಕರಣಿಕ ರಮಾನಂದ ಚಕ್ಕಡಿ, ಗ್ರಾ.ಪಂ. ಮಾಜಿ ಅಧ್ಯಕ್ಷೆ ರತಿ ಎಸ್. ನಾಯ್ಕ, ಮಾಜಿ ಸದಸ್ಯರಾದ ಅನಿ ಮಿನೇಜಸ್, ಶ್ರೀಮತಿ ಸತ್ಯವತಿ, ಎನ್. ಶೇಖಬ್ಬ, ಪ್ರಶಾಂತ್ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.