ಪುತ್ತೂರು; ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ವಿಶ್ವಕರ್ಮ ಸಂಘ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವಕರ್ಮ ಜಯಂತಿ ದಿನಾಚರಣೆಯು ಸೆ.17ರಂದು ಮಿನಿ ವಿಧಾನ ಸೌಧದಲ್ಲಿರುವ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.
ಸಂಸ್ಮರಣಾ ಜ್ಯೋತಿ ಬೆಳಗಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರು, ಮಹಾತ್ಮಾ ಗಾಂಧೀಜಿ, ವಿಶ್ವಕರ್ಮರಂತ ಮಹಾತ್ಮರು ವ್ಯಕ್ತಿಗಳಲ್ಲ. ಅವರು ಸಮಾಜದ ಶಕ್ತಿ. ಅವರು ಸಮಾಜಕ್ಕಾಗಿ ಅಭಿವೃದ್ಧಿಗಾಗಿ ಬದುಕಿದವರು. ತನ್ನ ಸರ್ವಸ್ವವನ್ನು ಸಮಾಜದ ಏಳಿಗೆಗಾಗಿ ದಾರೆ ಎರೆದವರು. ಅವರ ಆದರ್ಶ, ಜೀವನ ಶೈಲಿಯನ್ನು ಇಂದಿನ ಹಾಗೂ ಮುಂದಿನ ಸಮಾಜಕ್ಕೆ ತಿಳಿಸಿ, ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮಹಾತ್ಮ ಜಯಂತಿಗಳನ್ನು ಆಚರಿಸಲಾಗುತ್ತಿದೆ ಎಂದರು. ವಿಶ್ವಕರ್ಮ ದೇವರು ವಿಶ್ವವನ್ನೇ ಸೃಷ್ಟಿ ಮಾಡಿದವರು. ಅವರ ಜನ್ಮ ದಿನಾಚರಣೆಯು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೇ ಇಡೀ ಸಮಾಜವೇ ಆಚರಿಸುವ ನಿಟ್ಟಿನಲ್ಲಿ ಸರಕಾರದ ವತಿಯಿಂದ ಆಚರಿಸಲಾಗುತ್ತಿದೆ. ವಿಶ್ವಕರ್ಮ ಸಮಾಜವು ಭವ್ಯ ಪರಂಪರೆಯುಳ್ಳ ಸಮಾಜ. ವಾಸ್ತು ಶಿಲ್ಪವನ್ನು ಬಲ್ಲವರು. ಮನೆ, ದೇವಾಲಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮಾಜದ ಕೈಚಲಕವಿದೆ. ಪ್ರತಿಯೊಂದ ಕಲೆಯಲ್ಲೂ ವಿಶ್ವಕರ್ಮ ಸಮಾಜದ ಚಾರಿತ್ರ್ಯವಿದೆ ಎಂದು ಶಾಸಕರು ಹೇಳಿದರು.
ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಹಶೀಲ್ದಾರ್ ರಮೇಶ್ ಬಾಬು, ವಿಶ್ವ ಬ್ರಾಹ್ಮಣ ಸೇವಾ ಸಮಾಜದ ಅಧ್ಯಕ್ಷ ಎಸ್.ಎನ್ ಜಗದೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶ್ವಬ್ರಾಹ್ಮಣ ಸೇವಾ ಸಮಾಜದ ಪ್ರಧಾನ ಕಾರ್ಯದರ್ಶಿ ಶ್ರೀಧರ ಆಚಾರ್ಯ, ಕೋಶಾಧಿಕಾರಿ ರಮೇಶ್ ಆಚಾರ್ಯ ಮಾಮೇಶ್ವರ, ಯುವ ಸಮಾಜದ ಅಧ್ಯಕ್ಷ ಸುರೇಶ್ ಆಚಾರ್ಯ, ಶ್ರೀನಿವಾಸ ಆಚಾರ್ಯ, ಮಹಿಳಾ ಘಟಕ ಅಧ್ಯಕ್ಷೆ ವಾಣಿ, ರೋಹಿಣಿ ರಾಘವ, ಆಚಾರ್ಯ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರುಗಳು, ವಿವಿಧ ಇಲಾಖಾಧಿಕಾರಿಗಳು ಹಾಗೂ ಸಿಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪತಹಶೀಲ್ದಾರ್ ಸುಲೋಚನಾ ಪಿ.ಕೆ ಸ್ವಾಗತಿಸಿ, ವಂದಿಸಿದರು.