ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ನೂತನ ವಿಸ್ತೃತ ಆಡಳಿತ ಕಚೇರಿ, ಸಭಾಭವನ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
  • ಜೇನು ಕೃಷಿಗೂ ಸಂಶಶೋಧನೆ ಮತ್ತು ಅಭಿವೃದ್ಧಿ ಆವಶ್ಯ-ಡಿವಿಎಸ್
  •  ಸಹಕಾರಿ ಕ್ಷೇತ್ರ ಪುತ್ತೂರಿನಲ್ಲಿ ಬಲಿಷ್ಠ- ಎಸ್.ಟಿ ಸೋಮಶೇಖರ್
  • ಅವಕಾಶ ದೊರೆತರೆ ಜೇನು ಕೃಷಿಗೂ ಬೆಳೆಸಾಲ- ಡಾ.ಎಂ.ಎನ್.ಆರ್
  •  ಜೇನು ಲೋಕಲ್ ಟು ವೋಕಲ್‌ಗೆ ಪೂರಕ- ಶಾಸಕ ಮಠಂದೂರು


ಪುತ್ತೂರು: ಹೊಸ ಸಂಶೋಧನೆ ಮತ್ತು ಅಭಿವೃದ್ಧಿಯಿಂದ ಯಾವುದೇ ಸಂಸ್ಥೆಗಳು ಅಭಿವೃದ್ಧಿ ಸಾಧ್ಯ. ಇಂದು ದೇಶದಲ್ಲಿಯೂ ಹೊಸ ಸಂಶೋಧನೆ ಮತ್ತು ಅಭಿವೃದ್ಧಿಯ ಆವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಜೇನು ಕೃಷಿಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ನಡೆಯಬೇಕು. ಗ್ರಾಮದಲ್ಲಿರುವ ಯುವಕರನ್ನು ಗುರುತಿಸಿ ಅವರಿಗೆ ಸಂಘದ ಮುಖಾಂತರ ತರಬೇತಿ ನೀಡಿ ಪ್ರೋತ್ಸಾಹ ನೀಡಬೇಕು. ಅವರ ಮೂಲಕ ಹೊಸ ಅಧ್ಯಯನಗಳು ನಡೆದಾಗ ಒಂದು ವರ್ಷದಲ್ಲಿ ಜೇನು ಕೃಷಿಯ ಆಧಾಯವು ಇತರ ಮೂಲ ಉತ್ಪಾದನೆಗಿಂತಲೂ ಅಧಿಕವಾಗಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು.
ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ನೂತನ ವಿಸ್ತೃತ ಆಡಳಿತ ಕಚೇರಿ ಹಾಗೂ ಸಭಾ ಭವನ ಉದ್ಘಾಟನಾ ಸಮಾರಂಭದಲ್ಲಿ ಆಡಳಿತ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದೇಶಗಳಲ್ಲಿ ಜೇನಿಗೆ ವಿಶೇಷ ಬೇಡಿಕೆಯಿದ್ದು ಅದರ ಪ್ರಯೋಜನ ಪಡೆಯುವ ಕೆಲಸ ಆಗಬೇಕು. ಆತ್ಮನಿರ್ಭರ ಭಾರತದಲ್ಲಿ ಸ್ಕಿಲ್ ಡೆವಲ್ಪಮೆಂಟ್‌ನ ಭಾಗವಾಗಿ ಗ್ರಾಮೀಣ ಭಾಗದ ಯುವಕರಿಗೆ ಜೇನು ಕೃಷಿಯ ಕುರಿತು ಉತ್ತಮ ತರಬೇತಿ ಹಾಗೂ ಪೆಟ್ಟಿಗೆಗಳನ್ನು ನೀಡುವ ಮುಖಾಂತರ ಸ್ವ ಉದ್ಯೋಗಕ್ಕೆ ಕಲ್ಪಿಸಬೇಕು ಎಂದು ಸಂಘದ ಅಧ್ಯಕ್ಷರಲ್ಲಿ ಅವರು ಮನವಿ ಮಾಡಿದರು.

ಸ್ವ ಉದ್ಯೋಗಕ್ಕೆ ಪೂರಕವಾದ 116 ಅಂಶಗಳಲ್ಲಿ ಜೇನುಕೃಷಿ ಒಂದು. ತಿಂಗಳಿಗೆ ೧೫,೦೦೦ ಆದಾಯ ಸಂಗ್ರಹಿಸಲು ಸಾಧ್ಯವಿದ್ದು ನಿರುದ್ಯೋಗ ನಿವಾರಣೆಗೆ ಪೂರಕವಾಗಲಿದೆ. ಪ್ರಧಾನಿ ಮೋದಿಯವರು ಆತ್ಮನಿರ್ಭರ ಭಾರತ ಯೋಜನೆಯಲ್ಲಿ ಜೇನು ಕೃಷಿಯ ಅಭಿವೃದ್ಧಿಗೆ ರೂ.೫೦೦ಕೋಟಿಯನ್ನು ಮೀಸಲಿಟ್ಟಿದ್ದಾರೆ. ಜೇನು ಕೃಷಿಯು ಇದು ರೈತರ ಆದಾಯ ದ್ವಿಗುಣವಾಗಲು ಸಹಕಾರಿಯಾಗಲಿದೆ. ಹೈನುಗಾರಿಕೆಯಂತೆ ಜೇನು ಕೃಷಿಯಲ್ಲಿ ಆದಾಯಗಳಿಸಲು ಸಾಧ್ಯವಿದೆ. ಒಬ್ಬ ರೈತನಿಗೆ ೧೫ ಜೇನು ಪೆಟ್ಟಿಗೆಯಿದ್ದರೆ ಆತನಿಗೆ ಇತರ ಕೃಷಿಯ ಉತ್ಪಾದನೆಯಷ್ಟೇ ಜೇನು ಕೃಷಿಯಲ್ಲೂ ಉತ್ಪಾದನೆ ಸಾಧ್ಯ. ಪ್ರಸ್ತುತ ಭಾರತದಿಂದ 65,000 ಮೆಟ್ರಿಕ್ ಟನ್ ಜೇನನ್ನು ವಿದೇಶಗಳಿಗೆ ರಪ್ತು ಮಾಡಲಾಗುತ್ತಿದೆ ಎಂದು ಹೇಳಿದ ಸದಾನಂದ ಗೌಡರವರು ರೈತರರಿಗೆ ರಸಗೊಬ್ಬರಗಳ ಕೊರತೆ ಆಗಬಾರದು ಎಂಬ ಪ್ರಧಾನಿಯವರ ಕನಸಿಗೆ ಪೂರಕವಾಗಿ ಆತ್ಮನಿರ್ಭರ ಭಾರತ ಯೋಜನೆಯ ಮೂಲಕ ಶೇ.100 ರಸಗೊಬ್ಬರ ದೇಶಿಯವಾಗಿ ಉತ್ಪಾದನೆಯಾಗುತ್ತಿದೆ ಎಂದು ಹೇಳಿದರು.

   
ಸಭಾ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿ, ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿ ನಿರ್ದೇಶಕರು, ಸಿಬಂದಿಗಳು ಸ್ಪಂಧಿಸಿದರೆ ಸಹಕಾರಿ ಸಂಘವು ಹೇಗೆ ಅಭಿವೃದ್ಧಿ ಎಂಬುದಕ್ಕೆ ಜೇನು ವ್ಯವಸಾಯಗಾರರ ಸಂಘವು ಮಾದರಿಯಾಗಿದೆ. ಇದರಿಂದಾಗಿ ಸಂಘವು ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ಬೆಳೆಯಲು ಸಹಕಾರಿಯಾಗಿದೆ. ಸಹಕಾರಿ ಸಂಘಕ್ಕೆ ಸ್ವಂತಕಟ್ಟಡ, ಆಡಿಟ್, ಸದಸ್ಯರಿಗೆ ಡಿವಿಡೆಂಡ್ ವಿತರಿಸಿದಾಗ ಆ ಸಂಸ್ಥೆ ಆರೋಗ್ಯಕರವಾಗಿ ಬೆಳೆಯುವುದಲ್ಲದೆ ಸಮಾಜಕ್ಕೂ ಉತ್ತಮ ಸಂದೇಶ ರವಾನೆಯಾಗುತ್ತದೆ. ಸಹಕಾರ ಕ್ಷೇತ್ರದ ಅಭಿವೃದ್ಧಿ ಶಾಸಕ ಸಂಜೀವ ಮಠಂದೂರುರವರು ವಿಶೇಷ ಮುತುವರ್ಜಿ ವಹಿಸುತ್ತಿದ್ದಾರೆ. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಉತ್ತಮ ಸಹಕಾರಿಗಳಿದ್ದು ಇಲ್ಲಿ ಸಹಕಾರಿ ಸಂಘಗಳು ಬಲೀಷ್ಠವಾಗಿ ಬೆಳೆಯುತ್ತಿದೆ ಎಂದು ಹೇಳಿದ ಸಚಿವರು ಎಪಿಎಂಸಿ ಕಾಯಿದೆ ಬಗ್ಗೆ ಎಲ್ಲಿಯೂ ರೈತರರಿಂದ ವಿರೋಧ ವ್ಯಕ್ತವಾಗಿಲ್ಲ. ಕಾಯಿದೆ ತಿದ್ದುಪಡಿಯ ಮೂಲಕ ರೈತನಿಗೆ ತಾನು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರವನ್ನು ನೀಡುತ್ತಿದೆ. ರೈತರಿಗೆ ಬೆಳೆಗಳನ್ನು ಮಾರಾಟ ಮಾಡಲು ಲೈಸನ್ಸ್ ಬೇಕಾಗಿಲ್ಲ. ಹಲವು ಮುಖಂಡರುಗಳೊಂದಿಗೆ ಚರ್ಚಿಸಿಯೇ ಕಾಯಿದೆಯನ್ನು ಜಾರಿಗೆ ತರಲಾಗಿದೆ ಎಂದರು.

ಭದ್ರತಾ ಕೊಠಡಿ ಉದ್ಘಾಟಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಮಾತನಾಡಿ, ಜೇನು ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಶಾಸಕ ಸಂಜೀವ ಮಠಂದೂರರವರ ಸ್ವಕ್ಷೇತ್ರದಲ್ಲಿ ೧೦೦ ಜೇನು ಪೆಟ್ಟಿಗೆಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ. ಜೇನು ಕೃಷಿಗೂ ಬೆಳೆ ಸಾಲ ನೀಡಬೇಕು ಎನ್ನುವ ಬೇಡಿಯಿದ್ದು ಅವಕಾಶ ದೊರೆತರೆ ಖಂಡಿತಾ ಜೇನಿಗೂ ಬೆಳೆಸಾಲ ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೃಷಿತೋ ನಾ ದುರ್ಭೀಕ್ಷಂ ಎಂಬ ನಾನ್ನುಡಿಯಂತೆ ಕಳೆದ ಲಾಕ್‌ಡೌನ್ ಸಂದರ್ಭದಲ್ಲಿ ಕೃಷಿಕನಿಗೆ ಯಾವುದೇ ತೊಂದರೆ ಇಲ್ಲ ದೇಶದ ಜನತೆಗೆ ಎಂಬುದು ಗೊತ್ತಾಗಿದೆ. ಜೇನು ಬೆಳೆಯುವ ಮುಖಾಖತರ ಗ್ರಾಮೀಣ ಭಾಗದಲ್ಲಿಯೂ ಸ್ವಾವಲಂಭಿ ಬದುಕು ಕಲ್ಪಿಸಿದೆ. ಜೇನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಬೇಡಿಕೆಯಿದ್ದು ಪ್ರಧಾನಿಯವರ ಲೋಕಲ್ ಟು ವೋಕಲ್ ಯೋಜನೆಗೆ ಪೂರಕವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ, ೮೩ ವರ್ಷಗಳ ಇತಿಹಾಸವಿರುವ ಜೇನು ವ್ಯವಸಾಯಗಾರರ ಸಹಕಾರಿ ಸಂಘವು ಇಂದು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇಂದು ಜೇನಿಗೆ ವಿಫುಲ ಬೇಡಿಕೆಯಿದೆ. ಕೊರೋನಾ ಲಾಕ್‌ಡೌನ್‌ನ ನಂತರದ ಒಂದೇ ತಿಂಗಳಲ್ಲಿ ೧೩ ಟನ್ ಜೇನು ಮಾರಾಟವಾಗಿದ್ದು ರೂ.೫.೨೦ಲಕ್ಷ ನಿವ್ವಳ ಲಾಭಗಳಿಸಿದೆ. ಸಿಬಂದಿಗಳ ಉತ್ತಮ ಕಾರ್ಯಕ್ಷಮತೆಯಿಂದಾಗಿ ಸಂಘವು ಅಭಿವೃದ್ಧಿಯತ್ತ ಮನ್ನಡೆಯುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಸಹಕಾರ ಸಂಘಗಳ ನಿಬಂಧಕ ಪ್ರವೀಣ್ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಸಂಘದ ಮಾಜಿ ಅಧ್ಯಕ್ಷರಾದ ಪೈಲೂರು ಶ್ರೀನಿವಾಸ ಭಟ್, ಬಿ.ಟಿ ನಾರಾಯಣ ಭಟ್, ಭಾಸ್ಕರ ರೈ ಕಂಟ್ರಮಜಲು, ಐ.ಸಿ ಕೈಲಾಸ್, ಜಿ.ಪಿ ಶ್ಯಾಮ ಭಟ್, ವ್ಯವಸ್ಥಾಪನಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ ನಾರಾಯಣ ಭಟ್ ಕನಕಮಜಲು, ಸದಾಶಿವ ಭಟ್, ಮಹಾಬಲ ಭಟ್, ಶ್ರೀಧರ ಗೌಡ, ಹಿರಿಯ ಜೇನು ಕೃಷಿಕರಾದ ಪುಟ್ಟಣ್ಣ ಗೌಡ ಉಬರಡ್ಕ ಮಿತ್ತೂರು, ರಾಧಾಕೃಷ್ಣ ದಾಸ್ ಉಬರಡ್ಕ ಮಿತ್ತೂರು, ನಾನಪ್ಪ ಗೌಡ ವೀರಮಂಗಳ, ಹಾಲಿ ಅಧ್ಯಕ್ಷ ಚಂದ್ರ ಕೋಲ್ಚಾರ್, ವ್ಯವಸ್ಥಾಪನಾ ನಿರ್ದೇಶಕ ತಿಮ್ಮಯ್ಯ ಪಿಂಡಿಮನೆ, ಮಧು ಪ್ರಪಂಚ ಮಾಸಿಕ ಪತ್ರಿಕೆಯ ಸಂಪಾದಕರಾದ ಎಂ.ಟಿ ಶಾಂತಿಮೂಲೆ ಹಾಗೂ ನಾರಾಯಣ ರೈ ಕುಕ್ಕುವಳ್ಳಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಾಕ್ಷ್ಯಚಿತ್ರ ಬಿಡುಗಡೆ:
`ಸುದ್ದಿ’ ಮೀಡಿಯಾ ಪುತ್ತೂರು ಪ್ರತುತ ಪಡಿಸಿದ ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘವು ನಡೆದು ಬಂದ ದಾರಿ, ಅಭಿವೃದ್ಧಿ, ವ್ಯವಹಾರಿಕಾ ಸಾಧನೆಯನ್ನು ಒಳಗೊಂಡಿರುವ ಸಾಕ್ಷ್ಯಚಿತ್ರವನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಬಿಡುಗಡೆ ಮಾಡಿದರು. ಸುದ್ದಿ ಬಿಡುಗಡೆಯ ಸಿಇಓ ಸೃಜನ್ ಊರುಬೈಲು, ಪಿಆರ್‌ಓ ಜ್ಯೋತಿಪ್ರಕಾಶ್ ಪುಣಚ ಹಾಗೂ ಸುದ್ದಿ ಮೀಡಿಯಾ ಸೆಂಟರ್‌ನ ಮುಖ್ಯಸ್ಥ ಉಮೇಶ್ ಮಿತ್ತಡ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

`ಮಧು ಪ್ರಪಂಚ’ ಮಾಸಿಕ ಸಂಚಿಕೆ ಬಿಡುಗಡೆ:
ಜೇನು ಕೃಷಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ಸಹಕಾರ ಸಂಘದ ೪೨ನೇ ಮಾಸಿಕ ಸಂಚಿಕ `ಮಧು ಪ್ರಪಂಚ’ವನ್ನು ಸಹಕಾರ ಸಚಿವ ಎಸ್.ಟಿ ಸೋಮಶೇಖರ ಬಿಡುಗಡೆ ಮಾಡಿದರು.

ಸಿಬಂದಿ ದಕ್ಷಿತಾ ಪ್ರಾರ್ಥಿಸಿದರು. ಅಧ್ಯಕ್ಷ ಚಂದ್ರ ಕೋಲ್ಚಾರ್ ಸ್ವಾಗತಿಸಿದರು. ವ್ಯವಸ್ಥಾಪನಾ ನಿರ್ದೇಶಕ ತಿಮ್ಮಯ್ಯ ಪಿಂಡಿಮನೆ ವಂದಿಸಿದರು. ಕೆ.ಟಿ ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕರಾದ ಜಿ.ಪಿ ಶ್ಯಾಮ ಭಟ್, ಜನಾರ್ದನ ಚೂಂತಾರು, ಡಿ.ತನಿಯಪ್ಪ, ಶ್ರೀಶ ಕೊಡವೂರು, ಹೆಚ್.ಸುಂದರ ಗೌಡ, ಇಂದಿರಾ ಕೆ., ಪಾಂಡುರಂಗ ಹೆಗ್ಡೆ, ಹರೀಶ್ ಕೋಡ್ಲ, ರಾಜಾರಾಮ ಶೆಟ್ಟಿ, ಪುರುಷೋತ್ತಮ ಭಟ್ ಎಮ್., ಶಿವಾನಂದ, ಮನಮೋಹನ, ರಾಜೀವಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಿಬಂದಿಗಳು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಮೂಹಿಕ ಭೋಜನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.