ನೆಲ್ಯಾಡಿ: ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಇ-ಸ್ಟಾಂಪಿಂಗ್ ವಿತರಣೆಯ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಬೆಳ್ಳಿಹಬ್ಬದ ವೇಳೆಗೆ ಸಂಸ್ಥೆ 25 ಶಾಖೆ ಹೊಂದಲಿ: ಡಾ.ಬಿ.ಮೋಹನದಾಸ ಗೌಡ

ನೆಲ್ಯಾಡಿ: ಕರ್ನಾಟಕ ರಾಜ್ಯದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ಪುರಸ್ಕೃತ ಸಂಸ್ಥೆ, ಸುಳ್ಯದಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸಾಟಿ ಸುಳ್ಯ ಇದರ ನೆಲ್ಯಾಡಿ ಶ್ರೀ ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ನೆಲ್ಯಾಡಿ ಶಾಖೆಯಲ್ಲಿ ಇ-ಸ್ಟಾಂಪಿಂಗ್ ವಿತರಣೆಯ ಉದ್ಘಾಟನೆ ಅ.8ರಂದು ನಡೆಯಿತು.


ಕೊಕ್ಕಡ ಪಂಚಮಿ ಹಿತಾರ್ಯುಧಾಮ ಇಲ್ಲಿನ ಹಿರಿಯ ವೈದ್ಯ ಡಾ.ಬಿ.ಮೋಹನದಾಸ ಗೌಡರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬಹಳ ವರ್ಷಗಳ ಹಿಂದೆ ತಾಲೂಕಿನ ಸೀಮಿತ ಕಡೆಗಳಲ್ಲಿ ಮಾತ್ರ ಇ-ಸ್ಟಾಂಪಿಂಗ್ ಸಿಗುತ್ತಿತ್ತು. ಇದಕ್ಕೆ ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿಯೂ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು ಕ್ಷಣಮಾತ್ರದಲ್ಲಿ ಇ-ಸ್ಟಾಂಪಿಂಗ್ ಪಡೆಯಲು ಸಾಧ್ಯವಾಗಿದೆ. ನೆಲ್ಯಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಶಾಖೆ ತೆರೆದು ಈಗ ಇ-ಸ್ಟಾಂಪಿಂಗ್ ಸೇವೆ ಆರಂಭಿಸುವ ಮೂಲಕ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸಾಟಿಯವರು ಜನರಿಗೆ ಸೇವೆ ನೀಡಲು ಮುಂದಾಗಿದ್ದಾರೆ. ೨೩ ವರ್ಷಗಳ ಹಿಂದೆ ಸುಳ್ಯದಲ್ಲಿ ಆರಂಭಗೊಂಡಿರುವ ಸಂಸ್ಥೆ ಈಗ ತನ್ನ ಶಾಖೆಗಳ ಮೂಲಕ ರಾಜ್ಯವ್ಯಾಪಿ ವಿಸ್ತಾರಗೊಂಡಿದೆ. ಮುಂದಿನ ೨ ವರ್ಷದಲ್ಲಿ ಸಂಸ್ಥೆ ಬೆಳ್ಳಿಹಬ್ಬ ಆಚರಿಸಲಿದ್ದು ಈ ವೇಳೆಗೆ ೨೫ ಶಾಖೆ ಹೊಂದಲಿ ಎಂದು ಹೇಳಿ ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೊಸಾಟಿ ಅಧ್ಯಕ್ಷ ಪಿ.ಸಿ.ಜಯರಾಮರವರು ಮಾತನಾಡಿ, ೪೩೦ ಸದಸ್ಯರು ಹಾಗೂ ೫ ಲಕ್ಷ ಪಾಲು ಬಂಡವಾಳದೊಂದಿಗೆ ೧೯೯೭ರಲ್ಲಿ ಸಂಸ್ಥೆಯು ಸುಳ್ಯದಲ್ಲಿ ಆರಂಭಗೊಂಡಿತ್ತು. ಸುಳ್ಯ ತಾಲೂಕಿಗೆ ಸೀಮಿತಗೊಂಡಿದ್ದ ಸಂಸ್ಥೆ ಈಗ ಮೈಸೂರು, ಸಕಲೇಶಪುರ ಸೇರಿದಂತೆ ರಾಜ್ಯದಲ್ಲಿ ೧೩ ಕಡೆಗಳಲ್ಲಿ ಶಾಖೆ ಹೊಂದಿದ್ದು ತನ್ನ ಕಾರ್ಯಕ್ಷೇತ್ರವನ್ನು ರಾಜ್ಯವ್ಯಾಪಿ ವಿಸ್ತರಿಸಿದೆ. ಈಗ ೧೨ ಸಾವಿರಕ್ಕೂ ಹೆಚ್ಚು ಸದಸ್ಯರಿದ್ದು ರೂ.೩ ಕೋಟಿಗೂ ಮಿಕ್ಕಿ ಪಾಲು ಬಂಡವಾಳವಿದೆ. ೮೫ ಕೋಟಿ ರೂ.ಠೇವಣಿ ಇದ್ದು ೭೦ ಕೋಟಿ ರೂ.ಸಾಲ ವಿತರಣೆ ಮಾಡಲಾಗಿದೆ. ಆರಂಭದ ವರ್ಷದಿಂದಲೇ ಸಂಸ್ಥೆ ಲಾಭದಲ್ಲಿ ಮುನ್ನಡೆಯುತ್ತಿದೆ. ೧೩ ಶಾಖೆಗಳಲ್ಲೂ ಇ-ಸ್ಟಾಂಪಿಂಗ್ ವ್ಯವಸ್ಥೆ ಇದ್ದು ಇದರಿಂದ ಸಂಸ್ಥೆಗೆ ಯಾವುದೇ ಲಾಭವಿಲ್ಲ. ಇದೊಂದು ರೀತಿಯ ಸೇವೆಯಾಗಿದ್ದು ಗ್ರಾಹಕರು ಮತ್ತು ಬ್ಯಾಂಕ್‌ನ ನಡುವೆ ಸಂಪರ್ಕ ಕಲ್ಪಿಸಲಿದೆ ಎಂದು ಹೇಳಿದರು.


ರಾಜ್ಯದಲ್ಲಿ 2ನೇ ಸ್ಥಾನ:

ಇ-ಸ್ಟಾಂಪಿಂಗ್ ಮಾರಾಟದಲ್ಲಿ ಸಂಸ್ಥೆಗೆ ರಾಜ್ಯದಲ್ಲಿ ೨ನೇ ಲಭಿಸಿದೆ. ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನ ಪಡೆಯಲು ಗ್ರಾಹಕರು ಸಹಕಾರ ನೀಡಬೇಕೆಂದು ಪಿ.ಸಿ.ಜಯರಾಮರವರು ಹೇಳಿದರು. ೨೦೧೯ರ ನವೆಂಬರ್‌ನಲ್ಲಿ ನೆಲ್ಯಾಡಿ ಶಾಖೆ ಆರಂಭಗೊಂಡಿದ್ದು ಇಲ್ಲಿ ೧೩೪ ಸದಸ್ಯರಿದ್ದು ರೂ.೨ ಲಕ್ಷಕ್ಕೂ ಹೆಚ್ಚು ಪಾಲು ಬಂಡವಾಳವಿದೆ. ೨ ಕೋಟಿ ರೂ.ಠೇವಣಿ ಸಂಗ್ರಹಿಸಲಾಗಿದ್ದು ೭೦ ಲಕ್ಷ ರೂ.ಸಾಲ ವಿತರಣೆ ಮಾಡಲಾಗಿದೆ. ಇಲ್ಲಿನ ಹಿರಿಯರ, ಉದ್ಯಮಿಗಳ,ಸಾರ್ವಜನಿಕರ ಸಹಕಾರವನ್ನು ಸ್ಮರಿಸುತ್ತೇವೆ ಎಂದು ಪಿ.ಸಿ.ಜಯರಾಮರವರು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ನೆಲ್ಯಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪಿ.ಎಂ.ರಫೀಕ್ ಸೀಗಲ್, ಡಿಸಿಸಿ ಬ್ಯಾಂಕ್‌ನ ನೆಲ್ಯಾಡಿ ಶಾಖೆಯ ಮೇನೇಜರ್ ಸುಬ್ರಹ್ಮಣ್ಯ ಎಂ.ವಿ.,ಯವರು ಸಂದರ್ಭೋಚಿತವಾಗಿ ಮಾತನಾಡಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನಿರ್ದೇಶಕ ದಿನೇಶ್ ಮಡಪ್ಪಾಡಿಯವರು ಕಾರ್‍ಯಕ್ರಮ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ೧೩ ಶಾಖೆ ಹೊಂದಿರುವ ಸಂಸ್ಥೆಗೆ ಉಪ್ಪಿನಂಗಡಿ, ಸುಬ್ರಹ್ಮಣ್ಯ, ಬೆಂಗಳೂರು ಸೇರಿದಂತೆ ರಾಜ್ಯದ ೫ ಕಡೆ ಶಾಖೆ ತೆರೆಯಲು ಇಲಾಖೆಯ ಅನುಮತಿ ಸಿಕ್ಕಿದೆ. ಆರ್ಥಿಕ ಲಾಭ ಸಹಜವಾಗಿದ್ದರೂ ಸೇವೆಯ ರೂಪದಲ್ಲಿ ಕನಿಷ್ಠ ಬಡ್ಡಿದರದಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ಸೊಸಾಟಿಗೆ ೨ ಸಲ ರಾಜ್ಯಮಟ್ಟದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿಯೂ ಸಿಕ್ಕಿದೆ. ಸುಳ್ಯದಲ್ಲಿ ಸುಸಜ್ಜಿತ ಸಮುದಾಯ ಭವನ, ಸ್ವಂತ ನಿವೇಶದಲ್ಲಿ ಸ್ವಂತ ಕಟ್ಟಡ, ಹವಾನಿಯಂತ್ರಿತ ಹಾಲ್, ವಿದ್ಯಾಸಂಸ್ಥೆಯೊಂದನ್ನು ಸಂಸ್ಥೆ ಹೊಂದಿದೆ. ಜನರಿಗೆ ಸೇವೆ ನೀಡಬೇಕೆಂಬ ಉದ್ದೇಶದಿಂದ ಇ-ಸ್ಟಾಂಪಿಂಗ್ ವಿತರಣೆ ಆರಂಭಿಸಿದ್ದೇವೆ ಎಂದು ಹೇಳಿದರು.

ಬಿಎಸ್‌ಎನ್‌ಎಲ್‌ನ ನಿವೃತ್ತ ಉದ್ಯೋಗಿ ಜಿನ್ನಪ್ಪ ಗೌಡರವರಿಗೆ ಮೊದಲ ಇ-ಸ್ಟಾಂಪಿಂಗ್ ವಿತರಣೆ ಮಾಡಲಾಯಿತು. ಸೊಸಾಟಿ ನಿರ್ದೇಶಕರಾದ ನಿತ್ಯಾನಂದ ಮುಂಡೋಡಿ, ಎ.ವಿ.ತೀರ್ಥರಾಮ, ಕೆ.ಸಿ.ನಾರಾಯಣ ಗೌಡ, ಪಿ.ಎಸ್.ಗಂಗಾಧರ, ದಾಮೋದರ ಎನ್.ಎಸ್., ಹೇಮಚಂದ್ರ ಐ.ಕೆ., ನೆಲ್ಯಾಡಿ ಶ್ರೀರಾಮ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ರವಿಚಂದ್ರ ಹೊಸವೊಕ್ಲು, ನೆಲ್ಯಾಡಿಯ ಉದ್ಯಮಿ ಕೆ.ಪಿ.ತೋಮಸ್, ಎಪಿಎಂಸಿ ನಿರ್ದೇಶಕ ಕುಶಾಲಪ್ಪ ಗೌಡ ಅನಿಲ, ನೆಲ್ಯಾಡಿ ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ಮಾಜಿ ಅಧ್ಯಕ್ಷ ಸುಕುಮಾರ ಗೌಡ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖೆಯ ಸಲಹಾ ಸಮಿತಿ ಸದಸ್ಯ ನೋಣಯ್ಯ ಗೌಡ ಡೆಬ್ಬೇಲಿ, ಶ್ರೀ ಗಣೇಶ್ ಕಾಂಪ್ಲೆಕ್ಸ್ ಮಾಲಕ ರಾಮಣ್ಣ ಗೌಡ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಸೊಸಾಟಿ ಉಪಾಧ್ಯಕ್ಷ ಮೋಹನ್‌ರಾಂ ಸುಳ್ಳಿಯವರು ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ವಂದಿಸಿದರು. ಸೊಸಾಟಿಯ ಜನರಲ್ ಮೇನೇಜರ್ ಚಂದ್ರಶೇಖರ, ನೆಲ್ಯಾಡಿ ಶಾಖಾ ವ್ಯವಸ್ಥಾಪಕ ಇತೀಶ್ ಪಿ.ಕೆ., ಸಿಬ್ಬಂದಿಗಳಾದ ಪ್ರಜ್ವಲ್, ಕಿರಣ್, ಪಿಗ್ಮಿ ಸಂಗ್ರಾಹಕರಾದ ರವೀಂದ್ರ ಬಿಜೇರು, ಬಾಲಕೃಷ್ಣ, ಕಡಬ ಶಾಖಾ ಸಿಬ್ಬಂದಿ ಪ್ರಮೋದ್‌ರವರು ವಿವಿಧ ಕಾರ್‍ಯಕ್ರಮ ನಿರೂಪಿಸಿದರು.

ನೆರೆ ಸಂತ್ರಸ್ತರಿಗೆ ನೆರವು:
ಆರ್ಥಿಕ ವ್ಯವಹಾರದೊಂದಿಗೆ ಸೊಸಾಟಿಯು ಸಾರ್ವಜನಿಕರಿಗೂ ನೆರವು ನೀಡುತ್ತಿದೆ. ೨೦೧೮ರಲ್ಲಿ ಮಡಿಕೇರಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂಕಷ್ಟಕ್ಕೊಳದವರಿಗೆ ೮.೫೦ ಲಕ್ಷ ರೂ., ಹಾಗೂ ಕಳೆದ ವರ್ಷ ಬೆಳ್ತಂಗಡಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂಕಷ್ಟಕ್ಕೊಳಗಾದವರಿಗೆ ೨ ಲಕ್ಷ ರೂ.ನೆರವು ನೀಡಲಾಗಿದೆ ಎಂದು ಸೊಸಾಟಿಯ ಅಧ್ಯಕ್ಷ ಪಿ.ಸಿ.ಜಯರಾಮರವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.