HomePage_Banner
HomePage_Banner
HomePage_Banner
HomePage_Banner
HomePage_Banner

ವಿಟ್ಲ: ಬೆಳ್ಳಂಬೆಳಗ್ಗೆ ಒಂಟಿ ಮಹಿಳೆಯ ಮನೆ ದರೋಡೆ | ಮಹಿಳೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿದ ದುಷ್ಕರ್ಮಿಗಳು

Puttur_Advt_NewsUnder_1
Puttur_Advt_NewsUnder_1
  • ಮಹಿಳೆಗೆ ಹಲ್ಲೆ ನಡೆಸಿ ಕೈ-ಕಾಲು ಕಟ್ಟಿ ಆರೋಪಿ ಪರಾರಿ
  • ಒಬ್ಬಂಟಿಯಾಗಿ ಬಂದ ಆಗಂತುಕನಿಂದ ಕೃತ್ಯ ಶಂಕೆ
  • ಸ್ಥಳಕ್ಕೆ ಶ್ವಾನದಳ-ಬೆರಳಚ್ಚು ತಜ್ಞರ ಆಗಮನ
  • ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಆರೋಪಿಯ ಚಹರೆ

ವಿಟ್ಲ: ಬೆಳ್ಳಂಬೆಳಗ್ಗೆ ಒಂಟಿ ಮಹಿಳೆಯಿರುವ ಮನೆಗೆ ನುಗ್ಗಿದ ಆಗಂತುಕನೋರ್ವ ಮನೆಯೊಡತಿಯನ್ನು ಕಟ್ಟಿಹಾಕಿ ಹಲ್ಲೆನಡೆಸಿ ದರೋಡೆಗೆ ಯತ್ನಿಸಿ ಪರಾರಿಯಾಗಿರುವ ಘಟನೆ ಅ.೯ರಂದು ಪುತ್ತೂರು-ವಿಟ್ಲ ರಸ್ತೆಯ ಮೇಗಿನಪೇಟೆ ಎಂಬಲ್ಲಿ ನಡೆದಿದೆ.

ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ವಿಟ್ಲ ಮೇಗಿನ ಪೇಟೆಯ ದಿ.ಬಂಟಪ್ಪ ಶೆಟ್ಟಿಯವರ ಪುತ್ರಿ ಕುಮಾರಿ ಲಲಿತಾ(೪೫ ವ.)ರವರು ಗಾಯಗೊಂಡವರು.ಅ.೯ರಂದು ಬೆಳಗ್ಗೆ ೭.೪೫ ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು,ಕೈಗಳನ್ನು ನೈಲಾನ್ ಹಗ್ಗದಿಂದ ಕಟ್ಟಲಾಗಿರುವ ಸ್ಥಿತಿಯಲ್ಲಿ ಮನೆಯ ಮುಂಭಾಗದಲ್ಲಿ ಹೊರಳಾಡುತ್ತಿದ್ದ ಲಲಿತಾರವರನ್ನು ಕಂಡ ಸ್ಥಳೀಯರು ವಿಟ್ಲ ಸರಕಾರಿ ಅಸ್ಪತ್ರೆಗೆ ದಾಖಲಿಸಿದ್ದಾರೆ.ಘಟನೆಯಿಂದಾಗಿ ಕೈ, ಮುಖ ಹಾಗೂ ಎದೆಯ ಭಾಗಕ್ಕೆ ಗಾಯವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.ಘಟನೆಯ ಬಗ್ಗೆ ಅರಿತ ವಿಟ್ಲ ಪೊಲೀಸ್ ಠಾಣಾ ಎಸ್.ಐ. ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಲಿತಾರವರು ನೀಡಿದ ದೂರಿನಂತೆ ವಿಟ್ಲ ಠಾಣಾ ಪೊಲೀಸರು ಕಲಂ ೪೫೪, ೩೯೩, ೩೯೪ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಘಟನೆ ಹೀಗೆ ನಡೆದಿತ್ತು: ಅವಿವಾಹಿತರಾಗಿರುವ ಲಲಿತಾರವರು ವಿಟ್ಲ ಮೇಗಿನಪೇಟೆಯಲ್ಲಿರುವ ಮನೆಯಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದು, ಕೊಡಂಗಾಯಿ ಸಮೀಪವಿರುವ ಹಾಳೆತಟ್ಟೆ ತಯಾರಿಕಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು.ಅ.೯ರಂದು ಬೆಳಗ್ಗೆ ಎಂದಿನಂತೆ ಎದ್ದು ತನ್ನ ನಿತ್ಯ ಕೆಲಸದಲ್ಲಿ ತೊಡಗಿಕೊಂಡಿದ್ದರು.ಈ ವೇಳೆ ವ್ಯಕ್ತಿಯೋರ್ವ ಮುಂಬಾಗಿಲ ಮೂಲಕ ಮನೆಯೊಳಗೆ ಬಂದು ಅಡುಗೆ ಕೋಣೆಯಲ್ಲಿ ಕೆಲಸ ಮಾಡಿಕೊಂಡಿದ್ದ ಲಲಿತಾರವರ ಮೈಮೇಲಿದ್ದ ಚಿನ್ನಾಭರಣವನ್ನು ಕಸಿಯಲು ಪ್ರಯತ್ನ ಪಟ್ಟಿದ್ದು ಮಾತ್ರವಲ್ಲದೆ ಮನೆಯೊಳಗೆ ಚಿನ್ನಾಭರಣವಿರುವ ಬಗ್ಗೆ ಮಾಹಿತಿಯನ್ನು ಕೇಳಿದ್ದರು.ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಮಹಿಳೆಯ ಕೈಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಮುಂಬಾಗಿಲಿಗೆ ಬೀಗ ಜಡಿದು ಪರಾರಿಯಾಗಿದ್ದಾನೆ.ಮಹಿಳೆಯ ಕಿವಿಯ ಓಲೆ ತನಿಖೆ ವೇಳೆ ಮನೆಯೊಳಗಡೆ ಪತ್ತೆಯಾಗಿದ್ದು, ಆರೋಪಿ ಮನೆಯ ಒಳಗಡೆ ಹಣ ಅಥವಾ ಚಿನ್ನಾಭರಣಕ್ಕಾಗಿ ಹುಡುಕಾಟ ನಡೆಸಿರುವ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಹಣ ಅಥವಾ ಚಿನ್ನಾಭರಣ ಮನೆಯಿಂದ ಕಳವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೊಬ್ಬೆ ಕೇಳಿ ಬಂದಿದ್ದರು ನೆರೆಮನೆಯವರು: ಮಹಿಳೆಗೆ ಗಂಭೀರ ಹಲ್ಲೆ ನಡೆಸಿ ಕೈಕಾಲು ಕಟ್ಟಿಹಾಕಿ ಆರೋಪಿ ಪರಾರಿಯಾಗಿದ್ದ.ಅಲ್ಪ ಸಮಯದ ಬಳಿಕ ಮಹಿಳೆ ಚೇತರಿಸಿಕೊಂಡು ಕಾಲಿಗೆ ಕಟ್ಟಲಾಗಿದ್ದ ಹಗ್ಗವನ್ನು ಬಿಡಿಸಿಕೊಂಡು ಹಿಂಬಾಗಿಲ ಮೂಲಕ ಮನೆಯ ಮುಂಭಾಗಕ್ಕೆ ಬಂದು ನೆರೆಮನೆಯವರನ್ನು ಸಹಾಯಕ್ಕಾಗಿ ಕರೆದಿದ್ದರು.ಮಹಿಳೆಯ ಕೂಗು ಕೇಳಿದ ಪಕ್ಕದ ಮನೆಯವರು ಸ್ಥಳಕ್ಕೆ ಆಗಮಿಸಿ ನೋಡಿದಾಗ ಮಹಿಳೆ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.ಕೂಡಲೇ ಅವರನ್ನು ಸ್ಥಳೀಯರೆಲ್ಲರೂ ಸೇರಿಕೊಂಡು ವಿಟ್ಲದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಆಗಂತುಕನ ಚಲನವಲನ: ವಿಟ್ಲ-ಪುತ್ತೂರು ರಸ್ತೆಯ ಮೇಗಿನಪೇಟೆಯಲ್ಲಿರುವ ಮಹಿಳೆಯ ಮನೆ ಸುತ್ತ ಮುತ್ತ ಹಲವಾರು ಮನೆ ಸಹಿತ ಅಂಗಡಿಗಳಿವೆ.ಘಟನೆ ನಡೆದ ಬಗ್ಗೆ ಮಾಹಿತಿ ಅರಿತ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಘಟನೆ ನಡೆದಿರುವ ಮನೆಯ ಪಕ್ಕದ ಅಂಗಡಿಗಳ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದಾರೆ.ಈ ವೇಳೆ ವ್ಯಕ್ತಿಯೋರ್ವ ಇವರ ಮನೆಯ ಪಕ್ಕದಲ್ಲಿ ಹಾದು ಹೋಗಿರುವ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಆ ಆಗಂತುಕನ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು ಆ ದಿಶೆಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಒಬ್ಬಂಟಿಯಾಗಿ ಬಂದ ಅಪರಿಚಿತನಿಂದಲೇ ಕೃತ್ಯ ಶಂಕೆ: ಹಲವಾರು ಸಮಯಗಳಿಂದ ಒಂಟಿ ಜೀವನ ನಡೆಸುತ್ತಿರುವ ಲಲಿತಾರವರು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.ಮಹಿಳೆಯ ಚಲನವಲನಗಳ ಕುರಿತು ಮಾಹಿತಿ ಇರುವವರಿಂದಲೇ ಈ ಕೃತ್ಯ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಆ ದಿಶೆಯಲ್ಲಿಯೂ ತನಿಖೆ ನಡೆಸುತ್ತಿದ್ದು, ಸ್ಥಳೀಯರಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹಲವರ ವಿಚಾರಣೆ-ಕೆಲವರ ಬಿಡುಗಡೆ: ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಟ್ಲ ಠಾಣಾ ಎಸ್.ಐ. ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಹತ್ತರ ಮಾಹಿತಿಯನ್ನು ಕಲೆ ಹಾಕಿಕೊಂಡು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆ ಮಾಡಿರುವುದಾಗಿ ತಿಳಿದುಬಂದಿದೆ.ಪ್ರಕರಣದ ಪ್ರಮುಖ ಸೂತ್ರದಾರ ಪೊಲೀಸರ ನಿಗಾದಲ್ಲಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಶೀಘ್ರದಲ್ಲಿ ಆತನ ಬಂಧನವಾಗುವ ಸಾಧ್ಯತೆ ಇದೆ.

ಶ್ವಾನ ದಳ-ಬೆರಳಚ್ಚು ತಜ್ಞರ ಭೇಟಿ: ಘಟನೆ ನಡೆದಿರುವ ಬಗ್ಗೆ ಮಾಹಿತಿ ತಿಳಿದ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿಕೊಂಡಿದ್ದಾರೆ.ಸ್ಥಳಕ್ಕಾಗಮಿಸಿದ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದು, ಕೆಲವು ಬೆರಳಚ್ಚುಗಳು ಲಭ್ಯವಾಗಿರುವುದಾಗಿ ತಿಳಿದುಬಂದಿದೆ. ಶ್ವಾನವು ಮಹಿಳೆಯ ಮನೆಯ ಮುಂಭಾಗದಿಂದ ವಿಟ್ಲ ಪೇಟೆಯವರೆಗೆ ಸಾಗಿ ಹಿಂದಿರುಗಿದೆ.

ಮುಂಜಾನೆಯ ಮಳೆಯ ಮಧ್ಯೆ ನಡೆದಿತ್ತು ಘಟನೆ: ಘಟನೆ ನಡೆದ ಮಹಿಳೆಯ ಮನೆಯ ಅಕ್ಕ-ಪಕ್ಕದಲ್ಲಿ ಮನೆಗಳಿದ್ದರೂ, ಮಳೆಯ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಮಹಿಳೆ ಬೊಬ್ಬೆಹೊಡೆದರೂ ಅಕ್ಕ-ಪಕ್ಕದ ಮನೆಯವರಿಗೆ ಕೇಳಿರಲಿಲ್ಲ.ಆಗಂತುಕ ಮಳೆಯ ಸಮಯವನ್ನೆ ಕಾದು ಕೃತ್ಯ ನಡೆಸಿರಬೇಕೆಂದು ಶಂಕಿಸಲಾಗಿದೆ.

 

ತನಿಖೆ ಪ್ರಗತಿಯಲ್ಲಿದೆ
ಮಹಿಳೆಯ ಮನೆಯಿಂದ ಯಾವುದೇ ತರಹದ ಚಿನ್ನಾಭರಣ ಕಳವಾಗಿಲ್ಲ.ಘಟನೆಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ಮಾಹಿತಿಯನ್ನು ಕಲೆಹಾಕಿಕೊಳ್ಳಲಾಗಿದೆ.ತನಿಖೆ ಪ್ರಗತಿಯಲ್ಲಿದ್ದು ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು.ವಿನೋದ್ ರೆಡ್ಡಿ
ಎಸ್.ಐ. ವಿಟ್ಲ ಪೊಲೀಸ್ ಠಾಣೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.