HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ತಾಲೂಕಿನಲ್ಲೇ ಅತೀ ದೊಡ್ಡ ಸೌರ ವಿದ್ಯುತ್ ಉತ್ಪಾದನಾ ಘಟಕ- ಕ್ಯಾಂಪ್ಕೋ ಚಾಕಲೇಟು ಪ್ಯಾಕ್ಟರೀಯಲ್ಲಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಕ್ಯಾಂಪ್ಕೋದಿಂದ ಕೃಷಿ, ಹಳ್ಳಿಯ ಬದುಕಿಗೆ ಶಕ್ತಿ ತುಂಬುವ ಕೆಲಸ – ಡಾ.ಪ್ರಭಾಕರ ಭಟ್ ಕಲ್ಲಡ್ಕ
ಮೂರು ವರ್ಷದಲ್ಲಿ ಹಾಕಿದ ಹಣ ಲಭಿಸಲಿದೆ– ಸುಧೀಂದ್ರ ತೆಕ್ಕಟೆ
ಕ್ಯಾಂಪ್ಕೋ ಕೃಷಿಕರ ಪಾಲಿಗೆ ವರದಾನ – ಎಸ್.ಆರ್. ಸತೀಶ್ಚಂದ್ರ

ಪುತ್ತೂರು: ಅಡಿಕೆ ಬೆಳೆಗಾರರ ಪಾಲಿಗೆ ಆಶಾಕಿರಣವಾಗಿ ಕ್ಯಾಂಪ್ಕೋವನ್ನು ಕಟ್ಟಿ ಬೆಳೆಸಿದ ಸಹಕಾರಿ ಧುರೀಣ ವಾರಣಾಶಿ ಸುಬ್ರಾಯ ಭಟ್ ಅಡಿಕೆಗೆ ಮಾನ ತಂದವರು. ಏಷ್ಯಾದ ಅತೀ ದೊಡ್ಡ ಚಾಕಲೇಟ್ ಕಾರ್ಖಾನೆ ಪುತ್ತೂರಿನಲ್ಲಿ ಅವರು ಸ್ಥಾಪನೆ ಮಾಡಿದವರು. ಇಂತಹ ಸಂದರ್ಭದಲ್ಲಿ ಅವರ ಮಾದರಿಯಲ್ಲೇ ಪ್ರಸ್ತುತ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಅವರ ನೇತೃತ್ವದ ಆಡಳಿತ ಮಂಡಳಿ ಸುಮಾರು 500 ಕಿಲೋ ವ್ಯಾಟ್ ವಿದ್ಯುತ್‌ನ್ನು ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯಲ್ಲಿ ಉತ್ಪಾದಿಸುವ ಸೌರ ವಿದ್ಯುತ್ ಘಟಕವನ್ನು ಸ್ಥಾಪಿಸಿದ್ದಾರೆ. ಪುತ್ತೂರು ತಾಲೂಕಿನಲ್ಲೇ ಅತೀ ದೊಡ್ಡ ಸೌರ ವಿದ್ಯುತ್ ಉತ್ಪಾದನಾ ಘಟಕವಾಗಿ ಇದು ಹೊರಹೊಮ್ಮಿದ್ದು, ಅ.9ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರು ಸೌರ ವಿದ್ಯುತ್ ಘಟಕವನ್ನು ಉದ್ಘಾಟಿಸಿದರು.


ಕೈಗಾರಿಕೆ ನಡೆಯಲು ವಿದ್ಯುತ್ ಬೇಕು. ಆದರೆ ಅವಕ್ಕೆ ಪೂರೈಸುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ. ಜತೆಗೆ ಮಳೆ, ಕಲ್ಲಿದ್ದಲು ಕೊರತೆಯಿಂದ ಸಮಸ್ಯೆ ಬಿಗಡಾಯಿಸುತ್ತಿದೆ ಎಂದಾಗ ಕ್ಯಾಂಪ್ಕೋ ಆರಂಭದಲ್ಲಿ ಪವನ ಶಕ್ತಿಯಂಥ ಚಿಂತನೆ ನಡೆಸಿತ್ತು. ದೂರದ ಸ್ಥಳದಲ್ಲಿ ಗಾಳಿ ವಿದ್ಯುತ್ ಘಟಕಗಳನ್ನು ಸ್ಥಾಪಿಸಿ ತನ್ನ ಬೇಡಿಕೆಯ ಬಹುಭಾಗವನ್ನು ಪೂರೈಸಿಕೊಳ್ಳುತ್ತಿರುವ ಕ್ಯಾಂಪ್ಕೊ ಈ ವಿಷಯದಲ್ಲಿ ಉಳಿದವರಿಗೆ ಮಾದರಿಯಾಗಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಕ್ಯಾಂಪ್ಕೋ ಸೌರ ಶಕ್ತಿಯ ಮೂಲಕ ವಿದ್ಯುತ್ ಉತ್ಪಾದಿಸುವ ಮೂಲಕ ಸಂಸ್ಥೆಗೆ ಅಧಿಕ ಲಾಭವನ್ನು ತರಲಿದೆ.

ಸಹಕಾರ ಕ್ಷೇತ್ರದ ಯಶಸ್ಸನ್ನು ಉಲ್ಲೇಖಿಸುವಾಗ ಕ್ಯಾಂಪ್ಕೊ (ಕೇಂದ್ರೀಯ ಅಡಿಕೆ ಮತ್ತು ಕೋಕೊ ಮಾರುಕಟ್ಟೆ ಹಾಗೂ ಸಂಸ್ಕರಣಾ ಸಹಕಾರ ಸಂಸ್ಥೆ) ಸಂಸ್ಥೆಯನ್ನು ಮರೆಯುವುದು ಸಾಧ್ಯವೇ ಇಲ್ಲ. ಖಾಸಗಿ ಕಂಪೆನಿಗಳ ಮಾತಿಗೆ ಮರುಳಾಗಿ ಕೋಕೊ ಬೆಳೆದು ಮೋಸಹೋಗಿದ್ದ ದಕ್ಷಿಣ ಕನ್ನಡ ಮತ್ತು ನೆರೆಯ ಕಾಸರಗೋಡು ಜಿಲ್ಲೆಯ ರೈತರನ್ನು ಕಾಪಾಡಿದ್ದೇ ಕ್ಯಾಂಪ್ಕೊ. ಅದೀಗ ಚಾಕೊಲೇಟ್ ತಯಾರಿಕೆಯಲ್ಲಿ ದೊಡ್ಡ ಹೆಸರು. ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆ ಸ್ಥಾಪನೆಯಾದಾಗಿನಿಂದಲೂ ವಿದ್ಯುತ್‌ಗಾಗಿ ರಾಜ್ಯ ಸರ್ಕಾರಿ ಸ್ವಾಮ್ಯದ ವಿದ್ಯುತ್ ಸಂಸ್ಥೆಗಳನ್ನು (ಈಗ ಮೆಸ್ಕಾಂ) ಅವಲಂಬಿಸಿತ್ತು. ಜತೆಗೆ ಪದೇ ಪದೇ ವಿದ್ಯುತ್ ಕಡಿತ, ದರ ಏರಿಕೆಯಿಂದ ಸಾಕಷ್ಟು ತೊಂದರೆಯನ್ನೂ ಎದುರಿಸಿತ್ತು. ದುಬಾರಿ ವಿದ್ಯುತ್ ಶುಲ್ಕದಿಂದಾಗಿ ಕೆಲ ಕಾಲ ನಷ್ಟವನ್ನೂ ಅನುಭವಿಸಿತ್ತು. ಇದರಿಂದ ಹೊರ ಬರಲು ಪವನ ಶಕ್ತಿ ವಿದ್ಯುತ್ ಘಟಕ (ಗಾಳಿ ವಿದ್ಯುತ್ ಯಂತ್ರ) ಸ್ಥಾಪನೆಗೆ ಏಕೆ ಕೈ ಹಾಕಬಾರದು ಎಂಬ ಆಲೋಚನೆ ಹಲವು ವರ್ಷಗಳ ಹಿಂದೆ ಆಗಿನ ಕ್ಯಾಂಪ್ಕೊದ ಆಗಿನ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ ಅವರಿಗೆ ಬಂತು. ಅದರ ಫಲವಾಗಿ ೨೦೦೯ರಲ್ಲಿ ಸುಮಾರು ೬.೫೭ ಕೋಟಿ ರೂಪಾಯಿ ವೆಚ್ಚದಲ್ಲಿ ಬಳ್ಳಾರಿಯ ಹೂವಿನಹಡಗಲಿಯ ಎರಡು ಎಕರೆ ಪ್ರದೇಶದಲ್ಲಿ ೧.೨೫ ಮೆಗಾವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಘಟಕ ಅಸಿತ್ವಕ್ಕೆ ಬಂತು. ಅದನ್ನು ಕೆಪಿಟಿಸಿಎಲ್ ಜಾಲಕ್ಕೆ ಸೇರ್ಪಡೆ ಮಾಡಿ ಅಷ್ಟೇ ಪ್ರಮಾಣದ ವಿದ್ಯುತ್ತನ್ನು ಪುತ್ತೂರಿನಲ್ಲಿ ಪಡೆಯುತ್ತಿತ್ತು. ವಿದ್ಯುತ್ ಸಾಗಣೆಗಾಗಿ ಕೆಪಿಟಿಸಿಎಲ್‌ಗೆ ಶೇ ೭ರ ದರದಲ್ಲಿ ಸಾಗಣೆ ಶುಲ್ಕ ನೀಡುತ್ತಿತ್ತು. ಇಷ್ಟೆಲ್ಲ ಬಂಡವಾಳ ತೊಡಗಿಸಿ ಸಾಗಣೆ ಶುಲ್ಕ ನಿಡಿದ ನಂತರವೂ ಕ್ಯಾಂಪ್ಕೊಗೆ ವಿದ್ಯುತ್ ಬಳಕೆಯಲ್ಲಿ ಸಾಕಷ್ಟು ಹಣ ಉಳಿತಾಯವಾಗುತ್ತಿತ್ತು. ಇದರಿಂದ ಉತ್ತೇಜನಗೊಂಡ ಆಡಳಿತ ಮಂಡಳಿ ಗಾಳಿ ಆಧಾರಿತ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ವಿಸ್ತರಿಸಲು ತೀರ್ಮಾನಿಸಿತು. ಆರಂಭಿಕ ಬಂಡವಾಳ ಹೆಚ್ಚೆನಿಸಿದರೂ ದೀರ್ಘಾವಧಿಯಲ್ಲಿ ಇದು ಲಾಭದಾಯಕ ಎಂಬುದು ಸಂಸ್ಥೆಗೆ ಮನವರಿಕೆಯಾಗಿತ್ತು. ಅದರ ಫಲವಾಗಿ ೨೦೧೧ರಲ್ಲಿ ಇನ್ನೊಂದು ಘಟಕವನ್ನು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಮೇಜಿ ಗ್ರಾಮದಲ್ಲಿ ಸ್ಥಾಪಿಸಲಾಯಿತು. ಇದಕ್ಕೆ ವಿನಿಯೋಗಿಸಿದ ಹಣ ೧೦.೩೬ ಕೋಟಿ ರೂಪಾಯಿ. ಈ ಘಟಕದ ಉತ್ಪಾದನಾ ಸಾಮರ್ಥ್ಯ ೧.೭೦ ಮೆಗಾವಾಟ್. ಉತ್ಪಾದನಾ ಸ್ಥಳದಲ್ಲಿ ವಿದ್ಯುತ್ ಕಂಪೆನಿಗೆ ವಿದ್ಯುತ್ ನೀಡಿ, ಮತ್ತೊಂದೆಡೆ ವಿದ್ಯುತ್ ಕಂಪೆನಿಯಿಂದ ತಾನು ಕೊಟ್ಟಷ್ಟೇ ವಿದ್ಯುತ್ ಪಡೆಯುವ ಪರಿಕಲ್ಪನೆ ಕ್ಯಾಂಪ್ಕೊವನ್ನು ಆಕರ್ಷಿಸಿತ್ತು. ಸ್ವಂತ ಬಳಕೆಗಾಗಿ ಇಂತಹ ಯೋಜನೆ ಮಾಡಿಕೊಂಡರೆ ಅದರಿಂದ ಭಾರಿ ಪ್ರಯೋಜನ ಇರುವುದನ್ನು ಕ್ಯಾಂಪ್ಕೊ ಕಂಡುಕೊಂಡಿತ್ತು. ಅದೇ ರೀತಿ ಪುತ್ತೂರು ಕ್ಯಾಂಪ್ಕೋ ಚಾಕಲೇಟ್ ಪ್ಯಾಕ್ಟರಿಯಲ್ಲಿ ಇದೀಗ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಹೊಸ ಘಟಕವನ್ನು ಅರಂಭಿಸಿದ್ದು, ೫೦೦ ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ಉದ್ಘಾಟನೆಗೊಂಡಿದೆ. ಇಲ್ಲಿ ಉತ್ಪಾದನೆಯಾದ ವಿದ್ಯುತ್ ಪ್ಯಾಕ್ಟರಿಯಲ್ಲಿ ಬಳಕೆಯಾಗಿ ಉಳಿದ ವಿದ್ಯುತ್ ಮೆಸ್ಕಾಂಗೆ ಹೋಗುವ ಮೂಲಕ ಮೆಸ್ಕಾಂನಿಂದ ಸುಮಾರು ೫೦೦ ಕಿಲೋ ವ್ಯಾಟ್ ವಿದ್ಯುತ್ ಉಳಿತಾಯವಾಗಲಿದೆ. `ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಇಲ್ಲ; ಹೀಗಾಗಿ ನಷ್ಟವಾಗುತ್ತಿದೆ~ ಎಂದು ಅಲವತ್ತುಕೊಳ್ಳುವ ದೊಡ್ಡ ದೊಡ್ಡ ಕಂಪೆನಿಗಳಿಗೆ ಕ್ಯಾಂಪ್ಕೊ ಮಾದರಿಯಾಗಿದೆ.

ಉದ್ಘಾಟನಾ ಕಾರ್ಯಕ್ರಮ:
ಕ್ಯಾಂಪ್ಕೋದಿಂದ ಕೃಷಿ, ಹಳ್ಳಿಯ ಬದುಕಿಗೆ ಶಕ್ತಿ ತುಂಬುವ ಕೆಲಸ:
ಸೌರ ವಿದ್ಯುತ್ ಘಟಕವನ್ನು ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಮಾತನಾಡಿ ಕೃಷಿಕನ ಬದುಕಿಗೆ ಶಕ್ತಿ ತುಂಬವ ಕೆಲಸವನ್ನು ಕ್ಯಾಂಪ್ಕೋ ಕಳೆದ ೪೭ ವರ್ಷಗಳಿಂದ ಮಾಡುತ್ತಾ ಬಂದಿದೆ. ವಾರಣಾಸಿ ಸುಬ್ರಾಯ ಭಟ್ ಅವರ ದೂರ ದೃಷ್ಟಿಯಿಂದ ಪ್ರಾರಂಭವಾದ ಅದ್ಭುತವಾದ ಸಂಸ್ಥೆಯಗಿರುವ ಕ್ಯಾಂಪ್ಕೋ ಮುಂದಿನ ದಿನಗಳಲ್ಲಿ ಅವರ ಯೋಜನೆಯಂತೆ ೧೯೮೬ರಲ್ಲಿ ಚಾಕಲೇಟ್ ಪ್ಯಾಕ್ಟರಿ ಪ್ರಾರಂಭವಾಯಿತು. ಕೃಷಿಕ ಬದುಕನ್ನು ಹಸನಗೊಳಿಸುವ ದೃಷ್ಟಿಯಿಂದ ಏನೆನು ಕಾರ್ಯಕ್ರಮ ತೆಗೆದು ಕೊಳ್ಳಬೇಕೋ ಅದನ್ನೆಲ್ಲಾ ತೆಗೆದು ಕೊಂಡರು. ಅವರಿಗೊಸ್ಕರ ಬದುಕುತ್ತಿರುವ ಕ್ಯಾಂಪ್ಕೋ ಸಂಸ್ಥೆ ಇವತ್ತು ಸೌರ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಒಂದು ಹೆಜ್ಜೆ ಮುಂದಿಟ್ಟಿದೆ. ನೀರಿಗೆ ತೊಂದರೆ ಆಗದ ಹಾಗೆ ವಿದ್ಯುತ್ ತಯಾರಿಕೆ, ಗಾಳಿಗೆ ತೊಂದರೆ ಆಗದ ಹಾಗೆ ಪವನ ಯಂತ್ರದ ಮೂಲಕ ವಿದ್ಯುತ್ ಉತ್ಪಾದನೆ ಮಾಡುವಂತೆ ಸೂರ್ಯನ ಬೆಳನ್ನು ಉಪಯೋಗಿಸಿ ಸೌರ ವಿದ್ಯುತ್ ಉತ್ಪಾದನೆಯನ್ನು ಕ್ಯಾಂಪ್ಕೋ ಆರಂಭಿಸಿದೆ. ಇದರಿಂದ ಭೂಮಿಯಿಂದ ಕಲ್ಲಿದ್ದಲು ನಾಶವನ್ನು ಕಡಿಮೆ ಮಾಡಬಹುದು. ಇದರಿಂದಲೂ ಹೆಚ್ದಾಗಿ ಇವತ್ತು ಕ್ಯಾಂಪ್ಕೋ ವಿದ್ಯುತ್ ಉತ್ಪಾದನೆಯಿಂದ ಹಳ್ಳಿಯ ಬದುಕಿಗೆ ಬದುಕು ಕೊಡುವ ಕೆಲಸ ಮಾಡಿದೆ. ಸಾಮಾನ್ಯವಾಗಿ ಪೇಟೆಗೆ, ಕಾರ್ಖಾನೆಗೆ ವಿದ್ಯುತ್ ಪೂರೈಕೆ ಮಾಡುವ ಸಂದರ್ಭದಲ್ಲಿ ಹಳ್ಳಿಯ ಜನರಿಗೆ ಬೇಕಾದಷ್ಟು ವಿದ್ಯುತ್ ಪೂರೈಕೆ ಮಾಡುವಲ್ಲಿ ತೊಂದರೆ ಆಗುತ್ತಿತ್ತು. ಆದರೆ ಇದೀಗ ಕ್ಯಾಂಪ್ಕೋ ತನಗೆ ಬೇಕಾದ ವಿದ್ಯುತನ್ನು ತಾನೆ ಉತ್ಪಾದಿಸುವ ಮೂಲಕ ಸುಮಾರು ೫೦೦ ಕಿಲೋ ವ್ಯಾಟ್ ವಿದ್ಯುತ್ ಅನ್ನು ಹಳ್ಳಿಯ ಕೃಷಿ ಚಟುವಟಿಕೆ, ಜನರಿಗೆ ವಿದ್ಯುತ್ ಕೊಡಿಸುವ ಕೆಲಸ ಮಾಡಿದೆ. ಕ್ಯಾಂಪ್ಕೋದ ಈ ವ್ಯವಸ್ಥೆಯಲ್ಲಿ ನೌಕರರ ಪಾತ್ರವೂ ಬಹಳ ಮುಖ್ಯ. ಅವರು ಚೆನ್ನಾಗಿ ಕೆಲಸ ಮಾಡಿದ ಕಾರಣ ಸಂಸ್ಥೆ ಎತ್ತರಕ್ಕೆ ಬೆಳೆದಿದೆ ಎಂದರು.

ನಮ್ಮ ದೇಶದ ಸಂಪತ್ತು ಅರಿವು ಮುಖ್ಯ:
ಭಾರತ ಸಾಮಾಜಿ, ಶೈಕ್ಷಣಿ, ಧಾರ್ಮಿಕವಾಗಿ ಎಲ್ಲಾ ದೃಷ್ಟಿಯಿಂದ ಜಗತ್ತಿಗೆ ಮಾರ್ಗದರ್ಶನ ಮಾಡುತ್ತಿರುವ ದೇಶ. ೧೯೪೭ರಲ್ಲಿ ನೋವಿನಿಂದ ಸಿಕ್ಕಿದ ಸ್ವಾತಂತ್ರ್ಯದಲ್ಲಿ ಅಧಿಕಾರ ಸ್ವೀಕಾರ ಮಾಡಿದವರಿಗೆ ನಮ್ಮ ದೇಶದ ಮೇಲೆ ನಂಬಿಕೆ ಇರಲಿಲ್ಲ. ಅದಕ್ಕಾಗಿ ಅವರು ನಮ್ಮನ್ನು ಆರ್ಥಿಕವಾಗಿ ದುರ್ಬಲವದ ದೇಶ ಎಂದು ಹೇಳಿಕೊಂಡು ಹೊರ ದೇಶದಿಂದ ಬಿಕ್ಷೆ ಪಡೆದರು. ಜಗತ್ತಿನ ಬೇರೆ ಬೇರೆ ದೇಶದ ಜನರು ಇನ್ನಾವುದೇ ದೇಶದ ಮೇಲೆ ಆಕ್ರಮಣ ಮಾಡುವ ದೇಶಕ್ಕಿಂತ ಹೆಚ್ಚು ಭಾರಿ ಭಾರತದ ಮೇಲೆ ಆಕ್ರಮಣ ಆಗಿದೆ. ಈ ಆಕ್ರಮಣ ನಮ್ಮ ದೇಶದ ಸಂಪತ್ತಿಗಾಗಿ. ಅದರೆ ಅದು ನಮ್ಮ ನಾಯಕರಿಗೆ ಇತ್ತೀಚಿಗಿನ ತನಕವೂ ಗೊತ್ತಿರಲಿಲ್ಲ. ತಿರುವಂತಪುರಂ ದೇವಸ್ಥಾನದ ಗರ್ಭಗುಡಿಯ ಅಡಿಯಲ್ಲಿ ಚಿನ್ನ, ರತ್ನಗಳು ಸಿಕ್ಕಿದರೂ ಅದನ್ನು ಇನ್ನೂ ಲೆಕ್ಕ ಮಾಡಲು ಸಾಧ್ಯವಾಗಿಲ್ಲ. ಇದನ್ನೆಲ್ಲಾ ಗಮನಿಸಿದರೆ ನಮ್ಮ ದೇಶ ಹಿಂದೆಯೂ ಮತ್ತು ಇವತ್ತಿಗೂ ಸಂಪತ್ ಭರಿತ ದೇಶ ಎಂದು ಹೇಳಿದ ಅವರು  ರಾಜಕೀಯವಾಗಿ ಸ್ವಾತಂತ್ರ ಬಂದ ಮೇಲೆ ಮಹಾತ್ಮಗಾಂಧೀಜಿಯವರು ಭಾರತ ರಾಮರಾಜ್ಯ ಆಗಬೇಕೆಂದು ಹೇಳಿದರು. ಆದರೆ ಮೇಕಾಲೆ ಶಿಕ್ಷಣ ನಾವು ಗುಲಾಮರಾಗಿಯೇ ಇದ್ದರೆ ಸರ್ವಶ್ರೇಷ್ಠ ಎಂದು ದಿಕ್ಕನ್ನು ಬದಲಾಯಿಸಿತ್ತು. ಇವತ್ತು ಪ್ರಧಾನಿ ನರೇಂದ್ರ ಮೋದಿವಯರು ಆತ್ಮನಿರ್ಭರ ಭಾರತದ ಮೂಲಕ ಭಾರತ ಪರಿಚಯವನ್ನು ಮತ್ತೊಮ್ಮೆ ಜಗತ್ತಿಗೆ ಸಾರಿರದ್ದಾರೆ ಎಂದು ಡಾ.ಪ್ರಭಾರಕ್ ಭಟ್ ಕಲ್ಲಡ್ಕ ಹೇಳಿದರು.

ಮೂರು ವರ್ಷದಲ್ಲಿ ಹಾಕಿದ ಹಣ ಲಭಿಸಲಿದೆ:
ಆರ್‌ಬ್ ಎನರ್ಜಿ ಇದರ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಸುಧೀದ್ರ ತೆಕ್ಕಟೆ ಅವರು ಮಾತನಾಡಿ ಪುತ್ತೂರು ತಾಲೂಕಿನ ಅತೀ ದೊಡ್ಡ ಸೋಲಾರ್ ಸ್ಥಾವರ್ ಅನ್ನು ನಾವು ಇಲ್ಲಿ ಅಳವಡಿಸಿದ್ದೇವೆ. ಕಳೆದ ೧೪ ವರ್ಷಗಳಿಂದ ಆರ್‌ಬ್ ಸಂಸ್ಥೆ ಕರ್ನಾಟಕ, ಆಂದ್ರ, ಕೇರಳ, ಮಹಾರಾಷ್ಟ್ರದಲ್ಲಿ ೧.೬೦ಲಕ್ಷ ಗ್ರಾಹಕರನ್ನು ಹೊಂದಿದ್ದು, ಅವರಿಗೆ ಸೇವೆ ಕೊಡುತ್ತಿದೆ. ಬೆಂಗಳೂರಿನಲ್ಲಿ ನಮ್ಮ ಪ್ರಧಾನ ಕಚೇರಿ ಇದೆ. ಇವತ್ತು ಕ್ಯಾಂಪ್ಕೋ ಇಟ್ಟಿರುವ ದಿಟ್ಟ ಹೆಜ್ಜೆ ದಿವಸಕ್ಕೆ ೨ಸಾವಿರ ಯುನಿಟ್ ವಿದ್ಯುತ್‌ನ್ನು ಕೊಡುತ್ತದೆ. ಹಾಗೆ ವಾರ್ಷಿಕವಾಗಿ ರೂ. ೫೪ಲಕ್ಷ ರಷ್ಟು ಉಳಿತಾಯ ಅಗುತ್ತದೆ. ಇದು ರೂ. ೧.೮೫ ಕೋಟಿ ವೆಚ್ಚದಲ್ಲಿ ಅಳವಡಿಸಿದ್ದ ಸಿಸ್ಟಮ್ ಮೂರು ವರ್ಷದಲ್ಲಿ ಅವರು ಸಿಸ್ಟಮ್ ಅಳವಡಿಕೆಯ ಹಣ ಬರಲಿದೆ. ಮುಂದೆ ೨೫ ವರ್ಷಗಳ ತನಕ ಉಚಿತ ವಿದ್ಯುತ್ ಸಿಗಲಿದೆ ಎಂದು ಹೇಳಿದರು.


ಕ್ಯಾಂಪ್ಕೋ ಕೃಷಿಕರ ಪಾಲಿಗೆ ವರದಾನ:
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಅವರು ಮಾತನಾಡಿ ಎಷ್ಯಾದಲ್ಲೇ ಅತ್ಯಂತ ದೊಡ್ಡ ಕಾರ್ಖಾನೆ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ. ಸೌಹಾರ್ದ ಕಾಯ್ದೆಗೆ ಸಂಬಂಧಿಸಿ ಪುತ್ತೂರಿನಲ್ಲಿ ಸಹಕಾರಿ ಸಂಸ್ಥೆಯೂ ಹುಟಿದೆ. ಹಾಗಾಗಿ ಪುತ್ತೂರಿಗೆ ಮತ್ತು ಸಹಕಾರಿಗೆ ಅನ್ಯೋನ್ಯ ಸಂಬಂಧವಿದೆ ಎಂದ ಅವರು ಮೊಳಹಳ್ಳಿ ಶಿವರಾಯರು, ಬೈಂದೂರುಪ್ರಭಾಕರ ರಾವ್, ಶಿವರಾಮಕಾರಂತರು, ರಾಮ್ ಭಟ್, ಬಂಟ್ವಾಳ ನಾರಾಯಣ ನಾಯ್ಕ್, ಪೆರಾಜೆ ಶ್ರೀನಿವಾಸ್, ಕ್ಯಾಂಪ್ಕೋ ಸ್ಥಾಪನೆ ಮಾಡಿದ ವಾರಣಾಸಿ ಸುಬ್ರಾಯ ಭಟ್‌ರವರ ಪ್ರಯತ್ನದಿಂದಾಗಿ ಇವತ್ತು ಅಡಿಕೆ ಬೆಳೆಗಾರ ನಗುನಗುತ್ತಾ ಇದ್ದಾನೆ. ಅಡಿಕೆ ಒಂದಷ್ಟೆ ಅಲ್ಲದೆ. ಚಾಕಲೇಟ್‌ಗೆ ಸಂಬಂಧಿಸಿ ಕಾರ್ಖಾನೆಯಲ್ಲಿ ಕೋಕೋಗೆ ಪ್ರೋಸಸ್‌ಗೆ ಹಾಲು ಉತ್ಪಾದಕರು, ಕಬ್ಬು ಬೆಳೆಗಾರರು, ಜೋಳ ಬೆಳೆಗಾರರ ಸಹಕಾರ ಇರುವುದರಿಂದ ಇವತ್ತು ಕೃಷಿಕರ ಪಾಲಿಗೆ ಕ್ಯಾಂಪ್ಕೋ ವರದಾನವಾಗಿದೆ. ಇದು ಹಿರಿಯರಿಗೆ ಸಂದ ಗೌರವ ಎಂದರು. ಇದಕ್ಕೆ ಪೂರಕವಾಗಿ ೨೪ ಗಂಟೆ ದುಡಿಯುವ ನೌಕರರು ತಮ್ಮ ರಕ್ತವನ್ನು ಬೆವರಾಗಿಸುವ ಮೂಲಕ ಮಾತೃವಾತ್ಸಲ್ಯ ತೋರಿಸಿದ್ದಾರೆ ಎಂದರು.

4ವರ್ಷದ ಹಿಂದಿನ ಕನಸು ನನಸು:
ಹಿಂದಿನ ಆಡಳಿತ ಮಂಡಳಿ ಗಾಳಿಯನ್ನು ಉಪಯೋಗಿಸಿ ವಿದ್ಯುತ್ ಪಡೆದು ಯಶಸ್ವಿ ಆಗಿತ್ತು. ಅದರ ನಂತರ ಉಳಿದ ಸಂಸ್ಥೆಗಳು ಆರಂಭಿಸಿದ್ದರು. ಮುಂದಿನ ದಿನದಲ್ಲಿ ಸೂರ್ಯನ ಶಕ್ತಿ ಪಡೆಯಲು ಚಿಂತನೆ ಮಾಡಲಾಯಿತು. ನಮ್ಮ ಆಡಳಿತ ಮಂಡಳಿ ಕಳೆದ ೪ ವರ್ಷಗಳ ಕನಸು ಇವತ್ತು ನನಸಾಯಿತು. ನಮಗೆ ದೆಶದ ಜವಾಬ್ದಾರಿ ಹೆಚ್ಚಿದೆ ಅದರ ಫಲರೂಪವಾಗಿ ಸೋಲರ್ ಶಕ್ತಿಯನ್ನು ಹಿಡಿದಿಟ್ಟು ನಮ್ಮ ಖರ್ಚನ್ನು ಕಡಿಮೆ ಮಾಡಲಾಗಿದೆ. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲೂ ನಮ್ಮ ಜಿಲ್ಲೆಯಲ್ಲಿ ಸಂಪೂರ್ಣ ಸ್ಯಾಲೇರಿ ಕೊಟ್ಟ ಏಕೈಕ ಸಂಸ್ಥೆಯಾಗಿ ಕ್ಯಾಂಪ್ಕೋ ಮೂಡಿ ಬಂದಿದೆ. ಅದರ ಪರಿಣಾಮ ಬಿಎಮ್‌ಎಸ್ ಯೂನಿಯನ್ ನಮ್ಮನ್ನು ಗೌರವಿಸಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು. ವೇದಿಕೆಯಲ್ಲಿ ಸೌರ ವಿದ್ಯುತ್ ಘಟಕದ ಇನ್‌ವಾರ್ಟರ್ ಸಿಸ್ಟಮ್ ಉದ್ಘಾಟಿಸಿದ ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ನಿರ್ದೇಶಕರಾದ ಕಿಶೋರ್ ಕುಮಾರ್ ಕೊಡ್ಗಿ, ಚನಿಲ ತಿಮ್ಮಪ್ಪ ಶೆಟ್ಟಿ, ದಯಾನಂದ ಹೆಗ್ಡೆ, ಕೃಷ್ಣ ಪ್ರಸಾದ್ ಮಡ್ತಿಲ, ಆರ್.ಎಂ ರವಿ, ಶಂಭುಲಿಂಗ ಹೆಗಡೆ, ಸತೀಶ್ಚಂದ್ರ ಭಂಡಾರಿ, ರಾಜಗೋಪಾಲ, ಬಾಲಕೃಷ್ಣ ರೈ, ಶಿವಕೃಷ್ಣ ಭಟ್, ಜಯರಾಮ ಸರಳಾಯ, ಪದ್ಮನಾಭ ಪಟ್ಟಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಶಂಕರ ನಾರಾಯಣ ಭಟ್ ಖಂಡಿಗೆ, ಸಂಸ್ಥೆಯ ಮ್ಯಾನೇಜರ್ ರೇಶ್ಮ ಮಲ್ಯ ಅತಿಥಿಗಳನ್ನು ಗೌರವಿಸಿದರು. ವಿದ್ಯಾ ಪ್ರಾರ್ಥಿಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಚ್.ಎಮ್.ಕೃಷ್ಣಕುಮಾರ್ ಸ್ವಾಗತಿಸಿ, ಸಂಸ್ಥೆಯ ಡಿ.ಜಿ.ಎಂ ಅನಿತಾ ಜೆಸುಮೆನ್ ವಂದಿಸಿದರು. ರಾದೇಶ್ ಕುಂದಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಮುಂದೆ ಜನವರಿಯಲ್ಲಿ ರೂ. ೨೫ ಕೋಟಿಯಲ್ಲಿ ಕಾವು ಎಂಬಲ್ಲಿ ಕಾಳುಮೆಣಸು ಪ್ರೋಸೆಸ್‌ನ ಹೊಸ ಪ್ರಾಜೇಕ್ಟ್ ಉದ್ಘಾಟನೆ ಅಗಲಿದೆ. ರೈತರಿಗೆ ತಮ್ಮ ಭೂಮಿಯ ಬಗ್ಗೆ ತಿಳಿಯಲು ಸಾಯಿಲ್ ಕಾರ್ಡ್ ವಿತರಣೆಯುನ್ನು ಕ್ಯಾಂಪ್ಕೋ ಮತ್ತು ವಿವೇಕಾನಂದ ವಿದ್ಯಾಸಂಸ್ಥೆ ಜತೆಯಗಿ ಮಾಡಲಿದೆ. ರೈತರ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಉತ್ತಮ ಗೊಳಿಸಲು ಕ್ಯಾಂಪ್ಕೋ ಮನೆ ಮನೆಗೆ ಹೋಗಿ ರೈತರಿಗೆ ಅಡಿಕೆ ಖರಿದಿ ಮಾಡಲಿದೆ. ಎರಡು ಮೂರು ತಿಂಗಳಲ್ಲಿ ಇದಕ್ಕೆ ಚಾಲನೆ ದೊರೆಯಲಿದೆ. ನಾಲ್ಕೈದು ವರ್ಷಗಳಿಂದ ಕ್ಯಾಂಪ್ಕೋ ಮೂಲಕವೇ ಅಡಿಕೆ ವ್ಯವಹಾರ ನಡೆಸುತ್ತಿರುವ ಸದಸ್ಯರ ಅರೋಗ್ಯಕ್ಕೆ ಹೆಚ್ಚಿನ ಸಹಕಾರ ನೀಡಲು ಚಿಂತನೆ ನಡೆಯುತ್ತಿದೆ. – ಎಸ್.ಆರ್.ಸತೀಶ್ಚಂದ್ರ, ಅಧ್ಯಕ್ಷರು ಕ್ಯಾಂಪ್ಕೋ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.