HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಶಿಥಿಲಾವಸ್ಥೆಗೆ ತಲುಪಿದ್ದ ಬ್ರಿಟಿಷರ ಕಾಲದಲ್ಲಿ ಕಟ್ಟಲ್ಪಟ್ಟ ಪ್ರವಾಸಿ ಮಂದಿರ ತಾ.ಪಂ. ಅಧೀನದಿಂದ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಬ್ರಿಟಿಷರ ಕಾಲದಲ್ಲಿ ಕಟ್ಟಲ್ಪಟ್ಟು ಶಿಥಿಲಾವಸ್ಥೆಯನ್ನು ತಲುಪಿದ್ದ ಉಪ್ಪಿನಂಗಡಿಯ ಪ್ರವಾಸಿ ಮಂದಿರವು ಇದೀಗ ತಾ.ಪಂ. ಅಧೀನದಿಂದ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರವಾಗಿದ್ದು, ಇನ್ನು ಇಲ್ಲಿ ಹೊಸ ಪ್ರವಾಸಿ ಮಂದಿರ ತಲೆಯೆತ್ತಲಿದೆ.

ಇಲ್ಲಿನ ಗಾಂಧಿಪಾರ್ಕ್ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಸರ್ವೇ ನಂ. ೩೦ರ ವಿಶಾಲ ಜಾಗದಲ್ಲಿ ಬ್ರಿಟಿಷ್ ಕಾಲದಲ್ಲಿ ಈ ಪ್ರವಾಸಿ ಮಂದಿರ ಕಟ್ಟಲ್ಪಟ್ಟಿದೆ. ವಾಹನ ಸೌಕರ್ಯಗಳಿಲ್ಲದ ಆ ಕಾಲದಲ್ಲಿ ಕುದುರೆಯಲ್ಲಿ ಬರುವ ಬ್ರಿಟಿಷ್ ಅಧಿಕಾರಿಗಳು ಅದನ್ನು ವಿಶ್ರಾಂತಿಗಾಗಿ ಬಳಸಿಕೊಳ್ಳುತ್ತಿದ್ದರು. ಸ್ವಾತಂತ್ರ್ಯ ಬಳಿಕ ಅದು ತಾಲೂಕು ಬೋರ್ಡ್‌ನ ಅಧೀನಕ್ಕೆ ಬಂತು. ಆ ಕಾಲದಲ್ಲಿ ಜಿಲ್ಲಾ ಪರಿಷತ್‌ನ ಕಂಟ್ರೋಲ್‌ನಲ್ಲಿ ಇದರ ಉಸ್ತುವಾರಿಯನ್ನು ತಾಲೂಕು ಬೋರ್ಡ್ ನೋಡಿಕೊಳ್ಳುತ್ತಿತ್ತು. ಆದರೆ ಆಗ ಅನುದಾನದ ಕೊರತೆಯ ಕಾರಣದಿಂದಾಗಿ ಅಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆದಿರಲಿಲ್ಲ. ಆದರೆ ಈ ಸಂದರ್ಭದಲ್ಲಿ ಪ್ರವಾಸಿ ಮಂದಿರದ ಜಾಗವನ್ನು ಸ್ವಾಧೀನ ಪಡಿಸಿಕೊಂಡು ಬೇರೆ ಇಲಾಖೆಗಳಿಗೆ ನೀಡಲಾಯಿತು. ಆದ್ದರಿಂದ ಅಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್, ಉಪ್ಪಿನಂಗಡಿ ಗ್ರಾ.ಪಂ.ನ ನೀರು ಶುದ್ಧೀಕರಣ ಘಟಕ, ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ಗಳ ವಸತಿ ಗೃಹ, ವಲಯ ಅರಣ್ಯಾಧಿಕಾರಿಯವರ ವಸತಿ ಗೃಹ, ಅಂಗನವಾಡಿ ಕಟ್ಟಡಗಳು ನಿರ್ಮಾಣವಾಗುವಂತಾಯಿತು. ೧೯೯೩ರ ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ ಜಿಲ್ಲಾ ಪರಿಷತ್ ಹೋಗಿ ಜಿಲ್ಲಾ ಪಂಚಾಯತ್, ತಾ.ಪಂ. ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ಬಳಿಕ ಈ ಪ್ರವಾಸಿ ಮಂದಿರವು ಪುತ್ತೂರು ತಾ.ಪಂ. ಅಧೀನಕ್ಕೆ ಬಂತು. ಸ್ವಾತಂತ್ರ್ಯ ಬಳಿಕ ಮಂತ್ರಿಗಳು, ಗಣ್ಯ ವ್ಯಕ್ತಿಗಳು, ಉನ್ನತಾಧಿಕಾರಿಗಳು ಈ ಭಾಗಕ್ಕೆ ಭೇಟಿ ನೀಡಿದಾಗ ಅವರಿಗೆ ತಂಗಲು ಉಪ್ಪಿನಂಗಡಿಯ ಪ್ರವಾಸಿ ಮಂದಿರವನ್ನು ಬಳಸಿಕೊಳ್ಳಲಾಗುತ್ತಿತ್ತು. ಒಂದೆರಡು ಬಾರಿ ತಾ.ಪಂ. ಇದನ್ನು ನವೀಕರಣಗೊಳಿಸಿತ್ತು. ಸಣ್ಣ ಅನುದಾನದಲ್ಲಿ ಹಲವು ಬಾರಿ ಅಭಿವೃದ್ಧಿ ಕಾಮಗಾರಿ ನಡೆಸಿತ್ತು. ಆದರೆ ಆಧುನಿಕತೆ ಬೆಳೆದಂತೆ ಸಾರಿಗೆ- ಸಂಪರ್ಕ ವ್ಯವಸ್ಥೆ ಉತ್ತಮಗೊಂಡಿತ್ತಲ್ಲದೆ, ಇನ್ನೊಂದೆಡೆ ಖಾಸಗಿ ಐಷಾರಾಮಿ ವಸತಿ ಗೃಹಗಳು ತಲೆಯೆತ್ತಿದವು. ಬರುಬರುತ್ತಾ ಇಲ್ಲಿ ತಂಗಲು ಬರುವ ಅತಿಥಿಗಳ ಸಂಖ್ಯೆಯೂ ಇಳಿಕೆಯಾಯಿತು. ಪ್ರವಾಸಿ ಮಂದಿರ ಶಿಥಿಲಾವಸ್ಥೆ ತಲುಪತೊಡಗಿತು. ಬಳಿಕ ಈ ಪ್ರವಾಸಿ ಮಂದಿರದ ಎದುರು ಭಾಗವನ್ನು ಸಮೀಪದಲ್ಲೇ ಇರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನ ಬಾಲಕಿಯರಿಗೆ ಹೊಲಿಗೆ ತರಬೇತಿ ನೀಡಲು ಬಳಸಿಕೊಳ್ಳಲಾಗುತ್ತಿತ್ತು. ಹಾಸ್ಟೆಲ್ ಇದೀಗ ಬೇರೆ ಕಡೆ ಸ್ಥಳಾಂತರಗೊಂಡಿದ್ದು, ಅದು ನಿಂತು ಹೋಗಿದೆ.

ಇದೀಗ ಈ ಪ್ರವಾಸಿ ಮಂದಿರ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಪೀಠೋಪಕರಣಗಳೆಲ್ಲಾ ಮುರಿದು ಬಿದ್ದಿವೆ. ತಾ.ಪಂ.ನ ಅಧೀನದಲ್ಲಿದ್ದ ಈ ಪ್ರವಾಸಿ ಮಂದಿರವನ್ನು ಇದೀಗ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಇಲ್ಲಿ ಲೋಕೋಪಯೋಗಿ ಹೊಸದಾಗಿ ನಿರೀಕ್ಷಣಾ ಮಂದಿರ ಕಟ್ಟಲಿದೆ.

ಪುತ್ತೂರು ತಾ.ಪಂ.ನ ಅಧೀನದಲ್ಲಿದ್ದ ಉಪ್ಪಿನಂಗಡಿಯ ಪ್ರವಾಸಿ ಮಂದಿರವನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಅದರಲ್ಲಿ ಸುಮಾರು ಒಂದು ಎಕ್ರೆ ಜಾಗವಿದೆ. ಅಲ್ಲಿರುವ ಪ್ರವಾಸಿ ಮಂದಿರ ಶಿಥಿಲಾವಸ್ಥೆ ತಲುಪಿದ್ದು, ಅದನ್ನು ಕೆಡವಿ ಅಲ್ಲಿ ಲೋಕೋಪಯೋಗಿ ಇಲಾಖೆಯವರು ನೂತನ ನಿರೀಕ್ಷಣಾ ಮಂದಿರ ನಿರ್ಮಿಸಲಿದ್ದಾರೆ – ಸಂಜೀವ ಮಠಂದೂರು ಶಾಸಕರು, ಪುತ್ತೂರು

೧೦-೧೫ ದಿನಗಳ ಹಿಂದೆಯಷ್ಟೇ ಉಪ್ಪಿನಂಗಡಿಯ ಪ್ರವಾಸಿ ಮಂದಿರ ನಮಗೆ ಹಸ್ತಾಂತರವಾಗಿದೆ. ಮೊದಲನೇ ಹಂತವಾಗಿ ಪಹಣಿ ಪತ್ರಿಕೆಯಲ್ಲಿ ನಮ್ಮ ಇಲಾಖೆಗೆ ಖಾತೆ ಬದಲಾವಣೆಯಾಗಬೇಕು. ಈ ಕೆಲಸ ಪ್ರಗತಿಯಲ್ಲಿದೆ. ಬಳಿಕ ಅಲ್ಲಿ ನೂತನ ನಿರೀಕ್ಷಣಾ ಮಂದಿರ ನಿರ್ಮಿಸಲು ಕಟ್ಟಡ ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಿ ಅನುದಾನಕ್ಕೆ ಸರಕಾರಕ್ಕೆ ಬೇಡಿಕೆ ಸಲ್ಲಿಸುತ್ತೇವೆ. ಸರಕಾರದಿಂದ ಪ್ರಸ್ತಾವನೆ ಬಂದ ಬಳಿಕ ಅಲ್ಲಿ ಕಟ್ಟಡದ ಕಾಮಗಾರಿ ಆರಂಭಿಸಲಾಗುತ್ತದೆ. ಈಗ ಪ್ರವಾಸಿ ಮಂದಿರಕ್ಕೆ ಸೇರಿದ ಜಾಗವನ್ನು ಬಿಟ್ಟು ಅಲ್ಲಿರುವ ಉಳಿದ ಇಲಾಖೆಗಳಿಗೆ ಸೇರಿದ ಜಾಗವನ್ನು ನಾವು ಮುಟ್ಟುವುದಿಲ್ಲ. ಪ್ರವಾಸಿ ಮಂದಿರದ ಜಾಗವನ್ನು ಸರ್ವೇ ನಡೆಸಲು ಈಗಾಗಲೇ ಸೂಚನೆ ನೀಡಿದ್ದೇನೆ – ರಾಜಾರಾಮ್ ಬಿ. ಕಾರ್ಯಪಾಲಕ ಎಂಜಿನಿಯರ್ಲೋಕೋಪಯೋಗಿ ಇಲಾಖೆ

`ಬಸ್ ನಿಲ್ದಾಣ ನಿರ್ಮಿಸಲಿ’
ಪುತ್ತೂರು ತಾಲೂಕಿನ ಅತೀ ದೊಡ್ಡ ವಾಣಿಜ್ಯ ಕೇಂದ್ರ ಉಪ್ಪಿನಂಗಡಿ. ಮಂಗಳೂರು- ಬೆಂಗಳೂರು ಸೇರಿದಂತೆ ಪ್ರಮುಖ ನಗರ, ಪಟ್ಟಣ, ಧಾರ್ಮಿಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಸಂಪರ್ಕ ಕೊಂಡಿ. ಆದರೆ ಇಲ್ಲಿ ಸುಸಜ್ಜಿತವಾದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣವಿಲ್ಲ. ಈಗ ಗ್ರಾ.ಪಂ.ನ ಸಣ್ಣ ಜಾಗದಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತದೆ. ಈಗಿರುವ ಪ್ರವಾಸಿ ಮಂದಿರದ ಜಾಗವು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ನಿರ್ಮಿಸಲು ಸೂಕ್ತ ಸ್ಥಳವಾಗಿದೆ. ಈ ಜಾಗವು ಒಂದು ಎಕರೆಯಷ್ಟು ವಿಶಾಲವಾಗಿದ್ದು, ಪಕ್ಕದಲ್ಲೇ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ. ಇದರ ಪಕ್ಕದಲ್ಲೇ ಸರಕಾರಿ ಪದವಿ ಪೂರ್ವ, ಪ್ರಥಮ ದರ್ಜೆ ಕಾಲೇಜು ಹಾಗೂ ಶಾಲೆಗಳಿವೆ. ಇದು ಉಪ್ಪಿನಂಗಡಿ ಪೇಟೆಯಿಂದ ಹೆಚ್ಚೇನು ದೂರವಿಲ್ಲ. ಇದು ಬಿಟ್ಟರೆ ಬಸ್ ನಿಲ್ದಾಣ ನಿರ್ಮಿಸಲು ಯೋಗ್ಯ ಹಾಗೂ ವಿಶಾಲವಾಗಿರುವ ಸರಕಾರಿ ಸ್ಥಳ ಉಪ್ಪಿನಂಗಡಿ ಪೇಟೆಯ ಹತ್ತಿರ ಎಲ್ಲೂ ಇಲ್ಲ. ಉಪ್ಪಿನಂಗಡಿಯಲ್ಲೇ ಉತ್ತಮವಾಗಿರುವ ಖಾಸಗಿ ಲಾಡ್ಜ್‌ಗಳು, ವಸತಿ ಗೃಹಗಳು ಬೇಕಾದಷ್ಟಿವೆ. ಆದ್ದರಿಂದ ಈ ಜಾಗವನ್ನು ಕೆಎಸ್ಸಾರ್ಟಿಸಿಗೆ ನೀಡಲಿ. ಅದರಿಂದ ಜನರಿಗೆ ಅನುಕೂಲವಾಗುತ್ತದೆ. ಅದು ಬಿಟ್ಟು ಇಲ್ಲಿ ಭವ್ಯ ನಿರೀಕ್ಷಣಾ ಮಂದಿರ ಕಟ್ಟಿದರೆ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ ಇಬ್ರಾಹೀಂ ಕೆ. ಮಾಜಿ ಸದಸ್ಯರು, ಉಪ್ಪಿನಂಗಡಿ ಗ್ರಾ.ಪಂ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.