HomePage_Banner
HomePage_Banner
HomePage_Banner

ಹೈನುಗಾರರಿಗೂ ಬಂತು ಡಿಜಿಟಲ್ ಲೆಕ್ಕಾಚಾರದ ಆಪ್ | ಹೈನುಗಾರರಿಗೆ ಸಿಗಲಿದೆ ಹಾಲಿನ ಪಕ್ಕಾ ಲೆಕ್ಕ!

Puttur_Advt_NewsUnder_1
Puttur_Advt_NewsUnder_1
  • ಕಲ್ಲಡ್ಕದ ಯುವಕರಿಬ್ಬರ ಉಚಿತ ಆಪ್ `ಮೈ ಎಂಪಿಸಿಎಸ್’

ಪುತ್ತೂರು: ಹೈನುಗಾರಿಕೆಯಲ್ಲಿ ಕರಾವಳಿ ರಾಜ್ಯದಲ್ಲಿ ಹೆಸರು ಮಾಡಿದೆ. ದಿನಂಪ್ರತಿ ಹಾಲು ಹಾಕುವ ರೈತರಿಗೆ ತಮ್ಮ ಹಾಲಿನ ಪ್ರಮಾಣವನ್ನು ಲೆಕ್ಕಾಚಾರ ಮಾಡಿಕೊಳ್ಳುವುದು ಒಂದು ತಲೆನೋವಿನ ವಿಚಾರ. ಆದರೆ ಇನ್ನು ಈ ತಲೆನೋವಿಲ್ಲ. ಇದಕ್ಕಾಗಿ ಹೊಸದಾದ ಮೊಬೈಲ್ ಆಪ್ ಸಿದ್ದಗೊಂಡಿದೆ. ಕರಾವಳಿಯ ಯುವಕರಿಬ್ಬರು ರೂಪಿಸಿ ಉಚಿತವಾಗಿ ಒದಗಿಸಿದ `ಮೈ ಎಂಪಿಸಿಎಸ್ (ಮಿಲ್ಕ್ ಪ್ರೊಡ್ಯೂಸರ್ಸ್ ಕೋ ಆಪರೇಟಿವ್ ಸೊಸೈಟಿ) ಆಪ್‌ನಿಂದಾಗಿ ಹೈನುಗಾರರು ಸೊಸೈಟಿಗೆ ಹಾಕುವ ಹಾಲಿನ ಲೆಕ್ಕವೆಲ್ಲಾ ಇನ್ನು ಪಕ್ಕಾ ಪರ್ಫೆಕ್ಟ್ ಆಗಲಿದೆ.

ರಾಜ್ಯದಲ್ಲೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಹಕಾರಿ ಹಾಲು ಉತ್ಪಾದಕ ಸಂಘಗಳ ವ್ಯಾಪ್ತಿಯಲ್ಲಿ ಮೈ ಎಂಪಿಸಿಎಸ್ ಆಪ್ ಯಶಸ್ವಿ ಜಾರಿಯಾಗಿದ್ದು ಇತರ ಕಡೆಯ ಹಾಲು ಒಕ್ಕೂಟಗಳ ವ್ಯಾಪ್ತಿಯ ಸಂಘಗಳಿಂದಲೂ ಈ ಆಪ್ ಗೆ ಬೇಡಿಕೆ ಬಂದಿದೆ ಎನ್ನಲಾಗಿದೆ.
ಸಂಘಗಳಿಗೆ ಹಾಲು ಪೂರೈಸುವ ಹೈನುಗಾರರು ಹಾಲಿನ ಲೆಕ್ಕದಲ್ಲಿ ಸಂಪೂರ್ಣ ಪಾರದರ್ಶಕತೆ ಸಾಧಿಸುವ ನಿಟ್ಟಿನಲ್ಲಿ ಕಲ್ಲಡ್ಕದ ಶ್ರೀನಿಧಿ ಹಾಗೂ ಕೇಶವ ಪ್ರಸಾದ್ ಸೂರ್ಡೇಲು ಈ ನೂತನ ಆಪ್ ರೂಪಿಸಿದ್ದಾರೆ.

ದೊರೆಯಲಿದೆ ಸಮಗ್ರ ಮಾಹಿತಿ:
ಈ ಆಪ್ ಮೂಲಕ ಪ್ರತಿ ದಿನ ಡೈರಿಗೆ ಪೂರೈಸಿದ ಹಾಲಿನ ಪ್ರಮಾಣ, ಸಮಯ, ಫ್ಯಾಟ್, ಸಿಎಲ್‌ಆರ್, ಎಸ್‌ಎನ್‌ಎಫ್, ದರ, ಒಟ್ಟು ಮೊತ್ತ ಸಹಿತ ಲೆಕ್ಕವನ್ನು ಚೊಕ್ಕವಾಗಿ ಬೆರಳ ತುದಿಯಲ್ಲೇ ಒಂದು ವರ್ಷ ತನಕ ಪರಿಶೀಲಿಸಬಹುದಾಗಿದೆ. ಹಾಲಿನ ಗುಣಮಟ್ಟ ಅಭಿವೃದ್ಧಿಗೆ ಚಿಂತನೆಯನ್ನೂ ಮಾಡಬಹುದು. ಇದರಿಂದಾಗಿ ಹೈನುಗಾರರಿಗೆ ಸೂಚನೆಗಳನ್ನು ಸುಲಭವಾಗಿ ನೀಡಬಹುದಾಗಿದೆ.

3,000 ಬಳಕೆದಾರರು

ಈಗಾಗಲೇ ಈ ಆಪ್ ನ ಬಳಕೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ೩೫ ಸಂಘಗಳ ೩,೦೦೦ ಹೈನುಗಾರರ ಹಾಲಿನ ಲೆಕ್ಕದ ತಲೆಬಿಸಿ, ತಲೆನೋವು ನಿವಾರಣೆಯಾಗಿದೆ.

ವೈಶಿಷ್ಟ್ಯವೇನು?
ಹೈನುಗಾರರರ ಮಾಹಿತಿ ಸೋರಿಕೆಯಾಗದಂತೆ ಆಪ್‌ನಲ್ಲಿ ವಿಶೇಷ ಗಮನ ಹರಿಸಲಾಗಿದೆ. ಒಬ್ಬ ಹೈನುಗಾರನ ಮಾಹಿತಿ ಮತ್ತೊಬ್ಬನಿಗೆ ದೊರೆಯುವುದಿಲ್ಲ. ತಂತ್ರಜ್ಞಾನದ ಸಮರ್ಪಕ ಬಳಕೆಯೊಂದಿಗೆ ಹಾಲು ಉತ್ಪಾದಕ ಸಂಘಗಳು ಯಾವುದೇ ಸಾಫ್ಟ್‌ವೇರ್ ಬಳಸಿದ್ದರೂ ಸಮ್ಮರಿ ರಿಪೋರ್ಟ್ ನಿರ್ದಿಷ್ಟ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಆಪ್‌ಗೆ ಡೇಟಾ ರವಾನೆಯಾಗುತ್ತದೆ.

ರೈತ ಮತ್ತು ಸಂಘದ ನಡುವೆ ಸಂಪರ್ಕ ಸೇತುವೆ
ಹೈನುಗಾರರು ಹಾಗೂ ಹಾಲು ಉತ್ಪಾದಕ ಸಂಘಗಳ ನಡುವೆ ಅಗತ್ಯ ಮಾಹಿತಿ ರವಾನೆಗೊಂದು ಸಂಪರ್ಕ ಸೇತುವೆಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಸ್ಲಿಪ್/ರಶೀದಿ ನೀಡುವ ತಾಪತ್ರಯವಿಲ್ಲ, ಸಾಧಾರಣ ಸಂದೇಶಕ್ಕಾಗುವ ಖರ್ಚು ಕಡಿಮೆ, ಅಗ್ಗದ ದರದಲ್ಲಿ ಹಾಲಿನ ಲೆಕ್ಕ ಮತ್ತು ಮಾಹಿತಿಯನ್ನು ಸದಸ್ಯರಿಗೆ ತಿಳಿಸಬಹುದು, ಜನರ ನೇರ ಸಂಪರ್ಕ ಕಡಿಮೆ ಮತ್ತು ಪಾರದರ್ಶಕ ವ್ಯವಸ್ಥೆಯಲ್ಲಿ ವ್ಯವಹಾರ ಮಾಡಬಹುದಾಗಿದೆ.  ಒಟ್ಟಿನಲ್ಲಿ ಡಿಜಿಟಲ್ ತರಂಗಗಳು ಕೃಷಿಕನ ತೋಟದಲ್ಲೂ ಅಲೆ ಎಬ್ಬಿಸಲು ಆರಂಭಿಸಿದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಣದಿಂದ ವಂಚಿತನಾದ ಕೃಷಿಕನೂ ಡಿಜಿಟಲ್ ತಂತ್ರಜ್ಞಾನದ ಬಳಕೆಯನ್ನು ಕಲಿಯುವುದು ಇಲ್ಲಿ ಅತೀ ಅವಶ್ಯಕ ಎನಿಸಿದೆ.

ಸುಲಭ, ಸರಳವಾದ ಮೈ ಎಂಪಿಸಿಎಸ್ ಆಪ್ ವ್ಯಾಪಾರೀಕರಣದ ದೃಷ್ಟಿಯಿಂದ ಮಾಡಿಲ್ಲ. ದಿನವಿಡೀ ಕಷ್ಟಪಟ್ಟು ಹೈನುಗಾರಿಕೆಯಲ್ಲಿ ತೊಡಗಿದವರಿಗೆ ಉಪಯೋಗವಾಗಲೆನ್ನುವ ನೆಲೆಯಲ್ಲಿ ಬಹೋಪಯೋಗಿ ಆಪ್ ರೂಪಿಸಲಾಗಿದೆ. ಹೈನುಗಾರಿಕಾ ವೀಡಿಯೋ ಮಾಹಿತಿ, ನವ ತಂತ್ರಾಂಶ ಸಹಿತ ಹೈನುಗಾರ ಸ್ನೇಹಿ ಸಮಗ್ರ ಪ್ಯಾಕೇಜ್ ಒದಗಿಸುವ ಗುರಿಯಿದೆ. – ಶ್ರೀನಿಧಿ ಆರ್. ಎಸ್. ಕಲ್ಲಡ್ಕ, ಪ್ರಥಮ ಪದವಿ ವಿದ್ಯಾರ್ಥಿ, ಪುತ್ತೂರು ವಿವೇಕಾನಂದ ಕಾಲೇಜು

ಲಾಕ್ ಡೌನ್ ವೇಳೆ ಹಾಲು ಉತ್ಪಾದಕ ಸಂಘಗಳಲ್ಲಿ ಕೊರೊನಾ ಶಿಷ್ಟಾಚಾರ ಪಾಲನೆ, ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೈನುಗಾರಿಕಾ ಕ್ಷೇತ್ರದಲ್ಲಿ ಡಿಜಿಟಲೈಸೇಶನ್ ಚಿಂತನೆ ಫಲವಾಗಿ ಮೈ ಎಂಪಿಸಿಎಸ್ ಆಪ್ ರೂಪುಗೊಂಡಿದೆ. ಕೊರೊನಾ ವಿಪತ್ತಿನ ಸಂದರ್ಭದಲ್ಲಿ ಹೈನುಗಾರರಿಗೆ ಆಪ್‌ವರದಾನವಾಗಿದೆ. – ಕೇಶವ ಪ್ರಸಾದ್ ಸೂರ್ಡೇಲು, ಸಾಫ್ಟ್‌ವೇರ್ ಕನ್ಸಲ್ಟೆಂಟ್, ಮಂಗಳೂರು.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ
ಕೇವಲ 5 ಎಂಬಿ ಸಾಮರ್ಥ್ಯದ ಆಪ್ ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ. ಉಚಿತ ಪ್ರಾತ್ಯಕ್ಷಿಕೆ, ಒಂದು ತಿಂಗಳು ಡೆಮೋ ಹಾಗೂ ತರಬೇತಿಗೆ 7353407473 ಸಂಪರ್ಕಿಸಬಹುದು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.