HomePage_Banner
HomePage_Banner
HomePage_Banner

ಉಪ್ಪಿನಂಗಡಿ ಗ್ರಾ.ಪಂ. v/s ಕಂದಾಯ ಇಲಾಖೆಯ ಮುಸುಕಿನ ಗುದ್ದಾಟ | ಸಾರ್ವಜನಿಕ ಕಡತಗಳು ಆಪತ್ತಿನಲ್ಲಿ!! ಸಾರ್ವಜನಿಕರ ಆಕ್ರೋಶ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಶೌಚ ಗುಂಡಿಯೊಂದಕ್ಕೆ ಸಂಬಂಧಿಸಿ ಇಲ್ಲಿನ ಗ್ರಾ.ಪಂ. ಮತ್ತು ಕಂದಾಯ ಇಲಾಖೆಯ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಇದರಿಂದಾಗಿ ನಾಡ ಕಚೇರಿಯಲ್ಲಿರುವ ಅಮೂಲ್ಯ ಕಡತಗಳು ಆಪತ್ತಿಗೆ ಸಿಲುಕುವ ಸಂಭವ ಎದುರಾಗಿದ್ದು, ಅಧಿಕಾರಿಗಳ ಸರ್ವಾಧಿಕಾರಿ ನಡೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ಎದುರಾಗಿದೆ.

ಉಪ್ಪಿನಂಗಡಿ ಗ್ರಾ.ಪಂ. ತನ್ನ ಅಧೀನದಲ್ಲಿರುವ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣವೊಂದನ್ನು ಈ ಹಿಂದೆ ಕಟ್ಟಿಸಿತ್ತು. ಆದರೆ ಎರಡು ಮಹಡಿಗಳ ವಾಣಿಜ್ಯ ಸಂಕೀರ್ಣವನ್ನು ಕಟ್ಟಿ ಅದರ ಕೋಣೆಗಳನ್ನು ಬಾಡಿಗೆಗೆ ನೀಡಿದರೂ, ಆ ಕಟ್ಟಡಕ್ಕೆ ಶೌಚಾಲಯ ಸೌಲಭ್ಯವನ್ನು ಕಲ್ಪಿಸಿರಲಿಲ್ಲ. ಈ ಕಟ್ಟಡಕ್ಕೆ ಶೌಚಾಲಯವನ್ನು ನಿರ್ಮಿಸಬೇಕೆಂಬ ಬೇಡಿಕೆ ಅಲ್ಲಿರುವ ಅಂಗಡಿ ಮಾಲಕರಿಂದ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಲ್ಲೇ ಪಕ್ಕದಲ್ಲಿರುವ ಕಂದಾಯ ಇಲಾಖೆಯ ಜಾಗದಲ್ಲಿ ಗ್ರಾ.ಪಂ. ಶೌಚಗುಂಡಿಯನ್ನು ತೋಡಿತ್ತು. ಕಂದಾಯ ಇಲಾಖೆಯ ಜಾಗದಲ್ಲಿ ನಡೆಯುತ್ತಿರುವ ಈ ಕಾಮಗಾರಿಯನ್ನು ಉಪ್ಪಿನಂಗಡಿ ಗ್ರಾಮ ಕರಣಿಕರು ಆಕ್ಷೇಪಿಸಿದ್ದು, ಕಾಮಗಾರಿಯನ್ನು ತಡೆದಿದ್ದರು. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಗ್ರಾ.ಪಂ. ಇದೀಗ ಕಂದಾಯ ಇಲಾಖೆಯ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಹೊರಟಿದೆ.

ಗ್ರಾ.ಪಂ. ಮಾಡಿದ್ದೇನು?: ಕಳೆದ ಆಡಳಿತ ಮಂಡಳಿಯ ಅವಧಿಯಲ್ಲಿ ಉಪ್ಪಿನಂಗಡಿ ಗ್ರಾ.ಪಂ.ನ ಕಚೇರಿನ್ನು ಮಿನಿ ವಿಧಾನ ಸೌಧದ ರೂಪದಲ್ಲಿ ಭವ್ಯವಾಗಿ ನಿರ್ಮಿಸಲಾಗಿತ್ತು. ಇದರ ಪಕ್ಕದಲ್ಲೇ ಉಪ್ಪಿನಂಗಡಿ ಹೋಬಳಿ ನಾಡಕಚೇರಿಯಿದ್ದು, ಅದರ ಕಟ್ಟಡ ತೀರಾ ಶಿಥಿಲಾವಸ್ಥೆ ತಲುಪಿ ಬೀಳುವ ಹಂತದಲ್ಲಿತ್ತು. ಆದ್ದರಿಂದ ಸಾರ್ವಜನಿಕರ ಅನೂಕಲತೆಗೋಸ್ಕರ ಅದನ್ನು ಅಲ್ಲಿಂದ ತೆರವುಗೊಳಿಸಿ ತಾತ್ಕಾಲಿಕ ಅವಧಿಗೆ ಗ್ರಾ.ಪಂ. ಕಟ್ಟಡದ ವಿಶಾಲ ರೂಂಗೆ ನಾಡ ಕಚೇರಿಯನ್ನು ಶಿಫ್ಟ್ ಮಾಡಲು ಈ ಹಿಂದಿನ ಗ್ರಾ.ಪಂ. ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡಿದ್ದರು. ಅದರಂತೆ ಗ್ರಾ.ಪಂ. ಕಟ್ಟಡದಲ್ಲೇ ನಾಡ ಕಚೇರಿ ಕಾರ್ಯಾರಂಭ ಮಾಡಲಾರಂಭಿಸಿತು. ನಾಡ ಕಚೇರಿ ಈಗಿರುವ ವಿಶಾಲ ಹಾಲ್ ಗ್ರಾ.ಪಂ.ನ ಸಭಾಂಗಣವಾಗಿದ್ದು, ಇದಕ್ಕೆ ಗ್ರಾ.ಪಂ. ಕಚೇರಿಯೊಳಗಿಂದ ಹಾಗೂ ಕಟ್ಟಡದ ಹೊರಗಿನಿಂದ ಪ್ರತ್ಯೇಕ ಬಾಗಿಲು ಇತ್ತು. ಇಲ್ಲಿ ನಾಡಕಚೇರಿ ಆರಂಭವಾದ ಬಳಿಕ ಗ್ರಾ.ಪಂ. ಕಚೇರಿಯೊಳಗಿನಿಂದ ಈ ಕೊಠಡಿಗೆ ಬರುವಂತಹ ಬಾಗಿಲನ್ನು ಮುಚ್ಚಿ ಬೀಗ ಹಾಕಲಾಗಿತ್ತು. ಕಟ್ಟಡದ ಹೊರಗಿನಿಂದ ಇದ್ದ ಪ್ರಧಾನ ಬಾಗಿಲು ಮಾತ್ರ ತೆರೆಯಲಾಗುತ್ತಿತ್ತು. ಆದರೆ ಶೌಚ ಗುಂಡಿಗೆ ಆಕ್ಷೇಪ ವ್ಯಕ್ತವಾದ ಬಳಿಕ ಇದೀಗ ಕಂದಾಯ ಇಲಾಖೆಯೊಂದಿಗೆ ಮುಯ್ಯಿ ತೀರಿಸಿಕೊಳ್ಳಲು ಉಪ್ಪಿನಂಗಡಿ ಗ್ರಾ.ಪಂ. ಹೊರಟಿದ್ದು, ಗ್ರಾ.ಪಂ. ಕಚೇರಿಯ ಒಳಗಿನಿಂದ ಈಗಿರುವ ನಾಡಕಚೇರಿಗೆ ಹೋಗುವ ಬಾಗಿಲನ್ನು ತೆರೆದಿಟ್ಟಿದ್ದು, ಕಂದಾಯ ಇಲಾಖೆಯೊಂದಿಗೆ ಗುದ್ದಾಟಕ್ಕಿಳಿಯಲು ಆರಂಭದ ಮುನ್ನುಡಿ ಬರೆದಂತಿದೆ.

ಸಾರ್ವಜನಿಕರ ಭೀತಿಯೇನು?: ಈ ಎರಡೂ ಇಲಾಖೆಗಳು ಮುಸುಕಿನ ಗುದ್ದಾಟಕ್ಕೆ ಇಳಿದಿದೆ ಏನೂ ನಿಜಾ. ಈಗ ಗ್ರಾ.ಪಂ. ಕಚೇರಿಯ ಒಳಗಿನಿಂದ ನಾಡಕಚೇರಿಗೆ ಹೋಗುವ ಬಾಗಿಲು ತೆರೆದಿರುವುದರಿಂದ ಈ ಎರಡೂ ಕಚೇರಿಯಲ್ಲಿರುವ ಸಾರ್ವಜನಿಕರ ಕಡತಗಳು ಆಪತ್ತಿಗೆ ಸಿಲುಕುವ ಭೀತಿ ಎದುರಾಗಿದೆ. ಕರ್ತವ್ಯದ ಅವಧಿ ಮುಗಿದ ಬಳಿಕ ನಾಡ ಕಚೇರಿಯ ಪ್ರಧಾನ ಬಾಗಿಲಿಗೆ ಬೀಗ ಹಾಕಿ ಅಧಿಕಾರಿಗಳು ತೆರಳಿದರೂ, ಕೆಲವು ಬಾರಿ ಅಗತ್ಯ ಕೆಲಸ- ಕಾರ್ಯಗಳ ಸಂದರ್ಭದಲ್ಲಿ ಕಚೇರಿ ಸಮಯದ ಬಳಿಕವೂ ಗ್ರಾ.ಪಂ. ಕಚೇರಿ ತೆರೆದಿರಬಹುದು. ಈಗ ಬಾಗಿಲು ತೆರೆದಿರುವುದರಿಂದ ಹೊರಗಿನಿಂದ ನಾಡ ಕಚೇರಿ ಬಾಗಿಲು ಹಾಕಿದ್ದರೂ, ಗ್ರಾ.ಪಂ. ಕಚೇರಿಯೊಳಗಿಂದಲೇ ನೇರ ನಾಡ ಕಚೇರಿಯೊಳಗೆ ನುಸುಳಲು ಅವಕಾಶವಿದೆ. ಇಂತಹ ಸ್ಥಿತಿಯಲ್ಲಿ ಅಮೂಲ್ಯ ಕಡತಗಳು ಕಳವಾಗುವ, ನಾಪತ್ತೆಯಾಗುವ ಸಂಭವ ಇದೆ ಎಂಬ ಭೀತಿ ಸಾರ್ವಜನಿಕರದ್ದಾಗಿದೆ.

ಆಕ್ಷೇಪ ಸಲ್ಲಿಸಿದ್ದು ತಪ್ಪೇ?: ಉಪ್ಪಿನಂಗಡಿ ಗ್ರಾ.ಪಂ. ತನ್ನ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಆದ್ಯತೆ ನೀಡಿದೆಯೇ ಹೊರತು, ಅಲ್ಲಿ ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಿಲ್ಲ. ಸಾರ್ವಜನಿಕರು ಕಟ್ಟಡವೊಂದನ್ನು ಕಟ್ಟುವಾಗ ಇಂಗು ಗುಂಡಿ, ಶೌಚಾಲಯವನ್ನು ಕಡ್ಡಾಯಗೊಳಿಸಿ ಪರವಾನಿಗೆ ನೀಡುವ ಗ್ರಾ.ಪಂ. ತಾನು ಕಟ್ಟಡ ನಿರ್ಮಿಸುವಾಗ ಮಾತ್ರ ಈ ನಿಯಮವನ್ನು ಗಾಳಿಗೆ ತೂರಿದೆ. ಈಗ ಶೌಚ ಗುಂಡಿ ನಿರ್ಮಿಸಲು ಕಟ್ಟಡದ ಬಳಿ ಗ್ರಾ.ಪಂ.ಗೆ ಸೇರಿದ ಜಾಗವಿಲ್ಲ. ಇದೀಗ ಶೌಚ ಗುಂಡಿ ತೋಡಿರುವ ಜಾಗ ಕಂದಾಯ ಇಲಾಖೆಗೆ ಸೇರಿದ್ದಾಗಿದ್ದು, ಇದು ಕಂದಾಯ ನಿರೀಕ್ಷಕರ ವಸತಿ ಗೃಹಕ್ಕೆ ಇರುವ ೨೦ ಲಿಂಕ್ಸ್ ಅಗಲದ ದಾರಿ. ಈ ದಾರಿ ಈಗ ಉಪಯೋಗವಿಲ್ಲವಾದರೂ, ಗ್ರಾ.ಪಂ.ನ ತನ್ನ ಸುತ್ತಲಿನ ಜಾಗಕ್ಕೆ ಬೇಲಿ ಹಾಕಿದರೆ ಕಂದಾಯ ನಿರೀಕ್ಷಕರ ವಸತಿ ಗೃಹಕ್ಕೆ ಹೋಗಲು ಇರುವುದು ಇದೊಂದೇ ದಾರಿ. ಹಾಗಾಗಿ ಅದನ್ನು ಉಳಿಸುವ ಅನಿವಾರ್ಯತೆ ಕಂದಾಯ ಇಲಾಖೆಗೆ ಇದ್ದೇ ಇದೆ. ಹಾಗಾಗಿ ಗ್ರಾಮ ಕರಣಿಕರು ಶೌಚಗುಂಡಿಗೆ ಆಕ್ಷೇಪಣೆ ಸಲ್ಲಿಸಿದ್ದು ತಪ್ಪಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಈಗಾಗಲೇ ಅತಿಕ್ರಮಣ: ಕಂದಾಯ ಇಲಾಖೆಯ ಇದೇ ದಾರಿಯನ್ನು ಈಗಾಗಲೇ ಗ್ರಾ.ಪಂ. ಅತಿಕ್ರಮಿಸಿದ್ದು, ಈ ವಾಣಿಜ್ಯ ಸಂಕೀರ್ಣದ ಬಳಿಯೇ ಕಂದಾಯ ಇಲಾಖೆಯ ದಾರಿಗಡ್ಡವಾಗಿ ಗ್ರಾ.ಪಂ. ವಾಣಿಜ್ಯ ಸಂಕೀರ್ಣದ ಟ್ರಾನ್ಸ್‌ಫಾರ್ಮರ್ ನಿರ್ಮಿಸಿದೆ. ಅಲ್ಲದೆ, ಪ್ಲವರ್ ಸ್ಟಾಲ್, ಪ್ರಯಾಣಿಕರ ತಂಗುದಾಣವನ್ನೂ ನಿರ್ಮಿಸಿದೆ. ದಾರಿಯೇ ಅತಿಕ್ರಮಣವಾಗುತ್ತಿದ್ದಾಗ ಆಗ ಇದ್ದ ಕಂದಾಯ ಇಲಾಖೆಯ ಅಧಿಕಾರಿಗಳು ಮೌನವಾಗಿದ್ದುದೇ ಇದಕ್ಕೆ ಕಾರಣ ಎನ್ನುವ ಸಾರ್ವಜನಿಕರು ಈಗ ಅಲ್ಲಿಯೇ ಶೌಚಗುಂಡಿ ನಿರ್ಮಿಸಲು ಹೊರಟ ಗ್ರಾ.ಪಂ. ಗ್ರಾಮ ಕರಣಿಕರ ಆಕ್ಷೇಪಣೆಯ ನಡುವೆಯೂ ಕಂದಾಯ ಇಲಾಖೆಯ ಮೇಲಾಧಿಕಾರಿಗಳಲ್ಲಿ ಮಾತನಾಡಿ ತನ್ನ ಕಾರ್ಯವನ್ನು ಪೂರ್ತಿಗೊಳಿಸಿದೆ.

ಆದರೆ ಗ್ರಾ.ಪಂ. ಇದೇ ಜಿದ್ದಿನಿಂದ ಗ್ರಾ.ಪಂ. ಕಚೇರಿಯೊಳಗಿಂದ ನಾಡ ಕಚೇರಿಯ ಬಾಗಿಲನ್ನೇ ತೆರೆದಿದ್ದು, ಇಲ್ಲಿರುವ ಕಡತಗಳಿಗೆ ರಕ್ಷಣೆಯ ಭೀತಿ ಎದುರಾಗಿದೆ. ಅಧಿಕಾರಿಗಳು ಇಂದು ಬರುತ್ತಾರೆ. ನಾಳೆ ಹೋಗುತ್ತಾರೆ. ಆದರೆ ಸಾರ್ವಜನಿಕರ ಕಡತಗಳು ನಾಶವಾದರೆ ಅದಕ್ಕಾರು ಹೊಣೆ ಎಂಬುದಾಗಿ ಪ್ರಶ್ನಿಸಿದ್ದಾರೆ.

ಶೌಚ ಗುಂಡಿಗೆ ಆಕ್ಷೇಪಣೆ ಬಂದಿರುವ ಬಗ್ಗೆ ಮಾಹಿತಿಯಿದೆ. ಆದರೆ ಗ್ರಾ.ಪಂ. ಕಚೇರಿಯೊಳಗಿಂದ ನಾಡ ಕಚೇರಿಗೆ ಹೋಗುವ ಬಾಗಿಲು ತೆರೆದಿಡುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ನವೀನ್ ಭಂಡಾರಿ,  ಇಒ ಪುತ್ತೂರು ತಾ.ಪಂ., ಆಡಳಿತಾಧಿಕಾರಿ ಉಪ್ಪಿನಂಗಡಿ ಗ್ರಾ.ಪಂ.

ಸರಕಾರಿ ಇಲಾಖೆಗಳು ಅಂದರೆ ಅದು ಯಾವುದೇ ಅಧಿಕಾರಿಯ ಆಸ್ತಿಯಲ್ಲ. ಅದು ಸಾರ್ವಜನಿಕರ ಸೊತ್ತು. ತಮ್ಮ ತಮ್ಮ ವೈಯಕ್ತಿಕ ಜಿದ್ದಿಗಾಗಿ ಅಧಿಕಾರಿಗಳು ಇಲಾಖೆಗಳನ್ನು ಬಲಿಪಶು ಮಾಡಿ ದರ್ಪ ಮೆರೆಯೋದು ಸರಿಯಲ್ಲ. ಇಲ್ಲಿ ನಾಡ ಕಚೇರಿಗೆ ಹೋಗುವ ಬಾಗಿಲು ತೆರೆದಿಟ್ಟಿರುವ ಗ್ರಾ.ಪಂ.ನ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ನಾಳೆಯೇನಾದರೂ ಕಡತಗಳು ಕಾಣದಾದರೆ ಅದಕ್ಕೆ ಗ್ರಾ.ಪಂ. ನೇರ ಹೊಣೆಯಾಗಲಿದೆ ರೂಪೇಶ್ ರೈ ಅಲಿಮಾರ್ ದ.ಕ. ಜಿಲ್ಲಾ ಸಂಚಾಲಕರು ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ)

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.