HomePage_Banner
HomePage_Banner
HomePage_Banner

ನೆಲ್ಯಾಡಿ: `ಸಿಐಡಿ ಶಂಕರ್’ ಇನ್ನಿಲ್ಲ..! ಭಿಕ್ಷುಕನಿಗೆ ಮಿಡಿದ ಕಂಬನಿ-ಸರ್ವಧರ್ಮೀಯರಿಂದಲೂ ಅಶ್ರುತರ್ಪಣ

Puttur_Advt_NewsUnder_1
Puttur_Advt_NewsUnder_1

 

ಮೃತ ಭಿಕ್ಷುಕ(ಶಂಕರ)

ಸಿಐಡಿ ಶಂಕರನೆಂದೇ ಪ್ರಸಿದ್ಧಿ..! ಹೆಸರು, ಊರು ಗೊತ್ತಿಲ್ಲದ ಶಂಕರನ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲ. ಆದರೆ ಸಿಐಡಿ ಶಂಕರ ಎಂದೇ ಪ್ರಸಿದ್ಧಿ ಪಡೆದುಕೊಂಡಿದ್ದರು. ಆರಂಭದಲ್ಲಿ ಶಂಕರನ ಚಲನವಲನಗಳ ಬಗ್ಗೆ ಗಮನಿಸಿದ ಜನರು, ಈ ಭಾಗದಲ್ಲಿ ಯಾವುದೋ ಮರ್ಡರ್ ಆಗಿದೆ. ಈ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲೆಂದು ಪೊಲೀಸರೇ ಮಾರುವೇಷದಲ್ಲಿ ಕಳುಹಿಸಿದ್ದಾರೆ ಎಂದು ಆಡಿಕೊಳ್ಳುತ್ತಿದ್ದರು. ಜನರ ಬಾಯಿಂದ ಬಾಯಿಗೆ ಈ ವಿಚಾರ ಹರಡಿ ಈತ ಸಿಐಡಿ ಶಂಕರ್ ಎಂದೇ ಕರೆಸಿಕೊಳ್ಳುತ್ತಿದ್ದರು.

ಗೋ ಶಾಲೆಗೆ ದಾನ ಶಂಕರ್ ಕಳೆದ ವರ್ಷದಿಂದ ಪ್ರತೀ ತಿಂಗಳು ಅರಸೀಕೆರೆಯ ಕಸ್ತೂರಬಾ ಗೋ ಶಾಲೆಗೆ ಪ್ರತೀ ದಿನ ತಮ್ಮ ಭಿಕ್ಷೆಯಲ್ಲಿ ಬಂದ ಹಣವನ್ನು ಗೋ ಹುಂಡಿಗೆ ತಂದು ಹಾಕುವ ಮೂಲಕ ಗೋ ಸೇವೆಗೂ ಪ್ರೇರಣಾ ಶಕ್ತಿಯಾಗಿದ್ದರು. ಏನೂ ಇಲ್ಲದ ಭಿಕ್ಷುಕರೂ ಗೋ ಸೇವೆ ಮಾಡಲು ಸಾಧ್ಯ ಎನ್ನೋದನ್ನು ತೋರಿಸಿಕೊಟ್ಟು ಆದರ್ಶರಾಗಿದ್ದರು. ಕಳೆದ ವರ್ಷ ನೆಲ್ಯಾಡಿಯಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಯುವಕರೊಂದಿಗೆ ತಾನೂ ಹೆಜ್ಜೆ ಹಾಕುವ ಮೂಲಕ ಜನರ ಮನಗೆದ್ದಿದ್ದರು.

ನೆಲ್ಯಾಡಿ: ಸುಮಾರು ೩೦-೩೫ ವರ್ಷಗಳ ಹಿಂದೆ ಎಲ್ಲಿಂದಲೋ ನೆಲ್ಯಾಡಿಗೆ ಬಂದು ಭಿಕ್ಷೆ ಬೇಡಿ ಬದುಕುವುದರೊಂದಿಗೆ ನೆಲ್ಯಾಡಿ ಅಸುಪಾಸಿನ ಜನರ ಮನಗೆದ್ದಿದ್ದ, `ಸಿಐಡಿ ಶಂಕರ್’ ಎಂದೇ ಕರೆಸಿಕೊಳ್ಳುತ್ತಿದ್ದ ಸುಮಾರು ೮೦ ವರ್ಷದ ಭಿಕ್ಷುಕ ಅಲ್ಪಕಾಲದ ಅಸೌಖ್ಯದಿಂದ ಅ.೨೬ರಂದು ಬೆಳಿಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಈ ಭಿಕ್ಷುಕನ ಜಾತಿ, ಧರ್ಮ ಯಾವುದು ಎಂದು ಇಲ್ಲಿಯ ತನಕವೂ ಯಾರಿಗೂ ಗೊತ್ತಿಲ್ಲ. ಯಾರೂ ಕೇಳಿಯೂ ಇಲ್ಲ. ಎಂದಿಗೂ, ಯಾರೊಂದಿಗೂ ಸರಿಯಾಗಿ ಮಾತನಾಡಿದವರೂ ಅಲ್ಲ. ಆದ್ದರಿಂದ ಅವರ ಭಾಷೆ, ಯಾವ ರಾಜ್ಯದವರು ಎಂದೂ ಯಾರಿಗೂ ತಿಳಿದಿಲ್ಲ. ಎಲ್ಲದಕ್ಕೂ ಮೌನವೇ ಈತನ ಉತ್ತರವಾಗಿತ್ತು. ಇಲ್ಲಿನ ಹೋಟೆಲ್, ಅಂಗಡಿಯವರೇ ಇವರ ಅನ್ನದಾತರು. ಕೈಯಲ್ಲೊಂದು ಕೋಲು, ಮೈತುಂಬಾ ಕೆಸರು ಮೆತ್ತಿಕೊಂಡು ಸದೃಢ ಮೈಕಟ್ಟು ಹೊಂದಿದ್ದ ಈತ ಕಳೆದ ೩೦-೩೫ವರ್ಷಗಳಲ್ಲಿ ಅನಾರೋಗ್ಯಕ್ಕೆ ಒಳಗಾಗಿz ಇಲ್ಲ. ಒಂದು ಅಂಗಡಿಗೆ ಹೋಗಿ ಭಿಕ್ಷೆ ಬೇಡಿ ಅವರು ಕೊಟ್ಟ ನಾಣ್ಯವನ್ನು ಅಲ್ಲೇ ಪಕ್ಕದ ಇನ್ನೊಂದು ಅಂಗಡಿಗೆ ಕೊಟ್ಟು ಅವರು ಕೊಟ್ಟದನ್ನು ತೆಗೆದುಕೊಂಡು ಹೋಗುತ್ತಿದ್ದರು. ನೆಲ್ಯಾಡಿಯಿಂದ ಕೊಕ್ಕಡ, ಅರಸಿನಮಕ್ಕಿ, ರೆಖ್ಯದವರೆಗೂ ಈತನ ಸಂಚಾರವಿತ್ತು. ಅಂಗಡಿ, ಹೋಟೆಲ್‌ನವರು ಕೊಟ್ಟ ತಿಂಡಿ ತಿನಿಸು ತಿಂದು ಜೀವನ ಸಾಗಿಸುತ್ತಿದ್ದರು. ಅಂಗಡಿಗಳ ಮುಂದೆ ಮಲಗಿ ರಾತ್ರಿ ಕಳೆಯುತ್ತಿದ್ದ. ಅಲ್ಲಿಯೋ ಇಲ್ಲಿಯೋ ಸ್ನಾನ ಮಾಡಿದರೂ ಮತ್ತೆ ಮೈಗೆ ಮಣ್ಣು ಮೆತ್ತಿಕೊಂಡು ಸಂತೋಷ ಪಡುತ್ತಿದ್ದ. ಈತನ ಜೀವನವೇ ಒಂದು ರೀತಿ ವಿಶೇಷವಾಗಿತ್ತು. ಆದರೆ ಯಾರಿಗೂ ತೊಂದರೆ ಕೊಟ್ಟವರಲ್ಲ. ಆದ್ದರಿಂದಲೇ ಇಲ್ಲಿಯ ಜನರ ಪ್ರೀತಿಗೆ ಪಾತ್ರನಾಗಿದ್ದರು.
ದಿಢೀರ್ ಅನಾರೋಗ್ಯ: ೧೫ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಈತನಿಗೆ ಸ್ಥಳೀಯ ಮುಖಂಡರು ನೆಲ್ಯಾಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ತುಸು ಚೇತರಿಸಿಕೊಂಡಿದ್ದರೂ ಮತ್ತೆ ದಿಢೀರ್ ಅನಾರೋಗ್ಯಕ್ಕೆ ಒಳಗಾಗಿದ್ದ ಶಂಕರ್‌ರನ್ನು ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರ ನೇತೃತ್ವದಲ್ಲಿ ಅ.೧೮ರಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅ.೨೬ರಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಕೌಕ್ರಾಡಿ ಗ್ರಾ.ಪಂ.ಮಾಜಿ ಸದಸ್ಯ ಲೋಕೇಶ್ ಬಾಣಜಾಲುರವರಿಗೆ ಮಾಹಿತಿ ನೀಡಿದ್ದರು. ಅವರು ಜಾಫರ್ ಹೊಸಮಜಲು, ಸಿದ್ದೀಕ್ ಶಾಂತಿಬೆಟ್ಟು, ನೌಶಾದ್ ಮಣ್ಣಗುಂಡಿಯವರ ಜೊತೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ಪ್ರಕರಣ ದಾಖಲಿಸಿ ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಗೆ ತೆರಳಿ ಮೃತದೇಹದ ಮರಣೋತ್ತರ ಪರೀಕ್ಷೆಗೆ ಸೂಕ್ತ ವ್ಯವಸ್ಥೆ ಮಾಡಿದ್ದರು.

ಮೃತದೇಹ ನೆಲ್ಯಾಡಿಗೆ ತರಲು ವ್ಯವಸ್ಥೆ ಮಾಡಿದ ಲೋಕೇಶ್ ಬಾಣಜಾಲು, ಜಾಫರ್ ಹೊಸಮಜಲು,

ಸಿದ್ದೀಕ್ ಶಾಂತಿಬೆಟ್ಟು, ನೌಶಾದ್ ಮಣ್ಣಗುಂಡಿ

ಅಂತ್ಯಕ್ರಿಯೆ ವೇಳೆ ಪಾಲ್ಗೊಂಡ ಜನ

ಮೃತದೇಹಕ್ಕೆ ಅಂತಿಮವಿಧಿ ವಿಧಾನ

ನೆಲ್ಯಾಡಿಗೆ ಮೃತದೇಹ-ಮೆರವಣಿಗೆ: ಮರಣೋತ್ತರ ಪರೀಕ್ಷೆ ಬಳಿಕ ಶಂಕರ ಅವರ ಮೃತದೇಹವನ್ನು ನೆಲ್ಯಾಡಿಯ ಎಸ್‌ಡಿಪಿಐ ಆಂಬುಲೆನ್ಸ್‌ನಲ್ಲಿ ಸಂಜೆ ೬.೩೦ರ ವೇಳೆಗೆ ನೆಲ್ಯಾಡಿಗೆ ತರಲಾಯಿತು. ನೆಲ್ಯಾಡಿ ಗಾಂಧಿ ಮೈದಾನದ ಬಳಿ ಸಾರ್ವಜನಿಕರಿಗೆ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿ ಬಳಿಕ ಅಲ್ಲಿಂದ ವಾಹನ ಜಾಥಾದ ಮೂಲಕ ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿರುವ ಸಾರ್ವಜನಿಕ ಸ್ಮಶಾನಕ್ಕೆ ತರಲಾಯಿತು. ದ್ವಿಚಕ್ರ ವಾಹನ, ರಿಕ್ಷಾ ಚಾಲಕರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಈ ವೇಳೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ನೂರಾರು ಮಂದಿ ಆಗಮಿಸಿ ಮೃತದೇಹಕ್ಕೆ ಮಾಲಾರ್ಪಣೆ ಮಾಡಿ ಅಶ್ರುತರ್ಪಣ ಸಲ್ಲಿಸಿದರು. ಬಳಿಕ ಮೃತದೇಹದ ದಫನ ಮಾಡಲಾಯಿತು. ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಸದಸ್ಯೆ ಉಷಾ ಅಂಚನ್, ಎಪಿಎಂಸಿ ಸದಸ್ಯ ಬಾಲಕೃಷ್ಣ ಬಾಣಜಾಲು, ಕೌಕ್ರಾಡಿ ಗ್ರಾ.ಪಂ.ಮಾಜಿ ಸದಸ್ಯ ಎಂ.ಕೆ.ಇಬ್ರಾಹಿಂ, ನೆಲ್ಯಾಡಿ ವರ್ತಕ ಸಂಘದ ಕಾರ್ಯದರ್ಶಿ ಪ್ರವೀಣ್ ಕುಮಾರ್ ದೋಂತಿಲ, ಹೊಸಮಜಲು ಜಲಾಲಿಯ ಮಸೀದಿ ಕಾರ್ಯದರ್ಶಿ ಕೆ.ಇ.ಅಬೂಬಕ್ಕರ್, ಪ್ರಮುಖರಾದ ರವಿಪ್ರಸಾದ್ ಶೆಟ್ಟಿ ರಾಮನಗರ, ಸುಧಾಕರ ಗುತ್ತು, ಸಿದ್ದೀಕ್ ಮಣ್ಣಗುಂಡಿ ಸೇರಿದಂತೆ ನೆಲ್ಯಾಡಿಯ ರಿಕ್ಷಾ ಚಾಲಕರು, ವರ್ತಕರು, ಗ್ರಾಮಸ್ಥರು ಸೇರಿದಂತೆ ಸುಮಾರು ೫೦೦ಕ್ಕೂ ಹೆಚ್ಚು ಮಂದಿ ಅಂತಿಮ ದರ್ಶನ ಪಡೆದುಕೊಂಡು ಸಂತಾಪ ಸೂಚಿಸಿದರು. ಉಪ್ಪಿನಂಗಡಿ ಠಾಣಾ ಎಎಸ್‌ಐ ಸೀತಾರಾಮ, ನೆಲ್ಯಾಡಿ ಹೊರಠಾಣಾ ಹೆಡ್‌ಕಾನ್‌ಸ್ಟೇಬಲ್‌ಗಳಾದ ಸಂಗಯ್ಯ, ಹರಿಶ್ಚಂದ್ರರವರು ಸಹಕರಿಸಿದರು. ಒಟ್ಟಿನಲ್ಲಿ ಎಲ್ಲಿಂದಲೋ ಬಂದು ಭಿಕ್ಷೆ ಬೇಡಿ ಜೀವಿಸುವುದರೊಂದಿಗೆ ನೆಲ್ಯಾಡಿಯ ಸರ್ವಧರ್ಮೀಯರ ಜನತೆಯ ಹೃದಯ ಗೆದ್ದ ಶಂಕರ ಇನ್ನೂ ನೆನಪು ಮಾತ್ರ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.