HomePage_Banner
HomePage_Banner
HomePage_Banner

ಸರ್ವೆ ಎಸ್.ಜಿ.ಎಂ ಪ್ರೌಢಶಾಲೆಯ ಅಭಿವೃದ್ಧಿಯ ಹರಿಕಾರ, ಜನಮೆಚ್ಚಿದ ಶಿಕ್ಷಕ ಶ್ರೀನಿವಾಸ್ ಎಚ್.ಬಿ ಅವರಿಗೆ ವಿದಾಯ ಸಮಾರಂಭ

Puttur_Advt_NewsUnder_1
Puttur_Advt_NewsUnder_1
  • ಎಲ್ಲರ ಹೃದಯದಲ್ಲಿ ಶ್ರೀನಿವಾಸ್ ಎಚ್.ಬಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ-ಗಣ್ಯರ ಅಭಿಮತ

ಪುತ್ತೂರು: ಕಳೆದ ೩೬ ವರ್ಷಗಳಿಂದ ಸರ್ವೆ ಎಸ್.ಜಿ.ಎಂ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಅ.೩೧ರಂದು ಸೇವಾ ನಿವೃತ್ತಿ ಹೊಂದಿದ ಶ್ರೀನಿವಾಸ್ ಎಚ್.ಬಿ ಅವರಿಗೆ ಬೀಳ್ಕೊಡುಗೆ ಸಮಾರಂಭ ನ.೧ರಂದು ಸರ್ವೆ ಎಸ್.ಜಿ.ಎಂ ಪ್ರೌಢ ಶಾಲೆಯಲ್ಲಿ ನಡೆಯಿತು.

ಶಾಲೆಯನ್ನು ಅದ್ಭುತ ಅಭಿವೃದ್ಧಿ ಪಥದಲ್ಲಿ ಸಾಗಿಸಿದ್ದಾರೆ-ಡಾ.ಸೀತಾರಾಮ ಭಟ್
ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ವ್ಯವಸ್ಥಾಪಕ ಡಾ.ಸೀತಾರಾಮ ಭಟ್ ಕಲ್ಲಮ ಮಾತನಾಡಿ ನಿವೃತ್ತಿ ಹೊಂದಿರುವ ಶ್ರೀನಿವಾಸ್ ಅವರು ಎಲ್ಲರನ್ನು ಸೇರಿಸಿಕೊಂಡು ಎಸ್.ಜಿ.ಎಂ ಶಾಲೆಯನ್ನು ಅದ್ಭುತ ಅಭಿವೃದ್ಧಿ ಪಥದಲ್ಲಿ ಸಾಗಿಸಿದ್ದಾರೆ, ಶಾಲೆಯನ್ನು ಸ್ವಂತ ಮನೆಯಂತೆ ಹಾಗೂ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಂಡಿದ್ದಾರೆ ಎಂದು ಹೇಳಿದರು. ಶ್ರೀನಿವಾಸ್ ಎಚ್.ಬಿ ಅವರು ಶಾಲೆಗಾಗಿ ಬಹಳ ಶ್ರಮಪಟ್ಟಿದ್ದರು, ನಮ್ಮನ್ನೆಲ್ಲಾ ಶಾಲೆಯ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿಸಿದ್ದರು ಇವರ ಸೇವೆ ಮುಂದಕ್ಕೂ ನಮ್ಮೂರಿಗೆ ಸಿಗಲಿ ಎಂದು ಆಶಿಸಿದರು.

 

ಮುಂದಕ್ಕೂ ಮಾರ್ಗದರ್ಶನ ಕೊಟ್ಟು ಮುನ್ನಡೆಸಬೇಕು-ಎಸ್.ಡಿ ವಸಂತ
ಮುಂಡೂರು ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷ ಎಸ್.ಡಿ ವಸಂತ ಮಾತನಾಡಿ ಎಸ್.ಜಿ.ಎಂ ಶಾಲೆ ಸಂಸ್ಕಾರ ಮತ್ತು ಶಿಸ್ತಿನಲ್ಲಿ ಹೆಸರು ಪಡೆದಿದೆ, ಉತ್ತಮ ಶಿಕ್ಷಕರಾಗಿ ಗುರುತಿಸಿಕೊಂಡಿದ್ದ ವೆಂಕಟ್ರಮಣ ಗೌಡರವರು ನಿಧನರಾದ ಬಳಿಕ ಶ್ರೀನಿವಾಸ್ ಎಚ್.ಬಿ ಅವರು ಹೆಚ್ಚಿನ ಜವಾಬ್ದಾರಿ ವಹಿಸಿ ಶಾಲೆಯನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಿದ್ದಾರೆ, ನಿವೃತ್ತರಾದರೂ ನೀವು ಮುಂದಕ್ಕೂ ಈ ಶಾಲೆಗೆ ಮಾರ್ಗದರ್ಶನ ಕೊಟ್ಟು ಮುನ್ನಡೆಸಬೇಕು ಎಂದು ಹೇಳಿದರು. ಗ್ರಾ.ಪಂನಿಂದ ಈ ಶಾಲೆಗೆ ಹೆಚ್ಚಿನ ಅನುದಾನ ನೀಡಲು ಅವಕಾಶವಿಲ್ಲದೇ ಇದ್ದರೂ ನಮ್ಮಿಂದಾಗುವ ನೆರವು ನೀಡಿದ್ದೇವೆ, ಗ್ರಾಮದ ಎಲ್ಲ ಶಾಲೆಗಳ ಅಭಿವೃದ್ಧಿಗೆ ಗ್ರಾ.ಪಂ ರಾಜಕೀಯ ರಹಿತವಾಗಿ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.

ಶ್ರೀನಿವಾಸ್ ಅವರ ನಿವೃತ್ತಿ ದೊಡ್ಡ ಸದ್ದು ಮಾಡಿದೆ-ಜಗನ್ನಿವಾಸ್ ರಾವ್
ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ್ ರಾವ್ ಮಾತನಾಡಿ ಶ್ರೀನಿವಾಸ್ ಎಚ್.ಬಿ ಅವರ ನಿವೃತ್ತಿ ದೊಡ್ಡ ಸದ್ದು ಮಾಡಿದೆ, ಎಲ್ಲರನ್ನೂ ಮಾತಿನ ಮೋಡಿಯಲ್ಲಿ ಬಲೆಗೆ ಬೀಳಿಸುವ, ಪ್ರೀತಿಯ ಸಂಕೋಲೆಯಲ್ಲಿ ಬಂಧಿಸುವ ಗುಣ ಅವರಲ್ಲಿದೆ, ಶ್ರೀನಿವಾಸ್ ಹಾಗೂ ಅವರ ಪತ್ನಿ ಜಯಶ್ರೀ ನನ್ನ ಜೀವನದ ಶಿಲ್ಪಿಗಳು ಎಂದು ಅವರು ಹೇಳಿದರು. ಈ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ನನ್ನಿಂದಾಗುವ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂದು ಅವರು ಹೇಳಿದರು.

ಶಾಲೆಯನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ-ಶಿವನಾಥ ರೈ
ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಮಾತನಾಡಿ ಹತ್ತು ಜನರನ್ನು ಸೇರಿಸಿ ಕೆಲಸ ಮಾಡುವುದು ಅಷ್ಟು ಸುಲಭದ ಮಾತಲ್ಲ, ಆದರೆ ಶ್ರೀನಿವಾಸ್ ಅವರು ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಹೀಗೆ ಎಲ್ಲ ರಂಗದವರನ್ನೂ ಒಟ್ಟಿಗೆ ಸೇರಿಸಿ ಶಾಲೆಯ ಅಭಿವೃದ್ಧಿಗೆ ಸಹಕಾರ ಪಡೆದುಕೊಂಡಿದ್ದಾರೆ, ವೆಂಕಟ್ರಮಣ ಗೌಡರ ಬಳಿಕ ಶ್ರೀನಿವಾಸ್ ಎಚ್.ಬಿ ಅವರು ಶಾಲೆಯನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ ಎಂದು ಹೇಳಿದರು.

ಶ್ರೀನಿವಾಸ್ ಅವರು ಜನರ ಬಳಿಗೆ ಹೋಗಿದ್ದಾರೆ-ಜಿ.ಕೆ ಪ್ರಸನ್ನ
ಜೀವ ವಿಮಾ ಸಲಹೆಗಾರ ಜಿ.ಕೆ ಪ್ರಸನ್ನ ಕಲ್ಲಗುಡ್ಡೆ ಮಾತನಾಡಿ ಶ್ರೀನಿವಾಸ್ ಅವರು ಜನರ ಬಳಿಗೆ ಹೋದ ಕಾರಣಕ್ಕಾಗಿ ಇಷ್ಟು ದೊಡ್ಡ ವ್ಯಕ್ತಿಯಾಗಿ ಗುರುತಿಸಿದ್ದಾರೆ, ಇವರು ಸ್ವತಃ ತಾವೂ ಕೊಡುಗೆ ಕೊಟ್ಟು ದಾನಿಗಳಿಂದ ಸಹಕಾರ ಬಯಸುತ್ತಾರೆ, ಅದೆಷ್ಟೋ ಶಿಕ್ಷಕರು ನಿವೃತ್ತಿಯಾಗ್ತಾರೆ ಆದರೆ ಶ್ರೀನಿವಾಸ್ ಅವರು ಜನರೆಡೆಯಲ್ಲಿ ಅಪಾರ ಪ್ರೀತಿ ಸಂಪಾದಿಸಿದ ಕಾರಣಕ್ಕೆ ವಿಭಿನ್ನವಾಗಿ ನಿವೃತ್ತಿಯಾಗುತ್ತಿದ್ದಾರೆ, ಇವರ ಸೇವೆ ಮುಂದಕ್ಕೂ ನಮ್ಮೂರಿಗೆ ಲಭಿಸಲಿ ಎಂದು ಹೇಳಿದರು.

ಎಲ್ಲರನ್ನು ಮಾತಿನಿಂದಲೇ ಗೆದ್ದಿದ್ದರು-ಮಹಾಬಲ ರೈ
ನಿವೃತ್ತ ಮುಖ್ಯಗುರು ಮಹಾಬಲ ರೈ ಮೇಗಿನಗುತ್ತು ಮಾತನಾಡಿ ಮಾತುಬಲ್ಲವನಿಗೆ ಜಗಳವಿಲ್ಲ ಎನ್ನುವಂತೆ ಶ್ರೀನಿವಾಸ್ ಅವರು ಎಲ್ಲರನ್ನು ಮಾತಿನಿಂದಲೇ ಗೆದ್ದಿದ್ದರು, ಎಲ್ಲರ ಪ್ರೀತಿ ವಿಶ್ವಾಸ ಸಂಪಾದಿಸಿದ್ದರು, ಇವರ ಸೇವೆ ಮುಂದಕ್ಕೂ ನಮ್ಮೂರಿಗೆ ಸಿಗುವಂತಾಗಲಿ ಎಂದು ಹಾರೈಸಿದರು.

ಶಾಲೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ-ಜಯಂತ್ ಬೇಕಲ್
ಶಾಲಾ ಆಡಳಿತ ಮಂಡಳಿ ಖಜಾಂಜಿ ಜಯಂತ್ ಬೇಕಲ್ ಮಾತನಾಡಿ ಶ್ರೀನಿವಾರವರು ಶಾಲೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ, ಮಕ್ಕಳನ್ನು ಪ್ರೋತ್ಸಾಹಿಸಿ ಸಾಧನೆಗೆ ಪ್ರೇರೇಪಿಸಿದ್ದಾರೆ, ಇವರ ನಿವೃತ್ತಿ ದುಖ ಮತ್ತು ಸಂತೋಷವನ್ನು ನೀಡುತ್ತಿದೆ ಎಂದರು.

ಎಲ್ಲರ ಮನಸ್ಸಿನಲ್ಲಿ ಉಳಿಯಲಿದ್ದಾರೆ-ಶಶಿಧರ್ ಎಸ್.ಡಿ
ಶಾಲಾ ಆಡಳಿತ ಮಂಡಳಿ ಸದಸ್ಯ ಶಶಿಧರ್ ಎಸ್.ಡಿ ಮಾತನಾಡಿ ಎಲ್ಲರನ್ನು ಒಗ್ಗೂಡಿಸಿಕೊಂಡು ಶಾಲೆಯ ಬೆಳವಣಿಗೆ ಬಗ್ಗೆ ಸದಾ ಚಿಂತಿಸುತ್ತಿದ್ದ ಶ್ರೀನಿವಾಸ್ ಅವರು ಎಲ್ಲರ ಮನಸ್ಸಿನಲ್ಲಿ ಉಳಿಯಲಿದ್ದಾರೆ. ವೃತ್ತಿ ಬದುಕಿನಿಂದ ನಿವೃತ್ತಿಯಾದರೂ ಮುಂದಕ್ಕೂ ನೀವು ನಮ್ಮ ಜೊತೆಗಿರಬೇಕು ಎಂದು ಅವರು ಹೇಳಿದರು.

ಎಲ್ಲರನ್ನು ಗೌರವಿಸುತ್ತಿದ್ದರು-ಸುರೇಶ್ ಎಸ್.ಡಿ
ಎಸ್.ಜಿ.ಎಂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಎಸ್.ಡಿ ಮಾತನಾಡಿ ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು ಕರೆದು ಮಾತನಾಡಿಸುವ, ಅವರ ಜೊತೆ ಸಂಪರ್ಕವಿಟ್ಟುಕೊಳ್ಳುತ್ತಿದ್ದ ಶ್ರೀನಿವಾಸ್ ಎಚ್.ಬಿ ಅವರು ಹಿರಿಯ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುತ್ತಿದ್ದರು, ಆ ಕಾರಣಕ್ಕಾಗಿಯೇ ಅವರು ಎಲ್ಲರ ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದಾರೆ ಮತ್ತು ಶಾಲೆಗೆ ಆರ್ಥಿಕ ನೆರವು ಪಡೆದುಕೊಂಡಿದ್ದಾರೆ ಶ್ರೀನಿವಾಸ್ ಅವರು ಶಾಲೆಗಾಗಿ ಪಟ್ಟ ಶ್ರಮ ಅಪಾರ, ಎಲ್ಲರ ಮನಸ್ಸು ಗೆದ್ದಿರುವ ಅವರ ಬೀಳ್ಕೊಡುಗೆ ನಮ್ಮೆಲ್ಲರನ್ನು ಭಾವುಕರನ್ನಾಗಿಸಿದೆ ಎಂದರು.

ಇಂತಹ ಶಿಕ್ಷಕ ಬೇರೆ ಶಾಲೆಯಲ್ಲಿ ಇರಲು ಸಾಧ್ಯವಿಲ್ಲ-ಸುರೇಶ್ ಆಚಾರ್ಯ
ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸುರೇಶ್ ಆಚಾರ್ಯ ಮಾತನಾಡಿ ಹಿರಿಯ ವಿದ್ಯಾರ್ಥಿಗಳನ್ನು, ಊರವನ್ನು ಜೊತೆ ಸೇರಿಸಿ ವಿದ್ಯಾದೇಗುಲವನ್ನು ಅಭಿವೃದ್ಧಿಪಡಿಸಿದ ಶ್ರೀನಿವಾಸ್ ಅವರ ಕಾರ್ಯವೈಖರಿ ಮೆಚ್ಚುವಂತದ್ದು, ಇಂತಹ ಶಿಕ್ಷಕ ಬೇರೆ ಯಾವ ಶಾಲೆಯಲ್ಲೂ ಇರಲು ಸಾಧ್ಯವಿಲ್ಲ ಎಂದು ಹೇಳಿದರು.

`ಉತ್ತಮ ಶಿಕ್ಷಕ ಪ್ರಶಸ್ತಿ’ ಇವರಿಗೆ ಸಲ್ಲಬೇಕು-ಯತೀಶ್ ರೈ
ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಯತಿಶ್ ರೈ ಮೇಗಿನಗುತ್ತು ಮಾತನಾಡಿ ಶಾಲೆಯನ್ನು ಅಮೂಲಾಗ್ರ ಬದಲಾವಣೆಗೊಳಿಸಿದ ಶ್ರೀನಿವಾಸ್ ಅವರು ಎಲ್ಲ ಕ್ಷೇತ್ರಗಳಲ್ಲೂ ಮಾದರಿಯಾಗಿದ್ದು ದೇಶದ ಉನ್ನತ ಶಿಕ್ಷಕರ ಪಟ್ಟಿಯಲ್ಲಿ ಇವರಿಗೆ ಸ್ಥಾನ ಸಿಗಬೇಕಾಗಿದೆ, ನಿಜವಾದ `ಉತ್ತಮ ಶಿಕ್ಷಕ ಪ್ರಶಸ್ತಿ’ ಇವರಿಗೆ ಸಲ್ಲಬೇಕು ಎಂದು ಅವರು ಹೇಳಿದರು.

ಶಿಕ್ಷಣ ಇಲಾಖೆಯಲ್ಲೂ ಗೌರವ ಹೊಂದಿದ್ದಾರೆ-ಅನಂತಕೃಷ್ಣ
ಸಿ.ಆರ್.ಪಿ ಅನಂತಕೃಷ್ಣ ಮಾತನಾಡಿ ಗ್ರಾಮದ ಜನರ ಮನೆ-ಮನಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಶ್ರೀನಿವಾಸ್ ಸರ್ ಅವರು ಜನರ ಆತ್ಮ ಪ್ರೀತಿ ಸಂಪಾದಿಸಿದ್ದಾರೆ, ಇವರಿಗೆ ಶಿಕ್ಷಣ ಇಲಾಖೆಯಲ್ಲೂ ಬಹಳ ಗೌರವ ಹೊಂದಿದ್ದಾರೆ, ಇವರ ವ್ಯಕ್ತಿತ್ವ ಎಂತವರನ್ನೂ ಆಕರ್ಷಿಸುತ್ತದೆ ಎಂದು ಹೇಳಿದರು.

ವಿಭಿನ್ನ ಪ್ರತಿಭೆ ಶ್ರೀನಿವಾಸ್‌ರವರಲ್ಲಿದೆ-ಯಾದವಿ
ಎಸ್.ಜಿ.ಎಂ ಪ್ರೌಢಶಾಲಾ ಸಂಚಾಲಕಿ ಯಾದವಿ ಜಯಕುಮಾರ್ ಮಾತನಾಡಿ ನನ್ನ ತಂದೆ ದಿ.ವಿಜಯಕುಮಾರ್ ಹಾಗೂ ಶ್ರೀನಿವಾಸ್ ಎಚ್.ಬಿ ಸೇರಿ ಶಾಲೆಗೆ ಜನರನ್ನು ಬರುವಂತೆ ಮಾಡುತ್ತಿದ್ದರು, ಶ್ರೀನಿವಾಸ್ ಅವರು ಇನ್ನೂ ಹಲವು ವರ್ಷ ನಮ್ಮ ಶಾಲೆಯಲ್ಲಿ ಬೇಕಿತ್ತು ಅನ್ನುವ ಆಸೆ ಇದೆ, ಎಲ್ಲರ ಮನಸ್ಸು ಗೆದ್ದಿರುವ ಅವರು ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದು ವಿಭಿನ್ನ ಪ್ರತಿಭೆ ಅವರಲ್ಲಿದೆ, ಶಾಲೆಯ ಅಭಿವೃದ್ಧಿಯಲ್ಲಿ ಶ್ರಮಿಸಿದ ನಿಮ್ಮ ನಿವೃತ್ತ ಜೀವನ ಸಂತೋಷದಿಂದ ಕೂಡಿರಲಿ ಎಂದು ಅವರು ಹಾರೈಸಿದರು.

ಪರಿಪೂರ್ಣ ಶಿಕ್ಷಕರಾಗಿ ಹೊರಹೊಮ್ಮಿದ್ದಾರೆ-ಕಮಲೇಶ್
ಸ್ವಾಗತಿಸಿದ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಕಮಲೇಶ್ ಸರ್ವೆದೋಳಗುತ್ತು ಮಾತನಾಡಿ ಶ್ರೀನಿವಾಸ್ ಎಚ್.ಬಿ ಅವರು ಪ್ರತೀ ಹಂತದಲ್ಲೂ ಶಾಲೆಯ ಉಳಿವಿಗಾಗಿ, ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ, ಎಲ್ಲರನ್ನು ಗೌರವಿಸಿ ಶಾಲೆಯ ಕಡೆಗೆ ಆಕರ್ಷಿತರಾಗುವಂತೆ ಮಾಡಿದ್ದಾರೆ, ಓರ್ವ ಪರಿಪೂರ್ಣ ಶಿಕ್ಷಕರಾಗಿ ಅವರು ನಮ್ಮ ಗ್ರಾಮಕ್ಕೆ ಕೊಟ್ಟ ಕೊಡುಗೆ ಅಪಾರ. ಅವರು ನಿವೃತ್ತಿಯಾದರೂ ಅವರ ಮಾರ್ಗದರ್ಶನ, ಸಲಹೆ ಸೂಚನೆಗಳು ನಮಗೆ ಯಾವತ್ತೂ ಬೇಕಾಗಿದೆ ಎಂದು ಹೇಳಿದರು.

ಎಸ್.ಜಿ.ಎಂನಲ್ಲಿ ಕಲಿತದ್ದು ನನ್ನ ಪುಣ್ಯವೆಂದು ಭಾವಿಸಿದ್ದೇನೆ-ತಾರನಾಥ ರೈ
ಎಸ್‌ಜಿಎಂ ಹಿರಿಯ ವಿದ್ಯಾರ್ಥಿ, ತುಳುಕೂಟ ಪುಣೆ ಇದರ ನಿಕಟಪೂರ್ವ ಅಧ್ಯಕ್ಷ ತಾರನಾಥ ರೈ ಮೇಗಿನಗುತ್ತು ಮಾತನಾಡಿ ಶ್ರೀನಿವಾಸ್ ಎಚ್.ಬಿ ಹಾಗೂ ಜಯಶ್ರೀ ಟೀಚರ್ ಅವರು ನನ್ನನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ,ಈ ಶಾಲೆಯಲ್ಲಿ ಕಲಿತದ್ದು ನನ್ನ ಪುಣ್ಯ ಎಂದು ಭಾವಿಸಿದ್ದೇನೆ ಎಂದು ಭಾವಿಸಿದ್ದೇನೆ. ಸಾಮಾಜಿಕ ತಾಣವನ್ನು ಹೇಗೆ ಸದ್ವಿನಿಯೋಗ ಮಾಡಬಹುದೆಂದು ಶ್ರೀನಿವಾಸ್ ಎಚ್.ಬಿ ತೋರಿಸಿಕೊಟ್ಟಿದ್ದಾರೆ, ಎಲ್ಲರನ್ನು ಸೇರಿಸಿಕೊಂಡು ಶಾಲೆಯನ್ನು ಅಭಿವೃದ್ಧಿ ಮಾಡಿರುವ ಅವರ ಸಾಧನೆ ಅದ್ಭುತವಾಗಿದೆ ಎಂದು ಹೇಳಿದರು.

ಲೀಡರ್‌ಶಿಪ್ ತೆಗೆದುಕೊಂಡು ಶಾಲೆ ಅಭಿವೃದ್ಧಿಪಡಿಸಿದ್ದಾರೆ-ಸತೀಶ್ ಭಟ್
ರಾಮಕುಂಜ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸತೀಶ್ ಭಟ್ ಮಾತನಾಡಿ ಶ್ರೀನಿವಾಸ್ ಅವರು ಲೀಡರ್‌ಶಿಪ್ ತೆಗೆದುಕೊಂಡು ಈ ಶಾಲೆಯನ್ನು ಅಭಿವೃದ್ಧಿ ಪಡಿಸಿರುವುದು ಮಾದರಿಯಾಗಿದೆ, ಊರವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ನೀವು ಅದನ್ನು ಮುಂದುವರಿಸಿ, ಇಲ್ಲಿನವರಿಗೆ ಮಾರ್ಗದರ್ಶನ ಮಾಡುತ್ತಿರಿ ನಿಮ್ಮ ಶಿಕ್ಷಕ ವೃತ್ತಿಯ ಸಾಧನೆ ಅಮೋಘ ಎಂದು ಹೇಳಿದರು.

ಶ್ರೀನಿವಾಸ್ ಅವರ ಕಾರ್ಯದಕ್ಷತೆ ಎಲ್ಲರಿಗೆ ಮಾದರಿ-ಜಯರಾಮ ಶೆಟ್ಟಿ ಕೆ
ಸರ್ವೆ ಕಲ್ಪಣೆ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ ಕೆ ಮಾತನಾಡಿ ನಾನು ಮತ್ತು ಶ್ರೀನಿವಾಸ್ ಅವರು ಬಹಳ ಆತ್ಮೀಯರು, ನಮ್ಮೊಳಗಿನ ಬಾಂಧವ್ಯ ಗಟ್ಟಿಯಾಗಿದೆ, ಎರಡು ವರ್ಷಗಳ ಹಿಂದೆ ನಮ್ಮ ಶಾಲೆಯ ದಿಲ್ಶಾನಾ ಎಂಬ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾದ್ಯಮದಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನಿಯಾದರೆ, ಈ ಬಾರಿ ಎಸ್.ಜಿ.ಎಂ ಶಾಲೆಯ ಶಮಾ ಎನ್ನುವ ವಿದ್ಯಾರ್ಥಿನಿ ಕನ್ನಡ ಮಾದ್ಯಮದಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನಿಯಾಗಿದ್ದಾಳೆ ಹಾಗಾಗಿ ನಮ್ಮೊಳಗೆ ಆರೋಗ್ಯಪೂರ್ಣ ಸ್ಪರ್ಧೆ ಇತ್ತು ಎಂದರು. ಶ್ರೀನಿವಾಸ್ ಅವರ ಕಾರ್ಯದಕ್ಷತೆ ಎಲ್ಲರಿಗೆ ಮಾದರಿಯಾಗಿದೆ ಎಂದು ಹೇಳಿದರು.

ಮಾನವೀಯತೆ ಮೈಗೂಡಿಸಿಕೊಂಡಿದ್ದರು-ಡಾ.ಪ್ರಸನ್ನ ಹೆಬ್ಬಾರ್
ಪಶು ವೈದ್ಯಾಧಿಕಾರಿ ಡಾ.ಪ್ರಸನ್ನ ಹೆಬ್ಬಾರ್ ಮಾತನಾಡಿ ಶ್ರೀನಿವಾಸ್ ಎಚ್.ಬಿ ಅವರು ಶಾಲೆಯ ಅಭಿವೃದ್ಧಿ ಮಾಡುವುದರ ಜೊತೆಗೆ ಓರ್ವ ಮಾನವೀಯತೆಯುಳ್ಳ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಸರ್ವೆ, ಭಕ್ತಕೋಡಿಯನ್ನು ಕರ್ಮ ಭೂಮಿಯನ್ನಾಗಿಸಿದ ಅವರು ಎಲ್ಲರೊಳಗೆ ಒಂದಾಗಿದ್ದಾರೆ, ಎಲ್ಲರನ್ನು ಪ್ರೀತಿಸುವ ಇವರು ಮಾದರಿ ಶಿಕ್ಷಕ ಎನ್ನುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು. ನೀವು ವೃತ್ತಿಯಿಂದ ನಿವೃತ್ತರಾದರೂ ಮಾರ್ಗದರ್ಶಕರಾಗಿ ಈ ಊರಿಗೆ ಸೇವೆ ನೀಡಬೇಕು ಎಂದು ಅವರು ಹೇಳಿದರು.

ಮಾತಿನಿಂದಲೇ ಎಲ್ಲರನ್ನು ಗೆದ್ದಿದ್ದಾರೆ-ಸುರೇಶ್
ಶಿಕ್ಷಕ ಸುರೇಶ್ ಮಾತನಾಡಿ ಶ್ರೀನಿವಾಸ್ ಅವರು ತನ್ನ ಮಾತಿನಿಂದಲೇ ಎಲ್ಲರನ್ನು ಗೆದ್ದಿದ್ದಾರೆ, ಎಲ್ಲರನ್ನು ಸೇರಿಸಿಕೊಂಡು ಸಂಪನ್ಮೂಲ ಕ್ರೋಢೀಕರಿಸಿ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ, ಇವರೋರ್ವ ಅದ್ಭುತ ಮತ್ತು ಮಾದರಿ ಶಿಕ್ಷಕ ಎಂದು ಹೇಳಿದರು.

ಶ್ರೀನಿವಾಸ್ ಎಚ್.ಬಿ ಪರಿಪೂರ್ಣ ಶಿಕ್ಷಕ-ಡಾ.ಪ್ರವೀಣ್ ಎಸ್.ಡಿ
ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ.ಪ್ರವೀಣ್ ಎಸ್.ಡಿ ಮಾತನಾಡಿ ಶಾಲಾ ದಿನಗಳಲ್ಲಿ ಬೆಳಿಗ್ಗೆ ೮ ಗಂಟೆಗೆ ಶಾಲೆಗೆ ಎಂಟ್ರಿ ಕೊಡುತ್ತಿದ್ದ ಶ್ರೀನಿವಾಸ್ ಎಚ್.ಬಿ ಅವರು ಶಾಲೆಯ ಅಭಿವೃದ್ಧಿಗೆ ಸತತ ಪ್ರಯತ್ನಪಡುತ್ತಿದ್ದರು, ತನ್ನ ವಿಶಿಷ್ಟ ಗುಣ ನಡತೆ ಮೂಲಕ ಎಲ್ಲರ ಮನ ಗೆದ್ದಿದ್ದರು, ಅವರ ಶಿಷ್ಯ ವರ್ಗ ಇಂದು ದೇಶ ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಓರ್ವಧ ಪರಿಪೂರ್ಣ ಶಿಕ್ಷಕರಾಗಿದ್ದ ಶ್ರೀನಿವಾಸ್ ಅವರು ಸಾರ್ಥಕ ಭಾವದೊಂದಿಗೆ ನಿವೃತ್ತಿಯಾಗುತ್ತಿದ್ದಾರೆ, ಅವರ ನಡೆ, ನುಡಿ ನಮಗೆಲ್ಲಾ ಆದರ್ಶವಾಗಿದೆ ಎಂದು ಹೇಳಿದರು.

ಶ್ರೀನಿವಾಸ್ ಎಚ್.ಬಿ ನಿವೃತ್ತಿ ಸಂಚಲನ ಮೂಡಿಸುತ್ತಿದೆ-ವಸಂತ ವೀರಮಂಗಲ
ಹಿರಿಯ ವಿದ್ಯಾರ್ಥಿ ವಸಂತ ವೀರಮಂಗಲ ಮಾತನಾಡಿ ಶಿಕ್ಷಕರ ನಿವೃತ್ತಿ ಸಹಜ, ಆದರೆ ಶ್ರೀನಿವಾಸ್ ಎಚ್.ಬಿ ಅವರ ನಿವೃತ್ತಿ ಯಾಕಿಷ್ಟು ಸಂಚಲನ ಮೂಡಿಸುತ್ತಿದೆ ಎಂಬುವುದನ್ನು ಅವಲೋಕಿಸಿದಾಗ ಅವರ ಬೃಹತ್ ಸಾಧನೆಯೇ ಇದಕ್ಕೆ ಕಾರಣ ಎಂಬುವುದು ತಿಳಿಯುತ್ತದೆ ಎಂದು ಹೇಳಿದರು. ವೈಯಕ್ತಿಕವಾಗಿ ನನ್ನ ಜೀವನ ವಿಧಾನವನ್ನೂ ಬದಲಾಯಿಸಿದ ಶ್ರೇಯಸ್ಸು ಶ್ರೀನಿವಾಸ್ ಅವರಿಗೆ ಸಲ್ಲುತ್ತದೆ ಎಂದ ಅವರು ನೀವು ಶಿಕ್ಷಕ ವೃತ್ತಿಗೆ ನಿವೃತ್ತಿಯಾಗುತ್ತಿದ್ದರೂ ನಿಮ್ಮ ಸೇವೆಗೆ ವಿವಿಧ ಕ್ಷೇತ್ರಗಳು ಕಾಯುತ್ತಿದೆ ಎಂದು ಹೇಳಿದರು.

ಗಮನ ಸೆಳೆಯಿತು ತುಳು ಕವನ…
ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ವ್ಯವಸ್ಥಾಪಕರು, ಎಸ್.ಜಿ.ಎಂ ಪ್ರೌಢ ಶಾಲೆಯ ಪ್ರಮುಖ ದಾನಿಗಳೂ ಆಗಿರುವ ಡಾ.ಸೀತಾರಾಮ ಭಟ್ ಕಲ್ಲಮ ಅವರು ಶ್ರೀನಿವಾಸ್ ಎಚ್.ಬಿ ಅವರ ಕುರಿತಾಗಿ ವಾಚಿಸಿದ ತುಳು ಕವನವೊಂದು ಸಭೆಯ ಗಮನ ಸೆಳೆಯಿತು. ಹಾಸ್ಯ ಮಿಶ್ರಿತ ಭಾಷಣ ಮತ್ತು ಕವನದ ಮೂಲಕ ಅವರು ಸಭಿಕರನ್ನು ಮನರಂಜಿಸಿದರು.

ಶಾಲಾರ್ಪಣೆ-ಕೊಡುಗೆ ನೀಡಿದವರಿಗೆ ಸನ್ಮಾನ:
ಕಾಮಗಾರಿ ಪೂರ್ಣಗೊಂಡಿದ್ದ ಹಲವು ಕೊಡುಗೆಗಳನ್ನು ಶಲಾರ್ಪಣೆ ಮಾಡಲಾಯಿತು. ಶಾಲೆಗೆ ಕೊಡುಗೆ ನೀಡಿರುವ ಡಾ.ಸೀತಾರಾಮ ಭಟ್ ಕಲ್ಲಮ, ಪಿ.ಜಿ ಜಗನ್ನಿವಾಸ್ ರಾವ್, ಶಿಕ್ಷಕಿ ಜಯಶ್ರೀ ಹಾಗೂ ಮೋಹನ್ ಸಾಲ್ಯಾನ್ ಪರವಾಗಿ ಡಾ.ಪ್ರವೀಣ್ ಎಸ್.ಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಆಯಿಷತ್ ಶಮಾಗೆ ಸನ್ಮಾನ:
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ತಾಲೂಕಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಪೈಕಿ ತಾಲೂಕಿಗೆ ದ್ವೀತೀಯ ಸ್ಥಾನಿಯಾದ ಭಕ್ತಕೋಡಿಯ ಆಯಿಶತ್ ಶಮಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ಮರಣಿಕೆ ಮತ್ತು ನಗದನ್ನು ಅವರಿಗೆ ವಿತರಿಸಲಾಯಿತು. ಅದೇ ರೀತಿ ಸಾಧನೆ ಮಾಡಿದ ಶಾಲೆಯ ಇತರ ಹಿರಿಯ ವಿದ್ಯಾರ್ಥಿಗಳನ್ನೂ ಗುರುತಿಸಿ ಗೌರವಿಸಲಾಯಿತು.

ಸಭೆಯಲ್ಲಿ ಮುಂಡೂರು ಗ್ರಾ.ಪಂ ಮಾಜಿ ಸದಸ್ಯ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಬ್ಯಾಂಕ್ ಆಫ್ ಬರೋಡಾ ಬೆಟ್ಟಂಪಾಡಿ ಶಾಖೆಯ ರಾಮಣ್ಣ ಪೂಜಾರಿ ಭಕ್ತಕೋಡಿ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು, ಧರ್ಮಸ್ಥಳ ಗ್ರಾ.ಯೋ.ಸವಣೂರು ವಲಯದ ಮಾಜಿ ಅಧ್ಯಕ್ಷ ಜಯರಾಜ್ ಸುವರ್ಣ ಸೊರಕೆ, ಧರ್ಮಸ್ಥಳ ಗ್ರಾ.ಯೋ.ಸರ್ವೆ ಬಿ ಒಕ್ಕೂಟದ ಅಧ್ಯಕ್ಷ ಅಶೋಕ್ ಎಸ್.ಡಿ, ಭಕ್ತಕೋಡಿ ಸ.ಹಿ.ಪ್ರಾ.ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎಸ್.ಡಿ, ಸರ್ವೆ ಷಣ್ಮುಖ ಯುವಕ ಮಂಡಲದ ಪ್ರ.ಕಾರ್ಯದರ್ಶಿ ಗೌತಮ್‌ರಾಜ್ ಕರುಂಬಾರು ಹಾಗೂ ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಶಿಕ್ಷಕಿ ಜಯಶ್ರೀ ಅವರು ವರದಿ ವಾಚಿಸಿದರು. ಶಿಕ್ಷಕ ಮೋಹನ್ ಕುಮಾರ್ ಗೌರವಾರ್ಪಣೆ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರಿನಿಂದ ಭಕ್ತಕೋಡಿವರೆಗೆ ವಾಹನ ರ್‍ಯಾಲಿ:
ಶ್ರೀನಿವಾಸ್ ಎಚ್.ಬಿ ಅವರ ಬೊಳ್ವಾರುವಿನಲ್ಲಿರುವ ಮನೆಗೆ ಬೆಳ್ಳಂಬೆಳಗ್ಗೆ ಭೇಟಿ ನೀಡಿದ ಹಿರಿಯ ವಿದ್ಯಾರ್ಥಿಗಳು ಶ್ರೀನಿವಾಸ್ ಎಚ್.ಬಿ, ಜಯಶ್ರೀ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು. ಬಳಿಕ ಅವರನ್ನು ತಮ್ಮ ಕಾರಿನಲ್ಲಿ ಸರ್ವೆ ಭಕ್ತಕೋಡಿ ಶಾಲೆಯ ವರೆಗೆ ಕರೆ ತಂದರು. ಸುಮಾರು ಹತ್ತರಷ್ಟು ಕಾರಿನಲ್ಲಿ ಒಂದು ರೀತಿಯ ವಾಹನ ರ್‍ಯಾಲಿ ರೀತಿಯಲ್ಲಿ ಶ್ರೀನಿವಾಸ್‌ರವರನ್ನು ಶಾಲೆಗೆ ಕರೆದುಕೊಂಡು ಬಂದು ಗೌರವಿಸಿದರು. ಮಾರ್ಗಮಧ್ಯೆ ಪುರುಷರಕಟ್ಟೆ ಎಂಬಲ್ಲಿ ರಾಮಣ್ಣ ಪೂಜಾರಿ ಭಕ್ತಕೋಡಿ ಅವರು ಕಾರು ನಿಲ್ಲಿಸಿ ಶ್ರೀನಿವಾಸ್ ಅವರಿಗೆ ಹಾರಾರ್ಪಣೆ ಮಾಡಿದ್ದು ಗಮನ ಸೆಳೆಯುವಂತಿತ್ತು. ಹಿರಿಯ ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಕರುಂಬಾರು, ಕಮಲೇಶ್ ಎಸ್.ವಿ, ರಾಜೇಶ್ ಎಸ್.ಡಿ, ಸುರೇಶ್ ಎಸ್.ಡಿ, ಡಾ.ಪ್ರವೀಣ್ ಎಸ್.ಡಿ, ಜಯರಾಜ್ ಸುವರ್ಣ, ಅಶೋಕ್ ಎಸ್.ಡಿ, ಗೌತಮ್‌ರಾಜ್ ಕರುಂಬಾರು, ತಿಲಕ್‌ರಾಜ್ ಕರುಂಬಾರು, ಕೀರ್ತನ್ ಎಸ್.ಡಿ, ಮನೋಜ್ ಸುವರ್ಣ ಸೊರಕೆ, ಲಕ್ಷ್ಮಣ ಆಚಾರ್ಯ, ನಾಗೇಶ್ ಪಟ್ಟೆಮಜಲು, ಗೌತಮ್ ಪಟ್ಟೆಮಜಲು, ಗುರುರಾಜ್ ಪಟ್ಟೆಮಜಲು ಅವರು ಸನ್ಮಾನಿಸಿ ಕರೆತರುವ ತಂಡದಲ್ಲಿದ್ದರು.

ಶಾಲೆಗಾಗಿ ಭಿಕ್ಷೆ ಎತ್ತಿದ್ದೇವೆ, ಹೆಮ್ಮೆಯಿದೆ-ಶ್ರೀನಿವಾಸ್ ಎಚ್.ಬಿ
ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿದ ಶ್ರೀನಿವಾಸ್ ಎಚ್.ಬಿ ಮಾತನಾಡಿ ಎಲ್ಲರನ್ನು ಸೇರಿಸಿಕೊಂಡು ಶಾಲೆಯನ್ನು ಅಭಿವೃದ್ಧಿಪಡಿಸಿದ ಸಂತೃಪ್ತಿ ನನಗಿದೆ. ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಊರವರು, ಹಿರಿಯ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಗ್ರಾಮಸ್ಥರು, ದಾನಿಗಳು, ಯುವಕ ಮಂಡಲದವರು ನೆರವು ನೀಡಿದ್ದಾರೆ, ಎಲ್ಲರ ನೆರವು, ಸಹಕಾರವನ್ನು ಕ್ರೋಢೀಕರಿಸಿಕೊಂಡು ಶಾಲೆಯನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಲಾಗಿದೆ ಎಂದು ಹೇಳಿದರು. ದಿ.ವಿಜಯಕುಮಾರ್ ಅವರು ನನಗೆ ಈ ಶಾಲೆಯಲ್ಲಿ ವೃತ್ತಿ ಕೊಡುವ ಮೂಲಕ ಅನ್ನ ನೀಡಿದ್ದಾರೆ, ಶಾಲಾ ಪ್ರಾರಂಭದಲ್ಲಿ ನಾವು ಶಾಲೆಯ ಅಭಿವೃದ್ಧಿಗಾಗಿ, ಉಳಿವಿಗಾಗಿ ಮನೆ ಮನೆಗೆ ಹೋಗಿ ಕಲೆಕ್ಷನ್ ಮಾಡಿದ್ದೆವು, ಆ ಸಂದರ್ಭದಲ್ಲಿ ನಮ್ಮನ್ನು ಭಿಕ್ಷೆ ಬೇಡುತ್ತಿದ್ದೀರಾ ಎಂದು ಕೆಲವು ಜನರು ಹೀಯಾಳಿಸಿದ್ದರು, ಆದರೆ ಅದೇ ಶಾಲೆ ಇಂದು ಸಾವಿರಾರು ಮಕ್ಕಳ ಭವಿಷ್ಯವನ್ನು ಅರಳಿಸಿದೆ ಎಂದು ಹಿಂದಿನ ನೆನಪನ್ನು ಮೆಲುಕು ಹಾಕಿದರು. ನಿವೃತ್ತಿ ಅನಿವಾರ್ಯ, ಆದರೆ ಹೃದಯ ಭಾರವಾಗುತ್ತಿದೆ ಎಂದು ಶ್ರೀನಿವಾಸ್ ಎಚ್.ಬಿ ಅವರು ಊರವರ ಪ್ರೀತಿ, ಸಹಕಾರ ನನಗೆ ಸಿಕ್ಕಿದೆ, ಮುಖ್ಯವಾಗಿ ಹಿರಿಯ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಆಡಳಿತ ಮಂಡಳಿಯವರ, ಪೋಷಕರ ಸಹಕಾರವೂ ಉತ್ತಮವಾಗಿ ಲಭಿಸಿದೆ ಎಂದರು. ಫಲಿತಾಂಶದಲ್ಲೂ ನಮ್ಮ ಶಾಲೆ ಸಾಧನೆ ಮಾಡಿದೆ. ಒಟ್ಟು ಶಾಲೆಯ ಅಭಿವೃದ್ಧಿ ಕಂಡು ಮಾಧ್ಯಮದವರೂ ವರದಿ ಮಾಡಿದ್ದಾರೆ. ನಿವೃತ್ತಿ ಸ್ವಲ್ಪ ಕಠಿಣವಾದರೂ ಸಂತಸದಿಂದ ನಿವೃತ್ತಿಯಾಗುತ್ತಿದ್ದೇನೆ, ನಿಮ್ಮೆಲ್ಲರ ಈ ಪ್ರೀತಿ ಅಭಿಮಾನ ಮುಂದಕ್ಕೂ ಇರಲಿ, ನಾನೆಂದೂ ನಿಮ್ಮವನಾಗಿಯೇ ಇರುತ್ತೇನೆ ಎಂದು ಹೇಳಿದರು.

ಭಾವೋದ್ವೇಗದೊಂದಿಗೆ ಬೀಳ್ಕೊಟ್ಟ ಗ್ರಾಮಸ್ಥರು:
ಶ್ರೀನಿವಾಸ್ ಎಚ್.ಬಿ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ಫಲಪುಷ್ಪ ನೀಡಿ, ಪೇಟ ತೊಡಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ಗ್ರಾಮಸ್ಥರು ಶ್ರೀನಿವಾಸ್ ಎಚ್.ಬಿ ಅವರು ಶಾಲೆಗಾಗಿ ಮಾಡಿರುವ ತ್ಯಾಗ, ಪರಿಶ್ರಮದ ಬಗ್ಗೆ ಮೆಲುಕು ಹಾಕಿದರು. ಶ್ರೀನಿವಾಸ್ ಎಚ್.ಬಿ ಅವರಂತ ಶಿಕ್ಷಕ ಅಪರೂಪದ ವ್ಯಕ್ತಿತ್ವ ಹೊಂದಿರುವ ಶಿಕ್ಷಕ ವಿರಳ ಎಂದು ಕೆಲವರು ಬಣ್ಣಿಸಿದರು. ಇವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹಲವರು ಹೇಳಿದರು. ಶಿಕ್ಷಕರ ನಿವೃತ್ತಿ ಸಹಜ, ಆದರೆ ಶ್ರೀನಿವಾಸ್ ಎಚ್.ಬಿ ಅವರ ನಿವೃತ್ತಿಯೇಕೆ ಇಷ್ಟು ಸದ್ದು ಮಾಡುತ್ತಿದೆ ಎಂದು ಆಶ್ಚರ್ಯಚಕಿತರಾದರು. ಕೆಲವರು ಕೆಲವರು ಭಾವೋದ್ವೇಗರಾದರೆ ಮತ್ತೆ ಕೆಲವರು ನೀವು ಮುಂದೆಯೂ ನಮ್ಮ ಗ್ರಾಮಕ್ಕೆ, ಶಾಲೆಗೆ ಬರುತ್ತಿರಬೇಕು, ಸರಕಾರದ ನಿಯಮಾವಳಿ ಪ್ರಕಾರ ನಿಮಗೆ ನಿವೃತ್ತಿಯಾಗಿದೆಯೇ ವಿನಃ ನಮ್ಮ ಮನಸ್ಸಿನಲ್ಲಿ ಸ್ಥಾನ ಪಡೆದಿರುವ ನಿಮಗೆ ನಿವೃತ್ತಿಯೆಂಬುವುದಿಲ್ಲ ಎಂದು ಬಣ್ಣಿಸಿದರು. ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಕೊಡುವುದಾದರೆ ಶ್ರೀನಿವಾಸ್‌ರವರಿಗೆ ಕೊಡಬೇಕೆಂದು ಕೆಲವರು ಆಗ್ರಹಿಸಿದರು. ಒಟ್ಟಿನಲ್ಲಿ ಶಿಕ್ಷಕ ಕ್ಷೇತ್ರದ ಜನಮೆಚ್ಚಿನ ಶಿಕ್ಷಕ ಎನ್ನುವ ಖ್ಯಾತಿಯನ್ನು ಗಳಿಸಿರುವ ಶ್ರೀನಿವಾಸ್ ಎಚ್.ಬಿ ಅವರ ನಿವೃತ್ತಿಗೆ ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಭಾರವಾದ ಹೃದಯದೊಂದಿಗೆ ಶುಭ ಹಾರೈಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.