HomePage_Banner
HomePage_Banner
HomePage_Banner

ಪುತ್ತೂರು ನಗರಸಭೆ ಅಧ್ಯಕ್ಷರಾಗಿ ಜೀವಂಧರ್ ಜೈನ್, ಉಪಾಧ್ಯಕ್ಷರಾಗಿ ವಿದ್ಯಾ ಆರ್ ಗೌರಿ ಆಯ್ಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ನಗರ ಸಭೆಯ ಅಧ್ಯಕ್ಷರಾಗಿ ಜೀವಂಧರ್ ಜೈನ್ ಮತ್ತು ಉಪಾಧ್ಯಕ್ಷರಾಗಿ ವಿದ್ಯಾ ಆರ್ ಗೌರಿ ಆಯ್ಕೆಗೊಂಡಿದ್ದಾರೆ.‌ 2 ವರುಷ 2 ತಿಂಗಳ ಬಳಿಕ ಬಹು ನಿರೀಕ್ಷಿತ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನ.2 ರಂದು ನಗರಸಭೆ ಸಭಾಂಗಣದಲ್ಲಿ ಚುನಾವಣಾಧಿಕಾರಿ ಡಾ.ಯತೀಶ್ ಉಳ್ಳಾಲ್ ಅವರ ನೇತ್ರತ್ವದಲ್ಲಿ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸದಸ್ಯ ಜೀವಂಧರ್ ಜೈನ್ ಮತ್ತು ಕಾಂಗ್ರೆಸ್ ನಿಂದ ರಾಬಿನ್ ತಾವ್ರೊ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ವಿದ್ಯಾ ಗೌರಿ ಮಾತ್ರ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಜೀವಂಧರ್ ಜೈನ್ ಅವರು 27 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ‌.

ಜೀವಂಧರ್ ಜೈನ್ ಪರಿಚಯ: ಪಡ್ನೂರು ನೆಲಪ್ಪಾಲು ಯುವರಾಜ ಮತ್ತು ಲೀಲಾವತಿ ಹೆಗ್ಡೆ ದಂಪತಿಯ ಪುತ್ರರಾದ ಜೀವಂಧರ ಜೈನ್‌ರವರು ಮಂಜಲ್ಪಡ್ಪು ಬಿ.ಇ.ಎಂ. ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಕೊಂಬೆಟ್ಟು ಜೂನಿಯರ್ ಕಾಲೇಜ್‌ನಲ್ಲಿ ಪಿಯುಸಿ ವಿದ್ಯಾಭ್ಯಾಸ ಪೂರೈಸಿದವರು. ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿರುವ ಇವರು ಬಿಜೆಪಿ ಯುವಮೋರ್ಛಾ ಅಧ್ಯಕ್ಷರಾಗಿ, ನಗರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ, ಪ್ರಥಮ ಬಾರಿ ಪಡ್ಡಾಯೂರು ವಾರ್ಡ್‌ನಿಂದ ಪುರಸಭೆ ಸದಸ್ಯರಾಗಿ, ನಂತರ ನಿರಂತರವಾಗಿ ಮಂಜಲ್ಪಡ್ಪು, ಕೊಂಬೆಟ್ಟು ವಾರ್ಡ್‌ನಿಂದ 3 ಬಾರಿ ಪುರಸಬೆಗೆ ಆಯ್ಕೆಯಾಗಿ 2018ರ ನಗರಸಭಾ ಚುನಾವಣೆಯಲ್ಲಿ ಪಡ್ಡಾಯೂರು ವಾರ್ಡ್‌ನಿಂದ ನಗರಸಭೆಗೆ ಆಯ್ಕೆಯಾದ ಜೀವಂಧರ ಜೈನ್‌ರವರು ಪುರಸಭೆಯಲ್ಲಿ 4ಬಾರಿ ಉಪಾಧ್ಯಕ್ಷರಾಗಿ, 6 ಬಾರಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ, ಪುತ್ತೂರು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದಾಗ ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕಲ್ಲೇಗ ಕಲ್ಕುಡ ದೈವಸ್ಥಾನದ ಮೊಕ್ತೇಸರರಾಗಿ, ಕಲ್ಲೇಗ ಪುಣ್ಯಕುಮಾರ ದೈವಸ್ಥಾನದ ಅಧ್ಯಕ್ಷರಾಗಿ, ನೆಲಪ್ಪಾಲು ರುದ್ರಾಂಡಿ ನೇತ್ರಾಂಡಿ ದೈವಸ್ಥಾನದ ಗೌರವಾಧ್ಯಕ್ಷರಾಗಿ ಸೀಟಿಗುಡ್ಡೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಗೌರವಾಧ್ಯಕ್ಷರಾಗಿ, ಕಲ್ಲೇಗ ಶ್ರೀ ದೇವಿ ಭಜನಾ ಮಂದಿರದ ಅಧ್ಯಕ್ಷರಾಗಿ, ಕಲ್ಲೇಗ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಪೂಜಾ ಸಮಿತಿಯ ಸಕ್ರಿಯ ಸದಸ್ಯರಾಗಿ, ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂದಿರದ ಗೌರವಾಧ್ಯಕ್ಷರಾಗಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯರಾಗಿ, ಬಿ.ಇ.ಎಂ. ಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ, ಜೂನಿಯರ್ ಕಾಲೇಜ್‌ನ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ, ಕಲ್ಲೇಗ ಶಿವಾಜಿ ಯುವಕ ಮಂಡಲದ ಗೌರವಾಧ್ಯಕ್ಷರಾಗಿ, ಅಜೇಯನಗರ ನೇತಾಜಿ ಯುವಕ ಮಂಡಲ ಮತ್ತು ಪಡ್ಡಾಯೂರು ರುದ್ರನೇತ್ರ ಯುವಕ ಮಂಡಲದ ಗೌರವಾಧ್ಯಕ್ಷರಾಗಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಜೀವಂಧರ ಜೈನ್‌ರವರು ಇದೀಗ ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ವಿದ್ಯಾ ಆರ್.ಗೌರಿ ಪರಿಚಯ: ವಿಜಯ ಸುಪಾರಿ ಮಾಲಕರಾದ ಪತ್ತಡ್ಕ ರಾಮ ಭಟ್‌ರವರ ಪತ್ನಿಯಾಗಿರುವ ವಿದ್ಯಾ ಆರ್. ಗೌರಿರವರು ಮೈಸೂರು ಯುನಿವರ್ಸಿಟಿಯಲ್ಲಿ ಬಿ.ಕಾಂ. ಮತ್ತು ಸಿಕ್ಕಿಂ ಮಣಿಪಾಲ್ ಯುನಿವರ್ಸಿಟಿಯಲ್ಲಿ ಎಂ.ಬಿ.ಎ. ಪದವಿ ಪಡೆದವರು. ಮಹಿಳಾ ಮೋರ್ಛಾದ ನಗರ ಅಧ್ಯಕ್ಷರಾಗಿ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷರಾಗಿ, ಹಾಲಿ ನಿರ್ದೇಶಕರಾಗಿ, ನಗರ ಮಂಡಲ ಬಿಜೆಪಿಯ ಉಪಾಧ್ಯಕ್ಷರಾಗಿ, ಶಕ್ತಿ ಕೇಂದ್ರದ ಪ್ರಮುಖರಾಗಿ, ಸ್ಕೌಟ್ ಗೈಡ್‌ನ ತಾಲೂಕು ಕಾರ್ಯದರ್ಶಿಯಾಗಿ, ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಇಡ್ಕಿದು ಮತ್ತು ಕುಳ ಗ್ರಾ.ಪಂ. ವ್ಯಾಪ್ತಿಯ ಬಿಜೆಪಿಯ ಪ್ರಭಾರಿಯಾಗಿ ಸೇರಿದಂತೆ ವಿವಿಧ ಸಮಾಜಮುಖಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ವಿದ್ಯಾ ಆರ್ ಗೌರಿಯವರು ಪ್ರಸ್ತುತ ನಗರಸಭೆಯ ಕಸಬಾ 10ರ ಸದಸ್ಯರಾಗಿದ್ದು ಇದೀಗ ನಗರಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.