HomePage_Banner
HomePage_Banner

ಪುತ್ತೂರು, ಬನ್ನೂರು, ಮರೀಲ್, ಉಪ್ಪಿನಂಗಡಿ ಚರ್ಚ್ ಸಿಮೆತರಿಯಲ್ಲಿ ಮೃತರ ಸ್ಮರಣಾರ್ಥ ಸಕಲ ಆತ್ಮಗಳ ಸ್ಮರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ನವೆಂಬರ್ ಎರಡರಂದು ಕ್ರೈಸ್ತ ವಿಶ್ವಾಸಿಗಳು ತಮ್ಮನ್ನಗಲಿದ ನೆಚ್ಚಿನ ತಂದೆ-ತಾಯಿ, ಸಹೋದರ-ಸಹೋದರಿಯರ, ಹಿತೈಷಿಗಳ, ಬಂಧುಮಿತ್ರರ ಆತ್ಮಕ್ಕೆ ಚಿರಶಾಂತಿಯನ್ನು ದೇವರು ಕರುಣಿಸುವಂತಾಗಲು ಹೂತಿಟ್ಟ ಸಮಾಧಿ(ಸಿಮೆತರಿ)ಯಲ್ಲಿ ಅಗಲಿದವರಿಗೆ ವರ್ಷಂಪ್ರತಿ ಅರ್ಪಿಸುವ ಮೃತರ ಸ್ಮರಣಾರ್ಥ ಸಕಲ ಆತ್ಮಗಳ ಸ್ಮರಣೆಯ ಹಿನ್ನೆಲೆಯಲ್ಲಿ ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನ ಸಿಮೆತರಿಯಾಗಿರುವ ಏಳ್ಮುಡಿ ಸಿಮೆತರಿ, ಬನ್ನೂರು ಸಂತ ಅಂತೋನಿ ಚರ್ಚ್‌ನ ಆನೆಮಜಲು ಸಿಮೆತರಿ ಮತ್ತು ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನ ಸಿಮೆತರಿ, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಸಿಮೆತರಿಯಲ್ಲಿ ಸಂಜೆ ಬಲಿಪೂಜೆಯನ್ನು ಏರ್ಪಡಿಸಲಾಗಿತ್ತು.

ಮಾಯಿದೆ ದೇವುಸ್ ಚರ್ಚ್‌ನ ಏಳ್ಮುಡಿ ಸಿಮೆತರಿಯ ದೇವಾಲಯದಲ್ಲಿ ನಡೆದ ಬಲಿಪೂಜೆಯಲ್ಲಿ ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋ, ವಂ|ಸುನಿಲ್ ಜಾರ್ಜ್ ಡಿ’ಸೋಜರವರು ಬೈಬಲ್ ವಾಚಿಸಿ ಸಂದೇಶ ನುಡಿಯುತ್ತಾ, ಮರಣ ಎಂಬುದು ಯಾವಾಗ ಬಂದು ಅಪ್ಪಳಿಸುತ್ತದೋ ಅದು ಸೃಷ್ಟಿಕರ್ತನಿಗೆ ಮಾತ್ರ ತಿಳಿದಿದೆ. ಹುಟ್ಟಿದ ಮೇಲೆ ಮನುಷ್ಯ ಸ್ವಾವಲಂಭಿಯಾಗಿ, ಮತ್ತೊಬ್ಬರ ಕಷ್ಟಗಳನ್ನು ಅರಿಯುವಸಾಕ್ತರಾಗಿ, ಪರಸ್ಪರ ವಿಶ್ವಾಸ ಹಾಗೂ ಪ್ರೀತಿಯಿಂದ ಬದುಕಿದಾಗ ಒಳ್ಳೆಯ ಮರಣ ಲಭಿಸುತ್ತದೆ. ನಮ್ಮ ಪ್ರೀತಿ ಪಾತ್ರರಾದವರು ಮರಣ ಹೊಂದಿದಾಗ ದುಃಖ ಆಗುವುದು ಮಾನವನ ಸಹಜ ಪ್ರಕ್ರಿಯೆ. ಭೂಲೋಕದಲ್ಲಿ ನಮ್ಮ ಜೀವಿತಾವಧಿ ಮುಗಿದೊಡನೆ ಮತ್ತೊಂದು ಲೋಕಕ್ಕೆ ನಮ್ಮ ಪಯಣ ಮತ್ತು ಆ ಲೋಕದಲ್ಲೂ ಉತ್ತಮ ಜೀವನ ನಮಗೋಸ್ಕರ ಕಾದಿದೆ ಎಂಬುದು ನಮ್ಮ ಭಾವನೆಯಾಗಿದೆ ಎಂದರು.

ಬನ್ನೂರು ಸಂತ ಅಂತೋನಿ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್ ಹಾಗೂ ಸಹಾಯಕ ಧರ್ಮಗುರು ವಂ|ಪ್ರೇಮ್ ಡಿ’ಸೋಜರವರು ಬೈಬಲ್ ವಾಚಿಸಿ ಸಂದೇಶ ನುಡಿಯುತ್ತಾ, ಕ್ರೈಸ್ತ ಪವಿತ್ರ ಸಭೆಯು ತಮ್ಮ ನೆಚ್ಚಿನ ಹಿರಿಯರ ಹಾಗೂ ಪ್ರೀತಿಗೆ ಪಾತ್ರರಾದ ಅಗಲಿದ ಚೇತನಗಳ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲು ಒಟ್ಟಾಗಿ ಪ್ರಾರ್ಥನೆ ಸಲ್ಲಿಸಲು ಒಂದು ಅಮೂಲ್ಯ ಅವಕಾಶವನ್ನು ಕಲ್ಪಿಸಿದೆ. ಪ್ರಭು ಯೇಸುಕ್ರಿಸ್ತರೇ ಹೇಳಿದಂತೆ ಯಾರು ಭೂಮಿಯಲ್ಲಿ ಪರೋಪಕಾರಿಯಾಗಿ, ಮತ್ತೊಬ್ಬರ ಮನಸ್ಸನ್ನು ನೋಯಿಸದ ರೀತಿಯಲ್ಲಿ ಜೀವನ ನಡೆಸಿದವನು ತನ್ನ ಜೀವಿತದ ಬಳಿಕ ತನ್ನ ಬಲಬದಿಗೆ ಮತ್ತು ಯಾರು ಇತರರ ಮನಸ್ಸನ್ನು ನೋಯಿಸಿ, ಸ್ವಾರ್ಥತೆಯಿಂದ ಜೀವನ ನಡೆಸಿದವನು ತನ್ನ ಎಡಬದಿಗೆ ತನ್ನ ಸತ್ಯದ ಅರಮನೆಯಲ್ಲಿ ಜೀವಿಸಲು ಅರ್ಹನು. ಆದ್ದರಿಂದ ಮಾನವ ತನ್ನ ಪಾಪದ ಹೊರೆ ಎಷ್ಟರಮಟ್ಟಿಗೆ ಭೂಮಿಯಲ್ಲಿ ಜೀವಿಸಿದ ಸಂದರ್ಭ ಮಾಡಿದ್ದಾನೆ ಎಂಬುದನ್ನು ಮಾನವ ಅರಿತರೆ ಸಾಕು ಎಂದು ಪ್ರಭು ಯೇಸುಕ್ರಿಸ್ತರು ತನ್ನ ಸಂದೇಶದಲ್ಲಿ ಹೇಳಿದ್ದಾರೆ ಎಂದರು.

ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್‌ರವರು ಬೈಬಲ್ ವಾಚಿಸಿ, ದೇವರು ಸೃಷ್ಟಿಸಿದ ಹಲವಾರು ಅಚ್ಚರಿಗಳು ನಮ್ಮಲ್ಲಿ ವಿಸ್ಮಯವನ್ನು ಉಂಟು ಮಾಡುತ್ತದೆ. ಅದೇ ದೇವರು ನಮ್ಮ ಹೃದಯವನ್ನು ಪ್ರವೇಶಿಸಿದಾಗ ನಮ್ಮ ಜೀವನದಲ್ಲಿ ಅದ್ಭುತವಾದ ಪರಿವರ್ತನೆಗಳನ್ನು ಕಾಣಲು ಸಾಧ್ಯವಾಗುತ್ತದೆ. ಅದರಂತೆ ಯೇಸುಕ್ರಿಸ್ತರ ಪುನರುತ್ಥಾನವಾದಂತೆ ನಾವೂ ಕೂಡ ಒಂದು ದಿನ ಪುನರುತ್ಥಾನ ಕಾಣುವೆವು ಎಂಬ ನಂಬಿಕೆಯ ಭರವಸೆಯೊಂದಿಗೆ ಕ್ರೈಸ್ತ ವಿಶ್ವಾಸಿಗಳು ಜೀವನ ಸಾಗಿಸಬೇಕು. ಹುಟ್ಟು ಆಕಸ್ಮಿಕ ಆದರೆ ಸಾವು ನಿಶ್ಚಿತ ಎಂಬಂತೆ ಮನುಷ್ಯ ಭೂಮಿಗೆ ಬಂದಾಗಿನಿಂದ ಅನುಭವಿಸುವ ಸುಖ-ದುಃಖ, ಪುರಸ್ಕಾರ-ಪುನಸ್ಕಾರಗಳು ಸಾವನ್ನು ಕಂಡುಕೊಳ್ಳುವ ತನಕ ಮಾತ್ರ. ಆದರೆ ಈ ಹುಟ್ಟು-ಸಾವಿನ ಮಧ್ಯೆ ನಾವು ಮಾಡುವ ಕಾರ್ಯಗಳು ಮಾತ್ರ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಹುಟ್ಟಿದ ಮೇಲೆ ಈ ಜಗತ್ತನ್ನು ಬಿಟ್ಟು ಹೋಗಲು ಹಿಂಜರಿಯುವ ಮಾನವನ ಸ್ವಾರ್ಥತೆ ಎಂತಹುದು ಎಂಬುದು ಗೊತ್ತಾಗುತ್ತದೆ ಆದರೆ ಮರಣವು ಎಲ್ಲರನ್ನು ಒಂದುಗೂಡಿಸುತ್ತದೆ ಎಂಬುದು ಮಾತ್ರ ಸಾರ್ವಕಾಲಿಕ ಸತ್ಯ ಎಂದು ಸಂದೇಶ ನುಡಿದರು.
ಆಯಾ ಚರ್ಚ್‌ನಲ್ಲಿ ಧರ್ಮಭಗಿನಿಯರು ಸಹಿತ ಸಾವಿರಾರು ಕ್ರೈಸ್ತ ವಿಶ್ವಾಸಿ ಭಕ್ತಾಧಿಗಳು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು. ಆಯಾ ಚರ್ಚ್‌ನ ಸ್ಯಾಕ್ರಿಸ್ಟಿಯನ್, ವೇದಿ ಸೇವಕರು, ಗಾಯನ ಮಂಡಳಿ, ವಾಳೆ ಗುರಿಕಾರರು, ಚರ್ಚ್ ಪಾಲನಾ ಸಮಿತಿ ಸದಸ್ಯರು ಪೂಜಾವಿಧಿಯಲ್ಲಿ ಸಹಕರಿಸಿದರು.

ಸಾವು ಎನ್ನುವ ಎರಡು ಶಬ್ದ ಮನುಷ್ಯನ ಬಾಳಿಗೆ ಭೀಕರತೆ ಉಂಟು ಮಾಡುತ್ತೆ. ಹುಟ್ಟಿದ ಮಾನವ ಯಾವಾಗಲಾದರೂ ಸಾಯಲೇ ಬೇಕು. ಆದರೆ ಆ ಸಾವು ಯಾವ ರೀತಿ ಬಂದು ಅಪ್ಪಳಿಸುತ್ತದೆಯೋ ಯಾರಿಗೂ ತಿಳಿದಿಲ್ಲ. ಒಂದು ವೇಳೆ ಮಾನವನಿಗೆ ತನ್ನ ಸಾವು ಇಂತಹುದೇ ದಿನ ಬರುತ್ತದೆ ಎಂದು ಗೊತ್ತಾದರೆ ಮಾನವ ತನ್ನನ್ನು ಕಾಪಾಡಲು ಯಾವುದಾದರೂ ದಾರಿ ಇದೆಯಾ ಎಂದು ಮೊದಲು ಹುಡುಕಬಲ್ಲವನಾಗುತ್ತಾನೆ. ಯಾಕೆಂದರೆ ಸಾಯೋದಿಕ್ಕೆ ಯಾರಿಗೂ ಇಷ್ಟವಿಲ್ಲ. ಮಾನವನೇ ಸ್ಚಾರ್ಥವೇ ಅಂತಹುದು ಎಂದ ಅವರು ಹುಟ್ಟು ಹಾಗೂ ಸಾವು ಇವುಗಳ ಮಧ್ಯೆ ಮಾನವ ಯಾವ ರೀತಿ ಜೀವನ ಸಾಗಿಸುತ್ತಾನೆ ಎಂಬುದು ಬಹಳ ಮುಖ್ಯವಾಗುತ್ತದೆ ಎಂದರು. -ವಂ|ಅಬೆಲ್ ಲೋಬೋ, ಪ್ರಧಾನ ಧರ್ಮಗುರುಗಳು, ದೀನರ ಕನ್ಯಾಮಾತಾ ದೇವಾಲಯ, ಉಪ್ಪಿನಂಗಡಿ

ಮೃತರ ಸ್ಮರಣಾರ್ಥ ಸಕಲ ಆತ್ಮಗಳ ಸ್ಮರಣೆ ಮಾಡುವ ದಿನದ ಪೂರ್ವಾಭಾವಿಯಾಗಿ ಅಗಲಿದ ತಮ್ಮ ಕುಟುಂಭಿಕರ ಸಮಾಧಿಯನ್ನು ಶುಚಿಗೊಳಿಸುವುದು ಸಂಪ್ರದಾಯ. ದಿವ್ಯ ಬಲಿಪೂಜೆ ದಿನದಂದು ಮೃತರ ಸಮಾಧಿಗೆ ಹೂಹಾರಗಳನ್ನು ಹಾಕುತ್ತಾ, ಮೇಣದ ಬತ್ತಿಗಳನ್ನು ಉರಿಸುತ್ತಾ ಸಮಾಧಿಯ ಪಕ್ಕದಲ್ಲಿಯೇ ನಿಂತು ಅಗಲಿದ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಕ್ರೈಸ್ತ ವಿಶ್ವಾಸಿ ಭಕ್ತಾಧಿಗಳು ಪ್ರಾರ್ಥಿಸುತ್ತಾರೆ. ದಿವ್ಯ ಬಲಿಪೂಜೆಯ ಬಳಿಕ ಧರ್ಮಗುರುಗಳು ಸಮಾಧಿಗಳ ಬಳಿ ತೆರಳಿ ಪವಿತ್ರ ಜಲವನ್ನು ಸಂಪ್ರೋಕ್ಷಣೆ ಮಾಡುತ್ತಾ ಪ್ರಾರ್ಥಿಸಲಾಗುತ್ತದೆ.

ಮಾಹಾಮಾರಿ ಕೋವಿಡ್ 19ರ ಈ ಸಮಯದಲ್ಲಿ ಹೆಚ್ಚು ಭಕ್ತರನ್ನು ಒಂದೆಡೆ ಸೇರಿಸಲು ಸರಕಾರದ ನಿಬಂಧನೆಯಿದ್ದರಿಂದ ಆಯಾ ಚರ್ಚ್‌ಗಳಲ್ಲಿ ಎರಡು ಅವಧಿಯಲ್ಲಿ ಪೂಜಾವಿಧಿಗಳನ್ನು ಹಮ್ಮಿಕೊಂಡು ಭಕ್ತರಿಗೆ ಪಾಲ್ಗೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.