HomePage_Banner
HomePage_Banner
HomePage_Banner

ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ: ಎಸ್‌ಡಿಪಿಐ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯನ್ನು ವಿರೋಧಿಸಿ ಹಾಗೂ ಕೂಡಲೇ ರಾಷ್ಟ್ರೀಯ ಹೆದ್ದಾರಿಯ ದುರಸ್ತಿಗೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ವತಿಯಿಂದ ಉಪ್ಪಿನಂಗಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯನ್ನು ತಡೆದ ಪ್ರತಿಭಟನಕಾರರು, ಸರಕಾರ, ಸಂಸದರು, ಶಾಸಕರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾ ಸಮಿತಿ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಸಂಪೂರ್ಣ ಹದಗೆಟ್ಟು ಹೋಗಿದ್ದು, ಸಂಚಾರ ಅಸಾಧ್ಯವಾಗಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿಯೂ ಅಪೂರ್ಣವಾಗಿದ್ದು, ಈ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡವರು ಮರಗಳನ್ನು ಕಡಿದು, ಗುಡ್ಡಗಳನ್ನು ಜರಿಸುವ ಕೆಲಸ ಮಾತ್ರ ಮಾಡಿಟ್ಟಿದ್ದಾರೆ. ಹೆದ್ದಾರಿಯ ಬಳಿ ಅಲ್ಲಲ್ಲಿ ಅಗೆದಿದ್ದು, ಇದರಿಂದಲೂ ಜನಸಾಮಾನ್ಯರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಹೆದ್ದಾರಿ ಅವ್ಯವಸ್ಥೆಯು ಹಲವು ಅಪಘಾತಗಳಿಗೆ, ಸಾವು- ನೋವುಗಳಿಗೆ ಕಾರಣವಾಗಿದ್ದರೂ, ಸರಕಾರ ಈ ಬಗ್ಗೆ ಮೌನ ವಹಿಸಿದೆ. ಹಿಂದಿ ಭಾಷೆ ಬಾರದ ನಮ್ಮ ಸಂಸದರು ಇಲ್ಲಿನ ಪರಿಸ್ಥಿತಿಯನ್ನು ಕೇಂದ್ರಕ್ಕೆ ಮುಟ್ಟಿಸುವಲ್ಲಿ ಸೋತಿದ್ದಾರೆ. ತುರ್ತಾಗಿ ರೋಗಿಗಳನ್ನು, ಗಭೀಣಿಯರನ್ನು ಆಸ್ಪತ್ರೆಗಳಿಗೆ ಸಾಗಿಸಲು ಕೂಡಾ ಹೆದ್ದಾರಿಯಲ್ಲಿರುವ ಹೊಂಡ- ಗುಂಡಿಗಳಿಂದ ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಶೀಘ್ರವಾಗಿ ವ್ಯವಸ್ಥಿತವಾಗಿ ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭಿಸದಿದ್ದರೆ, ಹೊಂಡ- ಗುಂಡಿಗಳನ್ನು ಮುಚ್ಚಿ ರಸ್ತೆಯನ್ನು ಸುಸ್ಥಿತಿಯಲ್ಲಿರಿಸಲು ಮುಂದಾಗದಿದ್ದಲ್ಲಿ ಎಸ್‌ಡಿಪಿಐ ವಿವಿಧ ಸಂಘಟನೆ, ನಾಗರಿಕರು ಸಹಕಾರದೊಂದಿಗೆ ಸಂಪೂರ್ಣವಾಗಿ ಹೆದ್ದಾರಿ ತಡೆ ನಡೆಸಿ ಬೃಹತ್ ಹೋರಾಟವನ್ನು ಸಂಘಟಿಸುವುದಾಗಿ ಎಚ್ಚರಿಸಿದರು.

 

ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹೈದರ್ ನೀರ್ಸಾಲ್ ಮಾತನಾಡಿ, ಜಿಲ್ಲೆಯ ಸಂಸದರು ಜನರನ್ನು ಉದ್ರೇಕಗೊಳಿಸುವ ಮಾತಿಗೆ ಸೀಮಿತವಾಗದೇ ಅಭಿವೃದ್ಧಿಯ ಕಡೆ ಗಮನಕೊಡಲಿ. ಜಿಲ್ಲೆಯ ಜನರ ಸಮಸ್ಯೆಗಳನ್ನು ಕೇಂದ್ರಕ್ಕೆ ತಲುಪಿಸಿ, ಅದಕ್ಕೊಂದು ಪರಿಹಾರ ಕಲ್ಪಿಸುವ ಕಾರ್ಯ ಮಾಡಲಿ ಎಂದರಲ್ಲದೆ, ರಾಷ್ಟ್ರೀಯ ಹೆದ್ದಾರಿಯು ಸಂಚರಿಸಲಾಗದಷ್ಟು ಹದಗೆಟ್ಟು ಹೋಗಿದ್ದು, ಪ್ರಯಾಣಿಕರೊಂದಿಗೆ ವಾಹನಗಳ ಬಿಡಿಭಾಗಗಳು ಹಾನಿಗೆ ಸಿಲುಕಿ ವಾಹನ ಮಾಲಕರು ಸಂಕಷ್ಟ ಪಡುವಂತಾಗಿದೆ. ಒಂದೆಡೆ ಇಂಧನ ಬೆಲೆಯೇರಿಕೆ, ಹದಗೆಟ್ಟ ಹೆದ್ದಾರಿ, ವಾಹನಗಳ ಬಿಡಿಭಾಗಗಳ ಬೆಲೆಯೇರಿಕೆಯಿಂದ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸದ ಸ್ಥಿತಿ ಎದುರಾಗಿದ್ದು, ಆದ್ದರಿಂದ ಸರಕಾರವು ನಮಗೆ ಓಡಾಟಕ್ಕೆ ಎತ್ತಿನ ಗಾಡಿಗೆ ಅನುಮತಿ ನೀಡಲಿ. ಇಂತಹ ಹದಗೆಟ್ಟ ಹೆದ್ದಾರಿಗೆ ಅದೇ ಸೂಕ್ತ ಎಂದರು.

ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯನ್ನು ಮಾತ್ರ ಪ್ರತಿಭಟನಕಾರರು ತಡೆದಿದ್ದರಿಂದ ಇನ್ನೊಂದು ಬದಿಯಲ್ಲಿ ವಾಹನಗಳ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು. ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಹಾಗೂ ಪ್ರೊಬೆಷನರಿ ಐಪಿಎಸ್ ಅಧಿಕಾರಿ ರೋಹನ್ ಮಂಜುನಾಥ್ ನೇತೃತ್ವದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಮುಖಂಡರಾದ ರಫೀಕ್ ನೆಲ್ಯಾಡಿ, ಮುಸ್ತಾಫ ಲತೀಫಿ, ಇಬ್ರಾಹೀಂ ಸಾಗರ್, ಅಕ್ಬರ್ ಬೆಳ್ತಂಗಡಿ, ಮುಹಮ್ಮದ್ ಪಿಬಿಕೆ, ಶಾಕಿರ್ ಅಳಕೆಮಜಲು, ನಿಸಾರ್ ಕುದ್ರಡ್ಕ, ಝಕಾರಿಯಾ ಕೊಡಿಪ್ಪಾಡಿ, ನಿಸಾರ್ ಕುದ್ರಡ್ಕ, ಅಶ್ರಫ್ ಬಾವು, ಸೀಮಾ ಅಬ್ದುಲ್ ರಝಾಕ್, ಶುಕೂರ್ ಕುಪ್ಪೆಟ್ಟಿ, ಇಲ್ಯಾಸ್ ಕರಾಯ, ಹಮೀದ್ ಬಿ.ಕೆ., ರಶೀದ್ ಕೊಡಿಪ್ಪಾಡಿ, ಬಶೀರ್ ಹಲ್ಯಾರ್, ಅಬ್ದುಲ್ಲಾ ಆದರ್ಶನಗರ, ದಲಿತ ಮುಖಂಡ ಸೇಸಪ್ಪ ನೆಕ್ಕಿಲು ಮತ್ತಿತರರು ಇದ್ದರು.

ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸಿದ್ದೀಕ್ ಕೆ.ಎ. ಸ್ವಾಗತಿಸಿದರು. ಖಜಾಂಚಿ ಇಕ್ಬಾಲ್ ಕೆಂಪಿ ವಂದಿಸಿದರು. ಬಶೀರ್ ಕೂರ್ನಡ್ಕ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.