HomePage_Banner
HomePage_Banner
HomePage_Banner

ದೀಪಾವಳಿ ವಿಶೇಷ ಸಂಚಿಕೆ-2020… ಬೆಳಕಿನ ಪ್ರಭೆಗೆ ಅಕ್ಷರ ಚಿತ್ತಾರ

Puttur_Advt_NewsUnder_1
Puttur_Advt_NewsUnder_1

🪔🪔🪔🪔🪔🪔🪔🪔🪔🪔🪔🪔🪔🪔🪔🪔🪔🪔🪔🪔🪔🪔🪔🪔🪔

ಈ ಬಾರಿಯ ದೀಪಾವಳಿ ಹಬ್ಬಕ್ಕೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಲೇಖನಗಳನ್ನು ಆಹ್ವಾನಿಸಿದ್ದೆವು. ಹಲವಾರು ಬರಹಗಳು ಬಂದಿದ್ದು ಆಯ್ದ ಲೇಖನಗಳನ್ನು ಪತ್ರಿಕೆಯಲ್ಲಿ ಪ್ರಕಟ ಮಾಡಲಾಗಿತ್ತು. ಉಳಿದ ಬರಹಗಳನ್ನು ಸುದ್ದಿ ವೆಬ್‌ ಸೈಟ್‌ ನಲ್ಲಿ ಹಾಕಲಾಗಿದೆ. ಇಲ್ಲಿ ಪತ್ರಿಕೆಯಲ್ಲಿ ಈಗಾಗಲೇ ಪ್ರಕಟಗೊಂಡಿರುವ ಲೇಖನಗಳನ್ನೂ ಕೂಡಾ ಹಾಕಿದ್ದೇವೆ.. 

🪔🪔🪔🪔🪔🪔🪔🪔🪔🪔🪔🪔🪔🪔🪔🪔🪔🪔🪔🪔🪔🪔🪔🪔🪔


 

ಹಣತೆ

ಅಹಾ! ನೋಡಿ ಎಂಥ ಸಂಭ್ರಮ
ದೀಪಗಳ ಹಬ್ಬವು ಹೊತ್ತು ತಂದಿದೆ ಹಾಡಿ ನಲಿಯೋಣ
ಬಂಧು ಬಾಂಧವರೆಲ್ಲ ಒಂದೇ ಸೂರಿನಡಿ ಸೇರೋ ಶುಭ ಸಮ್ಮಿಲನ,
ಕತ್ತಲೆಂಬ ಮೋಡ ಮುಸುಕಿರುವ ಬಾನಿನಲ್ಲಿ, ವಿಸ್ಮಯವೆಂಬಂತೆ ಮೋಡಗಳು ಮರೆಯಾಗಿ
ಪುಟ್ಟ ಬೆಳ್ಳಿ ಚುಕ್ಕಿಗಳು ಮಿನುಗೂ ಸೊಬಗ ….

ಭಾನು ಬಾನಿನಲ್ಲಿ ಪೂರ್ವದಲ್ಲಿ ಹುಟ್ಟಿದರೇನು, ಪಶ್ಚಿಮದಲ್ಲಿ ಮುಳುಗಿದರೇನು
ಬ್ರಹ್ಮಾಂಡ ಬೆಳಗುವ ಸೂರ್ಯ ಒಬ್ಬನೇ…..
ಅರಳಿಯಿಂದ ಬತ್ತಿಯಾದರೇನು, ಬೀಜದಿಂದ ಎಣ್ಣೆಯಾದರೇನು,
ಪ್ರಜ್ವಲಿಸುವ ಜ್ಯೋತಿ ಒಂದೇನೇ…..
ಬೆಳಗುವ ಸೂರ್ಯನಿಗೂ, ಉಜ್ವಲಿಸುವ ಜ್ಯೋತಿಗೂ ಇರುವ ವ್ಯತ್ಯಾಸ ಸರಳ
ಸೂರ್ಯ ಬ್ರಹ್ಮಾಂಡವನ್ನು ಬೆಳಗಿದರೆ, ಜ್ಯೋತಿಯು ಬಾಳನ್ನೇ ಬೆಳಗಿಸುತ್ತದೆ.
ಇದಕ್ಕಿಂತ ಹೆಚ್ಚು ಭಾಗ್ಯ ಕಂಡಿರಾ….

ಮನೆ ಮನಸ್ಸುಗಳಲ್ಲಿ ಸೌಹಾರ್ದತೆ ಮೂಡಿಸಿದೆ ಸೋದರತೆ,
ಕಾಯ ವಾಚಾ ಮನಸ ಹೊತ್ತು ತಂದಿದೆ ಘನತೆ
ಇದುವೇ ದೀಪಗಳ ಹಬ್ಬದ ಮಾನ್ಯತೆ.
ಹಿಡಿದರೆ ಹಿಡಿಯಷ್ಟು ಬಿಟ್ಟರೆ ಮನೆ ತುಂಬ ಈ ಹಣತೆ….

ದೀಕ್ಷಿತಾ ರೈ. ಎಂ ಮುದ್ದೋಡಿ ಮನೆ, ಚಿಕ್ಕಮುಡ್ನೂರು ಸಾಲ್ಮರ, ಪುತ್ತೂರು

ಹಣತೆ

ಹಣತೆಯೇ ನೀನು ಎಷ್ಟು ಸುಂದರ!
ಹಚ್ಚಿದಾಕ್ಷಣ ಬೆಳಕನ್ನು ಚೆಲ್ಲುವೆ
ವರ್ಣಿಸಲಸಾದ್ಯ ನಿನ್ನ ಅಂದವ
ಎತ್ತ ನೋಡಿದರಲ್ಲಿ ನಿನ್ನದೇ ಬೆಳಕು||

ಹಣತೆಯ ಆಕಾರ, ಸೌಂದರ್ಯಕ್ಕೆ
ಮರುಳಾಗದಿರಲು ಸಾಧ್ಯವೇ ನೀ ಮನುಜ
ನಿನ್ನ ಈ ಬೆಳಕೇ ಸಾಕು
ನಮ್ಮನ್ನು ಅಂಧಕಾರದಿಂದ ಬಿಡಿಸಲು||

ಗಾಳಿಗೆ ಆರದೆ, ನೀರಿಗೆ ಬೆದರದೆ
ಉರಿಯುವ ಆಸೆಯು ನಿನಗೆ
ತರತರಹದ ಹಣತೆಗಳೇ ನಿಮ್ಮ ಈ ಚಂದವು
sಸೆಳೆವುದು ನಮ್ಮನ್ನು ನಿಮ್ಮೆಡೆಗೆ||

ನೀನು ಆರಿದರೆ ಆರುವುದು
ನಮ್ಮಯ ಬದುಕು
ನೀನು ಉರಿದರೆ ಹೆಚ್ಚುವುದು
ನಮ್ಮೀ ಛಲವು||

ಎಲ್ಲಾ ಕೆಲಸಕ್ಕೂ ಮುನ್ನ ಬೆಳಗುವೆವು ನಿನ್ನನ್ನು
ನೀನು ಒಡೆದರೆ ಒಡೆಯುವುದು ನಮ್ಮಯ ಆಸೆಯೂ
ದೀಪಾವಳಿಯಲ್ಲಿ ಹಣತೆಯಿಂದ ಹಣತೆಯ ಹಚ್ಚಲು
ಬೀರುವುದು ಪ್ರೀತಿ ಉತ್ಸಾಹ||

ಹಣತೆಯೇ ನೀನು ಎಷ್ಟು ಸುಂದರ
ನೀವು ತುಂಬುವಷ್ಟು ಸ್ಪೂರ್ತಿಯನ್ನು
ಯಾರೂ ತುಂಬಲು ಸಾಧ್ಯವಿಲ್ಲ||

ಗಣ್ಯಶ್ರೀ ಜಿ.ಎ೯ನೇ ತರಗತಿ
ಸುದಾನ ವಸತಿಯುತ ಶಾಲೆ ಆನ ಮನೆ ರಾಮಕುಂಜ


ಹಣತೆ

ಅಂದಕಾರ ಒಡಲನಾವರಿಸೆ
ಬೆಳಗುವುದು ಜ್ಯೋತಿ
ಈ ದೀಪಾವಳಿ..
ಮಿನುಗು ಬೆಳಕು ಬೆಳಗಿ
ಹರಡಿ ಆವರಿಸಿ
ದುಷ್ಟತನವ ನೀಗಲಿ…
ಆ ನರಕನ ಸಂಹಾರವು
ನಮ್ಮೊಳಗಿನ
ಗುರಿಯಾಗಲಿ.

ಶ್ರೀಮತಿ ಮಧುಮಿತಾ ರೈ. ಬಿ
ಮೊಡಪ್ಪಾಡಿ
ಒಳಮೊಗ್ರು, ಪುತ್ತೂರು ದ.ಕ


ಹಣತೆ

ದೀಪ ಅಂದ ತಕ್ಷಣ ನೆನಪಿಗೆ ಬರುವುದೇ
ಬೆಳಕು
ಬೆಳಕು ಪ್ರತಿ ಒಬ್ಬರ ಜೀವನದ ಪ್ರಮುಖ ಅಂಗವಿದ್ದಂತೆ.
ಮನುಷ್ಯನಿಗೆ ಕಣ್ಣುಗಳು ಎಷ್ಟು ಮುಖ್ಯವೋ ಬೆಳಕು ಅಷ್ಟೇ ಮುಖ್ಯ.
ಕಣ್ಣುಗಳು ಇಲ್ಲದ ಜೀವನ ಕಷ್ಟವೋ
ಬೆಳಕು ಇಲ್ಲದ ಜೀವನ ಅಷ್ಟೇ ಕಷ್ಟ
ಏನು ಕೆಲಸ ಮಾಡಬೇಕಾದರೂ, ಏನೇ
ನೋಡಬೇಕಾದರು ಬೆಳಕು ಇರಲೇಬೇಕು
ಬೆಳಗಿನಿಂದ ಸಂಜೆಯವರೆಗೆ, ರಾತ್ರಿಯಿಂದ
ಬೆಳಗಿನವರೆಗೆ ಪ್ರತಿಕ್ಷಣ ಬೆಳಕು ನಮ್ಮೊಂದಿಗೆ ಇರಬೇಕು
ಮನೆ ಬೆಳಗಲು ವಿದ್ಯುತ್ ರೂಪ
ದೇವರನ್ನು ಪೂಜಿಸಲು ದೀಪದ ರೂಪ
ಅಡುಗೆ ಮಾಡಲು ಇಂಧನ ರೂಪ
ಶುಭ ಸಮಾರಂಭಗಳ ಬೆಳಕಿನ ದೀಪ

ಪವಿತ್ರ
ಅಜೇಯನಗರ ಮನೆ
ನೆಹರು ನಗರುನಗರ ಪೋಸ್ಟ್
ಪಡ್ನೂರು ಗ್ರಾಮ
ಪುತ್ತೂರು ತಾಲೂಕು


ಹಣತೆ

ಉರಿಸುವೆವು ಸದಾ ನಿನ್ನ
ಮರೆಯದೆಯೇ
ಕತ್ತಲನ್ನು ಸುಖ ಮಾಡಬಹುದೆಂಬ
ನಂಬಿಕೆಯಿಂದ
ಮಿಂಚು ಸಿಡಿಲು ನಿನಗೆ ಲೆಕ್ಕವಲ್ಲ
ಸೂರ್ಯಚಂದ್ರರ ಹಾಗೆ ಸಮಯವಿಲ್ಲ ನಿನಗೆ
ದೀಪಾವಳಿಯಲ್ಲಿ ನೀನೆ ರಾಜ
ಕತ್ತಲಾಗಲು ಬಿಡುವುದಿಲ್ಲ
ಚಿಕ್ಕ ಮಣ್ಣಿನ ವಸ್ತು
ಬಿದ್ದರೆ ಹುಡಿಯಾಗುವೆ
ಅದರೆ ಗಾಳಿ ಮಳೆ ಬಂದಾಗ
ಬೆಳಕನ್ನು ಎತ್ತಲೋ ದೂಡಿ ಬಿಡುವೆ
ಮತ್ತೆ ನಾವು ಕತ್ತಲಲ್ಲಿ ಬೆಳಕಿಗೆ ಹುಡುಕುವೆವು

ಎಲ್ಲಾ ಇದ್ದರೂ ಬೆಳಕಿಲ್ಲದಿದ್ದರೆ
ಹಣತೆ ನೀನೇ ನಮಗೆ ಸದಾ ಶಕ್ತಿ

ವಿಖ್ಯಾತಿ ಬೆಜ್ಜಂಗಳ
8ನೇ ತರಗತಿ
ಸುದಾನ ಪಸತಿಯುತ ಶಾಲೆ ಪುತ್ತೂರು


ಹಣತೆ

ದೀಪಾವಳಿಯಂದು ಹಚ್ಚುವ ದೀಪ
ಕಾಣುವೆವು ಇದರಲ್ಲಿ ದೇವರ ರೂಪ
ಬೆಳಕಿನೆಡೆಯಲ್ಲಿ ಶೋಭಿಸುವುದು
ನಮ್ಮಯ ಪ್ರತಿರೂಪ
ತಿಳಿದುಕೊಂಡರೆ ದೀಪದ ಸ್ವರೂಪ
ತೊಳೆದು ಹೋಗಲಿ ಎಲ್ಲರ ಪಾಪ

ದೀಪಾವಳಿಯಂದು ಹಚ್ಚುವ ಹಣತೆ
ಗಿಡಿದ ತುಂಬ ಹರಡಿದೆ ಲತೆ
ದೀಪದ ಬೆಳಕಿಗೆ ಕಾಣುವುದು ಲತೆಯ ಸೊಬಗು
ಯಾರು ಬಲ್ಲರು ಇದರ ಬೆರಗು

ಪ್ರಕೃತಿ-ವಿಕೃತಿ

ಬುದ್ಧಿವಂತ ಜನತೆ ಹೇಳುವರು
ಬೆಳೆಸಿ ಉಳಿಸೋಣ ಪ್ರಕೃತಿಯನ್ನ
ಮತಿಹೀನ ಜನ ಮಾಡುವರು
ಮರಗಳ ಮಾರಣ ಹೋಮನ್ನ
ಉಸಿರಾಡಲು ಬೇಕು ನಮಗೆ ಪ್ರಕೃತಿ
ಮಾಡಬೇಡಿ ಇದರ ವಿಕೃತಿ
ತಿಳಿದುಕೊಳ್ಳಿರಿ ನಮ್ಮಯ ಸಂಸ್ಕೃತಿ

ರಚನೆ: ಶ್ರೀಮತಿ ಪ್ರೀತಿ ಆರ್. ಬಲ್ಲಾಳ್
ಕೊಡಿಪ್ಪಾಡಿ ಅಂಚೆ
ಪುತ್ತೂರು ತಾಲೂಕು


ಕವಿಗೋಷ್ಠಿ

ಪ್ರಾರಂಭದಲ್ಲಿ
ಬೋರಾದರೂ
ಕೊನೆಯಲ್ಲಿ
ಛಲೋ ಇತ್ರೀ….
ಕವಿತೆ ವಾಚಿಸಿದ್ದು
ಯುವ ಕವಯತ್ರಿ

ಮಾಸ್ಕ್
ಆರೋಗ್ಯದ
ದೃಷ್ಠಿಯಲಿರಲಿ
ಮಾಸ್ಕ್…….
ಮನೆಮಂದಿಗೆಲ್ಲ
ಇದುವೆ
ಟಾಸ್ಕ್

ಆಸಕ್ತಿ
ಹೆಂಗಳೆಯರು
ಸಾಂಸಾರಿಕ ಧಾರವಾಹಿ
ನೋಡಲು ಬಯಸುತ್ತಾರೆ
ಕಾರಣ….
ಅವರಿಗೆ ಮತ್ತೊಬ್ಬರ
ಸಂಸಾರದಲ್ಲಿ ಹೆಚ್ಚಿನ
ಆಸಕ್ತಿ….

ಗ್ಯಾ(ವಾ)ರಂಟಿ
ಚೀನಿಯರ
ಪರಕರಗಳಿಗಿಲ್ಲ
ಗ್ಯಾರಂಟಿ
ಆದರೆ…………
ಕೊರೊನಾಕ್ಕಿದೆ
ವಾ…ರಂಟಿ

ತಿಲಕ್ ರೈ ಕುತ್ಯಾಡಿ
ಸುಪ್ರಭಾತ
ಅಂಚೆ ಅರಿಯಡ್ಕ
ಪುತ್ತೂರು 


ಕಥೆ:

ದೀಪಾವಳಿ ಹಬ್ಬವನ್ನು ೩ ದಿನ ಆಚರಿಸಲಾಗುತ್ತದೆ. ದೀಪಾವಳಿಯ ಹಿಂದಿನ ದಿನ ನೀರು ತುಂಬುವುದು ತ್ರಯೋದಶಿಯ ರಾತ್ರಿ ನೀರು ತುಂಬುವ ಹಬ್ಬವನ್ನು ಆಚರಿಸಲಾಗುತ್ತದೆ. ಮನೆಯಲ್ಲಿ ಸ್ನಾನದ ಪಾತ್ರೆಗೆ ನೀರು ತುಂಬಿಸಿ ಇಡುವುದರಿಂದ ಶುದ್ಧ ಹಾಗೂ ಗಂಗಾದೇವಿಯನ್ನು ಪೂಜಿಸಿ ಆಹ್ವಾನಿಸಿಲಾಗುತ್ತದೆ. ಮರುದಿನ ಅಂದರೆ ನರಕ ಚತುರ್ಥಿಯ ಬೆಳಗ್ಗೆ ಎಣ್ಣೆ ಸ್ನಾನ ಮಾಡುವುದಾಗಿದೆ. ಎಣ್ಣೆ ಸ್ನಾನಕ್ಕೆ ಹಿಂದಿನ ದಿನ ತುಂಬಿಸಿದ ನೀರನ್ನು ಉಪಯೋಗಿಸಲಾಗುತ್ತದೆ. ಎಣ್ಣೆ ಸ್ನಾನ ಅಂದರೆ ಮನೆ ಮಂದಿಯರು, ಮಕ್ಕಳು, ದಂಪತಿಗಳು ಮೈಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು. ಇದರಿಂದ ದೇಹಕ್ಕೆ, ಚರ್ಮಕ್ಕೆ ಒಳ್ಳೆದು.

ಇನ್ನು ನರಕ ಚರ್ತುದಶಿ ಕೃಷ್ಣ ಪರಮಾತ್ಮ, ಕಾಳಿದೇವಿ ಸತ್ಯಭಾಮ ದೇವತೆಗಳು ದುಷ್ಟ ನರಕಾಸುರನನ್ನು ಸೋಲಿಸಿ ವಿಜಯ ಸಾಧಿಸಿದ ದಿನ ಎಂದು ಹೇಳಲಾಗುತ್ತದೆ.

ಮೂರನೆ ದಿನ ದೀಪಾವಳಿಯಂದು ಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ. ಕ್ಷ್ಮೀ ಪೂಜೆಯು ಕೇವಲ ಧನಲಕ್ಷ್ಮೀ ಅಲ್ಲ. ಸಕಲ ಸೌಭಾಗ್ಯವನ್ನು ಪಡೆಯುವುದು. ಸಿಹಿ ಹಂಚುವುದು. ಹೀಗಾಗಿ ಕೆಲವರು ಅಂಗಡಿಯಲ್ಲಿ ದೀಪಾವಳಿಯಂದು ಲಕ್ಷ್ಮೀ ಪೂಜೆ ಮಾಡುತ್ತಾರೆ.

ಲಕ್ಷ್ಮೀ ಪೂಜೆಯ ಬಳಿಕ ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ. ಆ ದಿನ ಬಲಿಚಕ್ರವರ್ತಿಯು ಭೂಲೋಕ ಸಂಚಾರಕ್ಕೆ ಬರುತ್ತಾನೆ ಎಂಬ ನಂಬಿಕೆ ಇದೆ. ಅಂದು ಬಲೀಂದ್ರ ಪೂಜೆಯಯ ನಡೆಯುತ್ತದೆ. ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣು ಭಕ್ತ ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದು ಬಲಿಯಿಂದ ೩ ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆಯುತ್ತಾನೆ. ೩ ಹೆಜ್ಜೆಗಳಲ್ಲಿ ಆಕಾಶ-ಭೂಮಿಯನ್ನು ಅಳೆದುಕೊಂಡು ತ್ರಿವಿಕ್ರಮನಾಗಿ ಬೆಳೆದು ೩ನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆ ಮೇಲಿಟ್ಟ ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದು ಬಿಡುತ್ತಾನೆ. ಆಗ ಬಲಿಯ ಭಕ್ತಿಯನ್ನು ಮತ್ತು ದಾನಶೀಲ ಗುಣವನ್ನು ಮೆಚ್ಚಿದ ವಿಷ್ಣು ಪ್ರತಿ ವರ್ಷ ೧ ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ರೀತಿ ಆಚರಿಸುವ ದಿನವೇ ಬಲಿಪಾಡ್ಯಮಿ. ಆ ದಿನ ಗೋ ಪೂಜೆಯನ್ನು ಮಾಡಲಾಗುತ್ತದೆ. ಗೋ ಪೂಜೆ ಮಾಡಿದರೆ ಪುಣ್ಯ ದೊರಕುತ್ತದೆ ಎಂಬ ನಂಬಿಕೆ ಇದೆ. ಇದೇ ದೀಪಾವಳಿ ಹಬ್ಬದ ಮಹತ್ವವಾಗಿದೆ.

ಪವಿತ್ರ
ಅಜೇಯನಗರ ಮನೆ
ನೆಹರು ನಗರುನಗರ ಪೋಸ್ಟ್
ಪಡ್ನೂರು ಗ್ರಾಮ
ಪುತ್ತೂರು ತಾಲೂಕು


ದೀಪವಾಳಿ ಹಾಸ್ಯ ದಿನಕ್ಕೆ ಸಾಕ್ಷಿಯಾದ ಬಿಡಿ ಪಟಾಕಿ

ದೀಪವಾಳಿ ಕತ್ತಲಿನಿಂದ ಬೆಳಕಿನ ದಾರಿಯ ಕಡೆಗೆ ಸಾಗಿಸುವ ಸಂದೇಶವನ್ನು ಸಾರುತ್ತದೆ. ನಮ್ಮ ಜೀವನದಲ್ಲಿ ಪ್ರತಿಯೊಂದು ಹಬ್ಬವು ಅದರದೇ ಆಗಿರುವ ಮಹತ್ವವನ್ನು ಹೊಂದಿದೆ. ನಮ್ಮಲ್ಲಿ ಎಲ್ಲ ಹಬ್ಬಕ್ಕೂ ಅರ್ಥಪೂಣವಾದ ಮೌಲ್ಯ ಮತ್ತು ಕಥೆಗಳನ್ನು ಹೊಂದಿದೆ. ದೀಪವಾಳಿ ಹಬ್ಬಕ್ಕೂ ಒಂದು ಪೌರಣಿಕ ಕಥೆ ಇದೆ.

ನರಕ ಚತುರ್ಥಿ , ದೀಪವಾಳಿ, ತುಳಸಿಪೂಜೆ, ಗೋಪೂಜೆ ಇನ್ನು ಅನೇಕ ಹಳ್ಳಿಗಳಲ್ಲಿ ಭಿನ್ನ ರೀತಿಯ ಆಚರಣೆ ಇದೆ. ನಮ್ಮ ಮನೆಯಲ್ಲಿ ಮಾತ್ರ ಗೋಪೂಜೆಯನ್ನು ಅದ್ಭುತವಾಗಿ ಮತ್ತು ಸಂಪ್ರದಾಯಕವಾಗಿ ಆಚರಿಸುತ್ತಾರೆ. ದೀಪವಾಳಿಯ ಮೊದಲ ದಿನ ನರಕ ಚತುರ್ಥಿ ಆ ದಿನ ಎಣ್ಣೆ ಸ್ನಾನ ಮಾಡಿ ನಮ್ಮ ಮನೆಯ ಅಂಗಳಕ್ಕೆ ರಂಗೋಲಿ ಹಾಕಿ, ಮನೆ ಎಲ್ಲ ಶುದ್ಧಿಗೊಳಿಸಿ, ಅಮ್ಮ ಜೊತೆಗೆ ಸಿಹಿ ತಯಾರಿಸುತ್ತೇನೆ. ಆ ದಿನದ ಕಾರ್ಯಕ್ರಮ ಅಷ್ಟೊಂದು ಅದ್ಧೂರಿ ಇಲ್ಲ. ಆದರೆ ನರಕ ಚತುರ್ಥಿಯ ಮಾರನೇ ದಿನ ಗೋಪೂಜೆ ಅಂದು ನಮ್ಮ ಮನೆಯೆಲ್ಲ ದೀಪವಾಳಿಯ ಸಂಭ್ರಮಕ್ಕೆ ಒಂದು ರೀತಿಯ ಮುನ್ನಡಿ ಬರೆಯುತ್ತದೆ. ನಾನು ಮತ್ತು ತಮ್ಮ, ವಿಪರಿತ ಜಗಳ ಮಾಡಿಕೊಂಡು ಇರುವವರು. ಆ ದಿನವು ಜಗಳವೇ, ಅವನು ಒಂದು ಕೆಲಸವನ್ನು ಮಾಡುವುದಿಲ್ಲ ಎಂಬ ನನ್ನ ಗೋಣಗು, ಅದರಲ್ಲಿ ಅಮ್ಮನ ಒಗರಣೆ ಅವನು ಚಿಕ್ಕಮಗು, ನೀನು ಎಲ್ಲವನ್ನು ಸುಧಾರಿಸಿಕೊಂಡು ಹೋಗಬೇಕು ಎಂದು ನನಗೆ ಬೈಯುತ್ತಾಳೆ. ಈ ಎಲ್ಲ ಘಟನೆ ಎರಡು ವರ್ಷಗಳ ಹಿಂದಿನದು. ಅವನಿಗೆ ಬುದ್ಧಿ ಕಲಿಸಬೇಕು ಎಂದು ಗೋಪೂಜೆಯ ನಂತರ ಪಟಾಕಿ ಹೊಡೆಯುವ ಪದ್ಧತಿ ಇದೆ.
ನಾನು ಒಂದೆರಡು ಬಿಡಿ ಪಟಾಕಿಯನ್ನು ಹೊಡೆಯುತ್ತಿದೆ. ಇದೆ ಸರಿಯಾದ ಸಮಯ ಎಂದು ನನ್ನ ತಮ್ಮನಿಗೆ ಗೊತ್ತಿಲ್ಲದಂತೆ ಒಂದು ಬಿಡಿ ಪಟಾಕಿಗೆ ಬೆಂಕಿ ಹಚ್ಚಿ ಅವನ ಜೇಬಿಗೆ ಹಾಕಿದೆ, ಹಾಕಿ ತಕ್ಷಣವೇ ಡಮರ್ ಎಂದು ಸದ್ದು ಬಂತು ನೋಡಿ. ನನ್ನ ತಮ್ಮ ಬೊಬ್ಬೆ ಹೊಡೆಯುತ್ತಾ ಅಮ್ಮನ ಬಳಿ ಓಡಿ ಹೋದ ನನ್ನ ಬಗ್ಗೆ ಚಾಡಿ ಹೇಳಿದ. ಅಮ್ಮನಿಗೂ ನಗು ತಡೆಯುಲು ಆಗುತ್ತಿಲ್ಲ. ಅಪ್ಪ, ಅಕ್ಕ, ಅಜ್ಜಿ ಎಲ್ಲರೂ ನಗುವಿನಲ್ಲೇ ಮುಳುಗಿದರು, ಆದರೆ ತಮ್ಮ ನನ್ನ ನೋಡುತ್ತ ನಿನಗೆ ಮಾಡುವೇ, ನೀ ಸಿಗು ಎನ್ನುತ್ತ. ಅಂದಿನ ದಿನಗೆ ಆ ಹಾಸ್ಯವೇ ಇಂದಿನ ದೀಪವಾಳಿಗೆ ಮುನ್ನಡಿ ಹಾಕಿದೆ. ಮರೆಯದ ದಿನಗಳನ್ನು ದೀಪವಾಳಿ ನೆನಪಿಸುತ್ತದೆ.

ಚೈತನ್ಯ ಕೊಟ್ಟಾರಿ
ಸೈಂಟ್ ಅಲೋಸಿಯಸ್ ಕಾಲೇಜು ಮಂಗಳೂರು


ದೀಪವಳಿ ಹಬ್ಬದ ಸಂಭ್ರಮ

ದೀಪಾವಳಿಯು ಅಜ್ಞಾನವನ್ನು ಹೋಗಲಾಡಿಸಿ ಜ್ಞಾನವನ್ನು ತುಂಬಿಸುವ ಹಬ್ಬವಾಗಿದೆ. ದೀಪದ ಪ್ರಕಾಶವೇ ಜ್ಞಾನದ ಸಂಕೇತವಾಗಿದೆ. ಪ್ರತಿಯೊಬ್ಬರ ಮನದಲ್ಲಿ ಜ್ಞಾನವೆಂಬ ದೀಪವನ್ನು ತುಂಬಲು ಬಂದ ಹಬ್ಬವೇ ದೀಪಾವಳಿಯಾಗಿದೆ. ಈ ಹಬ್ಬವು ಪುರಾಣ ಕಥೆಯನ್ನು ಹೊಂದಿದ ಪುಣ್ಯದ ಹಬ್ಬವಾಗಿದೆ. ದೀಪಾವಳಿಯು ಭಾರತೀಯರಲ್ಲಿ ಅತೀ ದೊಡ್ಡ ಹಬ್ಬವಾಗಿದೆ. ಸಾಲು-ಸಾಲು ಹಣತೆ ಯ ದೀಪವನ್ನು ಹಚ್ಚಿ ಹಬ್ಬವನ್ನು ಆಚರಿಸಲಾಗುತ್ತದೆ ಈ ಹಿನ್ನೆಲೆಯಲ್ಲಿ ದೀಪಾವಳಿಯ ಆಚರಣೆ ಉದ್ದೇಶ, ಅದರ ಹಿಂದಿರುವ ಪರಂಪರೆಯನ್ನು ತಿಳಿಯುವ ಸಣ್ಣ ಪ್ರಯತ್ನವಾಗಿದೆ.

ದೀಪಾವಳಿಯು ನೀರು ತುಂಬುವ ಹಬ್ಬದಿಂದ ಪ್ರಾರಂಭವಾಗಿ ನರಕ ಚತುರ್ದಶಿ,ಧನತೇರಸ, ಬಲಿಪಾಡ್ಯಮಿ, ಭವನ ಬೀದಿಗೆ, ಅಕ್ಕನ ತದಿಗೆ ಮತ್ತು ಪಂಚಮಿವರೆಗೆ ಪ್ರತಿದಿನವೂ ಹಬ್ಬ. ವ್ಯಾಪಾರಸ್ಥರು ತಮ್ಮ ಹಳೆಯ ಖಾತೆಗಳನ್ನು ಮುಕ್ತಾಯ ಮಾಡಿ ಹೊಸ ಖಾತೆಯನ್ನು ಪ್ರಾರಂಭ ಮಾಡುತ್ತಾರೆ. ಧನದೇವತೆ ಲಕ್ಷ್ಮಿಯನ್ನು ಇದೇ ಸಮಯದಲ್ಲಿ ಆವಾಹನೆ ಮಾಡಿ ಪೂಜಿಸಲಾಗುತ್ತದೆ. ನರಕ ಚತುರ್ದಶಿಯಂದು ಶ್ರೀಕೃಷ್ಣನು ಅಸುರೀ ಶಕ್ತಿಯ ಸಂಕೇತವಾದ ನರಕಾಸುರನನ್ನು ವಧಿಸಿದನು. ಇದೇ ಕಾರಣದಿಂದ ಆ ದಿನವನ್ನು ನರಕಚತುರ್ದಶಿ ಎನ್ನಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನಲ್ಲಿರುವ ಅಸುರೀ ಪ್ರವೃತ್ತಿ ಹಾಗೂ ವಿಧ್ವಂಸಕ ಪ್ರವೃತ್ತಿಯನ್ನು ಕಡಿಮೆ ಮಾಡಿ ದೈವಿಕ ಪ್ರವೃತ್ತಿಯನ್ನು ಸ್ಥಾಪಿಸಬೇಕು. ಇದರಿಂದ ಮುಂದೆ ಸಮಾಜ ಹಾಗೂ ರಾಷ್ಟ್ರದ ಮೇಲೆ ಪರಿಣಾಮವಾಗುತ್ತದೆ. ಇದುವೇ ನರಕಚತುರ್ದಶಿಯ ಸಂದೇಶ.

ನರಕಚತುರ್ದಶಿಯ ಮಾರನೇ ದಿನ ದೀಪಾವಳಿ ಅಮಾವಾಸ್ಯೆಯಾಗಿದ್ದು, ಅವತ್ತು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಮಹಾವಿಷ್ಣುವಿನ ಪತ್ನಿಯು ಆದ ಮಹಾಲಕ್ಷ್ಮಿಯನ್ನು ಆರಾಧಿಸುವ ಹಬ್ಬವೇ ಧನಲಕ್ಷ್ಮಿ ಪೂಜೆ. ಸಮುದ್ರ ಮಂಥನ ದಿಂದ ಲಕ್ಷ್ಮಿ ಉದಯಿಸಿದ ದಿನವೂ ಹೌದು. ಹೀಗಾಗಿ ಉತ್ತರ ಭಾರತೀಯರಿಗೆ ಹೆಚ್ಚಿನ ಸಂಭ್ರಮ. ವ್ಯಾಪಾರಿಗಳೂ ದೀಪ ಬೆಳಗಿ ಧನಲಕ್ಷ್ಮಿ ಬರುವ ಭಾಗ್ಯ ದಿನವೇ ಆಗಿದೆ. ವ್ಯಾಪಾರ ವಹಿವಾಟಿನ ವಾಣಿಜ್ಯದ ನೂತನ ವರ್ಷ ಉದಯಿಸುವ ದಿನವಾಗಿದೆ. ದೀಪಾವಳಿ ಅಮಾವಾಸ್ಯೆಯ ರಾತ್ರಿ ಸಕಲ ಭಾಗ್ಯಗಳನ್ನು ಕರುಣಿಸುವಂತೆ ಲಕ್ಷ್ಮಿ ಪೂಜೆ ಕೈಗೊಂಡು ಇಡೀ ರಾತ್ರಿ ಜಾಗರಣೆ ಭಜನೆ,ಮನರಂಜನೆ ಇತ್ಯಾದಿಗಳಿಂದ ಸೌಭಾಗ್ಯ ಲಕ್ಷ್ಮಿ ಒಲಿಸಿಕೊಳ್ಳುವ ಮಹತ್ವದ ಉದ್ದೇಶದಿಂದ ನಾನಾ ತರಹ ಪೂಜೆಗಳನ್ನು ಮಾಡುವುದು ಸಂಪ್ರದಾಯ.

ಹಬ್ಬದ ಮೂರನೆಯ ದಿನವನ್ನು ಬಲಿಪಾಡ್ಯಮಿ ಯಾಗಿ ಆಚರಿಸಲಾಗುತ್ತದೆ. ಅವತ್ತು ಬಲಿ ಚಕ್ರವರ್ತಿ ಭೂಲೋಕ ಸಂಚಾರ ಬರುತ್ತಾನೆ ಎಂಬ ನಂಬಿಕೆಯು ಇದೆ. ಅಂದು ಗೋಪೂಜೆಯ ಮತ್ತು ಬಲೀಂದ್ರ ಪೂಜೆ ನಡೆಯುತ್ತದೆ. ದನಕರುಗಳನ್ನು ಸ್ನಾನ ಮಾಡಿಸಿ ಅಲಂಕರಿಸಿ ದೀಪದ ಬೆಳಕನ್ನು ತೋರಿಸಿ, ನಂದಾದೀಪವಾಗಿ ಬೆಳಗಬೇಕೆಂದು ಪೂಜಿಸುತ್ತಾರೆ. ಗೋವುಗಳಿಗೆ ಹಾರವನ್ನು ಹಾಕಿ, ತಿನ್ನಲು ಹಣ್ಣು-ಹಂಪಲು, ತೆಂಗಿನಕಾಯಿಯ ಹಾಲು, ಅವಲಕ್ಕಿ ಮುಂತಾದವುಗಳನ್ನು ನೀಡಿ ಪೂಜಿಸುತ್ತಾರೆ. ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣು ದಾನಶೂರ ದೈತ್ಯರಾಜ ಬಲಿಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು ಬಲಿಯಿಂದ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆದು, ಎರಡು ಹೆಜ್ಜೆಗಳಲ್ಲಿ ಭೂಮಿಗಳನ್ನು ಅಲೆದು ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು, ಬಲಿಚಕ್ರವರ್ತಿಯನ್ನು ವಿಷ್ಣು ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರವನ್ನು ನೀಡುತ್ತಾನೆ. ಆ ರೀತಿ ಆಚರಿಸಲ್ಪಡುವ ದಿನವೇ ಬಲಿಪಾಡ್ಯಮಿ. ಅಂದು ಬಲಿ ಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರ ಪೂಜೆ ನಡೆಯುತ್ತದೆ.

ಹೀಗೆ ದೀಪಾವಳಿಯು ವಿಜ್ರಂಭಣೆಯಿಂದ ನಡೆಯುತ್ತದೆ. ಹಬ್ಬ ಅಂದರೇನೇ ಹಾಗೆ ಎಲ್ಲರ ಮನಸ್ಸಿನಲ್ಲಿ ಖುಷಿಯ ಛಾಯೆ ಮೂಡಿ ಬರುತ್ತದೆ. ಹಬ್ಬದಂದು ದೀಪಗಳೊಂದಿಗೆ ಪಟಾಕಿಗೂ ಮಹತ್ವವಿದೆ. ಆದರೆ ಪಟಾಕಿ ಹೊಡೆಯುವಾಗ ಎಚ್ಚರ ಇರಲಿ ಕಣ್ಣು, ಕಿವಿಯ ಬಗೆಯು ಕಾಳಜಿ ಇರಲಿ. ಈ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡಿ ದೀಪಾವಳಿಯನ್ನು ಆಚರಿಸೋಣ. ಎಲ್ಲರ ಮನದಲ್ಲಿ ಜ್ಞಾನದ ಬೆಳಕು ಬೆಳಗಲಿ, ಹಬ್ಬವು ಎಲ್ಲಾ ಕಡೆಯೂ ಖುಷಿಯಿಂದ ಕೂಡಿರಲಿ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
                            

 ದುರ್ಗಾಶ್ರೀ ಸುಬ್ರಹ್ಮಣ್ಯ
 ಸ್ನಾತಕೋತ್ತರ ಪದವಿ
 ಮಂಗಳೂರು ವಿಶ್ವವಿದ್ಯಾನಿಲಯ                
 ಕೊಣಾಜೆ


ದೀಪಾವಳಿ

ದೀಪಾವಳಿ ಎಂದರೆ ಬೆಳಕಿನ ಹಬ್ಬ. ಎಲ್ಲರ ಮನಗಳಲ್ಲಿ, ಮನೆಗಳಲ್ಲಿ ಅಂಧಕಾರವನ್ನು ಹೋಗಲಾಡಿಸಿ ಬೆಳಕು ಚೆಲ್ಲುವ ಹಬ್ಬಾವಳಿಯೇ ದೀಪಾವಳಿ. ಇದು ಕೇವಲ ಒಂದು ದಿನದ ಸಡಗರ ಸಂಭ್ರಮಕ್ಕೆ ಮಾತ್ರ ಸೀಮಿತಗೊಳ್ಳದೆ  ನಾಲ್ಕೈದು ದಿನ ಹಬ್ಬಿಕೊಂಡಿರುವ ಹಬ್ಬವಿದು.

ದೀಪಾವಳಿ ಬಂತೆಂದರೆ ಸಾಕು. ಅದೆಷ್ಟು ಸಡಗರ, ಸಂಭ್ರಮ. ಹೊಸ ಉಡುಗೆ ತೊಡುಗೆಗಳು, ಘಮ ಘಮಿಸುವ ಸಿಹಿ ಖಾದ್ಯಗಳು, ಮನೆ ತುಂಬಾ ಬೆಳಕು ಚೆಲ್ಲುವ ದೀಪಗಳು ಎಲ್ಲವೂ ನೆನಪಿಗೆ ಬರುವಾಗಲೇ ಎಷ್ಟೊಂದು ಖುಷಿಯಾಗುತ್ತದೆ. ಮಕ್ಕಳಿಗಂತೂ ಪಟಾಕಿ ಸಿಡಿಸುವ ಸಂತಸದ ಸಮಯ. ಆಕಾಶದಲ್ಲಿ ರಂಗು ರಂಗಿನ ಚಿತ್ತಾರ ಮೂಡಿಸುವ ಪಟಾಕಿಗಳು, ಕಣ್ಣಿಗೆ ಮುದ ನೀಡುವುದರ ಜೊತೆಗೆ ಕಿವಿಗೆ ಇಂಪು ಕೊಡುತ್ತವೆ. ಮನೆಯವರೆಲ್ಲರೂ ಒಟ್ಟಾಗಿ ಸೇರಿ ಆಚರಿಸುವುದರಲ್ಲಿರುವ ಸಂತಸ ಸಂಭ್ರಮವನ್ನು ಹೇಳಲು ಸಾಧ್ಯವಿಲ್ಲ.

ಪ್ರತಿಯೊಂದು ಹಬ್ಬದಲ್ಲೂ ಹಿರಿಯರ ನಂಬಿಕೆ ಮತ್ತು ಸುಂದರವಾದ ಆಶಯ ಇರುತ್ತದೆ. ಪ್ರತಿ ಹಬ್ಬವೂ ತನ್ನದೇ ಆದ ಆಚಾರ – ವಿಚಾರಗಳನ್ನು ಒಳಗೊಂಡಿದ್ದು, ಅದಕ್ಕೆ ಅನುಗುಣವಾಗಿ ಅದನ್ನು ಶ್ರದ್ಧೆಯಿಂದ ಆಚರಿಸುವುದು ನಮ್ಮೆಲ್ಲರ  ಕರ್ತವ್ಯವಾಗಿದೆ. ದೀಪಾವಳಿ ಹಬ್ಬವನ್ನು ಬಹಳ ಎಚ್ಚರಿಕೆಯಿಂದ ಆಚರಿಸಿ ಸಂಭ್ರಮಿಸಬೇಕಾಗಿದೆ. ದೀಪಗಳು ಕತ್ತಲನ್ನು ತೊರೆದು ಬೆಳಕು ಚೆಲ್ಲುವ ಸಂಕೇತಗಳಾಗಿದ್ದು,ಅದರಂತೆ ನಮ್ಮ ಅಂತರಂಗದಲ್ಲಿರುವ ದ್ವೇಷ, ಕೋಪ, ಮತ್ಸರಗಳೆಲ್ಲವೂ ಕತ್ತಲಾಗಿ ಶಾಂತಿ, ಪ್ರೀತಿ, ಕರುಣೆ, ವಾತ್ಸಲ್ಯ, ತ್ಯಾಗಗಳ ಬೆಳಕು ಚೆಲ್ಲಬೇಕಾಗಿದೆ. ಅಜ್ಞಾನವೆಂಬ ಕತ್ತಲು ದೂರವಾಗಿ ಸುಜ್ಞಾನದ ಬೆಳಕು ಎಲ್ಲೆಡೆ ಹರಡಬೇಕು ಎಂಬುದು ದೀಪಾವಳಿ ಹಬ್ಬದ ಆಶಯವಾಗಿದೆ. ದೀಪದ ಬೆಳಕು ನಂದಿಹೋಗಿರುವ ಅದೆಷ್ಟೋ ಜನರ ದುಃಖ, ಕಣ್ಣೀರು, ಸಂಕಷ್ಟಗಳಿಗೆ ನೆರವಾಗುವ ಮನಸ್ಸು ಎಲ್ಲರದ್ದಾಗಿ, ಒಂದು ದೀಪದಿಂದ ಇನ್ನೊಂದು ದೀಪ ಬೆಳಗುವಂತಾಗಬೇಕು. ದೀಪದ ಬೆಳಕಿನಲ್ಲಿ ಪ್ರೀತಿ, ಕರುಣೆ ಎಲ್ಲೆಡೆ ಹರಡಲಿ; ಜ್ಞಾನದ ಬೆಳಕು ಎಲ್ಲೆಡೆ ಪಸರಿಸಲಿ; ಪ್ರತಿ ಮನೆ – ಮನಗಳನ್ನು ಬೆಳಗುವ ಹಬ್ಬವಾಗಲಿ ದೀಪಾವಳಿ.

– ರಮ್ಯಶ್ರೀ ರೈ
ತೃತೀಯ ಬಿ.ಎಸ್ಸಿ
ಸಂತ ಫಿಲೋಮಿನಾ ಕಾಲೇಜು
ಪುತ್ತೂರು


ಹಣತೆ

ಗಾಢಾಂಧಕಾರವದು ಭುವಿಯ ಆವರಿಸಿರಲು
ಕತ್ತಲಿನಛಾಯೆಯಲಿ ಮಿಥ್ಯೆ ಮೆರೆದಾಡುತಿರಲು
ಸತ್ಯವದು ಕುರುಡಾಗಿ ನೆಲೆ ಕಳೆದು ಅಲೆದಿರಲು
ನಿಶೆ ಸರಿಸೆ ಜ್ವಲಿಸುವುದು   ಜ್ಞಾನಮಯ  ಹಣತೆ…

ಪಡುವಣದ ನೇಸರನು ಮಬ್ಬಾಗಿ ಮರೆಯಾಗೆ
ಚಂದಿರನ ಆಗಮನ  ತಂಪಾಗಿ  ಹಿತವಾಗೆ
ಕತ್ತಲಿನ ಜಾಲದಲಿ ಜಗವೆಲ್ಲ ಸೆರೆಯಾಗೆ
ದಾರಿ ತೋರುವುದು ನಮಗೆ ಮೃತ್ತಿಕೆ ಯ ಹಣತೆ…

ಬರಿದಾದ ಮಡಿಲಿನಲಿ ಸುಖವಿರದ ಮನೆಯಲ್ಲಿ
ವಾತ್ಸಲ್ಯದ ಮಳೆಸುರಿಸೆ ಹಂಬಲಿಪ ಒಡಲಲ್ಲಿ
ತಾಯ್ತನದ ಬಯಕೆಯಲಿ ಕಾಯುತಿಹ ಹೃದಯದಲಿ
ವರವಾಗುವುದು ಮಗುವಿನ ನಗುವೆಂಬ ಹಣತೆ…

ಮೂಳೆ ಪೇಶಿಗಳಿಂದಾದ ನಿರ್ಜೀವ ಪಂಜರಕೆ
ರಕ್ತ ಮಾಂಸಗಳ ಹೊಲಸು ಮೈಲಿಗೆಯ ದೇಹಕ್ಕೆ
ಜಡಭರಿತ ಕಾಯಕ್ಕೆ ಎದೆಗೂಡ ಮಂದಿರಕೆ
ಜೀವವೀಯುವುದೀ ಪ್ರಾಣವೆಂಬ ಹಣತೆ…

ಅಜ್ಞಾನ ,ಅಸ್ಥಿರತೆ ನೆಲೆಗೊಂಡ ಜೀವಕ್ಕೆ
ಭಯದಿಂದ ನರಳುತಿಹ ಅಸಹಾಯ ಮಾನಸಕೆ
ಗೊಂದಲವೂ  ಸಂಶಯವೂ ತುಂಬಿರುವ ಆತ್ಮಕ್ಕೆ
ಅಭಯ ನೀಡಿ ಮುಕ್ಷಿಸುವುದೇ ಪರಮಾತ್ಮನೆಂಬ
ಹಣತೆ…

ರಿವ ಬಿಸಿ ತಾನಾಗಿ ಜಗವೆಲ್ಲ ಬೆಳಕಾಗಿ
ಭಯದಿಂದ ಅಲೆವವರ ದಾರಿ ದೀವಿಗೆಯಾಗಿ
ಸುತ್ತಲಿನ ಕತ್ತಲೆಯ ಭೇದಿಸುವ ಸಲುವಾಗಿ
ನಿತ್ಯ ಬೆಳಗಲಿ  ಹೃದಯದಲಿ ಪ್ರೀತಿಯ ಹಣತೆ….

ಸುಮನ ಶ್ಯಾಮ್
ತಿ/o ಶ್ಯಾಮ ಪಿ
ಕಂಪ ಮನೆ, ಕೆದಿಲ, ಬಂಟ್ವಾಳ


ಹಬ್ಬಗಳಿಗೆ ಪೂರಕವಾದ ಪೌರಾಣಿಕ ಕಥೆ

ದೀಪಾವಳಿ ಹೆಸರೇ ಸೂಚಿಸುವಂತೆ ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಅಂದಕಾರದಿಂದ ಜೀವನ ನಡೆಸುತ್ತಿರುವವರು ಶ್ರಮದಿಂದ ಕೆಲಸ ಮಾಡಿ ಯಶಸ್ವಿಯಾಗುವುದು ದೀಪಾವಳಿ ಹಬ್ಬದ ಸಂಕೇತ. ದೀಪಾವಳಿ ಹಬ್ಬವು ಭಾರತದಲ್ಲಿ ಸಾಂಪ್ರದಾಯಿಕವಾಗಿ ಚಂದ್ರಮಾನ ಪಂಚಾಗವನ್ನು ಅವಲಿಂಬಿಸಿದೆ.

ಶ್ರೀರಾಮ ಚಂದ್ರನು ರಾವಣ ಎಂಬ ಅಹಾಂಕಾರದ ತಂಡತ್ವವನ್ನು ಸಂಹರಿಸಿ ಸೀತಾ ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿ ಬಂದ ಸಮಯ ಎರಡು ದೀಪಾವಳಿಯನ್ನು ಆಚರಿಸುತ್ತಾರೆ. ಲೋಕದ ಅಂದತ್ವವನ್ನು ನಿವಾರಿಸಿ ಬೆಳಕಿನ ಕಡೆಗೆ ಸಾಗುವ ಪ್ರತಿಕಾರವಾಗಿ ದೀಪಾವಳಿಯನ್ನು ಆಚರಿಸುತ್ತಾರೆ. ದೀಪಾವಳಿಯನ್ನು ನವೆಂಬರ್ ರಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ನಮ್ಮ ಹಿಂದೂ ಧರ್ಮವಲ್ಲದೆ ಪ್ರತಿ ಧರ್ಮದವರು ಆಚರಿಸುತ್ತಾರೆ. ಸಿಹಿತಿಂಡಿಗಳು ಹಾಗೂ ಹೊಸ ಬಟ್ಟೆಗಳ ಖರೀದಿಗೆ ದೀಪಾವಳಿಯು ಪ್ರಸಿದ್ಧವಾಗಿದೆ.
ದೀಪಾವಳಿ ಹಬ್ಬಗಳ ರಾಜ ಎಂದೇ ಕರೆಯಲ್ಪಡುತ್ತದೆ. ಭಾರತದ ಅನೇಕ ಕಡೆಗಳಲ್ಲಿ ಈ ದಿನದಂದು ಲಕ್ಷ್ಮೀಪೂಜೆ ಮಾಡಲಾಗುತ್ತದೆ. ಈ ಪೂಜೆ ಮಾಡುವಾಗ ಸಂಪೂರ್ಣ ಕತ್ತಲಿದ್ದು ಅಮವಾಸ್ಯೆಯಾಗಿರುತ್ತದೆ. ಅಂದು ನಾವು ಶ್ರೀ ಮಹಾಲಕ್ಷ್ಮೀ ಪೂಜೆ ಆಚರಿಸುತ್ತೇವೆ. ಆ ದಿನ ರಂಗೋಲಿ ಹಾಕಿ ಹಣತೆಗಳನ್ನು ಹಚ್ಚಿ ಪೂಜೆ ಮಾಡಲಾಗುತ್ತದೆ. ಈ ದಿನವನ್ನು ವ್ಯಾಪಾರಿಗಳು ಹೊಸ ವರ್ಷವೆಂದು ಪರಿಗಣಿಸುತ್ತಾರೆ. ವ್ಯಾಪಾರದಲ್ಲಿ ಲಾಭ ದೊರೆಯುವಂತೆ ಆ ಜಗನ್ಮಾತೆಯನ್ನು ಪೂಜಿಸುತ್ತಾರೆ. ದೀಪಾವಳಿ ಕಾರ್ತಿಕದಂದು ಬರುತ್ತದೆ. ಐದು ದಿನಗಳ ಕಾಲ ಆಚರಿಸುವ ಹಬ್ಬ ದೊಡ್ಡ ಹಬ್ಬ. ಕತ್ತಲನ್ನು ಹೋಗಲಾಡಿಸಿ ಮನೆ ಹಾಗೂ ಮನಸ್ಸನ್ನು ಬೆಳಗುವ ಹಬ್ಬವೇ ದೀಪಾವಳಿ ಹಬ್ಬ. ಆಗಿನ ಕಾಲಕ್ಕು ಈಗಿನ ಕಾಲಕ್ಕೂ ದೀಪಾವಳಿ ಹಬ್ಬಕ್ಕೆ ವ್ಯತ್ಯಾಸ ಇದೆ. ಈಗಿನವರು ಬಹುಪಾಲು ಹಬ್ಬವೆಂದರೆ ಭೋಜನ ಹಾಗೂ ಪಟಾಕಿಯ ಗತ್ತು ಆಗಿದೆ. ಹೀಗೆ ಆಗಬಾರದು ಎಂದು ನಾವು ಇವತ್ತು ತಿಳಿಸಿಕೊಡುತ್ತಾ ಇದೆನೆ.


ಆಗಸ ತುಂಬಾ ಬಳಕಿನ ಚಿತ್ತಾರ, ಎಲ್ಲಿ ನೋಡಿದರು ಡಂ ಡಂ ಪಟಾಕಿಗಳು ಇದರ ಮಧ್ಯ ಪೂಜೆ ಮನಸ್ಕಾರ. ದೀಪಾವಳಿಯಲ್ಲಿ ಮೊದಲು ಬರುವುದು ನೀರು ತುಂಬುವ ಹಬ್ಬ. ಮನೆಗಳ ಪಾತ್ರೆಗಳಲ್ಲಿ ನೀರು ತುಂಬಿಸಿ ಶುದ್ಧತೆಯಿಂದ ಗಂಗಾದೇವಿಯನ್ನು ಆಹ್ವಾನಿಸುತ್ತಾರೆ.

ಮರುದಿನ ಎಣ್ಣೆಸ್ನಾನ. ಎಣ್ಣೆ ಸ್ನಾನಕ್ಕೆ ಹಿಂದಿನ ದಿನ ತುಂಬಿಟ್ಟ ನೀರನೇ ಬಳಸಲಾಗುತ್ತದೆ. ಮಕ್ಕಳಿಗೆ ತಾಯಿ, ಗಂಡನಿಗೆ ಹೆಂಡತಿ ಎಣ್ಣೆ ಹಚ್ಚಿ ನೀರು ಹಾಕುವ ಸಂಪ್ರದಾಯ.

ಮೂರನೇ ದಿನ ಲಕ್ಷ್ಮೀ ಪೂಜೆ ಮಾಡಲಾಗುತ್ತದೆ. ಲಕ್ಷ್ಮೀ ಪೂಜೆಯ ಬಳಿಕ ಬಲಿಪಾಡ್ಯಮಿ ಎಂದು ಆಚರಿಸಲಾಗುತ್ತದೆ. ಆ ದಿನ ಬಲಿ ಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆ ಎಂಬ ನಂಬಿಕೆಯಿದೆ. ಅಂದು ಬಲೀಂದ್ರ ಪೂಜೆಯು ನಡೆಯುತ್ತದೆ. ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣು, ಭಕ್ತ ದಾನ ಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದು ಬಲಿಯಿಂದ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆಯುತ್ತಾನೆ. ಎರಡು ಹೆಜ್ಜೆ ಆಕಾಶ ಭೂಮಿಯನ್ನು ಅಳೆದುಕೊಂಡು ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಮೇಲೆ ಇಟ್ಟು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದು ಬಿಡುತ್ತಾನೆ. ಆಗ ಬಲಿಯ ಭಕ್ತಿಯನ್ನು ಮೆಚ್ಚಿ ಮತ್ತು ದಾನ ಶೂರನನ್ನು ಮೆಚ್ಚಿ ಪ್ರತಿ ವರ್ಷ ಒಂದು ದಿನವನ್ನು ಅವನ ಹೆಸರಲ್ಲಿ ಒಂದು ದಿನ ಆಚರಿಸಲಾಗುತ್ತದೆ. ಆ ದಿನವೇ ಬಲಿಪಾಡ್ಯಮಿ. ಗೋಪೂಜೆ ದೀಪಾವಳಿಯ ಇನ್ನೊಂದು ವಿಶೇಷ. ಆ ದಿನವನ್ನು ಗೋಗಳನ್ನು ಅಲಂಕರಿಸಿ ಹಸುಗಳಿಗೆ ತಿಂಡಿ ನೀಡುತ್ತಾರೆ. ಕತ್ತಲಿನಿಂದ ಬೆಳಕಿನ ಕಡೆಗೆ ಅನ್ನೋ ರೀತಿ ಈ ದೀಪಾವಳಿ.

ಸ್ವಾತಿ ಕೆ.ಆರ್
ಬಡಾವು ಮನೆ
ಕೃಷ್ಣನಗರ ಚಿಕ್ಕಮುಡ್ನೂರು
ವಿವೇಕಾನಂದ ಕಾಲೇಜು


ತುಳಸಿ ಪೂಜೆ

ತುಳಿಸಿ ಹಬ್ಬ ದೀಪಾವಳಿಯಷ್ಟೇ ಸಂಭ್ರಮ ತರೋ ಕಾರ್ತಿಕ ಮಾಸದ ಮತ್ತೊಂದು ಹಬ್ಬ. ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ಬರುವ ಹಬ್ಬವೇ ತುಳಸಿಪೂಜೆ. ಇದು ವಿಷ್ಣು ಹಾಗೂ ತುಳಸಿಯ ಮದುವೆಯನ್ನು ಆಚರಿಸುವ ಹಬ್ಬವಾಗಿದೆ. ಚಾಂದ್ರಮಾನ ಕಾರ್ತಿಕ ಮಾಸ ಶುಕ್ಷಪಕ್ಷದ ೧೨ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು `ಉತ್ಥಾನ ದ್ವಾದಶಿ’ ಎಂದು ಆಚರಿಸಲಾಗುತ್ತದೆ.

ತುಳಿಸಿ ಗಿಡದೊಂದಿಗೆ ಬೆಟ್ಟದ ನೆಲ್ಲಿಕಾಯಿ ಗಿಡವನ್ನೂ ನೆಟ್ಟು ಪೂಜಿಸುವ ರೂಢಿ ಇದೆ. ಈ ದಿನದಂದು ತುಳಸಿ ಕಟ್ಟೆಯನ್ನು ರಂಗೋಲಿ, ಹೂವು ಹಾಗೂ ಮಾವಿನ ಎಲೆಗಳಿಂದ ಅಲಂಕರಿಸಿ ಕೃಷ್ಣನ ಮೂರ್ತಿಯಿರಿಸಿ ಪೂಜಿಸಲಾಗುತ್ತದೆ. ದೀಪಾವಳಿಯಂತೆ ಈ ದಿನವೂ ಪಟಾಕಿಯ ಮಹಾಪೂರವೇ ಜರಗುತ್ತದೆ.

ತುಳಸಿ ಪುರಾಣ:
ಜಲಂಧರನೆಂಬ ರಾಕ್ಷಸನ ಕಿರುಕುಳವನ್ನು ತಾಳಲಾರದೆ ದೇವತೆಗಳು ವಿಷ್ಣುವಿನ ಮೊರೆ ಹೋದರಂತೆ. ಜಲಂಧರನ ಹೆಂಡತಿ ವೃಂದ. ಪತಿವ್ರತೆಯಾದ ವೃಂದಳ ತಪೋಶಕ್ತಿಯಿಂದ ಜಲಂಧರ ನು ಅತ್ಯಂತ ಶಕ್ತಿಶಾಲಿಯಾದ. ಆಗ ವಿಷ್ಣು ಜಲಂಧರನ ವೇಷ ಧರಿಸಿ ವೃಂದಳ ಪಾತಿವ್ರತ್ಯ ಶಕ್ತಿಯನ್ನು ಭಂಗ ಮಾಡಿ, ಜಲಂಧರನನ್ನು ವಧಿಸಿದ. ವಿಷ್ಣುವಿಗೆ ಶಾಪ ನೀಡಿದ ವೃಂದ ತನ್ನ ಪತಿಯ ಶವದೊಂದಿಗೆ ಬೂದಿಯಾದಳು. ಆ ವೃಂದಳೇ ಮುಂದೆ ತುಳಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಹುಟ್ಟಿದಳೆಂದು ಪ್ರತೀತಿ ಇದೆ.

ನಂತರ ಇವಳು ರುಕ್ಮಿಣಿಯಾಗಿ ಜನ್ಮ ಪಡೆದು ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ಮದುವೆಯಾದಳೆಂದು ಪ್ರತೀತಿಯಿದೆ. ಇನ್ನೊಂದು ಪುರಾಣದ ಪ್ರಕಾರ ದೇವತೆಗಳು, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತಕಲಶ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಭಾಷ್ಪಗಳು ಆ ಕಲಶದಲ್ಲಿ ಬಿದ್ದು ಅದರಿಂದ ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಳಸಿ ಎಂದು ಹೆಸರಿಟ್ಟು ಲಕ್ಷ್ಮೀಯೊಂದಿಗೆ ತುಳಸಿಯನ್ನು ವಿಷ್ಣುವು ಮದುವೆಯಾದನು ಎಂಬ ಕಥೆಯಿದೆ.

ವೃತಾಚರಣೆ:
ಈ ದ್ವಾದಶಿಯಲ್ಲಿ ಕ್ಷೀರಾಭಿಶಯನ ವೃತವನ್ನು ಆಚರಿಸುತ್ತಾರೆ. ತುಳಸಿ ಸಹಿತ ಧಾತ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥವಾಗಿ ಈ ವೃತವನ್ನು ಮಾಡುವುದು ಇಂದಿಗೂ ರೂಢಿಯಲ್ಲಿದೆ. ಇದರ ದ್ಯೋತಕವಾಗಿ ಉತ್ಥಾನ ದ್ವಾದಶೀ ದಿವಸ ಬೆಳಗ್ಗೆ ಬೃಂದಾವನದಲ್ಲಿ ಧಾತ್ರಿಯನ್ನು (ಕಾಯಿಸಹಿತ ನೆಲ್ಲಿಗಿಡ) ನೆಟ್ಟು ಅಲ್ಲಿ ಭಗವಂತನನ್ನು ಕೂರಿಸಿ ನೀರಾಜನಾದಿಗಳಿಂದ ಪೂಜಿಸುತ್ತಾರೆ. ರಾತ್ರಿಯಲ್ಲಿ ಬೃಂದಾವನವನ್ನು ಪುಷ್ಪಾದಿಗಳಿಂದಲಂಕರಿಸಿ ಭಗವಂತನನ್ನು ಆ ಬೃಂದಾವನದಲ್ಲಿಟ್ಟು ಉತ್ಸವ ಮಾಡುತ್ತಾರೆ. ಮನೆಗಳಲ್ಲಿ ಬೃಂದಾವನವನ್ನು ಪೂಜಿಸಿ, ದೀಪಗಳಿಂದ ಅಲಂಕರಿಸಿ ಪೂಜಿಸುತ್ತಾರೆ. ರಾತ್ರಿ ಭಗವಂತನಿಗೆ ಕ್ಷೀರಾನ್ನನಿವೇದನ ಒಂದು ವಿಶೇಷ.

ಹೊಸ ನೆಲ್ಲಿಕಾಯಿಯನ್ನು ಈ ದ್ವಾದಶಿಯಿಂದ ಉಪಯೋಗಿಸುತ್ತಾರೆ. ಕ್ಷೀರಾಬ್ಧಿಯಲ್ಲಿ ಶಯನಿಸಿದ ಭಗವಂತ ಈ ದ್ವಾದಶಿಯಲ್ಲಿ ತುಳಸೀ ಆವಾಸವಾದ ಬೃಂದಾವನದಲ್ಲಿ ತುಳಸೀ ಲಕ್ಷ್ಮೀಯರೊಡನೆ ಏಳುವುದರ ಸಂಕೇತವಾಗಿ ಈ ಪೂಜೆ ಇಂದಿಗೂ ನಡೆಯುತ್ತಿದೆ.

ಈ ದಿವಸದಲ್ಲಿ ದೀಪೋತ್ಸವ ವಿಶೇಷ ಪುಣ್ಯಪ್ರದವಾಗಿದೆ. ಈ ದ್ವಾದಶಿಯಲ್ಲಿ ಧಾತ್ರೀ ತುಳಸೀ ಸಹಿತ ಲಕ್ಷ್ಮೀನಾರಾಯಣನನ್ನು ಪೂಜಿಸುವುದರಿಂದ ಸರ್ವ ವಿಧವಾದ ಪಾತಕಗಳು ನಶಿಸುತ್ತವೆ ಎಂದು ವೃತಮಹಾತ್ಮೆ ತಿಳಿಸುತ್ತದೆ.

ಇಷ್ಟೆಲ್ಲಾ ಪೌರಾಣಿಕ ಹಿನ್ನಲೆಯಿರುವ ತುಳಸಿಯಲ್ಲಿ ಸಾಕಷ್ಟು ಔಷಧೀಯ ಗುಣಗಳು ಇವೆ. ಕ್ರಿಮಿಕೀಟಗಳು ಮನೆಯೊಳಗಡೆ ಹೋಗದಂತೆ ತಡೆಯುವ ಶಕ್ತಿ ಈ ಪುಟ್ಟ ಗಿಡಕ್ಕೆ ಇದೆ. ಆ ಕಾರಣಕ್ಕೆ ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿಯೂ ತುಳಸಿ ಕಟ್ಟೆ ಅಥವಾ ಗಿಡವಿಟ್ಟು, ಜನರು ಭಯ ಭಕ್ತಿಯಿಂದ ಪೂಜಿಸುತ್ತಾರೆ.

ತುಳಸಿ ಗಾಳಿಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಲಗಿಸುವ ಶಕ್ತಿ ಇದೆ ಎಂದರೆ, ಅದರಲ್ಲಿ ಎಷ್ಟು ಔಷಧೀಯ ಗುಣಗಳಿದೆ ಎಂಬುದನ್ನು ಅರಿತುಕೊಳ್ಳಬಹುದು. ಇಂಥ ಪೌರಾಣಿಕ, ಆರ್ಯುವೇದದಲ್ಲಿ ಮಹತ್ವ ಪಡೆದುಕೊಂಡಿರುವ ತುಳಸಿ ಪೂಜೆ, ದೇವಿ ಕೃಪೆಗೆ ಪಾತ್ರರಾಗೋಣ.

ಅಶ್ವಿನಿ ಮುಂಡೋಡಿ ಮರ್ಕಂಜ
ಅಂತಿಮ ವರ್ಷದ ಬಿ.ಎಡ್. ವಿದ್ಯಾರ್ಥಿನಿ.


ಹಣತೆ..

ಬೆಳಕಾಗಿ ಬಾ ಭುವಿಗೆ..ದಹಿಸಿ ಕತ್ತಲ ಮುಸುಕು…
ಎನ್ನೆದೆಯ ಅಂಗಳದ…ಕೋಟಿ ಕಲ್ಮಶ ನೂಕಿ…
ಉರಿವ ಬೆಂಕಿಯ ರೂಪ..ಹಣತೆ ಭಕ್ತಿಯ ಪಡೆದು..
ಉಜ್ವಲಿಸುತಲಿದೆಯು…ತಾ ಉರಿದು ಕರಗಿ‌‌…

ನಿಸ್ವಾರ್ಥ ಹಣತೆಯದು..‌.ಪ್ರೀತಿಯಾ ನೆಲೆಯಾಗಿ..
ಬಡವ-ಬಲ್ಲಿದನ ಮನೆ‌ ಬೆಳಗುತಿಹುದು..
ಭಾವವೊಂದೇ ಇಲ್ಲಿ ಶಾಂತಿಯಾ ಸಂದೇಶ..
ಕತ್ತಲಾಗಲು ಬಿಡದು ಪ್ರತಿ ಮನಗಳಲ್ಲು..!

ಅಗ್ನಿ ದಹಿಸುವ ಜ್ವಾಲೆ..ನಿನ್ನ ಹುಟ್ಟಾಗಿ..
ಸತ್ಯವನು ನುಡಿಯಿತದು ನನಗೆ ಗುಟ್ಟಾಗಿ.‌.
‘ನಾ ಶಾಂತಿ ದೂತನು..ಪ್ರೀತಿಯಾ ಮನಕೆ..
ಸುಡುವ ಕಡಲಾಗುವೆನು..ಸೇಡಿನಾ ಗುಡಿಗೆ..’

‘ನಾ ದಾರಿಯಾಗುವೆನು.. ನನ್ನ ನಂಬಿದ ಜೀವಕೆ…
ನಾ ಬೆಳಕ ನೀಡುವೆನು..ನನ್ನ ಸನಿಹದ ಜಗಕೆ..‌.
ನಾ ಸ್ಥೈರ್ಯ ತುಂಬುವೆನು…ದುಃಖ ತುಂಬಿದ ಮನಕೆ..
ಮೌನ ಬೆಳಕಾಗುವೆನು..ನೋವಿರುವ ಹೃದಯಕೆ..’

ಕತ್ತಲೆಯ ಭಯವನ್ನು…ದೂರಕೆ ನಿಲ್ಲಿಸಿ..
ಮಿಟುಕಿಸದೆ ನಿಂತಿದೆ ತಾ ಶಿಥಿಲವಾಗಿ…
ಮುಟ್ಟದಿರು ಗತ್ತಿನಲಿ…ಸುಟ್ಟು ಕಪ್ಪಾಗುವೆ…
ಮುತ್ತಿಡಲು ಕಳಿಸು..ನನ್ನ ಸಂಗಾತಿಯನು…

ತಾ ಉರಿದ ಹಣತೆಯು..ಹತ್ಯೆಯಾಗುವ ಸಮಯ..
ಪ್ರಜ್ವಲಿಸಿ ಕ್ಷಣದೊಳಗೆ…ತಲ್ಲಣಿಸುತಿದೆಯು…
ಮುಕ್ಕೋಟಿ ಮನದೊಳಗೆ‌‌..ಶಕ್ತಿ ಉದಯವ ಬೀರಿ…
ಕರಗಿ ಹೋಗಲು ಬೇಡ..ಮತ್ತೆ ಬೆಳಕಾಗು…
ಓ ಸ್ಪೂರ್ತಿ ಹಣತೆ…

ದೀಕ್ಷಿತಾ ಎ. ಸರಕಾರಿ ಪ್ರ.ದರ್ಜೆ ಕಾಲೇಜು ಉಪ್ಪಿನಂಗಡಿ


ಓ ಹಣತೆಯೇ

ಬಂತು ಬಂತು ದೀಪಾವಳಿ
ಎಲ್ಲೇಲ್ಲೂ ದೀಪಗಳ ಆವಳಿ
ತೊಲಗಲಿ ಆಲಸ್ಯದ ಭಾವನೆ
ಪೂರೈಸಲಿ ಎಲ್ಲರ ಮನೋಕಾಮನೆ
ತುಂಬಲಿ ಜಗದೆಲ್ಲೆಡೆ ಮಿಂಚಿನ ಸಂಚಲನೆ |

ಓ ಹಣತೆಯೆ ಅದೆಷ್ಟು ಶಕ್ತಿ ನಿನಗೆ ?
ಜಗದ ಕತ್ತಲೆಯ ಏಕಾಂಗಿಯಾಗಿ ತಡೆಯಬಲ್ಲೆ
ಕೊಡಬಾರದೇಕೆ ನಿನ್ನ ಸಾಮರ್ಥ್ಯವ ನನಗೆ?
ಅಸೂಯೆಯೇ ನಿನಗೆ, ನಾ ನಿನ್ನ ಮೀರಬಲ್ಲೆ?

ನಿನಗಾರು ಸರಿಸಮಾನರು ಇಲ್ಲಿ?
ನಾಮೇಲು ತಾ ಮೇಲೆಂದು ಹೋರಾಡುವಲ್ಲಿ
ಸದಾ ತುಂಬಿಹುದು ಕಲ್ಮಶ ವಿಶ್ವ ಮನದಲ್ಲಿ
ನೀ ಬಂದು ಬೆಳಗು ಜನ ಮಾನಸದಲ್ಲಿ

ನಿನ್ನ ಸಾಮರ್ಥ್ಯವನ್ನಳೆಯಲು ನಾನ್ಯಾರು?
ನಿನ್ನ ಅರಿವಿಲ್ಲದೆಯೇ ಹೋರಾಡುವರು ಯಾರ್‍ಯಾರು!
ದೀಪವಾಗಿ ಸಾಲು ಸಾಲಿನಲ್ಲಿ ಕಂಗೊಳಿಸು |
ಜೊತೆಯಾಗಿ ಬೀದಿ ಬೀದಿಯಲಿ ಪ್ರಜ್ಚಲಿಸು |
ಎಂದೆಂದೂ ಕತ್ತಲು ಕವಿಯದಂತೆ ಈ ಜಗವ ರಕ್ಷಿಸು|

ಗಾಯತ್ರಿ ಎಸ್.
ಪದವೀಧರ ಸಹಾಯಕಿ
ಶ್ರೀ ರಾಮಕೃಷ್ಣ ಪ್ರೌಡಶಾಲೆ ಪುತ್ತೂರು
ದ.ಕ


ಅಂತರ

೨೦೧೯, ಎಪ್ರಿಲ್, ಕರೋನಾ ಕಾಯಿಲೆಯಿಂದಾಗಿ ಇಡೀ ದೇಶವೇ ಲಾಕ್‌ಡೌನ್ ಆದ ಸಂದರ್ಭ. ನಿರ್ದಿಷ್ಟ ವೇಳೆಯಲ್ಲಿ ಮಾತ್ರ ಅಂಗಡಿ ಮುಂಗಟ್ಟುಗಳು ತೆರೆಯುತ್ತಿದ್ದವು. ಮಾಸ್ಕ್ ಕಡ್ಡಾಯವೆಂದು ನಾನು ಮೆಡಿಕಲ್ ಶಾಪ್‌ಗೆ ಖರೀದಿಗೆ ಹೋಗಿದ್ದೆ. ಆಗಲೇ ಸರತಿ ಸಾಲಿನಲ್ಲಿ ಜನ ನಿಂತಿದ್ದರು. ಅವರಲೊಬ್ಬರು ಸಾಮಾನ್ಯ ವ್ಯಕ್ತಿಯಂತೆ ಕಾಣುತ್ತಿದ್ದರು. ಅವರು ಇನ್ನೊಬ್ಬರಲ್ಲಿ ಮಾತನಾಡುತ್ತಾ ನಾನು ಮಾಸ್ಕ್, ಅಂತರ ಹಾಗೂ ಇನ್ನಿತರ ವಸ್ತುಗಳ ಖರೀದಿಗೆ ಬಂದಿರುವೆನೆಂದು ಹೇಳಿದರು. ಅದಕ್ಕವರು `ಅಂತರ’ ಎಂದರೆ ನಾವು ಈಗ ನಿಂತ ಹಾಗೆ ದೂರ ದೂರ ನಿಂತುಕೊಳ್ಳುವುದು, ದೂರದಿಂದಲೇ ಮಾತನಾಡುವುದು, ಹೀಗೆ ಮಾಡುವುದನ್ನೇ `ಅಂತರ’ ಎನ್ನುವುದು ಎಂದರು.

ಸರತಿ ಸಾಲು ಮುಂದೆ ಸಾಗುತ್ತಿತ್ತು. ಅದೇ ವ್ಯಕ್ತಿ ಅಂಗಡಿಯಾತನಲ್ಲಿ ಮಾಸ್ಕ್ ಮತ್ತು `ಸ್ಟಬಲೈಸರ್’ ಬೇಕು ಎಂದರು. ಸ್ಟೆಬಲೈಸರ್ ನಮ್ಮಲ್ಲಿ ಇಲ್ಲ’ ಇಲೆಕ್ಟ್ರಿಕಲ್ ಶಾಪ್‌ನಲ್ಲಿ ಕೇಳಿ ಎಂದ. ಈ ಗಿರಾಕಿ ಅದಲ್ಲ `ಸ್ಯಾನಿಟರಿವೇರ್’ ಎಂದರು. ಅದೂ ನಮ್ಮಲ್ಲಿ ಸಿಗುವುದಿಲ್ಲ ಎಂದಾಗ, ಕೈಗೆ ಒರೆಸಿಕೊಳ್ಳಲು, ಕೈ ತೊಳೆದುಕೊಳ್ಳಲು ಎಂದರು ಈ ಗಿರಾಕಿ. `ಅದು ಸ್ಯಾನಿಟೈಸರ್’ ಎಂದು ಅಂಗಡಿಯಾತ ಬಾಟ್ಲಿ ತೋರಿಸಿದಾಗ ಇದೇ, ಇದೇ ಬೇಕಾಗಿರುವುದು ಇದನ್ನೇ ಕೊಡಿ ಎಂದರು.

ಪುನಃ ಅಂತರದ ಬಗ್ಗೆ ಇನ್ನೂ ಸಂಶಯವಿದ್ದ ಇದೇ ವ್ಯಕ್ತಿ `ಅಂತರ’ ಕೊಡಿ ಕೇಳಿದಾಗ `ಅಂತರ’ ಎಂಬುದು ಒಂದು ವಸ್ತು ಅಲ್ಲ, ಈ ಶಾಪ್‌ನ ಎದುರು ನೀವೆಲ್ಲಾ ಹೀಗೆ ದೂರದೂರ ನಿಂತಿದ್ದೀರಲ್ಲಾ ಇದನ್ನೇ `ಅಂತರ’ ಎನ್ನುವುದು. ಇದು ರೋಗ ಹರಡದ ಹಾಗೆ `ಇರುವ ವಿಧಾನ’ ಎಂದು ಅಂಗಡಿಯಾತ ಹೇಳಿದಾಗ ಈ ವ್ಯಕ್ತಿ ಸಮಾಧಾನದ ನಿಟ್ಟುಸಿರು ಬಿಟ್ಟರು. ಪಾಪ ಮುಜುಗರದಿಂದ ಅಕ್ಕಪಕ್ಕದವರನ್ನು ನೋಡಿ ಪೆಚ್ಚು ಮುಖ ಮಾಡಿ ಹೊರಟು ಹೋದರು.

ನಾನು ಮಾಸ್ಕ್ ಹಾಗೂ ಮನೆಗೆ ಬೇಕಾದ ಇನ್ನಿತರ ಔಷಧಿ ಸಾಮಾಗ್ರಿಗಳನ್ನು ತೆಗೆದುಕೊಂಡು ಮನೆ ತಲುಪಿದೆ. ಮೆಡಿಕಲ್ ಶಾಪ್‌ನಲ್ಲಿ ನಡೆದ `ಈ ಪ್ರಸಂಗ’ ವನ್ನು ಮನೆಮಂದಿಯಲ್ಲಿ ಹೇಳಿದಾಗ ಎಲ್ಲರೂ ನಗೆಗಡಲಲ್ಲಿ ತೇಲಾಡಿದರು.

ಅವರೆಲ್ಲರ ನಗು ನಿಂತಾಗ `ಯಾರೂ ಎಲ್ಲಾ ವಿಷಯಗಳಲ್ಲೂ ಪರಿಣತರಲ್ಲ’ ಎಷ್ಟೇ ಗೊತ್ತಿದ್ದರೂ ಗೊತ್ತಿರದ `ಅನೇಕ’ ವಿಷಯಗಳು ಇರುತ್ತವೆ ಎಂದು ಮನೆಯವರಿಗೆ ತಿಳಿಹೇಳಿದೆ. ಏನೇ ಆದರೂ ಈ ಲಾಕ್‌ಡೌನ್ ವೇಳೆಯಲ್ಲಿ ನಮ್ಮನ್ನು ನಗಿಸಿದ ಅವರಿಗೆ ಧನ್ಯವಾದಗಳು ಎಂದರು ಮನದಲ್ಲೇ.

ಗೌರೀ ಎಸ್. ಭಟ್
D/o ಬಿ.ಎಸ್. ಭಟ್
ಮುರ ಪುತ್ತೂರು


ಹಾಸ್ಯ ಹನಿಗವನಗಳು

ದೀಪಾವಳಿ-ದಿವಾಳಿ!

ವರ್ಷಂಪ್ರತಿ
ವಿಜೃಂಭಣೆಯಿಂದ
ಆಚರಿಸುತ್ತಿದ್ದೆವು
ದೀಪಾವಳಿ..!
ಈ ಬಾರಿ ಮಾತ್ರ
ಕೊರೋನಾದಿಂದಾಗಿ
ದಿವಾಳಿ..!!

ವ್ಯತ್ಯಾಸ

ದೀಪಾವಳಿ
ಎಂದರೆ
ಮೊದಲೆಲ್ಲ
ಬಹಳವೇ ಬಾಂಧವ್ಯವಿತ್ತು
ಕುಟುಂಬದ ಮಧ್ಯ..!

ಇಂದೂ ಹಾಗೆಯೇ ಇದೆ
ಆದರೆ…
ನಡುವಲ್ಲಿರಬೇಕು ಮದ್ಯ..!!

✍️ಜನಾರ್ದನ ದುರ್ಗ
ನಿಡ್ಪಳ್ಳಿ


ಹರುಷ, ಸಂಭ್ರಮದ ಹಬ್ಬ ದೀಪಾವಳಿ..!

“ಕರ್ಗಲ್ಲು ಕಾಯಿ ಆನಗ|ಉರ್ದು ಮದ್ದೋಲಿ ಆನಗ|ಗೊಡ್ಡೆರ್ಮೆ ಗೋನೆ ಆನಗ|ಎರು ದಡ್ಡೆ ಆನಗ|ತುಂಬೆದಡಿಟು ಕೂಟ ಆನಗ|ನೆಕ್ಕೆದಡಿಟು ಆಟ ಆನಗ|ದಂಬಲ್ಗು ಪಾಪು ಪಾಡ್ನಗ|ಅಲೆಟು ಬೊಲ್ನೆಯಿ ಮುರ್ಕ್ ನಗ|ಗುರ್ಗಂಜಿದ ಕಲೆ ಮಾಜಿನಗ|ಮಂಜೊಲು ಪಕ್ಕಿ ಮೈ ದೆಪ್ಪುನಗ|ಕೊಟ್ರುಜ್ಞ  ಕೊಡಿ ಜಾನಗ|ಆಟಿದ ಅಮಾಸೆ ಸೋಣ ಬರ್ಪಿ ಸಂಕ್ರಾಂದಿ|ಬೊಂತೆಲ್ದ ಮೂಜಿ ದಿನತ ಕೊಡಿ ಪರ್ಬಗು ಬಲಿ ದೆತೊಂದು ಬಲ ಬಲಿಯೇಂದ್ರ ಕೂ… ಕೂ.. ಕೂ… 

ತುಳು ಭಾಷೆಯಲ್ಲಿರುವ ಈ ಪ್ರಚಲಿತ ಸಾಲುಗಳು ತುಳುನಾಡಿನಲ್ಲಿ ಸಂಭ್ರಮದಿಂದ ಆಚರಿಸಲ್ಪಡುವ ದೀಪಾವಳಿ ಬಗ್ಗೆ ತಿಳಿಸುತ್ತದೆ. ತುಳುನಾಡಿನ ಜನರೆಲ್ಲಾ ಸಂಭ್ರಮದಿಂದ ಒಗ್ಗಟ್ಟಾಗಿ ಆಚರಿಸುವ ಹಬ್ಬಗಳಲ್ಲಿ ಬೆಳಕಿನ ಹಬ್ಬ ದೀಪವಳಿಯು ಪ್ರಮುಖ ಮಹತ್ವದ್ದಾಗಿದೆ. 

ತುಳುನಾಡಿನ ಜನರಿಗೆ ಇದು ಮಳೆಗಾಲದ ಕಷ್ಟದ ದಿನಗಳನ್ನು ಕಳೆದು ಕೃಷಿ ಕುಟುಂಬಗಳಿಗೆ ಸಂತಸ ಹರ್ಷವನ್ನು ತುಂಬುವ ದಿನ. ಹಾಗೂ ಪ್ರಾಚೀನದಲ್ಲಿ ತುಳುನಾಡನ್ನು ಆಳಿದ ಬಲಿ ಚಕ್ರವರ್ತಿಯನ್ನು ನೆನಪಿಸುವ ದಿನ.

ತುಳುನಾಡಿನ ಜಾನಪದ ಆಚರಣೆಯು ವಿಶಿಷ್ಟವಾದದು. ತುಳುನಾಡಿನಲ್ಲಿ ದೀಪಾವಳಿ ಆರಂಭವಾಗುವುದೇ ಮನೆತನದಲ್ಲಿ ತೀರಿಕೊಂಡ ಹಿರಿ/ಕಿರಿಯರನ್ನು ನೆನೆಯುವುದಾಗಿದೆ.ಇಂದಿಗೂ ಆ ಪದ್ಧತಿ ನಡೆದು ಬರುತ್ತಿರುವುದು ತುಳುವರ ಶ್ರೇಷ್ಠವಾದ ನಂಬಿಕೆಯ ಪರಂಪರೆಯನ್ನು ತಿಳಿಸುತ್ತದೆ.ಹೀಗೆ ಬಹು ಪುರಾತನವಾದ ಈ ದೀಪಾವಳಿಯು ಬಹಳಷ್ಟು ಪುರಾಣ, ಇತಿಹಾಸ, ದಂತಕಥೆಗಳ ಹಿನ್ನಲೆಯನ್ನು ಹೊಂದಿದೆ. ಭೂಮಿ ತಾಯಿಗೆ ನಮಸ್ಕರಿಸಿ, ಬಲಿ ಚಕ್ರವರ್ತಿಯನ್ನು ನೆನೆದು ತೈಲಾಭ್ಯಂಜನ ಮಾಡಿ, ಗೋವುಗಳನ್ನು ಪೂಜಿಸಿ ಕೊನೆಗೆ ಪಟಾಕಿ ಸಿಡಿಸಿ ಸಂಭ್ರಮಿಸುವ ದೀಪಾವಳಿ ಹಬ್ಬ ಬೆಳಕಿನ ಹಬ್ಬ ಮಾತ್ರವಲ್ಲ,ಅದು ಹಬ್ಬಗಳ ರಾಜ!.

ಆಧುನಿಕತೆಯ ಭರದಲ್ಲಿ ನಮ್ಮ ಸಂಸ್ಕಾರ ಸಂಸ್ಕೃತಿ ಎಲ್ಲ ಬದಲಾಗುತ್ತಿರುವುದು ಮಾತ್ರ ಸತ್ಯ. ಐದು ದಿನಗಳ ಕಾಲ ಸಂಭ್ರಮದಿಂದ ನಡೆಯುತ್ತಿದ್ದ ದೀಪಾವಳಿಯನ್ನು ಈಗ ಕೇವಲ ಒಂದು ದಿನ ಮಾತ್ರ ಪಟಾಕಿ ಸಿಡಿಸಿ ಕೊನೆಗೊಳಿಸುತ್ತೇವೆ. ಮಕ್ಕಳ ಕೈಯಲ್ಲಿ ಹಣತೆ ಇಟ್ಟು ಫೋಟೋ ತೆಗೆದು ಸ್ಪರ್ಧೆಗೆ ಕಳಿಸುವಲ್ಲಿ ಮಾತ್ರ ದೀಪಾವಳಿಯ ಮಹತ್ವ ಇರುವುದು ನಮ್ಮೆಲರ ದೊಡ್ಡ ದುರಂತವಾಗಿದೆ. ಸೀರಿಯಲ್, ಕ್ರಿಕೆಟ್,ಸಿನಿಮಾ ಎಂದು  ಬ್ಯುಸಿಯಾಗಿರುವ ನಮ್ಮ ಆಧುನಿಕ ಜೀವನ ಶೈಲಿಯ ಬೆಳಕಿನಲ್ಲಿ ಮತ್ತೆ ಬೆಳಕಿನ ಬದಲಾವಣೆಯಾಗಲೇಬೇಕು. ಎಲ್ಲರ ಮನೆ ಮನದಲ್ಲು ಉರಿಯುತ್ತಿರುವ ಬಲ್ಬಿನ ಲೈಟ್ ದೀಪದ ದಿವೀಟಿಕೆಯಾಗಿ ಬದಲಾಗಲಿ. ಕೊರೊನ ಎಂಬ ಮಹಾಮಾರಿಯ ಕತ್ತಲು ಆವರಿಸಿಕೊಂಡಿರುವ ಎಲ್ಲರ ಮೊಗದಲ್ಲು ಧೈರ್ಯದ ಬೆಳಕು ಅರಳಲಿ. ಅನ್ಯಾಯ, ಅನಾಚಾರ, ಅತ್ಯಾಚಾರ, ದೌರ್ಜನ್ಯ, ದ್ವೇಷ ತುಂಬಿರುವ ಸಮಾಜದಲ್ಲಿ ಅಜ್ಞಾನದ ಬೆಳಕು ಸರಿದು ಜ್ಞಾನದ ಬೆಳಕು ಹರಿಯಲಿ.ಸ್ನೇಹ ಪ್ರೀತಿಯಿಂದ ಒಗ್ಗಟ್ಟಾಗಿ ಎಲ್ಲರು ದೀಪಾವಳಿಯನ್ನು ಆಚರಿಸುವಂತಗಲಿ.ಆ ಮೂಲಕ ದೀಪಾವಳಿಯ ಸದಾಶಯ ನೆರವೇರಲಿ.

ಶುಭಾಶಯಗಳು. 

ಕೃತಿಕಾ ಸದಾಶಿವ
ದ್ವಿತೀಯ ಪತ್ರಿಕೋದ್ಯಮ ವಿವೇಕಾನಂದ ಕಾಲೇಜ
ಪುತ್ತೂರು 


ಸಂಸಾರ-ಸಂಸ್ಕಾರ

ಪುನರಪಿ ಜನನಂ ಪುನರಪಿ ಮರಣಂ
ಹುಟ್ಟು ಸಾವುಗಳ ನಡುವೆ ಇದು ಎಂತಹ ಬಂಧನಾ
ಬ್ರಹ್ಮಾಂಡದಲಿ ಇರುವ ಈ ನಿಯಮದಾಧಾರ
ಯಾವ ಶಕ್ತಿಯು ತಡೆಯಲಾರದಿದನ

ಹುಟ್ಟೊಂದು ದಡದಲ್ಲಿ, ಸಾವೊಂದು ದಡದಲ್ಲಿ
ಎರಡು ದಡಗಳ ನಡುವೆ ಜೀವನದ ಪಯಣ
ಹುಟ್ಟನ್ನು ಹಾಕುತ್ತ, ದೋಣಿಯನು ನಡೆಸುತ್ತಾ
ಸಂಸಾರ ಸಾಗುತಿದೆ, ದೇವ ನಿನಗೆ ನಮನ

ದೇಹದಾ ಕಣ ಕಣವೂ ಒಂದೊಂದು ವಿಶ್ವ
ಪಂಚಭೂತಗಳಲ್ಲಿ ಲೀನವಾಗುವುದಲ್ಲ
ಹುಟ್ಟುಸಾವುಗಳೆಲ್ಲ ಮಾಯೆಯಲ್ಲವೇ ಹೇಳಿ
ಉಸಿರಾಟ ನಿಂತಾಗ ಭೂಮಿಯಾ ಹಂಗಿಲ್ಲ

ತಂದೆ ತಾಯಿಯ ಪ್ರೀತಿ, ಅಣ್ಣ ತಮ್ಮರ ಪ್ರೀತಿ
ಗಂಡ ಹೆಂಡಿರ ಪ್ರೀತಿ, ಇದುವೆ ಸಂಸಾರ
ನಯವಾದ ಸಂಬಂಧ, ಹೃದಯದಾ ಅನುಬಂಧಾ
ಸಾಕಿದ ಕೈಗಳಿರಲು ಇದುವೆ ಸಂಸಾರ

ಪಕ್ಕದ ಮನೆಯ ಜೊತೆ ಸವಿಯಾದ ಮಾತಿರಲಿ
ನೋವುಂಡ ಮನುಜಗೇ ಸಿಹಿಯಾದ ಕರೆಯಿರಲಿ, ಇದುವೆ ಸಂಸ್ಕಾರ
ಮರೆಯಾದ ಬಂಧುವಿಗೆ ಸಂತಾಪ ದನಿಯಿರಲಿ
ಎಲ್ಲರೊಳಗೊಂದಾಗಿ ಬಾಳುವಾ ಮನವಿರಲಿ ಇದುವೆ ಸಂಸ್ಕಾರ

ಸಂಸ್ಕಾರವಿಲ್ಲದಾ ಸಂಸಾರವಿದ್ದರೆ
ಉಪ್ಪು ಇಲ್ಲದ ಊಟ ರುಚಿಯ ಕೆಡುವಂತೆ
ರೀತಿ ನೀತಿಯ ಬಿಟ್ಟು, ಕಟ್ಟು ಕಟ್ಟಳೆ ಬಿಟ್ಟು
ಬಾಳಿದರೆ ತಂತಿಯಿಲ್ಲದೆ ವೀಣೆ ಮೀಟಿದಂತೆ

ಬಂಧು ಬಳಗದ ಜೊತೆ, ಹಿರಿಯ ಕಿರಿಯರ ಜೊತೆ
ನೀತಿಯಲಿ ಬಾಳುವಾ ಬಿಟ್ಟು ಚಿಂತೆ
ಸಂಸಾರ ಚೆಲುವಿರಲಿ ಸಂಸ್ಕಾರ ನಮಗಿರಲಿ
ಆ ದೇವನಾ ದಯೆಯಿರಲಿ ಬಾಳು ನಿಶ್ಚಿಂತೆ

ಡಾ. ಕೆ.ಯಸ್. ಭಟ್
ಅನುರಾಗ್, ಕಲ್ಲಮ
ಮುಂಡೂರು ಪುತ್ತೂರು


ಪ್ರಕೃತಿ-ವಿಕೃತಿ

ಇದೀಗ ಮನುಜ ಮರೆಯುತಿಹನು ತನ್ನ ಸಂಸ್ಕೃತಿ
ಹಾಗಾಗಿ ಇಂದು ಸಂಸ್ಕೃತಿ  ಕಾಣಸಿಗುವ ಜಾಗ ಹಳೆ ಕೃತಿ
ಇದರಿಂದ ಕೋಪಗೊಂಡಿದ್ದಾಳೆ ನಮ್ಮ ಮಾತೆ ಪ್ರಕೃತಿ
ಹಾಗಾಗಿ ಉಂಟಾಗುತ್ತಿದೆ ಹಲವಾರು ವಿಕೃತಿ
ಇದೀಗ ಬದಲಾಗಿಸಬೇಕಾಗಿದೆ ನಾವು ಜೀವಿಸುವ ರೀತಿ
ಅದರಿಂದ ಸಂತೃಪ್ತಿಯಾಗಬೇಕು ನಮ್ಮ ಮಾತೆ ಪ್ರಕೃತಿ
ಅಂದೇ ಕೊನೆಯಾಗುವುದು ಪ್ರಕೃತಿಯ ವಿಕೃತಿ

ಲಕ್ಷಿತಾ.ಬಿ.ಎಲ್ .ರೈ
ಮದ್ಲ ಮನೆ,ಕಾವು ಅಂಚೆ,ಮಾಡನ್ನೂರು ಗ್ರಾಮ ಪುತ್ತೂರು ತಾಲೂಕು,ದ.ಕ
ಸಂತ ಅಲೋಷಿಯಸ್ ಕಾಲೇಜ್ ಮಂಗಳೂರು


ಮತ್ತೆ ಬಂದಿದೆ ‘ದೀಪಾವಳಿ ಹಬ್ಬ’

ಮಾನವೀಯತೆಯ ದೀಪವು ಮನೆ-ಮನ ಬೆಳಗಲಿ

2020 ಎಂಬ ಮನುಕುಲವನ್ನೇ ತತ್ತರಿಸುವಂತೆ ಮಾಡಿದ ವರ್ಷದ ಕೊನೆಯ ಭಾಗದಲ್ಲಿ ಮತ್ತೆ ಹಬ್ಬಗಳ ರಾಜ ‘ದೀಪಾವಳಿ’ ಹಬ್ಬದ ಸಂಭ್ರಮದ ಆಚರಣೆಯಲ್ಲಿ ನಾವಿದ್ದೇವೆ. ಆಶ್ವಯುಜ ಕೃಷ್ಣ ಚತುರ್ದಶಿಯಿಂದ ಕಾರ್ತಿಕ ಶುಕ್ಲ ಪಾಡ್ಯಮಿವರೆಗೆ ಸಾಲಂಕೃತವಾಗಿ ಬೆಳಗುವ ದೀಪಗಳು ಆಬಾಲವೃದ್ಧರಿಗೂ ಮುದ ನೀಡುವ ‘ದೀಪಾವಳಿ’ ಹಬ್ಬಗಳಲ್ಲೆಲ್ಲಾ ಅತ್ಯಂತ ಜನಪ್ರಿಯ ಮತ್ತು ಎಲ್ಲರೂ ಆಚರಿಸುವ ದೊಡ್ಡ ಹಬ್ಬ. ಭವಿಷ್ಯೋತ್ತರ ಪುರಾಣ ಕಾಲದಲ್ಲಿ ಈ ಹಬ್ಬ ಪ್ರಸಿದ್ಧವಾಗಿತ್ತು. ಭಾರತೀಯರಿಗೆ ಭಾಗ್ಯ ತರುವ ಹಬ್ಬವೆಂದೆ ಈ ದೀಪಾವಳಿಯು ಪ್ರಸಿದ್ದವಾಗಿದೆ. ದೀಪ ಪ್ರಕಾಶತೆ, ಜ್ಞಾನದ ಸಂಕೇತ. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ ಅವಶ್ಯಕವಾಗಿದ್ದು, ಆದ್ದರಿಂದಲೇ ‘ನಹಿ ಜ್ಞಾನೇನ ಸದೃಶಂ'(ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ) ‘ಜ್ಞಾನ ವಿನಃ ಪಶು:'(ಜ್ಞಾನವಿಲ್ಲದವನು ಪಶು) ಎನ್ನಲಾಗುತ್ತದೆ. ದೀಪಾವಳಿ-ಹೆಸರೇ ಹೇಳುವಂತೆ ದೀಪಗಳ ಸಮೂಹ. ಮನೆಯ ತುಂಬ ಪ್ರಣತಿಗಳನ್ನು ಹಚ್ಚಿ ಅದರ ನಗುವಿನಲ್ಲಿ ನಾವು ನಗುತ್ತಾ ಸಂಭ್ರಮಿಸುವುದು. “ದೀಪಯತಿ ಸ್ವಂ ಪರ ಚ ಇತಿ ದೀಪ:”- ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ. ತಮಸೋಮಾ ಜ್ಯೋತಿರ್ಗಮಯ ಎಂಬ ಮಾತಿನ ಅರ್ಥದಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪವಾಗಿದೆ. ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಪ್ರಣತಿಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ… ಎಲ್ಲೆಲ್ಲೂ ಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯನ್ನು ಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ಹಬ್ಬವೇ ದೀಪಾವಳಿ.

ಭಾರತವೆಂಬ ವಿಶಿಷ್ಟ ಸಂಸ್ಕೃತಿಯ ತವರೂರು:
ಭಾರತ ದೇಶ ಒಂದು ವಿಶಿಷ್ಟ ಸಂಸ್ಕೃತಿಯ ತವರೂರು. ಇಲ್ಲಿ ಪ್ರತಿಯೊಬ್ಬರ ಬದುಕು ಸಹಾ ವಿಭಿನ್ನ ಆಚರಣೆಗಳಲ್ಲಿ, ಹಬ್ಬಗಳಲ್ಲಿ ಸಾಗುತ್ತದೆ. ಭಾರತೀಯ ಹಬ್ಬಗಳ ಪದ್ಧತಿ, ಆಚರಣೆಗಳು ಸುಂದರ. ಹಬ್ಬಗಳ ಹೆಸರೇ ಮನುಷ್ಯನನ್ನು ಶ್ರೇಷ್ಠ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಹಬ್ಬಗಳ ಹಿನ್ನೆಲೆಯಲ್ಲಿ ಬಹಳ ಉನ್ನತವಾದ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಅದಕ್ಕೆ ಸರಿಹೊಂದುವಂತೆ ಒಂದು ಪುರಾಣ, ಪುಣ್ಯಕಥೆಯನ್ನು ಬೆಸೆದು ಹಬ್ಬಕ್ಕೆ ಮೆರಗು ಹಾಕಿದ್ದಾರೆ. ಅದರಲ್ಲೂ ದೀಪಾವಳಿ ಹಬ್ಬವೆಂದರೆ ಅತಿಯಾದ ಸಂತಸ. ಬೆಳಗ್ಗಿನ ಅಭ್ಯಂಜನದಿಂದ ಮೊದಲುಗೊಂಡು, ಪೂಜೆ, ವಿಶೇಷ ತಿಂಡಿ, ಊಟ ತಿಂದು, ಸಂಜೆಯ ಹೊತ್ತಿಗೆ ಮನೆಯನ್ನು ದೀಪಗಳಿಂದ ಅಲಂಕೃತಗೊಳಿಸುವವರೆಗೂ ಪ್ರತಿ ಕ್ಷಣವನ್ನು ಆಸ್ವಾದಿಸುತ್ತೇವೆ. ಸಾಮಾನ್ಯವಾಗಿ ಎಲ್ಲಾ ಹಬ್ಬಗಳಿಗೂ ಅಷ್ಟೇ ತೂಕವಿದೆ ಎಂದು ವಾದಿಸಬಹುದಾದರೂ ದೀಪಾವಳಿಗೆ ಕೊಂಚ ಹೆಚ್ಚಿನ ತೂಕ ಎಂದರೆ ಅದನ್ನು ಯಾರೂ ಒಪ್ಪದಿರಲಾರರು. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚುಮೆಚ್ಚು. ಬೆಳಕಿನ ಹಬ್ಬವೆಂದು ಪ್ರಸಿದ್ಧವಾಗಿರುವ ದೀಪಾವಳಿ ಎಲ್ಲಾ ಧರ್ಮದವರು ಆಚರಿಸುವ ಒಂದು ಹಬ್ಬವಾಗಿದೆ. ಜೈನರು, ಸಿಖ್ಖರು, ಹಿಂದು, ಪಾರಸಿ ಎಲ್ಲ ಧರ್ಮದವರು ಆಚರಿಸುವ ಹಬ್ಬ ದೀಪಾವಳಿ. ದೀಪದಿಂದ ದೀಪವ ಹಚ್ಚುವ ಈ ದೀಪಾವಳಿ ಐಕ್ಯತೆಯ ಸಂಕೇತವೂ ಹೌದು. ಈ ಹಬ್ಬದ ಸಂಭ್ರಮಕ್ಕೆ ಜಾತಿ-ಧರ್ಮಗಳ ಭೇದವಿಲ್ಲ, ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ.

ದೀಪಾವಳಿ ಮನೆ-ಮನಗಳನ್ನು ಬೆಸೆಯಲಿ:
ಕಾಲಚಕ್ರ ತಿರುಗಿದಂತೆ, ಆಧುನಿಕತೆಯು ನಮ್ಮನ್ನು ಸೋಕಿದಂತೆ ನಮ್ಮ ಆಚರಣೆಗಳು ಸಹಾ ಬದಲಾಗುತ್ತಿದೆ. ಹಿಂದಿನ ಕಾಲದಲ್ಲಿ ಸಾಕಷ್ಟು ಬಡತನ-ಸಮಸ್ಯೆಗಳು ಇತ್ತು. ಆದರೂ ಹಬ್ಬ-ಹರಿದಿನಗಳ ಸಂಭ್ರಮ ಕಡಿಮೆಯಿರಲಿಲ್ಲ. ಜೊತೆಗೆ ಆರ್ಥಿಕವಾಗಿಯೂ ಹೆಚ್ಚಿನವರು ಸ್ಥಿತಿವಂತರಾಗಿರಲಿಲ್ಲ. ಹಾಗಾಗಿ ತಮ್ಮ ಇತಿಮಿತಿಯಲ್ಲಿ ಹಬ್ಬವನ್ನು ಆಚರಿಸಿ ಸಂತೋಷಪಡುತ್ತಿದ್ದರು. ಅವತ್ತು ಪಟಾಕಿಗಿಂತ ಹಬ್ಬದ ಆಚರಣೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದರಲ್ಲದೆ, ಮನೆ-ಮಂದಿಯೆಲ್ಲ ಒಂದೆಡೆ ಕಲೆತು ಸಂಭ್ರಮಿಸುತ್ತಿದ್ದರು. ಆದರೆ ಇಂದು ಬಡತನ ಎಂಬುದು ಕಡಿಮೆಯಾಗಿದೆ. ಆದರೆ ಮಾನವೀಯ, ಕೌಟುಂಬಿಕ ಸಂಬಂಧಗಳು ನಶಿಸುತ್ತಿರುವ ಈ ಕಂಪ್ಯೂಟರ್ ಯುಗದಲ್ಲಿ ಹಬ್ಬಗಳ ಸಂಭ್ರಮದ ಆಚರಣೆಯ ಸೆಲೆಯು ಬತ್ತಿಹೋಗಿದ್ದು, ಬರೀ ಹೊಸಬಟ್ಟೆ, ಹಬ್ಬದೂಟ ಮತ್ತು ಸುಡುಮದ್ದಿನ ಆರ್ಭಟಕ್ಕೆ ಸೀಮಿತವಾಗುತ್ತಿದೆ. ಮನೆ-ಮನಗಳ ನಡುವೆ ನಿರ್ಮಾಣವಾಗಿರುವ ನಾನು, ನನ್ನವರು ಎಂಬ ಆಜ್ಞಾನದ ಗೋಡೆಯು ಹಬ್ಬದ ಸಂಭ್ರಮವನ್ನು ಪಟಾಕಿಗಷ್ಟೇ ಸೀಮಿತಗೊಳಿಸಿರುವುದು ಆಧುನಿಕ ಕಾಲಘಟ್ಟದ ಜಾಗತಿಕ ಹಳ್ಳಿಯಲ್ಲಿ ಬದುಕುತ್ತಿರುವ ನಾವೆಲ್ಲ ಚಿಂತಿಸಬೇಕಾದ ವಿಷಯವಾಗಿದೆ. ಮನಸ್ಸಿನಲ್ಲಿರುವ ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥವಾಗಿದೆ. ಆದ್ದರಿಂದ ಈ ದೀಪಾವಳಿಯು ಪ್ರತಿಯೊಬ್ಬರ ಮನೆಯಲ್ಲೂ, ಪ್ರತಿಯೊಬ್ಬನ ಮನ-ಮನದಲ್ಲೂ ಮಾನವೀಯತೆ ತುಂಬಿದ ‘ನಿಸ್ವಾರ್ಥ ಪ್ರೀತಿ’ಯೆಂಬ ದೀಪವು ನಿರಂತರವಾಗಿ ಬೆಳೆಗುತಿರಲಿ ಎಂಬುದೇ ದೀಪಾವಳಿ ಹಬ್ಬದ ಸಂದೇಶವಾಗಿದೆ. ಸರ್ವರಿಗೂ ದೀಪಗಳ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು…

ಲಕ್ಷ್ಮೀಕಾಂತ ರೈ ಅನಿಕೂಟೇಲು
ರಾಜ್ಯಶಾಸ್ತ್ರ ಉಪನ್ಯಾಸಕ


                                  ಪಟಾಕಿಯೂ ಮೆಣಸಿನಕಾಯಿ ಬಜ್ಜಿಯೂ

ದೀಪಾವಳಿಯ ಸಂಭ್ರಮ. ನಮ್ಮದು ಕೂಡು ಕುಟುಂಬ. ಬೇರೆ ಬೇರೆ ಕಡೆಗಳಲ್ಲಿರುವ ಕುಟುಂಬದ ಸದಸ್ಯರು ಒಟ್ಟಾಗುವ ಕ್ಷಣ. ಹೆಂಗಸರಿಗೆ ಅಡುಗೆಯ ತಯಾರಿ ಜೊತೆಗೆ ಮಾತುಕತೆಯ ಸಂಭ್ರಮವಾದರೆ ಮಕ್ಕಳಿಗೆ ಸುರು ಸುರು ಕಡ್ಡಿ ಪಟಾಕಿಗಳದ್ದೇ ಗೌಜಿ.  ದೊಡ್ಡ ಕುಟುಂಬವಾದ  ಕಾರಣ  ಅಡುಗೆ ಮನೆಯಲ್ಲಿರುವ ಎರಡೂ ಒಲೆಗಳಲ್ಲಿ ಬೆಂಕಿ ಆರುವುದೇ ಇಲ್ಲ. ಮಳೆ ಸುರಿದದ್ದರಿಂದ ಮಕ್ಕಳ ಪಟಾಕಿಗೆ ಚಳಿ ಹಿಡಿದಿತ್ತು. ಮಕ್ಕಳು ತಮ್ಮ ಪಾಲಿನ ಪಟಾಕಿಯನ್ನು ಬಿಸಿಮಾಡುವುದಕ್ಕೆಂದು ಅಡುಗೆಮನೆಯಲ್ಲಿನ  ಒಲೆಯ ಮೇಲಿರುವ ಚಿಕ್ಕ ಅಟ್ಟದ ಮೇಲೆ ಇಟ್ಟಿದ್ದರು. ಹಬ್ಬಕ್ಕೆಂದು ಮಾಡಿದ ಕುರುಕುರು ತಿಂಡಿ ಮಣಸಿನಕಾಯಿ ಬಜ್ಜಿಯನ್ನು ಅದೇ ಅಟ್ಟದ ಮೇಲೆ ಇಟ್ಟಿದ್ದರು.ಹಬ್ಬ ಬಂತೆಂದರೆ ಮಕ್ಕಳು ಬಂದು ನೋಡುವುದು ಇದೇ ಅಟ್ಟವನ್ನು.  ಸಂಜೆ ಗೋಪೂಜೆಗೆ ಮನೆಯ ಹೆಂಗಸರು ಹೊರಟಾಗ ಅಡುಗೆ ಮನೆಯ ಉಸ್ತುವಾರಿ ನನ್ನದಾಗಿತ್ತು. ಮಕ್ಕಳು ಪಟಾಕಿ ತೆಗೆದುಕೊಳ್ಳಲೆಂದು ಅಡುಗೆಮನೆಗೆ ಬಂದು ಅದೇ  ಅಟ್ಟಕ್ಕೆ ಕೈಹಾಕಿದರು.” ಬಿತ್ತು ಬಿತ್ತು ಒಲೆಗೆ ಬಿತ್ತು”ಎಂದ ಮಕ್ಕಳ ಬೊಬ್ಬೆಗೆ  ಬೆಚ್ಚಿದ ನಾನು ಪಟಾಕಿಯ ಕಟ್ಟು ಒಲೆಗೆ ಬಿತ್ತೆಂದು  ತಿಳಿದು ಓಡಿ ಓಡಿ ಎಂದೆ. ನಾನೂ ಓಡಿದೆ. ಮಕ್ಕಳೂ ಓಡಿದರು.ಓಡಿ  ಓಡಿ ಎಂದಾಗ ಮನೆಯಲ್ಲಿದ್ದವರೂ ಆತಂಕದಿಂದ ಹೊರಗೆ ಓಡಿದರು.ಪಟಾಕಿಯ ಸದ್ದು ಇನ್ನೂ ಏಕೆ ಬರಲಿಲ್ಲವೆಂದು ಯೋಚಿಸುತ್ತಿರುವಾಗ ಮಕ್ಕಳು        ” ಚಿಕ್ಕಮ್ಮಾ ಒಲೆಗೆ ಬಿದ್ದದ್ದು ಪಟಾಕಿಯಲ್ಲ.ಮೆಣಸಿನಕಾಯಿ ಬಜ್ಜಿ” ಎಂದಾಗ ಆತಂಕ ಮಾಯವಾಗಿ ನಗು ಬಂದಿತು.ವಿಷಯ ತಿಳಿದ ಮನೆಮಂದಿಗೂ ನಗು.ದೀಪಾವಳಿ ಬಂತೆಂದರೆ ಪ್ರತಿವರ್ಷವೂ ಈ ಘಟನೆ ಮನೆಮಂದಿಗೆಲ್ಲ ನೆನಪಾಗುತ್ತದೆ.


ಶ್ರೀಮತಿ ಮಲ್ಲಿಕಾ
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ
ರಾಮಕುಂಜ


ಒಂದು ಸನಾತನ ಹಲವು ನಮ್ಮತನ

ನಾತನ ಧರ್ಮ ಅಂದರೆ ಹಿಂದು ಧರ್ಮವೆಂದೇ ಗುರುತಿಸಲಾಗುವ ಆ ಒಂದು ಸಂಸ್ಕೃತಿಯಲ್ಲಿನ ಆಚಾರ ವಿಚಾರಗಳು ಮತ್ತು ವಿಭಿನ್ನತೆಗಳ ಬಗ್ಗೆ ಹೇಳುತ್ತಾ ಹೋದರೆ ಮುಗಿಯದು ಸ್ನೇಹಿತರೇ. ನಾನಿಲ್ಲಿ ದೀಪಾವಳಿ ಹಬ್ಬದ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಮತ್ತು ನಿಮ್ಮ ಸಲಹೆ ಸೂಚನೆಗಳನ್ನೂ ಸ್ವಾಗತಿಸುತ್ತೇನೆ.

ಸ್ನೇಹಿತರೇ ಈ ಹಬ್ಬವೆಂದರೆ ಪ್ರತೀ ಮನೆ ಮನಗಳು ಬೆಳಗುತ್ತವೆ. ಭಾರತದ ಮೂಲ ಸಂಸ್ಕೃತಿಯ ಐತಿಹಾಸ ಹಿನ್ನಲೆಯುಳ್ಳ ಹಬ್ಬವಿದು.. ಸಾಲು ಸಾಲು ಬೆಳಗುವ ದೀಪಗಳ ನೋಡುವುದೇ ಆನಂದ.

ದೀಪಾವಳಿ ಅಥವಾ ದಿವಾಲಿ ಎಂಬುದು ದೀಪ ಅಂದರೆ ಬೆಳಕು, ಆವಳಿ ಅಂದರೆ ಸಾಲು ಇದೇ ದೀಪಾವಳಿಯ ಪದ ಅರ್ಥ. ಇದು ಸಾಮಾನ್ಯವಾಗಿ ಐದು ದಿನಗಳ ಕಾಲ ಅದ್ಭುತವಾಗಿ ನಡೆಯುತ್ತದೆ.

ಹಿಂದೂ ಲೂನಿಸೋಲಾರ್ ತಿಂಗಳ ಕಾರ್ತಿಕಾ (ಅಕ್ಟೋಬರ್ ಮಧ್ಯ ಅಥವಾ ನವೆಂಬರ್ ಮಧ್ಯದಲ್ಲಿ ಆಚರಿಸಲಾಗುತ್ತದೆ. ಹಿಂದೂ ಧರ್ಮದ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದೆಂದು ಗುರುತಿಸಲಾಗುವ ಈ ಹಬ್ಬ ಆಧ್ಯಾತ್ಮಿಕ “ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟದ್ದಕ್ಕಿಂತ ಉತ್ತಮ ಮತ್ತು ಅಜ್ಞಾನದ ಮೇಲಿನ ಜ್ಞಾನ” ವನ್ನು ಸಂಕೇತಿಸುತ್ತದೆ.

ದೀಪಾವಳಿಯಲ್ಲಿ ಹಿಂದೂ ಸಂಸ್ಕೃತಿಯ ಪ್ರಕಾರ ಸಮೃದ್ಧಿಯ ಅದಿದೇವತೆಯಾದ ಲಕ್ಷ್ಮಿ ಮಾತೆಯ ಬಗ್ಗೆ ವಿಶೇಷವಾಗಿ ಪೂಜೆಗಳು ನಡೆಯುತ್ತವೆ. ಸೀತಾ ಮತ್ತು ರಾಮ, ವಿಷ್ಣು, ಕೃಷ್ಣ, ಯಮ, ಯಮಿ, ದುರ್ಗಾ, ಕಾಳಿ, ಧನ್ವಂತರಿ ಅಥವಾ ದೇವಶಿಲ್ಪಿ ವಿಶ್ವಕರ್ಮನ ವಿಚಾರದಲ್ಲೂ ನಮಗೆ ಉಲ್ಲೇಖಗಳು ಸಿಗುತ್ತವೆ. ಆ ಐದು ದಿನಗಳ ಕಾಲ ನಡೆಯುವ ದೀಪಾವಳಿ ಹಬ್ಬದ ವಿಶೇಷತೆಗಳನ್ನು ತಿಳಿಯೋಣ…

ಎಣ್ಣೆ ಸ್ನಾನ:
ಮೊದಲ ದಿನದ ವಿಶೇಷವೇ ಈ ಎಣ್ಣೆ ಸ್ನಾನ ಸಮುದ್ರ ಮಥನ ಕಾಲದಲ್ಲಿ ಧನ್ವಂತರಿಯಾಗಿ ಅವತಾರವೆತ್ತಿದ ವೈಕುಂಠದ ಅಧಿಪತಿ ಮಹಾವಿಷ್ಣುವು ಅಮೃತವನ್ನು ಸಂಗ್ರಹಿಸಿದ ಶುಭಕಾಲವೆಂದು ಪರಿಗಣಿತವಾಗುತ್ತದೆ. ಹಾಗೆ ಸ್ನಾನದ ನೀರನ್ನು ಗಂಗೆಯಾಗಿ ಹಚ್ಚಿಕೊಳ್ಳುವ ಎಣ್ಣೆಯಲ್ಲಿ ಸಮೃದ್ಧಿಯ ಪ್ರತೀಕವಾದ ಧನ ಲಕ್ಷ್ಮೀ ಇರುತ್ತಾಲೆಂಬ ನಂಬಿಕೆಯು ಈ ಸಂಪ್ರದಾಯದಲ್ಲಡಗಿದೆ. ಹಾಗೇ ನರಕಾಸುರ ಎಂಬ ರಕ್ಕಸನನ್ನು ಕೊಂದ ಶ್ರೀಕೃಷ್ಣನು ಪ್ರಾಯಶ್ಚಿತ್ತಕ್ಕಾಗಿ ಎಣ್ಣೆ ಸ್ನಾನ ಮಾಡಿದನು ಎಂಬ ಉಲ್ಲೇಖವೂ ಇದೆ.

ನರಕ ಚತುರ್ದಶಿ:
ಈ ದಿನದ ವಿಶೇಷವೇ ನರಕಾಸುರ, ಅವನನ್ನು ಭಗವಾನ್ ಮಹಾವಿಷ್ಣು ವರಹಾವತಾರದಲ್ಲಿರುವಾಗ ಭೂಮಿಗೆ ಬೀಳುವ ಬೆವರ ಹನಿಯಿಂದ ನರಕಾಸುರ ಜನಿಸುತ್ತಾನೆ. ಭೂದೇವಿ ಅವನಿಗಾಗಿ ವೈಷ್ಣಾವಾಸ್ತ್ರವನ್ನೂ ಕೊಡಿಸಿ ಬಲಿಷ್ಠನನ್ನಾಗಿಸುತ್ತಾಳೆ. ಆದರೆ ಅವನು ಕ್ರೂರಿಯಾಗಿ ಬದುಕಲಾರಂಬಿಸಿ ಎಲ್ಲರಿಗೂ ತೊಂದರೆ ಕೊಡುತ್ತಾನೆ. ಇಂದ್ರನಿಗೂ ಅವನಿಂದ ಅಪಾಯ ಬರುತ್ತದೆ. ಆಗ ಮಾನವ ಅವತಾರದಲ್ಲಿದ್ದ ಶ್ರೀಕೃಷ್ಣ ಅಶ್ವಯುಜ ಕೃಷ್ಣ ಚತುರ್ದಶಿಯ ಕತ್ತಲಿನಲ್ಲಿ ನರಕನನ್ನು ಸಾಯಿಸುತ್ತಾನೆಂದು ಹೇಳಲಾಗಿದೆ.

ಲಕ್ಷ್ಮೀ ಪೂಜೆ:
ಮಹಾವಿಷ್ಣುವಿನ ಮಡದಿಯಾಗಿ ಪೂಜನೀಯಳಾಗಿರುವ ಲಕ್ಷ್ಮೀ ಮಾತೆಯ ಜನನ ದಿನವೆಂದು ಪರಗಣಿಸಲಾಗುತ್ತದೆ ಈ ದಿನವನ್ನು. ಸಮುದ್ರ ಮಥನ ಕಾಲದಲ್ಲಿ ಸಮುದ್ರದಲ್ಲಿ ಜನಿಸುವ ಈ ಮಾತೆಯ ಪುಣ್ಯ ದಿನವೆಂದು ಸಮೃದ್ಧಿಯ ಸಂಪತ್ತಿನ ಅಧಿದೇವತೆಯ ಉಪಚರಿಸುವ ದಿನವಾಗಿ ಗುರುತಿಸಲಾಗಿದೆ. ಅಂದರೆ ಅಂಗಡಿ ಪೂಜೆಯೆಂದು ಸಾಮಾನ್ಯ ಭಾಷೆಯಲ್ಲಿ ಹೇಳಲಾಗುತ್ತದೆ. ಅಮವಾಸ್ಯೆಯ ಆ ರಾತ್ರಿ ಬೆಳಕಿನಿಂದ ಭಕ್ತಿಯಿಂದ ಲಕ್ಷ್ಮೀ ದೇವಿ ಆರಾಧಿಸಲ್ಪಡುವುದು.

ಬಲಿಪಾಡ್ಯಮಿ:
ಅದೇ ಬಲಿ ಚಕ್ರವರ್ತಿ ಗೊತ್ತಲ್ಲ? ದಾನದಲ್ಲಿ ಹೆಸರು ಪಡೆದ ದಾನವ ಅತಿಯಾಸೆಗೆ ದಾಸನಾಗಿ ಹೋಗಿದ್ದ. ಅದರಿಂದ ಅವನ ಚಕ್ರಾಧಿಪತ್ಯದ ವ್ಯತಿರಿಕ್ತ ಪರಿಣಾಮದಿಂದ ದಾನ ಕೇಳಲು ಮಹಾವಿಷ್ಣು ಬರುತ್ತಾನೆ ಅದು ಕೂಡ ಕುಬ್ಜ ಬ್ರಾಹ್ಮಣ ರೂಪದ ವಾಮನನಾಗಿ. ವಾಮನನ ಬೇಡಿಕೆ ಈಡೇರಿಸಲು ತನ್ನೆಲ್ಲವನ್ನು ವಾಮನ ರೂಪಿ ವಿಷ್ಣುವಿಗೆ ಸಮರ್ಪಿಸಿ ಪಾತಾಳಕ್ಕೆ ತಲ್ಲಲ್ಪಡುತ್ತಾನೆ. ಹಾಗೇ ಅವನ ಕೊನೆಯ ಇಚ್ಚೆಯಂತೆ ತನ್ನ ಸಾಮ್ರಾಜ್ಯವಾಗಿದ್ದ ಭೂಲೋಕ ನೋಡಲು ಬರುವ ದಿನವಾಗಿದ್ದು ಅಂದಿನ ದಿನ ಬಲೀಂದ್ರ ಪೂಜೆ ನಡಯುತ್ತದೆ.

ಗೋವು ಪೂಜೆ:
ಅಂದು ಗೋವುಗಳ ಪೂಜೆಗಾಗಿ ಸಿಂಗರಿಸಿದ ಗೋವುಗಳ ವಾಸದ ಜಾಗವು ಪೂಜನೀಯವಾಗುತ್ತದೆ. ಇದರ ಹಿನ್ನಲೆ ಶ್ರೀಕೃಷ್ಣನ ಕಾಲದಲ್ಲಿ ಇಂದ್ರನ ಕೋಪದಿಂದ ಸುರಿದ ಬಾರಿ ಮಳೆಯಿಂದ ಗೋವುಗಳನ್ನು ಸಾಕ್ಷಾತ್ ಭಗವಂತ ಶ್ರೀಕೃಷ್ಣ ತನ್ನ ಕೈಗಳಿಂದ ಗೋವರ್ಧನ ಗಿರಿಯ ಎತ್ತಿ ಕಾಪಾಡಿದ ಅನ್ನಲಾಗುತ್ತದೆ.

ದೀಪಾವಳಿ ಹಬ್ಬ ಅಂದಕೂಡಲೇ ಎಲ್ಲರಲ್ಲೂ ವಿವಿಧ ಆಚಾರ ವಿಚಾರಗಳ ಜೊತೆಗೆ ಸಾಲು ಬೆಳಗುವ ದೀಪಗಳು ಪೂಜೆ ಪ್ರಸಾದಗಳು ಬಣ್ಣದ ರಂಗವಲ್ಲಿಯಿಂದ ತಳಿರು ತೋರಣದ ಅಲಂಕಾರ ಪಟಾಕಿಗಳ ಬಗೆ ಬಗೆ ಶಬ್ದ ಚಿತ್ತಾರಗಳು ಕಣ್ಣ ಮುಂದೆ ಬಂದು ಬಿಡುತ್ತವೆ. ಆದರೆ ಪ್ರತೀ ಹಬ್ಬವೂ ನಮ್ಮ ಮನಸ್ಸಿನ ಶುದ್ಧತೆ ಸತ್ಯ ಧರ್ಮಗಳ ಅನಾವರಣಕ್ಕಿವೆ ಅಂತ ಅದೆಷ್ಟು ಜನ ಯೋಚಿಸುತ್ತಾರೋ. ಪಾರಂಪರಿಸುವುದು ಸುಲಭದ ಮಾತಲ್ಲ. ಧರ್ಮ ಅನ್ನುವ ಪದ ಕೇವಲ ಡಿeಟigioಟಿ ಮಾತ್ರ ಅಲ್ಲ. ಒಂದು ಸಮುದಾಯದ ಅಚರಣೆಯೂ ಅಲ್ಲ. ಮಾನವೀಯ ಮೌಲ್ಯಗಳನ್ನು ಗುರುತಿಸುವ ಅಥವಾ ಗೌರವಿಸುವ ನಿಟ್ಟಿನಲ್ಲಿ ನಾವು ಸನ್ನಡೆತೆಯ ಹಾದಿಯಲ್ಲಿ ನಡೆಯದೇ ಧರ್ಮ ಎಂದು ಹೇಳ ಬಯಸುತ್ತೇನೆ.

ಇಂತಹ ಹಲವಾರು ವಿಚಾರಗಳಿಂದಲೇ ಸನಾತನ ಧರ್ಮದ ಆಚರಣೆಗೆ ಮಹೋನ್ನತವಾದ ಸ್ಥಾನ ನೀಡಲಾಗಿದ್ದು ಹಗಲಿನಷ್ಟೇ ಸತ್ಯ ಮನ್ವಂತರ

ಮನೋಹರ ರೈ ಕೆಳಗಿನಮನೆ
ಬನ್ನೂರು ಪುತ್ತೂರು ದ.ಕ


ಹಣತೆ

ಬಾಳಿನ ಬೆಳಕಿಗಾಗಿ
ಹಚ್ಚೊಣ ಹಣತೆ!
ಬಾಂಧವ್ಯದಿ ಬೆರೆತು
ಬೆಳಗೋಣ ಹಣತೆ!!
ನೋವು ನಲಿವುಗಳ
ಮರೆಸೋ ಈ ಹಣತೆ,
ಪ್ರೀತಿಯಿಂದ ಹಚ್ಚುವ ಹಣತೆ.
ಕಷ್ಟವೆಂಬ ಕತ್ತಲ
ಸರಿಸುವುದಾಗಿರಲಿ ಹಣತೆ!
ರೈತರ ಬಾಳಿನ ಬೆಳಕಾಗಿರಲಿ ಹಣತೆ!!
ದೇಶ ಕಾಯುವ ಯೋಧರ
ಪಾಲಿಗೆ ನೆರವಾಗಿ ಇರಲಿ ಹಣತೆ…
ಪರಿಸರ ಸ್ನೇಹಿಯಾಗಿ ಇರಲಿ
ಈ ಹಣತೆ

ಧರ್ಮ ಧರ್ಮಗಳ ಪ್ರೀತಿಯ ದ್ಯೋತಕವಾಗಿರಲಿ ಹಣತೆ,
ನಮ್ಮ ಸಂಸ್ಕೃತಿಯ
ಪ್ರತೀಕವಾಗಿರಲಿ ಹಣತೆ.
ದೇಶದ ಸುಭೀಕ್ಷೆಯ
ಸಂಕೇತವಾಗಿರಲಿ ಹಣತೆ..
ಸ್ವಾತಂತ್ರ್ಯ ಸಮಾನತೆಯ
ಬೆಳಗುವುದಾಗಿರಲಿ ಹಣತೆ.
ವಿಶ್ವಕ್ಕೆ ಶಾಂತಿ ಸೌಹಾರ್ದತೆ
ಕರುಣಿಸುವುದಾಗಿರಲಿ ಈ ಹಣತೆ.

ನಾರಾಯಣ ಕುಂಬ್ರ
ಲ್ಯಾಬ್ ಸಹಾಯಕರು
ವಿವೇಕಾನಂದ ಕಾಲೇಜು
ನೆಹರು ನಗರ ಪುತ್ತೂರು


ಕರೆ

ಬನ್ನಿರಿ ಬನ್ನಿರಿ
ಗೆಳೆಯರೆ..ಬನ್ನಿರಿ…
ದೀಪದಿಂದ ದೀಪವ
ಬೆಳಗೋಣ ಬನ್ನಿರಿ !!

ದ್ವೇಷ ಮತ್ಸರ ಅಳಿಸಿ
ಎಲ್ಲರೊಂದೇ ಭಾವಿಸಿ
ದೀಪದ ಬೆಳಕಲಿ…
ಸೇರೋಣ ಬನ್ನಿರಿ !!

ನಮ್ಮೆದೆಯಾಳದ
ಪ್ರೀತಿ ಗುಡಿಯಲಿ…
ಶಾಂತಿ ಸೌಹಾರ್ದತೆಗಳ
ದೀಪವ ಬೆಳಗೋಣ ಬನ್ನಿರಿ!!!

ನಾರಾಯಣ ರೈ ಕುಕ್ಕುವಳ್ಳಿ.


ಹಣತೆ

ಹಣತೆಗಿಲ್ಲ ಯಾವುದೇ ಜಾತಿ
ಎಣ್ಣೆಗಿಲ್ಲ ಯಾವುದೇ ಧರ್ಮ
ಅಂಧಕಾರ ಬಿಡಿಸುವ ಜ್ಞಾನದ ಜ್ಯೋತಿ
ಬೆಳಕು ನೀಡುವುದೊಂದೆ ಅದರ ಕರ್ಮ

ಪಲ್ಲವಿ


ಕವನ ಶೀರ್ಷಿಕೆಹಣತೆ

ಓ ಹಣತೆಯೇ..ಶೋಭಿಸು ಬಾ..

ಎಲ್ಲೆಡೆ ಕವಿದಿರುವ ಈ ಅಂಧಕಾರವ ಅಳಿಸಲು
ಮನದಲಿ ಮೂಡಿರುವ ಶಂಕೆಯ ಗೂಡನು ಒಡೆಯಲು..||

ಸಾವು-ನೋವು, ಕಷ್ಟ-ಕಾರ್ಪಣ್ಯಗಳಿಂದ 

ಸೋತುಹೋಗಿರುವ ಲೋಕದಲಿ
ಆಕಾಶದೀಪವಾಗಿ ಪ್ರಜ್ವಲಿಸು ಬಾ…
ಜ್ಞಾನದ ನಂದಾದೀಪವಾಗಿ ಮನೆ-ಮನಗಳ
ನೀ ಬೆಳಗು ಬಾ..||

ಸುತ್ತಲಿನ ಕಗ್ಗತ್ತಲೆಯ ದೂರಗೊಳಿಸಿ 

ಸ್ವಾಭಿಮಾನಿಯಾಗಿ ಪ್ರಕಾಶಿಸು ಬಾ..
ಅಪಜಯವ ಹಿಮ್ಮೆಟ್ಟಿ ಯಶಸ್ಸಿನ ಮೆಟ್ಟಿಲೇರಲು 

ಸಹಕರಿಸು ಬಾ..||

– ಪ್ರಥ್ವಿ ಪುತ್ತೂರು
ಬೆಥನಿ ಶಾಲಾ ಬಳಿ
ವಿದ್ಯಾನಗರ ದರ್ಬೆ, ಪುತ್ತೂರು


ದೀಪಾವಳಿ ಆಚರಣೆ ಹಿಂದಿದೆ ಪುರಾಣದ ಬೆಸುಗೆ

ನಮಗೆ ದೀಪಾವಳಿ ಎಂದಾಕ್ಷಣ ಮನೆ ಮುಂದೆ ಉರಿಯುವ ಹಣತೆ, ಆಕಾಶದಲ್ಲಿ ಚಿಮ್ಮುವ ಬಾಣಬಿರುಸು ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು ಅದಷ್ಟೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಈ ಹಬ್ಬದ ಆಚರಣೆಯ ಹಿಂದೆ ಹಲವು ಪುರಾಣ ಕಾಲದ ಬೆಸುಗೆ ಸಂಪ್ರದಾಯ, ಸಂಸ್ಕೃತಿ ಇತಿಹಾಸವಿದೆ.

ದೀಪಾವಳಿ ಹಬ್ಬದ ಮೊದಲಿಗೆ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವೂ ಇದೆ. ಇದಕ್ಕೆ ಕಾರಣ ಸಮುದ್ರಮಥನದ ಸಮಯದಲ್ಲಿ ಶ್ರೀ ವಿಷ್ಣು ಅಮೃತ ಕಲಶದೊಂದಿಗೆ ಧನ್ವಂತರಿಯಾಗಿ ಅವತಾರವೆತ್ತಿದ. ಈ ದಿನ ತುಂಬುವ ಸ್ನಾನದ ನೀರಿನಲ್ಲಿ ಗಂಗೆಯೂ ಎಣ್ಣೆಯಲ್ಲಿ ಧನಲಕ್ಷ್ಮೀಯೂ ಇರುತ್ತಾಳೆಂಬುದು ನಂಬಿಕೆ. ಈ ನೀರಿನಿಂದ ಸ್ನಾನ ಮಾಡಿದರೆ ಆಯುರಾರೋಗ್ಯ ಆಯುಸ್ಸು ವೃದ್ಧಿಸುವುದೆಂದು ಮತ್ತು ಸಕಲ ಪಾಪಗಳೂ ನಿವಾರಣೆಯಾಗುವುದೆಂಬ ನಂಬಿಕೆಯಿದೆ.

ಜ್ಞಾನದ ಬೆಳಿಕಿನ ಉತ್ಸವ ದೀಪಾವಳಿ ಶುಭತರಲಿ:
ಹಬ್ಬದ ಮೊದಲ ದಿನ ನರಕ ಚತುದರ್ಶಿಯಾಗಿದ್ದು, ನರಕ ಚತುದರ್ಶಿಯ ಕೇಂದ್ರ ಬಿಂದುವೇ ನರಕಾಸುರ ಮಹಾವಿಷ್ಣು ತನ್ನ ವರಹಾವಾತರದಲ್ಲಿದ್ದಾಗ ಅವನ ಶರೀರದಿಂದ ಒಂದು ತೊಟ್ಟು ಬೆವರು ಭೂಮಿಗೆ ಬೀಳಲಾಗಿ ಭೂದೇವಿಯಲ್ಲಿ ನರಕಾಸುರ ಜನಿಸುತ್ತಾನೆ. ಇದರಿಂದಾಗಿ ಅವನಿಗೆ ಭೌಮಸುರ, ಭೂಮಿಪುತ್ರ ಎಂಬ ಹೆಸರುಗಳೂ ಉಂಟು. ಭೂದೇವಿ ವಿಷ್ಣುವನ್ನು ಬೇಡಿ ತನ್ನ ಮಗ ನರಕಾಸುರನಿಗೆ ವೆಷ್ಣವಾಸ್ತ್ರವನ್ನು ವರವಾಗಿ ಕೊಡಿಸುತ್ತಾಳೆ. ಇದರಿಂದ ಬಲಿಷ್ಠನಾದ ನರಕಾಸುರ ಲೋಕಕಂಠಕನಾಗುತ್ತಾನೆ.

ನರಕಾಸುರ ವಧೆ:
ನರಕಾಸುರನ ದುಷ್ಟತನ ತಾಯಿ ಭೂದೇವಿಗೂ ಸಹಿಸದಾಗ ಈ ದುಷ್ಟ ಮಗನನ್ನು ಕೊಂದು ಲೋಕವನ್ನು ಕಾಪಾಡುವಂತೆ ಭೂದೇವಿ ಶ್ರೀ ಕೃಷ್ಣನಿಗೆ ಹೇಳಿದಾಗ, ಅಶ್ವಯುಜ ಕೃಷ್ಣ ಚತುದರ್ಶಿಯ ಕಗ್ಗತ್ತಲಿನಲ್ಲಿ ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸುತ್ತಾನೆ. ಆ ದಿನವೇ ನರಕ ಚತುದರ್ಶಿ. ದುಷ್ಟ ಸಂಹಾರದ ಸಂಕೇತವಾಗಿ ಆ ದಿನ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯದ ನಗೆಯಲ್ಲಿ ಎಲ್ಲರೂ ಖುಷಿಪಡುತ್ತಾರೆ.

ನರಕ ಚತುದರ್ಶಿಯ ಮಾರನೆಯ ದಿನ ದೀಪಾವಳಿ ಅಮವಾಸ್ಯೆ. ಅವತ್ತು ಲಕ್ಷ್ಮಿಪೂಜೆ ಮಾಡಲಾಗುತ್ತದೆ. ಮಹಾವಿಷ್ಣುವಿನ ಪತ್ನಿಯೂ ಆದ ಮಹಾಲಕ್ಷ್ಮಿಯನ್ನು ಆರಾಧಿಸುವ ಹಬ್ಬವೇ ಧನಲಕ್ಷ್ಮೀ ಪೂಜೆ.

ಸಮುದ್ರ ಮಥನದಿಂದ ಲಕ್ಷ್ಮೀ ಉದಯಿಸಿದ ದಿನವೂ ಹೌದು. ಹೀಗಾಗಿ ಉತ್ತರ ಭಾರತೀಯರಿಗೆ ಹೆಚ್ಚಿನ ಸಂಭ್ರಮ. ಅವರೆಲ್ಲಾ ವ್ಯಾಪಾರಿಗಳಿಗೆ ದೀಪ ಬೆಳಗಿ ಧನಲಕ್ಷ್ಮೀ ಬರುವ ಭಾಗ್ಯದ ದಿನವೇ ಆಗಿದೆ. ಅವರಿಗೆ ವ್ಯಾಪಾರ ವಹಿವಾಟಿನ ವಾಣಿಜ್ಯದ ನೂತನ ವರ್ಷ ಉದಯಿಸುವುದೇ ಈ ದಿನ. ಹಾಗಾಗಿ ಅತ್ಯಂತ ಸಂತೋಷದಿಂದ ಕಾರ್ತಿಕ ಮಾಸದ ಆರಂಭದ ಈ ಅಮವಾಸ್ಯೆಯ ಮಹಾರಾತ್ರಿಯಲ್ಲಿ ಮಹಾಲಕ್ಷ್ಮಿಗೆ ಮಹದಾನಂದದಿಂದ ದೀಪಾರಾಧನೆಯೊಡನೆ ಲಕ್ಷ್ಮೀಪೂಜೆ ಮಾಡುತ್ತಾರೆ.

ಹಬ್ಬದಲ್ಲಿ ಮೂರನೆಯ ದಿನವನ್ನು ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತಿದೆ. ಅವತ್ತು ಬಲಿಚಕ್ರವರ್ತಿ ಭೂಲೋಕ ಸಂಚಾರ ಬರುತ್ತಾನೆ ಎಂಬ ನಂಬಿಕೆಯೂ ಇದೆ ಅಂದು ಬಲೀಂದ್ರ ಪೂಜೆಯೂ ನಡೆಯುತ್ತದೆ. ಪೌರಣಿಕ ಕಥೆಯ ಪ್ರಕಾರ ಮಹಾವಿಷ್ಣು ಭಕ್ತ ದಾನಶೂರ, ದೈತ್ಯರಾಜ, ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು ಬಲಿಯಿಂದ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆದರು.

ಗೋವರ್ಧನಗಿರಿ ಎತ್ತಿದ ದಿನ:
ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲಪಾಡ್ಯಮಿ ಶ್ರೀ ಕೃಷ್ಣನು ಇಂದ್ರನನ್ನು ಸೋಲಿಸಿದ ದಿನವೂ ಹೌದು ಇಂದ್ರನ ದಾಳಿಯಿಂದ ತನ್ನ ಗೋ ಸಮೂಹವನ್ನು ರಕ್ಷಿಸಲು ಶ್ರೀಕೃಷ್ಣನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಅಂದು ಗೋಪೂಜೆ ಮತ್ತು ಗೋವರ್ಧನ ಪೂಜೆಯನ್ನು ಆಚರಿಸಲಾಗು ತ್ತದೆ. ಕೆಲವೆಡೆ ರೈತರು ಇದನ್ನು ಹಟ್ಟಿಹಬ್ಬವೆಂದು ಆಚರಿಸುತ್ತಾರೆ.

ಈ ವರ್ಷದ ದೀಪಾವಳಿ ಹಬ್ಬವು ಎಲ್ಲರಿಗೂ ಶುಭತರಲಿ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಪೃತ್ವಿ ಎಂ.ಆರ್
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು
ಪುತ್ತೂರು


ಪ್ರಕೃತಿ-ವಿಕೃತಿ

ಕಾಡು ತಾನಾಗಿ ಬೆಳೆದು
ನಾಡಿಗೆ ಆಗಿದೆ `ಸಂಪತ್ತು’

ಕಾಡಿನ ಸಂಪನ್ಮೂಲವನ್ನೆಲ್ಲಾ
ಸೂರೆಗೊಂಡು ಕಾಡಿಗೆ `ವಿಪತ್ತು’

ಕಾರಣ ಮಾನವನ ಅತಿಯಾಸೆ
ದುರಾಸೆ, ಹಣದ “ಮೋಹ”

ಇದರಿಂದಲೇ ಬಂದಿದೆ ಇಂದು
ವಿನಾಶ, ಪ್ರಕೃತಿ “ವಿಕೋಪ”

ಭೂಕಂಪ, ನೆರೆ-ಪ್ರವಾಹ
ಭೂ ಕುಸಿತ ವಿವಿಧ `ರೂಪ’

ಪಿ.ಎಸ್. ನಾರಾಯಣ ಭಟ್
ಕೊಲತೋಟ


ಹಣತೆ

ಮತ್ತೆ ಬಂದಿದೆ ಬೆಳಕಿನ ಹಬ್ಬ ದೀಪಾವಳಿ..
ಹೊತ್ತು ತಂದಿದೆ ಮನದಲ್ಲಿ ಸಂತೋಷದ ಹಾವಳಿ..
ಬಣ್ಣ ಬಣ್ಣದ ಗೂಡು ದೀಪಗಳು
ಕಣ್ಮನ ಸೆಳೆಯುವ ದೀಪದ ಸಾಲುಗಳು..

ದೀಪಾವಳಿಯ ಅಭ್ಯಂಜನ ದನಕರುಗಳಿಗಿಂದು
ವಿಶೇಷ ದಿನ..
ಎಲ್ಲಿ ಕಂಡರೂ ದೀಪಗಳದ್ದೇ ಸಾಲು..
ಪಟಾಕಿ ಹಚ್ಚಲು ತರುಣರ ದಾಪುಗಾಲು.

ಅಜ್ಞಾನವೆಂಬ ಕತ್ತಲೆಯ ಕಳಚಿ..
ಜ್ಞಾನವೆಂಬ ಪ್ರೀತಿಯ ದೀಪವ ಹಚ್ಚಿ.
ಕಷ್ಟ ಕಾರ್ಪಣ್ಯಗಳ ಮರೆತು..
ಕಳೆಯುವ ಈ ದಿನವ ಸಂತೋಷದಿಂದ ಕುಳಿತು.

ಮನೆ ಮನಗಳಿಗೆ ತೇಜತೆ ತುಂಬುವ ಹಬ್ಬ..
ಸಾಮರಸ್ಯವ ಬೆಸೆಯುವ ಹಬ್ಬ ಸಂಭ್ರಮ ಸಡಗರದ ದೀಪಾವಳಿ..
ಎಲ್ಲರಿಗೂ ಪ್ರೀತಿಯಿಂದ ಶುಭವಾಗಲಿ…

ರತನ್ ಪೂಜಾರಿ ದೇರ್ಲ


~ ಗಡ್ದ್-ಗೌಜಿದ ಮೂಜಿದಿನ ~

ತುಡರ ಪರ್ಬ ಕುಡೊರ ಬೈದ್ಂಡ್
ಮಟ್ಟೆಲ್ಗ್ ಬೊಲ್ಪು ದಿಂಜಾವೆರೆ…
ಎಂಚ ಗೌಜಿಡ್ ನಲಿಪೊಡು ಯಾನ್
ಕತ್ತಲೆದ ಅದೆತ ಬರೀಟ್ ಕುಲ್ಲುದು ।

ಬರೀತಿಲ್ಲಲ್ ತಮೆಲೊಂದುಂಡುಗೆ
ತೆನಸ್ – ವನಸ್ ದಾ ಅಟ್ಟನೇ…
ಮಜ್ಜಿ ದಿಕ್ಕೆಲ್ ಗರಿದ್ ಪೋತುಂಡು
ಪರ್ಬ ದೋಸೆಲಾ ಇತ್ತೆ ಕನನೇ.. ॥

ಬತ್ತಿ ಬಿನ್ನೆರೆಗ್ ಪೊಸ ತುತ್ತೈತ
ಕಟ್ಟ್ ಪಾಡುಲು ಈ ನಾಡ್ ಡ್
ಮಾನ ಮುಚ್ಯರೆ ನಾಡೊಂದುಲ್ಲೆ
ಒಂತೆನೇ ಪರಿದಿತ್ತಿ ಕುಂಟುನು ।

ಬಂಗಾರ್ದ ಸರೊ ದೇವೆರೆಗಾದ್
ಪರಕೆ ಪಂತೆರ್ ಬರಿತಿಲ್ಲದಕುಲು ;
ಗುಂಡದುಲಯಿದಾ ಸಕ್ತಿಗ್ಲಾ ತೋಜುಜೇ
ಪೂ-ಪುರ್ಪಗೇ ಗತಿದಾಂತಿನಕುಲೆಂಕುಲು ॥

ಭಕ್ತಿದ ನಿನೆ ಪಾಡ್ದ್ ಪೊತ್ತಾಬೆ ,
ಬರೀ ಪರ್ಬದ ನೆಪಕ್ಕಾದ್ ಅತ್ತ್
ಇಂಬು ತಿಕ್ಕು ಯಾನ್ ನಂಬಿನೈಕ್
ಇನಿಕ್ಕೇ ಇತ್ತೆನೇ ಪಂಡ್ ದತ್ತ್ ।

ಮಾತೆರೆ ಗಡ್ದ್-ಗೌಜಿ ಮೂಜಿದಿನನೇ
ಜೀವನ ಪರ್ಬ ಪನ್ಪಿನ ಪುದರ್ ಡ್
ಎಲ್ಯ – ಮಲ್ಲಾಯೆ , ಪಟ್ಟ ಗತ್ತುಲು
ದಿಂಜಿ, ನಂಜಿ ಬಂಜಿಡ್ದ್ ಪೋವಡ್ ॥

 ಅನಂತವಾಗಿ ಬೆಳಗಲಿ ನಿರಂತರ ದೀಪಾವಳಿ 

         ನನ್ನ ಮನಸ್ಸನ್ನು ಪ್ರಶಾಂತತೆಯ ಲಯದಲ್ಲಿ ಹರಿಯ ಬಿಟ್ಟು , ನಿಟ್ಟುಸಿರು ಬಿಟ್ಟೆ . ಆ ಹೊತ್ತಿಗಾಗಲೇ ಒಂದು ಸಣ್ಣ ಪ್ರಶ್ನೆ ಹುಳುವಿನಂತೆ ಕೊರಯತೊಡಗಿತು . 

ಕೇಳಿಯೇ ಬಿಟ್ಟೆ !!

” ಓ , ಅಪ್ಪಾ..! ಅಮ್ಮಾ….!!

  ಎಲ್ಲದರಲ್ಲೂ ಪ್ರಾಮುಖ್ಯವಾದುದನ್ನು , ಪ್ರಾಶಸ್ತ್ಯವಾದುದನ್ನು ,ಉನ್ನತವಾಗಿಹುದನ್ನೇ ಹುಡುಕುವ ಮಾನುಷರು ,’ಹಬ್ಬಗಳಿಗೆ ರಾಜ’ ಯಾವುದೆಂದು ಯಾರೂ ಚಿಂತಿಸಿಲ್ಲವೇ ? ಹುಡುಕಲಿಲ್ಲವೇ ?” 

       ಮುಗುಳ್ನಕ್ಕ ಎನ್ನ ತಂದೆ “ನಿನಗಿಂತ ಜಾಣರು ಈ ಹಿಂದೆ ಅದೆಷ್ಟೋ ಜನ ಜನಿಸಿದ್ದಾರೆ ” ಎಂದರು .

ಎಲ್ಲೋ ಎಡವಟ್ಟಾಗಿದೆ ಅಂದುಕೊಂಡು , ಸಪ್ಪೆಮೋರೆಯೊಂದಿಗೆ ಕಣ್ಸನ್ನೆಯಲ್ಲಿ ತಾಯಿಯ ಬಳಿ “ಏನಮ್ಮಾ” ಎಂದು ಕೇಳಿದೆ .

“ಹಬ್ಬಗಳ ರಾಜ ದೀಪಾವಳಿ ” ಎಂದರು .

ನಮ್ಮ ತುಳುನಾಡಿನ ನೆಚ್ಚಿನ ಮಾರ್ನೆಮಿ ( ನವರಾತ್ರಿ ) ಯ ನಂತರ ಜಗಮಗಿಸುತ ಬರುವ ಹಬ್ಬವೇ ದೀಪಗಳ ಸಾಲು ಸಾಲು ಹಬ್ಬ ದೀಪಾವಳಿ . ಈ ಹಬ್ಬದ ಹೆಸರು ಕೇಳಿದಾಕ್ಷಣ ಎಲ್ಲಾ ಮಕ್ಕಳ ಬಾಯಿಯಲ್ಲಿ ನೀರೂರುವುದಂತು ಸಹಜ . ಏಕೆಂದರೆ ಈ ಹಬ್ಬದ ಸಮಯದ ಉದ್ದಿನ ದೋಸೆ ಹಾಗು ಮೆಣಸಿನ ಗಟ್ಟಿ ಮರೆಯಲಸದಲ . ಇದು ದೀಪಾವಳಿಯ ವಿಶೇಷವೂ ಹೌದು . 

‘ಹಬ್ಬವಿಲ್ಲದ ಮನೆಯಿಲ್ಲ , ಹುಬ್ಬಿಲ್ಲದ ಹಣೆಯಿಲ್ಲ’ ಎಂಬ ನುಡಿ ಹಬ್ಬ ಹರಿದಿನದ ಪ್ರಾಶಸ್ತ್ಯವನ್ನು ಎತ್ತಿ ಹಿಡಿಯುತ್ತದೆ . ‘ಹಬ್ಬ’ ಎಂಬ ಹೆಸರೇ ಸಂಭ್ರಮವನ್ನು ಸೃಷ್ಟಿಸುವ ಶಕ್ತಿ ಉಳ್ಳದ್ದು .ಆದರೆ ಖೇದಕದ ಸಂಗತಿಯೆಂದರೆ , ಬಹುತೇಕರು ಹಬ್ಬದ ಹಿನ್ನಲೆಯನ್ನು , ಆಚರಣೆಯನ್ನು – ಸಂಪ್ರದಾಯವನ್ನು ತಿಳಿದುಕೊಳ್ಳುವುದರಲ್ಲಿ ವಿಫಲರಾಗುತ್ತಾರೆ . ಏಕೆಂದರೆ ಕೆಲವೊಮ್ಮೆ ಹಿರಿಯರಿಂದ ಅಸ್ಪಷ್ಟ ಉತ್ತರ ದೊರಕುವುದು ಸಹಜ . ದೊರಕಿದರೂ ನೀರಾಸದಾಯಕರಾಗದೆ , ಸ್ಪಷ್ಟತೆಯತ್ತ ಯಾನ ಬೆಳೆಸುತ್ತಲೇ ಇರಬೇಕು . ಬಹುಜನರಿಗೆ ಹಬ್ಬಗಳ ಹಿನ್ನೆಲೆ ಅರಿವಿರುವುದಿಲ್ಲ . ಯಾರ ಬಳಿ ಕೇಳುತ್ತೇವೆಯೋ ಅವರು ಈ ರೀತಿ ಉತ್ತರಿಸಬಹುದು – “ನಮ್ಮ ಹಿರಿಯರು ಆಚರಿಸುತ್ತಿದ್ದರು ,ಹಾಗಾಗಿ ನಾವು ಆಚರಿಸುತ್ತಿರುವೆವು…ಹಾಗಂತೆ ಹೀಗಂತೆ” ಎಂದು ಅಂತೆ – ಕಂತೆಗಳ ಪೊಳ್ಳು , ನಿರಾಸಾದಾಯಕತೆಯ ಕಡೆ ಮನವನ್ನೊಯ್ಯುತ್ತಾರೆ . 

ನಮ್ಮದು ಹಳ್ಳಿ ಪ್ರದೇಶ . ಕೆಲವೊಮ್ಮೆ ಅಗತ್ಯತೆಯ ವಸ್ತು ತರಲು ಪೇಟೆಯ ಕಡೆಗೆ ತೆರಳಬೇಕಾದುದು ಅನಿವಾರ್ಯ . ಆ ದಿನ ತಂದೆಯೊಂದಿಗೆ ನಾನೂ ಹೋಗಿದ್ದೆ . 

“ಕೆಲವೊಂದು ಹಣತೆ ಇಲಿಗಳ ಉಪಟಳದಿಂದ ಹಾಳಾಗಿದೆ ! ಹೊಸದು ತನ್ನಿ” ಎಂದು  ತಾಯಿ ಕರೆಮಾಡಿ ಹೇಳಿದರು . ಅಂತೆಯೇ ಒಂದಷ್ಟು ಹೊಸ ಹಣತೆ ತೆಗೆದುಕೊಂಡು ಬಂದೆವು . 

“ಅಪ್ಪಾ…ನೀವು ಸಣ್ಣವರಿರುವಾಗ ಇಂತಹ ಹಣತೆ ದೊರಕುತ್ತಿತ್ತಾ ?”  ಎಂದು ಆ ಸಣ್ಣ , ಸುಂದರ ಬಳ್ಳಿ ಬಿಡಿಸಿದ ಚಿತ್ತಾರದ , ನಯವಾದ ಹಣತೆಯನ್ನು ಸವರುತ್ತಾ ಕೇಳಿದೆ . 

“ನಮ್ಮ ಬಾಲ್ಯದ ದಿನಗಳಲ್ಲಿ ಅಡಕೆ ಸಿಪ್ಪೆ ಸುಳಿದ ನಂತರ ಭಾಗವಾಗಿ ಉಳಿದ ಆ ಸಿಪ್ಪೆಗೆ ಎಣ್ಣೆ ಹೊಯ್ದು ಹಣತೆ ಮಾಡುತ್ತಿದ್ದೆವು .” ಎಂದರು . ನೈಸರ್ಗದ ಸೊಬಗಿನಲೇ ಸಂಭ್ರಮಿಸಿದ ಪೂರ್ವಜರು , ಅವರ ಕಟ್ಟುಪಾಡು ಸೋಜಿಗವೆನಿಸಿತು  ಬಹಳ ಅದೃಷ್ಟವಂತರು – ಸೌಭಾಗ್ಯವಂತರು ಪೂರ್ವಜರು ಎಂದುಕೊಂಡು ಒಂದಷ್ಟು ವಿಷಯವನ್ನು ಸಂಗ್ರಹಿಸಿದೆ . ನರಕ ಚತುರ್ದಶಿ – ಅಮವಾಸ್ಯೆ –  ಬಲಿಪಾಡ್ಯ ಸಾಮಾನ್ಯವಾಗಿ ಹೀಗೆ ಮೂರುದಿನ ದೀಪಾವಳಿಯನ್ನು ಆಚರಿಸಲಾಗುತ್ತದೆ .

ನರಕ ಚತುರ್ದಶಿಯಿಂದ ದೀಪಾವಳಿ ಆರಂಭ . ದೇವಾಲಯ – ಜಿನಾಲಯ ,  ಮನೆ – ಮಠಗಳಲೆಲ್ಲಾ ದೀಪಗಳ ಹಬ್ಬ ತಲೆದೋರುತ್ತದೆ . ನರಕ ಚತುರ್ದಶಿ ಎಂದಾಗ ನೆನಪಾಗುವುದು ನರಕಾಸುರನ ವಧೆ . ದೇವಾನು ದೇವತೆಗಳಿಗೆ ಕಂಟಕರೂಪಿಯಾಗಿದ್ದವನು ಈ ನರಕಾಸುರ . ದೇವರತಿಯರನ್ನು ಕದ್ದೊಯ್ದಿದ್ದ  , ಬ್ರಹ್ಮನ ಮಗಳಾದ ಚತುರ್ದಶಿಯನ್ನು ಅಪಹರಿಸಿದ್ದ . ಇವಕ್ಕೆಲ್ಲದಕ್ಕೂ ಅಂತ್ಯ ಹಾಡಲು ಧರೆಗೆ ಅವತರಿಸಿದವನೇ ಶ್ರೀ ಕೃಷ್ಣ ಪರಮಾತ್ಮ . ಅಶ್ವೀಜ ಮಾಸದ ಚತುರ್ದಶಿಯಂದು ನರಕಾಸುರನನ್ನು , ಶ್ರೀ ಕೃಷ್ಣ ಸಂಹರಿಸಿದ್ದರಿಂದ , ಆತನನ್ನು ನೆನಪಿಡುವ ಯಾ ಸ್ಮರಿಸುವ ನಿಟ್ಟಿನಲ್ಲಿ ನರಕ ಚತುರ್ದಶಿಯನ್ನು ಆಚರಿಸಲಾಗುತ್ತಿದೆ ಎಂಬ ವಾಡಿಕೆ ರೂಢಿಯಲ್ಲಿದೆ . ಬಹುಶಃ ದುಷ್ಟರನ್ನು ಸಂಹರಿಸಲು ಭಗವಂತನೇ ಧರೆಗಿಳಿದು ಬರುತ್ತಾನೆ ಎಂಬ ಪ್ರಜ್ಞೆ ಮನುಜಕುಲದಿ ನೆನಪಿಸಲೋಸುಗವಾಗಿ ನರಕ ಚತುರ್ದಶಿ ಆರಂಭಿಸಲಾಯಿತೇನೋ !! 

ಅಭ್ಯಂಗ ಸ್ನಾನ ( ಎಣ್ಣೆ ಸ್ನಾನ ) ಈ ದಿನದ ವಿಶೇಷ . ಹಾಗು ಜಿನ ಚೈತ್ಯಾಲಯಗಳಲ್ಲಿ ಜಿನ ಭಗವಂತನಿಗೆ ಎಣ್ಣೆ ಮಜ್ಜನ ಮಾಡಲಾಗುತ್ತದೆ . 

ಅಮವಾಸ್ಯೆಯ ದಿನ , ಇದು ದೀಪಾವಳಿ ಹಬ್ಬದ ಎರಡನೇ ದಿನ . ಜೈನ ಧರ್ಮದ ಪ್ರಕಾರ ವರ್ತಮಾನ ಕಾಲದ ಇಪ್ಪತ್ತನಾಲ್ಕನೇ ತೀರ್ಥಂಕರನಾದ ಭಗವಾನ್ ಶ್ರೀ ಮಹಾವೀರ ಸ್ವಾಮಿ ಮೋಕ್ಷ ಪಡೆದಿದ್ದು ಈ ದೀವಳಿಗೆಯ ಬೆಳಕಿನಲ್ಲಿ ಎಂಬ ಪ್ರತೀತಿ ಇದೆ . ಹಾಗಾಗಿ ಜೈನ ಧರ್ಮೀಯರು ಈ ದಿನ ಶುಚಿರ್ಭೂತರಾಗಿ ಜಿನಾಲಯ ( ಬಸದಿ ) ಗೆ ತೆರಳಿ ‘ಅರ್ಘ್ಯ ಎತ್ತುವ’ ಪದ್ದತಿ ರೂಡಿಯಲ್ಲಿದೆ . ಅಂದರೆ ಹರಿವಾಣದಲ್ಲಿ ಅಕ್ಕಿ ,ಮೂವತ್ತು ಅಡಿಕೆ , ಮೂವತ್ತು ವೀಳ್ಯದೆಲೆ , ಮೂವತ್ತು ಗೊಂಡೆ ಹೂವು , ಮಧ್ಯದಲ್ಲಿ ಸೀಯಾಳ ಹಾಗು ಅದರ ಮೇಲೊಂದು ಸೊಡರನ್ನಿಟ್ಟು ಆರತಿ ಬೆಳಗುವುದು . ಈ ವಿಧಿ – ವಿಧಾನ ಬ್ರಾಹ್ಮಿ ಮೂರ್ತದಲ್ಲಿ ಜಿನಭಗವಂತನಿಗೆ ನೆರವೇರುತ್ತದೆ . ಮರುದಿನದ ಪೂಜೆಗಾಗಿ ಮನೆಗಳಲ್ಲಿ ಬಲೀಂದ್ರನಿಗೆ ಮರ ಹಾಕುವ ಕ್ರಮವೂ ತುಳುನಾಡಿನಲ್ಲಿ ಬಹುತೇಕ ಕಡೆ ಈಗಲೂ ಚಾಲ್ತಿಯಲ್ಲಿದೆ . 

ಬಲಿಪಾಡ್ಯ , ಇದು ದೀವಳಿಗೆ ಹಬ್ಬದ ಕೊನೇಯ ದಿನ . ಈ ದಿನ ಸಂಭ್ರಮದೊಂದಿಗೆ ಕೊಂಚ ದುಃಖವೂ ಇರುತ್ತದೆ . ಕೊನೇಯ ದಿನ ಅಲ್ಲವೇ !! ಹಾಗಾಗಿ  ಬಲಿ ಪಾಡ್ಯ ಎಂದಾಗ ನನ್ನ ಪುಟ್ಟ ಗ್ರಂಥಾಲಯದಲ್ಲಿದ್ದ ‘ಬಲಿ’ ಎಂಬ ಕೃತಿಯನ್ನು ಹಿಂದೊಮ್ಮೆ ಓದಿದ ನೆನಪು ಮರುಕಳಿಸಿ ,ಸಂಪೂರ್ಣ ಹುಡುಕಿದೆ . ಎಲ್ಲಿಯೂ ಆ ಪುಸ್ತಕ ಕಾಣಲಿಲ್ಲ . ಬಹುಶಃ  ಈ ಗಳಿಗೆ ಅದನ್ನು ನೋಡುವ ಸೌಭಾಗ್ಯವಿಲ್ಲವೇನೋ ? ಅಥವ ಎಡ ಕೈಯಲ್ಲಿಟ್ಟಿದ್ದೇನೋ ? ಅರಿವಾಗಲಿಲ್ಲ . 

ಆಟಿ ಅಮವಾಸ್ಯೆಯ ಸಮಯದಲ್ಲಿ ಬಲಿ ಚಕ್ರವರ್ತಿಯ ತಾಯಿ ಮೇದಿನಿಗೆ  ಬರುತ್ತಾಳೆ . ಅದೇ ರೀತಿ ಬಲಿಪಾಡ್ಯದಂದು ತನ್ನ ರಾಜ್ಯ ವನ್ನು ಒಮ್ಮೆ ಬಂದು ನೋಡಿ ಹೋಗಲು ಅವನು ( ಬಲಿ ಚಕ್ರವರ್ತಿ ) ಬರುತ್ತಾನೆ  ಎಂಬ ನಂಬಿಕೆಯಲ್ಲಿ ಹಾಳೆ ಮರದ ಗೂಟ ಹಾಕಿ , ಹೂಮಾಲೆಯಿಂದ ಅಲಂಕಾರ ಮಾಡಿ , ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿ ,ಸಂಕಲ್ಪ ಮಾಡುತ್ತಾರೆ . ಬಲಿಯ ಕುರಿತಾಗಿ ಬೃಹತ್ ಕಥನವೇ ಇದೆ . ಬಲಿ ಚಕ್ರವರ್ತಿ ಏರ್ಪಡಿಸಿದ್ದ ಕೊನೆಯ ಯಾಗದ ವೇಳೆ ವಟುವಿನಂತೆ ಬಂದ ವಾಮನ ಮೂರ್ತಿ  , ಮೂರು ಪಾದಗಳಷ್ಟು ಸ್ಟಳವನ್ನು  ದಾನವನ್ನಾಗಿ ಕೇಳಿ , ಕೊನೆಯ ಹೆಜ್ಜೆಯನ್ನಿಡಲು ಎಲ್ಲೂ ಸ್ಥಳವಿಲ್ಲದೆ , ತನ್ನ ಮೇಲೆ ಹೆಜ್ಜೆಯನ್ನಿಡುವಂತೆ ಬಲಿ ಶಿರಬಾಗಿಸಿ ನಿಂತದ್ದು ……ಇದರ ಕಥೆಯೆ ಅಮೋಘ  . ಬಲಿಯನ್ನು ಜಗದ ಜನರು ನೆನಪಿಸುವ ಸಲುವಾಗಿ ‘ಬಲಿಪಾಡ್ಯ’ ಎಂಬ ಆಚರಣೆ ಬಹಳ ಪ್ರಾಮುಖ್ಯ ಪಡೆದಿದೆ . ಹಾಗು ಈ ದಿನ ಮನೆ – ಮಂದಿರಗಳಲ್ಲಿ ಧನ – ಧಾನ್ಯ ಲಕ್ಷ್ಮಿ ಯನ್ನು ಶ್ರದ್ಧೆಯಿಂದ ಆರಾಧಿಸುತ್ತಾರೆ . ಗೋವಿನ ಕೊರಳಿಗೆ ಹೂಮಾಲೆ ತೊಡಿಸಿ , ಸಹಸ್ರ ದೇವಾನು ದೇವತೆಗಳ ನೆಲೆಯಾಗಿರುವ ಗೋಮಾತೆಯನ್ನು  ಸಹ ಪೂಜಿಸುತ್ತಾ ಸಂಭ್ರಮ ಪಡುತ್ತಾರೆ . ಅದರೊಂದಿಗೆ ಸ್ನಾನಗೃಹದ ಹಂಡೆ – ಹರವಿಗಳನ್ನು ಶುಚಿಗೊಳಿಸಿ ಅರಶಿನ – ಕುಂಕುಮ ಹಚ್ಚಿ ಹೂಮಾಲೆಯಿಂದ ಸಿಂಗರಿಸುತ್ತಾರೆ . ಒಂದು ರೀತಿಯಲ್ಲಿ ರೈತಾಪಿ ಜನರ ಅಥವಾ ಕೃಷಿ ಬಂಧುಗಳ ಹಬ್ಬವೆಂದೂ ಹೇಳಬಹುದೇನೋ ; ಏಕೆಂದರೆ ಕೃಷಿಯ ಸಂದರ್ಭದಲ್ಲಿ ಬಳಸುವ ಪರಿಕರಗಳಾದ ಹಾರೆ , ನೊಗ – ನೇಗಿಲು  , ಪಿಕಾಸು ….ಮುಂತಾದವುಗಳನ್ನು ಅರ್ತಿಯಿಂದ ಪೂಜಿಸುವ ಪದ್ದತಿಯೂ ರೂಢಿಯಲ್ಲಿದ್ದು , ವ್ಯಾಪಾರ – ವಹಿವಾಟು ನಡೆಸುವವರು  ಅಂಗಡಿ – ಮುಂಗಟ್ಟುಗಳಲ್ಲಿ ಪೂಜೆ ನೆರವೇರಿಸುತ್ತಾರೆ ಹಾಗು ಕೆಲವರು ವಾಹನ ಪೂಜೆ ಈ ಸಮಯದಲ್ಲಿ ಕೈಗೊಳ್ಳುತ್ತಾರೆ ಹಾಗು ಬಹುತೇಕರು ನವರಾತ್ರಿಯಂದೇ ಪೂರೈಸಿರುತ್ತಾರೆ . 

ಒಟ್ಟಿನಲ್ಲಿ ಈ ದೀಪಗಳ ಹಬ್ಬ ದೀಪಾವಳಿ  ; ಸಕಲರಿಗೆ ಒಳಿತನ್ನು ನೀಡುತ್ತಾ ..ಮೌನವನ್ನು   –  ಅಜ್ಞಾನವನ್ನು ದೂರವಾಗಿಸಿ , ನವ ಲತೆಯ ಕಂಪನ್ನು ಬೀರಿ , ಪ್ರತಿ ಮನವನ್ನು ದೀಪದಂತೆ ಕಂಗೊಳಿಸುವಂತೆ ಮಾಡಲಿ ; ವಿನಃ ದ್ವೇಷ , ಅಸೂಯೆಯ ಜ್ವಾಲೆ ಪಸರದಿರಲಿ . ಸುಖ – ಸಂತೃಪ್ತಿ – ನೆಮ್ಮದಿಯ ದೀಪಾವಳಿ ದಿನವಿರಲಿ .  ಈ ದೀವಳಿಗೆಯ ಹಬ್ಬದ ಹಿನ್ನೆಲೆ ಹೇಳುತ್ತಾ ಹೋದರೆ ಅರೆ ಗಳಿಗೆಯಲ್ಲಿ ಅಂತ್ಯವಾಗದು . ಈ ಹಬ್ಬಕ್ಕೆ ಹಲವಾರು ಹಿನ್ನೆಲೆಯ ಕಥನದ ಚಿತ್ತಾರವಿದೆ . ಅದೇನೇ ಇರಲಿ , ಸಾಲು ದೀಪಗಳ ಈ ಹಬ್ಬ ನಮ್ಮ ನಾಡಿಗಷ್ಟೇ ಸೀಮಿತವಾಗಿಲ್ಲ ; ದೇಶ – ವಿದೇಶಗಳಲ್ಲೂ ಇದರ ಪ್ರಭೆ ಕಂಗೊಳಿಸುತ್ತಿದ್ದು – ಅನಂತವಾಗಿ ಬೆಳಗಲಿ ನಿರಂತರ ದೀಪಾವಳಿ

ಬರಹ – ಸಮ್ಯಕ್ತ್ .ಜೈನ್_ಕಡಬ

ಹೊಸಂಗಡಿ ಬಸದಿ ಮನೆ ,
ನೂಜಿಬಾಳ್ತಿಲ ಅಂಚೆ & ಗ್ರಾಮ , ಕಡಬ ತಾಲೂಕು ,


ಭಾರತೀಯ ಸಮಾಜದಲ್ಲಿ ಹಬ್ಬಗಳ ಪ್ರಸ್ತುತತೆ

ಭಾರತೀಯ ಸಮಾಜದಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನಮಾನವಿದೆ.ಒಂದು ಇಡೀ ಸಮಾಜದ ಸಂಸ್ಕೃತಿಯನ್ನು ಪರಿಚಯಿಸಿ ಬೆಳಗಿಸುವ ಹಬ್ಬಗಳು ಮನುಕುಲಕ್ಕೆ ಜೀವಜಲ ಇದ್ದಂತೆ.ಬಾಳಿಗೊಂದು ಅರ್ಥಕೊಡುವ ನಿಟ್ಟಿನಲ್ಲಿ ಅನಾದಿ ಕಾಲದಿಂದ ಮನುಷ್ಯನ ಜೀವನದ ಜೊತೆ ಹಾಸುಹೊಕ್ಕಾಗಿ ಇರುವುದು ಈ ಹಬ್ಬಗಳು.ಹಿಂದೆ ಮನುಷ್ಯ ಒಂದು ನಿರ್ಧಿಷ್ಟವಾದ ಕೆಲಸವನ್ನು, ಅಂದರೆ ಹೆಚ್ಚಾಗಿ ಬೇಸಾಯವನ್ನು ಅವಲಂಬಿಸಿ ಬದುಕಿದ್ದ.ಈ ಮಾದರಿ ಬದುಕಿನ ನಡುವೆ ಹಬ್ಬಗಳು ಹಾಸು ಹೊಕ್ಕಾಗಿರದಿದ್ದರೆ ಮನುಷ್ಯ ಜಡವಾಗಿ ಹೋಗಿತ್ತಿದ್ದ. ಯಾಕೆಂದರೆ ಅಂದು ಕಾಣುವ ಸಾಮಾನ್ಯ ದೃಶ್ಯ ಚೇತೊಹಾರಿ, ಹಬ್ಬದ ದಿನಗಳಲ್ಲಿ ಜನ ತಮ್ಮ ಮನೆಯನ್ನು ದೇವಸ್ಥಾನವೆಂದು ಭಾವಿಸುತ್ತಾರೆ.ಮನೆಯನ್ನು ಶುಚಿಗೊಳಿಸಿ,ಶೃಂಗರಿಸುತ್ತಾರೆ,ದೇವರ ಪೂಜೆ-ಪುರಸ್ಕ್ರಾರ,ಭಜನೆ ನಡೆಯುತ್ತದೆ.ಯಥಾ ಶಕ್ತಿ ಅಡುಗೆ ಮಾಡಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ.ಇಡೀ ದಿನ ಸಂತೋಷಮಯವಾಗಿ ಕಳೆಯುತ್ತಾರೆ ಮತ್ತು ಇಡೀ ಮನೆಯಲ್ಲಿ ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ.

ಯಾವುದೇ ಧರ್ಮವಿರಲಿ ಅದನ್ನು ಶ್ರದ್ಧೆಯಿಂದ ಒಪ್ಪಿ-ಅಪ್ಪಿಕೊಳ್ಳುವವರು ಅನೇಕರಿದ್ದಾರೆ.ಹಬ್ಬಗಳ ವಿಚಾರದಲ್ಲೂ ಅಷ್ಟೆ.ಭಕ್ತಿಭಾವದ ಜೊತೆಗೆ ಸಂಭ್ರಮೋಲ್ಲಾಸವೂ ಗರಿಗೆದರುತ್ತದೆ.ಒಂದು ದೃಷ್ಟಿಯಿಂದ ನೋಡಿದರೆ ಹಬ್ಬಗಳಿಗೆ ಮೂರು ಮುಖ ಒಂದು ಪೌರಣಿಕ,ಇನ್ನೊಂದು ಆಧ್ಯಾತ್ಮಿಕ ಮತ್ತೊಂದು ಆಚರಣೆ.ಈ ತಳಹದಿಯ ಮೇಲೆಯೇ ಆಚರಣೆ ಬೆಳೆದು ಬಂದಿದೆ.ಈ ಮೂರು ಮುಖಗಳು ಬೇರೆ ಬೇರೆಯಾಗಿ ಕಂಡರೂ ಅವು ಒಟ್ಟಿನಲ್ಲಿ ಒಂದಕ್ಕೊಂದು ಪೂರಕ ಮತ್ತು ಪೂರಕ.

ಬದಲಾದ ಸಾಮಾಜಿಕ ದೃಷ್ಟಿಕೋನದಿಂದಾಗಿ ಹಬ್ಬಗಳ ಆಚರಣೆಗಳಲ್ಲಿ ಕೂಡಾ ಅನೇಕ ಬದಲಾವಣೆಗಳು ಉಂಟಾಗಿವೆ. ಒಂದು ನಿರ್ದಿಷ್ಟ ಕೌಟುಂಬಿಕ ಚಟುವಟಿಕೆಯಾಗಿ ಮಾತ್ರ ಆಚರಣೆಯಲ್ಲಿದ್ದ ಹಬ್ಬಗಳು ಇಂದು ಸಾಮೂಹಿಕ ಹಬ್ಬಗಳಾಗಿ ಆಚರಿಸಲ್ಪಡುತ್ತದೆ. ಇದರಿಂದಾಗಿ ಆಚರಣೆಯ ಸದಾಶಯಗಳು ಇಡೀ ಸಮಾಜಕ್ಕೆ ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ.ಯಾವುದೇ ಆಚರಣೆಗಳು ಸಮಷ್ಟಿಯಲ್ಲಿ ಆಚರಿಸಲ್ಪಟ್ಟರೆ ಅದು ಹೆಚ್ಚು ಜನರಿಗೆ ತಲುಪುತ್ತದೆ ಮತ್ತು ಹಬ್ಬ ಅಚರಣೆಗಳ ಉದ್ದೇಶವು ಏನಿದೆಯೋ ಅದು ನಿಜವಾದ ಅರ್ಥದಲ್ಲಿ ಸಫಲವಾಗುತ್ತದೆ,ಎಂದು ಹೇಳಬಹುದು,ಉದಾಹರಣೆಗೆ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಯನ್ನು ಒಂದು ಊರಿನಲ್ಲಿ ಆಯೋಜಿಸುವುದಾದರೆ,ಒಂದು ನಿರ್ದಿಷ್ಟ ಸಮಯಕ್ಕಿಂತ ಮೊದಲೇ ಆಚರಣೆಗೆ ಪೂರಕವಾದ ಚಟುವಟಿಕೆಗಳು ಊರಲ್ಲಿ ನಡೆಯುತ್ತದೆ.

ಆಚರಣೆ ನಡೆಯುವ ಊರಿನ ಜನರೆಲ್ಲರೂ ಒಟ್ಟಾಗಿ ಸೇರಿ ನಡೆಯುವ ಸ್ಥಳ, ದೇವಸ್ಥಾನವೋ,ಭಜನಾ ಮಂದಿರವೋ,ಅದನ್ನು ಶುಚಿಗೊಳಿಸಿ,ಶೃಂಗಾರ ಮಾಡುತ್ತಾರೆ.ಊರಿನ ಜನರ ಮನೆ-ಮನಸ್ಸು ಎರಡೂ,ಅವರಿಗೆ ಗೊತ್ತಿದ್ದೋ,ಗೊತ್ತಿಲ್ಲದೆಯೋ ಹಬ್ಬದ ಆಶಯವಾದ ಆಧ್ಯಾತ್ಮಿಕತೆಯ ಆಶಯಕ್ಕೆ ಪೂರಕವಾಗಿ ತೊಡಗಿಕೊಳ್ಳುತ್ತದೆ.

ಪ್ರಸ್ತುತ ಸಮಾಜದಲ್ಲಿ ಹಬ್ಬಗಳು ಯುವಜನರಲ್ಲಿರುವ ಅನೇಕ ಪ್ರತಿಭೆಯನ್ನು ಹೊರಹೊಮ್ಮಿಸುವಲ್ಲಿ ಸಫಲವಾಗಿದೆ.ಅನೇಕರು ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಸಾಹಿತ್ಯಿಕ,ಸಾಂಸ್ಕೃತಿಕ ಚಟುವಟಿಗೆಗಳಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಕಂಡು ಬರುತ್ತದೆ.ಇದು ಹಬ್ಬಗಳ ಆಚರಣೆಯ ಯಾವ ಮೂಲೋದ್ದೇಶಗಳಿವೆಯೋ ಅದನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಇದು ಸುಲಭದ ವಿಧಾನ ಎನ್ನಬಹುದು.

ನಮ್ಮ ದೇಶ ಸಾಂಸ್ಕೃತಿಕವಾಗಿ ಸಂಪದ್ಭರಿತ ದೇಶ,ಭಾಷೆ,ವೇಷ-ಭೂಷಣಗಳ ಜೊತೆಗೆ ಆಚಾರ ವಿಚಾರಗಳಲ್ಲೂ ವೈವಿಧ್ಯತೆ ಇಲ್ಲಿನ ವಿಶೇಷ.ಅದರಲ್ಲೂ ಹಬ್ಬಗಳು ವಿವಿಧತೆಯಲ್ಲಿ ಏಕತೆಯನ್ನು ಸಾರುವಪರಿ,ಕೌಟುಂಬಿಕ ಜೀವನಕ್ಕೆ ಅಡಿಪಾಯ ಹಾಕುವ ರೀತಿ ಅನನ್ಯ.ಒಂದಕ್ಕಿಂತ ಒಂದು ಬಿನ್ನವಾಗಿರುವ ಈ ಹಬ್ಬಗಳು ನಮ್ಮೊಳಗೆ ಹೊಸ ಜೀವನೋತ್ಸಾಹ ತುಂಬಿ ಮರೆಯಾಗುತ್ತದೆ.ಹೀಗೆ ಪ್ರತಿಯೊಂದು ಹಬ್ಬಗಳು ಆಚರಣೆಗಳ ಹಿಂದೆ ಒಂದೊಂದು ಸಂದೇಶವಿದೆ.ಸಹಬಾಳ್ವೆ,ಸಹಮತ,ಜೀವನಮೌಲ್ಯಗಳು,ಪ್ರಕೃತಿಸಂರಕ್ಷಣೆ,ಪ್ರಾಣಿಸಂರಕ್ಷಣೆ,ದುಷ್ಟಶಕ್ತಿ ವಿರುದ್ಧ ಸತ್ಯ ಶಕ್ತಿಯ ಜಯ, ಅನ್ಯಾಯ,ಅಧರ್ಮದ ವಿರುದ್ಧ ಧರ್ಮಿಯ ಜಯ ಹೀಗೆ ಅನೇಕ ಸಾರಾಂಶಗಳನ್ನು ಸಾರುತ್ತದೆ. ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನಗಳ ಅಭಿವೃದ್ಧಿಯ ಭರಾಟೆಯಲ್ಲಿ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ಜನತೆಯಲ್ಲಿ ಗೊಂದಲವೇರ್ಪಟ್ಟಿವೆ.

ಹೀಗಾಗಿ ಹಬ್ಬಗಳಿಗೆ ಇರುವ ಪೌರಣಿಕ ಹಿನ್ನೆಲೆ,ಸಾರುವ ಸಂದೇಶಗಳ ಬಗ್ಗೆ,ಹಬ್ಬಗಳ ಮಹತ್ವಗಳ ಬಗ್ಗೆ ತಿಳಿಸುವ ಪ್ರಯತ್ನ ಇನ್ನಷ್ಟು ಆದರೆ,ಮುಂದಿನ ಪೀಳಿಗೆಯನ್ನು ಒಂದು ಸಂಸ್ಕಾರಯುತ ನಾಗರಿಕನ್ನಾಗಿ ಮಾಡಬಹುದು ಮತ್ತು ಭಾರತೀಯ ಸಂಸ್ಕೃತಿಯ ಭಾಗವಾದ ಹಬ್ಬಗಳ ಔಚಿತ್ಯವಾದ ಸೌಂದರ್ಯ ಪ್ರಜ್ಞೆ,ಆಧ್ಯಾತ್ಮಿಕತೆ ಆಚರಣೆ,ರಸಿಕತೆ,ಸಾಮಾಜಿಕ ಚೈತನ್ಯರ ಜಾಗೃತಿಗೂ ಎಡೆ ಮಾಡಿ ಕೊಡಬಹುದು.

ಡಾ.ಶೋಭಿತಾ ಸತೀಶ್,ಪುತ್ತೂರು


ಅಂಧಕಾರ ಕಳೆದು ಸುಜ್ಞಾನದ ದೀವಿಗೆ ಬೆಳಗಲಿ

ಪಂಚಭೂತಗಳನ್ನು ಆರಾಧಿಸುವ ಸಂಸ್ಕೃತಿ ನಮ್ಮದು. ನಮ್ಮ ಪ್ರತಿಯೊಂದು ಆಚರಣೆಯ ಹಿಂದೆ ಅದರದ್ದೇ ಆದ ಮಹತ್ವವಿದೆ. ಬೆಳಕಿನ ಹಬ್ಬವೂ ಇದಕ್ಕೆ ಹೊರತಾಗಿಲ್ಲ. ಹಬ್ಬವಿಲ್ಲದ ಮನೆಯಿಲ್ಲ, ಹುಬ್ಬಿಲ್ಲದ ಹಣೆಯಿಲ್ಲ ಎಂಬ ಮಾತಿದೆ. ಅಂತೆಯೇ ಪ್ರತಿಯೊಂದು ಮನೆಯು ಹಬ್ಬದ ಸಂಭ್ರಮವನ್ನು ಅನುಭವಿಸಿಯೇ ಇರುತ್ತದೆ. ನಮ್ಮ ರಾಷ್ಟ್ರದಲ್ಲಿ ಆಚರಿಸುವಷ್ಟು ಹಬ್ಬಗಳನ್ನು ಬಹುಶಃ ಮತ್ಯಾವ ದೇಶವೂ ಆಚರಿಸದು. ಭಾರತೀಯರು ಸಂಸ್ಕೃತಿಗೆ ಬೆಲೆ ಕೊಡುವವರಾಗಿರುವ ಕಾರಣ ಹಬ್ಬಗಳು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಬೆಳಕಿನ ಹಬ್ಬವು ಭಾರತೀಯರಿಗೆ ನಿತ್ಯನೂತನತೆಯನ್ನು, ಹೊಸ ಬೆಳಕಿನ ಸಂಭ್ರಮವನ್ನು ತಂದುಕೊಡುತ್ತದೆ. ದೀಪಾವಳಿಯು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಬಹುತೇಕ ಎಲ್ಲಾ ಧರ್ಮೀಯರೂ ದೀಪದ ಹಬ್ಬವನ್ನು ಜೋರಾಗೇ ಆಚರಿಸುತ್ತಾರೆ. ಈ ಬಾರಿ ಹೆಚ್ಚಿನ ಸಂಭ್ರಮಕ್ಕೆ ಕೊರೋನಾ ಅಡ್ಡಿಯಾಗಿದ್ದರೂ ಆಚರಣೆಗೆ ತಡೆಗೋಡೆಯಾಗಿಲ್ಲ. ಬೆಳಕಿನ ಹಬ್ಬವನ್ನು ಮನೆಯ ಎಲ್ಲರೂ ಸರಳವಾಗಿ ಆಚರಿಸಿ ಸಂಭ್ರಮಿಸಬಹುದು.

ಹಬ್ಬಗಳು ಸಂಸ್ಕೃತಿಯ ಪ್ರತೀಕ. ಅಂಧಕಾರದಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ, ಸೋಲಿನಿಂದ ಗೆಲುವಿನತ್ತ, ದುಖಃದಿಂದ ಸಂತಸದತ್ತ ಕೊಂಡೊಯ್ಯುವುದು ದೀಪಾವಳಿ ಹಬ್ಬ. ಬೆಳಕಿನ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲದೇ ಹಲವಾರು ರಾಷ್ಟ್ರಗಳಲ್ಲೂ ಆಚರಣೆ ಮಾಡಲಾಗುತ್ತದೆ. ಹಣತೆಯ ಸಾಲು ಪ್ರಜ್ವಲಿಸುವಂತೆ ಪ್ರೀತಿ, ಸಂಸ್ಕಾರ, ಸೌಜನ್ಯತೆ, ಆದರ್ಶದ ಗುಣಗಳು ಜನರ ಮನದಲ್ಲಿ ಬೆಳಗಬೇಕು. ಈ ಮೂಲಕ ಜ್ಞಾನದ ಜ್ಯೋತಿ ಪ್ರಜ್ವಲಿಸಬೇಕು. ಮಾನವೀಯತೆಯು ಅರಳಬೇಕು.?

ಬೆಳಕಿನ ಹಬ್ಬದ ಹಿನ್ನಲೆಯಲ್ಲಿ ಹಲವಾರು ಪೌರಾಣಿಕ ಕಥೆಗಳಿವೆ. ಶ್ರೀ ಕೃಷ್ಣ ಪರಮಾತ್ಮನಿಂದ ಸಂಹಾರಗೊಂಡ ನರಕಾಸುರನ ಕಥೆಯಿದೆ. ಅದೇ ರೀತಿ ಬಲಿಚಕ್ರವರ್ತಿಯ ತ್ಯಾಗದ ಕಥೆಯಿದೆ. ದೇವತೆಗಳ ಆರಾಧನೆಯಿದೆ. ಗೋಮಾತೆಗೆ ಪ್ರಣಾಮ ಸಲ್ಲಿಸುವ, ಗೋವಿನ ಮಹತ್ವವನ್ನು ಸಾರುವ ಪದ್ಧತಿಯೂ ಇದೆ. ಬೆಳಕಿನ ಹಬ್ಬದ ಮೊದಲ ದಿನವನ್ನು ನರಕ ಚತುರ್ದಶಿ ಎಂಬುದಾಗಿ ಆಚರಿಸಲಾಗುತ್ತದೆ. ಮೊದಲ ದಿನದಿಂದಲೇ ಹಣತೆಗಳನ್ನು ಹಚ್ಚಿ ದೀಪಾವಳಿ ಹಬ್ಬವನ್ನು ಸ್ವಾಗತಿಸುತ್ತೇವೆ.

ನರಕ ಚತುರ್ದಶಿಯನ್ನು ಆಚರಣೆ ಮಾಡಿ, ಕೆಟ್ಟತನಕ್ಕೆ ಅಂತ್ಯ ಇದ್ದೇ ಇದೆ ಎಂಬುದನ್ನು ಲೋಕಕ್ಕೆ ಸಾರುತ್ತೇವೆ. ಒಳ್ಳೇತನ ಒಂದಲ್ಲ ಒಂದು ದಿನ ಗೆಲುವು ಸಾಧಿಸುತ್ತದೆ ಎಂಬುದರ ಪ್ರತೀಕ ಇದಾಗಿದೆ. ಎಣ್ಣೆ ಹಚ್ಚಿ ಸ್ನಾನ ಮಾಡುವ ಅಭ್ಯಂಜನ ಮಾಡಲಾಗುತ್ತದೆ. ಆರೋಗ್ಯದ ದೃಷ್ಠಿಯಿಂದಲೂ ಅಭ್ಯಂಜನ ಬಹಳ ಪ್ರಯೋಜನಕಾರಿಯಾಗಿದೆ.

ತ್ರಯೋದಶಿಯಂದು ಮನೆಯನ್ನು ಸ್ವಚ್ಛಗೊಳಿಸಿ ಅಲಂಕಾರ ಮಾಡುತ್ತಾರೆ. ಹಂಡೆ ಸೇರಿದಂತೆ ಎಲ್ಲವನ್ನೂ ಶುಚಿಗೊಳಿಸುತ್ತಾ ಮನೆ ತುಂಬಾ ಪಟ ಪಟನೇ ಓಡಾಡುತ್ತಾ ಖುಷಿ ಪಡುತ್ತಾರೆ ಮನೆಯ ಹೆಂಗಳೆಯರು. ಮುಂದಿನ ಧನಲಕ್ಷ್ಮೀ ಪೂಜೆಯು ದೀಪಾವಳಿಯ ಮಹತ್ವದ ಭಾಗವಾಗಿದೆ. ಲಕ್ಷ್ಮೀ ದೇವಿಯ ಆರಾಧನೆ ಮಾಡಿ ಜನರು ಪಾವನರಾಗುತ್ತಾರೆ. ಹಾಗೆಯೇ ಧನ, ಧಾನ್ಯ, ನೆಮ್ಮದಿ, ಸಕಲ ಸೌಭಾಗ್ಯಕ್ಕಾಗಿ ದೇವಿಯನ್ನು ಪ್ರಾರ್ಥಿಸಿ ಆರಾಧಿಸುವರು.

ನಂತರದ ಬಲಿಪಾಡ್ಯಮಿಯು ತುಳುನಾಡಿನಲ್ಲಿ ವಿಶೇಷವಾಗಿ ಆಚರಿಸಲ್ಪಡುತ್ತದೆ. ಬಲಿ ಪಾಡ್ಯಮಿಯಂದು ಮಹಾಬಲಿ ರಾಜನು ತನ್ನ ಸಾಮ್ರಾಜ್ಯವನ್ನು ಕಣ್ತುಂಬಿಕೊಳ್ಳಲು ಭೂಮಿಗೆ ಆಗಮಿಸುತ್ತಾನೆ ಎಂಬ ನಂಬಿಕೆಯಿದೆ. ತುಳುನಾಡಿನಲ್ಲಿ ಸ್ವರ್ಗಸ್ಥರಾದ ಪೂರ್ವಜರನ್ನು ಈ ಸಂದರ್ಭ ಸ್ಮರಿಸಿ ಗೌರವ ಸಲ್ಲಿಸಲಾಗುತ್ತದೆ. ಅದೇ ರೀತಿ ಸಂಕಷ್ಟಗಳೆಲ್ಲವ ದೂರ ಮಾಡೋ ಬಲಿಯೇಂದ್ರ ಎಂಬುದಾಗಿ ಪ್ರಾರ್ಥಿಸುತ್ತಾರೆ. ಜೊತೆಗೆ ಗೋಪೂಜೆ, ತುಳಸಿ ಪೂಜೆ, ದಾನ ನೀಡುವ ಪದ್ಧತಿ ಮಹತ್ವಪೂರ್ಣವಾಗಿದೆ.

ಬೆಳಕಿನ ಹಬ್ಬದಂದು ನೆರವೇರಿಸುವ ಒಂದೊಂದು ಆಚಾರದ ಹಿಂದೆ ಹಲವಾರು ಪ್ರಾಮುಖ್ಯತೆ, ನಂಬಿಕೆ, ಭರವಸೆ ಇರುತ್ತದೆ. ಒಂದು ಪುಟ್ಟ ಹಣತೆಯು ತನ್ನ ಕೆಳಗೆ ಕತ್ತಲಿದ್ದರೂ ಸುತ್ತಲಿನ ಒಂದಿಷ್ಟು ಜಾಗವನ್ನು ಬೆಳಗಿಸುತ್ತದೆ. ಹಾಗೆಯೇ ನಾವು ಕೂಡಾ ಪರೋಪಕಾರಿಗಳಾಗಿ ಬಾಳಬೇಕು. ಪರಿಸರ ಸ್ನೇಹಿ ಆಚರಣೆಗೆ ಆದ್ಯತೆ ನೀಡಿ, ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಕೈ ಜೋಡಿಸಿ ಈ ದೀಪಗಳ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸೋಣ. ಈ ಬಾರಿಯ ದೀಪಾವಳಿಯು ಜಗದೆಲ್ಲೆಡೆ ಗೆಲುವು, ಸಂಭ್ರಮ, ಉತ್ಸಾಹ, ಜ್ಞಾನ, ಸಕಾರಾತ್ಮಕತೆಯ ಬೆಳಕನ್ನು ತರಲಿ.

– ಸೌಜನ್ಯ.ಬಿ.ಎಂ.ಕೆಯ್ಯೂರು
ಅಂತಿಮ ಪತ್ರಿಕೋದ್ಯಮ
ವಿವೇಕಾನಂದ ಪದವಿ ಕಾಲೇಜು ಪುತ್ತೂರು


ಆಶೀಶ್‌ ಎಮ್‌ ರಾವ್

ಕವನಾ ‍ಶ್ರೀ

ಶರಲ್ ಲಿಶಾ ಗಲ್ಭಾವೋ
ಬೊಳ್ವಾರ್, ಪುತ್ತೂರು.


ಮುಖೇಶ್ ಕೃಷ್ಣ
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ,ತೆಂಕಿಲ,
ಪುತ್ತೂರು


ಎಸ್. ನಿಶಾ ಶೆಟ್ಟಿ
ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಸಂಸ್ಥೆ ಕಾಣಿಯೂರು

ಸಹನಾ
ಬೆಸ್ಟ್ ಇಂಗ್ಲೀಷ್ ಮೀಡಿಯಂ ಸ್ಕೂಲ್
ಬಿ.ಸಿ ರೋಡ್

ಕೆ. ಸಾತ್ವಿಕ್ ಬೊಳುವಾರು
ವಿವೇಕಾನಂದ ಇಂಗ್ಲೀಷ್ ಮೀಡಿಯಂ ಸ್ಕೂಲ್
ತೆಂಕಿಲ, ಪುತ್ತೂರು

ಕೆ. ಶ್ರಾವ್ಯಶ್ರೀ ಬೊಳುವಾರು
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು


 

ಶ್ರೇಯ ಬೇಕಲ್ ಕಾಡಮನೆ ರಸ್ತೆ, ಮರೀಲು, ದರ್ಬೆ ಪುತ್ತೂರು

 


ತನ್ವಿತಾ ಎಮ್‌ ಶೆಟ್ಟಿ

ಕುಕ್ಕುವಳ್ಳಿ ವ್ಯಂಗ್ಯ ರಂಗ

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.